ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಭಾರತದ ಬೆಳವಣಿಗೆಯು ಇಂಧನ ಮತ್ತು ಕಡಲ ಸಾಮರ್ಥ್ಯದೊಂದಿಗೆ ಬೆಸೆದುಕೊಂಡಿದೆ: ಶ್ರೀ ಹರ್ ದೀಪ್ ಸಿಂಗ್ ಪುರಿ

Posted On: 29 OCT 2025 2:06PM by PIB Bengaluru

'ಭಾರತ ಸಾಗರ ಸಪ್ತಾಹ 2025'ರ (India Maritime Week 2025) ಅಂಗವಾಗಿ ಮುಂಬೈನಲ್ಲಿ ನಡೆದ 'ಭಾರತದ ಸಾಗರ ಉತ್ಪಾದನಾ ವಲಯದ ಪುನಶ್ಚೇತನ' (Revitalizing India’s Maritime Manufacturing) ಸಮ್ಮೇಳನವನ್ನು ಉದ್ದೇಶಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಮಾತನಾಡಿದರು. ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆಯು ತನ್ನ ಇಂಧನ ಮತ್ತು ಹಡಗುಯಾನ (ಶಿಪ್ಪಿಂಗ್) ವಲಯಗಳ ಪ್ರಗತಿಯೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದ ಅವರು, ಈ ಎರಡೂ ವಲಯಗಳು ರಾಷ್ಟ್ರೀಯ ಅಭಿವೃದ್ಧಿಯ ಬಲವಾದ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದು, ಜಿಡಿಪಿ ಈಗ ಸುಮಾರು 4.3 ಟ್ರಿಲಿಯನ್ ಡಾಲರ್ ಗಳಷ್ಟಿದೆ ಎಂದು ಸಚಿವರು ಹೇಳಿದರು. ಇದರಲ್ಲಿ ಸುಮಾರು ಅರ್ಧದಷ್ಟು ಭಾಗವು ರಫ್ತು, ಆಮದು ಮತ್ತು ವಿದೇಶಿ ಹಣ ರವಾನೆಗಳನ್ನು ಒಳಗೊಂಡಿರುವ ಬಾಹ್ಯ ವಲಯದಿಂದ ಬರುತ್ತದೆ. ಇದು ಭಾರತದ ಆರ್ಥಿಕ ಪ್ರಗತಿಗೆ ವ್ಯಾಪಾರ ಮತ್ತು ಆ ಮೂಲಕ ಶಿಪ್ಪಿಂಗ್ ಎಷ್ಟು ಮುಖ್ಯವಾಗಿದೆ ಎಂಬುದನ್ನು ತೋರಿಸುತ್ತದೆ.

ಇಂಧನ ವಲಯದ ಬಗ್ಗೆ ಮಾತನಾಡಿದ ಶ್ರೀ ಪುರಿ ಅವರು, ನಾಲ್ಕೂವರೆ ವರ್ಷಗಳ ಹಿಂದೆ ದಿನಕ್ಕೆ 5 ಮಿಲಿಯನ್ ಬ್ಯಾರೆಲ್ ಗಳಷ್ಟಿದ್ದ ಭಾರತದ ಕಚ್ಚಾ ತೈಲ ಬಳಕೆ ಇದೀಗ ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು. ಪ್ರಸ್ತುತ ಬೆಳವಣಿಗೆಯ ದರದಲ್ಲಿ, ದೇಶವು ಶೀಘ್ರದಲ್ಲೇ ದಿನಕ್ಕೆ 6 ಮಿಲಿಯನ್ ಬ್ಯಾರೆಲ್ ಗಳ ಬಳಕೆಯನ್ನು ತಲುಪಲಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (International Energy Agency) ಪ್ರಕಾರ, ಮುಂಬರುವ ಎರಡು ದಶಕಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಏರಿಕೆಯಲ್ಲಿ ಭಾರತವು ಸುಮಾರು ಶೇಕಡ 30ರಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ಹಂಚಿಕೊಂಡರು. ಇದು ಹಿಂದಿನ ಅಂದಾಜಿನ ಪ್ರಕಾರ ಶೇ. 25 ರಷ್ಟು ಹೆಚ್ಚಾಗಿದೆ. ಈ ಹೆಚ್ಚುತ್ತಿರುವ ಇಂಧನ ಅವಶ್ಯಕತೆಯು, ತೈಲ, ಅನಿಲ ಮತ್ತು ಇತರ ಇಂಧನ ಉತ್ಪನ್ನಗಳನ್ನು ಪ್ರಪಂಚದಾದ್ಯಂತ ಸಾಗಿಸಲು ಭಾರತಕ್ಕೆ ಹಡಗುಗಳ ಅಗತ್ಯವನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

2024-25ರ ಅವಧಿಯಲ್ಲಿ ಭಾರತವು ಸುಮಾರು 300 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಮತ್ತು ಸುಮಾರು 65 ಮಿಲಿಯನ್ ಮೆಟ್ರಿಕ್ ಟನ್ಗಳನ್ನು ರಫ್ತು ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು. ಭಾರತದ ಒಟ್ಟು ವ್ಯಾಪಾರದ ಪ್ರಮಾಣದಲ್ಲಿ ತೈಲ ಮತ್ತು ಅನಿಲ ವಲಯವೊಂದೇ ಸುಮಾರು ಶೇಕಡ 28ರಷ್ಟು ಪಾಲನ್ನು ಹೊಂದಿದೆ. ಇದು ಬಂದರುಗಳಿಂದ ನಿರ್ವಹಿಸಲ್ಪಡುವ ಅತಿದೊಡ್ಡ ಏಕೈಕ ಸರಕು ಆಗಿದೆ. ಭಾರತವು ಪ್ರಸ್ತುತ ತನ್ನ ಕಚ್ಚಾ ತೈಲದ ಅಗತ್ಯದ ಸುಮಾರು ಶೇಕಡ 88ರಷ್ಟನ್ನು ಮತ್ತು ಅನಿಲದ ಅಗತ್ಯದ ಶೇಕಡ 51ರಷ್ಟನ್ನು ಆಮದಿನ ಮೂಲಕ ಪೂರೈಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಇದು ದೇಶದ ಇಂಧನ ಭದ್ರತೆಗೆ ಹಡಗುಯಾನ ಉದ್ಯಮವು ಎಷ್ಟು ಮುಖ್ಯವಾಗಿದೆ ಎಂಬುದನ್ನು ತೋರಿಸುತ್ತದೆ.

ಒಟ್ಟು ಆಮದು ವೆಚ್ಚದಲ್ಲಿ ಸರಕು ಸಾಗಣೆ ವೆಚ್ಚವು ಗಮನಾರ್ಹ ಪಾಲು ಹೊಂದಿದೆ ಎಂದು ಅವರು ವಿವರಿಸಿದರು. ತೈಲ ಮಾರುಕಟ್ಟೆ ಕಂಪನಿಗಳು (OMCs) ಯುನೈಟೆಡ್ ಸ್ಟೇಟ್ಸ್ ನಿಂದ ಕಚ್ಚಾ ತೈಲವನ್ನು ಸಾಗಿಸಲು ಪ್ರತಿ ಬ್ಯಾರೆಲ್ಗೆ ಸುಮಾರು 5 ಡಾಲರ್ ಗಳನ್ನು ಮತ್ತು ಮಧ್ಯಪ್ರಾಚ್ಯದಿಂದ ಸಾಗಿಸಲು ಸುಮಾರು 1.2 ಡಾಲರ್ಗಳನ್ನು ಪಾವತಿಸುತ್ತವೆ. ಕಳೆದ ಐದು ವರ್ಷಗಳಲ್ಲಿ, IOCL, BPCL, ಮತ್ತು HPCL ನಂತಹ ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಹಡಗುಗಳನ್ನು ಬಾಡಿಗೆಗೆ ಪಡೆಯಲು ಸುಮಾರು 8 ಬಿಲಿಯನ್ ಡಾಲರ್ಗಳನ್ನು ಖರ್ಚು ಮಾಡಿವೆ. ಈ ಮೊತ್ತದಲ್ಲಿ ಭಾರತೀಯ ಮಾಲೀಕತ್ವದ ಟ್ಯಾಂಕರ್ ಗಳ ಹೊಸ ಪಡೆಯನ್ನೇ ನಿರ್ಮಿಸಬಹುದಿತ್ತು.

ಭಾರತದ ವ್ಯಾಪಾರ ಸರಕಿನ ಪೈಕಿ ಕೇವಲ ಶೇಕಡ 20ರಷ್ಟು ಮಾತ್ರ ಭಾರತದ ಧ್ವಜ ಹೊತ್ತ ಅಥವಾ ಭಾರತೀಯ ಮಾಲೀಕತ್ವದ ಹಡಗುಗಳಲ್ಲಿ ಸಾಗಿಸಲ್ಪಡುತ್ತಿದೆ ಎಂದು ಶ್ರೀ ಪುರಿ ಅವರು ಹೇಳಿದರು. ಇದು ಭಾರತಕ್ಕೆ ತನ್ನ ಹಡಗು ಮಾಲೀಕತ್ವ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಒಂದು ಸವಾಲು ಮತ್ತು ಅವಕಾಶ ಎರಡನ್ನೂ ಒಡ್ಡಿದೆ ಎಂದು ಅವರು ಹೇಳಿದರು. ಭಾರತೀಯ ಹಡಗು ಕಂಪನಿಗಳಿಗೆ ದೀರ್ಘಾವಧಿಯ ಬಾಡಿಗೆ ನೀಡಲು ಸಾರ್ವಜನಿಕ ವಲಯದ ಉದ್ದಿಮೆಗಳ ಸರಕು ಬೇಡಿಕೆಯನ್ನು ಒಟ್ಟುಗೂಡಿಸುವುದು, 'ಹಡಗು ಮಾಲೀಕತ್ವ ಮತ್ತು ಗುತ್ತಿಗೆ' (Ship Owning and Leasing) ಮಾದರಿಯನ್ನು ಮುಂದುವರಿಸುವುದು, ಹಡಗುಗಳ ಖರೀದಿಗೆ ಕೈಗೆಟುಕುವ ಹಣಕಾಸು ನೆರವಿಗಾಗಿ 'ಕಡಲ ಅಭಿವೃದ್ಧಿ ನಿಧಿ' (Maritime Development Fund) ಸ್ಥಾಪಿಸುವುದು, ಹಾಗೂ ಎಲ್ ಎನ್ ಜಿ (LNG), ಈಥೇನ್ ಮತ್ತು ಉತ್ಪನ್ನ ಟ್ಯಾಂಕರ್ ಗಳಿಗೆ ಹೆಚ್ಚಿನ ಬೆಂಬಲ ನೀಡುವ 'ಹಡಗು ನಿರ್ಮಾಣ ಹಣಕಾಸು ನೆರವು ನೀತಿ 2.0' (Shipbuilding Financial Assistance Policy 2.0) ಅನ್ನು ಜಾರಿಗೆ ತರುವಂತಹ ಕ್ರಮಗಳ ಮೇಲೆ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತದ ಕಡಲ ವಲಯವು ಕಳೆದ ಹನ್ನೊಂದು ವರ್ಷಗಳಲ್ಲಿ ದೊಡ್ಡ ಬದಲಾವಣೆಗಳನ್ನು ಕಂಡಿದೆ ಎಂದು ಸಚಿವರು ಹೇಳಿದರು. 2014ರಲ್ಲಿ ವಾರ್ಷಿಕ 872 ಮಿಲಿಯನ್ ಮೆಟ್ರಿಕ್ ಟನ್ ಇದ್ದ ಬಂದರು ಸಾಮರ್ಥ್ಯ ಇಂದು 1,681 ಮಿಲಿಯನ್ ಮೆಟ್ರಿಕ್ ಟನ್ ಗಳಿಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಸರಕು ನಿರ್ವಹಣಾ ಪ್ರಮಾಣವು 581 ಮಿಲಿಯನ್ ಟನ್ ಗಳಿಂದ ಸುಮಾರು 855 ಮಿಲಿಯನ್ ಟನ್ ಗಳಿಗೆ ಹೆಚ್ಚಾಗಿದೆ. ಹಡಗು ನಿಲುಗಡೆ ಸಮಯ ಶೇ. 48 ರಷ್ಟು ಮತ್ತು ಹಡಗಿನ ನಿಷ್ಕ್ರಿಯ ಸಮಯ (idle time) ಶೇ. 29 ರಷ್ಟು ಕಡಿಮೆಯಾಗುವುದರೊಂದಿಗೆ ದಕ್ಷತೆಯೂ ಸುಧಾರಿಸಿದೆ ಎಂದು ಅವರು ಹೇಳಿದರು. 'ಸಾಗರಮಾಲಾ' ಕಾರ್ಯಕ್ರಮವು ಬಂದರುಗಳನ್ನು ಆಧುನೀಕರಿಸಲು ಮತ್ತು ಕರಾವಳಿ ಪ್ರದೇಶಗಳನ್ನು ಸಂಪರ್ಕಿಸಲು ಈಗಾಗಲೇ 5.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಸಜ್ಜುಗೊಳಿಸಿದೆ.

ಕೊಚ್ಚಿನ್ ಶಿಪ್ ಯಾರ್ಡ್, ಮಝಗಾನ್ ಡಾಕ್, ಜಿ ಆರ್ ಎಸ್ ಇ ಕೋಲ್ಕತ್ತಾ, ಎಚ್ ಎಸ್ ಎಲ್ ವಿಶಾಖಪಟ್ಟಣಂ ಮತ್ತು ಗೋವಾ ಹಾಗೂ ಗುಜರಾತ್ನಲ್ಲಿರುವ ಖಾಸಗಿ ಯಾರ್ಡ್ಗಳಂತಹ ಭಾರತದ ಹಡಗುಕಟ್ಟೆಗಳು ಈಗ ವಿಶ್ವ ದರ್ಜೆಯ ಹಡಗುಗಳನ್ನು ನಿರ್ಮಿಸುತ್ತಿವೆ ಎಂದು ಅವರು ಹೇಳಿದರು. ಎಲ್ ಎನ್ ಜಿ (LNG) ಮತ್ತು ಈಥೇನ್ ವಾಹಕಗಳಿಗಾಗಿ ಕೊಚ್ಚಿನ್ ಶಿಪ್ ಯಾರ್ಡ್ನ ಎಲ್&ಟಿ ಮತ್ತು ಡೇವೂ ಜೊತೆಗಿನ ಪಾಲುದಾರಿಕೆ ಹಾಗೂ ಮಿಟ್ಸುಯಿ ಒ ಎಸ್ ಕೆ ಲೈನ್ಸ್ (Mitsui OSK Lines) ಜೊತೆಗಿನ ಸಹಯೋಗಗಳು, ಜಾಗತಿಕ ತಂತ್ರಜ್ಞಾನವನ್ನು ಭಾರತೀಯ ಹಡಗುಕಟ್ಟೆಗಳಿಗೆ ತರಲು ಸಹಾಯ ಮಾಡುತ್ತಿವೆ.

ಹಡಗು ನಿರ್ಮಾಣ ಉದ್ಯಮಕ್ಕೆ ದೀರ್ಘಾವಧಿಯ ಯೋಜನೆ ಮತ್ತು ಸ್ಥಿರವಾದ ಆರ್ಡರ್ ಗಳು (ಬೇಡಿಕೆಗಳು) ಬೇಕಾಗುತ್ತವೆ, ಆಗ ಮಾತ್ರ ಮೂಲಸೌಕರ್ಯ ಮತ್ತು ನುರಿತ ಮಾನವಶಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸಚಿವರು ಹೇಳಿದರು. ಅನೇಕ ಜಾಗತಿಕ ಹಡಗುಕಟ್ಟೆಗಳು ಮುಂದಿನ ಆರು ವರ್ಷಗಳವರೆಗೆ ಈಗಾಗಲೇ ಬುಕ್ ಆಗಿರುವುದರಿಂದ, ಅವರು ಭಾರತದಲ್ಲೇ ಹೂಡಿಕೆ ಮಾಡಲು ಮತ್ತು ಹಡಗುಗಳನ್ನು ನಿರ್ಮಿಸಲು ಭಾರತವು ಪ್ರೋತ್ಸಾಹಿಸಬೇಕು.

ಮುಂದಿನ ದಿನಗಳ ಬಗ್ಗೆ ಮಾತನಾಡಿದ ಅವರು, ಕಡಲ ವಲಯವು 2047ರ ವೇಳೆಗೆ ಸುಮಾರು 8 ಟ್ರಿಲಿಯನ್ ರೂಪಾಯಿ ಹೂಡಿಕೆಯನ್ನು ಆಕರ್ಷಿಸುವ ಮತ್ತು ಸುಮಾರು 1.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನಂತಹ ಉಪಕ್ರಮಗಳ ಮೂಲಕ ಭಾರತೀಯ ಬಂದರುಗಳನ್ನು ಯುರೋಪ್, ಮಧ್ಯ ಏಷ್ಯಾ ಮತ್ತು ಆಫ್ರಿಕಾದೊಂದಿಗೆ ಸಂಪರ್ಕಿಸಿ, ಜಾಗತಿಕ ವ್ಯಾಪಾರ ಮಾರ್ಗಗಳನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಶ್ರೀ ಪುರಿ ಅವರು, ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ ಭಾರತವು ತನ್ನ ಸಾಗರಗಳನ್ನು ಅಡೆತಡೆಗಳೆಂದು ಪರಿಗಣಿಸದೆ, ಬೆಳವಣಿಗೆ ಮತ್ತು ಸಮೃದ್ಧಿಯ ಹೆದ್ದಾರಿಗಳಾಗಿ ನೋಡುತ್ತಿದೆ ಎಂದು ಹೇಳಿದರು. ದೇಶವು ಬಂದರುಗಳನ್ನು ಆಧುನೀಕರಿಸುತ್ತಿದೆ, ಹೆಚ್ಚಿನ ಹಡಗುಗಳನ್ನು ನಿರ್ಮಿಸುತ್ತಿದೆ, ಹಸಿರು ಹಡಗುಯಾನವನ್ನು ಉತ್ತೇಜಿಸುತ್ತಿದೆ ಮತ್ತು ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಪ್ರಬಲ ಚಾಲಕಶಕ್ತಿಯಾಗಿ ಕಡಲ ವಲಯವನ್ನು ರೂಪಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಅವರು ಹೇಳಿದರು.

 

*****


(Release ID: 2183737) Visitor Counter : 12