ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೃಷಿ ಕ್ಷೇತ್ರದಲ್ಲಿ ₹35,440 ಕೋಟಿ ಮೌಲ್ಯದ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಿದರು


ದೇಶಾದ್ಯಂತದ ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳು ಮಾದರಿಯಾಗಬಹುದು: ಪ್ರಧಾನಮಂತ್ರಿ

ದ್ವಿದಳ ಧಾನ್ಯಗಳ ಕೃಷಿ ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ ದೇಶದ ಪೌಷ್ಟಿಕಾಂಶ ಭದ್ರತೆಗೆ ಕೊಡುಗೆ ನೀಡುತ್ತದೆ: ಪ್ರಧಾನಮಂತ್ರಿ

ನೀರಿನ ಕೊರತೆ ಇರುವಲ್ಲಿ, ರಾಗಿಗಳು ಜೀವನಾಡಿಯಾಗಿದ್ದು, ರಾಗಿಗಳಿಗೆ ಜಾಗತಿಕ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ: ಪ್ರಧಾನಮಂತ್ರಿ

ಉತ್ಪಾದನೆಯನ್ನು ಹೆಚ್ಚಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆಯಲು ಹೆಚ್ಚು ಮೌಲ್ಯದ ಬೆಳೆಗಳ ಆಯ್ಕೆಯ ಮೇಲೆ ಗಮನಹರಿಸುವ ಗುಂಪು ಕೃಷಿಯ ಕಲ್ಪನೆಯನ್ನು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು.

Posted On: 12 OCT 2025 6:30PM by PIB Bengaluru

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮವು ರೈತರ ಕಲ್ಯಾಣ, ಕೃಷಿಯಲ್ಲಿ ಸ್ವಾವಲಂಬನೆ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರಿಗಿರುವ ನಿರಂತರ ಬದ್ಧತೆಯನ್ನು ಸಾರುತ್ತದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ನಂತರ ಕೃಷಿ ವಲಯಕ್ಕಾಗಿ ₹35,440 ಕೋಟಿ ವೆಚ್ಚದ ಎರಡು ಬೃಹತ್ ಯೋಜನೆಗಳಿಗೆ ಚಾಲನೆ ನೀಡಿದರು. ಅವರು ₹24,000 ಕೋಟಿ ವೆಚ್ಚದ 'ಪಿ.ಎಂ. ಧನ ಧಾನ್ಯ ಕೃಷಿ ಯೋಜನೆ' ಹಾಗೂ ₹11,440 ಕೋಟಿ ವೆಚ್ಚದ 'ಬೇಳೆಕಾಳುಗಳಲ್ಲಿ ಆತ್ಮನಿರ್ಭರತೆ ಮಿಷನ್' ಅನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯಗಳಿಗೆ ಸಂಬಂಧಿಸಿದ ₹5,450 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಜೊತೆಗೆ, ಸುಮಾರು ₹815 ಕೋಟಿ ಮೌಲ್ಯದ ಹೆಚ್ಚುವರಿ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.

ಹರಿಯಾಣದ ಹಿಸಾರ್ ಜಿಲ್ಲೆಯ ರೈತರೊಬ್ಬರು, ಕಾಬೂಲಿ ಕಡಲೆ (ಚಿಕ್‌ಪೀಸ್) ಕೃಷಿಯ ಮೂಲಕ ತಮ್ಮ ಕೃಷಿ ಪಯಣವನ್ನು ಆರಂಭಿಸಿದ್ದು, ತಮ್ಮ ಅನುಭವ ಮತ್ತು ಒಳನೋಟಗಳನ್ನು ಪ್ರಧಾನಮಂತ್ರಿ ಅವರೊಂದಿಗೆ ಹಂಚಿಕೊಂಡರು. ತಾವು ನಾಲ್ಕು ವರ್ಷಗಳ ಹಿಂದೆ ಕಾಬೂಲಿ ಕಡಲೆ ಬೆಳೆಯಲು ಪ್ರಾರಂಭಿಸಿದ್ದು, ಪ್ರಸ್ತುತ ಪ್ರತಿ ಎಕರೆಗೆ ಸುಮಾರು 10 ಕ್ವಿಂಟಾಲ್ ಇಳುವರಿ ಪಡೆಯುತ್ತಿರುವುದಾಗಿ ಆ ರೈತರು ತಿಳಿಸಿದರು. ಈ ವೇಳೆ ಪ್ರಧಾನಮಂತ್ರಿ ಅವರು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಹೆಚ್ಚುವರಿ ಆದಾಯ ಗಳಿಸಲು ಅನುಕೂಲವಾಗುವಂತೆ, ದ್ವಿದಳ ಧಾನ್ಯದ ಬೆಳೆಗಳನ್ನು ಅಂತರ-ಬೆಳೆಯಾಗಿ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲಾಗಿದೆಯೇ ಎಂದು ವಿಚಾರಿಸಿದರು.

ಇದಕ್ಕೆ ಉತ್ತರಿಸಿದ ರೈತರು, ಅಂತಹ ಬೆಳೆಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂದು ಸಮರ್ಥಿಸಿಕೊಂಡರು. ಕಡಲೆಯಂತಹ ಬೇಳೆಕಾಳುಗಳನ್ನು ಬೆಳೆಯುವುದರಿಂದ ಉತ್ತಮ ಫಸಲು ಸಿಗುವುದಲ್ಲದೆ, ಮಣ್ಣಿಗೆ ಸಾರಜನಕವನ್ನು ಸೇರಿಸಿ ಮಣ್ಣನ್ನು ಸಮೃದ್ಧಗೊಳಿಸುತ್ತದೆ, ಇದರಿಂದಾಗಿ ನಂತರದ ಬೆಳೆಗಳ ಇಳುವರಿಯೂ ಸುಧಾರಿಸುತ್ತದೆ ಎಂದು ವಿವರಿಸಿದರು. ಮಣ್ಣಿನ ಆರೋಗ್ಯವನ್ನು ಪುನಶ್ಚೇತನಗೊಳಿಸಲು ಮತ್ತು ಕಾಪಾಡಿಕೊಳ್ಳಲು ಈ ಸುಸ್ಥಿರ ಪದ್ಧತಿಯನ್ನು ಸಹ ರೈತರಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವರು ಈ ಪ್ರಯತ್ನ ಮತ್ತು ದೂರದೃಷ್ಟಿಯನ್ನು ಶ್ಲಾಘಿಸಿ, ಈ ಪದ್ಧತಿಗಳು ದೇಶದ ಇತರ ರೈತರಿಗೆ ಮಾದರಿಯಾಗಬಲ್ಲವು ಎಂದು ಹೇಳಿದರು. ಕೃತಜ್ಞತೆ ಸಲ್ಲಿಸಿದ ರೈತರು, "ನನ್ನ ಜೀವನದಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಇದೇ ಮೊದಲು. ಅವರು ನಿಜವಾಗಿಯೂ ಒಬ್ಬ ಉತ್ತಮ ನಾಯಕ, ರೈತರು ಮತ್ತು ಸಾಮಾನ್ಯ ನಾಗರಿಕರೊಂದಿಗೆ ಒಂದೇ ರೀತಿ ಬೆರೆಯುತ್ತಾರೆ," ಎಂದು ಹೇಳಿದರು.

ತಾವು 'ಕಿಸಾನ್ ಪದಕ ಸಂಸ್ಥಾನ'ದೊಂದಿಗೆ (Kisan Padak Sansthan) ಗುರುತಿಸಿಕೊಂಡಿದ್ದು, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೂ, ಸಕ್ರಿಯವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಆ ರೈತರು ತಿಳಿಸಿದರು. ತಮ್ಮ ಕುಟುಂಬದ 16 ಬಿಘಾ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುವುದನ್ನು ಮುಂದುವರಿಸಿರುವ ಅವರು, ತಮ್ಮ ಗ್ರಾಮದಲ್ಲಿ 20 ಮಹಿಳೆಯರ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಗುಂಪುಗಳು ಕಡಲೆ ಆಧಾರಿತ ಉತ್ಪನ್ನಗಳು, ಬೆಳ್ಳುಳ್ಳಿ ಹಾಗೂ ಸಾಂಪ್ರದಾಯಿಕ ಹಪ್ಪಳಗಳಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಆ ಮೂಲಕ ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಉದ್ಯಮಶೀಲತೆಗೆ ತಮ್ಮ ಕೊಡುಗೆ ನೀಡುತ್ತಿವೆ. "ಸರ್, ನಮ್ಮ ಹಳ್ಳಿಯ ಹೆಸರಿನಲ್ಲೇ 'ಡುಗರಿ ವಾಲೆ' ಎಂಬ ಬ್ರ್ಯಾಂಡ್ ಅನ್ನು ಸ್ಥಾಪಿಸಿದ್ದೇವೆ. ನಾವು 'ಡುಗರಿ ವಾಲೆ' ಕಡಲೆ, ಬೆಳ್ಳುಳ್ಳಿ ಮತ್ತು ಹಪ್ಪಳವನ್ನು ಮಾರಾಟ ಮಾಡುತ್ತೇವೆ. ನಾವು GeM ಪೋರ್ಟಲ್‌ ನಲ್ಲಿಯೂ ನೋಂದಾಯಿಸಿಕೊಂಡಿದ್ದೇವೆ. ಸೇನಾ ಸಿಬ್ಬಂದಿ ಅಲ್ಲಿಂದ ನಮ್ಮ ಉತ್ಪನ್ನಗಳನ್ನು ಖರೀದಿಸುತ್ತಾರೆ,” ಎಂದು ಆ ರೈತರು ವಿವರಿಸಿದರು. ಅವರು ಮುಂದುವರಿಸಿ, "ನಮ್ಮ ಉತ್ಪನ್ನಗಳು ಕೇವಲ ರಾಜಸ್ಥಾನಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭಾರತದಾದ್ಯಂತ ಜನಪ್ರಿಯತೆ ಗಳಿಸುತ್ತಿದ್ದು, ವಿವಿಧ ಪ್ರದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ" ಎಂದು ಮಾಹಿತಿ ನೀಡಿದರು.

ಸಂವಾದದ ಸಮಯದಲ್ಲಿ, ಹರಿಯಾಣದ ಹಿಸಾರ್ ಜಿಲ್ಲೆಯ ಮತ್ತೊಬ್ಬ ರೈತರು 2013-14ರಿಂದ ಕಾಬೂಲಿ ಕಡಲೆ (ಚಿಕ್ಕಪೀಸ್) ಬೆಳೆಯುತ್ತಿರುವ ತಮ್ಮ ಪಯಣವನ್ನು ಹಂಚಿಕೊಂಡರು. ಕೇವಲ ಒಂದು ಎಕರೆಯಿಂದ ಪ್ರಾರಂಭಿಸಿ, ಅವರು ವರ್ಷಗಳಲ್ಲಿ 13-14 ಎಕರೆಗೆ ವಿಸ್ತರಿಸಿದ್ದು, ತಮ್ಮ ಯಶಸ್ಸಿಗೆ ಗುಣಮಟ್ಟದ ಬೀಜಗಳ ಆಯ್ಕೆ ಮತ್ತು ನಿರಂತರ ಇಳುವರಿ ಸುಧಾರಣೆಯೇ ಕಾರಣವೆಂದು ಹೇಳಿದರು. "ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರತಿ ವರ್ಷ ನಾವು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿದೆವು, ಮತ್ತು ಉತ್ಪಾದಕತೆ ಹೆಚ್ಚುತ್ತಲೇ ಹೋಯಿತು," ಎಂದು ರೈತರು ಹೇಳಿದರು.

ಪ್ರಧಾನಮಂತ್ರಿ ಅವರು ಬೇಳೆಕಾಳುಗಳ ಪೌಷ್ಟಿಕಾಂಶದ ಮೌಲ್ಯವನ್ನು, ವಿಶೇಷವಾಗಿ ಸಸ್ಯಾಹಾರಿಗಳಿಗೆ ಅದರ ಮಹತ್ವವನ್ನು ಒತ್ತಿ ಹೇಳಿದರು. ಬೇಳೆಕಾಳುಗಳ ಕೃಷಿಯು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ದೇಶದ ಪೌಷ್ಟಿಕಾಂಶದ ಭದ್ರತೆಗೂ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಶ್ರೀ ಮೋದಿಯವರು ಶ್ಲಾಘಿಸಿದರು. ಸಣ್ಣ ಮತ್ತು ಅತಿ ಸಣ್ಣ ರೈತರು ಒಗ್ಗೂಡಿ, ತಮ್ಮ ಜಮೀನುಗಳನ್ನು ಒಟ್ಟುಗೂಡಿಸಿ, ಹೆಚ್ಚಿನ ಮೌಲ್ಯದ ಬೆಳೆಗಳನ್ನು ಆಯ್ಕೆ ಮಾಡುವುದರ ಮೇಲೆ ಗಮನಹರಿಸಿ ಉತ್ಪಾದನೆಯನ್ನು ಹೆಚ್ಚಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯಲು ಸಾಧ್ಯವಾಗುವ 'ಗುಂಪು ಕೃಷಿ'ಯ ಕಲ್ಪನೆಯನ್ನು ಶ್ರೀ ಮೋದಿಯವರು ಪ್ರೋತ್ಸಾಹಿಸಿದರು.

ಈ ಮಾದರಿಯ ಯಶಸ್ವಿ ಉದಾಹರಣೆಯೊಂದನ್ನು ಹಂಚಿಕೊಂಡ ರೈತರೊಬ್ಬರು, ಪ್ರಸ್ತುತ ಸುಮಾರು 1200 ಎಕರೆ ಪ್ರದೇಶದಲ್ಲಿ ಶೇಷಮುಕ್ತ ಕಾಬೂಲಿ ಕಡಲೆ ಕೃಷಿ ಮಾಡಲಾಗುತ್ತಿದ್ದು, ಇದು ಇಡೀ ಗುಂಪಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಮತ್ತು ಸುಧಾರಿತ ಆದಾಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ವಿಶೇಷವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ, ಸಜ್ಜೆ ಮತ್ತು ಜೋಳದಂತಹ ಸಿರಿಧಾನ್ಯಗಳನ್ನು (ಶ್ರೀ ಅನ್ನ) ಸರ್ಕಾರವು ಪ್ರೋತ್ಸಾಹಿಸುತ್ತಿರುವ ಬಗ್ಗೆಯೂ ಪ್ರಧಾನಮಂತ್ರಿ ಅವರು ಚರ್ಚಿಸಿದರು. ಹೆಚ್ಚಿದ ಮಾರುಕಟ್ಟೆ ಬೇಡಿಕೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ, ಸಿರಿಧಾನ್ಯ ಕೃಷಿಯು ಮುಂದುವರಿಯುತ್ತಿರುವುದು ಮಾತ್ರವಲ್ಲದೆ, ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ರೈತರೊಬ್ಬರು ದೃಢಪಡಿಸಿದರು. "ಎಲ್ಲಿ ನೀರಿನ ಕೊರತೆ ಇದೆಯೋ, ಅಲ್ಲಿ ಸಿರಿಧಾನ್ಯಗಳು ಜೀವನಾಡಿ. ಸಿರಿಧಾನ್ಯಗಳ ಜಾಗತಿಕ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ," ಎಂದು ಶ್ರೀ ಮೋದಿ ಹೇಳಿದರು.

ಸಂವಾದದ ಸಮಯದಲ್ಲಿ ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಕೃಷಿಯ ಬಗ್ಗೆಯೂ ಚರ್ಚಿಸಲಾಯಿತು. ವಿಶೇಷವಾಗಿ ಸಣ್ಣ ರೈತರು ಇಂತಹ ಪದ್ಧತಿಗಳನ್ನು ಹಂತಹಂತವಾಗಿ ಮತ್ತು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಜಮೀನಿನ ಒಂದು ಭಾಗದಲ್ಲಿ ನೈಸರ್ಗಿಕ ಕೃಷಿಯನ್ನು ಪರೀಕ್ಷಿಸುತ್ತಾ, ಉಳಿದ ಭಾಗದಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಮುಂದುವರಿಸುವ ಮೂಲಕ, ಕಾಲಕ್ರಮೇಣ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಹಂತಹಂತವಾದ ವಿಧಾನವನ್ನು ಅವರು ಸೂಚಿಸಿದರು.

ಸ್ವಸಹಾಯ ಗುಂಪಿನ ಓರ್ವ ಮಹಿಳಾ ರೈತರು, 2023 ರಲ್ಲಿ ತಮ್ಮ 5 ಬಿಘಾ ಜಮೀನಿನಲ್ಲಿ ಹೆಸರು ಕಾಳು ಕೃಷಿಯನ್ನು ಪ್ರಾರಂಭಿಸಿದ ಅನುಭವವನ್ನು ಹಂಚಿಕೊಂಡರು. ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ತಮಗೆ ಪ್ರಮುಖ ಬೆಂಬಲವಾಗಿದೆ ಎಂದು ಅವರು ಶ್ಲಾಘಿಸಿದರು. ಈ ಯೋಜನೆಯಿಂದ ಬೀಜ ಖರೀದಿ ಮತ್ತು ಭೂಮಿ ಸಿದ್ಧತೆಯನ್ನು ನಿರ್ವಹಿಸಲು ಸಾಧ್ಯವಾಯಿತು ಎಂದರು. "ವಾರ್ಷಿಕ ₹6000 ನೆರವು ಒಂದು ವರದಾನವಾಗಿದೆ. ಇದು ನಮಗೆ ಬೀಜಗಳನ್ನು ಖರೀದಿಸಲು ಮತ್ತು ಸಕಾಲಿಕ ಬಿತ್ತನೆ ಮಾಡಲು ಸಹಾಯ ಮಾಡುತ್ತದೆ," ಎಂದು ಅವರು ಹೇಳಿದರು. ಕಡಲೆ, ಮಸೂರ್ ಬೇಳೆ ಮತ್ತು ಗ್ವಾರ್‌ ನಂತಹ ಬೇಳೆಕಾಳುಗಳನ್ನು ಬೆಳೆಯುವ ಮತ್ತೊಬ್ಬ ರೈತರು, ಕೇವಲ ಎರಡು ಎಕರೆ ಜಮೀನಿದ್ದರೂ ಸಹ, ತಾವು ವೈವಿಧ್ಯಮಯ ಬೆಳೆ ಬೆಳೆದು ಸ್ಥಿರವಾಗಿ ಆದಾಯ ಗಳಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಇದು ಬುದ್ಧಿವಂತ, ಸಣ್ಣ ಪ್ರಮಾಣದ ಕೃಷಿಯ ಶಕ್ತಿಯನ್ನು ತೋರಿಸುತ್ತದೆ.

ರೈತರೊಬ್ಬರು, 2010 ರಲ್ಲಿ ಹೋಟೆಲ್‌ನಲ್ಲಿ 'ರೂಮ್ ಬಾಯ್' ಆಗಿ ಕೆಲಸ ಮಾಡುತ್ತಿದ್ದ ತಮ್ಮ  ಜೀವನದಿಂದ, ಇಂದು 250ಕ್ಕೂ ಹೆಚ್ಚು ಗಿರ್ ಹಸುಗಳಿರುವ ಗೋಶಾಲೆಯ ಮಾಲೀಕರಾದ ತಮ್ಮ ಗಮನಾರ್ಹ ಪಯಣವನ್ನು ಹಂಚಿಕೊಂಡರು. ಪಶುಸಂಗೋಪನಾ ಸಚಿವಾಲಯವು ನೀಡಿದ ಶೇ. 50ರಷ್ಟು ಸಬ್ಸಿಡಿಯು ತಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಅವರು ಈ ಉಪಕ್ರಮವನ್ನು ಶ್ಲಾಘಿಸಿ, ವಾರಣಾಸಿಯಿಂದ ಇದೇ ರೀತಿಯ ಪ್ರಯೋಗವನ್ನು ವಿವರಿಸಿದರು: ಅಲ್ಲಿ ಕುಟುಂಬಗಳಿಗೆ ಗಿರ್ ಹಸುಗಳನ್ನು ನೀಡಲಾಗುತ್ತದೆ. ಮೊದಲ ಕರುವನ್ನು ಮರಳಿ ನೀಡಬೇಕು ಎಂಬ ಷರತ್ತನ್ನು ವಿಧಿಸಲಾಗುತ್ತದೆ ಮತ್ತು ಆ ಕರುವನ್ನು ನಂತರ ಇತರ ಕುಟುಂಬಗಳಿಗೆ ನೀಡಲಾಗುತ್ತದೆ. ಇದು ಒಂದು ಸುಸ್ಥಿರ ಸಮುದಾಯ ಸರಪಳಿಯನ್ನು ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (PMMSY) ಜೀವನವನ್ನೇ ಬದಲಾಯಿಸುವಂತಹ ಪರಿಣಾಮಗಳ ಕುರಿತು ಅನೇಕ ಫಲಾನುಭವಿಗಳು ಬೆಳಕು ಚೆಲ್ಲಿದರು. ಉತ್ತರ ಪ್ರದೇಶದ ಪಿಎಚ್.ಡಿ. ಪದವೀಧರರೊಬ್ಬರು ಮೀನುಗಾರಿಕಾ ಉದ್ಯಮಿಯಾಗಿ, ಉದ್ಯೋಗಾಕಾಂಕ್ಷಿಯಾಗಿದ್ದವರು ಇಂದು ಉದ್ಯೋಗದಾತರಾಗಿ ಬದಲಾಗಿದ್ದಾರೆ. ಅವರು ಉತ್ತರಾಖಂಡದ ಸಣ್ಣ ಹಳ್ಳಿಗಳ ಸುಮಾರು 25 ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕಾಶ್ಮೀರದ ಯುವಕನೊಬ್ಬ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ PMMSY ಬಗ್ಗೆ ತಿಳಿದುಕೊಂಡು ಮೀನುಗಾರಿಕೆಯನ್ನು ಪ್ರಾರಂಭಿಸಿದ. ಈಗ ಅವರು 14 ಜನರಿಗೆ ಉದ್ಯೋಗ ನೀಡಿ, ವಾರ್ಷಿಕ ₹15 ಲಕ್ಷ ಲಾಭ ಗಳಿಸುತ್ತಿದ್ದಾರೆ. ಭಾರತದ ಕರಾವಳಿ ಪ್ರದೇಶದ ಮಹಿಳಾ ರೈತರೊಬ್ಬರು 100 ಜನರಿಗೆ ಉದ್ಯೋಗ ನೀಡಿದ್ದು, PMMSY ಅಡಿಯಲ್ಲಿ ಲಭ್ಯವಿರುವ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಮತ್ತು ಐಸ್ ಸೌಲಭ್ಯಗಳು ತಮ್ಮ ಮೀನುಗಾರಿಕೆ ವ್ಯವಹಾರವನ್ನು ಹೇಗೆ ಬೆಳೆಸಿದವು ಎಂಬುದನ್ನು ಹಂಚಿಕೊಂಡರು. ಅಲಂಕಾರಿಕ ಮೀನು ಸಾಕಾಣಿಕೆಯಲ್ಲಿ ತೊಡಗಿರುವ ಮತ್ತೊಬ್ಬ ಉದ್ಯಮಿ, PMMSY ದೇಶಾದ್ಯಂತ ಯುವ ಕೃಷಿ-ಸ್ಟಾರ್ಟ್‌ಅಪ್‌ಗಳಿಗೆ ಆಶಾಕಿರಣವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಮೀನುಗಾರಿಕೆಯಲ್ಲಿರುವ ಅಪಾರ ಸಾಮರ್ಥ್ಯವನ್ನು ಒತ್ತಿ ಹೇಳಿದರು ಮತ್ತು ಈ ಅವಕಾಶವನ್ನು ಬಳಸಿಕೊಳ್ಳಲು ಹೆಚ್ಚಿನ ಯುವಕರಿಗೆ ಪ್ರೋತ್ಸಾಹ ನೀಡಿದರು.

'ಸಖಿ ಸಂಘಟನೆ'ಯ ಪ್ರತಿನಿಧಿಯೊಬ್ಬರು, ಕೇವಲ 20 ಮಹಿಳೆಯರಿಂದ ಪ್ರಾರಂಭವಾದ ಈ ಚಳುವಳಿ ಈಗ ಹೈನುಗಾರಿಕೆ ಕ್ಷೇತ್ರದಲ್ಲಿ 90,000 ಮಹಿಳೆಯರನ್ನು ತಲುಪಿದೆ ಎಂದು ಹಂಚಿಕೊಂಡರು. "ಸಂಘಟಿತ ಪ್ರಯತ್ನಗಳ ಮೂಲಕ 14,000ಕ್ಕೂ ಹೆಚ್ಚು ಮಹಿಳೆಯರು 'ಲಕ್ಷಪತಿ ದೀದಿ'ಗಳಾಗಿದ್ದಾರೆ," ಎಂದು ಪ್ರತಿನಿಧಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, "ಇದು ನಿಜವಾದ ಪವಾಡ," ಎಂದು ಹೇಳಿ, ಸ್ವ-ಸಹಾಯ ಗುಂಪುಗಳ ಮಾದರಿಯನ್ನು ಶ್ಲಾಘಿಸಿದರು.

ಜಾರ್ಖಂಡ್‌ ನ ಸರೈಕೆಲಾ ಜಿಲ್ಲೆಯ ಉದ್ಯಮಿಯೊಬ್ಬರು, ಸೌಲಭ್ಯವಂಚಿತ 125 ಬುಡಕಟ್ಟು ಕುಟುಂಬಗಳನ್ನು ದತ್ತು ಪಡೆದು, ಆ ಪ್ರಾಂತ್ಯದಲ್ಲಿ ಸಮಗ್ರ ಸಾವಯವ ಕೃಷಿಗೆ ಚಾಲನೆ ನೀಡಿದ್ದಾರೆ. "ನೀವು ಉದ್ಯೋಗ ಅರಸುವವರಾಗಬೇಡಿ, ಉದ್ಯೋಗ ನೀಡುವವರಾಗಿ" ಎಂಬ ಪ್ರಧಾನಮಂತ್ರಿ ಅವರ ಕರೆಯೇ ತಮ್ಮ ಈ ಮಹತ್ಕಾರ್ಯಕ್ಕೆ ಸ್ಫೂರ್ತಿ ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡರು.

ಸಭೆಯಲ್ಲಿದ್ದ ಅನೇಕರು ತಮ್ಮ ಭಾವಪೂರ್ಣ ಕೃತಜ್ಞತೆಗಳನ್ನು ಅರ್ಪಿಸಿದರು. ಓರ್ವ ರೈತರು, "ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿದ್ದು ನನ್ನ ಮನಸ್ಸಿಗೆ ದೊಡ್ಡ ಸಮಾಧಾನ ನೀಡಿತು. ನಾನೊಬ್ಬ ನಾಯಕನೊಂದಿಗೆ ಮಾತನಾಡುತ್ತಿದ್ದೇನೆ ಎನಿಸಲೇ ಇಲ್ಲ, ಬದಲಿಗೆ ನಮ್ಮ ಮನೆಯ ಹಿರಿಯರೊಂದಿಗೆ ಮಾತನಾಡಿದ ಅನುಭವವಾಯಿತು," ಎಂದು ಮನಬಿಚ್ಚಿ ಹೇಳಿದರು.

ಮತ್ತೊಬ್ಬ ಕಾಶ್ಮೀರಿ ಯುವಕರು, ಪ್ರಸ್ತುತ ಸರ್ಕಾರದ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿಯನ್ನು ಕೊಂಡಾಡಿದರು. "ನಿಮ್ಮ ಸರ್ಕಾರ ಇರದಿದ್ದರೆ, ಇವುಗಳಲ್ಲಿ ಯಾವುದೂ ಸಾಧ್ಯವಾಗುತ್ತಿರಲಿಲ್ಲ," ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೊಬ್ಬ ರೈತರು, 2014ರಲ್ಲಿ ಅಮೆರಿಕದಲ್ಲಿದ್ದ ತಮ್ಮ ಲಾಭದಾಯಕ ವೃತ್ತಿಯನ್ನು ತ್ಯಜಿಸಿ, ಭಾರತಕ್ಕೆ ಮರಳಿ ಗ್ರಾಮೀಣ ಸಮುದಾಯಗಳನ್ನು ಸಬಲಗೊಳಿಸಲು ಕೈಗೊಂಡ ತಮ್ಮ ಪಯಣವನ್ನು ವಿವರಿಸಿದರು. ಕೇವಲ 10 ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದ ಇವರು, ಇಂದು 300ಕ್ಕೂ ಹೆಚ್ಚು ಎಕರೆ ಕೃಷಿಭೂಮಿ, ಮೀನುಮರಿ ಉತ್ಪಾದನಾ ಕೇಂದ್ರಗಳನ್ನು (ಹ್ಯಾಚರಿ) ನಿರ್ವಹಿಸುತ್ತಿದ್ದು, 10,000 ಎಕರೆಗೂ ಅಧಿಕ ಪ್ರದೇಶಕ್ಕೆ ಬೇಕಾಗುವ ಬೀಜೋತ್ಪಾದನೆ ಮಾಡುತ್ತಿದ್ದಾರೆ. 'ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ'ಯ (FIDF) ನೆರವಿನಿಂದ ಕೇವಲ 7% ಬಡ್ಡಿದರದಲ್ಲಿ ಸಾಲ ಪಡೆದು, ತಮ್ಮ ಉದ್ಯಮವನ್ನು 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಸಿದ್ದಾರೆ. "ನಮ್ಮ ಬಳಿಗೆ ಪ್ರಧಾನಿ ಮೋದಿ ನಡೆದುಬಂದ ಆ ಕ್ಷಣ ನಿಜಕ್ಕೂ ಅವಿಸ್ಮರಣೀಯವಾಗಿತ್ತು," ಎಂದು ಅವರು ಹೇಳಿದರು.

ಗುಜರಾತ್‌ ನ ಅಮ್ರೇಲಿ ಜಿಲ್ಲೆಯ ಧಾರಿ ತಾಲೂಕಿನ ರೈತ ಉತ್ಪಾದಕ ಸಂಸ್ಥೆಯ (FPO) ಪ್ರತಿನಿಧಿಯೊಬ್ಬರು, ತಮ್ಮ 1,700 ರೈತರ ಸಂಘಟನೆಯು 1,500 ಎಕರೆಗಳಲ್ಲಿ ಕೃಷಿ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ವಾರ್ಷಿಕ 20% ಲಾಭಾಂಶವನ್ನು ಸದಸ್ಯರಿಗೆ ನೀಡುತ್ತಿದೆ ಎಂದು ತಿಳಿಸಿದರು. ಈ ಸಂಸ್ಥೆಗೆ ಸರ್ಕಾರದಿಂದ ಸಿಕ್ಕ ₹2 ಕೋಟಿಗಳ ಮೇಲಾಧಾರ-ರಹಿತ (collateral-free) ಸಾಲವು, ವ್ಯವಹಾರವನ್ನು ಗಣನೀಯವಾಗಿ ವಿಸ್ತರಿಸಲು ನೆರವಾಯಿತು. "ನಮ್ಮ ಕೈಯಲ್ಲಿ ಏನೂ ಇಲ್ಲದಿದ್ದಾಗ, ಭಾರತ ಸರ್ಕಾರದ ಸಾಲ ಖಾತರಿ ಯೋಜನೆಯು ನಮಗೆ ಆತ್ಮಬಲವನ್ನು ತುಂಬಿತು" ಎಂದು ಅವರು ಕೃತಜ್ಞತೆಯಿಂದ ನುಡಿದರು.

ರಾಜಸ್ಥಾನದ ಜೈಸಲ್ಮೇರ್‌ ನ 1,000ಕ್ಕೂ ಹೆಚ್ಚು ರೈತರನ್ನು ಹೊಂದಿರುವ ರೈತ ಉತ್ಪಾದಕ ಸಂಸ್ಥೆಯೊಂದು (FPO), 'ಸಮಗ್ರ ಕೀಟ ನಿರ್ವಹಣಾ' (IPM) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾವಯವ ಜೀರಿಗೆ ಮತ್ತು ಇಸಬ್ಗೋಲ್ ಅನ್ನು ಯಶಸ್ವಿಯಾಗಿ ಬೆಳೆಯುತ್ತಿದೆ. ಈ ಉತ್ಕೃಷ್ಟ ದರ್ಜೆಯ ಉತ್ಪನ್ನವನ್ನು ಗುಜರಾತ್ ಮೂಲದ ರಫ್ತುದಾರರ ಮೂಲಕ ವಿದೇಶಗಳಿಗೆ ಕಳುಹಿಸಲಾಗುತ್ತಿದೆ. ಇದೇ ವೇಳೆ, "ಇಸಬ್ಗೋಲ್‌ ನಿಂದ ಐಸ್‌ ಕ್ರೀಮ್ ತಯಾರಿಸುವ ಬಗ್ಗೆ ಏಕೆ ಪ್ರಯತ್ನಿಸಬಾರದು?" ಎಂಬ ಪ್ರಧಾನಮಂತ್ರಿ ಅವರ ಸಲಹೆಯು, ಹೊಸ ಉತ್ಪನ್ನಗಳ ಸಂಶೋಧನೆಯ ನಿಟ್ಟಿನಲ್ಲಿ ರೈತರಲ್ಲಿ ತಕ್ಷಣವೇ ಹೊಸ ಉತ್ಸಾಹವನ್ನು ಮೂಡಿಸಿತು.

ವಾರಣಾಸಿ ಸಮೀಪದ ಮಿರ್ಜಾಪುರದ ರೈತರೊಬ್ಬರು, ಸಿರಿಧಾನ್ಯಗಳ ಸಂಸ್ಕರಣೆ, ಪ್ಯಾಕೇಜಿಂಗ್‌ನಿಂದ ಹಿಡಿದು ಬ್ರ್ಯಾಂಡಿಂಗ್‌ವರೆಗಿನ ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು. ಅಧಿಕೃತ ಒಪ್ಪಂದದ ಅಡಿಯಲ್ಲಿ, ಅವರ ಉತ್ಪನ್ನಗಳನ್ನು ದೇಶದ ರಕ್ಷಣಾ ಪಡೆ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಪೂರೈಸಲಾಗುತ್ತಿದ್ದು, ಇದು ಪೌಷ್ಟಿಕತೆಯನ್ನು ಖಾತರಿಪಡಿಸುವುದರ ಜೊತೆಗೆ ಆರ್ಥಿಕವಾಗಿಯೂ ಅವರನ್ನು ಸಬಲರನ್ನಾಗಿಸಿದೆ.

ಕಾಶ್ಮೀರದ ಸೇಬು ಬೆಳೆಗಾರರೊಬ್ಬರು, ರೈಲು ಸಂಪರ್ಕ ವ್ಯವಸ್ಥೆಯು ತಮ್ಮ ಉತ್ಪನ್ನಗಳ ಸಾಗಾಟದಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಯನ್ನು ವಿವರಿಸಿದರು. ಈ ಸೌಲಭ್ಯದಿಂದಾಗಿ, 60,000 ಟನ್‌ಗಳಿಗೂ ಅಧಿಕ ಹಣ್ಣು ಮತ್ತು ತರಕಾರಿಗಳನ್ನು ಅತಿ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನೇರವಾಗಿ ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಿಗೆ ಸಾಗಿಸಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಜಬಲ್‌ ಪುರದ ಯುವ ಉದ್ಯಮಿಯೊಬ್ಬರು, ಮಣ್ಣಿನ ಸಹಾಯವಿಲ್ಲದೆ, ಗಾಳಿಯಲ್ಲೇ ಬೇರು ಬಿಟ್ಟು ಲಂಬವಾಗಿ ಆಲೂಗಡ್ಡೆ ಬೀಜೋತ್ಪಾದನೆ ಮಾಡುವ ತಮ್ಮ 'ಏರೋಪೋನಿಕ್' ಕೃಷಿ ಮಾದರಿಯನ್ನು ಪ್ರದರ್ಶಿಸಿದರು. ಗಡ್ಡೆ-ಗೆಣಸುಗಳನ್ನು ತ್ಯಜಿಸುವ ಜೈನರ ಆಹಾರ ಪದ್ಧತಿಗೆ ಇದು ಅನುಕೂಲಕರವಾಗಬಹುದು ಎಂದು ಗಮನಿಸಿದ ಪ್ರಧಾನಮಂತ್ರಿ ಅವರು, ಇದನ್ನು "ಜೈನ್ ಆಲೂಗಡ್ಡೆ" ಎಂದು ಹಾಸ್ಯದ ರೂಪದಲ್ಲಿ ಬಣ್ಣಿಸಿದರು.

ರಾಜಸ್ಥಾನದ ಬಾರಾನ್ ಜಿಲ್ಲೆಯ ರೈತರೊಬ್ಬರು, ತಮ್ಮ ತಂಡವು ಬೆಳ್ಳುಳ್ಳಿಯಿಂದ ಪುಡಿ ಮತ್ತು ಪೇಸ್ಟ್ ತಯಾರಿಸುವ ಮೂಲಕ ಅದರ ಮೌಲ್ಯವರ್ಧನೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ರಫ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಲಿರುವುದಾಗಿ ಮಾಹಿತಿ ನೀಡಿದರು.

ಅಧಿವೇಶನದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು, ದೇಶದ ಮೂಲೆಮೂಲೆಗಳಲ್ಲಿನ ರೈತರ ಪರಿಶ್ರಮ ಮತ್ತು ಸಾಧನೆಗಳನ್ನು ಮನಸಾರೆ ಕೊಂಡಾಡುತ್ತಾ ಈ ಸಂವಾದಕ್ಕೆ ತೆರೆ ಎಳೆದರು.

 

****


(Release ID: 2178742) Visitor Counter : 8