ಪ್ರಧಾನ ಮಂತ್ರಿಯವರ ಕಛೇರಿ
ಛತ್ತೀಸ್ ಗಢ ರಜತ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
14,260 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
ಛತ್ತೀಸ್ ಗಢವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಯಾವಾಗಲೂ ಹೆಮ್ಮೆಯಿಂದ ಆಚರಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ನಿರಂತರ ಪ್ರಯತ್ನವಾಗಿದೆ: ಪ್ರಧಾನಮಂತ್ರಿ
ನಮ್ಮ ಛತ್ತೀಸ್ ಗಢ ಮತ್ತು ನಮ್ಮ ರಾಷ್ಟ್ರ ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗುವ ದಿನ ದೂರವಿಲ್ಲ: ಪ್ರಧಾನಮಂತ್ರಿ
Posted On:
01 NOV 2025 5:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವ ರಾಯ್ ಪುರದಲ್ಲಿ ಛತ್ತೀಸ್ ಗಢ ರಾಜ್ಯ ರಚನೆಯ 25ನೇ ವರ್ಷಾಚರಣೆಯ ಅಂಗವಾಗಿ ಛತ್ತೀಸ್ ಗಢ ರಜತ ಮಹೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದರು. ರಸ್ತೆಗಳು, ಕೈಗಾರಿಕೆ, ಆರೋಗ್ಯ ರಕ್ಷಣೆ ಮತ್ತು ಇಂಧನದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 14,260 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಮತ್ತು ಪರಿವರ್ತಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಛತ್ತೀಸ್ ಗಢದ ಜನತೆಗೆ ಶುಭಾಶಯ ಕೋರಿದರು, ಇಂದು ಛತ್ತೀಸ್ ಗಢ ರಾಜ್ಯ ರಚನೆಯಾಗಿ 25 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಛತ್ತೀಸ್ ಗಢದ ಎಲ್ಲಾ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.
ಛತ್ತೀಸ್ ಗಢದ ರಜತ ಮಹೋತ್ಸವ ಆಚರಣೆಯಲ್ಲಿ ರಾಜ್ಯದ ಜನರೊಂದಿಗೆ ಭಾಗವಹಿಸಿರುವುದು ತಮ್ಮ ಅದೃಷ್ಟದ ವಿಷಯವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಪಕ್ಷದ ಕಾರ್ಯಕರ್ತನಾಗಿ ತಾವು ರಾಜ್ಯ ರಚನೆಯ ಹಿಂದಿನ ಅವಧಿಯನ್ನು ವೀಕ್ಷಿಸಿದ್ದೇನೆ ಮತ್ತು ಕಳೆದ 25 ವರ್ಷಗಳಲ್ಲಿ ಅದರ ಪ್ರಯಾಣಕ್ಕೆ ಸಾಕ್ಷಿಯಾಗಿದ್ದೇನೆ ಎಂದು ಅವರು ಹೇಳಿದರು. ಆದ್ದರಿಂದ, ಈ ಹೆಮ್ಮೆಯ ಕ್ಷಣದ ಭಾಗವಾಗಿರುವುದು ತಮಗೆ ಆಳವಾದ ಹೃದಯಸ್ಪರ್ಶಿ ಅನುಭವವಾಗಿದೆ.
"ಇಪ್ಪತ್ತೈದು ವರ್ಷಗಳ ಹಿಂದೆ, ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ರಾಜ್ಯವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುವ ಸಂಕಲ್ಪದೊಂದಿಗೆ ನಿಮ್ಮ ಕನಸಿನ ಛತ್ತೀಸ್ ಗಢವನ್ನು ನಿಮಗೆ ಹಸ್ತಾಂತರಿಸಿತು" ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಕಳೆದ 25 ವರ್ಷಗಳ ಪ್ರಯಾಣವನ್ನು ಹಿಂತಿರುಗಿ ನೋಡುವುದು ತಮಗೆ ಹೆಮ್ಮೆಯನ್ನು ತುಂಬುತ್ತದೆ. ಛತ್ತೀಸ್ ಗಢದ ಜನರು ಸಾಮೂಹಿಕವಾಗಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. "ಇಪ್ಪತ್ತೈದು ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ಅಭಿವೃದ್ಧಿಯ ಅರಳುತ್ತಿರುವ ಮರವಾಗಿ ಬೆಳೆದಿದೆ. ಛತ್ತೀಸ್ ಗಢವು ಪ್ರಗತಿಯ ಪಥದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ," ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂದು ರಾಜ್ಯಕ್ಕೆ ಪ್ರಜಾಪ್ರಭುತ್ವದ ಹೊಸ ದೇವಾಲಯ – ಹೊಸ ವಿಧಾನಸಭಾ ಕಟ್ಟಡ ದೊರೆತಿದೆ ಎಂದರು. ಕಾರ್ಯಕ್ರಮ ಸ್ಥಳಕ್ಕೆ ಆಗಮಿಸುವ ಮೊದಲು, ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಉದ್ಘಾಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅದೇ ವೇದಿಕೆಯಿಂದ, ಸುಮಾರು 14,000 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು ಪ್ರಾರಂಭಿಸಲಾಯಿತು. ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಅವರು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
2000ನೇ ಇಸವಿಯಿಂದೀಚೆಗೆ ಇಡೀ ಪೀಳಿಗೆ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು, ಹಳ್ಳಿಗಳನ್ನು ತಲುಪುವುದು ಒಂದು ಸವಾಲಾಗಿದ್ದ ಮತ್ತು ಅನೇಕ ಹಳ್ಳಿಗಳಲ್ಲಿ ಯಾವುದೇ ರಸ್ತೆಗಳ ಕುರುಹು ಇಲ್ಲದ ಹಿಂದಿನ ದಿನಗಳನ್ನು ನೋಡದ ಹೊಸ ಪೀಳಿಗೆಯ ಯುವಕರಿದ್ದಾರೆ. ಇಂದು, ಛತ್ತೀಸ್ ಗಢದ ಹಳ್ಳಿಗಳಲ್ಲಿ ರಸ್ತೆ ಜಾಲವು 40,000 ಕಿಲೋಮೀಟರ್ ಗೆ ವಿಸ್ತರಿಸಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ 11 ವರ್ಷಗಳಲ್ಲಿ, ರಾಜ್ಯವು ರಾಷ್ಟ್ರೀಯ ಹೆದ್ದಾರಿಗಳ ಅಭೂತಪೂರ್ವ ವಿಸ್ತರಣೆಗೆ ಸಾಕ್ಷಿಯಾಗಿದೆ ಮತ್ತು ಹೊಸ ಎಕ್ಸ್ ಪ್ರೆಸ್ ವೇಗಳು ಛತ್ತೀಸ್ ಗಢದ ಪ್ರಗತಿಯ ಸಂಕೇತಗಳಾಗುತ್ತಿವೆ. ಈ ಹಿಂದೆ ರಾಯ್ ಪುರದಿಂದ ಬಿಲಾಸ್ಪುರಕ್ಕೆ ಪ್ರಯಾಣಿಸಲು ಹಲವಾರು ಗಂಟೆಗಳ ಕಾಲ ಬೇಕಾಗುತ್ತಿತ್ತು. ಆದರೆ ಈಗ ಆ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಛತ್ತೀಸ್ ಗಢ ಮತ್ತು ಜಾರ್ಖಂಡ್ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಹೊಸ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅವರು ಘೋಷಿಸಿದರು.
ಛತ್ತೀಸ್ ಗಢದಲ್ಲಿ ರೈಲು ಮತ್ತು ವಾಯು ಸಂಪರ್ಕವನ್ನು ಸುಧಾರಿಸಲು ವ್ಯಾಪಕ ಕಾರ್ಯಗಳನ್ನು ಮಾಡಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ವಂದೇ ಭಾರತ್ ನಂತಹ ಹೈಸ್ಪೀಡ್ ರೈಲುಗಳು ಈಗ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ರಾಯ್ಪುರ, ಬಿಲಾಸ್ಪುರ ಮತ್ತು ಜಗದಾಲ್ಪುರದಂತಹ ನಗರಗಳು ಈಗ ನೇರ ವಿಮಾನಗಳ ಮೂಲಕ ಸಂಪರ್ಕ ಹೊಂದಿವೆ ಎಂದು ಹೇಳಿದರು. ಒಂದು ಕಾಲದಲ್ಲಿ ಪ್ರಾಥಮಿಕವಾಗಿ ಕಚ್ಚಾ ವಸ್ತುಗಳ ರಫ್ತಿಗೆ ಹೆಸರುವಾಸಿಯಾಗಿದ್ದ ಛತ್ತೀಸ್ ಗಢವು ಈಗ ಕೈಗಾರಿಕಾ ರಾಜ್ಯವಾಗಿ ಹೊಸ ಪಾತ್ರದಲ್ಲಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಕಳೆದ 25 ವರ್ಷಗಳಲ್ಲಿ ಛತ್ತೀಸ್ ಗಢದ ಸಾಧನೆಗಳಿಗಾಗಿ ಪ್ರತಿಯೊಬ್ಬ ಮುಖ್ಯಮಂತ್ರಿ ಮತ್ತು ಪ್ರತಿ ಸರ್ಕಾರವನ್ನು ಪ್ರಧಾನಿ ಅಭಿನಂದಿಸಿದರು. ಮಹತ್ವದ ಸವಾಲುಗಳ ಸಮಯದಲ್ಲಿ ರಾಜ್ಯವನ್ನು ಮುನ್ನಡೆಸಿದ ಡಾ. ರಮಣ್ ಸಿಂಗ್ ಅವರಿಗೆ ಸಲ್ಲುತ್ತದೆ. ಡಾ. ರಮಣ್ ಸಿಂಗ್ ಅವರು ಈಗ ವಿಧಾನಸಭೆಯ ಸ್ಪೀಕಾಕ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಶ್ರೀ ವಿಷ್ಣು ದೇವ್ ಸಾಯಿ ನೇತೃತ್ವದ ಸರ್ಕಾರವು ಛತ್ತೀಸ್ ಗಢದ ಅಭಿವೃದ್ಧಿಯನ್ನು ತ್ವರಿತ ಗತಿಯಲ್ಲಿ ಮುನ್ನಡೆಸುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಬಡತನವನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಬಡವರ ಕಾಳಜಿ ಮತ್ತು ಅಸಹಾಯಕತೆಯನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಷ್ಟ್ರವು ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಅವರು ದೀನದಲಿತರ ಕಲ್ಯಾಣಕ್ಕೆ ಆದ್ಯತೆ ನೀಡಿದರು ಎಂದು ಅವರು ಹೇಳಿದರು. ತಮ್ಮ ಸರ್ಕಾರ ಬಡವರಿಗೆ ಆರೋಗ್ಯ ರಕ್ಷಣೆ, ಆದಾಯ, ಶಿಕ್ಷಣ ಮತ್ತು ನೀರಾವರಿಯ ಬಗ್ಗೆ ವ್ಯಾಪಕವಾಗಿ ಗಮನ ಹರಿಸಿದೆ ಎಂದು ಅವರು ಒತ್ತಿ ಹೇಳಿದರು.
25 ವರ್ಷಗಳ ಹಿಂದೆ ಛತ್ತೀಸ್ ಗಢದಲ್ಲಿ ಕೇವಲ ಒಂದು ವೈದ್ಯಕೀಯ ಕಾಲೇಜು ಇತ್ತು ಎಂದು ಉದಾಹರಣೆ ನೀಡಿದ ಶ್ರೀ ನರೇಂದ್ರ ಮೋದಿ ಅವರು, ಇಂದು ರಾಜ್ಯದಲ್ಲಿ 14 ವೈದ್ಯಕೀಯ ಕಾಲೇಜುಗಳು ಮತ್ತು ರಾಯ್ಪುರದಲ್ಲಿ ಏಮ್ಸ್ ಇದೆ ಎಂದು ಹೇಳಿದರು. ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸುವ ರಾಷ್ಟ್ರವ್ಯಾಪಿ ಅಭಿಯಾನವು ಛತ್ತೀಸ್ ಗಢದಲ್ಲಿ ಪ್ರಾರಂಭವಾಯಿತು ಎಂದು ಅವರು ಸ್ಮರಿಸಿದರು. ಪ್ರಸ್ತುತ, ರಾಜ್ಯದಲ್ಲಿ 5,500 ಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳಿವೆ.
"ಪ್ರತಿಯೊಬ್ಬ ಬಡ ನಾಗರಿಕನು ಘನತೆಯ ಜೀವನವನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿ ಅವರು, ಕೊಳೆಗೇರಿಗಳು ಮತ್ತು ತಾತ್ಕಾಲಿಕ ಆಶ್ರಯಗಳಲ್ಲಿನ ಜೀವನವು ಹತಾಶೆಯನ್ನು ಮತ್ತಷ್ಟು ಗಾಢವಾಗಿಸುತ್ತದೆ ಮತ್ತು ಬಡತನದ ವಿರುದ್ಧ ಹೋರಾಡುವ ಸಂಕಲ್ಪವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು. ಆದ್ದರಿಂದ, ನಮ್ಮ ಸರ್ಕಾರವು ಪ್ರತಿ ಬಡ ಕುಟುಂಬಕ್ಕೆ ಶಾಶ್ವತ ವಸತಿ ಒದಗಿಸಲು ನಿರ್ಧರಿಸಿದೆ. ಕಳೆದ 11 ವರ್ಷಗಳಲ್ಲಿ ನಾಲ್ಕು ಕೋಟಿ ಬಡ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆದಿವೆ ಮತ್ತು ಈಗ ಸರ್ಕಾರವು ಮೂರು ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ದಿನವೊಂದರಲ್ಲೇ, ಛತ್ತೀಸ್ ಗಢದಲ್ಲಿ 3.5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ಹೊಸ ಮನೆಗಳನ್ನು ಪ್ರವೇಶಿಸುತ್ತಿವೆ ಮತ್ತು ಸುಮಾರು ಮೂರು ಲಕ್ಷ ಕುಟುಂಬಗಳು 1,200 ಕೋಟಿ ರೂ. ವಿತರಣೆಯನ್ನು ಪಡೆದಿವೆ. ಛತ್ತೀಸ್ ಗಢದಲ್ಲಿ ಬಡವರಿಗೆ ವಸತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಷ್ಟು ಗಂಭೀರವಾಗಿ ಕಾರ್ಯೋನ್ಮುಖವಾಗಿದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಒಂದು ವರ್ಷವೊಂದರಲ್ಲೇ ಏಳು ಲಕ್ಷ ಪಕ್ಕಾ ಮನೆಗಳನ್ನು ದೀನದಲಿತರಿಗಾಗಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಇವು ಕೇವಲ ಅಂಕಿ ಅಂಶಗಳಲ್ಲ - ಪ್ರತಿಯೊಂದು ಮನೆಯೂ ಕುಟುಂಬದ ಕನಸು ಮತ್ತು ಅಪಾರ ಸಂತೋಷವನ್ನು ಪ್ರತಿನಿಧಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಅವರು ಎಲ್ಲಾ ಫಲಾನುಭವಿ ಕುಟುಂಬಗಳಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಛತ್ತೀಸ್ ಗಢದ ಜನರ ಜೀವನವನ್ನು ಸುಲಭಗೊಳಿಸಲು ಮತ್ತು ಅವರ ಕಷ್ಟಗಳನ್ನು ಕಡಿಮೆ ಮಾಡಲು ತಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಈಗ ರಾಜ್ಯದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ತಲುಪಿದೆ ಮತ್ತು ಒಂದು ಕಾಲದಲ್ಲಿ ವಿದ್ಯುತ್ ಕೊರತೆಯಿದ್ದ ಪ್ರದೇಶಗಳು ಸಹ ಈಗ ಅಂತರ್ಜಾಲ ಸೌಲಭ್ಯವನ್ನು ಹೊಂದಿವೆ ಎಂದು ಒತ್ತಿ ಹೇಳಿದರು. ಎಲ್.ಪಿ.ಜಿ ಸಂಪರ್ಕವು ಸಾಮಾನ್ಯ ಕುಟುಂಬಗಳಿಗೆ ದೂರದ ಕನಸಾಗಿದ್ದ ಕಾಲವೊಂದಿತ್ತು ಎಂದು ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು. ಇಂದು, ಛತ್ತೀಸ್ ಗಢದಾದ್ಯಂತ ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಹಳ್ಳಿಗಳು ಮತ್ತು ಮನೆಗಳನ್ನು ಅನಿಲ ಸಂಪರ್ಕಗಳು ತಲುಪಿವೆ. ಸಿಲಿಂಡರ್ ಗಳ ಜೊತೆಗೆ ಪೈಪ್ ಲೈನ್ ಗಳ ಮೂಲಕ ಕೈಗೆಟಕುವ ದರದಲ್ಲಿ ಅನಿಲವನ್ನು ಒದಗಿಸಲು ಸರ್ಕಾರ ಈಗ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ನಾಗ್ಪುರ – ಝಾರ್ಸುಗುಡ ಅನಿಲ ಕೊಳವೆ ಮಾರ್ಗವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಘೋಷಿಸಿದ ಅವರು, ಈ ಯೋಜನೆಗಾಗಿ ಛತ್ತೀಸ್ ಗಢದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಛತ್ತೀಸ್ ಗಢವು ದೇಶದ ಅತಿದೊಡ್ಡ ಬುಡಕಟ್ಟು ಜನಸಂಖ್ಯೆಗೆ ನೆಲೆಯಾಗಿದೆ - ಹೆಮ್ಮೆಯ ಇತಿಹಾಸ ಮತ್ತು ಭಾರತದ ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ಹೊಂದಿರುವ ಸಮುದಾಯವಾಗಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಇಡೀ ರಾಷ್ಟ್ರ ಮತ್ತು ಜಗತ್ತು ಗುರುತಿಸಲು ಮತ್ತು ಆಚರಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದರು. ದೇಶಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾದ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಅಥವಾ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸುವ ಮೂಲಕ, ಬುಡಕಟ್ಟು ಸಮಾಜದ ಪರಂಪರೆಯನ್ನು ಗೌರವಿಸುವುದು ಮತ್ತು ವೈಭವೀಕರಿಸುವುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಇಂದು, ಶಹೀದ್ ವೀರ್ ನಾರಾಯಣ್ ಸಿಂಗ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯದ ಉದ್ಘಾಟನೆಯೊಂದಿಗೆ ಈ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಈ ವಸ್ತುಸಂಗ್ರಹಾಲಯವು ಸ್ವಾತಂತ್ರ್ಯ ಪೂರ್ವದ 150 ವರ್ಷಗಳ ಬುಡಕಟ್ಟು ಇತಿಹಾಸವನ್ನು ಪ್ರದರ್ಶಿಸುತ್ತದೆ, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಕೊಡುಗೆ ನೀಡಿದರು ಎಂಬುದನ್ನು ವಿವರಿಸುತ್ತದೆ ಎಂದು ಒತ್ತಿ ಹೇಳಿದರು. ಈ ವಸ್ತುಸಂಗ್ರಹಾಲಯವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ಮತ್ತು ಬುಡಕಟ್ಟು ಅಭಿವೃದ್ಧಿ ಮತ್ತು ಕಲ್ಯಾಣವನ್ನು ಉತ್ತೇಜಿಸಲು ತಮ್ಮ ಸರ್ಕಾರ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ದೇಶಾದ್ಯಂತದ ಸಾವಿರಾರು ಬುಡಕಟ್ಟು ಹಳ್ಳಿಗಳಿಗೆ ಅಭಿವೃದ್ಧಿಯ ಹೊಸ ಬೆಳಕನ್ನು ತರುತ್ತಿರುವ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನವನ್ನು ಉಲ್ಲೇಖಿಸಿದರು. ಇದು 80,000 ಕೋಟಿ ರೂ.ಗಳ ಉಪಕ್ರಮವಾಗಿದ್ದು, ಇದು ಸ್ವತಂತ್ರ ಭಾರತದ ಬುಡಕಟ್ಟು ಪ್ರದೇಶಗಳಿಗೆ ಅಭೂತಪೂರ್ವ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ, ಅತ್ಯಂತ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಪಿಎಂ-ಜನ್ಮಾನ್ ಯೋಜನೆಯಡಿ, ಈ ಸಮುದಾಯಗಳ ಸಾವಿರಾರು ಜನವಸತಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಬುಡಕಟ್ಟು ಸಮುದಾಯಗಳು ತಲೆಮಾರುಗಳಿಂದ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಿವೆ ಎಂದು ಹೇಳಿದ ಪ್ರಧಾನಿ, ವನ್ ಧನ್ ಕೇಂದ್ರಗಳ ಮೂಲಕ ಹೆಚ್ಚಿನ ಆದಾಯಕ್ಕೆ ಅವಕಾಶಗಳನ್ನು ಸೃಷ್ಟಿಸಿದ್ದು ಪ್ರಸ್ತುತ ಸರ್ಕಾರ ಎಂದು ಅವರು ಒತ್ತಿ ಹೇಳಿದರು. ತೆಂಡು ಎಲೆಗಳ ಸಂಗ್ರಹಣೆಗೆ ಸುಧಾರಿತ ವ್ಯವಸ್ಥೆಗಳು ಛತ್ತೀಸ್ ಗಢದ ಸಂಗ್ರಾಹಕರಿಗೆ ಗಮನಾರ್ಹವಾಗಿ ಹೆಚ್ಚಿನ ಆದಾಯಕ್ಕೆ ಕಾರಣವಾಗಿವೆ ಎಂದು ಅವರು ಗಮನಿಸಿದರು.
ಛತ್ತೀಸ್ ಗಢವು ಈಗ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯ ಸಂಕೋಲೆಗಳಿಂದ ಮುಕ್ತವಾಗುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಶ್ರೀ ನರೇಂದ್ರ ಮೋದಿ ಅವರು, ನಕ್ಸಲಿಸಂನಿಂದಾಗಿ 50-55 ವರ್ಷಗಳ ಕಾಲ ಜನರು ಅನುಭವಿಸಿದ ನೋವಿನ ಅನುಭವಗಳನ್ನು ಒಪ್ಪಿಕೊಂಡರು. ಸಂವಿಧಾನವನ್ನು ಎತ್ತಿಹಿಡಿಯುವಂತೆ ನಟಿಸುವವರು ಮತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವವರನ್ನು ಟೀಕಿಸಿದ ಅವರು, ಅವರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಜನರ ವಿರುದ್ಧ ದಶಕಗಳ ಕಾಲ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು. ಮಾವೋವಾದಿ ಭಯೋತ್ಪಾದನೆಯಿಂದಾಗಿ, ಛತ್ತೀಸ್ ಗಢದ ಬುಡಕಟ್ಟು ಪ್ರದೇಶಗಳು ದೀರ್ಘಕಾಲದವರೆಗೆ ರಸ್ತೆಗಳಿಂದ ವಂಚಿತವಾಗಿವೆ ಎಂದು ಅವರು ಹೇಳಿದರು. ಮಕ್ಕಳಿಗೆ ಶಾಲೆಗಳಿಗೆ ಪ್ರವೇಶದ ಕೊರತೆಯಿತ್ತು, ರೋಗಿಗಳಿಗೆ ಆಸ್ಪತ್ರೆಗಳನ್ನು ನಿರಾಕರಿಸಲಾಯಿತು ಮತ್ತು ದಶಕಗಳ ಕಾಲ ದೇಶವನ್ನು ಆಳಿದವರು ಜೀವನದ ಸೌಕರ್ಯಗಳನ್ನು ಆನಂದಿಸುವಾಗ ಜನರನ್ನು ತಮ್ಮ ಹಣೆಬರಹಕ್ಕೆ ಬಿಟ್ಟುಬಿಟ್ಟರು.
ಹಿಂಸಾಚಾರದ ಚಕ್ರದಿಂದ ತಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಹಾಳಾಗಲು ತಾವು ಬಿಡುವುದಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ ಅವರು, ಅಸಂಖ್ಯಾತ ತಾಯಂದಿರು ತಮ್ಮ ಮಕ್ಕಳಿಗಾಗಿ ಅಳುವುದನ್ನು ನೋಡಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು, 2014ರಲ್ಲಿ ರಾಷ್ಟ್ರವು ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ತಮ್ಮ ಸರ್ಕಾರವು ಭಾರತವನ್ನು ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ನಿರ್ಧರಿಸಿತು ಎಂದು ಹೇಳಿದರು. ಈ ಸಂಕಲ್ಪದ ಫಲಶ್ರುತಿ ಈಗ ಇಡೀ ದೇಶಕ್ಕೆ ಗೋಚರಿಸುತ್ತಿದೆ ಎಂದು ದೃಢಪಡಿಸಿದ ಪ್ರಧಾನಿ, ಹನ್ನೊಂದು ವರ್ಷಗಳ ಹಿಂದೆ 125 ಕ್ಕೂ ಹೆಚ್ಚು ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯಿಂದ ಬಾಧಿತವಾಗಿದ್ದವು ಎಂದರು. ಇಂದು, ಮಾವೋವಾದಿ ಚಟುವಟಿಕೆಯ ಕುರುಹುಗಳು ಉಳಿದಿರುವ ಮೂರು ಜಿಲ್ಲೆಗಳು ಮಾತ್ರ ಉಳಿದಿವೆ. "ಛತ್ತೀಸಗಢ ಮತ್ತು ಇಡೀ ರಾಷ್ಟ್ರವು ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗುವ ದಿನ ದೂರವಿಲ್ಲ" ಎಂದು ಪ್ರಧಾನಿ ದೃಢಪಡಿಸಿದರು.
ಛತ್ತೀಸ್ ಗಢದಲ್ಲಿ ಒಂದು ಕಾಲದಲ್ಲಿ ಹಿಂಸಾಚಾರದ ಹಾದಿಯನ್ನು ತೆಗೆದುಕೊಂಡಿದ್ದ ಅನೇಕ ವ್ಯಕ್ತಿಗಳು ಈಗ ವೇಗವಾಗಿ ಶರಣಾಗುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಲವು ದಿನಗಳ ಹಿಂದೆ, ಕಂಕೇರ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ನಕ್ಸಲೀಯರು ಮುಖ್ಯವಾಹಿನಿಗೆ ಮರಳಿದ್ದಾರೆ ಮತ್ತು ಇದಕ್ಕೂ ಮುನ್ನ ಅಕ್ಟೋಬರ್ 17 ರಂದು ಬಸ್ತಾರ್ ನಲ್ಲಿ 200ಕ್ಕೂ ಹೆಚ್ಚು ನಕ್ಸಲೀಯರು ಶರಣಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚಿನ ತಿಂಗಳುಗಳಲ್ಲಿ, ದೇಶಾದ್ಯಂತ ಮಾವೋವಾದಿ ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿರುವ ಡಜನ್ ಗಟ್ಟಲೆ ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ, ಅವರಲ್ಲಿ ಅನೇಕರು ಲಕ್ಷಾಂತರ ಮತ್ತು ಕೋಟಿ ರೂಪಾಯಿಗಳ ಬಹುಮಾನಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ವ್ಯಕ್ತಿಗಳು ಈಗ ಭಾರತದ ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಅವರು, ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದರು.
ಒಂದು ಕಾಲದಲ್ಲಿ ಬಾಂಬ್ ಗಳು ಮತ್ತು ಬಂದೂಕುಗಳ ಭಯದಿಂದ ಹಿಡಿತದಲ್ಲಿದ್ದ ಪ್ರದೇಶಗಳು ಈಗ ರೂಪಾಂತರಗೊಂಡಿವೆ ಎಂದು ಅವರು ಹೇಳಿದರು. ಬಿಜಾಪುರದ ಚಿಲ್ಕಪಲ್ಲಿ ಗ್ರಾಮದಲ್ಲಿ ಏಳು ದಶಕಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ತಲುಪಿದೆ. ಅಬುಝ್ಮದ್ ನ ರೆಕವಾಯಾ ಗ್ರಾಮದಲ್ಲಿ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಶಾಲೆ ನಿರ್ಮಾಣ ಪ್ರಾರಂಭವಾಗಿದೆ. ಒಂದು ಕಾಲದಲ್ಲಿ ಭಯೋತ್ಪಾದನೆಯ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಪುವರ್ತಿ ಗ್ರಾಮವು ಈಗ ಅಭಿವೃದ್ಧಿಯ ಅಲೆಗೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಕೆಂಪು ಧ್ವಜದ ಬದಲಿಗೆ ರಾಷ್ಟ್ರ ತ್ರಿವರ್ಣ ಧ್ವಜ ಅಳವಡಿಸಲಾಗಿದೆ. ಬಸ್ತಾರ್ ಪಂಡಮ್ ಮತ್ತು ಬಸ್ತಾರ್ ಒಲಿಂಪಿಕ್ಸ್ ನಂತಹ ಕಾರ್ಯಕ್ರಮಗಳ ಆತಿಥ್ಯ ವಹಿಸುವ ಬಸ್ತಾರ್ ನಂತಹ ಪ್ರದೇಶಗಳು ಈಗ ಸಂಭ್ರಮಾಚರಣೆಯಿಂದ ತುಂಬಿವೆ ಎಂದು ಅವರು ಹೇಳಿದರು.
ನಕ್ಸಲಿಸಂನ ಸವಾಲಿನ ಹೊರತಾಗಿಯೂ ಕಳೆದ 25 ವರ್ಷಗಳಲ್ಲಿ ಛತ್ತೀಸ್ ಗಢವು ಎಷ್ಟು ಪ್ರಗತಿ ಸಾಧಿಸಿದೆ ಮತ್ತು ಈ ಸವಾಲನ್ನು ಸಂಪೂರ್ಣವಾಗಿ ಜಯಿಸಿದ ನಂತರ ವೇಗವು ಎಷ್ಟು ವೇಗವಾಗಿರುತ್ತದೆ ಎಂದು ಪ್ರತಿಯೊಬ್ಬರೂ ಊಹಿಸಬೇಕು ಎಂದು ಒತ್ತಾಯಿಸಿದ ಶ್ರೀ ನರೇಂದ್ರ ಮೋದಿ, ಮುಂಬರುವ ವರ್ಷಗಳು ಛತ್ತೀಸ್ ಗಢಕ್ಕೆ ನಿರ್ಣಾಯಕವಾಗಿವೆ ಎಂದು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ಛತ್ತೀಸ್ ಗಢವು ಅಭಿವೃದ್ಧಿ ಹೊಂದುವುದು ಅತ್ಯಗತ್ಯ. ರಾಜ್ಯದ ಯುವಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇದು ಅವರ ಸಮಯ, ಮತ್ತು ಅವರು ಸಾಧಿಸಲಾಗದ ಯಾವುದೇ ಗುರಿ ಇಲ್ಲ ಎಂದರು. ಪ್ರತಿ ಹಂತದಲ್ಲೂ ಮತ್ತು ಪ್ರತಿ ಸಂಕಲ್ಪದೊಂದಿಗೆ ತಮ್ಮ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದರು. ನಾವು ಒಟ್ಟಾಗಿ ಛತ್ತೀಸ್ ಗಢವನ್ನು ಮುನ್ನಡೆಸುತ್ತೇವೆ ಮತ್ತು ರಾಷ್ಟ್ರವನ್ನು ಮುನ್ನಡೆಸುತ್ತೇವೆ ಎಂದು ದೃಢೀಕರಿಸುವ ಮೂಲಕ ಪ್ರಧಾನಮಂತ್ರಿ ಅವರು ಮಾತು ಮುಗಿಸಿದರು ಮತ್ತು ಛತ್ತೀಸ್ ಗಢದ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಛತ್ತೀಸ್ ಗಢದ ರಾಜ್ಯಪಾಲ ಶ್ರೀ ರಾಮನ್ ದೇಕಾ, ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ, ಕೇಂದ್ರ ಸಚಿವರಾದ ಶ್ರೀ ಜುಯಲ್ ಓರಂ, ಶ್ರೀ ದುರ್ಗಾ ದಾಸ್ ಉಯಿಕೆ, ಶ್ರೀ ತೋಕನ್ ಸಾಹು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಛತ್ತೀಸ್ ಗಢ ರಾಜ್ಯ ರಚನೆಯ 25ನೇ ವರ್ಷಾಚರಣೆಯ ಅಂಗವಾಗಿ ಛತ್ತೀಸ್ ಗಢ ರಜತ್ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದ್ದರು. ರಸ್ತೆಗಳು, ಕೈಗಾರಿಕೆ, ಆರೋಗ್ಯ ರಕ್ಷಣೆ ಮತ್ತು ಇಂಧನದಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 14,260 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಮತ್ತು ಪರಿವರ್ತಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಲು, ಪ್ರಧಾನಮಂತ್ರಿ ಅವರು ಛತ್ತೀಸ್ ಗಢದ ಒಂಬತ್ತು ಜಿಲ್ಲೆಗಳಲ್ಲಿ 12 ಹೊಸ ಸ್ಟಾರ್ಟ್ ಅಪ್ ಗ್ರಾಮ ಉದ್ಯಮಶೀಲತಾ ಕಾರ್ಯಕ್ರಮ (ಎಸ್ ವಿ ಇ ಪಿ) ಬ್ಲಾಕ್ ಗಳನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು 3.51 ಲಕ್ಷ ಪೂರ್ಣಗೊಂಡ ಮನೆಗಳ ಗೃಹಪ್ರವೇಶದಲ್ಲಿ ಭಾಗವಹಿಸಿದರು ಮತ್ತು ರಾಜ್ಯದಾದ್ಯಂತ ಗ್ರಾಮೀಣ ಕುಟುಂಬಗಳಿಗೆ ಗೌರವಯುತ ವಸತಿ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 3 ಲಕ್ಷ ಫಲಾನುಭವಿಗಳಿಗೆ 1200 ಕೋಟಿ ರೂ.ಗಳನ್ನು ಕಂತಾಗಿ ಬಿಡುಗಡೆ ಮಾಡಿದರು.
ಪಥಲ್ಗಾಂವ್-ಕುಂಕುರಿಯಿಂದ ಛತ್ತೀಸ್ ಗಢ-ಜಾರ್ಖಂಡ್ ಗಡಿಯವರೆಗಿನ ಚತುಷ್ಪಥ ಗ್ರೀನ್ ಫೀಲ್ಡ್ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸುಮಾರು 3,150 ಕೋಟಿ ರೂ.ಗಳ ವೆಚ್ಚದಲ್ಲಿ ಭಾರತಮಾಲಾ ಪರಿಯೋಜನೆಯಡಿ ಅಭಿವೃದ್ಧಿಪಡಿಸುತ್ತಿದೆ. ಈ ಕಾರ್ಯತಂತ್ರದ ಕಾರಿಡಾರ್ ಕೊರ್ಬಾ, ರಾಯಗಢ, ಜಶ್ಪುರ್, ರಾಂಚಿ ಮತ್ತು ಜೆಮ್ ಶೆಡ್ ಪುರದಾದ್ಯಂತ ಪ್ರಮುಖ ಕಲ್ಲಿದ್ದಲು ಗಣಿಗಳು, ಕೈಗಾರಿಕಾ ವಲಯಗಳು ಮತ್ತು ಉಕ್ಕಿನ ಸ್ಥಾವರಗಳನ್ನು ಸಂಪರ್ಕಿಸುತ್ತದೆ, ಪ್ರಾದೇಶಿಕ ವ್ಯಾಪಾರ ಸಂಪರ್ಕಗಳನ್ನು ಬಲಪಡಿಸುವ ಮತ್ತು ಮಧ್ಯ ಭಾರತವನ್ನು ಪೂರ್ವ ಪ್ರದೇಶದೊಂದಿಗೆ ಸಂಯೋಜಿಸುವ ಪ್ರಮುಖ ಆರ್ಥಿಕ ಅಪಧಮನಿಯಾಗಿ ಕಾರ್ಯನಿರ್ವಹಿಸುತ್ತದೆ.
ಇದರ ಜತೆಗೆ, ಬಸ್ತಾರ್ ಮತ್ತು ನಾರಾಯಣಪುರ ಜಿಲ್ಲೆಗಳಾದ್ಯಂತ ಬಹು ವಿಭಾಗಗಳನ್ನು ವ್ಯಾಪಿಸಿರುವ ರಾಷ್ಟ್ರೀಯ ಹೆದ್ದಾರಿ -130 ಡಿ (ನಾರಾಯಣಪುರ-ಕಸ್ತೂರ್ಮೆಟಾ-ಕುತುಲ್-ನಿಲಂಗೂರ್-ಮಹಾರಾಷ್ಟ್ರ ಗಡಿ) ನಿರ್ಮಾಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ 130 ಸಿ (ಮದಂಗ್ಮುಡಾ-ದೇವ್ಭೋಗ್-ಒಡಿಶಾ ಗಡಿ) ಮೇಲ್ದರ್ಜೆಗೇರಿಸುವ ದ್ವಿಪಥ ಹೆದ್ದಾರಿಯನ್ನು ಸುಸಜ್ಜಿತ ಹೆದ್ದಾರಿಯನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಇವು ಬುಡಕಟ್ಟು ಮತ್ತು ಒಳನಾಡು ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಾರುಕಟ್ಟೆಗಳ ಲಭ್ಯತೆಯನ್ನು ಸುಧಾರಿಸುತ್ತವೆ ಮತ್ತು ದೂರದ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ.
ವಿದ್ಯುತ್ ವಲಯದಲ್ಲಿ, ಪ್ರಧಾನಮಂತ್ರಿ ಅವರು ಅಂತರ-ಪ್ರಾದೇಶಿಕ ಇಆರ್-ಡಬ್ಲ್ಯುಆರ್ ಇಂಟರ್ ಕನೆಕ್ಷನ್ ಯೋಜನೆಯನ್ನು ಉದ್ಘಾಟಿಸಿದರು, ಇದು ಪೂರ್ವ ಮತ್ತು ಪಶ್ಚಿಮ ಗ್ರಿಡ್ ಗಳ ನಡುವೆ ಅಂತರ-ಪ್ರಾದೇಶಿಕ ವಿದ್ಯುತ್ ವರ್ಗಾವಣೆ ಸಾಮರ್ಥ್ಯವನ್ನು 1,600 ಮೆಗಾವ್ಯಾಟ್ ಹೆಚ್ಚಿಸುತ್ತದೆ, ಗ್ರಿಡ್ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ ಮತ್ತು ಪ್ರದೇಶದಾದ್ಯಂತ ಸ್ಥಿರವಾದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ.
ಇದರೊಂದಿಗೆ, ಛತ್ತೀಸ್ ಗಢದ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ, ಪೂರೈಕೆ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಮತ್ತು ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ 3,750 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಇಂಧನ ವಲಯದ ಯೋಜನೆಗಳ ಲೋಕಾರ್ಪಣೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ಅಡಿಯಲ್ಲಿ, ಹೊಸ ವಿದ್ಯುತ್ ಮಾರ್ಗಗಳ ನಿರ್ಮಾಣ, ಫೀಡರ್ ವಿಭಜನೆ, ಟ್ರಾನ್ಸ್ ಫಾರ್ಮರ್ ಗಳ ಅಳವಡಿಕೆ, ಕಂಡಕ್ಟರ್ ಗಳ ಪರಿವರ್ತನೆ ಮತ್ತು ಗ್ರಾಮೀಣ ಮತ್ತು ಕೃಷಿ ವಿದ್ಯುತ್ ಪೂರೈಕೆಯನ್ನು ಸುಧಾರಿಸಲು ಕಡಿಮೆ ಒತ್ತಡದ ಜಾಲಗಳನ್ನು ಬಲಪಡಿಸುವುದು ಸೇರಿದಂತೆ ಸುಮಾರು 1,860 ಕೋಟಿ ರೂ.ಗಳ ಕಾಮಗಾರಿಗಳನ್ನು ಪ್ರಧಾನಿ ಸಮರ್ಪಿಸಲಿದ್ದಾರೆ. ರಾಯ್ ಪುರ, ಬಿಲಾಸ್ಪುರ, ದುರ್ಗ್, ಬೆಮೆತಾರಾ, ಗರಿಯಾಬಂದ್ ಮತ್ತು ಬಸ್ತಾರ್ ನಂತಹ ಜಿಲ್ಲೆಗಳಲ್ಲಿ ಸುಮಾರು 480 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಒಂಬತ್ತು ಹೊಸ ವಿದ್ಯುತ್ ಉಪಕೇಂದ್ರಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಸ್ಥಿರವಾದ ವೋಲ್ಟೇಜ್ ಅನ್ನು ಖಾತ್ರಿಪಡಿಸುವ ಮೂಲಕ, ನಿಲುಗಡೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ದೂರದ ಮತ್ತು ಬುಡಕಟ್ಟು ಪ್ರದೇಶಗಳಲ್ಲಿಯೂ ವಿಶ್ವಾಸಾರ್ಹ ವಿದ್ಯುತ್ ಒದಗಿಸುವ ಮೂಲಕ 15 ಲಕ್ಷಕ್ಕೂ ಹೆಚ್ಚು ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಕಂಕೇರ್ ಮತ್ತು ಬಲೋದಬಜಾರ್-ಭಾಟಪಾರಾದಲ್ಲಿ ಪ್ರಮುಖ ಸೌಲಭ್ಯಗಳು ಸೇರಿದಂತೆ 1,415 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೊಸ ಉಪಕೇಂದ್ರಗಳು ಮತ್ತು ಪ್ರಸರಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು, ಜೊತೆಗೆ ರಾಜ್ಯದಲ್ಲಿ ವಿದ್ಯುತ್ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಮತ್ತಷ್ಟು ವಿಸ್ತರಿಸಲು ಹಲವಾರು ಜಿಲ್ಲೆಗಳಲ್ಲಿ ಹೊಸ ಆರ್ಡಿಎಸ್ಎಸ್ ಕಾಮಗಾರಿಗಳು ಸೇರಿವೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಗಾಗಿ 54,000 ಕಿಲೋಲೀಟರ್ (ಕೆಎಲ್) ಶೇಖರಣಾ ಸಾಮರ್ಥ್ಯದೊಂದಿಗೆ 460 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎಚ್ ಪಿ ಎಲ್ ನ ಅತ್ಯಾಧುನಿಕ ಪೆಟ್ರೋಲಿಯಂ ತೈಲ ಡಿಪೋವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಸೌಲಭ್ಯವು ಪ್ರಮುಖ ಇಂಧನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಛತ್ತೀಸ್ ಗಢ ಮತ್ತು ನೆರೆಯ ರಾಜ್ಯಗಳಾದ್ಯಂತ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ. 10,000 ಕೆಎಲ್ ಎಥೆನಾಲ್ ಸಂಗ್ರಹಣೆಯೊಂದಿಗೆ, ಡಿಪೋ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಸಹ ಬೆಂಬಲಿಸುತ್ತದೆ, ಪಳೆಯುಳಿಕೆ ಇಂಧನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಶುದ್ಧ ಇಂಧನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸುಮಾರು 1,950 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 489 ಕಿ.ಮೀ ಉದ್ದದ ನಾಗ್ಪುರ-ಜಾರ್ಸುಗುಡ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಮಂತ್ರಿ ಅವರು ಲೋಕಾರ್ಪಣೆ ಮಾಡಿದರು. ಈ ಯೋಜನೆಯು ಭಾರತದ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಶೇ.15ಕ್ಕೆ ಹೆಚ್ಚಿಸುವ ಮತ್ತು "ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್" ದೃಷ್ಟಿಕೋನವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಪೈಪ್ ಲೈನ್ ಛತ್ತೀಸ್ ಗಢದ 11 ಜಿಲ್ಲೆಗಳನ್ನು ರಾಷ್ಟ್ರೀಯ ಅನಿಲ ಗ್ರಿಡ್ ಗೆ ಸಂಪರ್ಕಿಸುತ್ತದೆ, ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಈ ಪ್ರದೇಶಕ್ಕೆ ಶುದ್ಧ ಮತ್ತು ಕೈಗೆಟುಕುವ ಇಂಧನವನ್ನು ಒದಗಿಸುತ್ತದೆ.
ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗವನ್ನು ಉತ್ತೇಜಿಸಲು, ಪ್ರಧಾನಮಂತ್ರಿ ಅವರು ಎರಡು ಸ್ಮಾರ್ಟ್ ಕೈಗಾರಿಕಾ ಪ್ರದೇಶಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಒಂದು ಜಂಜ್ ಗಿರ್-ಚಂಪಾ ಜಿಲ್ಲೆಯ ಸಿಲಡೆಹಿ-ಗಟ್ವಾ-ಬಿರ್ರಾದಲ್ಲಿ ಮತ್ತು ಇನ್ನೊಂದು ರಾಜನಂದಗಾಂವ್ ಜಿಲ್ಲೆಯ ಬಿಜ್ಲೆಟಾಲಾದಲ್ಲಿ. ಹೆಚ್ಚುವರಿಯಾಗಿ, ಪ್ರಧಾನಮಂತ್ರಿ ಅವರು ಅಟಲ್ ನಗರದ ನವ ರಾಯ್ ಪುರದ ಸೆಕ್ಟರ್ -22 ರಲ್ಲಿ ಔಷಧೀಯ ಪಾರ್ಕ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಪಾರ್ಕ್ ಔಷಧ ಮತ್ತು ಆರೋಗ್ಯ ಉತ್ಪಾದನೆಗೆ ಮೀಸಲಾದ ವಲಯವಾಗಿ ಕಾರ್ಯನಿರ್ವಹಿಸುತ್ತದೆ.
ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಐದು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಮಾನೇಂದ್ರಗಢ, ಕಬೀರ್ ಧಾಮ್, ಜಂಜ್ ಗಿರ್-ಚಂಪಾ ಮತ್ತು ಗೀಡಮ್ (ದಾಂತೇವಾಡ), ಬಿಲಾಸ್ಪುರದ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ವೈದ್ಯಕೀಯ ಶಿಕ್ಷಣವನ್ನು ಬಲಪಡಿಸುತ್ತವೆ, ಆರೋಗ್ಯ ಲಭ್ಯತೆಯನ್ನು ವಿಸ್ತರಿಸುತ್ತವೆ ಮತ್ತು ಛತ್ತೀಸ್ ಗಢದಾದ್ಯಂತ ಸಾಂಪ್ರದಾಯಿಕ ವೈದ್ಯವನ್ನು ಉತ್ತೇಜಿಸುತ್ತವೆ.
*****
(Release ID: 2185316)
Visitor Counter : 8
Read this release in:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam