ಸಂಪುಟ
azadi ka amrit mahotsav

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಕುರಿತು ಸಂಪುಟ ನಿರ್ಣಯ ಅಂಗೀಕರಿಸಿತು

Posted On: 12 NOV 2025 8:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2025ರ ನವೆಂಬರ್ 10ರ ಸಂಜೆ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟದ ಭಯೋತ್ಪಾದಕ ಘಟನೆಯಲ್ಲಿ ಜೀವಹಾನಿಯಾದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿತು. ಘಟನೆಯಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸಚಿವ ಸಂಪುಟ ಎರಡು ನಿಮಿಷಗಳ ಮೌನ ಆಚರಿಸಿತು.

ಸಚಿವ ಸಂಪುಟವು ಈ ಕೆಳಗಿನ ನಿರ್ಣಯವನ್ನು ಸಹ ಅಂಗೀಕರಿಸಿತು:

2025ರ ನವೆಂಬರ್ 10ರ ಸಂಜೆ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟದ ಮೂಲಕ, ದೇಶವಿರೋಧಿ ಶಕ್ತಿಗಳು ನಡೆಸಿದ ಘೋರ ಭಯೋತ್ಪಾದಕ ಘಟನೆಗೆ ದೇಶ ಸಾಕ್ಷಿಯಾಯಿತು. ಈ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.

ಈ ಮತಿಹೀನ ಹಿಂಸಾಚಾರದಲ್ಲಿ ಬಲಿಯಾದವರಿಗೆ ಸಂಪುಟವು ಶ್ರದ್ದಾಂಜಲಿ ಸಲ್ಲಿಸುತ್ತದೆ ಮತ್ತು ಮೃತ ಕುಟುಂಬಗಳಿಗೆ ತನ್ನ ಹೃದಯಾಂತರಾಳದ ಸಂತಾಪವನ್ನು ವ್ಯಕ್ತಪಡಿಸುತ್ತದೆ.

ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಚಿವ ಸಂಪುಟ ಪ್ರಾರ್ಥಿಸುತ್ತದೆ ಮತ್ತು ಸಂತ್ರಸ್ತರಿಗೆ ಆರೈಕೆ ಮತ್ತು ಬೆಂಬಲ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ನೀಡುವವರ ತ್ವರಿತ ಪ್ರಯತ್ನಗಳನ್ನು ಶ್ಲಾಘಿಸುತ್ತದೆ.

ಮುಗ್ಧ ಜೀವಗಳ ನಷ್ಟಕ್ಕೆ ಕಾರಣವಾದ ಈ ಅನಾಗರಿಕ ಮತ್ತು ಹೇಡಿತನದ ಕೃತ್ಯವನ್ನು ಸಚಿವ ಸಂಪುಟವು ಸ್ಪಷ್ಟವಾಗಿ ಖಂಡಿಸುತ್ತದೆ.

ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಗೆ ಭಾರತದ ಅಚಲ ಬದ್ಧತೆಯನ್ನು ಸಂಪುಟ ಪುನರುಚ್ಚರಿಸುತ್ತದೆ.

ಪ್ರಪಂಚದಾದ್ಯಂತದ ಅನೇಕ ಸರ್ಕಾರಗಳ ಒಗ್ಗಟ್ಟು ಮತ್ತು ಬೆಂಬಲದ ಹೇಳಿಕೆಗಳಿಗೆ ಸಂಪುಟವು ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ.

ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯ ಮತ್ತು ಸಹಾನುಭೂತಿಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು ಮತ್ತು ನಾಗರಿಕರ ಸಕಾಲಿಕ ಮತ್ತು ಸಂಘಟಿತ ಪ್ರತಿಕ್ರಿಯೆಯನ್ನು ಸಂಪುಟ ಶ್ಲಾಘಿಸುತ್ತದೆ. ಅವರ ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯು ಅತ್ಯಂತ ಶ್ಲಾಘನೀಯ.

ಘಟನೆಯ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ನಡೆಸಬೇಕೆಂದು ಸಚಿವ ಸಂಪುಟ ನಿರ್ದೇಶಿಸುತ್ತದೆ, ಇದರಿಂದಾಗಿ ಅಪರಾಧಿಗಳು, ಅವರ ಸಹಯೋಗಿಗಳು ಮತ್ತು ಅವರ ಪ್ರಾಯೋಜಕರನ್ನು ವಿಳಂಬವಿಲ್ಲದೆ ಗುರುತಿಸಿ ನ್ಯಾಯದ ಕಟಕಟೆಗೆ ತರಲಾಗುತ್ತದೆ.

ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗೆ ಸರ್ಕಾರದ ನಿರಂತರ ಬದ್ಧತೆಗೆ ಅನುಗುಣವಾಗಿ, ಎಲ್ಲಾ ಭಾರತೀಯರ ಜೀವ ಮತ್ತು ಯೋಗಕ್ಷೇಮವನ್ನು ಕಾಪಾಡುವ ದೃಢ ಸಂಕಲ್ಪವನ್ನು ಸಂಪುಟ ಪುನರುಚ್ಚರಿಸುತ್ತದೆ.

 

*****


(Release ID: 2189455) Visitor Counter : 36