ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ಮಹಾಕಾವ್ಯ ‘ಮಹಾಭಾರತ’ ರಾಷ್ಟ್ರೀಯ ದೂರದರ್ಶನಕ್ಕೆ ಪುನರಾಗಮನ
ಹೊಸ ಪೀಳಿಗೆಗೆ ಮಹಾಕಾವ್ಯದ ಮರುಸೃಷ್ಟಿಸಲು ಪ್ರಸಾರ ಭಾರತಿ ಮತ್ತು ಕಲೆಕ್ಟಿವ್ ಮೀಡಿಯಾ ನೆಟ್ವರ್ಕ್ ಸಹಭಾಗಿತ್ವ
Posted On:
10 OCT 2025 11:56AM by PIB Bengaluru
ಕಲೆಕ್ಟಿವ್ ಮೀಡಿಯಾ ನೆಟ್ವರ್ಕ್ (Collective Media Network) ಭಾರತದ ಅತ್ಯಂತ ಜನಪ್ರಿಯ ಮಹಾಕಾವ್ಯವಾದ ಮಹಾಭಾರತವನ್ನು ಕೃತಕ ಬುದ್ಧಿಮತ್ತೆ (AI) ನೇತೃತ್ವದಲ್ಲಿ ಪುನರ್ಕಲ್ಪನೆ ಮಾಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ. ಈ ಸರಣಿಯು 2025ರ ಅಕ್ಟೋಬರ್ 25 ರಂದು WAVES OTTಯಲ್ಲಿ ವಿಶೇಷ ಡಿಜಿಟಲ್ ಪ್ರೀಮಿಯರ್ ಕಾಣಲಿದ್ದು, ನಂತರ 2025ರ ನವೆಂಬರ್ 2 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಈ ಸರಣಿಯು WAVES OTT ಮೂಲಕ ಭಾರತ ಮತ್ತು ವಿಶ್ವಾದ್ಯಂತದ ಡಿಜಿಟಲ್ ಪ್ರೇಕ್ಷಕರಿಗೆ ಏಕಕಾಲದಲ್ಲಿ ಲಭ್ಯವಿರುತ್ತದೆ.
ಇದೇ ಮೊದಲ ಬಾರಿಗೆ, ಭಾರತದ ಸಾರ್ವಜನಿಕ ಪ್ರಸಾರಕದ ಭವ್ಯ ಪರಂಪರೆ ಮತ್ತು ದೇಶವ್ಯಾಪಿ ವ್ಯಾಪ್ತಿಯನ್ನು, ಮುಂದಿನ ಪೀಳಿಗೆಯ ಮಾಧ್ಯಮ ಜಾಲದ ಸೃಜನಶೀಲ ನಾವೀನ್ಯತೆಯೊಂದಿಗೆ ಈ ಸಹಯೋಗವು ಒಂದುಗೂಡಿಸಿದೆ. ಅತ್ಯಾಧುನಿಕ AI ತಂತ್ರಜ್ಞಾನವನ್ನು ಬಳಸಿಕೊಂಡು, ಈ ಸರಣಿಯು ವಿಶಾಲವಾದ ಮಹಾಭಾರತ ಲೋಕವನ್ನು, ಅದರ ಪಾತ್ರಗಳು, ಯುದ್ಧಭೂಮಿಗಳು, ಭಾವನೆಗಳು ಮತ್ತು ನೈತಿಕ ದ್ವಂದ್ವಗಳನ್ನು ಸಿನಿಮೀಯ ವೈಭವ ಮತ್ತು ಬೆರಗುಗೊಳಿಸುವ ವಾಸ್ತವಿಕತೆಯೊಂದಿಗೆ ಮರುಸೃಷ್ಟಿಸುತ್ತದೆ. ಈ ಯೋಜನೆಯು 'ಮೇಕ್ ಇನ್ ಇಂಡಿಯಾ' ಮತ್ತು 'ಡಿಜಿಟಲ್ ಇಂಡಿಯಾ'ದ ಆಶಯವನ್ನು ಸಾಕಾರಗೊಳಿಸುವುದಲ್ಲದೆ, ಪರಂಪರೆ ಮತ್ತು ನಾವೀನ್ಯತೆ ಹೇಗೆ ಒಟ್ಟಿಗೆ ಮುನ್ನಡೆಯಬಹುದು ಎಂಬುದನ್ನು ಪ್ರದರ್ಶಿಸುತ್ತದೆ.
ಈ ಸಹಯೋಗದ ಕುರಿತು ಮಾತನಾಡಿದ ಪ್ರಸಾರ ಭಾರತಿಯ ಸಿ.ಇ.ಒ ಗೌರವ್ ದ್ವಿವೇದಿ, "ಪ್ರಸಾರ ಭಾರತಿಯು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಮಹತ್ವವುಳ್ಳ ಕಥೆಗಳನ್ನು ಪ್ರತಿಯೊಂದು ಭಾರತೀಯ ಮನೆಗೆ ಸದಾ ತಲುಪಿಸುತ್ತಾ ಬಂದಿದೆ. ಲಾಕ್ ಡೌನ್ ಸಮಯದಲ್ಲಿ ಮೂಲ ಮಹಾಭಾರತದ ಮರು-ಪ್ರಸಾರವು, ಈ ಕಥಾನಕಗಳು ಎಷ್ಟು ಆಳವಾಗಿ ಕುಟುಂಬಗಳನ್ನು ಮತ್ತು ತಲೆಮಾರುಗಳನ್ನು ಬೆಸೆಯುತ್ತವೆ ಎಂಬುದನ್ನು ನಮಗೆ ನೆನಪಿಸಿತು. AI-ಚಾಲಿತ ಈ ಮರುಕಲ್ಪನೆಯಲ್ಲಿನ ನಮ್ಮ ಸಹಭಾಗಿತ್ವವು, ಸಂಪ್ರದಾಯವನ್ನು ಗೌರವಿಸುತ್ತಲೇ ಕಥಾನಿರೂಪಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಭಾರತದ ಮಹಾನ್ ಮಹಾಕಾವ್ಯಗಳಲ್ಲಿ ಒಂದನ್ನು ಪ್ರೇಕ್ಷಕರು ಹೊಸದಾಗಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪ್ರಸಾರಣೆಯಲ್ಲಿ 'ವಿಕಾಸ' (ಅಭಿವೃದ್ಧಿ) ಮತ್ತು 'ವಿರಾಸತ್' (ಪರಂಪರೆ) ಒಂದಾಗುವುದರ ಸಂಕೇತವಾಗಿದೆ,” ಎಂದು ಹೇಳಿದರು.
ಈ ಸಹಭಾಗಿತ್ವದ ಕುರಿತು ಮಾತನಾಡಿದ ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್ವರ್ಕ್ನ ಸಂಸ್ಥಾಪಕ ಮತ್ತು ಗ್ರೂಪ್ ಸಿ.ಇ.ಒ ವಿಜಯ್ ಸುಬ್ರಮಣಿಯಂ, “ಲಕ್ಷಾಂತರ ಭಾರತೀಯರಂತೆ, ನಾನೂ ಸಹ ಪ್ರತಿ ಭಾನುವಾರ ದೂರದರ್ಶನದಲ್ಲಿ ಕ್ಲಾಸಿಕ್ ಮಹಾಭಾರತವನ್ನು ನೋಡುತ್ತಾ ಬೆಳೆದೆ. ಅದು ನನ್ನ ಕಲ್ಪನಾ ಶಕ್ತಿಯನ್ನು ಮತ್ತು ನಮ್ಮ ಸಂಸ್ಕೃತಿಯೊಂದಿಗಿನ ನನ್ನ ಬಾಂಧವ್ಯವನ್ನು ರೂಪಿಸಿದ ಒಂದು ಅದ್ಭುತ ಅನುಭವವಾಗಿತ್ತು. ಈ 'ಮಹಾಭಾರತ'ದ ಮೂಲಕ, ನಮಗೆ ದೊರೆತಷ್ಟೇ ತಲ್ಲೀನಗೊಳಿಸುವ ಮತ್ತು ಒಂದುಗೂಡಿಸುವ ಅನುಭವವನ್ನು ಇಂದಿನ ತಂತ್ರಜ್ಞಾನದ ಸಾಧ್ಯತೆಗಳ ಮೂಲಕ ನಿರೂಪಿಸಿ, ಇಂದಿನ ಪೀಳಿಗೆಗೂ ತಲುಪಿಸುವುದು ನಮ್ಮ ಆಶಯ. ಇದು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿ, ಅದೇ ಸಮಯದಲ್ಲಿ ಧೈರ್ಯದಿಂದ ಭವಿಷ್ಯದತ್ತ ನೋಡುವಂತಹ ಕೃತಿಯನ್ನು ರಚಿಸಲು 'ಭಕ್ತಿ' ಮತ್ತು 'ಪ್ರಗತಿ' ಒಟ್ಟಿಗೆ ಸಾಗುವುದರ ಸಂಕೇತವಾಗಿದೆ” ಎಂದು ಹೇಳಿದರು.
ಪ್ರಸಾರ ಭಾರತಿಯ ಅಧಿಕೃತ OTT ವೇದಿಕೆಯಾದ 'WAVES', ಭಾರತದ ಶ್ರೀಮಂತ ಸಂಸ್ಕೃತಿ, ಸುದ್ದಿ ಮತ್ತು ಮನರಂಜನೆಯ ವೈವಿಧ್ಯಮಯ ಸಂಗಮವನ್ನು ಒಂದೇ ಡಿಜಿಟಲ್ ತಾಣದಲ್ಲಿ ಒಟ್ಟುಗೂಡಿಸುತ್ತದೆ. ವಿಡಿಯೋ-ಆನ್-ಡಿಮಾಂಡ್, ನೇರ ಪ್ರಸಾರದ ಕಾರ್ಯಕ್ರಮಗಳು, ಹಾಗೂ ಟಿವಿ, ರೇಡಿಯೋ, ಆಡಿಯೋ ಮತ್ತು ಮ್ಯಾಗಜೀನ್ಗಳ ವ್ಯಾಪಕ ವಿಷಯಗಳನ್ನು ಒಳಗೊಂಡಿರುವ 'WAVES', ತನ್ನ ವಿಶ್ವಾಸಾರ್ಹ, ಕುಟುಂಬ-ಸ್ನೇಹಿ ಮತ್ತು ಬಹುಭಾಷಾ ಸೇವೆಗಳಿಗಾಗಿ ಅತಿ ಶೀಘ್ರದಲ್ಲಿ ಲಕ್ಷಾಂತರ ಬಳಕೆದಾರರನ್ನು ಗಳಿಸಿದೆ. ಸಮಗ್ರತೆ, ನಾವೀನ್ಯತೆ ಮತ್ತು ಪರಂಪರೆಯ ಆಧಾರಸ್ತಂಭಗಳ ಮೇಲೆ ನಿರ್ಮಿಸಲಾದ ಈ ವೇದಿಕೆಯು, ಭಾರತದ ಶಾಶ್ವತ ಪರಂಪರೆಯನ್ನು ಅತ್ಯಾಧುನಿಕ ಕಥಾನಿರೂಪಣೆಯೊಂದಿಗೆ ಬೆಸೆಯುತ್ತದೆ. 'ಕಲೆಕ್ಟಿವ್ AI ಮಹಾಭಾರತ'ದೊಂದಿಗಿನ ಇದರ ಸಹಯೋಗವು, ಭಾರತ ಮತ್ತು ವಿಶ್ವದಾದ್ಯಂತ ಪ್ರೇಕ್ಷಕರ ಮನಮುಟ್ಟುವಂತಹ ಶಕ್ತಿಯುತ ಹಾಗೂ ಸಮಕಾಲೀನ ಕಥೆಗಳನ್ನು ರಚಿಸಲು ತಂತ್ರಜ್ಞಾನ ಮತ್ತು ಸಂಪ್ರದಾಯಗಳು ಹೇಗೆ ಒಗ್ಗೂಡಬಹುದು ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.



*****
(Release ID: 2177439)
Visitor Counter : 34
Read this release in:
English
,
Urdu
,
हिन्दी
,
Marathi
,
Bengali-TR
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam