ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ ಭಾರತದಂತಹ ರೈಲುಗಳು ಮುಂದಿನ ಪೀಳಿಗೆಯ ಭಾರತೀಯ ರೈಲ್ವೆಗೆ ಬುನಾದಿ ಹಾಕುತ್ತಿವೆ: ಪ್ರಧಾನಮಂತ್ರಿ
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭಾರತ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸುವ ಮಿಷನ್ ಆರಂಭಿಸಿದೆ ಮತ್ತು ಈ ರೈಲುಗಳು ಆ ಪಯಣಣದಲ್ಲಿ ಮೈಲಿಗಲ್ಲುಗಳಾಗಲು ಸಜ್ಜಾಗಿವೆ: ಪ್ರಧಾನಮಂತ್ರಿ
ಪವಿತ್ರ ಯಾತ್ರಾ ಸ್ಥಳಗಳನ್ನು ಈಗ ವಂದೇ ಭಾರತ್ ಜಾಲದ ಮೂಲಕ ಸಂಪರ್ಕಿಸಲಾಗುತ್ತಿದ್ದು, ಇದು ಭಾರತದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿ ಪ್ರಯಾಣದ ಸಮ್ಮಿಳಿತವನ್ನು ಗುರುತಿಸುತ್ತದೆ; ಪಾರಂಪರಿಕ ನಗರಗಳನ್ನು ರಾಷ್ಟ್ರೀಯ ಪ್ರಗತಿಯ ಸಂಕೇತಗಳಾಗಿ ಪರಿವರ್ತಿಸುವತ್ತ ಇದು ಮಹತ್ವದ ಹೆಜ್ಜೆ: ಪ್ರಧಾನಮಂತ್ರಿ
Posted On:
08 NOV 2025 10:15AM by PIB Bengaluru
ಭಾರತದ ಆಧುನಿಕ ರೈಲ್ವೆ ಮೂಲಸೌಕರ್ಯವನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿ, ಉತ್ತರ ಪ್ರದೇಶದ ವಾರಣಾಸಿಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿ, ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಬಾಬಾ ವಿಶ್ವನಾಥನ ಪವಿತ್ರ ನಗರವಾದ ವಾರಣಾಸಿಯ ಎಲ್ಲಾ ಕುಟುಂಬಗಳಿಗೆ ತಮ್ಮ ಗೌರವಯುತ ಶುಭಾಶಯಗಳನ್ನು ಕೋರಿದರು. ದೇವ ದೀಪಾವಳಿಯ ಸಮಯದ ಅದ್ಭುತ ಆಚರಣೆಗಳ ಬಗ್ಗೆ ಅವರು ಮಾತನಾಡಿದರು ಮತ್ತು ಇಂದು ಕೂಡ ಒಂದು ಶುಭ ಸಂದರ್ಭವಾಗಿದೆ ಮತ್ತು ಈ ಅಭಿವೃದ್ಧಿಯ ಹಬ್ಬಕ್ಕೆ ಎಲ್ಲರಿಗೂ ಅವರು ಶುಭಾಶಯಗಳನ್ನು ತಿಳಿಸಿದರು.
ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯ ಪ್ರಮುಖ ಶಕ್ತಿ ಎಂದರೆ ಅದು ಸದೃಢ ಮೂಲಸೌಕರ್ಯ ಎಂದು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಗಮನಾರ್ಹ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಿದ ಪ್ರತಿಯೊಂದು ದೇಶದಲ್ಲಿಯೂ ಮೂಲಸೌಕರ್ಯ ಪ್ರಗತಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತವೂ ಈ ಹಾದಿಯಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದೆ ಎಂದು ಅವರು ಹೇಳಿದರು. ಈ ಸನ್ನಿವೇಶದಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಹೊಸ ವಂದೇ ಭಾರತ್ ರೈಲು ಸೇವೆಗಳನ್ನು ಆರಂಭಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದರು. ಬನಾರಸ್–ಖಜುರಾಹೊ ವಂದೇ ಭಾರತ್ ಜೊತೆಗೆ, ಅವರು ಫಿರೋಜ್‌ಪುರ–ದೆಹಲಿ ವಂದೇ ಭಾರತ್, ಲಕ್ನೋ–ಸಹಾರನ್‌ಪುರ ವಂದೇ ಭಾರತ್ ಮತ್ತು ಎರ್ನಾಕುಲಂ–ಬೆಂಗಳೂರು ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಈ ನಾಲ್ಕು ಹೊಸ ರೈಲುಗಳೊಂದಿಗೆ ದೇಶದಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಕಾರ್ಯಾಚರಣಾ ಸಂಖ್ಯೆ ಇದೀಗ 160 ದಾಟಿದೆ. ಈ ರೈಲುಗಳ ಉದ್ಘಾಟನೆಗೆ ಪ್ರಧಾನಮಂತ್ರಿ ಅವರು ವಾರಣಾಸಿಯ ಜನರಿಗೆ ಮತ್ತು ಭಾರತದ ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
"ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ ಭಾರತ್‌ನಂತಹ ರೈಲುಗಳು ಮುಂದಿನ ಪೀಳಿಗೆಯ ಭಾರತೀಯ ರೈಲ್ವೆಗೆ ಭದ್ರ ಬುನಾದಿ ಹಾಕುತ್ತಿವೆ’’ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಇದು ಭಾರತೀಯ ರೈಲ್ವೆಯನ್ನು ಪರಿವರ್ತಿಸುವ ಸಮಗ್ರ ಅಭಿಯಾನವಾಗಿದೆ ಎಂದರು. ವಂದೇ ಭಾರತ್ ಅನ್ನು ಭಾರತೀಯರು, ಭಾರತೀಯರಿಂದ ಮತ್ತು ಭಾರತೀಯರಿಗಾಗಿ ನಿರ್ಮಿಸಿದ ರೈಲು - ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುತ್ತದೆ ಎಂದು ಅವರು ಬಣ್ಣಿಸಿದರು. ವಂದೇ ಭಾರತವನ್ನು ನೋಡಿ ವಿದೇಶಿ ಪ್ರಯಾಣಿಕರು ಸಹ ಆಶ್ಚರ್ಯಚಕಿತರಾಗುತ್ತಾರೆ ಎಂದು ಅವರು ಉಲ್ಲೇಖಿದರು. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭಾರತ ತನ್ನ ಸಂಪನ್ಮೂಲಗಳನ್ನು ವೃದ್ಧಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ ಮತ್ತು ಈ ರೈಲುಗಳು ಆ ಪಯಣದಲ್ಲಿನ ಮೈಲಿಗಲ್ಲುಗಳಾಗಲು ಸಜ್ಜಾಗಿವೆ ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.
ಭಾರತದಲ್ಲಿ ಶತಮಾನಗಳಿಂದ ತೀರ್ಥಯಾತ್ರೆಯನ್ನು ರಾಷ್ಟ್ರೀಯ ಪ್ರಜ್ಞೆಯ ಮಾಧ್ಯಮವೆಂದು ಪರಿಗಣಿಸಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಈ ಪ್ರಯಾಣಗಳು ಕೇವಲ ದೈವಿಕ ದರ್ಶನದ ಮಾರ್ಗಗಳಲ್ಲ, ಬದಲಾಗಿ ಭಾರತದ ಆತ್ಮದೊಂದಿಗೆ ಸಂಪರ್ಕ ಸಾಧಿಸುವ ಪವಿತ್ರ ಸಂಪ್ರದಾಯಗಳಾಗಿವೆ ಎಂದು ಬಲವಾಗಿ ಪ್ರತಿಪಾದಿಸಿದರು. ಪ್ರಯಾಗ್‌ರಾಜ್, ಅಯೋಧ್ಯೆ, ಹರಿದ್ವಾರ, ಚಿತ್ರಕೂಟ ಮತ್ತು ಕುರುಕ್ಷೇತ್ರಗಳನ್ನು ದೇಶದ ಪರಂಪರೆಯ ಆಧ್ಯಾತ್ಮಿಕ ಕೇಂದ್ರಗಳೆಂದು ಅವರು ಉಲ್ಲೇಖಿಸಿದರು. ”ಈ ಪವಿತ್ರ ತಾಣಗಳನ್ನು ಈಗ ವಂದೇ ಭಾರತ್ ಜಾಲದ ಮೂಲಕ ಸಂಪರ್ಕಿಸಲಾಗುತ್ತಿದ್ದು, ಇದು ಭಾರತದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿ ಪಯಣದ ಸಮ್ಮಿಳಿತವನ್ನು ಗುರುತಿಸುತ್ತದೆ. ಪಾರಂಪರಿಕ ನಗರಗಳನ್ನು ರಾಷ್ಟ್ರೀಯ ಪ್ರಗತಿಯ ಸಂಕೇತಗಳನ್ನಾಗಿ ಪರಿವರ್ತಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ’’ ಎಂದು ಪ್ರಧಾನಮಂತ್ರಿ ಉದ್ಗರಿಸಿದರು.
ಭಾರತದಲ್ಲಿ ತೀರ್ಥಯಾತ್ರೆಯ ಆರ್ಥಿಕ ಆಯಾಮವನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತಿತ್ತು ಎಂದು ಪ್ರಮುಖವಾಗಿ ಉಲ್ಲೇಖಿಸಿದ ಅವರು, ಕಳೆದ 11 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ ಉಪಕ್ರಮಗಳು ತೀರ್ಥಯಾತ್ರೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ ಎಂದರು. ಕಳೆದ ವರ್ಷವಷ್ಟೇ, 11 ಕೋಟಿ ಭಕ್ತರು ಬಾಬಾ ವಿಶ್ವನಾಥನ ದರ್ಶನಕ್ಕಾಗಿ ವಾರಣಾಸಿಗೆ ಭೇಟಿ ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ನಂತರ 6 ಕೋಟಿಗೂ ಅಧಿಕ ಜನರು ರಾಮ್ ಲಲ್ಲಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಯಾತ್ರಿಕರು ಉತ್ತರ ಪ್ರದೇಶದ ಆರ್ಥಿಕತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಡುಗೆ ನೀಡಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಪ್ರವಾಸಿಗರ ಈ ಒಳಹರಿವು ರಾಜ್ಯಾದ್ಯಂತ ಹೋಟೆಲ್‌ಗಳು, ವ್ಯಾಪಾರಿಗಳು, ಸಾರಿಗೆ ಕಂಪನಿಗಳು, ಸ್ಥಳೀಯ ಕಲಾವಿದರು ಮತ್ತು ದೋಣಿ ನಿರ್ವಾಹಕರಿಗೆ ನಿರಂತರ ಆದಾಯ ಗಳಿಕೆಯ ಅವಕಾಶಗಳನ್ನು ಒದಗಿಸಿದೆ ಎಂದು ಹೇಳಿದರು. ಅದರ ಪರಿಣಾಮದಿಂದ ವಾರಣಾಸಿಯಲ್ಲಿ ನೂರಾರು ಯುವಕರು ಈಗ ಸಾರಿಗೆ ಸೇವೆಗಳಿಂದ ಬನಾರಸಿ ಸೀರೆ ವ್ಯವಹಾರಗಳವರೆಗೆ ಹೊಸ ಉದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಈ ಬೆಳವಣಿಗೆಗಳು ಉತ್ತರ ಪ್ರದೇಶ ಮತ್ತು ವಾರಣಾಸಿಯಲ್ಲಿ ಸಮೃದ್ಧಿಯ ಬಾಗಿಲುಗಳನ್ನು ತೆರೆದಿವೆ ಎಂದು ಅವರು ಖಚಿತಪಡಿಸಿದರು.
ಅಭಿವೃದ್ಧಿ ಹೊಂದಿದ ವಾರಣಾಸಿಯ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಮಂತ್ರವನ್ನು ಅರಿಯಲು, ನಗರದಲ್ಲಿ ನಿರಂತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಾರಣಾಸಿಯು ಗುಣಮಟ್ಟದ ಆಸ್ಪತ್ರೆಗಳು, ಸುಧಾರಿತ ರಸ್ತೆಗಳು, ಅನಿಲ ಕೊಳವೆ ಮಾರ್ಗಗಳು ಮತ್ತು ಇಂಟರ್ನೆಟ್ ಸಂಪರ್ಕದ ಸ್ಥಾಪನೆ, ವಿಸ್ತರಣೆ ಮತ್ತು ಗುಣಾತ್ಮಕ ಸುಧಾರಣೆಗೆ ಸಾಕ್ಷಿಯಾಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು. ರೋಪ್‌ವೇ ಯೋಜನೆಯಲ್ಲಿ ತ್ವರಿತ ಪ್ರಗತಿ ಸಾಧಿಸಲಾಗುತ್ತಿದೆ ಮತ್ತು ಗಂಜಾರಿ ಮತ್ತು ಸಿಗ್ರಾ ಕ್ರೀಡಾಂಗಣಗಳಂತಹ ಕ್ರೀಡಾ ಮೂಲಸೌಕರ್ಯಗಳು ಸಹ ಜಾರಿಯಲ್ಲಿವೆ ಎಂದು ಅವರು ಉಲ್ಲೇಖಿಸಿದರು. ಬನಾರಸ್‌ಗೆ ಭೇಟಿ ನೀಡುವುದು, ವಾಸಿಸುವುದು ಮತ್ತು ಬನಾರಸ್ ಎಲ್ಲರಿಗೂ ವಿಶೇಷ ಅನುಭವವನ್ನು ಕಟ್ಟಿಕೊಡುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ವಾರಣಾಸಿಯಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದ ಶ್ರೀ ನರೇಂದ್ರ ಮೋದಿ ಅವರು ಕಳೆದ 10–11 ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಸ್ಮರಿಸಿಕೊಂಡರು, ಗಂಭೀರ ಕಾಯಿಲೆಗಳಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿ.ಹೆಚ್.ಯು) ಒಂದೇ ಆಯ್ಕೆಯಾಗಿತ್ತು ಮತ್ತು ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ, ಅನೇಕರು ರಾತ್ರಿಯಿಡೀ ಕಾಯುತ್ತಿದ್ದರೂ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ, ಮುಂಬೈನಲ್ಲಿ ಚಿಕಿತ್ಸೆ ಪಡೆಯಲು ಜನರು ಭೂಮಿ ಮತ್ತು ಹೊಲಗಳನ್ನು ಮಾರಾಟ ಮಾಡಬೇಕಾಗಿತ್ತು. ಈ ಆತಂಕವನ್ನು ದೂರಮಾಡಲು ತಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಮಹಾಮನ ಕ್ಯಾನ್ಸರ್ ಆಸ್ಪತ್ರೆ, ಕಣ್ಣಿನ ಆರೈಕೆಗಾಗಿ ಶಂಕರ್ ನೇತ್ರಾಲಯ, ಬಿ.ಹೆಚ್.ಯುನಲ್ಲಿ ಸುಧಾರಿತ ಆಘಾತ (ಟ್ರಾಮಾ) ಕೇಂದ್ರ ಮತ್ತು ಶತಮಾನೋತ್ಸವ ಆಸ್ಪತ್ರೆ ಮತ್ತು ಪಾಂಡೆಪುರದಲ್ಲಿರುವ ವಿಭಾಗೀಯ ಆಸ್ಪತ್ರೆಯನ್ನು ವಾರಣಾಸಿ, ಪೂರ್ವಾಂಚಲ್ ಮತ್ತು ನೆರೆಯ ರಾಜ್ಯಗಳಿಗೆ ವರದಾನವಾಗಿ ಮಾರ್ಪಟ್ಟಿರುವ ಸಂಸ್ಥೆಗಳೆಂದು ಅವರು ವಿವರಿಸಿದರು. ಈ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಮತ್ತು ಜನೌಷಧಿ ಕೇಂದ್ರಗಳಿಂದಾಗಿ ಲಕ್ಷಾಂತರ ಬಡ ರೋಗಿಗಳು ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇದು ಸಾರ್ವಜನಿಕ ಆತಂಕವನ್ನು ಕಡಿಮೆ ಮಾಡಿರುವುದಲ್ಲದೆ, ವಾರಣಾಸಿಯನ್ನು ಇಡೀ ಪ್ರದೇಶದ ಆರೋಗ್ಯ ರಾಜಧಾನಿಯಾಗಿ ಗುರುತಿಸಲು ಕಾರಣವಾಗಿದೆ ಎಂದರು.
ವಾರಣಾಸಿಯ ಅಭಿವೃದ್ಧಿಯ ಓಘ ಮತ್ತು ಶಕ್ತಿಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ನಗರದ ಭವ್ಯತೆಯು ವೇಗವಾಗಿ ಸಮೃದ್ಧಿಯಿಂದ ಬೆಳೆಯುತ್ತಲೇ ಇರುವುದರಿಂದ ಜಗತ್ತಿನಾದ್ಯಂತ ಪ್ರತಿಯೊಬ್ಬ ವೀಕ್ಷಕರು ಪವಿತ್ರ ನಗರವಾದ ಬಾಬಾ ವಿಶ್ವನಾಥದಲ್ಲಿ ವಿಶಿಷ್ಟ ಶಕ್ತಿ, ಉತ್ಸಾಹ ಮತ್ತು ಸಂತೋಷವನ್ನು ಅನುಭವಿಸಬೇಕು ಎಂಬ ದೂರದೃಷ್ಟಿಯನ್ನು ಹಂಚಿಕೊಳ್ಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಬಗ್ಗೆಯೂ ಶ್ರೀ ನರೇಂದ್ರ ಮೋದಿ ಪ್ರಸ್ತಾಪಿಸಿದರು. ವಂದೇ ಭಾರತ್ ರೈಲುಗಳ ಚಾಲನೆ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸುವುದನ್ನು ರೂಢಿ ಮಾಡಿಕೊಂಡಿರುವುದಕ್ಕಾಗಿ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ವಿಕಸಿತ ಭಾರತ, ವಿಕಸಿತ ಕಾಶಿ, ಸುರಕ್ಷಿತ ಭಾರತದಂತಹ ವಿವಿಧ ವಿಷಯಗಳನ್ನು ಆಧರಿಸಿದ ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಲಾದ ವರ್ಣಚಿತ್ರಗಳು ಮತ್ತು ಕವಿತೆಗಳಿಗಾಗಿ ಅವರು ಮಕ್ಕಳನ್ನು ಶ್ಲಾಘಿಸಿದರು. ಅದಕ್ಕೆ ಬೆಂಬಲ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ, ಮಕ್ಕಳ ಪೋಷಕರು ಮತ್ತು ಶಿಕ್ಷಕರನ್ನು ಸಹ ಶ್ಲಾಘಿಸಿದರು. ಮಕ್ಕಳ ಸಾಹಿತ್ಯ ಸಭೆಯನ್ನು ಆಯೋಜಿಸುವ ಕಲ್ಪನೆಯನ್ನು ಪ್ರಧಾನಮಂತ್ರಿ ಮತ್ತಷ್ಟು ಪ್ರಸ್ತಾಪಿಸಿದರು ಮತ್ತು 8-10 ವಿಜೇತರನ್ನು ಭಾರತದಾದ್ಯಂತ ಇತರ ಸ್ಪರ್ಧೆಗಳಿಗೆ ಕರೆದೊಯ್ಯಬಹುದು. ಅಂತಹ ಪ್ರತಿಭಾನ್ವಿತ ಮಕ್ಕಳನ್ನು ಹೊಂದಿರುವ ವಾರಣಾಸಿಯ ಸಂಸದರಾಗಿರುವುದಕ್ಕೆ ಪ್ರಧಾನಮಂತ್ರಿ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಮಕ್ಕಳನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕೇರಳ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್, ಕೇಂದ್ರ ಸಚಿವರುಗಳಾದ ಶ್ರೀ ಸುರೇಶ್ ಗೋಪಿ, ಶ್ರೀ ಜಾರ್ಜ್ ಕುರಿಯನ್, ಶ್ರೀ ರವನೀತ್ ಸಿಂಗ್ ಬಿಟ್ಟು ಮತ್ತು ಇತರ ಗಣ್ಯರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹಿನ್ನೆಲೆ
4 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿರುವುದು ವಿಶ್ವ ದರ್ಜೆಯ ರೈಲ್ವೆ ಸೇವೆಗಳ ಮೂಲಕ ನಾಗರಿಕರಿಗೆ ಸುಲಭ, ವೇಗ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೂಚಿಸುತ್ತದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಬನಾರಸ್ – ಖಜುರಾಹೋ, ಲಕ್ನೋ - ಸಹರಾನ್‌ಪುರ, ಫಿರೋಜ್‌ಪುರ - ದೆಹಲಿ ಮತ್ತು ಎರ್ನಾಕುಲಂ - ಬೆಂಗಳೂರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಮುಖ ತಾಣಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸುವ ಮೂಲಕ ಈ ರೈಲುಗಳು ಪ್ರಾದೇಶಿಕ ಸಂಚಾರವನ್ನು ವೃದ್ಧಿಸುತ್ತವೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಮತ್ತು ದೇಶಾದ್ಯಂತ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುತ್ತವೆ.
ಬನಾರಸ್ - ಖಜುರಾಹೊ ವಂದೇ ಭಾರತ್ ಈ ಮಾರ್ಗದಲ್ಲಿ ನೇರ ಸಂಪರ್ಕವನ್ನು ಸ್ಥಾಪಿಸುತ್ತದೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶೇಷ ರೈಲುಗಳಿಗೆ ಹೋಲಿಸಿದರೆ ಸುಮಾರು 2 ಗಂಟೆ 40 ನಿಮಿಷ ಸಮಯವನ್ನು ಉಳಿಸುತ್ತದೆ. ಬನಾರಸ್-ಖಜುರಾಹೊ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ ಮತ್ತು ಖಜುರಾಹೊ ಸೇರಿದಂತೆ ಭಾರತದ ಹೆಸರಾಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಸಂಪರ್ಕಿಸುತ್ತದೆ. ಈ ಸಂಪರ್ಕವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಬಲಪಡಿಸುವುದಲ್ಲದೆ, ಯಾತ್ರಾರ್ಥಿಗಳು ಮತ್ತು ಪ್ರಯಾಣಿಕರಿಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊಗೆ ವೇಗದ, ಆಧುನಿಕ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಲಕ್ನೋ-ಸಹಾರನ್‌ಪುರ್ ವಂದೇ ಭಾರತ್ ಸುಮಾರು 7 ಗಂಟೆ 45 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ, ಇದು ಸುಮಾರು 1 ಗಂಟೆಯ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಲಕ್ನೋ-ಸಹಾರನ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಲಕ್ನೋ, ಸೀತಾಪುರ, ಶಹಜಹಾನ್‌ಪುರ್, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹರಾನ್‌ಪುರದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ರೂರ್ಕಿ ಮೂಲಕ ಪವಿತ್ರ ನಗರವಾದ ಹರಿದ್ವಾರಕ್ಕೆ ಸಂಚಾರ ಲಭ್ಯತೆಯನ್ನು ಸುಧಾರಿಸುತ್ತದೆ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದಾದ್ಯಂತ ಸುಗಮ ಮತ್ತು ವೇಗದ ಅಂತರನಗರ ಪ್ರಯಾಣವನ್ನು ಖಚಿತಪಡಿಸಿಕೊಳ್ಳುವ ಮೂಲಕ, ಈ ಸೇವೆಯು ಸಂಪರ್ಕ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ವೃದ್ದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಫಿರೋಜ್‌ಪುರ-ದೆಹಲಿ ವಂದೇ ಭಾರತ್ ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಆಗಿದ್ದು, ಕೇವಲ 6 ಗಂಟೆ 40 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸುತ್ತದೆ. ಫಿರೋಜ್‌ಪುರ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಷ್ಟ್ರ ರಾಜಧಾನಿ ಮತ್ತು ಪಂಜಾಬ್‌ನ ಪ್ರಮುಖ ನಗರಗಳಾದ ಫಿರೋಜ್‌ಪುರ, ಬಟಿಂಡಾ ಮತ್ತು ಪಟಿಯಾಲ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ರೈಲು ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಜತೆಗೆ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಮತ್ತು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕವನ್ನು ಉತ್ತೇಜಿಸುತ್ತದೆ.
ದಕ್ಷಿಣ ಭಾರತದಲ್ಲಿ, ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಪ್ರಯಾಣದ ಸಮಯವನ್ನು 2 ಗಂಟೆಗಳಿಗೂ ಅಧಿಕ ಕಡಿತಗೊಳಿಸುತ್ತದೆ ಮತ್ತು 8 ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವೇಗವಾಗಿ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ. ಈ ಮಾರ್ಗವು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೆಚ್ಚಿನ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದಲ್ಲದೆ, ಪ್ರಾದೇಶಿಕ ಬೆಳವಣಿಗೆ ಮತ್ತು ಸಹಯೋಗವನ್ನು ಬೆಂಬಲಿಸುತ್ತದೆ.
*****
(Release ID: 2187726)
Visitor Counter : 8