iffi banner

ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಂಗಮ: ಎಐ, ಕಥೆಗಾರಿಕೆ ಮತ್ತು ಸಿನಿಮಾದ ಹೊಸ ಯುಗದ ಕುರಿತು ಚಿಂತನೆಗಳು


ಕೃತಕ ಜಾಣ್ಮೆಯ  'ಪರಿವರ್ತಕ ಭರವಸೆ' ಯನ್ನು ಬಿಡಿಸಿಟ್ಟ ಶೇಖರ್ ಕಪೂರ್ ಮತ್ತು ಟ್ರಿಶಿಯಾ ಟಟಲ್

ಆವಿಷ್ಕಾರ, ಕಲಾತ್ಮಕ ಆಶಯ ಮತ್ತು ಸಿನಿಮಾದ ಮಾನವೀಯ ಸಾರದ ಮೇಲೆ ಕೇಂದ್ರೀಕೃತವಾಗಿದ್ದ 'ಸಂವಾದ' ಗೋಷ್ಠಿ

56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ 'ಯುರೇಷಿಯನ್ ಫೆಸ್ಟಿವಲ್ ಫ್ರಾಂಟಿಯರ್: ಎಐ (AI) ಜಗತ್ತಿನಲ್ಲಿ ಸಿನಿಮಾವನ್ನು ಮರು ವ್ಯಾಖ್ಯಾನಿಸಬೇಕೇ?' ಎಂಬ ವಿಷಯದ ಕುರಿತಾದ ಸಂವಾದ ಗೋಷ್ಠಿಯು, ವಿಶ್ವದ ಇಬ್ಬರು ಗೌರವಾನ್ವಿತ ಚಲನಚಿತ್ರೋತ್ಸವ ವ್ಯಕ್ತಿತ್ವಗಳನ್ನು ಒಂದೇ ವೇದಿಕೆಗೆ ತಂದಿತು. ಅವರುಗಳೆಂದರೆ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶಕಿ ಟ್ರಿಶಿಯಾ ಟಟಲ್ ಮತ್ತು ಐಎಫ್‌ಎಫ್‌ಐ ನಿರ್ದೇಶಕ ಶೇಖರ್ ಕಪೂರ್. ಈ ಗೋಷ್ಠಿಯನ್ನು ಸ್ವತಃ ಶೇಖರ್ ಕಪೂರ್ ಅವರೇ ನಡೆಸಿಕೊಟ್ಟರಾದರೂ, ಇದು ಕೇವಲ ಪ್ರಶ್ನೋತ್ತರವಾಗದೆ, ಒಂದು ಕ್ರಿಯಾತ್ಮಕ ದ್ವಿಮುಖ ಸಂವಾದದಂತೆ ನಡೆಯಿತು. ಇದರಲ್ಲಿ ಎಐ (AI), ಸೃಜನಶೀಲತೆ ಮತ್ತು ಚಲನಚಿತ್ರೋತ್ಸವಗಳ ಭವಿಷ್ಯದ ಕುರಿತು ಆಳವಾಗಿ ಚರ್ಚಿಸಲಾಯಿತು.

ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕೈಬಿಟ್ಟಿರುವುದಕ್ಕಾಗಿ ಶೇಖರ್ ಕಪೂರ್ ಅವರು ಐಎಫ್‌ಎಫ್‌ಐ ಆಯೋಜಕರನ್ನು ಅಭಿನಂದಿಸುವುದರೊಂದಿಗೆ ಗೋಷ್ಠಿಯು ಅತ್ಯಂತ ಆತ್ಮೀಯವಾಗಿ ಪ್ರಾರಂಭವಾಯಿತು. ಇದೇ ವೇಳೆ, 1998ರಲ್ಲಿ ತಾನು ಫಿಲ್ಮ್ ಸ್ಕೂಲ್ ಪದವೀಧರೆಯಾಗಿದ್ದಾಗ, ಶೇಖರ್ ಕಪೂರ್ ಅವರ 'ಎಲಿಜಬೆತ್' ಚಿತ್ರದ ಕುರಿತಾದ ಮಾಸ್ಟರ್‌ ಕ್ಲಾಸ್‌ ನಲ್ಲಿ ಭಾಗವಹಿಸಿದ್ದ ಕ್ಷಣವನ್ನು ಟ್ರಿಶಿಯಾ ಟಟಲ್ ನೆನಪಿಸಿಕೊಂಡರು. "ಇದೊಂದು ಸುತ್ತು ಪೂರ್ಣಗೊಂಡ ಅನುಭವ ನೀಡುತ್ತಿದೆ," ಎಂದು ಹೇಳುವ ಮೂಲಕ, ಅವರು ಗತಕಾಲದ ಅನುಭವಗಳನ್ನು ಸಿನಿಮಾದ ಭವಿಷ್ಯದೊಂದಿಗೆ ಬೆಸೆಯುವಂತಹ ವಾತಾವರಣವನ್ನು ನಿರ್ಮಿಸಿದರು.

ಸಂವಾದದುದ್ದಕ್ಕೂ ಶೇಖರ್ ಕಪೂರ್ ಅವರು, ಡಿಜಿಟಲ್ ಉಪಕರಣಗಳಾಗಲಿ ಅಥವಾ ಎ.ಐ. ಆಗಲಿ, ಯಾವುದೇ ತಂತ್ರಜ್ಞಾನ ಬಂದರೂ ಸಿನಿಮಾ ಉಳಿಯುತ್ತದೆ ಎಂದು ಪುನರುಚ್ಚರಿಸಿದರು. ಇದಕ್ಕೆ ಕಾರಣ, ಮಾನವನ ಕಲ್ಪನಾಶಕ್ತಿ ಯಾವಾಗಲೂ ಉಳಿಯುತ್ತದೆ. ಯಾವುದೇ ಹೊಸ ತಂತ್ರಜ್ಞಾನವನ್ನು ಅಂತಿಮವಾಗಿ ನಿಯಂತ್ರಿಸುವುದು ಅದನ್ನು ಸೃಷ್ಟಿಸುವವನೇ ಹೊರತು ತಂತ್ರಜ್ಞಾನವಲ್ಲ. ಹಾಗೆಯೇ, ಯಾವುದೇ ಆವಿಷ್ಕಾರವು ಅದನ್ನು ಬಳಸುವ ಜನರ ಸೃಜನಶೀಲತೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದು ಅವರು ಸಭಿಕರಿಗೆ ನೆನಪಿಸಿದರು.

ತಂತ್ರಜ್ಞಾನದ ಬದಲಾವಣೆಗಳ ಕುರಿತು ಹಿಂದಿದ್ದ ಆತಂಕಗಳನ್ನು ಮೆಲುಕು ಹಾಕಿದ ಟ್ರಿಶಿಯಾ ಟಟಲ್, ಡಿಜಿಟಲ್ ಫಿಲ್ಮ್‌ ಮೇಕಿಂಗ್ ಬಂದಾಗ ಸಿನಿಮಾ ಕಣ್ಮರೆಯಾಗಬಹುದು ಎಂಬ ಭಯ ಹುಟ್ಟಿದ್ದನ್ನು ಸ್ಮರಿಸಿದರು. "ಆದರೆ ಅಂತಿಮವಾಗಿ ಉಳಿಯುವುದು ಕಲ್ಪನೆ, ಕುಶಲತೆ ಮತ್ತು ಮಾನವೀಯತೆ" ಎಂದು ಅವರು ಹೇಳಿದರು. ಇದಕ್ಕೆ ದನಿಗೂಡಿಸಿದ ಶೇಖರ್ ಕಪೂರ್, ಎಐ ಎಷ್ಟೇ ಮುಂದುವರಿದರೂ, ಒಬ್ಬ ಶ್ರೇಷ್ಠ ನಟ ದೃಶ್ಯವೊಂದಕ್ಕೆ ತರುವ ಸೂಕ್ಷ್ಮವಾದ ಭಾವನಾತ್ಮಕ ಬದಲಾವಣೆಗಳನ್ನು ಅದಕ್ಕೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ವಿಶೇಷವಾಗಿ ಕಣ್ಣುಗಳಲ್ಲಿನ ಆ ಸೂಕ್ಷ್ಮ ಬದಲಾವಣೆಗಳನ್ನು ಗ್ರಹಿಸುವ ಶಕ್ತಿ ಎಐಗೆ ಇಲ್ಲ. "ಎಐಗೆ ಕಣ್ಣಿನ ಪಾಪೆಗಳ  ಭಾಷೆ ಅರ್ಥವಾಗುವುದಿಲ್ಲ," ಎಂದು ಹೇಳಿದ ಅವರು, ಆ ಭಾವನಾತ್ಮಕ ಕಿಡಿಯೇ ಪ್ರೇಕ್ಷಕರನ್ನು ಕಥೆಯೊಂದಿಗೆ ಬೆಸೆಯುತ್ತದೆ ಎಂದು ತಿಳಿಸಿದರು.

ಇದೇ ವೇಳೆ, ಶೇಖರ್ ಕಪೂರ್ ಅವರು ಎಐ ಬಳಸಿ ನಿರ್ಮಿಸಿದ ತಮ್ಮ ಸರಣಿ 'ವಾರ್ ಲಾರ್ಡ್'ನ ಟೀಸರ್ ಅನ್ನು ಹಂಚಿಕೊಂಡರು. ಹೊಸ ಸೃಜನಶೀಲ ಸಾಧನಗಳನ್ನು ಅನ್ವೇಷಿಸುವ ಉತ್ಸಾಹ ಅವರ ಮಾತಿನಲ್ಲಿತ್ತು. ಈ ಹೊಸ ಸಾಧ್ಯತೆಗಳನ್ನು ಒಪ್ಪಿಕೊಳ್ಳುವಾಗಲೂ, "ತಂತ್ರಜ್ಞಾನವು ಕಥೆಗಾರನನ್ನು ಮರು ವ್ಯಾಖ್ಯಾನಿಸುವುದಿಲ್ಲ; ಬದಲಿಗೆ ಕಥೆಗಾರನೇ ತಂತ್ರಜ್ಞಾನವನ್ನು ಮರುರೂಪಿಸುತ್ತಾನೆ" ಎಂಬ ತಮ್ಮ ನಂಬಿಕೆಯನ್ನು ಅವರು ದೃಢವಾಗಿ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದ ಒಂದು ಸ್ವಾರಸ್ಯಕರ ಘಟನೆಯಲ್ಲಿ, ಶೇಖರ್ ಕಪೂರ್ ಅವರು ತಮ್ಮ ಅಡುಗೆಯವರು ಚಾಟ್‌ಜಿಪಿಟಿ (ChatGPT) ಬಳಸಿ 'ಮಿಸ್ಟರ್ ಇಂಡಿಯಾ 2' ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ತಮಾಷೆಯ ಪ್ರಸಂಗವನ್ನು ಹಂಚಿಕೊಂಡರು. "ಅವನು ಅತೀವ ಉತ್ಸಾಹದಿಂದ ನನ್ನ ಬಳಿ ಬಂದಿದ್ದ. ಆ ಕ್ಷಣದಲ್ಲಿ ಅವನು ಮಾಡಿದ ಅಡುಗೆಯನ್ನು ಮೊದಲು ಮೆಚ್ಚಬೇಕೋ ಅಥವಾ ಅವನು ಬರೆದ ಸ್ಕ್ರಿಪ್ಟ್ ಅನ್ನು ಹೊಗಳಬೇಕೋ ಎಂದು ನನಗೆ ನಿಜವಾಗಿಯೂ ತಿಳಿಯಲಿಲ್ಲ" ಎಂದು ಕಪೂರ್ ನಗುತ್ತಾ ನೆನಪಿಸಿಕೊಂಡರು. ಸೃಜನಶೀಲ ಸಾಧನಗಳು  ಇಂದು ಎಷ್ಟು ಸುಲಭವಾಗಿ ಎಲ್ಲರಿಗೂ ಲಭ್ಯವಾಗುತ್ತಿವೆ ಮತ್ತು ತಂತ್ರಜ್ಞಾನವು ಅನಿರೀಕ್ಷಿತ ವ್ಯಕ್ತಿಗಳಲ್ಲೂ ಕಲ್ಪನಾಶಕ್ತಿಯನ್ನು ಹೇಗೆ ಪ್ರಚೋದಿಸಬಲ್ಲದು ಎಂಬುದನ್ನು ಈ ಕಥೆಯು ತೋರಿಸಿತು.

ತ್ವರಿತ ತಂತ್ರಜ್ಞಾನದ ಬದಲಾವಣೆಯ ಹೊರತಾಗಿಯೂ, ಸಿನಿಮಾ ಹೇಗೆ ಒಂದು ಸಾಮೂಹಿಕ ಸಾಮಾಜಿಕ ಅನುಭವವಾಗಿ ಉಳಿದಿದೆ ಎಂಬುದರ ಕುರಿತು ಇಬ್ಬರೂ ಮಾತನಾಡಿದರು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದನ್ನು 'ಸಾಮಾಜಿಕ ಅನುಭವ' ಎಂದು ಬಣ್ಣಿಸಿದ ಶೇಖರ್ ಕಪೂರ್, "ಮನೆಗೇ ಊಟ ತರಿಸಿಕೊಳ್ಳುವ  ಸೌಲಭ್ಯವಿದ್ದರೂ, ಜನರು ಊಟ ಮಾಡಲು ರೆಸ್ಟೋರೆಂಟ್‌ ಗಳಿಗೆ ಹೋಗುವುದಿಲ್ಲವೇ? ಹಾಗೆಯೇ, ಎಐ ಅಥವಾ ಮನೆಯಲ್ಲೇ ಸಿನಿಮಾ ನೋಡುವ ಅಭ್ಯಾಸಗಳು ಚಿತ್ರಮಂದಿರದ ಅನುಭವವನ್ನು ಬದಲಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು. ಸ್ವತಂತ್ರ ಮತ್ತು ವಿಭಿನ್ನ ಪ್ರಯೋಗಾತ್ಮಕ  ಚಲನಚಿತ್ರಗಳನ್ನು ಆಸ್ವಾಧಿಸಬಹುದಾದ ವೇದಿಕೆಗಳನ್ನು ಸಂರಕ್ಷಿಸುವ ಮಹತ್ವವನ್ನು ಟ್ರಿಶಿಯಾ ಟಟಲ್ ಒತ್ತಿ ಹೇಳಿದರು. ಚಲನಚಿತ್ರೋತ್ಸವಗಳು ಈ ಜವಾಬ್ದಾರಿಯನ್ನು ಮುಂದೆಯೂ ಎತ್ತಿಹಿಡಿಯಬೇಕು ಎಂದು ಅವರು ತಿಳಿಸಿದರು.

ಈ ಚರ್ಚೆಯು, ಕಡಿಮೆಯಾಗುತ್ತಿರುವ ಚಿತ್ರೀಕರಣ ಸಿಬ್ಬಂದಿಯ  ಸಂಖ್ಯೆ ಮತ್ತು ಫಿಲ್ಮ್ ಸೆಟ್‌ ಗಳಲ್ಲಿನ ಕಾರ್ಮಿಕರ ಭವಿಷ್ಯದ ಕುರಿತಾದ ಆತಂಕಗಳನ್ನೂ ಒಳಗೊಂಡಿತ್ತು. ಫಿಲ್ಮ್ ಸೆಟ್‌ ನಲ್ಲಿ ಕೇವಲ ಇರುವುದರ ಮೌಲ್ಯವನ್ನು ಟ್ರಿಶಿಯಾ ಟಟಲ್ ಉಲ್ಲೇಖಿಸಿದರು. ತಮ್ಮ ಮಗ ನಿರ್ದೇಶಕ ಅಥವಾ ಲೇಖಕನಾಗುವ ಬದಲು, ಸಿನಿಮಾ ಜಗತ್ತನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ಚಿತ್ರೀಕರಣ ಸಿಬ್ಬಂದಿಯ ಭಾಗವಾಗಿ ಕೆಲಸ ಮಾಡಲು ಬಯಸಿದ್ದನ್ನು ಅವರು ಹಂಚಿಕೊಂಡರು. ಇದಕ್ಕೆ ದನಿಗೂಡಿಸಿದ ಶೇಖರ್ ಕಪೂರ್, "ಆಕ್ಷನ್" ಮತ್ತು "ಕಟ್" ಎಂದು ಹೇಳುವ ಅವಕಾಶವನ್ನು ಕಳೆದುಕೊಳ್ಳುವ ಭಯವಿದೆ ಎಂದರು. ಸೆಟ್‌ ನಲ್ಲಿ ನಿರ್ಮಾಣವಾಗುವ ಮಾನವ ಸಂಬಂಧಗಳನ್ನು ಯಾವುದೇ ಎಐ (AI) ಉಪಕರಣದಿಂದ ಮರುಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರೇಕ್ಷಕರೊಂದಿಗಿನ ಸಂವಾದದ ವೇಳೆ, ಕೃತಿಚೌರ್ಯ, ನೈತಿಕತೆ ಮತ್ತು ಎಐನ ಕಲಾತ್ಮಕ ಮಾನ್ಯತೆಯ ಕುರಿತಾದ ಪ್ರಶ್ನೆಗಳು ಶೇಖರ್ ಕಪೂರ್ ಅವರಿಂದ ಪ್ರಬಲ ಹೇಳಿಕೆಯೊಂದನ್ನು ಹೊರತಂದವು: "ಎಐ ಎಂಬುದು ಮ್ಯಾಜಿಕ್ ಅಲ್ಲ, ಅದು ಗೊಂದಲ ಅಲ್ಲ. ಅದೊಂದು ಬದಲಾವಣೆ ಅಷ್ಟೇ. ಆದರೆ ನಿಜವಾದ ಕಥೆಗಾರಿಕೆ ಅನಿರೀಕ್ಷಿತವಾದದು. ಎಐ ಭವಿಷ್ಯವನ್ನು ಊಹಿಸಲಾರದು; ಅದು ಕೇವಲ ಗತಕಾಲವನ್ನು ಅನುಕರಿಸಬಲ್ಲದು." ಎಐ ಇದ್ದರೂ ಅಥವಾ ಇಲ್ಲದಿದ್ದರೂ, ಕೃತಿಚೌ‌ರ್ಯ ಎಂಬುದು ಸೃಜನಶೀಲ ಸೋಮಾರಿತನದಿಂದ ಬರುತ್ತದೆ. ಭಾವನಾತ್ಮಕ ಕಥೆಗಾರಿಕೆಯು ಯಾವಾಗಲೂ ಕೆಲಸದ ಹಿಂದಿರುವ ಮನುಷ್ಯನನ್ನು ಅನಾವರಣಗೊಳಿಸುತ್ತದೆ ಎಂದು ಅವರು ಹೇಳಿದರು.

ಸಿನಿಮಾ ವಿಕಸನಗೊಳ್ಳುತ್ತಲೇ ಇರುತ್ತದೆ, ಆದರೆ ಅದರ ಮೂಲ ಸಾರವಾದ ಮಾನವನ ಕಲ್ಪನಾಶಕ್ತಿ, ಭಾವನಾತ್ಮಕ ಸತ್ಯ ಮತ್ತು ಕಥೆಗಳ ಶಕ್ತಿಯು ಪ್ರತಿಯೊಂದು ತಂತ್ರಜ್ಞಾನದ ಬದಲಾವಣೆಯನ್ನೂ ಮೀರಿ ಉಳಿಯುತ್ತದೆ ಎಂದು ಇಬ್ಬರೂ ಒಪ್ಪುವುದರೊಂದಿಗೆ ಗೋಷ್ಠಿ ಮುಕ್ತಾಯವಾಯಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಅವರು ಗಣ್ಯರನ್ನು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

 ಐಎಫ್‌ಎಫ್‌ಐ ಕುರಿತು 

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾ ಸರ್ಕಾರದ ಎಂಟರ್‌ ಟೈನ್‌ ಮೆಂಟ್ ಸೊಸೈಟಿ ಆಫ್ ಗೋವಾ (ESG) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ಮತ್ತು ಸಿನಿಮಾದ ದಿಟ್ಟ ಪ್ರಯೋಗಗಳು ಒಂದೇ ವೇದಿಕೆಯಲ್ಲಿ ಮೇಳೈಸುತ್ತವೆ. ಅಷ್ಟೇ ಅಲ್ಲ, ಸಿನಿಮಾ ರಂಗದ ದಿಗ್ಗಜರೊಂದಿಗೆ  ನಿರ್ಭೀತ ಹೊಸ ಪ್ರತಿಭೆಗಳು ಇಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ ಕ್ಲಾಸ್‌ಗಳು, ಗೌರವ ಸಲ್ಲಿಕೆಗಳು ಮತ್ತು ಹೊಸ ಆಲೋಚನೆಗಳು ಹಾಗೂ ಒಪ್ಪಂದಗಳಿಗೆ ರೆಕ್ಕೆ ನೀಡುವ ಅತ್ಯುತ್ಸಾಹದ 'ವೇವ್ಸ್ ಫಿಲ್ಮ್ ಬಜಾರ್' ಐಎಫ್‌ಎಫ್‌ಐಯ ಮೆರುಗು ಹೆಚ್ಚಿಸಿವೆ.  ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56new/

PIB IFFIWood Broadcast Channel:  https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2193010   |   Visitor Counter: 16