ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ತಮಿಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಿದರು
"ಪುತ್ತಾಂಡು (ತಮಿಳು ಹೊಸ ವರ್ಷ) ಪ್ರಾಚೀನ ಸಂಪ್ರದಾಯದಲ್ಲಿ ಆಧುನಿಕತೆಯ ಹಬ್ಬವಾಗಿದೆ"
"ತಮಿಳು ಸಂಸ್ಕೃತಿ ಮತ್ತು ಜನರು ಶಾಶ್ವತ ಮತ್ತು ವಿಶ್ವವ್ಯಾಪಿ ಎರಡೂ ಆಗಿದ್ದಾರೆ"
"ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಪ್ರತಿಯೊಬ್ಬ ಭಾರತೀಯನು ಇದರ ಬಗ್ಗೆ ಹೆಮ್ಮೆಪಡುತ್ತಾನೆ"
"ತಮಿಳು ಚಲನಚಿತ್ರೋದ್ಯಮವು ನಮಗೆ ಕೆಲವು ಅತ್ಯಂತ ಪ್ರತಿಮಾತ್ಮಕ ಕೃತಿಗಳನ್ನು ನೀಡಿದೆ"
"ಭಾರತವನ್ನು ಒಂದು ರಾಷ್ಟ್ರವಾಗಿ ರೂಪಿಸಿದ ಅನೇಕ ವಿಷಯಗಳು ತಮಿಳು ಸಂಸ್ಕೃತಿಯಲ್ಲಿವೆ"
"ತಮಿಳು ಜನರಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಈ ಭಾವನೆಯು ನನಗೆ ಹೊಸ ಶಕ್ತಿಯನ್ನು ತುಂಬುತ್ತದೆ"
"ಕಾಶೀ ತಮಿಳು ಸಂಗಮಂನಲ್ಲಿ ನಾವು ಏಕಕಾಲದಲ್ಲಿ ಪ್ರಾಚೀನತೆ, ಹೊಸ ಆವಿಷ್ಕಾರ ಮತ್ತು ವೈವಿಧ್ಯತೆಯನ್ನು ಆಚರಿಸಿದೆವು"
"ತಮಿಳು ಜನರು ಇಲ್ಲದೆ ಕಾಶಿಯ ನಿವಾಸಿಗಳ ಜೀವನ ಅಪೂರ್ಣ, ನಾನು ಕಾಶೀವಾಸಿ ಆಗಿದ್ದೇನೆ, ಮತ್ತು ಕಾಶಿ ಇಲ್ಲದೆ ತಮಿಳು ಜನರ ಜೀವನ ಅಪೂರ್ಣ ಎಂದು ನಾನು ನಂಬುತ್ತೇನೆ"
"ನಮ್ಮ ತಮಿಳು ಪರಂಪರೆಯ ಬಗ್ಗೆ ತಿಳಿದುಕೊಳ್ಳುವುದು, ಅದನ್ನು ದೇಶಕ್ಕೆ ಮತ್ತು ಜಗತ್ತಿಗೆ ಹೇಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಪರಂಪರೆಯು ನಮ್ಮ ಏಕತೆ ಮತ್ತು 'ರಾಷ್ಟ್ರ ಮೊದಲು' ಎಂಬ ಮನೋಭಾವದ ಸಂಕೇತವಾಗಿದೆ"
प्रविष्टि तिथि:
13 APR 2023 9:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಸಚಿವ ಸಹೋದ್ಯೋಗಿ ತಿರು ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ತಮಿಳು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸ ವರ್ಷದ ಹಬ್ಬವನ್ನು ಆಚರಿಸಲು ತಮ್ಮ ತಮಿಳು ಸಹೋದರ ಸಹೋದರಿಯರ ನಡುವೆ ಇರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. "ಹೊಸ ವರ್ಷವು ಪ್ರಾಚೀನ ಸಂಪ್ರದಾಯದಲ್ಲಿ ನವೀನತೆಯ ಹಬ್ಬ. ಇಂತಹ ಪುರಾತನ ತಮಿಳು ಸಂಸ್ಕೃತಿ, ಆದರೂ ಪ್ರತಿ ವರ್ಷ ಹೊಸ ಶಕ್ತಿಯೊಂದಿಗೆ ಮುಂದುವರಿಯುತ್ತಿದೆ. ಇದು ನಿಜಕ್ಕೂ ಗಮನಾರ್ಹವಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮಿಳು ಜನರು ಮತ್ತು ಸಂಸ್ಕೃತಿಯ ವಿಶಿಷ್ಟತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಮಿಳು ಸಂಸ್ಕೃತಿಯ ಕಡೆಗೆ ತಮ್ಮ ಆಕರ್ಷಣೆ ಮತ್ತು ಭಾವನಾತ್ಮಕ ಒಡನಾಟವನ್ನು ವ್ಯಕ್ತಪಡಿಸಿದರು. ಗುಜರಾತ್‌ನಲ್ಲಿ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದಲ್ಲಿ ತಮಿಳು ಜನಸಂಖ್ಯೆಯ ಬಲವಾದ ಉಪಸ್ಥಿತಿ ಮತ್ತು ಮಹಾನ್ ಪ್ರೀತಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಮಿಳು ಜನರು ತಮ್ಮ ಮೇಲೆ ತೋರಿಸಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಕೆಂಪುಕೋಟೆಯ ಗೋಡೆಗಳಿಂದ ಪ್ರಧಾನಮಂತ್ರಿಯವರು ಮಾತನಾಡಿದ ಐದು ಪ್ರತಿಜ್ಞೆಗಳಲ್ಲಿ ಒಂದನ್ನು – ತಮ್ಮ ಪರಂಪರೆಯ ಬಗ್ಗೆ ಅಭಿಮಾನ ಪಡುವುದನ್ನು – ನೆನಪಿಸಿಕೊಳ್ಳುತ್ತಾ, ಸಂಸ್ಕೃತಿ ಎಷ್ಟು ಹಳೆಯದೋ, ಅಷ್ಟು ಹೆಚ್ಚು ಜನರು ಮತ್ತು ಸಂಸ್ಕೃತಿಯು ಕಾಲದ ಪರೀಕ್ಷೆಯನ್ನು ಎದುರಿಸಿ ನಿಂತಿರುತ್ತವೆ ಎಂದು ಶ್ರೀ ಮೋದಿ ಹೇಳಿದರು. "ತಮಿಳು ಸಂಸ್ಕೃತಿ ಮತ್ತು ಜನರು ಶಾಶ್ವತ ಮತ್ತು ವಿಶ್ವವ್ಯಾಪಿ ಎರಡೂ ಆಗಿದ್ದಾರೆ. ಚೆನ್ನೈನಿಂದ ಕ್ಯಾಲಿಫೋರ್ನಿಯಾದವರೆಗೆ, ಮಧುರೈನಿಂದ ಮೆಲ್ಬೋರ್ನ್‌ನವರೆಗೆ, ಕೊಯಮತ್ತೂರಿನಿಂದ ಕೇಪ್ ಟೌನ್‌ವರೆಗೆ, ಸೇಲಂನಿಂದ ಸಿಂಗಾಪುರದವರೆಗೆ; ತಮಿಳು ಜನರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತಮ್ಮೊಂದಿಗೆ ಒಯ್ದಿರುವುದನ್ನು ನೀವು ಕಾಣಬಹುದು" ಎಂದು ಅವರು ಹೇಳಿದರು. "ಅದು ಪೊಂಗಲ್ ಆಗಿರಲಿ ಅಥವಾ ಹೊಸ ವರ್ಷದ ಹಬ್ಬವೇ ಆಗಿರಲಿ, ಅವು ಪ್ರಪಂಚದಾದ್ಯಂತ ಗುರುತಿಸಲ್ಪಡುತ್ತವೆ. ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಪ್ರತಿಯೊಬ್ಬ ಭಾರತೀಯನು ಇದರ ಬಗ್ಗೆ ಹೆಮ್ಮೆಪಡುತ್ತಾನೆ. ತಮಿಳು ಸಾಹಿತ್ಯವು ಕೂಡ ವ್ಯಾಪಕವಾಗಿ ಗೌರವಿಸಲ್ಪಟ್ಟಿದೆ. ತಮಿಳು ಚಲನಚಿತ್ರದ ವಲಯವು ನಮಗೆ ಕೆಲವು ಅತ್ಯಂತ ಪ್ರತಿಮಾತ್ಮಕ ಕೃತಿಗಳನ್ನು ನೀಡಿದೆ."
ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳು ಜನರ ಮಹತ್ತರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ನಂತರ ದೇಶದ ಬೆಳವಣಿಗೆಯಲ್ಲಿ ತಮಿಳು ಜನರ ಕೊಡುಗೆಯನ್ನು ಸಹ ಒತ್ತಿ ಹೇಳಿದರು. ಸಿ. ರಾಜಗೋಪಾಲಾಚಾರಿ, ಕೆ. ಕಾಮರಾಜ್ ಮತ್ತು ಡಾ. ಅಬ್ದುಲ್ ಕಲಾಂ ಅವರಂತಹ ಮಹನೀಯರನ್ನು ಸ್ಮರಿಸಿದ ಅವರು, ವೈದ್ಯಕೀಯ, ಕಾನೂನು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮಿಳರ ಕೊಡುಗೆ ಹೋಲಿಸಲಾಗದು ಎಂದರು.
ಭಾರತವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ತಮಿಳುನಾಡಿನ ಕೆಲವು ಪ್ರಮುಖವಾದವುಗಳನ್ನು ಒಳಗೊಂಡಂತೆ ಅದಕ್ಕೆ ನಿರಾಕರಿಸಲಾಗದ ಪುರಾವೆಗಳಿವೆ ಎಂದು ಹೇಳಿದರು. ಪ್ರಾಚೀನ ಕಾಲದ ಪ್ರಜಾಪ್ರಭುತ್ವದ ನೀತಿ ಮತ್ತು ಕಾರ್ಯವಿಧಾನಗಳನ್ನು ವಿವರಿಸುವ ಉತ್ತಿರಮೇರೂರ್‌ನಲ್ಲಿರುವ 11-12 ನೂರು ವರ್ಷಗಳಷ್ಟು ಹಳೆಯ ಶಿಲಾಶಾಸನದ ಬಗ್ಗೆ ಅವರು ಮಾತನಾಡಿದರು. "ತಮಿಳು ಸಂಸ್ಕೃತಿಯಲ್ಲಿ ಭಾರತವನ್ನು ಒಂದು ರಾಷ್ಟ್ರವಾಗಿ ರೂಪಿಸಿದ ಬಹಳಷ್ಟು ಅಂಶಗಳಿವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಾಂಚೀಪುರಂನಲ್ಲಿರುವ ವೆಂಕಟೇಶ ಪೆರುಮಾಳ್ ದೇವಸ್ಥಾನ ಮತ್ತು ಚತುರಂಗ ವಲ್ಲಭನಾಥರ್ ದೇವಸ್ಥಾನಗಳು ತಮ್ಮ ವಿಸ್ಮಯಕಾರಿಯಾಗಿ ಆಧುನಿಕ ಪ್ರಸ್ತುತತೆ ಮತ್ತು ಶ್ರೀಮಂತ ಪ್ರಾಚೀನ ಸಂಪ್ರದಾಯಕ್ಕಾಗಿ ಮಹತ್ವದ್ದಾಗಿವೆ ಎಂದರು.
ಶ್ರೀಮಂತ ತಮಿಳು ಸಂಸ್ಕೃತಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪ್ರಧಾನಮಂತ್ರಿಯವರು ಹೆಮ್ಮೆಯಿಂದ ನೆನಪಿಸಿಕೊಂಡರು. ವಿಶ್ವಸಂಸ್ಥೆಯಲ್ಲಿ ತಮಿಳಿನಲ್ಲಿ ಉಲ್ಲೇಖಿಸಿದ ಮತ್ತು ಜಾಫ್ನಾದಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದನ್ನು ಅವರು ಸ್ಮರಿಸಿದರು. ಶ್ರೀ ಮೋದಿ ಅವರು ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದು, ಅವರ ಭೇಟಿಯ ಸಮಯದಲ್ಲಿ ಮತ್ತು ನಂತರ ಅಲ್ಲಿನ ತಮಿಳರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲಾಯಿತು. "ತಮಿಳು ಜನರಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಈ ಭಾವನೆಯು ನನಗೆ ಹೊಸ ಶಕ್ತಿಯನ್ನು ತುಂಬುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.
ಇತ್ತೀಚೆಗೆ ನಡೆದ ಕಾಶೀ ತಮಿಳು ಸಮ್ಮಿಲನದ ಯಶಸ್ಸಿನ ಬಗ್ಗೆ ಪ್ರಧಾನಮಂತ್ರಿಯವರು ತೀವ್ರ ಸಂತೋಷ ವ್ಯಕ್ತಪಡಿಸಿದರು. "ಈ ಕಾರ್ಯಕ್ರಮದಲ್ಲಿ, ನಾವು ಪ್ರಾಚೀನತೆ, ಹೊಸ ಆವಿಷ್ಕಾರ ಮತ್ತು ವೈವಿಧ್ಯತೆಯನ್ನು ಏಕಕಾಲದಲ್ಲಿ ಆಚರಿಸಿದ್ದೇವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಮ್ಮಿಲನದಲ್ಲಿ ತಮಿಳು ಕಲಿಕೆಯ ಪುಸ್ತಕಗಳ ಬಗ್ಗೆ ಇರುವ ವ್ಯಾಮೋಹವನ್ನು ಉಲ್ಲೇಖಿಸಿ ಪ್ರಧಾನಮಂತ್ರಿಯವರು, "ಹಿಂದಿ ಮಾತನಾಡುವ ಪ್ರದೇಶದಲ್ಲಿ, ಈ ಅಂಕಿಅಂಶ ಯುಗದಲ್ಲಿ, ತಮಿಳು ಪುಸ್ತಕಗಳನ್ನು ಈ ರೀತಿ ಪ್ರೀತಿಸುವುದು ನಮ್ಮ ಸಾಂಸ್ಕೃತಿಕ ಸಂಪರ್ಕವನ್ನು ತೋರಿಸುತ್ತದೆ. ತಮಿಳು ಜನರು ಇಲ್ಲದೆ ಕಾಶಿಯ ನಿವಾಸಿಗಳ ಜೀವನ ಅಪೂರ್ಣ, ನಾನು ಕಾಶೀವಾಸಿ ಆಗಿದ್ದೇನೆ, ಮತ್ತು ಕಾಶಿ ಇಲ್ಲದೆ ತಮಿಳು ಜನರ ಜೀವನ ಅಪೂರ್ಣ ಎಂದು ನಾನು ನಂಬುತ್ತೇನೆ." ಸುಬ್ರಮಣ್ಯ ಭಾರತಿ ಅವರ ಹೆಸರಿನಲ್ಲಿ ಹೊಸ ಪೀಠ (ಸ್ಥಾನ) ಮತ್ತು ಕಾಶೀ ವಿಶ್ವನಾಥ ದೇವಸ್ಥಾನದ ಧರ್ಮದರ್ಶಿ ಮಂಡಳಿಯಲ್ಲಿ ತಮಿಳು ವ್ಯಕ್ತಿಗೆ ಸ್ಥಾನ ನೀಡಿರುವುದನ್ನೂ ಶ್ರೀ ಮೋದಿ ಉಲ್ಲೇಖಿಸಿದರು.
ತಮಿಳು ಸಾಹಿತ್ಯದ ಬಲವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು, ಏಕೆಂದರೆ ಅದು ಹಿಂದಿನ ವಿವೇಕದ ಜೊತೆಗೆ ಭವಿಷ್ಯದ ಜ್ಞಾನದ ಮೂಲವಾಗಿದೆ. ಪ್ರಾಚೀನ ಸಂಗಮ್ ಸಾಹಿತ್ಯದಲ್ಲಿ ಧಾನ್ಯಗಳ ಉಲ್ಲೇಖವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, "ಇಂದು, ಭಾರತದ ಉಪಕ್ರಮದ ಮೇಲೆ, ಇಡೀ ಜಗತ್ತು ನಮ್ಮ ಸಾವಿರಾರು ವರ್ಷಗಳ ಹಳೆಯ ಸಿರಿಧಾನ್ಯಗಳ ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸುತ್ತಿದೆ" ಎಂದು ಹೇಳಿದರು. ಎಲ್ಲರೂ ಮತ್ತೊಮ್ಮೆ ತಮ್ಮ ಆಹಾರ ತಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಸ್ಥಾನ ನೀಡಲು ಮತ್ತು ಇತರರನ್ನು ಪ್ರೇರೇಪಿಸಲು ಸಂಕಲ್ಪ ಮಾಡುವಂತೆ ಅವರು ಸಭಿಕರನ್ನು ಕೇಳಿಕೊಂಡರು.
ಯುವಜನರಲ್ಲಿ ತಮಿಳು ಕಲಾ ಪ್ರಕಾರಗಳನ್ನು ಉತ್ತೇಜಿಸುವ ಮತ್ತು ಅವುಗಳನ್ನು ಜಾಗತಿಕವಾಗಿ ಪ್ರದರ್ಶಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಅವು ಇಂದಿನ ಯುವ ಪೀಳಿಗೆಯಲ್ಲಿ ಎಷ್ಟು ಜನಪ್ರಿಯವಾಗಿವೆಯೋ, ಅಷ್ಟೇ ಹೆಚ್ಚು ಅವರು ಅವುಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾರೆ. ಆದ್ದರಿಂದ, ಈ ಕಲೆಯ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವುದು ನಮ್ಮ ಸಾಮೂಹಿಕ ಜವಾಬ್ದಾರಿ" ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಅಮೃತಕಾಲದಲ್ಲಿ, ನಮ್ಮ ತಮಿಳು ಪರಂಪರೆಯ ಬಗ್ಗೆ ತಿಳಿದುಕೊಳ್ಳುವುದು, ಅದನ್ನು ದೇಶ ಮತ್ತು ಜಗತ್ತಿಗೆ ಹೇಳುವುದು ನಮ್ಮ ಜವಾಬ್ದಾರಿಯಾಗಿದೆ. "ಈ ಪರಂಪರೆಯು ನಮ್ಮ ಏಕತೆ ಮತ್ತು 'ರಾಷ್ಟ್ರವೇ ಮೊದಲು' ಎಂಬ ಮನೋಭಾವದ ಸಂಕೇತವಾಗಿದೆ. ನಾವು ತಮಿಳು ಸಂಸ್ಕೃತಿ, ಸಾಹಿತ್ಯ, ಭಾಷೆ ಮತ್ತು ತಮಿಳು ಸಂಪ್ರದಾಯವನ್ನು ನಿರಂತರವಾಗಿ ಮುಂದುವರಿಸಬೇಕು" ಎಂದು ಪ್ರಧಾನಮಂತ್ರಿಯವರು ಮಾತು ಮುಗಿಸಿದರು.
*****
(रिलीज़ आईडी: 2188337)
आगंतुक पटल : 17
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Punjabi
,
Gujarati
,
Odia
,
Tamil
,
Telugu
,
Malayalam