ಸಂಭ್ರಮದ ಉದ್ಘಾಟನಾ ಮೂಲಕ ಗೋವಾದಲ್ಲಿ ʻವೇವ್ಸ್ ಫಿಲ್ಮ್ ಬಜಾರ್ʼ ಪ್ರಯಾಣಕ್ಕೆ ಚಾಲನೆ
ಏಳು ದೇಶಗಳ 300 ಚಲನಚಿತ್ರ ಯೋಜನೆಗಳು ಮತ್ತು ನಿಯೋಗಗಳನ್ನು 'ಫಿಲ್ಮ್ ಬಜಾರ್' ಒಟ್ಟುಗೂಡಿಸಲಿದೆ
ಶ್ರೀಮತಿ ಜೇವೊನ್ ಕಿಮ್ ಅವರಿಂದ ʻವಂದೇ ಮಾತರಂʼ ಗಾಯನದೊಂದಿಗೆ ಕೊರಿಯಾ ಮತ್ತು ಭಾರತ ಮಧುರ ಗಾನದಲ್ಲಿ ಸಂಗಮವಾದವು
ದಕ್ಷಿಣ ಏಷ್ಯಾದ ಜಾಗತಿಕ ಚಲನಚಿತ್ರ ಮಾರುಕಟ್ಟೆಯಾದ ʻವೇವ್ಸ್ ಫಿಲ್ಮ್ ಬಜಾರ್ʼಗೆ ಗೋವಾದ ಪಂಜಿಮ್ ನಲ್ಲಿರುವ ಮ್ಯಾರಿಯಟ್ ರೆಸಾರ್ಟ್ ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಇಂದು ಚಾಲನೆ ದೊರೆಯಿತು. ಪ್ರಮುಖ ನಾಯಕರು, ನೀತಿ ನಿರೂಪಕರು, ಚಲನಚಿತ್ರ ನಿರ್ಮಾಪಕರು ಮತ್ತು ಜಾಗತಿಕ ಪ್ರತಿನಿಧಿಗಳ ಗಣ್ಯರು ಇದಕ್ಕೆ ಸಾಕ್ಷಿಯಾದರು. ಪ್ರತಿವರ್ಷ ಪ್ರತಿಷ್ಠಿತ ʻಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವʼದ ಜೊತೆಯಲ್ಲೇ ನಡೆಯುವ ಈ ಕಾರ್ಯಕ್ರಮದ 19ನೇ ಆವೃತ್ತಿಯನ್ನು ಈಗ ʻವೇವ್ಸ್ ಫಿಲ್ಮ್ ಬಜಾರ್ʼ ಎಂದು ಮರುನಾಮಕರಣ ಮಾಡಲಾಗಿದೆ. ಇದು ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಮಾರಾಟ ಏಜೆಂಟರು, ಚಿತ್ರೋತ್ಸವ ಆಯೋಜಕರು ಮತ್ತು ಸೃಜನಶೀಲ ಮತ್ತು ಆರ್ಥಿಕ ಸಹಭಾಗಿತ್ವವನ್ನು ಬಯಸುವ ವಿತರಕರಿಗೆ ಜಾಗತಿಕ ಸಭೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ನವೆಂಬರ್ 20 ರಿಂದ 24 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ತಮ್ಮ ಆರಂಭಿಕ ಭಾಷಣದಲ್ಲಿ, ʻವೇವ್ಸ್ ಫಿಲ್ಮ್ ಬಜಾರ್ʼ ಅನ್ನು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಚರಣೆಗೆ ನೈಸರ್ಗಿಕ ಮತ್ತು ಸೂಕ್ತವಾದ ಆರಂಭ ಎಂದು ಬಣ್ಣಿಸಿದರು. ಅವರು ಇದನ್ನು "ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ ಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳ ಸಂಪೂರ್ಣ ಪರಿಸರ ವ್ಯವಸ್ಥೆ" ಎಂದು ಬಣ್ಣಿಸಿದರು. ಜೊತೆಗೆ ʻವೇವ್ಸ್ʼನ ಹೊಸ ಹೆಸರು "ಕಲೆಯನ್ನು ವಾಣಿಜ್ಯವಾಗಿ ಪರಿವರ್ತಿಸುವ" ಪ್ರಧಾನಮಂತ್ರಿಯವರ ದೃಷ್ಟಿಕೋನದೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ತಿಳಿಸಿದರು.

ಚಲನಚಿತ್ರ ನಿರ್ಮಾಪಕರಿಗಾಗಿ ರೂಪಿಸಲಾದ ವಿಶ್ವದ ಮೊದಲ ʻಇ-ಮಾರುಕಟ್ಟೆʼಯನ್ನು ಅವರು ಉಲ್ಲೇಖಿಸಿದರು. "ಸೃಜನಶೀಲರು ಮತ್ತು ದೇಶಗಳನ್ನು ʻವೇವ್ಸ್ ಬಜಾರ್ʼ ಸಂಪರ್ಕಿಸುತ್ತಿದೆ. ಜೊತೆಗೆ, ಭಾರತವನ್ನು ಜಾಗತಿಕ ಸಹಯೋಗಕ್ಕಾಗಿ ಭೇಟಿಯ ತಾಣವನ್ನಾಗಿ ಮಾಡುತ್ತಿದೆ," ಎಂದು ಒತ್ತಿ ಹೇಳಿದರು. ವ್ಯಾಪಕ ಶ್ರೇಣಿಯ ಆಯ್ದ ಯೋಜನೆಗಳು, ನಗದು ಅನುದಾನಗಳು ಮತ್ತು ರಚನಾತ್ಮಕ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಗಳ ಬಗ್ಗೆ ಅವರು ಗಮನ ಸೆಳೆದರು. ಇದೇ ವೇಳೆ, ಭಾರತದ ಮೊಟ್ಟಮೊದಲ ʻಕೃತಕ ಬುದ್ಧಿಮತ್ತೆ ಚಲನಚಿತ್ರೋತ್ಸವ ಮತ್ತು ಹ್ಯಾಕಥಾನ್ʼ ಅನ್ನು ಸಿನಿಮೀಯ ತಂತ್ರಜ್ಞಾನದ ಭವಿಷ್ಯವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಹೆಜ್ಜೆ ಎಂದು ಉಲ್ಲೇಖಿಸಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಕೊರಿಯಾ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯೆ ಶ್ರೀಮತಿ ಜೇವೊನ್ ಕಿಮ್ ಅವರು ಉತ್ಸವದ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೂ ತೋರಿದ ಬದ್ಧತೆ ಮತ್ತು ಸ್ಥಿರತೆಗಾಗಿ ಸಂಘಟಕರನ್ನು ಶ್ಲಾಘಿಸಿದರು. ಭಾರತ ಮತ್ತು ಕೊರಿಯಾ ನಡುವಿನ ಸಕ್ರಿಯ ಸಹಯೋಗದ ಭರವಸೆಯನ್ನು ವ್ಯಕ್ತಪಡಿಸಿದ ಅವರು, ಭಾವಪೂರ್ಣವಾಗಿ ʻವಂದೇ ಮಾತರಂʼನ ಗಾಯನ ಮಾಡಿದರು. ಪ್ರೇಕ್ಷಕರಿಂದ ಆತ್ಮೀಯ ಚಪ್ಪಾಳೆ ಮತ್ತು ಹರ್ಷೋದ್ಗಾರಕ್ಕೆ ಭಾಜನರಾದರು.

ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ʻಬಜಾರ್ʼ ಉದ್ಘಾಟಿಸಿ ಮಾತನಾಡಿದರು. ಭಾರತವು ಚಲನಚಿತ್ರ ನಿರ್ಮಾಣದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕೆಂಬ ಪ್ರಧಾನಮಂತ್ರಿಯವರ ದೂರದೃಷ್ಟಿಯ ಬಗ್ಗೆ ಪ್ರಸ್ತಾಪಿಸಿದರು. ವೇವ್ಸ್ ಬಜಾರ್ ಅನ್ನು "ಸೃಜನಶೀಲರು ಮತ್ತು ನಿರ್ಮಾಪಕರ ನಡುವಿನ ಸೇತುವೆ" ಎಂದು ಕರೆದ ಅವರು, ಯುವ ಧ್ವನಿಗಳು ಮತ್ತು ಹೊಸ ಕಥೆಗಾರರನ್ನು ಸಬಲೀಕರಣಗೊಳಿಸಿದ ವೇದಿಕೆ ಎಂದು ಶ್ಲಾಘಿಸಿದರು. ಈ ವರ್ಷ ʻಬಜಾರ್ʼನಲ್ಲಿ 124 ಹೊಸ ಸೃಷ್ಟಿಕರ್ತರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಭಾರತೀಯ ಸಂಸ್ಕೃತಿ ಮತ್ತು ಕಂಟೆಂಟ್ ಅನ್ನು ಜಗತ್ತಿಗೆ ಕೊಂಡೊಯ್ಯುವಲ್ಲಿ ಈ ವೇದಿಕೆಯ ಪಾತ್ರವನ್ನು ಪುನರುಚ್ಚರಿಸಿದರು.

ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಅವರು ಸಮಾರಂಭದ ವಂದನಾರ್ಪಣೆ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ʻಭಾರತೀಯ ಅಂತಾರಷ್ಟ್ರೀಯ ಚಲನಚಿತ್ರೋತ್ಸವʼದ ನಿರ್ದೇಶಕ ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್; ನಟರಾದ ಶ್ರೀ ನಂದಮೂರಿ ಬಾಲಕೃಷ್ಣ ಮತ್ತು ಶ್ರೀ ಅನುಪಮ್ ಖೇರ್; ʻವೇವ್ಸ್ ಬಜಾರ್ʼನ ಸಲಹೆಗಾರ ಜೆರೋಮ್ ಪೈಲಾರ್ಡ್; ಆಸ್ಟ್ರೇಲಿಯನ್ ಚಲನಚಿತ್ರ ನಿರ್ದೇಶಕ ಗಾರ್ತ್ ಡೇವಿಸ್; ಮತ್ತು ʻಎನ್.ಎಫ್.ಡಿ.ಸಿʼ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್ ಅವರು ಭಾಗವಹಿಸಿದರು. ಈ ವರ್ಷದ ಕಾರ್ಯಕ್ರಮದಲ್ಲಿ ಸೃಜನಶೀಲತೆ ಮತ್ತು ಉದ್ಯಮದ ನಾಯಕತ್ವದ ಕ್ರಿಯಾತ್ಮಕ ಸಂಗಮವನ್ನು ಗಣ್ಯರು ಉಲ್ಲೇಖಿಸಿದರು.

ವೇವ್ಸ್ ಫಿಲ್ಮ್ ಬಜಾರ್: ಪ್ರತಿಭೆ, ತಂತ್ರಜ್ಞಾನ ಮತ್ತು ಜಾಗತಿಕ ಸಹಯೋಗದ ಪ್ರದರ್ಶನ
ಈ ಹಿಂದೆ ʻಫಿಲ್ಮ್ ಬಜಾರ್ʼ ಎಂದು ಕರೆಯಲ್ಪಡುತ್ತಿದ್ದ ಈ ಉಪಕ್ರಮವನ್ನು ʻರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮʼ(ಎನ್.ಎಫ್.ಡಿ.ಸಿ) 2007ರಲ್ಲಿ ಪ್ರಾರಂಭಿಸಿತು. ಇದು ಇಂದು ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ಮಾರುಕಟ್ಟೆಯಾಗಿ ಬೆಳೆದಿದೆ.
ʻಸ್ಕ್ರೀನ್ ರೈಟರ್ಸ್ ಲ್ಯಾಬ್ʼ, ʻಮಾರ್ಕೆಟ್ ಸ್ಕ್ರೀನಿಂಗ್ಸ್ʼ, ʻವ್ಯೂಯಿಂಗ್ ರೂಮ್ ಲೈಬ್ರರಿʼ ಮತ್ತು ʻಸಹ-ನಿರ್ಮಾಣ ಮಾರುಕಟ್ಟೆʼ ಸೇರಿದಂತೆ ವಿವಿಧ ವಿಭಾಗಗಳಲ್ಲಿ 300ಕ್ಕೂ ಹೆಚ್ಚು ಚಲನಚಿತ್ರ ಯೋಜನೆಗಳ ವ್ಯಾಪಕ ಆಯ್ಕೆಯನ್ನು ʻಬಜಾರ್ʼ ಒದಗಿಸುತ್ತದೆ. ಸಹ-ನಿರ್ಮಾಣ ಮಾರುಕಟ್ಟೆಯು 22 ಚಲನಚಿತ್ರಗಳು ಮತ್ತು 5 ಸಾಕ್ಷ್ಯಚಿತ್ರಗಳನ್ನು ಒಳಗೊಂಡಿದೆ. ʻವೇವ್ಸ್ ಫಿಲ್ಮ್ ಬಜಾರ್ ಶಿಫಾರಸುʼ ವಿಭಾಗವು ಅನೇಕ ಸ್ವರೂಪಗಳಲ್ಲಿ 22 ಪ್ರಮುಖ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ. ಏಳಕ್ಕೂ ಹೆಚ್ಚು ದೇಶಗಳ ನಿಯೋಗಗಳು ಮತ್ತು ಭಾರತದ ಹತ್ತಕ್ಕೂ ಹೆಚ್ಚು ರಾಜ್ಯಗಳ ಚಲನಚಿತ್ರ ಪ್ರೋತ್ಸಾಹಕ ಪ್ರದರ್ಶನಗಳು ವೇದಿಕೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಇದರ ವಿಶೇಷ ʻಟೆಕ್ ಪೆವಿಲಿಯನ್ʼ ಅತ್ಯಾಧುನಿಕ ʻವಿಎಫ್ಎಕ್ಸ್ʼ, ʻಸಿಜಿಐʼ, ʻಅನಿಮೇಷನ್ʼ ಮತ್ತು ಡಿಜಿಟಲ್ ಉತ್ಪಾದನಾ ಸಾಧನಗಳನ್ನು ಅನ್ವೇಷಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ. ಈ ವರ್ಷ ʻಎಲ್ಟಿಮೈಂಡ್ಟ್ರೀʼ ಸಹಯೋಗದೊಂದಿಗೆ ಆಯೋಜಿಸಲಾದ ʻಸಿನಿಮಾಎಐ ಹ್ಯಾಕಥಾನ್ʼ (CinemAI Hackathon) ಕಾರ್ಯಕ್ರಮದ ದೂರದೃಷ್ಟಿಯ ಮನೋಭಾವವನ್ನು ಸೂಚಿಸುತ್ತದೆ. ಇದು, ಕೃತಕ ಬುದ್ಧಿಮತ್ತೆ ಆಧರಿತವಾದ ಕಥಾ ನಿರೂಪಣೆ, ಪ್ರಮಾಣೀಕರಣ ಪ್ರಕ್ರಿಯೆಗಳು ಮತ್ತು ಪೈರಸಿ ತಡೆ ಆವಿಷ್ಕಾರಗಳೊಂದಿಗೆ ಪ್ರಯೋಗ ಮಾಡಲು ಸೃಷ್ಟಿಕರ್ತರನ್ನು ಆಹ್ವಾನಿಸುತ್ತದೆ.
ಸೃಜನಶೀಲತೆ, ತಂತ್ರಜ್ಞಾನ ಮತ್ತು ಜಾಗತಿಕ ವಿನಿಮಯದ ಸುಲಲಿತ ಮಿಶ್ರಣದೊಂದಿಗೆ, ʻವೇವ್ಸ್ ಫಿಲ್ಮ್ ಬಜಾರ್ʼ ರೋಮಾಂಚಕ ಸಹಯೋಗ ಮತ್ತು ಆವಿಷ್ಕಾರಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತದೆ. ಸಿನಿಮಯ ಆಲೋಚನೆಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳಿಗೆ ಕ್ರಿಯಾತ್ಮಕ ಕೇಂದ್ರವಾಗಿ ಭಾರತದ ಪಾತ್ರವನ್ನು ಪುನರುಚ್ಚರಿಸುತ್ತದೆ.
ʻಐಎಫ್ಎಫ್ಐʼ ಬಗ್ಗೆ
1952ರಲ್ಲಿ ಆರಂಭಗೊಂಡ ʻಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼ(ಐಎಫ್ಎಫ್ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನೆಮಾ ಆಚರಣೆಯಾಗಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ʻರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮʼ(ಎನ್.ಎಫ್.ಡಿ.ಸಿ) ಮತ್ತು ಗೋವಾ ರಾಜ್ಯ ಸರ್ಕಾರದ ʻಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾʼ(ಇಎಸ್ಜಿ) ಜಂಟಿಯಾಗಿ ಆಯೋಜಿಸುವ ಈ ಉತ್ಸವವು ಇಂದು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಅಲ್ಲಿ ಹೆಗ್ಗುರುತು ಮೂಡಿಸಿದ ಕ್ಲಾಸಿಕ್ ಸಿನಿಮಾಗಳು, ದಿಟ್ಟ ಪ್ರಯೋಗಗಳು ಒಂದಾಗುತ್ತವೆ. ಪ್ರಮುಖ ಸಿನಿಮಾ ಮಾಂತ್ರಿಕರು ದಿಟ್ಟ ಮತ್ತು ಚೊಚ್ಚಲ ಪ್ರಯೋಗಾರ್ಥಿಗಳೊಂದಿಗೆ ಸಮ್ಮಿಲನಗೊಳ್ಳುತ್ತಾರೆ. ʻಐಎಫ್ಎಫ್ಐʼ ಅನ್ನು ನಿಜಕ್ಕೂ ಆಕರ್ಷಣೀಯವಾಗಿಸುವುದು ಅದರ ರೋಮಾಂಚಕ ಮಿಶ್ರಣ-ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಹಿಡಿದು ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ ಗಳು, ಗೌರವ ನಮನಗಳನ್ನು ಇದು ಹೊಂದಿದೆ. ಜೊತೆಗೆ ಆಲೋಚನೆಗಳು, ಒಪ್ಪಂದಗಳು ಮತ್ತು ಸಹಯೋಗಗಳಿಗೆ ವೇದಿಕೆ ಒದಗಿಸುವ ಉತ್ಸಾಹಭರಿತ ʼವೇವ್ಸ್ ಫಿಲ್ಮ್ ಬಜಾರ್ʼ ಸಹ ಇದರ ಒಂದು ಭಾಗವಾಗಿದೆ. ನವೆಂಬರ್ 20ರಿಂದ 28ರ ವರೆಗೆ ಗೋವಾದ ಕಡಲ ತೀರದಲ್ಲಿ ಆರಂಭಗೊಂಡ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯನ್ನು ತಲ್ಲೀನಗೊಳಿಸುವ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192183
| Visitor Counter:
19
Read this release in:
Punjabi
,
Telugu
,
Khasi
,
English
,
Urdu
,
Konkani
,
Marathi
,
हिन्दी
,
Gujarati
,
Tamil
,
Malayalam