ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಜಾಗತಿಕ ಕೃಷಿ-ಆಹಾರ ಮೌಲ್ಯ ಸರಣಿಯಲ್ಲಿ ಭಾರತದ ಸ್ಥಾನವನ್ನು ಬಲವರ್ಧನೆಗೊಳಿಸುವ ವರ್ಲ್ಡ್ ಫುಡ್ ಇಂಡಿಯಾ 2025 ಮುಕ್ತಾಯ


ಭಾಗವಹಿಸಿದ್ದ 95 ಸಾವಿರಕ್ಕೂ ಅಧಿಕ ಮಂದಿ ಭಾರತದ ಅತಿದೊಡ್ಡ ಆಹಾರ ಮತ್ತು ಕೃಷಿ ಒಕ್ಕೂಟಕ್ಕೆ ಸೇರ್ಪಡೆ

ಭಾರತದ ಆಹಾರ ಮೌಲ್ಯ ಸರಣಿಯನ್ನು ವಿಸ್ತರಿಸಲು ಕೈಜೋಡಿಸಿದ ರಾಷ್ಟ್ರೀಯ ಸರ್ಕಾರಗಳು ಮತ್ತು ವ್ಯವಹಾರಗಳು

ಜಾಗತಿಕ ಖರೀದಿದಾರರೊಂದಿಗೆ ವೇಗ ಪಡೆದ ಸಮುದ್ರಾಹಾರ ಉದ್ಯಮ ಮತ್ತು ಗುಣಮಟ್ಟ ಮತ್ತು ಸುರಕ್ಷತೆಗಾಗಿ ನೀತಿ ಒತ್ತು

ನೀತಿ ಮತ್ತು ಕೈಗಾರಿಕಾ ಚರ್ಚೆಗಳಲ್ಲಿ ಸುಸ್ಥಿರತೆ, ಪೋಷಣೆ ಮತ್ತು ಹೊಸ-ಯುಗದ ಆಹಾರಗಳ ಪ್ರಾಬಲ್ಯ

Posted On: 29 SEP 2025 9:55AM by PIB Bengaluru

ನಾಲ್ಕು ದಿನಗಳ ವಿಶ್ವ ಆಹಾರ ಭಾರತ 2025 ಇಂದು ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಸಮಾಪನಗೊಂಡಿತು, ಇದು ಭಾರತದ ಆಹಾರ ಸಂಸ್ಕರಣಾ ಕ್ಷೇತ್ರದ ಪಯಣದಲ್ಲಿ ಒಂದು ಮಹತ್ವದ ಹೆಗ್ಗುರುತನ್ನು ಮೂಡಿಸಿದೆ. ರಷ್ಯಾದ ಉಪ ಪ್ರಧಾನಮಂತ್ರಿ ಶ್ರೀ ಡಿಮಿಟ್ರಿ ಪತ್ರುಶೇವ್, ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಮತ್ತು ಶ್ರೀ ಪ್ರತಾಪ್‌ರಾವ್ ಜಾಧವ್ ಮತ್ತು ಆಹಾರ ಸಂಸ್ಕರಣೆ ಮತ್ತು ರೈಲ್ವೆ ರಾಜ್ಯ ಸಚಿವ ಶ್ರೀ ರವನೀತ್ ಸಿಂಗ್ ಅವರ ಸಮಕ್ಷಮದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಅವರು ಉದ್ಘಾಟಿಸಿದ ಈ ಕಾರ್ಯಕ್ರಮವು ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸಿ, ಅವರು ಆಹಾರ ಮತ್ತು ಕೃಷಿಯ ಭವಿಷ್ಯದ ಕುರಿತು ಚರ್ಚಸಲು ಅನುವು ಮಾಡಿಕೊಟ್ಟಿತು.

ಪ್ರಧಾನಮಂತ್ರಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ವಿಶ್ವಾಸಾರ್ಹ ಜಾಗತಿಕ ಪೂರೈಕೆದಾರರಾಗಿ ಭಾರತದ ಪಾತ್ರವನ್ನು ಬಲವಾಗಿ ಪ್ರತಿಪಾದಿಸಿದರು. ಅದರ ಕೃಷಿ ವೈವಿಧ್ಯತೆ, ಹೆಚ್ಚುತ್ತಿರುವ ಮಧ್ಯಮ ವರ್ಗದ ಬೇಡಿಕೆ ಮತ್ತು ಶೇ100ರಷ್ಟು ಎಫ್‌ಡಿಐ, ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ(ಪಿಎಲ್ಐ)  ಮತ್ತು ಮೆಗಾ ಆಹಾರ ಪಾರ್ಕ್‌ಗಳಂತಹ ಸರ್ಕಾರಿ ಉಪಕ್ರಮಗಳನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಇದೇ ವೇಳೆ ಪ್ರಧಾನಮಂತ್ರಿ ಅವರು ಪಿಎಂಎಫ್ ಎಂಇ ಯೋಜನೆಯಡಿ 2,518 ಕೋಟಿ ರೂಪಾಯಿ ಮೌಲ್ಯದ ಸಣ್ಣ ಯೋಜನೆಗಳಿಗೆ 26,000 ಫಲಾನುಭವಿಗಳಿಗೆ ಸಾಲ-ಸಂಬಂಧಿತ ಸಬ್ಸಿಡಿಗಳನ್ನು ಬಿಡುಗಡೆ ಮಾಡಿದರು, ಇದು ತಳಮಟ್ಟದ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವಿಶ್ವ ಆಹಾರ ಭಾರತ ಶೃಂಗಸಭೆ 2025 ವೇಳೆ  1,02,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲು ಅನುವುಮಾಡಿಕೊಟ್ಟಿದ್ದು, ಇದು ಭಾರತೀಯ ಆಹಾರ ಸಂಸ್ಕರಣಾ ವಲಯದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆ ಬದ್ಧತೆಗಳಲ್ಲಿ ಒಂದಾಗಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಎನ್ ಐಎಫ್ ಟಿಇಎಂ-ಟಿ ಮತ್ತು ಎನ್ ಐಎಫ್ ಟಿಇಎಂ-ಕೆ ಸೇರಿದಂತೆ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಕ್ರಿಯಗೊಳಿಸಿತು. ಜತೆಗೆ ಆಹಾರ ಬಲವರ್ಧನೆ, ನ್ಯೂಟ್ರಾಸ್ಯುಟಿಕಲ್ಸ್ ಮತ್ತು ಸ್ಟಾರ್ಟ್-ಅಪ್ ಇನ್ಕ್ಯುಬೇಷನ್‌ನಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ಪಾಲುದಾರಿಕೆಯನ್ನು ಬೆಂಬಲಿಸಿತು.

ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಮತ್ತು ಶ್ರೀ ಚಿರಾಗ್ ಪಾಸ್ವಾನ್ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ದುಂಡುಮೇಜಿನ ಸಭೆಯಲ್ಲಿ ಪ್ರಮುಖ ಭಾರತೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಪ್ರತಿನಿಧಿಸುವ 100 ಕ್ಕೂ ಅಧಿಕ ಸಿಇಒಗಳು ಭಾಗವಹಿಸಿದ್ದರು. ಸುಸ್ಥಿರ ಹೂಡಿಕೆಗಳು, ಜೈವಿಕ ವಿಲೇವಾರಿಯಾಗುವ ಪ್ಯಾಕೇಜಿಂಗ್, ತ್ಯಾಜ್ಯ ಮೌಲ್ಯೀಕರಣ, ನೀಲಿ ಆರ್ಥಿಕತೆಯ ಸಾಮರ್ಥ್ಯ ಮತ್ತು ವೆಚ್ಚವನ್ನು ತಗ್ಗಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸರಕು ಸಾಗಾಣೆ ಮತ್ತು ಸಾರಿಗೆಯಲ್ಲಿನ ಸುಧಾರಣೆಗಳ ಮೇಲೆ ಹೆಚ್ಚಿನ ಚರ್ಚೆಗಳು ಕೇಂದ್ರೀಕೃತವಾಗಿದ್ದವು.

ಸರ್ಕಾರಗಳ ನಡುವಿನ ಸರಣಿ ಸಭೆಗಳು ಭಾರತದ ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ಬಲವರ್ಧನೆಗೊಳಿಸಿದವು, ರಷ್ಯಾ, ಶ್ರೀಲಂಕಾ, ಮೊರಾಕೊ, ಮಾಲ್ಡೀವ್ಸ್, ಪೋರ್ಚುಗಲ್, ನ್ಯೂಜಿಲೆಂಡ್, ಜಿಂಬಾಬ್ವೆ, ಉಗಾಂಡಾ, ಎಸ್ವಾಟಿನಿ, ಕೋಟ್ ಡಿ'ಐವೊಯಿರ್ ಮತ್ತು ಕುವೈತ್‌ನ ನಿಯೋಗಗಳು ಕೃಷಿ ಮತ್ತು ಆಹಾರ ಸಂಸ್ಕರಣೆಯಲ್ಲಿ  ಸಹಕಾರ ಸಂಬಂಧ ಮತ್ತಷ್ಟು ಬಲಗೊಳಿಸುವ ಮಾರ್ಗಗಳನ್ನು ಅನ್ವೇಷಿಸಲು ಭಾರತೀಯ ಸಹವರ್ತಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದವು. ಜಾಗತಿಕ ಕೃಷಿ-ಆಹಾರ ಮೌಲ್ಯ ಸರಣಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ಈ ಸಂವಾದಗಳು ಮತ್ತಷ್ಟು ಬಲವರ್ಧನೆಗೊಳಿಸಿದವು.

ವರ್ಲ್ಡ್ ಫುಡ್ ಇಂಡಿಯಾ 2025ರ ತಾಂತ್ರಿಕ ಕಾರ್ಯಸೂಚಿಯು ಅಷ್ಟೇ ಉತ್ಕೃಷ್ಟವಾಗಿತ್ತು, ಪಾಲುದಾರ ರಾಜ್ಯಗಳು, ಹೆಚ್ಚಿನ ಗಮನಹರಿಸುತ್ತಿರುವ ರಾಜ್ಯಗಳು, ಸಚಿವಾಲಯಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಘಗಳು ನಡೆಸಿದ ನಲವತ್ತಕ್ಕೂ ಅಧಿಕ ಗೋಷ್ಠಿಗಳನ್ನು ಒಳಗೊಂಡಿತ್ತು. ಸಾಕು ಪ್ರಾಣಿಗಳ ಆಹಾರ, ನ್ಯೂಟ್ರಾಸ್ಯುಟಿಕಲ್ಸ್, ಸಸ್ಯ ಆಧಾರಿತ ಆಹಾರಗಳು, ಆಲ್ಕೊಹಾಲ್ಯುಕ್ತ ಪಾನೀಯಗಳು ಮತ್ತು ವಿಶೇಷ ಆಹಾರಗಳಲ್ಲಿನ ಅವಕಾಶಗಳ ಬಗ್ಗೆ ಗೋಷ್ಠಿಗಳಲ್ಲಿ ಚರ್ಚೆ ನಡೆಸಲಾಯಿತು. ಆದರೆ 3 ನೇ ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆಯು ಅಪಾಯ ನಿರ್ವಹಣೆಗಾಗಿ ಡಿಜಿಟಲ್ ಸಾಧನಗಳು, ಮುಂದಿನ ಪೀಳಿಗೆಯ ನಿಯಂತ್ರಕ ಕೌಶಲ್ಯಗಳು, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಮೂಲಕ ಆಹಾರ ಸುರಕ್ಷತೆ ಮತ್ತು ಬೊಜ್ಜು ನಿವಾರಿಸಲು ಪೌಷ್ಟಿಕಾಂಶ-ನೇತೃತ್ವದ ತಂತ್ರಗಳ ಕುರಿತು ಚರ್ಚಿಸಲು ವೇದಿಕೆಯನ್ನು ಒದಗಿಸಿತು.

ಈ ಕಾರ್ಯಕ್ರಮವು ಸದೃಢ ಉದ್ಯಮ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು, ನಾಲ್ಕು ದಿನಗಳಲ್ಲಿ 10,500 ಕ್ಕೂ ಅಧಿಕ ಬಿ2ಬಿ ಸಭೆಗಳು, 261 ಜಿ2ಜಿ ಸಭೆಗಳು ಮತ್ತು 18,000 ಕ್ಕೂ ಅಧಿಕ ರಿವರ್ಸ್ ಖರೀದಿದಾರ-ಮಾರಾಟಗಾರರ ಸಭೆಗಳನ್ನು ಆಯೋಜಿಸಲಾಗಿತ್ತು. ಶೃಂಗಸಭೆಗೆ ಒಟ್ಟು ಭೇಟಿ ನೀಡಿದವರ ಸಂಖ್ಯೆ 95,000 ದಾಟಿದೆ, ಇದು ಕಾರ್ಯಕ್ರಮದಿಂದ ಸೃಷ್ಟಿಯಾದ ಪ್ರಮಾಣ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.

ವಿಶ್ವ ಆಹಾರ ಭಾರತ ಶೃಂಗಸಭೆಗೆ ಸಮಾನಾಂತರವಾಗಿ, 24 ನೇ ಭಾರತೀಯ ಅಂತಾರಾಷ್ಟ್ರೀಯ ಸಮುದ್ರಾಹಾರ ಪ್ರದರ್ಶನವನ್ನು ಕೇಂದ್ರ ಸಚಿವ ಶ್ರೀ ಚಿರಾಗ್ ಪಾಸ್ವಾನ್ ಅವರು ಸೆಪ್ಟೆಂಬರ್ 25 ರಂದು ಪ್ರಗತಿ ಮೈದಾನದಲ್ಲಿ ಉದ್ಘಾಟಿಸಿದರು. ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ ಈ ಪ್ರದರ್ಶನದಲ್ಲಿ ಉದ್ಯಮ ಉಪನ್ಯಾಸಗಳು, ದುಂಡುಮೇಜಿನ ಸಭೆಗಳು, ತಾಂತ್ರಿಕ ಗೋಷ್ಠಿಗಳು ಮತ್ತು ಭಾರತದ ಸಮುದ್ರಾಹಾರ ರಫ್ತಿನ ಸಾಮರ್ಥ್ಯವನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವತ್ತ ಗಮನಹರಿಸುವ ಖರೀದಿದಾರ-ಮಾರಾಟಗಾರರ ಸಭೆಗಳನ್ನು ನಡೆಸಲಾಯಿತು.

ಜಾಗತಿಕ ಆಹಾರ  ಭಾರತ 2025 ಸಮಾಪನಗೊಳ್ಳುತ್ತಿದ್ದಂತೆಯೇ ಅದು ಆಹಾರ ಸಂಸ್ಕರಣೆ, ನಾವೀನ್ಯತೆ ಮತ್ತು ಸುಸ್ಥಿರ ಅಭ್ಯಾಸಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಯನ್ನು ಪುನರುಚ್ಚರಿಸಿತು. ದಾಖಲೆಯ ಹೂಡಿಕೆಗಳು, ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಬಲರ್ವಧನೆ ಮತ್ತು ಕೃಷಿ-ಆಹಾರ ಮೌಲ್ಯ ಸರಣಿಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ದೂರದೃಷ್ಟಿಯೊಂದಿಗೆ ಬಲವಾದ ಹೊಂದಾಣಿಕೆಯೊಂದಿಗೆ ಈ ಶೃಂಗಸಭೆಯು ಭವಿಷ್ಯದ ಬೆಳವಣಿಗೆಗೆ ಮತ್ತು ಈ ಕ್ಷೇತ್ರದಲ್ಲಿ ಜಾಗತಿಕ ಸಹಯೋಗಕ್ಕೆ ಭದ್ರ ಬುನಾದಿ ಹಾಕಿದೆ.

 

*****


(Release ID: 2172608) Visitor Counter : 4