ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐ.ಎಫ್.ಎಫ್.ಐ 2025: ಭಾರತ ಮತ್ತು ವಿಶ್ವಾದ್ಯಂತದ ಏಳು ಚೊಚ್ಚಲ ಮೇರುಕೃತಿಗಳ ಪ್ರದರ್ಶನ
ವಿಶ್ವ ಸಿನಿಮಾದ ಹೊಸ ಧ್ವನಿಗಳಿಗೆ ಸಂಭ್ರಮ: ಐ.ಎಫ್.ಎಫ್.ಐ 2025ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ
Posted On:
09 NOV 2025 8:23PM by PIB Bengaluru
ಅಂತಾರಾಷ್ಟ್ರೀಯ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ, 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2025ರಲ್ಲಿನ 'ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ' ಪ್ರಶಸ್ತಿ ವಿಭಾಗವು, ವಿಶೇಷವಾಗಿ ಆಯ್ಕೆ ಮಾಡಿದ ಐದು ಅಂತಾರಾಷ್ಟ್ರೀಯ ಮತ್ತು ಎರಡು ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ.
ವಿಜೇತರಿಗೆ ಪ್ರತಿಷ್ಠಿತ ಬೆಳ್ಳಿ ನವಿಲು, ₹10 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ಅಧ್ಯಕ್ಷತೆಯಲ್ಲಿ, ಚಲನಚಿತ್ರ ಕ್ಷೇತ್ರದ ದಿಗ್ಗಜರನ್ನೊಳಗೊಂಡ ಪ್ರಖ್ಯಾತ ತೀರ್ಪುಗಾರರ ಮಂಡಳಿಯು ವಿಜೇತರನ್ನು ಆಯ್ಕೆ ಮಾಡಲಿದೆ. ಈ ಮಂಡಳಿಯಲ್ಲಿ ಗ್ರೀಮ್ ಕ್ಲಿಫರ್ಡ್ (ಸಂಪಾದಕ ಮತ್ತು ನಿರ್ದೇಶಕ, ಆಸ್ಟ್ರೇಲಿಯಾ), ಕ್ಯಾಥರಿನಾ ಶುಟ್ಲರ್ (ನಟಿ, ಜರ್ಮನಿ), ಚಂದ್ರನ್ ರತ್ನಂ (ಚಲನಚಿತ್ರ ನಿರ್ಮಾಪಕ, ಶ್ರೀಲಂಕಾ), ಮತ್ತು ರೆಮಿ ಅಡೆಫರಾಸಿನ್ (ಛಾಯಾಗ್ರಾಹಕ, ಇಂಗ್ಲೆಂಡ್) ಅವರು ಇರಲಿದ್ದಾರೆ.
ಪ್ರತಿ ವರ್ಷದಂತೆ, ಈ ವರ್ಷದ ಆಯ್ಕೆಯು ಚೊಚ್ಚಲ ಚಲನಚಿತ್ರ ನಿರ್ಮಾಪಕರ ಅತ್ಯುತ್ತಮ ಕೆಲಸವನ್ನು ಪ್ರದರ್ಶಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಮುಂದಿನ ಪೀಳಿಗೆಯ ಕಥೆಗಾರರ ಸಿನಿಮೀಯ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ.
ಫ್ರಾಂಕ್
ಎಸ್ಟೋನಿಯಾದ ಚಲನಚಿತ್ರ ನಿರ್ಮಾಪಕ ಟೋನಿಸ್ ಪಿಲ್ ಅವರು ಕರುಣಾಜನಕ 'ಕಮಿಂಗ್-ಆಫ್-ಏಜ್' ನಾಟಕೀಯ ಚಿತ್ರದ ಮೂಲಕ ತಮ್ಮ ಚೊಚ್ಚಲ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರವು 'ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಫಾರ್ ಚಿಲ್ಡ್ರನ್ ಅಂಡ್ ಯಂಗ್ ಆಡಿಯನ್ಸ್ - ಶ್ಲಿಂಗೆಲ್ 2025' (SCHLINGEL 2025) ರಲ್ಲಿ ಪ್ರಥಮ ಪ್ರದರ್ಶನ ಕಂಡಿತು, ಅಲ್ಲಿ ಇದು FIPRESCI ತೀರ್ಪುಗಾರರ ಬಹುಮಾನ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.
ಕೌಟುಂಬಿಕ ದೌರ್ಜನ್ಯದ ಭೀಕರ ಘಟನೆಯೊಂದರ ಬಳಿಕ, 13 ವರ್ಷದ ಪಾಲ್ ತನ್ನ ತನ್ನ ಮೂಲ ನೆಲೆಯನ್ನು ಕಳೆದುಕೊಂಡು, ಹೊಸ ಪಟ್ಟಣವೊಂದಕ್ಕೆ ದೂಡಲ್ಪಡುತ್ತಾನೆ. ಅಲ್ಲಿ, 'ತಾನೂ ಇಲ್ಲಿಗೆ ಸೇರಿದವನು' ಎಂಬ ಭಾವನೆಗಾಗಿಗಿನ ಅವನ ತಳಮಳದ ಹುಡುಕಾಟವು, ಅವನನ್ನು ಸರಣಿ ತಪ್ಪು ದಾರಿಗಳಿಗೆ ಎಳೆಯುತ್ತದೆ. ಅವನ ಭವಿಷ್ಯವು ಅಧಃಪತನದ ಸುಳಿಗೆ ಸಿಲುಕಲು ಆರಂಭಿಸುತ್ತಿರುವಂತೆಯೇ, ವಿಚಿತ್ರ ಸ್ವಭಾವದ, ವಿಕಲಚೇತನ ಅಪರಿಚಿತನೊಬ್ಬನೊಂದಿಗಿನ ಅನಿರೀಕ್ಷಿತ ಬಾಂಧವ್ಯವು, ಅವನ ಬದುಕಿನ ಗತಿಯನ್ನೇ ಬದಲಿಸಿಬಿಡುತ್ತದೆ.
ಈ ಚಲನಚಿತ್ರವು, ಬಿರುಕುಬಿಟ್ಟ ಕೌಟುಂಬಿಕ ಸಂಬಂಧಗಳು, ಬಾಲ್ಯದ ಗಾಯಗಳ ನಿಶ್ಯಬ್ದ ಯಾತನೆ, ಮತ್ತು ಅನಿರೀಕ್ಷಿತ ಸ್ನೇಹವೊಂದರ ಅದ್ಭುತ ಪರಿವರ್ತನಾ ಶಕ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ.
ಫ್ಯೂರಿ (ಮೂಲ ಶೀರ್ಷಿಕೆ: ಲಾ ಫುರಿಯಾ)
ಸ್ಪ್ಯಾನಿಷ್ ನಿರ್ದೇಶಕಿ ಗೆಮ್ಮಾ ಬ್ಲಾಸ್ಕೋ ಅವರ ಪ್ರಬಲ ಚೊಚ್ಚಲ ಚಿತ್ರ 'ಫ್ಯೂರಿ', ಒಂದು ತೀಕ್ಷ್ಣವಾದ ವಾಸ್ತವದ ಕಥಾನಕವಾಗಿದ್ದು, ಚಿತ್ರರಂಗಕ್ಕೆ ಒಂದು ದಿಟ್ಟ, ನವೀನ ದನಿಯ ಆಗಮನವನ್ನು ಘೋಷಿಸುತ್ತದೆ. ಈ ಚಲನಚಿತ್ರವು SXSW ಚಲನಚಿತ್ರೋತ್ಸವ 2025 ಮತ್ತು ಸ್ಯಾನ್ ಸೆಬಾಸ್ಟಿಯನ್ ಅಂtAರಾಷ್ಟ್ರೀಯ ಚಲನಚಿತ್ರೋತ್ಸವ 2025ರಲ್ಲಿ ಪ್ರಥಮ ಪ್ರದರ್ಶನ ಕಂಡಿದೆ.
ಹೊಸ ವರ್ಷದ ಮುನ್ನಾದಿನದಂದು ಅತ್ಯಾಚಾರಕ್ಕೆ ಒಳಗಾಗುವ ನಟಿ ಅಲೆಕ್ಸಾಂಡ್ರಾ, ತನ್ನ ಅಂತರಾಳದ ಯಾತನೆಯನ್ನು ತಾನು ನಿರ್ವಹಿಸುವ 'ಮೆಡಿಯಾ' ಪಾತ್ರದ ಮೂಲಕ ಅಭಿವ್ಯಕ್ತಿಸುತ್ತಾಳೆ. ಇದೇ ವೇಳೆ, ಆಕೆಯ ಸಹೋದರ ಆಡ್ರಿಯನ್, "ತನ್ನನ್ನು ರಕ್ಷಿಸಲು ವಿಫಲನಾದೆನಲ್ಲ" ಎಂಬ ತೀವ್ರ ಅಪರಾಧಿಪ್ರಜ್ಞೆ ಮತ್ತು ಆಕ್ರೋಶದಲ್ಲಿ ಬೇಯುತ್ತಾನೆ.
ಹಿಂಸಾತ್ಮಕ, ಪಿತೃಪ್ರಧಾನ ಸಮಾಜದಲ್ಲಿ ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು ಎದುರಿಸುವ ಭಯ, ಅವಮಾನ, ಅಸಹ್ಯ ಮತ್ತು ಅಪರಾಧಿ ಮನೋಭಾವದ ಕುರಿತು ಈ ಚಲನಚಿತ್ರವು ಒಂದು ನವೀನ ಸ್ತ್ರೀವಾದಿ ವಿಶ್ಲೇಷಣೆಯನ್ನು ಮುಂದಿಡುತ್ತದೆ.
ಕಾರ್ಲಾ
ಜರ್ಮನ್ ಚಲನಚಿತ್ರ ನಿರ್ಮಾಪಕಿ ಕ್ರಿಸ್ಟಿನಾ ಟೂರ್ನಾಟ್ಜೆಸ್ ಅವರ ಚೊಚ್ಚಲ ನಾಟಕೀಯ ಚಿತ್ರ 'ಕರ್ಲಾ', ಮ್ಯೂನಿಕ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಅಲ್ಲಿ ಅದು 'ಅತ್ಯುತ್ತಮ ನಿರ್ದೇಶಕ' ಮತ್ತು 'ಅತ್ಯುತ್ತಮ ಚಿತ್ರಕಥೆಗಾರ' ಎಂಬ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
1962ರ ಮ್ಯೂನಿಕ್ ನಗರದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ, 12 ವರ್ಷದ ಕಾರ್ಲಾಳ ನೈಜ ಕಥೆಯನ್ನು ಹೇಳುತ್ತದೆ. ಅವಳು ವರ್ಷಗಳಿಂದ ನಡೆಯುತ್ತಿದ್ದ ದೌರ್ಜನ್ಯದಿಂದ ರಕ್ಷಣೆ ಕೋರಿ, ತನ್ನ ತಂದೆಯ ವಿರುದ್ಧವೇ ದೂರು ದಾಖಲಿಸುತ್ತಾಳೆ.
ಅತ್ಯಂತ ಸೂಕ್ಷ್ಮ ಸಂವೇದನೆಯಿಂದ ಮತ್ತು ಕಥೆಯ ವಾತಾವರಣವನ್ನು ಕಟ್ಟಿಕೊಡುವ ಛಾಯಾಗ್ರಹಣದೊಂದಿಗೆ ನಿರೂಪಿತವಾಗಿರುವ ಈ ಚಿತ್ರ, ದೌರ್ಜನ್ಯದಿಂದ ಬದುಕುಳಿದ ಮಗುವೊಬ್ಬಳ ಕಥೆಯನ್ನು ಅವಳದೇ ಮಾತುಗಳಲ್ಲಿ, ಒಂದು ಸಶಕ್ತ ದನಿಯಲ್ಲಿ ತೆರೆದಿಡುತ್ತದೆ. 'ಕಾರ್ಲಾ' ಚಿತ್ರದ ಮೂಲಕ, ಟೂರ್ನಾಟ್ಜೆಸ್ ಅವರು "ನುಡಿಯಲಾಗದ" ನೋವನ್ನು ಅಭಿವ್ಯಕ್ತಿಸಬಲ್ಲ ಒಂದು ವಿಶಿಷ್ಟ ಸಿನೆಮಾ ಭಾಷೆಯನ್ನೇ ರೂಪಿಸಿದ್ದಾರೆ — ಆ ಭಾಷೆಯು ಮಮಕಾರ, ಸ್ಪಷ್ಟತೆ , ಮತ್ತು ತೀವ್ರ ರಕ್ಷಣಾ ಭಾವದಿಂದ ರೂಪುಗೊಂಡಿದೆ.
ಮೈ ಡಾಟರ್ಸ್ ಹೇರ್ (ಮೂಲ ಶೀರ್ಷಿಕೆ - ರಾಹಾ)
ತಮ್ಮ ಪ್ರಶಂಸಿತ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ಇರಾನಿನ ನಿರ್ದೇಶಕ ಹೆಸಮ್ ಫರಹಮಂಡ್, 'ರಹಾ' ಚಿತ್ರದ ಮೂಲಕ ಒಂದು ಬಿಗಿಹಿಡಿತದ ಸಾಮಾಜಿಕ ಕಥಾನಕವನ್ನು ತೆರೆಗೆ ತಂದಿದ್ದಾರೆ.
ಈ ಚಿತ್ರದ ಕೇಂದ್ರಬಿಂದು ತೋಹಿದ್. ಅವನು ತನ್ನ ಕುಟುಂಬಕ್ಕೆ ಒಂದು ಸಣ್ಣ ಸಂತೋಷವನ್ನು ನೀಡಲು, ಸೆಕೆಂಡ್-ಹ್ಯಾಂಡ್ ಲ್ಯಾಪ್ ಟಾಪ್ ಒಂದನ್ನು ಖರೀದಿಸುವುದಕ್ಕಾಗಿ ತನ್ನ ಚಿಕ್ಕ ಮಗಳ ಕೂದಲನ್ನೇ ಮಾರುತ್ತಾನೆ. ಆದರೆ, ಆ ಲ್ಯಾಪ್ ಟಾಪ್ ನ ಮಾಲೀಕತ್ವದ ಬಗ್ಗೆ ಒಂದು ಶ್ರೀಮಂತ ಕುಟುಂಬವು ತಕರಾರು ಎತ್ತಿದಾಗ, ಅಲ್ಲಿಂದ ಸಂಘರ್ಷಗಳ ಸರಮಾಲೆ ಶುರುವಾಗಿ, ಸಮಾಜದಲ್ಲಿನ ಆಳವಾದ ವರ್ಗ ಅಂತರವನ್ನು ಬಹಿರಂಗಪಡಿಸುತ್ತದೆ.
ಬದುಕಿನ ನೈಜ ವಾಸ್ತವಗಳಿಂದಲೇ ಪ್ರೇರಿತನಾದ ಫರಹಮಂಡ್, ನೈತಿಕತೆಯೇ ಮಸುಕಾಗುವ ಮತ್ತು ನ್ಯಾಯವು ಅತ್ಯಂತ ದುರ್ಬಲವಾಗಿರುವ ಒಂದು ಜಗತ್ತನ್ನು ಸೃಷ್ಟಿಸುತ್ತಾರೆ. ನಿರ್ದಾಕ್ಷಿಣ್ಯ ಅವಲೋಕನದ ಮೂಲಕ, 'ರಹಾ' ಚಿತ್ರವು ಘನತೆ, ಬದುಕಿನ ಹೋರಾಟ, ಮತ್ತು ಬದುಕುಳಿಯಲು ತೆರಬೇಕಾದ ನಿಶ್ಯಬ್ದ ಬೆಲೆಯ ಕುರಿತಾದ ಒಂದು ಸಾರ್ವತ್ರಿಕ ಕಥೆಯಾಗಿ ಮಾರ್ಪಡುತ್ತದೆ.
ದಿ ಡೆವಿಲ್ ಸ್ಮೋಕ್ಸ್ (ಮತ್ತು ಸೇವ್ಸ್ ದಿ ಬರ್ನ್ಟ್ ಮ್ಯಾಚ್ಸ್ ಇನ್ ದಿ ಸೇಮ್ ಬಾಕ್ಸ್)
(ಮೂಲ ಶೀರ್ಷಿಕೆ - ಎಲ್ ಡಯಾಬ್ಲೊ ಫ್ಯೂಮಾ (ವೈ ಗಾರ್ಡಾ ಲಾಸ್ ಕ್ಯಾಬೆಜಾಸ್ ಡಿ ಲಾಸ್ ಸೆರಿಲ್ಲೊಸ್ ಕ್ವೆಮಾಡೋಸ್ ಎನ್ ಲಾ ಮಿಸ್ಮಾ ಕ್ಯಾಜಾ)
ಮೆಕ್ಸಿಕನ್ ಚಲನಚಿತ್ರ ನಿರ್ಮಾಪಕ ಅರ್ನೆಸ್ಟೊ ಮಾರ್ಟಿನೆಜ್ ಬುಸಿಯೊ ಅವರ ಅನನ್ಯ ಚೊಚ್ಚಲ ಚಲನಚಿತ್ರವು, ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2025ರಲ್ಲಿ ಮೊತ್ತಮೊದಲ 'ಪರ್ಸ್ಪೆಕ್ಟಿವ್ಸ್' ಸ್ಪರ್ಧಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಈ ಕಥೆಯು, ಪೋಷಕರಿಂದ ಕೈಬಿಡಲ್ಪಟ್ಟ ನಂತರ, ತಮ್ಮ ಬದುಕನ್ನು ತಾವೇ ನೋಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ ಐದು ಒಡಹುಟ್ಟಿದವರನ್ನು ಅನುಸರಿಸುತ್ತದೆ. ಅವರು ಏಕಾಂತತೆಯೊಂದಿಗೆ ಹೋರಾಡುತ್ತಿರುವಾಗ, ತಮ್ಮ ಸ್ಕಿಜೋಫ್ರೇನಿಕ್ ಅಜ್ಜಿಯ ಅಸ್ಥಿರ ಮನಸ್ಸಿನ ಮೂಲಕವೇ ತಮ್ಮ ಆತಂಕಗಳನ್ನು ಪ್ರತಿಧ್ವನಿಸುತ್ತಾರೆ. ಪರಸ್ಪರರನ್ನು ಕಳೆದುಕೊಳ್ಳಬಾರದೆಂಬ ತಮ್ಮ ಹೋರಾಟದಲ್ಲಿ, ಅವರು ಕಲ್ಪನೆ ಮತ್ತು ವಾಸ್ತವದ ನಡುವಿನ ಗೆರೆಯನ್ನು ಅಳಿಸಿಹಾಕುತ್ತಾರೆ.
"ವಕ್ರ ನಿರೂಪಣಾ ಶೈಲಿಯ" ಮೂಲಕ ಕಥೆಯನ್ನು ಹೆಣೆಯಲಾಗಿದ್ದು, ಈ ಚಿತ್ರವು ಬಾಲ್ಯದ ಭೀಕರತೆಗಳು ಮತ್ತು ಆಂತರಿಕ ಸಹಜ ಪ್ರವೃತ್ತಿಗಳ ಕುರಿತು ತೀಕ್ಷ್ಣವಾದ, ಮನಸ್ಸನ್ನು ತೀವ್ರವಾಗಿ ಕಾಡುವ ಒಳನೋಟಗಳನ್ನು ನೀಡುತ್ತದೆ. ಇದು "ಮನೆಯಲ್ಲಿ ಒಂಟಿ" ಎಂಬ ಪರಿಚಿತ ಕಥಾವಸ್ತುವನ್ನು, ಭಯ, ಭ್ರಮೆ , ಮತ್ತು ಬದುಕುಳಿಯುವಿಕೆಯ ಕುರಿತಾದ ಬಹು-ಪದರಗಳ ಮಾನಸಿಕ ವಿಶ್ಲೇಷಣೆಯಾಗಿ ರೂಪಾಂತರಿಸುತ್ತದೆ.
ಶೇಪ್ ಆಫ್ ಮೋಮೋ
ಭಾರತೀಯ ಚಲನಚಿತ್ರ ನಿರ್ಮಾಪಕಿ ತ್ರಿಬೇಣಿ ರೈ ಅವರ ಚೊಚ್ಚಲ ಚಿತ್ರ 'ಶೇಪ್ ಆಫ್ ಮೋಮೋ', ತನ್ನ ಪ್ರಭಾವಶಾಲಿ ಚಲನಚಿತ್ರೋತ್ಸವಗಳ ಪಯಣದ ನಂತರ, ಈ ಚೊಚ್ಚಲ ಸ್ಪರ್ಧಾ ವಿಭಾಗಕ್ಕೆ ಅತ್ಯಂತ ಅರ್ಹವಾಗಿಯೇ ಪ್ರವೇಶ ಪಡೆದಿದೆ. ಕ್ಯಾನ್ಸ್ 2025 ರಲ್ಲಿನ "HAF ಗೋಸ್ ಟು ಕೇನ್ಸ್" ಪ್ರದರ್ಶನಕ್ಕಾಗಿ ಆಯ್ಕೆಯಾದ ಏಷ್ಯಾದ ಐದು 'ನಿರ್ಮಾಣ ಹಂತದಲ್ಲಿದ್ದ' ಕೃತಿಗಳಲ್ಲಿ ಒಂದಾದ ಈ ಚಿತ್ರ, ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಬಳಿಕ ಸ್ಯಾನ್ ಸೆಬಾಸ್ಟಿಯನ್ ನಲ್ಲಿ ಪ್ರದರ್ಶನಗೊಂಡು, ಅಲ್ಲಿ 'ನವ ನಿರ್ದೇಶಕರ ಪ್ರಶಸ್ತಿ'ಗೆ ನಾಮನಿರ್ದೇಶನಗೊಂಡಿತ್ತು.
ಸಿಕ್ಕಿಂನ ಹಿನ್ನೆಲೆಯಲ್ಲಿ ಮತ್ತು ನೇಪಾಳಿ ಭಾಷೆಯಲ್ಲಿ ಚಿತ್ರೀಕರಿಸಲಾದ ಈ ಕಥೆಯು, ವಿಷ್ಣು ಎಂಬ ಯುವತಿಯ ಸುತ್ತ ಸಾಗುತ್ತದೆ. ಅವಳು, ಜಡತ್ವದಲ್ಲಿ ಮುಳುಗಿಹೋಗಿರುವ ತನ್ನ ಬಹು-ತಲೆಮಾರಿನ ಮಹಿಳೆಯರ ಮನೆಗೆ ಹಿಂದಿರುಗುತ್ತಾಳೆ. ತನ್ನ ಸ್ವಂತಕ್ಕಾಗಿ ಮತ್ತು ಆ ಮಹಿಳೆಯರಿಗಾಗಿ ಸ್ವಾಯತ್ತತೆಯನ್ನು ಮರಳಿ ಪಡೆಯಲು ದೃಢ ಸಂಕಲ್ಪ ಮಾಡುವ ಅವಳು, ಪಿತೃಪ್ರಧಾನ ವ್ಯವಸ್ಥೆಯಿಂದ ರೂಪುಗೊಂಡ ಅವರ ದೈನಂದಿನ ಚೌಕಟ್ಟುಗಳನ್ನು ಛಿದ್ರಗೊಳಿಸುತ್ತಾಳೆ. ಹೀಗೆ, ತಮಗೆ ಬಳುವಳಿಯಾಗಿ ಬಂದ ಕಟ್ಟುಪಾಡುಗಳನ್ನು ಒಪ್ಪಿಕೊಳ್ಳಬೇಕೇ ಅಥವಾ ತಿರಸ್ಕರಿಸಬೇಕೇ ಎಂದು ಪ್ರತಿಯೊಬ್ಬ ಮಹಿಳೆಯೂ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾಳೆ.
'ಶೇಪ್ ಆಫ್ ಮೋಮೋ' – ಸಂಪ್ರದಾಯ, ಸ್ವಾತಂತ್ರ್ಯ, ಮತ್ತು ಕುಟುಂಬದ ಒಡಲಲ್ಲೇ ಹುಟ್ಟಿಕೊಳ್ಳುವ ನಿಶ್ಯಬ್ದ ಕ್ರಾಂತಿಗಳ ಕುರಿತಾದ ಒಂದು ಲಲಿತವಾದ ಪ್ರತಿಬಿಂಬವಾಗಿದೆ.
ಆತಾ ಥಾಂಬಾಯ್ಚಾ ನಾಯ್! (ಇಂಗ್ಲಿಷ್ ಶೀರ್ಷಿಕೆ – ನೌ, ದೇರ್ ಇಸ್ ನೋ ಸ್ಟಾಪಿಂಗ್!)
ನಟ ಶಿವರಾಜ್ ವಯ್ಚಾಲ್ ಅವರ ಚೊಚ್ಚಲ ನಿರ್ದೇಶನದ ಈ ಮರಾಠಿ ಭಾಷೆಯ ಚಿತ್ರ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನಾಲ್ಕನೇ ದರ್ಜೆಯ ಸ್ವಚ್ಛತಾ ಕಾರ್ಮಿಕರ ಗುಂಪೊಂದರ ನೈಜ ಕಥೆಯನ್ನು ಆಧರಿಸಿದೆ. ಸಮರ್ಪಣಾ ಮನೋಭಾವದ ಅಧಿಕಾರಿಯೊಬ್ಬರಿಂದ ಸ್ಫೂರ್ತಿ ಪಡೆದ ಇವರು, ತಮ್ಮ 10 ನೇ ತರಗತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಮತ್ತೆ ಶಾಲೆಗೆ ಮರಳಲು ನಿರ್ಧರಿಸುತ್ತಾರೆ.
ಹಾಸ್ಯ ಮತ್ತು ಭಾವನೆಗಳನ್ನು ಸುಂದರವಾಗಿ ಹೆಣೆದಿರುವ ಈ ಚಲನಚಿತ್ರವು, ಸ್ಥಿತಿಸ್ಥಾಪಕತ್ವಕ್ಕೆ, ಶ್ರಮದ ಘನತೆಗೆ, ಮತ್ತು ಶಿಕ್ಷಣದ ಪರಿವರ್ತಕ ಶಕ್ತಿಗೆ ಗೌರವ ಸಲ್ಲಿಸುತ್ತದೆ. — ಕಲಿಯಲು, ಕನಸು ಕಾಣಲು, ಅಥವಾ ಮತ್ತೆ ಹೊಸದಾಗಿ ಪ್ರಾರಂಭಿಸಲು ಯಾವತ್ತೂ ತಡವಾಗಿರುವುದಿಲ್ಲ ಎಂಬುದನ್ನು ಈ ಚಿತ್ರ ಸಾಬೀತುಪಡಿಸುತ್ತದೆ.
*****
(Release ID: 2188191)
Visitor Counter : 9