ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು
ಸಿನಿಮಾ ಜನಪ್ರಿಯವಾಗುವುದು ಮಾತ್ರವಲ್ಲದೆ ಸಾರ್ವಜನಿಕ ಹಿತಾಸಕ್ತಿಗೂ ಪೂರಕವಾಗಿರಬೇಕು ಎಂದು ರಾಷ್ಟ್ರಪತಿಗಳು ಹೇಳಿದರು
ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರಪತಿ ಮುರ್ಮು ಶ್ಲಾಘಿಸಿದರು ಮತ್ತು ಪರದೆಯ ಮೇಲೆ ಮತ್ತು ಹೊರಗೆ ಸಮಾನ ಅವಕಾಶಗಳಿಗಾಗಿ ಒತ್ತಾಯಿಸಿದರು
ಬಹುಮುಖ ಪ್ರತಿಭೆ ಮೋಹನ್ ಲಾಲ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಿನಿಮಾಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು
ಶ್ರೀ ಮೋಹನ್ ಲಾಲ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು "ಮಾಂತ್ರಿಕ ಮತ್ತು ಪವಿತ್ರ" ಎಂದು ಬಣ್ಣಿಸಿದರು, ಸಿನಿಮಾವನ್ನು ತಮ್ಮ ಆತ್ಮದ ಹೃದಯ ಬಡಿತ ಎಂದು ಕರೆದರು ಮತ್ತು ಈ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮದ ದಿಗ್ಗಜರಿಗೆ ಅರ್ಪಿಸಿದರು
ಸರ್ಕಾರವು ದೇಶೀಯ ಚಲನಚಿತ್ರ ಉಪಕರಣಗಳನ್ನು ಉತ್ತೇಜಿಸುತ್ತದೆ, ಲೈವ್ ಕಾನ್ಸರ್ಟ್ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮಾದರಿ ರಾಜ್ಯ ಸಿನಿಮಾ ನಿಯಂತ್ರಣ ನಿಯಮಗಳನ್ನು ರೂಪಿಸುತ್ತದೆ: ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್
Posted On:
23 SEP 2025 8:08PM by PIB Bengaluru
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿಯ ವಿಜ್ಞಾನ ಭವನವನ್ನು ಹೆಮ್ಮೆ, ಚಪ್ಪಾಳೆ ಮತ್ತು ಎದ್ದು ನಿಂತು ಗೌರವಿಸುವ ಕ್ಷಣಗಳೊಂದಿಗೆ ಬೆಳಗಿಸಿತು. ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕಲಾವಿದರು, ಗಣ್ಯರು ಮತ್ತು ಅಭಿಮಾನಿಗಳ ಈ ಸಭಾಂಗಣವು ರಾಷ್ಟ್ರದ ಹೃದಯವನ್ನು ರೂಪಿಸಿದ ಕಥೆಗಳನ್ನು ಸಂಭ್ರಮಿಸುವ ಭಾವನೆಯಿಂದ ನೆರೆದಿತ್ತು.

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೇರುನಟ ಶ್ರೀ ಮೋಹನ್ ಲಾಲ್ ಅವರಿಗೆ ಪ್ರದಾನ ಮಾಡಿದ ರಾಷ್ಟ್ರಪತಿಯವರು, ಶ್ರೀ ಮೋಹನ್ ಲಾಲ್ ಅವರು ತಮ್ಮ ಅಸಾಧಾರಣ ಪ್ರತಿಭೆಯ ಪ್ರದರ್ಶನ ಮತ್ತು ವಿಶಾಲ ಕೆಲಸ ಕಾರ್ಯಗಳ ಮೂಲಕ ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದರು. ರಾಷ್ಟ್ರಪತಿಯವರು ಅವರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಂಗಭೂಮಿಯಿಂದ ಸಿನೆಮಾದವರೆಗೆ ಶ್ರೀ ಮೋಹನ್ ಲಾಲ್ ಅವರ ಗಮನಾರ್ಹ ಪ್ರಯಾಣ ಮತ್ತು ಮಹಾಭಾರತವನ್ನು ಆಧರಿಸಿದ ಸಂಸ್ಕೃತ ಏಕಾಂಕ ನಾಟಕವಾದ ಕರ್ಣಭಾರಮ್ ನಿಂದ ವಾನಪ್ರಸ್ಥಂನಲ್ಲಿ ಪ್ರಶಸ್ತಿ ವಿಜೇತ ಅಭಿನಯದವರೆಗೆ ಭಾರತದ ಸಾಂಸ್ಕೃತಿಕ ಪರಂಪರೆಯ ಅದ್ಭುತ ಚಿತ್ರಣವನ್ನು ನೆನಪಿಸಿಕೊಂಡರು. ಅವರ ಹೆಸರು ಅಪಾರ ಗೌರವವನ್ನು ಹೊಂದಿದೆ ಮತ್ತು ಅವರು ತಲೆಮಾರುಗಳಾದ್ಯಂತ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ ಎಂದು ಅವರು ಹೇಳಿದರು.
ಶ್ರೀಮತಿ ದ್ರೌಪದಿ ಮುರ್ಮು ಅವರು, ಭಾರತದಲ್ಲಿ ಸಿನಿಮಾ ಪ್ರಜಾಪ್ರಭುತ್ವದ ಸಾರ ಮತ್ತು ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಅನೇಕ ಭಾರತೀಯ ಭಾಷೆಗಳಲ್ಲಿ ಸಾಹಿತ್ಯವು ಪ್ರವರ್ಧಮಾನಕ್ಕೆ ಬಂದಂತೆ, ಸಿನಿಮಾ ಕೂಡ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ರೋಮಾಂಚಕ ಅಭಿವ್ಯಕ್ತಿಯಾಗಿ ವಿಕಸನಗೊಂಡಿದೆ. ಚಲನಚಿತ್ರಗಳು ಮನರಂಜನೆ ನೀಡುವುದಲ್ಲದೆ, ಸಮಾಜವನ್ನು ಜಾಗೃತಗೊಳಿಸುವ, ಸೂಕ್ಷ್ಮತೆಯನ್ನು ತುಂಬುವ ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.
ಸಿನಿಮಾ ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರಪತಿಯವರು ಗಮನ ಸೆಳೆದರು ಮತ್ತು ಸಮಾನ ಅವಕಾಶಗಳನ್ನು ನೀಡಿದರೆ ಅವರು ಶ್ರೇಷ್ಠ ಸಾಧನೆ ಮಾಡಬಹುದು ಮತ್ತು ಅಸಾಧಾರಣ ಯಶಸ್ಸನ್ನು ಸಾಧಿಸಬಹುದು ಎಂದು ಒತ್ತಿ ಹೇಳಿದರು. ತೆರೆಯ ಮೇಲೆ ಮತ್ತು ಹೊರಗೆ ಮಹಿಳೆಯರ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಚಲನಚಿತ್ರೋದ್ಯಮಕ್ಕೆ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ತರುವ ಮಕ್ಕಳು ಸೇರಿದಂತೆ ಯುವ ಮತ್ತು ಉದಯೋನ್ಮುಖ ಪ್ರತಿಭೆಗಳ ಕೊಡುಗೆಗಳನ್ನು ಶ್ರೀಮತಿ ಮುರ್ಮು ಶ್ಲಾಘಿಸಿದರು. ಪ್ರಶಸ್ತಿಗಳನ್ನು ಪಡೆದ ಆರು ಬಾಲ ಕಲಾವಿದರನ್ನು ಅವರು ಅಭಿನಂದಿಸಿದರು ಮತ್ತು ಸಿನೆಮಾದಲ್ಲಿ ಪರಿಸರ ಕಾಳಜಿಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯನ್ನು ಸ್ವಾಗತಿಸಿದರು.
ಶ್ರೀ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಚಲನಚಿತ್ರ ಸಮುದಾಯಕ್ಕೆ ನಟನಿಂದ ಗೌರವ
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮೋಹನ್ ಲಾಲ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದಾಗ, ಅದು ಭಾರತೀಯ ಚಿತ್ರರಂಗದ ವಿಶಾಲ ಕಥೆಯಲ್ಲಿ ಒಂದು ಮಹತ್ವದ ದೃಶ್ಯದಂತೆ ಭಾಸವಾಯಿತು. ಪರದೆಯ ಮೇಲೆ ಸಾವಿರ ಜೀವನಗಳನ್ನು ಬದುಕಿದ ನಟ ಇವರು: ಕುಚೇಷ್ಟೆಯ ಕಾಲೇಜು ಹುಡುಗ, ಯಾತನಾಮಯಿ ಜನಸಾಮಾನ್ಯ, ವರ್ಚಸ್ವಿ ಸೈನಿಕ, ದೋಷಪೂರಿತ ನಾಯಕ, ಮರೆಯಲಾಗದ ಸ್ನೇಹಿತ. 360 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ, ಅವರು ಭಾರತೀಯ ಮತ್ತು ಮಲಯಾಳಂ ಚಿತ್ರರಂಗವನ್ನು ರೂಪಿಸಿದ್ದಾರೆ ಮತ್ತು ಅದನ್ನು ವಿಶ್ವಾದ್ಯಂತ ಕೊಂಡೊಯ್ದಿದ್ದಾರೆ, ಪ್ರೇಕ್ಷಕರು ನಗುವಂತೆ, ಅಳುವಂತೆ ಮತ್ತು ಯೋಚಿಸುವಂತೆ ಮಾಡಿದ್ದಾರೆ.
ಈಗಾಗಲೇ ಪದ್ಮಭೂಷಣ, ಪದ್ಮಶ್ರೀ ಮತ್ತು ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಈ ಕ್ಷಣವು ಪುರಸ್ಕಾರದ ಬಗ್ಗೆ ಆಗಿರಲಿಲ್ಲ, ಬದಲಾಗಿ ರಾಷ್ಟ್ರದ ಗೌರವದ ಉತ್ತುಂಗಕ್ಕೇರಿದ ಕ್ಷಣವಾಗಿತ್ತು. ವಿಜ್ಞಾನ ಭವನದಲ್ಲಿ ಚಪ್ಪಾಳೆಗಳು ಮೊಳಗುತ್ತಿದ್ದಂತೆ, ಮೋಹನ್ ಲಾಲ್, ತಮ್ಮ ಪ್ರಯಾಣದುದ್ದಕ್ಕೂ ತೋರಿಸಿರುವ ಅದೇ ನಮ್ರತೆಯಿಂದ, ತಮ್ಮ ಪ್ರೇಕ್ಷಕರು ಮತ್ತು ಸಹೋದ್ಯೋಗಿಗಳಿಗೆ ನಮಸ್ಕರಿಸಿದರು. ಆ ಕ್ಷಣದಲ್ಲಿ ಸಭಾಂಗಣದಲ್ಲಿ ಚಪ್ಪಾಳೆಗಳು ಕೇವಲ ನಟನಿಗಲ್ಲ - ಬದಲಾಗಿ ಭಾರತೀಯ ಸಿನಿಮಾದ ಕಥೆಗಳು, ನೆನಪುಗಳು ಮತ್ತು ಹಂಚಿಕೊಂಡ ಭಾವನೆಗಳಿಗಾಗಿ ಮೊಳಗಿದವು.
ಈ ಗೌರವವನ್ನು ಸ್ವೀಕರಿಸಿದ ಶ್ರೀ ಮೋಹನ್ ಲಾಲ್, ತಮ್ಮ ಸಿನಿಮಾ ಪ್ರಯಾಣವನ್ನು ರೂಪಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ತಾವು ಕೆಲಸ ಮಾಡಿದ ಎಲ್ಲಾ ಚಲನಚಿತ್ರಗಳು ತಮ್ಮನ್ನು ಆಳವಾಗಿ ಸ್ಪರ್ಶಿಸಿವೆ ಮತ್ತು ಮಾಧ್ಯಮವಾಗಿ ಸಿನಿಮಾದ ಶಕ್ತಿಯನ್ನು ನೆನಪಿಸುತ್ತವೆ ಎಂದು ಹೇಳಿದರು. ಈ ಗೌರವವನ್ನು "ಮಾಂತ್ರಿಕ ಮತ್ತು ಪವಿತ್ರ" ಎಂದು ಬಣ್ಣಿಸಿದ ಅವರು, ಪ್ರಶಸ್ತಿಯನ್ನು ಮಲಯಾಳಂ ಚಲನಚಿತ್ರೋದ್ಯಮದ ದಿಗ್ಗಜರಿಗೆ ಅರ್ಪಿಸಿದರು ಮತ್ತು ಅದು ಇಡೀ ಸಿನಿಮಾ ಸಮುದಾಯಕ್ಕೆ ಸೇರಿದ್ದು ಎಂದು ಒತ್ತಿ ಹೇಳಿದರು. ಸಿನಿಮಾ ತಮ್ಮ ಆತ್ಮದ ಹೃದಯ ಬಡಿತವಾಗಿದೆ ಮತ್ತು ಈ ಗೌರವವು ಈ ಕಲೆಯನ್ನು ಹೆಚ್ಚಿನ ಆಳ ಮತ್ತು ಬದ್ಧತೆಯಿಂದ ಮುಂದುವರಿಸುವ ತಮ್ಮ ಸಂಕಲ್ಪವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಶ್ರೀ ಮೋಹನ್ ಲಾಲ್ ಅವರನ್ನು ನಿಜವಾದ ದಂತಕಥೆ ಎಂದು ಶ್ಲಾಘಿಸಿದರು. ಜಾಗತಿಕ ಚಲನಚಿತ್ರ ಮತ್ತು ಕಂಟೆಂಟ್ ನಿರ್ಮಾಣದಲ್ಲಿ ಭಾರತವನ್ನು ನಾಯಕನನ್ನಾಗಿ ಸ್ಥಾಪಿಸುವ ಮಾನದಂಡ ಕಾರ್ಯಕ್ರಮವಾದ ವೇವ್ಸ್ 2025 ರಲ್ಲಿ ಸರ್ಕಾರ ಭರವಸೆ ನೀಡಿ ಅದನ್ನು ಈಡೇರಿಸಿದೆ ಎಂದು ಅವರು ನೆನಪಿಸಿಕೊಂಡರು. ಜಗತ್ತು ಈಗ ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ಎತ್ತಿ ತೋರಿಸಿದ ಅವರು, ವೇವ್ಸ್ ಬಜಾರ್ ನಂತಹ ಉಪಕ್ರಮಗಳು ಭಾರತೀಯ ಸೃಜನಶೀಲರಿಗೆ ವಿಶಾಲ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತಿವೆ ಎಂದು ಹೇಳಿದರು.
ದೇಶದ ಮೊದಲ ಅಂತಾರಾಷ್ಟ್ರೀಯ ಸಿನಿಮಾ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಮುಂಬೈನ ಎನ್ ಎಫ್ ಡಿ ಸಿ ಕ್ಯಾಂಪಸ್ ನಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಚಿವರು ಹೇಳಿದರು. ಅಲ್ಲಿ ಮೆಟಾ, ಎನ್ವಿಡಿಯಾ, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸೇರಿದಂತೆ ಪ್ರಮುಖ ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಈಗಾಗಲೇ 17 ಕೋರ್ಸ್ ಗಳು ನಡೆಯುತ್ತಿವೆ. ಭಾರತವನ್ನು ಜಾಗತಿಕ ಕಂಟೆಂಟ್ ಆರ್ಥಿಕತೆಯಾಗಿ ಸ್ಥಾಪಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಚಲನಚಿತ್ರ ಉಪಕರಣಗಳ ದೇಶೀಯ ತಯಾರಿಕೆಯನ್ನು ಉತ್ತೇಜಿಸಲು ಮತ್ತು ಲೈವ್ ಕಾನ್ಸರ್ಟ್ ಆರ್ಥಿಕತೆಯನ್ನು ಬಲಪಡಿಸಲು ನೀತಿಗಳನ್ನು ರೂಪಿಸುವ ಉದ್ದೇಶವನ್ನು ಸಚಿವರು ಒತ್ತಿ ಹೇಳಿದರು. ಮಾದರಿ ರಾಜ್ಯ ಸಿನಿಮಾ ನಿಯಂತ್ರಣ ನಿಯಮಗಳನ್ನು ರೂಪಿಸಲಾಗುತ್ತಿದೆ, ಇದು 2047 ರ ವೇಳೆಗೆ ವಿಕಸಿತ ಭಾರತ ಎಂಬ ಸರ್ಕಾರದ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ ಮತ್ತು ಈ ಪ್ರಯಾಣದಲ್ಲಿ ಸೃಜನಶೀಲ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಚಿವರು ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಸಿನಿಮಾ ಎಂದರೆ ಕಥೆಗಳು, ಕನಸುಗಳು ಮತ್ತು ಅನುಭವಗಳ ಆಚರಣೆ ಎಂದು ಹೇಳಿದರು. ಈ ವರ್ಷವು ಹಲವು ಸಾಧನೆಗಳು ಮತ್ತು ಹಲವು ಪ್ರಥಮಗಳ ವರ್ಷವಾಗಿದೆ ಎಂದು ವಿವರಿಸಿದ ಅವರು, ಶ್ರೀ ಅಶುತೋಷ್ ಗೋವಾರಿಕರ್, ಶ್ರೀ ಪಿ ಶೇಷಾದ್ರಿ ಮತ್ತು ಶ್ರೀ ಗೋಪಾಲ ಕೃಷ್ಣ ಪೈ ಸೇರಿದಂತೆ ತೀರ್ಪುಗಾರ ಸಮಿತಿಯ ಸದಸ್ಯರನ್ನು ಶ್ಲಾಘಿಸಿದರು ಮತ್ತು ಸಿನಿಮಾ, ಸಂಗೀತ, ಗೇಮಿಂಗ್ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿದ ವೇವ್ಸ್ ಶೃಂಗಸಭೆಯ ಯಶಸ್ಸನ್ನು ಪುನರುಚ್ಚರಿಸಿದರು. ಭಾರತದ ರೋಮಾಂಚಕ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುವ "ಏಕ್ ದೇಶ್, ಹಜಾರೋ ಕಹಾನಿಯಾ, ಏಕ್ ಜುನೂನ್" (ಒಂದು ದೇಶ, ಸಾವಿರಾರು ಕಥೆಗಳು, ಒಂದು ಉತ್ಸಾಹ) ದ ಮನೋಭಾವವನ್ನು ಅವರು ಒತ್ತಿ ಹೇಳಿದರು.
ಶ್ರೇಷ್ಠತೆಯ ಆಚರಣೆ: ಭಾರತದಾದ್ಯಂತ ನಟನೆ, ಕಥೆಗಳು ಮತ್ತು ಸಿನಿಮೀಯ ನಾವೀನ್ಯತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಗೌರವ
ಜವಾನ್ ಚಿತ್ರಕ್ಕಾಗಿ ಶಾರುಖ್ ಖಾನ್ ಅವರನ್ನು ಅತ್ಯುತ್ತಮ ನಟ ಎಂದು ಘೋಷಿಸಿದಾಗ, ಅವರ ಅಭಿನಯದ ಗುಣಮಟ್ಟ, ವರ್ಚಸ್ಸು ಮತ್ತು ಭಾವನಾತ್ಮಕತೆಯ ಸಮ್ಮಿಲನದ ಅವರ ಅತ್ಯುನ್ನತ ಅಭಿನಯಕ್ಕಾಗಿ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗರೆದರು. ಅದ್ಭುತ ಮತ್ತು ಸೂಕ್ಷ್ಮತೆಯನ್ನು ಬೇಡುವ ಪಾತ್ರದಲ್ಲಿ, ಅವರು ಚಿತ್ರವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ, ಹೃದಯಸ್ಪರ್ಶಿಯಾದಷ್ಟೇ ಮರೆಯಲಾಗದ ಕ್ಷಣಗಳನ್ನು ನೀಡಿದ್ದಾರೆ. 12th ಫೇಲ್ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಕ್ರಾಂತ್ ಮ್ಯಾಸ್ಸೆ ಗೌರವವನ್ನು ಹಂಚಿಕೊಂಡರು. ಚಿತ್ರದಲ್ಲಿ ಶಾಂತ ದೃಢನಿಶ್ಚಯದಿಂದ ಹಿನ್ನಡೆಗಳನ್ನು ಎದುರಿಸುವ ಯುವಕನೊಬ್ಬನ ಚಿತ್ರಣವು ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವಾಯಿತು. ಒಟ್ಟಾಗಿ, ಈ ಪ್ರಶಸ್ತಿಗಳು ಭಾರತೀಯ ಸಿನೆಮಾದ ಎರಡು ಮನೋಭಾವವನ್ನು ಪ್ರತಿಬಿಂಬಿಸಿದವುವೆ - ಅಸಾಧಾರಣ ಕಥೆ ಹೇಳುವ ಭವ್ಯತೆ ಮತ್ತು ಸರಳ, ಮಾನವ ಪರಿಶ್ರಮದ ಪ್ರಾಮಾಣಿಕತೆ.
"ಶ್ರೀಮತಿ ಚಟರ್ಜಿ vs. ನಾರ್ವೆ" ಚಿತ್ರಕ್ಕಾಗಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಿದ ಕ್ಷಣವು ಇನ್ನಷ್ಟು ಆತ್ಮೀಯವಾಯಿತು. ತಾಯಿಯ ಯಾತನೆ ಮತ್ತು ಶಕ್ತಿಯಲ್ಲಿ ಬೇರೂರಿರುವ ಅವರ ಪಾತ್ರವು ಕಲೆ ಮತ್ತು ಅನುಭವದ ನಡುವಿನ ರೇಖೆಯನ್ನು ಮಸುಕಾಗಿಸಿದೆ. ಅವರ ಪಾತ್ರವು ಸಭಾಂಗಣದ ಪ್ರತಿಯೊಂದು ಮೂಲೆಯಿಂದಲೂ ಸಹಾನುಭೂತಿಯನ್ನು ಸೆಳೆಯಿತು.
ಚಲನಚಿತ್ರಗಳಲ್ಲಿ ಆತ್ಮಗಳಂತಿರುವ ಪೋಷಕ ಪಾತ್ರಗಳಿಗೂ ಸಮಾನ ಗೌರವವಿತ್ತು. ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕರ್ ಅವರನ್ನು ಅತ್ಯುತ್ತಮ ಪೋಷಕ ನಟರಾಗಿ ಗೌರವಿಸಲಾಯಿತು, ಅವರ ಅಭಿನಯದ ಸಣ್ಣ ಪಾತ್ರಗಳು ಇಡೀ ಕಥೆಯ ಭಾರವನ್ನು ಹೇಗೆ ಹೊರಬಲ್ಲವು ಎಂಬುದನ್ನು ಸಾಬೀತುಪಡಿಸಿವೆ. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಊರ್ವಶಿ ಮತ್ತು ಜಾನಕಿ ಬೋಡಿವಾಲಾ ಅವರ ಅಭಿನಯವು ಪ್ರಾಮಾಣಿಕತೆ ಮತ್ತು ಆಳವಾದವು ಮತ್ತು ಪ್ರೇಕ್ಷಕರಿಗೆ ಅವಿಸ್ಮರಣೀಯ ಭಾವನೆಗಳನ್ನು ನೀಡಿದವು.
ಪ್ರದರ್ಶನದ ಹೊರತಾಗಿ, ಈ ಚಲನಚಿತ್ರಗಳು ಆಕಾಂಕ್ಷೆ, ಹೋರಾಟ ಮತ್ತು ಕಲ್ಪನೆಯ ಕಥೆಗಳನ್ನು ಸಹ ಹೇಳುತ್ತವೆ. ಅತ್ಯುತ್ತಮ ಚಲನಚಿತ್ರವೆಂದು ಘೋಷಿಸಿದ 12th ಫೇಲ್ ಚಿತ್ರವು ಅಸಂಖ್ಯಾತ ಜೀವನಗಳನ್ನು ಪ್ರತಿಬಿಂಬಿಸುವ ದೃಢಸಂಕಲ್ಪದ ಕಥೆಯಾಗಿದೆ. "ಫ್ಲವರಿಂಗ್ ಮ್ಯಾನ್" ಅತ್ಯುತ್ತಮ ನಾನ್-ಫೀಚರ್ ಚಿತ್ರವೆಂದು ಗೌರವ ಪಡೆಯಿತು ಮತ್ತು "ಗಾಡ್, ವಲ್ಚರ್ ಮತ್ತು ಹ್ಯೂಮನ್" ಅತ್ಯುತ್ತಮ ಸಾಕ್ಷ್ಯಚಿತ್ರವೆಂದು ಗೌರವಿಸಲ್ಪಟ್ಟಿತು. ಇದು ಸಾಮಾನ್ಯವಾಗಿ ಗಮನಿಸದೆ ಹೋಗುವ ಸತ್ಯಗಳನ್ನು ದಾಖಲಿಸುವ, ಪ್ರಶ್ನಿಸುವ ಮತ್ತು ಬಹಿರಂಗಪಡಿಸುವ ಸಿನೆಮಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ಹೊಸ ಕ್ಷೇತ್ರಗಳಲ್ಲಿ, ಹನು-ಮಾನ್ ಚಿತ್ರವು ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು, ಇದು ಭಾರತದ ದೃಶ್ಯ ಕಥೆ ಹೇಳುವಿಕೆಯಲ್ಲಿ ಬೆಳೆಯುತ್ತಿರುವ ಶಕ್ತಿಯನ್ನು ಗುರುತಿಸುತ್ತದೆ, ಗಿದ್ಧ್: ದಿ ಸ್ಕ್ಯಾವೆಂಜರ್ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಒಟ್ಟಾರೆಯಾಗಿ, ಈ ಗೌರವಗಳು ಕೇವಲ ಸಾಧನೆಗಳ ಪಟ್ಟಿಯಾಗಿರಲಿಲ್ಲ, ಬದಲಾಗಿ ಧ್ವನಿಗಳು, ತಾರೆಯರು ಮತ್ತು ಹೊಸಬರು, ಮುಖ್ಯವಾಹಿನಿ ಮತ್ತು ಪ್ರಾಯೋಗಿಕ ಚಿತ್ರಗಳ ಸಮ್ಮಿಲನವಾಗಿದ್ದವು, ಭಾರತೀಯ ಸಿನಿಮಾವು ಒಂದು ರಾಷ್ಟ್ರದ ಕನಸುಗಳನ್ನು ಮತ್ತು ಅದರ ಭವಿಷ್ಯವನ್ನು ರೂಪಿಸುವ ವಿಶ್ವಾಸವನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಪ್ರಶಸ್ತಿಗಳ ಪೂರ್ಣ ಪಟ್ಟಿಯನ್ನು ಕೆಳಗಿನ ಲಿಂಕ್ ನಲ್ಲಿ ನೋಡಬಹುದು:
https://www.pib.gov.in/PressReleasePage.aspx?PRID=2151537
*****
(Release ID: 2170388)
Visitor Counter : 8