ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಅವರಿಂದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ
ಶ್ರೀ ಮೋಹನಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಚಲನಚಿತ್ರಕ್ಕೆ ಜನಪ್ರಿಯತೆ ಒಳ್ಳೆಯದೇ ಆಗಿರಬಹುದು, ಆದರೆ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದು, ವಿಶೇಷವಾಗಿ ಯುವ ಪೀಳಿಗೆಗೆ, ಇನ್ನೂ ಉತ್ತಮ: ರಾಷ್ಟ್ರಪತಿ ದ್ರೌಪದಿ ಮುರ್ಮು
Posted On:
23 SEP 2025 8:00PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 23, 2025) ನವದೆಹಲಿಯಲ್ಲಿ ವಿವಿಧ ವಿಭಾಗಗಳಲ್ಲಿ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಅವರು 2023ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಶ್ರೀ ಮೋಹನ್ ಲಾಲ್ ಅವರಿಗೆ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಎಲ್ಲಾ ಪ್ರಶಸ್ತಿ ವಿಜೇತರನ್ನು ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಶ್ರೀ ಮೋಹನ್ ಲಾಲ್ ಅವರನ್ನು ಅಭಿನಂದಿಸಿದರು. ಮೋಹನ್ ಲಾಲ್ ಅವರು ಅತ್ಯಂತ ಮೃದುವಾದ ಮತ್ತು ಅದೇ ರೀತಿ ಕಠಿಣವಾದ ಭಾವನೆಗಳನ್ನು ಸಲೀಸಾಗಿ ಚಿತ್ರಿಸಿದ್ದಾರೆ, ಇದು ಓರ್ವ ಸಂಪೂರ್ಣ ನಟನ ಚಿತ್ರಣವನ್ನು ರೂಪಿಸಿದೆ ಎಂದು ಅವರು ಹೇಳಿದರು.

ಮಹಿಳಾ ಕೇಂದ್ರಿತ ಉತ್ತಮ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ ಮತ್ತು ಪ್ರಶಸ್ತಿಗಳನ್ನು ಪಡೆಯುತ್ತಿವೆ ಎಂದು ರಾಷ್ಟ್ರಪತಿ ಅವರು ಸಂತೋಷ ವ್ಯಕ್ತಪಡಿಸಿದರು. ಮಹಿಳೆಯರು ಬಡತನ, ಪಿತೃಪ್ರಭುತ್ವ ಅಥವಾ ಪೂರ್ವಾಗ್ರಹದ ವಿರುದ್ಧ ಸ್ವಲ್ಪ ಮಟ್ಟಿಗೆ ಹೋರಾಡುವುದನ್ನು ನಾವೆಲ್ಲರೂ ನೋಡುತ್ತೇವೆ ಎಂದು ಅವರು ಹೇಳಿದರು. ಇಂದು ಚಲನಚಿತ್ರ ಪ್ರಶಸ್ತಿ ಪಡೆಯುತ್ತಿರುವ ಚಿತ್ರಗಳಲ್ಲಿ ತಮ್ಮ ಮಕ್ಕಳಲ್ಲಿ ನೈತಿಕತೆಯನ್ನು ರೂಪಿಸುವ ತಾಯಂದಿರ ಕಥೆಗಳು, ಸಾಮಾಜಿಕ ಸ್ಟೀರಿಯೊಟೈಪ್‌ಗಳನ್ನು/ಬಂಧನ ಮಾದರಿಗಳನ್ನು ಎದುರಿಸಲು ಮಹಿಳೆಯರು ಒಂದಾಗುವುದು, ಮನೆ, ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಯ ಸಂಕೀರ್ಣತೆಗಳ ನಡುವೆ ಮಹಿಳೆಯರ ಅವಸ್ಥೆ ಮತ್ತು ಪಿತೃಪ್ರಭುತ್ವದ ಅಸಮಾನತೆಗಳ ವಿರುದ್ಧ ಧ್ವನಿ ಎತ್ತುವ ಧೈರ್ಯಶಾಲಿ ಮಹಿಳೆಯರ ಕಥೆಗಳು ಸೇರಿವೆ ಎಂಬುದರತ್ತ ಅವರು ಗಮನ ಸೆಳೆದರು. ಅವರು ಅಂತಹ ಸೂಕ್ಷ್ಮ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿದರು.

ವಿಶ್ವದ ಅತಿದೊಡ್ಡ ಚಲನಚಿತ್ರೋದ್ಯಮವು ತನ್ನ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ಕಲಾ ಪ್ರಕಾರದ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ಸಮಾಜವನ್ನು ಪ್ರತಿನಿಧಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಸಿನೆಮಾದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರೂ ಭಾರತೀಯ ಪ್ರಜ್ಞೆಯನ್ನು ಹೊಂದಿದ್ದಾರೆ, ಎಲ್ಲಾ ಸ್ಥಳೀಯ ಸಂದರ್ಭಗಳನ್ನು ಸಂಪರ್ಕಿಸುವ ಭಾರತೀಯ ಸಂವೇದನೆಯನ್ನು ಹೊಂದಿದ್ದಾರೆ ಎಂದು ಅವರು ಸಂತೋಷಪಟ್ಟರು. ಭಾರತೀಯ ಸಾಹಿತ್ಯವನ್ನು ಅನೇಕ ಭಾಷೆಗಳಲ್ಲಿ ರಚಿಸಲಾದಂತೆಯೇ, ಭಾರತೀಯ ಸಿನೆಮಾವು ಅನೇಕ ಭಾಷೆಗಳು, ಉಪಭಾಷೆಗಳು, ಪ್ರದೇಶಗಳು ಮತ್ತು ಸ್ಥಳೀಯ ಪರಿಸರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ಚಲನಚಿತ್ರಗಳು ಸ್ಥಳೀಯ ಮತ್ತು ರಾಷ್ಟ್ರೀಯ ಎರಡೂ ಆಗಿವೆ ಎಂದು ಅವರು ಹೇಳಿದರು.

ಸಿನೆಮಾ ಕೇವಲ ಒಂದು ಉದ್ಯಮವಲ್ಲ; ಸಮಾಜ ಮತ್ತು ರಾಷ್ಟ್ರದಲ್ಲಿ ಜಾಗೃತಿ ಮೂಡಿಸಲು ಮತ್ತು ನಾಗರಿಕರನ್ನು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡಲು ಇದು ಪ್ರಬಲ ಮಾಧ್ಯಮವಾಗಿದೆ ಎಂದು ರಾಷ್ಟ್ರಪತಿಗಳು ಒತ್ತಿ ಹೇಳಿದರು. ಜನಪ್ರಿಯತೆಯು ಚಲನಚಿತ್ರಕ್ಕೆ ಒಳ್ಳೆಯದಾಗಿರಬಹುದು, ಆದರೆ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವುದು, ವಿಶೇಷವಾಗಿ ಯುವ ಪೀಳಿಗೆಗೆ, ಇನ್ನೂ ಉತ್ತಮವಾಗಿದೆ ಎಂದು ಅವರು ಹೇಳಿದರು. ಭಾರತೀಯ ಚಲನಚಿತ್ರಗಳು ಹೆಚ್ಚಿನ ಸ್ವೀಕಾರವನ್ನು ಪಡೆಯುವಂತೆ, ಅವುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಅವರಿಗೆ ಮನ್ನಣೆ ಸಿಗುವಂತೆ ನೋಡಿಕೊಳ್ಳಲು ಚಲನಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಆಗ್ರಹಿಸಿದರು.

Please click here to see the President's Speech-
*****
(Release ID: 2170402)
Visitor Counter : 3