ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನ್ಯೂಸ್9 ಗ್ಲೋಬಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ 

Posted On: 22 NOV 2024 10:46PM by PIB Bengaluru

ಗುಟೇನ್ ಅಬೆಂಡ್!

ಸ್ಟಟ್ ಗಾರ್ಟ್ ನ್ಯೂಸ್9 ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ನಮಸ್ಕಾರ!

ಸಚಿವ ವಿನ್ ಫ್ರೈಡ್, ನನ್ನ ಸಂಪುಟದ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಈ ಶೃಂಗಸಭೆಯಲ್ಲಿ ಹಾಜರಿರುವ ಎಲ್ಲಾ ಗಣ್ಯ ಮಹಿಳೆಯರು ಮತ್ತು ಮಹನೀಯರೇ!

ಇಂದು, ಭಾರತ ಮತ್ತು ಜರ್ಮನ್ ಪಾಲುದಾರಿಕೆಗೆ ಹೊಸ ಅಧ್ಯಾಯವನ್ನು ಸೇರಿಸಲಾಗುತ್ತಿದೆ. ಭಾರತದ ಟಿವಿ-9 ಜರ್ಮನಿಯ ವಿಎಫ್.ಬಿ  ಸ್ಟಟ್ ಗಾರ್ಟ್ ಮತ್ತು ಬಾಡೆನ್-ವುರ್ಟೆಂಬರ್ಗ್ ಸಹಯೋಗದೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸಿದೆ. ಈ ಮಾಹಿತಿಯ ಯುಗದಲ್ಲಿ ಭಾರತೀಯ ಮಾಧ್ಯಮ ಗುಂಪು ಜರ್ಮನಿ ಮತ್ತು ಅದರ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನನಗೆ ಸಂತೋಷವಾಗಿದೆ. ಈ ಉಪಕ್ರಮವು ಭಾರತ ಮತ್ತು ಜರ್ಮನಿಯ ಜನರ ನಡುವೆ ಪರಸ್ಪರ ತಿಳುವಳಿಕೆಗೆ ವೇದಿಕೆಯನ್ನು ಒದಗಿಸುತ್ತದೆ. ನ್ಯೂಸ್-9 ಇಂಗ್ಲಿಷ್ ಸುದ್ದಿ ವಾಹಿನಿ ಆರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ಈ ಶೃಂಗಸಭೆಯ ವಿಷಯ "ಭಾರತ-ಜರ್ಮನಿ: ಸುಸ್ಥಿರ ಬೆಳವಣಿಗೆಗೆ ಒಂದು ಮಾರ್ಗಸೂಚಿ." ಈ ವಿಷಯವು ಎರಡು ದೇಶಗಳ ನಡುವಿನ ಜವಾಬ್ದಾರಿಯುತ ಪಾಲುದಾರಿಕೆಯನ್ನು ತೋರಿಸುತ್ತದೆ. ಕಳೆದ ಎರಡು ದಿನಗಳಲ್ಲಿ, ನೀವು ಆರ್ಥಿಕ ವಿಷಯಗಳ ಬಗ್ಗೆ ಮಾತ್ರವಲ್ಲದೆ ಕ್ರೀಡೆ ಮತ್ತು ಮನರಂಜನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಬಹಳ ಸಕಾರಾತ್ಮಕ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದೀರಿ.

ಸ್ನೇಹಿತರೇ,

ಭೌಗೋಳಿಕ ರಾಜಕೀಯ ಸಂಬಂಧಗಳು ಹಾಗು  ವ್ಯಾಪಾರ ಮತ್ತು ಹೂಡಿಕೆಯ ದೃಷ್ಟಿಕೋನದಿಂದ ಯುರೋಪ್ ಭಾರತಕ್ಕೆ ನಿರ್ಣಾಯಕ ಕಾರ್ಯತಂತ್ರದ ಪ್ರದೇಶವಾಗಿದೆ. ಜರ್ಮನಿ ನಮ್ಮ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ. ಇಂಡೋ-ಜರ್ಮನ್ ಕಾರ್ಯತಂತ್ರದ ಪಾಲುದಾರಿಕೆ 2024 ರಲ್ಲಿ 25 ವರ್ಷಗಳನ್ನು ಪೂರೈಸುತ್ತದೆ, ಇದು ಈ ವರ್ಷವನ್ನು ಪಾಲುದಾರಿಕೆಗೆ ಐತಿಹಾಸಿಕ ಮತ್ತು ವಿಶೇಷ ಮೈಲಿಗಲ್ಲಾಗಿಸಿದೆ. ಕಳೆದ ತಿಂಗಳಷ್ಟೇ, ಚಾನ್ಸೆಲರ್ ಸ್ಕೋಲ್ಜ್ ಮೂರನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದರು. 12 ವರ್ಷಗಳಲ್ಲಿ ಮೊದಲ ಬಾರಿಗೆ, ಜರ್ಮನ್ ವ್ಯವಹಾರಗಳ ಏಷ್ಯಾ-ಪೆಸಿಫಿಕ್ ಸಮ್ಮೇಳನವು ನವದೆಹಲಿಯಲ್ಲಿ ನಡೆಯಿತು. ಈ ಸಮ್ಮೇಳನದ ಸಂದರ್ಭದಲ್ಲಿ, ಜರ್ಮನಿಯು ಫೋಕಸ್ ಆನ್ ಇಂಡಿಯಾ ಡಾಕ್ಯುಮೆಂಟ್ ಮತ್ತು ಭಾರತಕ್ಕಾಗಿ ಕೌಶಲ್ಯಪೂರ್ಣ ಕಾರ್ಮಿಕ ಕಾರ್ಯತಂತ್ರವನ್ನು ಬಿಡುಗಡೆ ಮಾಡಿತು. ಇದು ಜರ್ಮನಿ ಅಭಿವೃದ್ಧಿಪಡಿಸಿದ ಮೊದಲ ದೇಶ-ವಿಶೇಷ ತಂತ್ರವಾಗಿದೆ.

ಸ್ನೇಹಿತರೇ,

ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆ 25 ವರ್ಷ ಹಳೆಯದಾಗಿರಬಹುದು, ಆದರೆ ನಮ್ಮ ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂಬಂಧಗಳು ಶತಮಾನಗಳಷ್ಟು ಹಿಂದಿನವು. ಯುರೋಪಿನಲ್ಲಿ ಮೊದಲ ಸಂಸ್ಕೃತ ವ್ಯಾಕರಣ ಪುಸ್ತಕವನ್ನು ಜರ್ಮನ್ ಬರೆದಿದ್ದಾರೆ. ಇಬ್ಬರು ಜರ್ಮನ್ ವ್ಯಾಪಾರಿಗಳಿಂದಾಗಿ ಜರ್ಮನಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದ ಮೊದಲ ಯುರೋಪಿಯನ್ ದೇಶವಾಯಿತು. ಇಂದು, ಸುಮಾರು 300,000 ಭಾರತೀಯರು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 50,000 ಭಾರತೀಯ ವಿದ್ಯಾರ್ಥಿಗಳು ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿದ್ದಾರೆ, ಇದು ಅವರನ್ನು ಇಲ್ಲಿನ ಅತಿದೊಡ್ಡ ವಿದೇಶಿ ವಿದ್ಯಾರ್ಥಿಗಳ ಗುಂಪನ್ನಾಗಿ ಮಾಡಿದೆ. ಭಾರತ-ಜರ್ಮನಿ ಸಂಬಂಧಗಳ ಮತ್ತೊಂದು ಅಂಶವನ್ನು ಭಾರತದಲ್ಲಿ ಕಾಣಬಹುದು. 1,800 ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಸುಮಾರು $15 ಶತಕೋಟಿ ಹೂಡಿಕೆ ಮಾಡಿವೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು $34 ಶತಕೋಟಿ ಆಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಬೆಳೆಯುತ್ತದೆ ಎಂದು ನನಗೆ ವಿಶ್ವಾಸವಿದೆ.  
ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಪರಸ್ಪರ ಪಾಲುದಾರಿಕೆ ನಿರಂತರವಾಗಿ ಬಲಗೊಂಡಿರುವುದರಿಂದ ಈ ನಂಬಿಕೆ ಹುಟ್ಟಿಕೊಂಡಿದೆ.

ಸ್ನೇಹಿತರೇ,

ಇಂದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಪ್ರತಿಯೊಂದು ರಾಷ್ಟ್ರವು ತನ್ನ ಬೆಳವಣಿಗೆಗಾಗಿ ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಬಯಸುತ್ತದೆ. `ಜರ್ಮನಿಸ್ ಫೋಕಸ್ ಆನ್ ಇಂಡಿಯಾ’ ಹೆಸರಿನ ದಾಖಲೆ ಪುಸ್ತಕವು   ಇದಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ಇಡೀ ಜಗತ್ತು ಭಾರತದ ಕಾರ್ಯತಂತ್ರದ ಮಹತ್ವವನ್ನು ಹೇಗೆ ಒಪ್ಪಿಕೊಂಡಿದೆ  ಎಂಬುದನ್ನು ಈ ದಾಖಲೆಯು ಪ್ರತಿಬಿಂಬಿಸುತ್ತದೆ. ಈ ಗ್ರಹಿಕೆಯಲ್ಲಿನ ಬದಲಾವಣೆಯು ಕಳೆದ ದಶಕದಲ್ಲಿ ಭಾರತ ಅನುಸರಿಸುತ್ತಿರುವ ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆ ಎನ್ನುವ ಮಂತ್ರದ ಪರಿಣಾಮವಾಗಿದೆ. 21 ನೇ ಶತಮಾನದ ತ್ವರಿತ ಬೆಳವಣಿಗೆಗೆ ಸಿದ್ಧವಾಗಲು ಭಾರತವು ಎಲ್ಲಾ ವಲಯಗಳಲ್ಲಿ ಹೊಸ ನೀತಿಗಳನ್ನು ಜಾರಿಗೆ ತಂದಿದೆ. ನಾವು ಮಿತಿಮೀರಿದ ನಿಯಮಗಳ ಕೆಂಪು ಪಟ್ಟಿಯನ್ನು ತೆಗೆದುಹಾಕಿದ್ದೇವೆ, ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸಿದ್ದೇವೆ ಮತ್ತು 30,000 ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಿದ್ದೇವೆ. ಅಭಿವೃದ್ಧಿಗೆ ಕೈಗೆಟುಕುವ ಮತ್ತು ಸಕಾಲಿಕ ಬಂಡವಾಳವನ್ನು ಒದಗಿಸಲು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದೆ. ನಾವು ಪರಿಣಾಮಕಾರಿ ಜಿ ಎಸ್ ಟಿ   ಚೌಕಟ್ಟಿನೊಂದಿಗೆ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿದ್ದೇವೆ ಮತ್ತು ವ್ಯವಹಾರ ಬೆಳವಣಿಗೆಯನ್ನು ಉತ್ತೇಜಿಸಲು ಪ್ರಗತಿಪರ ಹಾಗು  ಸ್ಥಿರವಾದ ನೀತಿ ನಿರೂಪಣಾ ವಾತಾವರಣವನ್ನು ಸೃಷ್ಟಿಸಿದ್ದೇವೆ. ಇಂದು, ಭಾರತವು 'ವಿಕಸಿತ ಭಾರತ' ದ ಭವ್ಯ ಕಟ್ಟಡವನ್ನು ನಿರ್ಮಿಸುವ ಘನ ಅಡಿಪಾಯವನ್ನು ಹಾಕಿದೆ ಮತ್ತು ಜರ್ಮನಿಯು ಈ ಪ್ರಯಾಣದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಉಳಿಯುತ್ತದೆ.

ಸ್ನೇಹಿತರೇ,

ಜರ್ಮನಿಯ ಅಭಿವೃದ್ಧಿ ಪ್ರಯಾಣದಲ್ಲಿ ಉತ್ಪಾದನೆ ಮತ್ತು ಎಂಜಿನಿಯರಿಂಗ್ ಪ್ರಮುಖ ಪಾತ್ರ ವಹಿಸಿದೆ. ಭಾರತವು ಜಾಗತಿಕವಾಗಿ ಪ್ರಮುಖ ಉತ್ಪಾದನಾ ಕೇಂದ್ರವಾಗುವತ್ತ ಸಾಗುತ್ತಿದೆ. 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಸೇರುವ ತಯಾರಕರಿಗೆ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಗಳೊಂದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಉತ್ಪಾದನಾ ಕ್ಷೇತ್ರವು ಭೂದೃಶ್ಯವು ಗಮನಾರ್ಹವಾಗಿ ಬದಲಾಗಿದೆ  ಎಂದು ಹೇಳಲು  ನನಗೆ ಸಂತೋಷವಾಗಿದೆ. ಇಂದು, ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಇಂದು, ಭಾರತ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ರಾಷ್ಟ್ರವಾಗಿದ್ದು, ಉಕ್ಕು ಮತ್ತು ಸಿಮೆಂಟ್ನಲ್ಲಿ ಎರಡನೇ ಅತಿದೊಡ್ಡ ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ. ಭಾರತದ ಸೆಮಿಕಂಡಕ್ಟರ್ ಉದ್ಯಮವು ಜಾಗತಿಕವಾಗಿ ತನ್ನ ಛಾಪನ್ನು ಮೂಡಿಸಲು ಸಜ್ಜಾಗಿದೆ. ಈ ಪ್ರಗತಿಗೆ ಮೂಲಸೌಕರ್ಯ ಸುಧಾರಣೆ, ಲಾಜಿಸ್ಟಿಕ್ಸ್ ವೆಚ್ಚದ ಕಡಿತ, ವ್ಯವಹಾರ ಮಾಡುವ ಸುಲಭತೆ ಮತ್ತು ಸ್ಥಿರ ಆಡಳಿತದ ಮೇಲೆ ಕೇಂದ್ರೀಕರಿಸಿದ ಸ್ಥಿರ ನೀತಿಗಳು ಹಾಗು ಹೊಸ ನಿರ್ಧಾರಗಳು ಕಾರಣವಾಗಿವೆ. ಒಂದು ರಾಷ್ಟ್ರದ ತ್ವರಿತ ಅಭಿವೃದ್ಧಿಗೆ ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಹೂಡಿಕೆಗಳು ಬೇಕಾಗುತ್ತವೆ ಮತ್ತು ಭಾರತ ಈ ಎಲ್ಲಾ ವಲಯಗಳಲ್ಲಿ ಮುಂದುವರಿಯುತ್ತಿದೆ. ಇಂದು ಜಗತ್ತು ಡಿಜಿಟಲ್ ತಂತ್ರಜ್ಞಾನದ ಮೇಲೆ ನಮ್ಮ ಹೂಡಿಕೆ ಮತ್ತು ನಾವೀನ್ಯತೆಯ ಪ್ರಭಾವವನ್ನು ನೋಡುತ್ತಿದೆ. ಭಾರತವು ವಿಶ್ವದ ಅತ್ಯಂತ ವಿಶಿಷ್ಟವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೊಂದಿರುವ ದೇಶವಾಗಿದೆ.

ಸ್ನೇಹಿತರೇ,

ಇಂದು ಭಾರತದಲ್ಲಿ, ಹಲವಾರು ಜರ್ಮನ್ ಕಂಪನಿಗಳಿವೆ ಮತ್ತು ನಾನು ಅವರನ್ನು ತಮ್ಮ ಹೂಡಿಕೆಗಳನ್ನು ವಿಸ್ತರಿಸಲು ಆಹ್ವಾನಿಸುತ್ತೇನೆ. ಭಾರತದಲ್ಲಿ ಇನ್ನೂ ಸ್ಥಾಪಿನೆಯಾಗದ ಜರ್ಮನ್ ಕಂಪನಿಗಳಿಗೂ ನಾನು ಆಹ್ವಾನ ನೀಡುತ್ತೇನೆ. ದೆಹಲಿಯಲ್ಲಿ ನಡೆದ ಜರ್ಮನ್ ಕಂಪನಿಗಳ ಏಷ್ಯಾ-ಪೆಸಿಫಿಕ್ ಸಮ್ಮೇಳನದ ಸಂದರ್ಭದಲ್ಲಿ ನಾನು ಹೇಳಿದಂತೆ, ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಭಾರತದ ಚೈತನ್ಯವು ಜರ್ಮನಿಯ ನಿಖರತೆಯನ್ನು ಪೂರೈಸಬೇಕು, ಜರ್ಮನಿಯ ಎಂಜಿನಿಯರಿಂಗ್ ಭಾರತದ ನಾವೀನ್ಯತೆಯೊಂದಿಗೆ ಸಂಪರ್ಕ ಸಾಧಿಸಬೇಕು, ಇದು ನಮ್ಮ ಪ್ರಯತ್ನವಾಗಿರಬೇಕು. ಪ್ರಾಚೀನ ನಾಗರಿಕತೆಯಾಗಿ, ನಾವು ಯಾವಾಗಲೂ ಪ್ರಪಂಚದಾದ್ಯಂತದ ಜನರನ್ನು ಸ್ವಾಗತಿಸಿದ್ದೇವೆ ಮತ್ತು ಅವರನ್ನು ನಮ್ಮ ದೇಶದ ಭಾಗವನ್ನಾಗಿ ಮಾಡಿದ್ದೇವೆ. ಜಗತ್ತಿಗೆ ಸಮೃದ್ಧ ಭವಿಷ್ಯವನ್ನು ನಿರ್ಮಿಸುವಲ್ಲಿ ಪಾಲುದಾರರಾಗಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.
ಧನ್ಯವಾದಗಳು!

ದಾಂಕೆ!

 

*****


(Release ID: 2178452) Visitor Counter : 10