ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಆಹಾರ ಭಾರತ 2025 ನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಭಾರತವು ವೈವಿಧ್ಯತೆ, ಬೇಡಿಕೆ ಮತ್ತು ವ್ಯಾಪಕ ಪ್ರಮಾಣದ ತ್ರಿವಳಿ ಶಕ್ತಿಯನ್ನು ಹೊಂದಿದೆ: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ 25 ಕೋಟಿ ಜನರು ಬಡತನವನ್ನು ಮೀರಿದ್ದಾರೆ: ಪ್ರಧಾನಮಂತ್ರಿ
ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದ್ದು, ಆಹಾರ ಮತ್ತು ಕೃಷಿ ವಲಯಗಳಲ್ಲಿ ಅನೇಕ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ: ಪ್ರಧಾನಮಂತ್ರಿ
ಜಾಗತಿಕ ಆಹಾರ ಭದ್ರತೆಗೆ ಭಾರತ ನಿರಂತರವಾಗಿ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ
ಇಂದು, ಸಣ್ಣ ರೈತರು ಮಾರುಕಟ್ಟೆಯಲ್ಲಿ ಪ್ರಮುಖ ಶಕ್ತಿಯಾಗುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತದಲ್ಲಿ, ಸಹಕಾರಿಗಳು ನಮ್ಮ ಡೈರಿ ವಲಯ ಮತ್ತು ನಮ್ಮ ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿಯನ್ನು ನೀಡುತ್ತಿವೆ: ಪ್ರಧಾನಮಂತ್ರಿ
Posted On:
25 SEP 2025 8:41PM by PIB Bengaluru
ನವದೆಹಲಿಯ ಭಾರತ್ ಮಂಟಪದಲ್ಲಿ ಇಂದು ನಡೆದ ವರ್ಲ್ಡ್ ಫುಡ್ ಇಂಡಿಯಾ 2025 ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ರೈತರು, ಉದ್ಯಮಿಗಳು, ಹೂಡಿಕೆದಾರರು, ನಾವೀನ್ಯಕಾರರು ಮತ್ತು ಗ್ರಾಹಕರು ಎಲ್ಲರೂ ಒಟ್ಟಾಗಿ ಈ ಕಾರ್ಯಕ್ರಮದಲ್ಲಿ ಹಾಜರಿರುವುದನ್ನು ಗುರುತಿಸಿದರು, ಇದು ವರ್ಲ್ಡ್ ಫುಡ್ ಇಂಡಿಯಾವನ್ನು ಹೊಸ ಪರಿಚಯಗಳು, ಹೊಸ ಸಂಪರ್ಕ ಮತ್ತು ಸೃಜನಶೀಲತೆಯ ವೇದಿಕೆಯನ್ನಾಗಿ ಮಾಡಿವೆ ಎಂದು ಹೇಳಿದರು. ತಾವು ಈಗಷ್ಟೇ ಪ್ರದರ್ಶನಗಳಿಗೆ ಭೇಟಿ ನೀಡಿದ್ದನ್ನು ಹಂಚಿಕೊಂಡ ಅವರು, ಪ್ರಾಥಮಿಕ ಗಮನವು ಪೌಷ್ಟಿಕಾಂಶ, ತೈಲ ಬಳಕೆ ಕಡಿಮೆ ಮಾಡುವುದು ಮತ್ತು ಪ್ಯಾಕೇಜ್ ಮಾಡಿದ ಉತ್ಪನ್ನಗಳಲ್ಲಿ ಆರೋಗ್ಯಕರ ಅಂಶಗಳನ್ನು ಹೆಚ್ಚಿಸುವುದರ ಬಗ್ಗೆ ಇರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಧಾನಮಂತ್ರಿಯವರು ಅಭಿನಂದನೆಗಳು ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಸ್ಥಳದ ನೈಸರ್ಗಿಕ ಶಕ್ತಿಯನ್ನು ಮೌಲ್ಯಮಾಪನ ಮಾಡುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಜಾಗತಿಕ ಹೂಡಿಕೆದಾರರು - ವಿಶೇಷವಾಗಿ ಆಹಾರ ವಲಯದಲ್ಲಿರುವವರು - ಭಾರತದತ್ತ ಹೆಚ್ಚಿನ ಆಶಾವಾದದಿಂದ ನೋಡುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. "ಭಾರತವು ವೈವಿಧ್ಯತೆ, ಬೇಡಿಕೆ ಮತ್ತು ವ್ಯಾಪಕ ಪ್ರಮಾಣದ ತ್ರಿವಳಿ ಶಕ್ತಿಯನ್ನು ಹೊಂದಿದೆ" ಎಂದು ಶ್ರೀ ಮೋದಿ ಅವರು ಎತ್ತಿ ತೋರಿಸಿದರು, ಭಾರತವು ಪ್ರತಿಯೊಂದು ರೀತಿಯ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುತ್ತದೆ ಮತ್ತು ಈ ವೈವಿಧ್ಯತೆಯು ದೇಶವನ್ನು ಜಾಗತಿಕ ಭೂದೃಶ್ಯದಲ್ಲಿ ಅನನ್ಯ ಸ್ಥಾನದಲ್ಲಿರಿಸುತ್ತದೆ ಎಂದು ಹೇಳಿದರು. ಪ್ರತಿ ನೂರು ಕಿಲೋಮೀಟರ್‌ಗಳ ಅಂತರದಲ್ಲಿ, ಪಾಕಪದ್ಧತಿ ಮತ್ತು ಅದರ ಸುವಾಸನೆಗಳು ಬದಲಾಗುತ್ತವೆ, ಇದು ಭಾರತದ ಶ್ರೀಮಂತ ಪಾಕಶಾಲೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ಈ ಬಲವಾದ ದೇಶೀಯ ಬೇಡಿಕೆ ಭಾರತಕ್ಕೆ ಸ್ಪರ್ಧಾತ್ಮಕ ಅಂಚನ್ನು ನೀಡುತ್ತದೆ ಮತ್ತು ಹೂಡಿಕೆದಾರರಿಗೆ ಇದು ಆದ್ಯತೆಯ ತಾಣವಾಗಿದೆ ಎಂದೂ ಪ್ರಧಾನಮಂತ್ರಿ ಒತ್ತಿ ಹೇಳಿದರು.
"ಭಾರತವು ಅಭೂತಪೂರ್ವ ಮತ್ತು ಅಸಾಧಾರಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ, 25 ಕೋಟಿ ಜನರು ಬಡತನವನ್ನು ಮೀರಿದ್ದಾರೆ ಮತ್ತು ಈಗ ನವ ಮಧ್ಯಮ ವರ್ಗದ ಭಾಗವಾಗಿದ್ದಾರೆ – ಇದು ಭಾರತದ ಅತ್ಯಂತ ಶಕ್ತಿಯುತ ಮತ್ತು ಮಹತ್ವಾಕಾಂಕ್ಷೆಯ ವಿಭಾಗ" ಎಂದು ಪ್ರಧಾನಮಂತ್ರಿ ವಿಶ್ಲೇಷಿಸಿದರು, ಈ ವರ್ಗದ ಆಕಾಂಕ್ಷೆಗಳು ಆಹಾರ ಪ್ರವೃತ್ತಿಗಳನ್ನು ರೂಪಿಸುತ್ತಿವೆ ಮತ್ತು ಬೇಡಿಕೆಯನ್ನು ಹೆಚ್ಚಿಸುತ್ತಿವೆ ಎಂದವರು ಹೇಳಿದರು. ಭಾರತದ ಪ್ರತಿಭಾನ್ವಿತ ಯುವಜನರು ವಿವಿಧ ಕ್ಷೇತ್ರಗಳಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿದ್ದಾರೆ ಮತ್ತು ಆಹಾರ ವಲಯವು ಇದಕ್ಕೆ ಹೊರತಾಗಿಲ್ಲ ಎಂದು ಅವರು ಒತ್ತಿ ಹೇಳಿದರು. "ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ (ನವೋದ್ಯಮ) ಪರಿಸರ ವ್ಯವಸ್ಥೆಯಾಗಿದ್ದು, ಆಹಾರ ಮತ್ತು ಕೃಷಿಯಲ್ಲಿ ಅನೇಕ ಸ್ಟಾರ್ಟ್-ಅಪ್ ಗಳು ಕಾರ್ಯನಿರ್ವಹಿಸುತ್ತಿವೆ " ಎಂದು ಶ್ರೀ ಮೋದಿ ನುಡಿದರು, ಎ.ಐ., ಇ-ಕಾಮರ್ಸ್, ಡ್ರೋನ್‌ಗಳು ಮತ್ತು ಅಪ್ಲಿಕೇಶನ್‌ಗಳಂತಹ ತಂತ್ರಜ್ಞಾನಗಳನ್ನು ಈ ವಲಯಕ್ಕೆ ಸಂಯೋಜಿಸಲಾಗುತ್ತಿದೆ, ಪೂರೈಕೆ ಸರಪಳಿಗಳು, ಚಿಲ್ಲರೆ ವ್ಯಾಪಾರ ಮತ್ತು ಸಂಸ್ಕರಣಾ ವಿಧಾನಗಳನ್ನು ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಾರತವು ವೈವಿಧ್ಯತೆ, ಬೇಡಿಕೆ ಮತ್ತು ನಾವೀನ್ಯತೆಯನ್ನು ನೀಡುತ್ತದೆ ಎಂದ ಅವರು, ಇವು ಹೂಡಿಕೆಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡುವ ಎಲ್ಲಾ ಪ್ರಮುಖ ಅಂಶಗಳು ಎಂದೂ ವಿವರಿಸಿದರು. ಕೆಂಪು ಕೋಟೆಯಿಂದ ನೀಡಿದ ತಮ್ಮ ಸಂದೇಶವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ, ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ವಿಸ್ತರಿಸಲು ಇದು ಸರಿಯಾದ ಸಮಯ ಎಂದರು.
ಇಪ್ಪತ್ತೊಂದನೇ ಶತಮಾನದ ಸವಾಲುಗಳು ಎಲ್ಲರಿಗೂ ತಿಳಿದಿವೆ ಮತ್ತು ಜಾಗತಿಕ ಸವಾಲುಗಳು ಉದ್ಭವಿಸಿದಾಗಲೆಲ್ಲಾ ಭಾರತವು ಸಕಾರಾತ್ಮಕ ಪಾತ್ರ ವಹಿಸಲು ನಿರಂತರವಾಗಿ ಮುಂದೆ ಬಂದಿದೆ ಎಂಬುದನ್ನು ಗುರುತಿಸಿದ ಶ್ರೀ ಮೋದಿ, ಜಾಗತಿಕ ಆಹಾರ ಭದ್ರತೆಗೆ ಭಾರತವು ಸಕ್ರಿಯವಾಗಿ ಕೊಡುಗೆ ನೀಡುವುದನ್ನು ಮುಂದುವರೆಸಿದೆ ಎಂದು ಒತ್ತಿ ಹೇಳಿದರು. ಸರ್ಕಾರದ ನೀತಿಗಳಿಂದ ಬೆಂಬಲಿತವಾದ ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಕಠಿಣ ಪರಿಶ್ರಮದಿಂದಾಗಿ ಭಾರತದ ಕೃಷಿ ಕ್ಷೇತ್ರದ ಬಲವು ಬೆಳೆದಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಆಹಾರ ಧಾನ್ಯ ಉತ್ಪಾದನೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಭಾರತವು ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಹಾಲು ಪೂರೈಕೆಯಲ್ಲಿ 25% ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಸಿರಿ ಧಾನ್ಯಗಳ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಮತ್ತು ಹಣ್ಣುಗಳು, ತರಕಾರಿಗಳು ಹಾಗು ಮೀನುಗಾರಿಕೆಯಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಬೆಳೆ ಬಿಕ್ಕಟ್ಟು ಅಥವಾ ಪೂರೈಕೆ ಸರಪಳಿ ಅಡ್ಡಿ ಉಂಟಾದಾಗಲೆಲ್ಲಾ ಭಾರತವು ದೃಢವಾಗಿ ನಿಂತು ತನ್ನ ಜವಾಬ್ದಾರಿಯನ್ನು ಪೂರೈಸುತ್ತದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು.
ಜಾಗತಿಕ ಹಿತಾಸಕ್ತಿಯಲ್ಲಿ ಭಾರತ ತನ್ನ ಸಾಮರ್ಥ್ಯ ಮತ್ತು ಕೊಡುಗೆಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸರ್ಕಾರವು ಪ್ರತಿಯೊಬ್ಬ ಪಾಲುದಾರರನ್ನು ತೊಡಗಿಸಿಕೊಳ್ಳುವ ಮೂಲಕ ಸಂಪೂರ್ಣ ಆಹಾರ ಮತ್ತು ಪೌಷ್ಟಿಕಾಂಶ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಹೇಳಿದರು. ಆಹಾರ ಸಂಸ್ಕರಣಾ ವಲಯವನ್ನು ಸಕ್ರಿಯವಾಗಿ ಉತ್ತೇಜಿಸಲಾಗುತ್ತಿದೆ, ಈಗ 100% ಎಫ್.ಡಿ.ಐ. (FDI ) ಗೆ ಅವಕಾಶ ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಪಿ.ಎಲ್.ಐ. ಯೋಜನೆ ಮತ್ತು ಮೆಗಾ ಆಹಾರ ಪಾರ್ಕ್‌ಗಳ ವಿಸ್ತರಣೆಯಿಂದ ಈ ವಲಯವು ಪ್ರಯೋಜನ ಪಡೆದಿದೆ ಎಂಬುದರತ್ತ ಅವರು ಗಮನ ಸೆಳೆದರು. ಭಾರತವು ಪ್ರಸ್ತುತ ವಿಶ್ವದ ಅತಿದೊಡ್ಡ ಸಂಗ್ರಹಣಾ ಮೂಲಸೌಕರ್ಯ ಯೋಜನೆಯನ್ನು ಕೈಗೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ಈ ಸರ್ಕಾರದ ಪ್ರಯತ್ನಗಳು ಫಲಿತಾಂಶಗಳನ್ನು ನೀಡುತ್ತಿವೆ ಎಂದು ಅವರು ದೃಢಪಡಿಸಿದರು, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸಂಸ್ಕರಣಾ ಸಾಮರ್ಥ್ಯ ಇಪ್ಪತ್ತು ಪಟ್ಟು ಹೆಚ್ಚಾಗಿದೆ ಮತ್ತು ಸಂಸ್ಕರಿಸಿದ ಆಹಾರದ ರಫ್ತು ದ್ವಿಗುಣಗೊಂಡಿದೆ ಎಂದರು..
ಭಾರತದ ಆಹಾರ ಪೂರೈಕೆ ಮತ್ತು ಮೌಲ್ಯ ಸರಪಳಿಯಲ್ಲಿ ರೈತರು, ಜಾನುವಾರು ಸಾಕಣೆದಾರರು, ಮೀನುಗಾರರು ಮತ್ತು ಸಣ್ಣ ಸಂಸ್ಕರಣಾ ಘಟಕಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಕಳೆದ ದಶಕದಲ್ಲಿ ಸರ್ಕಾರ ಈ ಎಲ್ಲಾ ಪಾಲುದಾರರನ್ನು ಬಲಪಡಿಸಿದೆ ಎಂದು ಹೇಳಿದರು. ಭಾರತದಲ್ಲಿ ಶೇ. 85 ಕ್ಕೂ ಹೆಚ್ಚು ರೈತರು ಸಣ್ಣ ಅಥವಾ ಅತಿಸಣ್ಣ ರೈತರಾಗಿದ್ದು, ಅವರನ್ನು ಸಬಲೀಕರಣಗೊಳಿಸಲು ನೀತಿಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ನುಡಿದರು. ಇಂದು, ಈ ಸಣ್ಣ ರೈತರು ಮಾರುಕಟ್ಟೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಭಾರತದಾದ್ಯಂತ ಕೋಟ್ಯಂತರ ಗ್ರಾಮಸ್ಥರನ್ನು ಒಳಗೊಂಡ ಸ್ವಸಹಾಯ ಗುಂಪುಗಳು ಕಿರು/ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುತ್ತಿವೆ ಎಂದು ತಿಳಿಸಿದ ಶ್ರೀ ಮೋದಿ, ಸರ್ಕಾರವು ಈ ಗುಂಪುಗಳಿಗೆ ಕ್ರೆಡಿಟ್-ಸಂಬಂಧಿತ ಸಬ್ಸಿಡಿಗಳ ಮೂಲಕ ಬೆಂಬಲ ನೀಡುತ್ತಿದೆ ಮತ್ತು ₹800 ಕೋಟಿಗಳನ್ನು ಈಗಾಗಲೇ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಸರ್ಕಾರವು ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ವಿಸ್ತರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು, 2014 ರಿಂದ 10,000 ಎಫ್‌ಪಿಒಗಳನ್ನು ಸ್ಥಾಪಿಸಲಾಗಿದ್ದು, ಲಕ್ಷಾಂತರ ಸಣ್ಣ ರೈತರನ್ನು ಜೋಡಿಸಲಾಗಿದೆ. ಈ ಎಫ್‌ಪಿಒಗಳು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ತರಲು ಸಹಾಯ ಮಾಡುತ್ತವೆ ಮತ್ತು ಬ್ರಾಂಡ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಹಾರ ಸಂಸ್ಕರಣಾ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಗಮನಿಸಿದರು. ಭಾರತದ ಎಫ್‌ಪಿಒಗಳ ಬಲವು ಆಶ್ಚರ್ಯಕರವಾಗಿದೆ, ಈಗ ಆನ್‌ಲೈನ್ ವೇದಿಕೆಗಳಲ್ಲಿ 15,000 ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾಶ್ಮೀರದಿಂದ ಬಾಸ್ಮತಿ ಅಕ್ಕಿ, ಕೇಸರಿ ಮತ್ತು ವಾಲ್ನಟ್ಸ್; ಹಿಮಾಚಲದಿಂದ ಜಾಮ್ ಮತ್ತು ಸೇಬಿನ ರಸ; ರಾಜಸ್ಥಾನದಿಂದ ನವಣೆ ಕುಕೀಸ್; ಮಧ್ಯಪ್ರದೇಶದಿಂದ ಸೋಯಾ ಗಟ್ಟಿಗಳು; ಬಿಹಾರದಿಂದ ಸೂಪರ್‌ಫುಡ್ ಮಖಾನಾ; ಮಹಾರಾಷ್ಟ್ರದಿಂದ ಕಡಲೆಕಾಯಿ ಎಣ್ಣೆ ಮತ್ತು ಬೆಲ್ಲ; ಹಾಗು ಕೇರಳದಿಂದ ಬಾಳೆಹಣ್ಣು ಚಿಪ್ಸ್ ಮತ್ತು ತೆಂಗಿನ ಎಣ್ಣೆಯಂತಹ ಉದಾಹರಣೆಗಳನ್ನು ಅವರು ಪಟ್ಟಿ ಮಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಎಫ್‌ಪಿಒಗಳು ಭಾರತದ ಕೃಷಿ ವೈವಿಧ್ಯತೆಯನ್ನು ಪ್ರತಿಯೊಂದು ಮನೆಗೂ ತಲುಪಿಸುತ್ತಿವೆ ಎಂದು ಅವರು ದೃಢಪಡಿಸಿದರು. 1,100 ಕ್ಕೂ ಹೆಚ್ಚು ಎಫ್‌ಪಿಒಗಳು ವಾರ್ಷಿಕ ₹ 1 ಕೋಟಿ ಮೀರಿದ ವಹಿವಾಟಿನೊಂದಿಗೆ ಕೋಟ್ಯಾಧಿಪತಿಗಳಾಗಿವೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಹಾಗು ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ಹಂಚಿಕೊಂಡರು.
ಭಾರತದಲ್ಲಿ ಎಫ್.ಪಿ.ಒ.ಗಳ ಜೊತೆಗೆ ಸಹಕಾರಿ ಸಂಸ್ಥೆಗಳು ಅಗಾಧ ಶಕ್ತಿಯನ್ನು ಹೊಂದಿವೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಈ ವರ್ಷ ಅಂತರರಾಷ್ಟ್ರೀಯ ಸಹಕಾರಿ ವರ್ಷವಾಗಿದ್ದು, ಭಾರತದೊಳಗೆ ಸಹಕಾರಿ ಸಂಸ್ಥೆಗಳು ಡೈರಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸಬಲೀಕರಣಗೊಳಿಸುತ್ತಿವೆ ಎಂದು ಅವರು ಗಮನಿಸಿದರು. ಅವುಗಳ ಪ್ರಾಮುಖ್ಯತೆಯನ್ನು ಗುರುತಿಸಿದ ಪ್ರಧಾನಮಂತ್ರಿ, ಸಹಕಾರಿ ಸಂಸ್ಥೆಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲು ಮೀಸಲಾದ ಸಚಿವಾಲಯವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಈ ವಲಯಕ್ಕೆ ತೆರಿಗೆ ಮತ್ತು ಪಾರದರ್ಶಕತೆ ಸುಧಾರಣೆಗಳನ್ನು ಸಹ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಈ ನೀತಿ ಮಟ್ಟದ ಬದಲಾವಣೆಗಳ ಪರಿಣಾಮವಾಗಿ, ಸಹಕಾರಿ ವಲಯವು ನವೀಕೃತ ಶಕ್ತಿಯನ್ನು ಪಡೆದುಕೊಂಡಿದೆ ಎಂದರು.
ಸಮುದ್ರ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಭಾರತದ ಪ್ರಭಾವಶಾಲಿ ಬೆಳವಣಿಗೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಕಳೆದ ದಶಕದಲ್ಲಿ ಸರ್ಕಾರವು ಮೀನುಗಾರಿಕೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ವಿಸ್ತರಿಸಿದೆ ಮತ್ತು ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ನೆರವು ಸೇರಿದಂತೆ ಮೀನುಗಾರರಿಗೆ ಹಣಕಾಸಿನ ಬೆಂಬಲವನ್ನು ನೀಡಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ, ಸಮುದ್ರಾಹಾರ ಉತ್ಪಾದನೆ ಮತ್ತು ರಫ್ತು ಎರಡೂ ಹೆಚ್ಚಾಗಿದೆ. ಈ ವಲಯವು ಈಗ ಸುಮಾರು ಮೂರು ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ ಎಂದು ಪ್ರಧಾನಮಂತ್ರಿ ಗಮನಿಸಿದರು. ಆಧುನಿಕ ಸಂಸ್ಕರಣಾ ಘಟಕಗಳು, ಕೋಲ್ಡ್ ಚೈನ್ ಮೂಲಸೌಕರ್ಯ ಮತ್ತು ಸ್ಮಾರ್ಟ್ ಬಂದರುಗಳಲ್ಲಿ ಹೂಡಿಕೆ ಮಾಡುವುದರೊಂದಿಗೆ ಸಮುದ್ರ ಉತ್ಪನ್ನ ಸಂಸ್ಕರಣೆಯನ್ನು ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಒತ್ತಿ ಹೇಳಿದರು.
ಬೆಳೆಗಳನ್ನು ಸಂರಕ್ಷಿಸಲು ಸರ್ಕಾರ ಆಧುನಿಕ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ರೈತರು ಆಹಾರ ವಿಕಿರಣ ತಂತ್ರಗಳೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ, ಇದು ಕೃಷಿ ಉತ್ಪನ್ನಗಳ ಜೀವಿತಾವಧಿಯನ್ನು ವಿಸ್ತರಿಸಿದೆ ಮತ್ತು ಆಹಾರ ಭದ್ರತೆಯನ್ನು ಬಲಪಡಿಸಿದೆ ಎಂದು ಒತ್ತಿ ಹೇಳಿದರು. ಈ ಕೆಲಸದಲ್ಲಿ ತೊಡಗಿರುವ ಘಟಕಗಳು ಸರ್ಕಾರದಿಂದ ಸಮಗ್ರ ಬೆಂಬಲವನ್ನು ಪಡೆಯುತ್ತಿವೆ ಎಂದು ಅವರು ಹೇಳಿದರು.
"ಭಾರತವು ಹೊಸ ನಾವೀನ್ಯತೆ ಮತ್ತು ಸುಧಾರಣೆಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ, ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು, ಈ ಸುಧಾರಣೆಗಳು ರೈತರಿಗೆ ಕಡಿಮೆ ವೆಚ್ಚ ಮತ್ತು ಹೆಚ್ಚಿನ ಆದಾಯದ ಭರವಸೆ ನೀಡುತ್ತವೆ ಎಂದು ಒತ್ತಿ ಹೇಳಿದರು. ಬೆಣ್ಣೆ ಮತ್ತು ತುಪ್ಪವು ಈಗ ಕೇವಲ 5% ಜಿಎಸ್‌ಟಿಯನ್ನು ಮಾತ್ರ ಆಕರ್ಷಿಸುತ್ತದೆ, ಇದು ಗಣನೀಯ ಪರಿಹಾರವನ್ನು ನೀಡುತ್ತದೆ, ಹಾಲಿನ ಡಬ್ಬಿಗಳಿಗೂ ಕೇವಲ 5% ತೆರಿಗೆ ವಿಧಿಸಲಾಗುತ್ತದೆ, ಇದು ರೈತರು ಮತ್ತು ಉತ್ಪಾದಕರಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸುತ್ತದೆ. ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶವನ್ನು ಖಾತರಿಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಸುಧಾರಣೆಗಳಿಂದ ಆಹಾರ ಸಂಸ್ಕರಣಾ ವಲಯವು ಗಮನಾರ್ಹವಾಗಿ ಲಾಭ ಪಡೆಯಲಿದೆ ಎಂದು ಶ್ರೀ ಮೋದಿ ಹೇಳಿದರು, ಸೇವಿಸಲು ಸಿದ್ಧ ಮತ್ತು ಸಂರಕ್ಷಿತ ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳು ಈಗ 5% ಜಿಎಸ್‌ಟಿ ಸ್ಲ್ಯಾಬ್ ಅಡಿಯಲ್ಲಿವೆ. 90% ಕ್ಕಿಂತ ಹೆಚ್ಚು ಸಂಸ್ಕರಿಸಿದ ಆಹಾರ ಉತ್ಪನ್ನಗಳು ಶೂನ್ಯ ಅಥವಾ 5% ತೆರಿಗೆ ವರ್ಗದ ಅಡಿಯಲ್ಲಿ ಬರುತ್ತವೆ ಎಂದು ಅವರು ಹೇಳಿದರು. ಜೈವಿಕ ಕೀಟನಾಶಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ, ಇದು ಜೈವಿಕ ಒಳಹರಿವುಗಳನ್ನು ಕೈಗೆಟುಕುವಂತೆ ಮಾಡುತ್ತದೆ ಮತ್ತು ಸಣ್ಣ ಸಾವಯವ ರೈತರು ಮತ್ತು ಎಫ್‌ಪಿಒಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಈ ಕಾಲದ ಬೇಡಿಕೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಉತ್ಪನ್ನಗಳನ್ನು ತಾಜಾ ಮತ್ತು ಉತ್ತಮ ಗುಣಮಟ್ಟದ್ದಾಗಿ ಇಡುವುದು ಅತ್ಯಗತ್ಯವಾದರೂ, ಪ್ರಕೃತಿಯ ಬಗೆಗಿನ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವುದು ಅಷ್ಟೇ ಮುಖ್ಯ ಎಂದು ಹೇಳಿದರು. ಈ ಉತ್ಸಾಹದಲ್ಲಿ, ಸರ್ಕಾರವು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಿದೆ. ಜೈವಿಕ ವಿಘಟನೀಯ ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ನಾವೀನ್ಯತೆಗಳಲ್ಲಿ ಹೂಡಿಕೆ ಮಾಡುವಂತೆ ಎಲ್ಲಾ ಉದ್ಯಮ ಪಾಲುದಾರರನ್ನು ಪ್ರಧಾನ ಮಂತ್ರಿ ಒತ್ತಾಯಿಸಿದರು. ಭಾರತವು ಮುಕ್ತ ಮನಸ್ಸಿನಿಂದ ಜಗತ್ತಿಗೆ ತನ್ನ ಬಾಗಿಲುಗಳನ್ನು ತೆರೆದಿದೆ ಮತ್ತು ಆಹಾರ ಸರಪಳಿಯಾದ್ಯಂತ ಹೂಡಿಕೆದಾರರಿಗೆ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿದೆ ಎಂದು ಅವರು ದೃಢಪಡಿಸಿದರು. ಸಹಯೋಗಕ್ಕಾಗಿ ಭಾರತದ ಸಿದ್ಧತೆಯನ್ನು ಪುನರುಚ್ಚರಿಸುವ ಮೂಲಕ ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ರಷ್ಯಾದ ಉಪಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಡಿಮಿಟ್ರಿ ಪತ್ರುಶೇವ್, ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್, ಶ್ರೀ ರವನೀತ್ ಸಿಂಗ್, ಶ್ರೀ ಪ್ರತಾಪ್‌ರಾವ್ ಜಾಧವ್ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವರ್ಲ್ಡ್ ಫುಡ್ ಇಂಡಿಯಾದ 2025ರ ಆವೃತ್ತಿಯು ಸೆಪ್ಟೆಂಬರ್ 25 ರಿಂದ 28 ರವರೆಗೆ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಇದು ಆಹಾರ ಸಂಸ್ಕರಣಾ ವಲಯದಲ್ಲಿ ಭಾರತದ ಸಾಮರ್ಥ್ಯ, ಆಹಾರ ಸುಸ್ಥಿರತೆ ಮತ್ತು ಪೌಷ್ಟಿಕ ಹಾಗು ಸಾವಯವ ಆಹಾರ ಉತ್ಪಾದನೆಯನ್ನು ಪ್ರದರ್ಶಿಸುತ್ತದೆ.
ವರ್ಲ್ಡ್ ಫುಡ್ ಇಂಡಿಯಾದಲ್ಲಿ, ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್‌ನ ಔಪಚಾರಿಕೀಕರಣ (PMFME) ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣಾ ವಲಯದಲ್ಲಿ ಸುಮಾರು 26,000 ಫಲಾನುಭವಿಗಳಿಗೆ 770 ಕೋಟಿ ರೂ.ಗಳಿಗೂ ಹೆಚ್ಚಿನ ಕ್ರೆಡಿಟ್ ಲಿಂಕ್ಡ್ ಬೆಂಬಲವನ್ನು ಒದಗಿಸಲಾಗುವುದು.
ವರ್ಲ್ಡ್ ಫುಡ್ ಇಂಡಿಯಾವು ಸಿಇಒ ದುಂಡುಮೇಜಿನ ಸಭೆಗಳು, ತಾಂತ್ರಿಕ ಅಧಿವೇಶನಗಳು, ಪ್ರದರ್ಶನಗಳು ಮತ್ತು ಬಿ2ಬಿ (ವ್ಯವಹಾರದಿಂದ ವ್ಯವಹಾರಕ್ಕೆ), ಬಿ2ಜಿ (ವ್ಯವಹಾರದಿಂದ ಸರ್ಕಾರಕ್ಕೆ), ಮತ್ತು ಜಿ2ಜಿ (ಸರ್ಕಾರದಿಂದ ಸರ್ಕಾರಕ್ಕೆ) ಸಭೆಗಳನ್ನು ಒಳಗೊಂಡಂತೆ ಬಹು ವ್ಯವಹಾರ ಸಂವಾದಗಳನ್ನು ಒಳಗೊಂಡಿರುತ್ತದೆ. ಇದು ಫ್ರಾನ್ಸ್, ಜರ್ಮನಿ, ಇರಾನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಡೆನ್ಮಾರ್ಕ್, ಇಟಲಿ, ಥೈಲ್ಯಾಂಡ್, ಇಂಡೋನೇಷ್ಯಾ, ತೈವಾನ್, ಬೆಲ್ಜಿಯಂ, ಟಾಂಜಾನಿಯಾ, ಎರಿಟ್ರಿಯಾ, ಸೈಪ್ರಸ್, ಅಫ್ಘಾನಿಸ್ತಾನ, ಚೀನಾ ಮತ್ತು ಯುಎಸ್ಎ ಸೇರಿದಂತೆ ಪ್ರದರ್ಶನದಲ್ಲಿ ಪಾಲ್ಗೊಂಡ 21 ದೇಶಗಳು ಮತ್ತು ಪ್ರದರ್ಶನಾಂಗಣದಲ್ಲಿರುವ 150 ಅಂತರರಾಷ್ಟ್ರೀಯ ಪ್ರತಿನಿಧಿಗಳನ್ನು ಒಳಗೊಂಡಿದೆ.
ವರ್ಲ್ಡ್ ಫುಡ್ ಇಂಡಿಯಾ ಬಹು ಶೀರ್ಷಿಕೆಯ ಅಧಿವೇಶನಗಳನ್ನು ಅಂದರೆ ಜಾಗತಿಕ ಆಹಾರ ಸಂಸ್ಕರಣಾ ಕೇಂದ್ರವಾಗಿ ಭಾರತ, ಆಹಾರ ಸಂಸ್ಕರಣೆಯಲ್ಲಿ ಸುಸ್ಥಿರತೆ ಮತ್ತು ನಿವ್ವಳ ಶೂನ್ಯ, ಆಹಾರ ಸಂಸ್ಕರಣೆಯಲ್ಲಿ ಗಡಿಗಳು, ಭಾರತದ ಸಾಕುಪ್ರಾಣಿ ಆಹಾರ ಉದ್ಯಮ, ಪೋಷಣೆ ಮತ್ತು ಆರೋಗ್ಯಕ್ಕಾಗಿ ಸಂಸ್ಕರಿಸಿದ ಆಹಾರಗಳು, ಸಸ್ಯ ಆಧಾರಿತ ಆಹಾರಗಳು, ನ್ಯೂಟ್ರಾಸ್ಯುಟಿಕಲ್ಸ್, ವಿಶೇಷ ಆಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡ ಬಹು ವಿಷಯಾಧಾರಿತ ಅಧಿವೇಶನಗಳನ್ನು ಸಹ ಆಯೋಜಿಸುತ್ತದೆ. ಇದು 14 ಸಭಾಂಗಣಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ನಿರ್ದಿಷ್ಟ ವಿಷಯಗಳಿಗೆ ಮೀಸಲಾಗಿರುತ್ತದೆ ಮತ್ತು ಸುಮಾರು 100,000 ಸಂದರ್ಶಕರನ್ನು ಆಕರ್ಷಿಸುತ್ತದೆ.
*****
(Release ID: 2171559)
Visitor Counter : 7
Read this release in:
English
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam