iffi banner

ಪರದೆಯ ಮೇಲೆ ಪಾತ್ರಗಳಿಗೆ ಜೀವ ತುಂಬುವ ಕಲೆ: ಐ.ಎಫ್.ಎಫ್.ಐ ಯಲ್ಲಿ ಸಿನಿಮಾ ವಸ್ತ್ರವಿನ್ಯಾಸದ 'ಮ್ಯಾಜಿಕ್' ಅನಾವರಣಗೊಳಿಸಿದ ಏಕಾ ಲಖಾನಿ


'ಪೊನ್ನಿಯಿನ್ ಸೆಲ್ವನ್'ನಿಂದ 'ಓಕೆ ಜಾನು'ವರೆಗೆ: ವಸ್ತ್ರವಿನ್ಯಾಸದ ಒಂದು ಅದ್ಭುತ ಸಿನಿ ಪಯಣ

ವಸ್ತ್ರಗಳ ಮೂಲಕ ನಂದಿನಿ, ತಾರಾ ಮತ್ತು ರಾಕಿ ಪಾತ್ರಗಳ ಒಳನೋಟ: ಪ್ರೇಕ್ಷಕರ ಮನ ಗೆದ್ದ ಏಕಾ ಲಖಾನಿ

ಐ.ಎಫ್.ಎಫ್.ಐ ಯಲ್ಲಿ ನಡೆದ ‘ಕಾಸ್ಟ್ಯೂಮ್ ಅಂಡ್ ಕ್ಯಾರೆಕ್ಟರ್ ಆರ್ಕ್: ದಿ ಟ್ರೆಂಡ್‌ಸೆ ಟರ್ಸ್ ಆಫ್ ಸಿನಿಮಾ’ (ವಸ್ತ್ರವಿನ್ಯಾಸ ಮತ್ತು ಪಾತ್ರದ ಬೆಳವಣಿಗೆ: ಸಿನಿಮಾದ ಟ್ರೆಂಡ್‌ ಸೆಟರ್‌ ಗಳು) ಎಂಬ ಶೀರ್ಷಿಕೆಯ ಸಂದರ್ಶನ ಗೋಷ್ಠಿಯು, ಕೇವಲ ಒಂದು ಸಂವಾದವಾಗಿ ಉಳಿಯದೆ, ವಸ್ತ್ರವಿನ್ಯಾಸದ ಆಳವನ್ನು ತಿಳಿಸುವ ಒಂದು 'ಮಾಸ್ಟರ್ ಕ್ಲಾಸ್' ಆಗಿ ಮಾರ್ಪಟ್ಟಿತು. ವಸ್ತ್ರಗಳು ಕೇವಲ ಪಾತ್ರಗಳಿಗೆ ಉಡುಪುಗಳಲ್ಲ; ಅವು ನಿಶಬ್ದವಾಗಿ ಕಥೆಯನ್ನು ರೂಪಿಸುತ್ತವೆ, ಮುನ್ನಡೆಸುತ್ತವೆ ಮತ್ತು ಕೆಲವೊಮ್ಮೆ ಕಥೆಯನ್ನೇ ಮರುಬರೆಯುತ್ತವೆ ಎಂಬ ಸತ್ಯವನ್ನು ಇದು ಅನಾವರಣಗೊಳಿಸಿತು. ಖ್ಯಾತ ವಸ್ತ್ರ ವಿನ್ಯಾಸಕಿ ಏಕಾ ಲಖಾನಿ ಅವರು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರೆ, ಚಲನಚಿತ್ರ ನಿರ್ಮಾಪಕ ಜಯಪ್ರದ್ ದೇಸಾಯಿ ಅವರು ಸಂವಾದವನ್ನು ಮುನ್ನಡೆಸಿದರು. ಬಟ್ಟೆ ಮತ್ತು ಸಿನಿಮಾ ನಿರ್ಮಾಣ ಕಲೆ ಒಂದಾಗುವ ಈ ಲೋಕದ, ಅಪರೂಪದ 'ತೆರೆಮರೆಯ ಅನುಭವ'ವನ್ನು ಪ್ರೇಕ್ಷಕರು ಈ ಮೂಲಕ ಪಡೆದರು.

ಗೋಷ್ಠಿಯನ್ನು ಆರಂಭಿಸುತ್ತಾ, ಜಯಪ್ರದ್ ಅವರು ಒಂದು ಸರಳ ಸತ್ಯದ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು: "ಒಂದು ಪಾತ್ರವು ಮಾತನಾಡುವ ಮೊದಲೇ, ಅವರ ವೇಷಭೂಷಣವು ಬಹಳಷ್ಟನ್ನು ಹೇಳಿಬಿಡುತ್ತದೆ." ಈ ಮಾತು ಏಕಾ ಲಖಾನಿ ಅವರ 15 ವರ್ಷಗಳ ಸುದೀರ್ಘ ಪಯಣವನ್ನು ಮೆಲುಕು ಹಾಕಲು ವೇದಿಕೆ ಒದಗಿಸಿತು. 'ಹೈ-ಫ್ಯಾಷನ್ ರನ್‌ ವೇ'ಗಳ ಕನಸಿನೊಂದಿಗೆ ಆರಂಭವಾದ ಅವರ ಪಯಣ, ಅಂತಿಮವಾಗಿ ಸಿನಿಮಾದ ಗದ್ದಲ, ಬಣ್ಣ ಮತ್ತು ಸೃಜನಶೀಲತೆಯ ಹುಚ್ಚುತನದ ಲೋಕಕ್ಕೆ ಬಂದು ತಲುಪಿದ ರೋಚಕ ಕಥೆಯನ್ನು ಅವರು ತೆರೆದಿಟ್ಟರು.

 

ಮಣಿರತ್ನಂ ಮ್ಯಾಜಿಕ್

ಮಣಿರತ್ನಂ ಅವರ 'ರಾವಣ್' ಚಿತ್ರದ ಸೆಟ್‌ನಲ್ಲಿ, ಸಬ್ಯಸಾಚಿ ಮುಖರ್ಜಿ ಅವರ ಅಡಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ ತಮ್ಮ ಆರಂಭದ ದಿನಗಳನ್ನು ಏಕಾ ಮೆಲುಕು ಹಾಕಿದರು. "ಫ್ಯಾಷನ್ ಎಂದರೆ ಕೇವಲ ಸುಂದರವಾದ ಬಟ್ಟೆಗಳನ್ನು ತಯಾರಿಸುವುದು ಎಂದು ನಾನು ಭಾವಿಸಿದ್ದೆ," ಎಂದು ನಗುತ್ತಾ ಹೇಳಿದ ಅವರು, "ಆದರೆ ಸೌಂದರ್ಯದೊಂದಿಗೆ ಭಾವನೆಯೂ ಬೆರೆತಿರಬೇಕು ಎಂಬುದನ್ನು 'ರಾವಣ್' ಸಿನಿಮಾ ನನಗೆ ಕಲಿಸಿಕೊಟ್ಟಿತು" ಎಂದರು. ಸಬ್ಯ ಅವರ ಮಾರ್ಗದರ್ಶನದಲ್ಲಿ, ಒಂದು ಫ್ರೇಮ್‌ ನೊಳಗೆ ಬಣ್ಣಗಳು ಹೇಗೆ ಉಸಿರಾಡುತ್ತವೆ ಮತ್ತು ವಸ್ತ್ರವಿನ್ಯಾಸ ಎನ್ನುವುದು ಕೇವಲ ಒಂದು ವಿಭಾಗವಲ್ಲ, ಅದೊಂದು ಭಾಷೆ ಎಂಬುದನ್ನು ಅವರು ಕಲಿತರು. 'ರಾವಣ್' ಚಿತ್ರದಲ್ಲಿನ ಅವರ ಕೆಲಸದಿಂದ ಪ್ರಭಾವಿತರಾದ ಛಾಯಾಗ್ರಾಹಕ ಸಂತೋಷ್ ಶಿವನ್, ಏಕಾ ಅವರಿಗೆ ಕೇವಲ 23 ವರ್ಷ ವಯಸ್ಸಾಗಿದ್ದಾಗಲೇ 'ಉರುಮಿ' ಚಿತ್ರದಲ್ಲಿ ಅವಕಾಶ ನೀಡಿದರು. "ಅಲ್ಲಿಂದಲೇ ನನ್ನ ನಿಜವಾದ ಪಯಣ ಆರಂಭವಾಯಿತು," ಎಂದು ಅವರು ಸ್ಮರಿಸಿದರು.

ಏಕಾ ಅವರ ಸೃಜನಶೀಲ ಪ್ರಕ್ರಿಯೆಯು ನಿರ್ದೇಶಕರೊಂದಿಗೆ ನಡೆಸುವ ದೀರ್ಘ ಸಂವಾದಗಳು ಮತ್ತು ನಂತರ ಸ್ಕ್ರಿಪ್ಟ್‌ ನ ಆಳವಾದ ಅಧ್ಯಯನದೊಂದಿಗೆ ಪ್ರಾರಂಭವಾಗುತ್ತದೆ ಎಂಬ ವಿಷಯ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಗು ಮೂಡಿಸಿತು. ಮಣಿರತ್ನಂ ಅವರಂತಹ ಚಲನಚಿತ್ರ ನಿರ್ಮಾಪಕರೊಂದಿಗೆ, ಈ ಸಹಯೋಗವು ಇನ್ನೂ ಮೊದಲೇ, ಅಂದರೆ ಕೆಲವೊಮ್ಮೆ ಕಥೆ ಬರೆಯುವ ಹಂತದಲ್ಲೇ ಪ್ರಾರಂಭವಾಗುತ್ತದೆ ಎಂದು ಅವರು ಬಹಿರಂಗಪಡಿಸಿದರು.

"ಮಣಿ ಸರ್ ನನ್ನನ್ನು ಸ್ಕ್ರಿಪ್ಟಿಂಗ್ ಹಂತದಲ್ಲೇ ಕರೆಸಿಕೊಳ್ಳುತ್ತಾರೆ. ಒಂದು ಪಾತ್ರ ಯಾವ ರೀತಿಯ ಬಟ್ಟೆ ಧರಿಸುತ್ತದೆ ಎಂಬುದು ನನಗೆ ಅರ್ಥವಾದಾಗ, ಆ ಪಾತ್ರ ಹೇಗೆ ವರ್ತಿಸುತ್ತದೆ ಎಂಬುದು ಅವರಿಗೆ ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ," ಎಂದು ಅವರು ಹೇಳಿದರು. ವಸ್ತ್ರವಿನ್ಯಾಸವು ಕಥೆಯ ನಿರೂಪಣೆಯನ್ನು ಹೇಗೆ ರೂಪಿಸಬಲ್ಲದು ಎಂಬುದನ್ನು ಈ ಮಾತು ತಿಳಿಸಿತು.

"ಸಿನಿಮಾ ಎನ್ನುವುದು ಒಂದು ತಂಡದ ಕೆಲಸ," ಎಂದು ಅವರು ತಿಳಿಸಿದರು. "ನಾನು ಅತ್ಯಂತ ಸುಂದರವಾದ ಉಡುಪನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿಲ್ಲ. ಬದಲಿಗೆ, ನಟರು ತಮ್ಮ ಪಾತ್ರದೊಳಗೆ ಅನಾಯಾಸವಾಗಿ ಇಳಿಯಲು ನೆರವಾಗುವಂತಹ 'ಸೂಕ್ತವಾದ'  ಉಡುಪನ್ನು ವಿನ್ಯಾಸಗೊಳಿಸುವುದೇ ನನ್ನ ಪ್ರಯತ್ನ." ರೆಫರೆನ್ಸ್‌ ಗಳ ಹುಡುಕಾಟ, ದೃಶ್ಯರೂಪದ ದಾಖಲೀಕರಣ, ವಿವರವಾದ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಮತ್ತು ತಮ್ಮ ತಂಡದೊಂದಿಗೆ ನಿಕಟವಾಗಿ ಸಹಕರಿಸುವುದು ಅವರ ಕಾರ್ಯವಿಧಾನದ ಪ್ರಮುಖ ಭಾಗಗಳಾಗಿವೆ.

 

ಪೊನ್ನಿಯಿನ್ ಸೆಲ್ವನ್: ವಸ್ತ್ರಗಳಲ್ಲಿ ಅರಳಿದ ಇತಿಹಾಸ

'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕಾಗಿ, ಏಕಾ ಅವರು ಒಂದೇ ಒಂದು ವಿನ್ಯಾಸವನ್ನು ರಚಿಸುವ ಮುನ್ನವೇ, ಮಣಿರತ್ನಂ ಅವರು ಅವರನ್ನು ತಂಜಾವೂರಿಗೆ ಕಳುಹಿಸಿಕೊಟ್ಟರು. ಈ ಭೇಟಿಯು ಅವರ ಪಾಲಿಗೆ ಒಂದು ಪ್ರಮುಖ ತಿರುವಾಯಿತು. ಅಲ್ಲಿನ ದೇವಾಲಯದ ಕಂಚಿನ ವಿಗ್ರಹಗಳು, ಶಿಲ್ಪಕಲೆಗಳು ಮತ್ತು ಚಿತ್ತಾರಗಳ ಮೂಲಕ ಅವರು ಚೋಳ ಸಾಮ್ರಾಜ್ಯದ ವೈಭವವನ್ನು ಆಳವಾಗಿ ಅರಿತುಕೊಂಡರು. ಈ ಅಂಶಗಳೇ ಅಂತಿಮವಾಗಿ ಸಿನಿಮಾದ ದೃಶ್ಯ ಪ್ರಪಂಚವನ್ನು ರೂಪಿಸಲು ಕಾರಣವಾದವು.

ತದನಂತರ ಅವರು ಪಾತ್ರಗಳ ನೋಟವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ, ಇಡೀ ಗೋಷ್ಠಿಯನ್ನು ಒಂದು 'ಮಿನಿ ಫಿಲ್ಮ್ ಸ್ಕೂಲ್' ಆಗಿ ಪರಿವರ್ತಿಸಿದರು: ನಂದಿನಿಯ ಪಾತ್ರವನ್ನು 'ಆಕರ್ಷಣೆ'  ಮತ್ತು 'ಅಧಿಕಾರ'ದ ಭಾಷೆಯ ಮೂಲಕ ವಿನ್ಯಾಸಗೊಳಿಸಲಾಗಿದೆ ಎಂದು ಅವರು ವಿವರಿಸಿದರು. ಆಕೆಯ ವಸ್ತ್ರಗಳು, ಆಕೆಯಲ್ಲಿದ್ದ ಕಾಂತೀಯ ಸೆಳೆತ  ಮತ್ತು ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಹಸಿವನ್ನು  ಪ್ರತಿಬಿಂಬಿಸುತ್ತವೆ. ಮತ್ತೊಂದೆಡೆ, ಕುಂದವೈ "ಹುಟ್ಟಿನಿಂದಲೇ ಅಧಿಕಾರವನ್ನು ಮೈಗೂಡಿಸಿಕೊಂಡವಳು." ಆಕೆಯ ಸಹಜ ಅಧಿಕಾರ, ಸಂಯಮ ಮತ್ತು ಸ್ಥಿರತೆಯನ್ನು  ಆಕೆಯ ಉಡುಪುಗಳು ಬಿಂಬಿಸುತ್ತವೆ. ಆದಿತ್ಯ ಕರಿಕಾಲನ್‌ ನ ವಸ್ತ್ರಗಳ ಬಣ್ಣದ ಆಯ್ಕೆಯು  ಅವನ ಅಂತರಾಳದ ತಲ್ಲಣವನ್ನು ಆಧರಿಸಿತ್ತು. ಅವನ ಆಕ್ರೋಶ, ನೋವು ಮತ್ತು ಭಾವನಾತ್ಮಕ ಅಶಾಂತಿಯು 'ಕಡು ಕೆಂಪು'  ಮತ್ತು 'ಕಪ್ಪು' ಬಣ್ಣಗಳ ಮೂಲಕ ವ್ಯಕ್ತವಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಅರುಳ್‌ ಮೊಳಿ ವರ್ಮನನ್ನು ಜನರ ಪ್ರೀತಿಯ ಹಾಗೂ ಶಾಂತ ಸ್ವಭಾವದ ನಾಯಕನನ್ನಾಗಿ ಕಲ್ಪಿಸಿಕೊಳ್ಳಲಾಗಿತ್ತು. ಹಾಗಾಗಿ ಏಕಾ ಅವರು ಆತನ ಸ್ಪಷ್ಟತೆ, ಕರುಣೆ ಮತ್ತು ಮೌನ ಘನತೆಯನ್ನು ಸಾರುವಂತಹ 'ಪ್ರಶಾಂತ ದಂತದ ಬಣ್ಣ' ಮತ್ತು 'ಮೃದುವಾದ ಚಿನ್ನದ ಬಣ್ಣ'ದ ವಸ್ತ್ರಗಳನ್ನು ಆತನಿಗಾಗಿ ವಿನ್ಯಾಸಗೊಳಿಸಿದರು.

 

ಎರಡು ತಾರಾ, ಎರಡು ಜಗತ್ತು ಮತ್ತು ಸಂಜು ಪಾತ್ರದ ಮರುಹುಟ್ಟು

ಒಂದೇ ಪಾತ್ರವಾದ 'ತಾರಾ', 'ಓಕೆ ಕಣ್ಮಣಿ'  ಮತ್ತು 'ಓಕೆ ಜಾನು'  ಚಿತ್ರಗಳಲ್ಲಿ ಎರಡು ಸಂಪೂರ್ಣ ವಿಭಿನ್ನವಾದ ಉಡುಪು ಶೈಲಿಗಳನ್ನು ಹೇಗೆ ಬಯಸಿತು ಎಂಬುದನ್ನು ಏಕಾ ವಿವರಿಸಿದರು. "ತಮಿಳಿನಲ್ಲಿ ತಾರಾ ಪಾತ್ರವು ಪ್ರೇಕ್ಷಕರಿಗೆ ನಮ್ಮವಳೇ ಎನಿಸುವಂತೆ  ಇರಬೇಕಿತ್ತು. ಆದರೆ ಹಿಂದಿಯಲ್ಲಿ, ಆಕೆ 'ನಾವು ಇವಳಂತಿರಬೇಕು' ಎಂದು ಪ್ರೇಕ್ಷಕರು ಬಯಸುವಂತಹ ಮಟ್ಟದಲ್ಲಿ ಇರಬೇಕಿತ್ತು" ಎಂದು ಅವರು ಹೇಳಿದರು. ಪ್ರೇಕ್ಷಕರ ಅಭಿರುಚಿಗಳು ವಸ್ತ್ರಗಳ ಆಯ್ಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಯಿತು. ಅಷ್ಟೇ ಅಲ್ಲದೆ, ಕೊನೆಯ ಕ್ಷಣದಲ್ಲಿ ಕುಶನ್ ಕವರ್‌ ಗಳನ್ನು ಬಳಸಿಕೊಂಡು, ಶ್ರದ್ಧಾ ಕಪೂರ್ ಅವರ ಐಕಾನಿಕ್ 'ಹಮ್ಮಾ ಹಮ್ಮಾ' ಹಾಡಿನ ಶಾರ್ಟ್ಸ್  ಅನ್ನು ಸಿದ್ಧಪಡಿಸಿದ ತಮಾಷೆಯ ಪ್ರಸಂಗವನ್ನೂ ಅವರು ಹಂಚಿಕೊಂಡರು.

'ಸಂಜು' ಚಿತ್ರದಲ್ಲಿ ಕೆಲಸ ಮಾಡುವಾಗ, ಏಕಾ ಹೆಚ್ಚು ಸಂಶೋಧನಾ-ಆಧಾರಿತ ವಿಧಾನವನ್ನು ಅನುಸರಿಸಿದರು ಮತ್ತು ಹಳೆಯ ರೆಫರೆನ್ಸ್‌ ಗಳಿಗೆ ಅಚ್ಚುಕಟ್ಟಾಗಿ ಹೊಂದಿಕೆಯಾಗುವಂತೆ ನೋಡಿಕೊಂಡರು. ಪಾತ್ರದ ನೋಟವನ್ನು  ಅಂತಿಮಗೊಳಿಸಲು ಸಹಾಯ ಮಾಡಿದ ಮೇಕಪ್, ಕೇಶವಿನ್ಯಾಸ, ಪ್ರೊಡಕ್ಷನ್ ವಿನ್ಯಾಸಕರು ಮತ್ತು ಛಾಯಾಗ್ರಾಹಕರನ್ನು  ಅವರು ಶ್ಲಾಘಿಸಿದರು.  "ಡಿ.ಒ.ಪಿ ಗಳು ಕಾಸ್ಟ್ಯೂಮ್ ವಿನ್ಯಾಸಕರ ಆಪ್ತ ಸ್ನೇಹಿತರು," ಎಂದು ಅವರು ಹೇಳಿದರು. "ಪರದೆಯ ಮೇಲೆ ಯಾವುದಾದರೂ ಬಣ್ಣ ಕೈಕೊಡುವುದಾದರೆ, ಅವರು ಅದನ್ನು ಮೊದಲೇ ನಮಗೆ ತಿಳಿಸುತ್ತಾರೆ."

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ, ನಾಯಕ ರಾಕಿಯ ವ್ಯಕ್ತಿತ್ವ ಬದಲಾದಂತೆ ಅವನ ವೇಷಭೂಷಣವೂ ಹೇಗೆ ಬದಲಾಗುತ್ತದೆ ಎಂಬುದನ್ನು ವಿವರಿಸುವ ಮೂಲಕ ಏಕಾ ಗೋಷ್ಠಿಯನ್ನು ಮುಕ್ತಾಯಗೊಳಿಸಿದರು. ರಾಕಿಯ ನೋಟವನ್ನು ಅವರು ಬಿಡಿಸಿಟ್ಟ ರೀತಿ ಪ್ರೇಕ್ಷಕರಿಗೆ ಹಿಡಿಸಿತು. ವಸ್ತ್ರವಿನ್ಯಾಸ ಎಂದರೆ ಕೇವಲ ಕಣ್ಣಿಗೆ ಕಾಣುವ ಅಲಂಕಾರವಲ್ಲ, ಬದಲಿಗೆ ಅವು ಪಾತ್ರಗಳಿಗೆ ಜೀವ ತುಂಬುವ 'ಕಥಾ ಸಾಧನಗಳು' ಎಂಬುದು ಗೋಷ್ಠಿಯ ಅಂತ್ಯದಲ್ಲಿ ಸ್ಪಷ್ಟವಾಯಿತು. ಏಕಾ ಲಖಾನಿ ಅವರ ಪ್ರಪಂಚದಲ್ಲಿ, ಪ್ರತಿಯೊಂದು ಹೊಲಿಗೆಗೂ  ಒಂದು ಉದ್ದೇಶವಿದೆ ಮತ್ತು ಪ್ರತಿಯೊಂದು ಬಣ್ಣಕ್ಕೂ ಒಂದು ಅರ್ಥವಿದೆ.

 

ಐ.ಎಫ್.ಎಫ್.ಐ ಬಗ್ಗೆ

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.‌ಡಿ.ಸಿ) ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ಇ.ಎಸ್.ಜಿ) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ.  ಇಂದು ಐ.ಎಫ್.ಎಫ್.ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ.  ಇದು ಕೇವಲ ಉತ್ಸವವಲ್ಲ; ಮರುಜೀವ ಪಡೆದ ಅಂದಿನ ಶ್ರೇಷ್ಠ 'ಕ್ಲಾಸಿಕ್' ಚಿತ್ರಗಳು ಇಂದಿನ ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುವ ತಾಣ. ಸಿನಿಮಾದ ಮೇರು ದಿಗ್ಗಜರು ಮತ್ತು ನಿರ್ಭೀತಿಯಿಂದ ಹೊಸ ಕನಸು ಕಾಣುವ ನವ ಪ್ರತಿಭೆಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಅಪರೂಪದ ಸಂಗಮವಿದು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಸಿನಿಮಾ ಪಾಠ ಹೇಳುವ 'ಮಾಸ್ಟರ್‌ ಕ್ಲಾಸ್‌'ಗಳು, ದಿಗ್ಗಜರಿಗೆ ಸಲ್ಲುವ ಗೌರವಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐ.ಎಫ್.ಎಫ್.ಐಯ ನಿಜವಾದ ಆಕರ್ಷಣೆಯಾಗಿದೆ. ಗೋವಾದ ಮನಮೋಹಕ ಕಡಲ ತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು ವಿವಿಧ ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಹೊಸ ದನಿಗಳ ಅದ್ಭುತ ಲೋಕವನ್ನೇ ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲತೆಯ ವೈಭವವನ್ನು ಸಾರುವ ಒಂದು ಮಹಾನ್ ಸಂಭ್ರಮವಾಗಿದೆ.

 

ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2195173   |   Visitor Counter: 16