ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನ ದರ್ರಾಂಗ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
14 SEP 2025 4:01PM by PIB Bengaluru
ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ! ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೋವಾಲ್ ಜಿ, ಅಸ್ಸಾಂ ಸರ್ಕಾರದ ಎಲ್ಲಾ ಸಚಿವರು, ಸಂಸತ್ ಸದಸ್ಯರು ಮತ್ತು ಶಾಸಕರು, ಇಲ್ಲಿರುವ ಸಾರ್ವಜನಿಕ ಪ್ರತಿನಿಧಿಗಳೆ, ನಿರಂತರ ಮಳೆಯ ನಡುವೆಯೂ ನಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ – ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮಸ್ಕಾರ.
ರಾಜ್ಯದ ಅಭಿವೃದ್ಧಿ ಪ್ರಯಾಣದ ಈ ಐತಿಹಾಸಿಕ ದಿನದಂದು ದರ್ರಾಂಗ್‌ನ ಜನರಿಗೆ ಮತ್ತು ಅಸ್ಸಾಂನ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಆಪರೇಷನ್ ಸಿಂದೂರ್ ನಂತರ ನಾನು ನಿನ್ನೆ ಮೊದಲ ಬಾರಿಗೆ ಅಸ್ಸಾಂಗೆ ಬಂದಿದ್ದೇನೆ. ಮಾತೆ ಕಾಮಾಕ್ಯಳ ಆಶೀರ್ವಾದದೊಂದಿಗೆ, ಆಪರೇಷನ್ ಸಿಂದೂರ್ ಅಗಾಧ ಯಶಸ್ಸು ಸಾಧಿಸಿದೆ. ಅದಕ್ಕಾಗಿಯೇ ಇಂದು ಮಾತೆ ಕಾಮಾಕ್ಯಳ ಈ ಪವಿತ್ರ ಭೂಮಿಗೆ ಬರುವುದು ಆಳವಾದ ದೈವಿಕ ಅನುಭವದಂತೆ ಭಾಸವಾಗುತ್ತಿದೆ ಮತ್ತು ಸಂತೋಷವನ್ನು ಹೆಚ್ಚಿಸುತ್ತಿದೆ. ಇಂದು ಈ ಪ್ರದೇಶದಲ್ಲಿ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಜನ್ಮಾಷ್ಟಮಿಯ ಈ ಪವಿತ್ರ ಸಂದರ್ಭದಲ್ಲಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಕೆಂಪುಕೋಟೆಯಿಂದ ಹೇಳಿದಂತೆ ಮಂಗಲ್ಡೋಯ್ ಸಂಸ್ಕೃತಿಯ ಸಂಗಮ, ಇತಿಹಾಸದ ಹೆಮ್ಮೆ ಮತ್ತು ಭವಿಷ್ಯದ ಭರವಸೆ ಎಲ್ಲವೂ ಒಟ್ಟಿಗೆ ಬರುವ ಸ್ಥಳ ಇದಾಗಿದೆ. ಈ ಪ್ರದೇಶವು ಅಸ್ಸಾಂ ಗುರುತಿನ ಕೇಂದ್ರ ಬಿಂದುವೂ ಆಗಿದೆ. ನಾವು ಸ್ಫೂರ್ತಿಗಳನ್ನು ನೆನಪಿಸಿಕೊಂಡಿದ್ದೇವೆ, ನಾವು ಶ್ರೀಕೃಷ್ಣನನ್ನು ನೆನಪಿಸಿಕೊಂಡಿದ್ದೇವೆ ಮತ್ತು ಭವಿಷ್ಯದ ಭದ್ರತಾ ನೀತಿಯಲ್ಲಿ ಸುದರ್ಶನ ಚಕ್ರದ ದೃಷ್ಟಿಕೋನವನ್ನು ಜನರ ಮುಂದೆ ಪ್ರಸ್ತುತಪಡಿಸಿದ್ದೇವೆ.
ಸ್ನೇಹಿತರೆ,
ಧೈರ್ಯ ಶೌರ್ಯಕ್ಕೆ ಹೆಸರಾದ ಈ ಭೂಮಿಯಲ್ಲಿ ಎಲ್ಲ ಜನರನ್ನು ಭೇಟಿಯಾಗುವ ಅದೃಷ್ಟ ನನಗೆ ಸಿಕ್ಕಿದೆ, ಇದರಿಂದ ನಾನು ಧನ್ಯನಾಗಿದ್ದೇನೆ.
ಸಹೋದರ ಸಹೋದರಿಯರೆ,
ಕೆಲವೇ ದಿನಗಳ ಹಿಂದೆ, ನಾವು ಭಾರತ ರತ್ನ ಸುಧಾಕಾಂತ ಭೂಪೇನ್ ಹಜಾರಿಕಾ ಜಿ ಅವರ ಜನ್ಮ ವಾರ್ಷಿಕೋತ್ಸವ ಆಚರಿಸಿದೆವು. ನಿನ್ನೆ, ಅವರ ಗೌರವಾರ್ಥವಾಗಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಅಸ್ಸಾಂನ ಮಹಾನ್ ಪುತ್ರರು, ನಮ್ಮ ಪೂರ್ವಜರು ದೂರದೃಷ್ಟಿಯ ಕನಸು ಕಂಡಿದ್ದರು, ಇಂದು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರ ಆ ಕನಸು ನನಸಾಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.
ಸಹೋದರ ಸಹೋದರಿಯರೆ,
ನಿನ್ನೆ, ನಾನು ಭೂಪೇನ್ ದಾ ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿದ್ದಾಗ, ಮುಖ್ಯಮಂತ್ರಿಗಳು ರಾತ್ರಿ ಏನೋ ಹೇಳಿದರು, ಇಂದು ಬೆಳಗ್ಗೆ ಅವರು ನನಗೆ ಒಂದು ವೀಡಿಯೊ ಸಹ ತೋರಿಸಿದರು. ಆ ವೀಡಿಯೊ ನೋಡಿ ನನಗೆ ತುಂಬಾ ನೋವುಂಟು ಮಾಡಿತು. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹೇಳಿಕೆಯನ್ನು ನನಗೆ ತೋರಿಸಿದರು. ಭಾರತ ಸರ್ಕಾರವು ದೇಶದ ಈ ಮಹಾನ್ ಪುತ್ರ ಮತ್ತು ಅಸ್ಸಾಂನ ಹೆಮ್ಮೆಯ ಭೂಪೇನ್ ದಾ ಹಜಾರಿಕಾ ಜಿ ಅವರಿಗೆ ಭಾರತ ರತ್ನ ನೀಡಿದ ದಿನವೇ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹೇಳಿಕೆ ನೀಡಿದರು. ಆ ಸಮಯದಲ್ಲಿ, ನಾನು ಅದನ್ನು ಗಮನಿಸಿರಲಿಲ್ಲ, ಆದರೆ ಇಂದು ನಾನು ಅದನ್ನು ನೋಡಿದೆ. ಅವರು ಏನು ಹೇಳಿದ್ದಾರೆ ಕೇಳಿ: "ಮೋದಿ ನೃತ್ಯಗಾರರು ಮತ್ತು ಗಾಯಕರಿಗೆ ಭಾರತ ರತ್ನ ನೀಡುತ್ತಿದ್ದಾರೆ."
ಸ್ನೇಹಿತರೆ,
1962ರ ಚೀನಾದೊಂದಿಗಿನ ಯುದ್ಧದ ನಂತರ ಈಶಾನ್ಯ ಪ್ರದೇಶದ ಜನರ ಮೇಲೆ ಉಳಿದಿರುವ ಗಾಯಗಳು ಮತ್ತು ಆ ಸಮಯದಲ್ಲಿ ಪಂಡಿತ್ ನೆಹರು ಹೇಳಿದ ಮಾತುಗಳು ಇನ್ನೂ ಗುಣವಾಗಿಲ್ಲ. ಇಂದು ಕಾಂಗ್ರೆಸ್ ಪಕ್ಷದ ಈಗಿನ ಪೀಳಿಗೆ ಆ ಗಾಯಗಳ ಮೇಲೆಯೇ ಉಪ್ಪು ಎರಚುತ್ತಿದೆ. ಸಾಮಾನ್ಯವಾಗಿ, ನಾನು ಎಷ್ಟೇ ನಿಂದನೆಗಳನ್ನು ಎದುರಿಸಿದರೂ, ನಾನು ಶಿವನ ಭಕ್ತ, ಆದ್ದರಿಂದ, ನಾನು ಎಲ್ಲಾ ವಿಷವನ್ನು ನುಂಗುತ್ತೇನೆ. ಆದರೆ ಬೇರೆಯವರನ್ನು ನಾಚಿಕೆಯಿಲ್ಲದೆ ಅವಮಾನಿಸಿದಾಗ, ನಾನು ಮೌನವಾಗಿರಲು ಸಾಧ್ಯವಿಲ್ಲ. ಹೇಳಿ, ಭೂಪೇನ್ ದಾ ಅವರಿಗೆ ಭಾರತ ರತ್ನ ನೀಡುವ ನನ್ನ ನಿರ್ಧಾರ ಸರಿಯೋ ಅಲ್ಲವೋ? ಜೋರಾಗಿ ಹೇಳಿ, ಅದು ಸರಿಯೋ ಅಲ್ಲವೋ? ಭೂಪೇನ್ ದಾ ಅವರಿಗೆ ಭಾರತ ರತ್ನ ನೀಡುವ ನಿರ್ಧಾರವನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದಾಗ, ಅದು ಸರಿಯೋ ತಪ್ಪೋ? ಅಸ್ಸಾಂನ ಪುತ್ರ, ಭಾರತದ ಮಹಾನ್ ಚೇತನವನ್ನು ಕಾಂಗ್ರೆಸ್ ಈ ರೀತಿ ಅವಮಾನಿಸಿದಾಗ ಅದು ತೀವ್ರ ನೋವುಂಟು ಮಾಡುತ್ತದೆ.
ಸ್ನೇಹಿತರೆ,
ನನಗೆ ಚೆನ್ನಾಗಿ ತಿಳಿದಿದೆ, ಕಾಂಗ್ರೆಸ್‌ನ ಇಡೀ ರಾಜಕೀಯ ಪರಿಸರ ವ್ಯವಸ್ಥೆ ಹೇಗಿದೆ ಎಂದರೆ ಈಗ ನನ್ನ ಮೇಲೆ ಮತ್ತೆ ದಾಳಿ ಮಾಡಿ, "ಮೋದಿ ಮತ್ತೊಮ್ಮೆ ಅಳಲು ಪ್ರಾರಂಭಿಸಿದ್ದಾರೆ" ಎಂದು ಹೇಳುತ್ತದೆ. ಆದರೆ ನನಗೆ, ಜನರೇ ನನ್ನ ದೇವರು. ನನ್ನ ಆತ್ಮದ ಧ್ವನಿ ನನ್ನ ದೇವರ ಮುಂದೆ ಬರದಿದ್ದರೆ, ಅದು ಬೇರೆಲ್ಲಿ ಹೊರಬರುತ್ತದೆ? ಅವರೇ ನನ್ನ ಯಜಮಾನರು, ಅವರೇ ನನ್ನ ಪೂಜ್ಯರು ಮತ್ತು ಅವರೇ ನನ್ನ ರಿಮೋಟ್ ಕಂಟ್ರೋಲ್. ನನಗೆ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ. ಈ ದೇಶದ 140 ಕೋಟಿ ನಾಗರಿಕರೇ ನನ್ನ ರಿಮೋಟ್ ಕಂಟ್ರೋಲ್. ಆದರೆ ಅವರ ದುರಹಂಕಾರವು ಎಷ್ಟಿದೆಯೆಂದರೆ, "ನಾಮ್‌ದಾರ್"(ರಾಜ ವಂಶಸ್ಥರು) "ಕಾಮ್‌ದಾರ್"(ಕೆಲಸಗಾರ)ನನ್ನು ಗದರಿಸಿದಾಗ, ಮತ್ತು ನೋವಿನಿಂದ, "ಕಾಮ್‌ದಾರ್" ನೋವಿನ ಕೂಗು ಹೊರಹಾಕಿದರೆ ಅವನ ಮೇಲೆ ಇನ್ನೂ ಹೆಚ್ಚಿನ ಕ್ರೌರ್ಯ ಹೇರಲಾಗುತ್ತದೆ, "ನಿಮಗೆ ಅಳಲು ಹಕ್ಕಿಲ್ಲ, "ಕಾಮ್‌ದಾರ್" "ನಾಮ್‌ದಾರ್" ಮುಂದೆ ಹೇಗೆ ಅಳಲು ಸಾಧ್ಯ?" ಅಂತಹ ದುರಹಂಕಾರವು ಸಾರ್ವಜನಿಕ ಜೀವನಕ್ಕೆ ಸರಿ ಹೊಂದುವುದಿಲ್ಲ. ಅಸ್ಸಾಂನ ಜನರು, ದೇಶದ ಜನರು, ಸಂಗೀತ ಪ್ರಿಯರು, ಕಲಾಪ್ರಿಯರು ಮತ್ತು ಭಾರತದ ಆತ್ಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವವರು ಕಾಂಗ್ರೆಸ್‌ನಿಂದ ಉತ್ತರವನ್ನು ಕೋರಬೇಕು: ನೀವು ಭೂಪೇನ್ ದಾ ಅವರನ್ನು ಏಕೆ ಅವಮಾನಿಸಿದ್ದೀರಿ?
ಸಹೋದರ ಸಹೋದರಿಯರೆ,
ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು, ಅಸ್ಸಾಂನ ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು ಈ ಡಬಲ್-ಎಂಜಿನ್ ಸರ್ಕಾರದ ಆದ್ಯತೆಯಾಗಿದೆ. ಒಬ್ಬ ಸಹೋದರ ಒಂದು ವರ್ಣಚಿತ್ರವನ್ನು ತಂದಿರುವುದನ್ನು ನಾನು ನೋಡಿದ್ದೇನೆ, ಬಹುಶಃ ಅವನು ಅದನ್ನು ನನಗೆ ಕೊಡಲು ಬಯಸಿದ್ದಾನೆ. ನಾನು ಎಸ್‌ಪಿಜಿ ಸಿಬ್ಬಂದಿಗೆ ಅದನ್ನು ತೆಗೆದುಕೊಳ್ಳಲು ವಿನಂತಿಸುತ್ತೇನೆ. ದಯವಿಟ್ಟು ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆಯಿರಿ, ನಾನು ಖಂಡಿತವಾಗಿಯೂ ನಿಮಗೆ ಪತ್ರ ಬರೆಯುತ್ತೇನೆ. ನೀವು ನನ್ನ ತಾಯಿಯ ಸುಂದರವಾದ ಚಿತ್ರವನ್ನು ಸಹ ಮಾಡಿದ್ದೀರಿ. ಅಸ್ಸಾಂನಿಂದ ಈ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. 'ಗಮೋಚ' (ಸಾಂಪ್ರದಾಯಿಕ ಅಸ್ಸಾಮಿ ಬಟ್ಟೆ)ಯೊಂದಿಗೆ ನಿಂತಿರುವ ಯುವಕನನ್ನು ನಾನು ನೋಡಿದ್ದೇನೆ. ದಯವಿಟ್ಟು ಅದನ್ನು ತೆಗೆದುಕೊಳ್ಳಿ. ನನಗೆ, ಇದು ಜನ್ಮಾಷ್ಟಮಿಯ ಪವಿತ್ರ ಕೊಡುಗೆಯಂತೆ. ಅಸ್ಸಾಂನ ಯಾರೋ ಬಡ ತಾಯಿ ಈ 'ಗಮೋಚ'ವನ್ನು ನೇಯ್ದಿರಬೇಕು. ಈ ಉಡುಗೊರೆಗಾಗಿ ತುಂಬಾ ಧನ್ಯವಾದಗಳು, ಸಹೋದರ. ನಾನು ತುಂಬಾ ಕೃತಜ್ಞನಾಗಿದ್ದೇನೆ. ದಯವಿಟ್ಟು ಅದನ್ನು ಅವರಿಗೆ ನೀಡಿ. ನಾನು ಅದನ್ನು ಪಡೆಯುತ್ತೇನೆ. ನಾನು ಖಂಡಿತವಾಗಿಯೂ ಅದನ್ನು ಅಮೂಲ್ಯವಾಗಿ ನೋಡುತ್ತೇನೆ. ಇನ್ನೊಂದು ಇದೆ. ಬಹುಶಃ, ಅವರು ಅದನ್ನು ಹಿಮಂತ(ಮುಖ್ಯಮಂತ್ರಿ)ಗೆ ನೀಡಲು ಬಯಸಿದ್ದಾರೆ. ದಯವಿಟ್ಟು ಅದನ್ನು ಅವರಿಗೂ ನೀಡಿ. ಅದು ಸರಿಯಾದ ಸ್ಥಳಕ್ಕೆ ತಲುಪುತ್ತದೆ. ಯುವಕ, ಈ ಪ್ರೀತಿಗೆ ಧನ್ಯವಾದಗಳು. ನೋಡಿ, ಚಿಕ್ಕ ಮಕ್ಕಳು ಸಹ ಚಿತ್ರಗಳನ್ನು ತಂದಿದ್ದಾರೆ, ದಯವಿಟ್ಟು ಅವುಗಳನ್ನು ಸಂಗ್ರಹಿಸಿ. ಜನರು ತುಂಬಾ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಈ ಚಿಕ್ಕ ಮಕ್ಕಳು! ಒಬ್ಬರಿಗೆ ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೇನು ಸಿಗಲು ಸಾಧ್ಯ? ಧನ್ಯವಾದಗಳು, ನನ್ನ ಸ್ನೇಹಿತ, ಧನ್ಯವಾದಗಳು, ಸಹೋದರ. ನೀವು ಇಬ್ಬರು ಸಹೋದರರೆ? ಅಲ್ಲವೆ? ಓಹ್, ನೀವಿಬ್ಬರೂ ಕಪ್ಪು ಟೀ ಶರ್ಟ್ ಧರಿಸಿ ಬಂದಿದ್ದೀರಿ. ತುಂಬಾ ಧನ್ಯವಾದಗಳು ಸ್ನೇಹಿತರೆ.
ಸ್ನೇಹಿತರೆ,
ಇಂದು ಅಸ್ಸಾಂ ಸರ್ಕಾರ ಮತ್ತು ಜನರ ಜಂಟಿ ಪ್ರಯತ್ನದಿಂದ ದೇಶ ಮತ್ತು ಪ್ರಪಂಚದಾದ್ಯಂತ ಅಲೆಗಳನ್ನು ಸೃಷ್ಟಿಸುತ್ತಿದೆ. ಈ ಮಗಳು ಏನನ್ನಾದರೂ ತಂದಿದ್ದಾಳೆ, ದಯವಿಟ್ಟು ಅದನ್ನು ತೆಗೆದುಕೊಳ್ಳಿ. ಒಬ್ಬ ಮಗಳನ್ನು ಎಂದಿಗೂ ನಿರಾಶೆಗೊಳಿಸಬಾರದು. ಧನ್ಯವಾದಗಳು. ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದೀರಾ? ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದರೆ, ನಾನು ನಿಮಗೆ ಪತ್ರ ಬರೆಯುತ್ತೇನೆ. ನಿಮ್ಮ ಹೆಸರು ಮತ್ತು ವಿಳಾಸವನ್ನು ಬರೆಯಿರಿ.
ಸ್ನೇಹಿತರೆ,
ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ, ಅಸ್ಸಾಂ ಕೂಡ ರಾಷ್ಟ್ರದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಅಸ್ಸಾಂ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು, ದೇಶದ ಉಳಿದ ಭಾಗಗಳೊಂದಿಗೆ ವೇಗ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇಂದು ಅಸ್ಸಾಂ ಸುಮಾರು ಶೇಕಡ 13ರಷ್ಟು ಬೆಳವಣಿಗೆಯ ದರದೊಂದಿಗೆ ಮುಂದುವರಿಯುತ್ತಿದೆ. ತುಂಬಾ ಧನ್ಯವಾದಗಳು ಮಗು.
ಸ್ನೇಹಿತರೆ,
ಶೇಕಡ 13ರಷ್ಟು ಬೆಳವಣಿಗೆ ದರ! ಇದು ಒಂದು ದೊಡ್ಡ ಸಾಧನೆ. ಇದು ನಿಮ್ಮ ಸಾಧನೆ. ಇಂದು ನಿಮ್ಮ ಹೆಸರಿನಲ್ಲಿ ಚಪ್ಪಾಳೆ ತಟ್ಟೋಣ. ಸಾಮಾನ್ಯವಾಗಿ, ನೀವು ನನಗಾಗಿ ಬಹಳಷ್ಟು ಚಪ್ಪಾಳೆ ತಟ್ಟುತ್ತೀರಿ, ಆದರೆ ಇಂದು ನಾನು ನಿಮ್ಮ ಕಠಿಣ ಪರಿಶ್ರಮ ಮತ್ತು ಬೆವರಿಗೆ ಚಪ್ಪಾಳೆ ತಟ್ಟಲು ಬಯಸುತ್ತೇನೆ. ಈ ಯಶಸ್ಸು ಅಸ್ಸಾಂ ಜನರ ಸಮರ್ಪಣೆ ಮತ್ತು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದ ಜಂಟಿ ಪ್ರಯತ್ನಗಳ ಫಲಿತಾಂಶವಾಗಿದೆ. ಅಸ್ಸಾಂ ಜನರು ಈ ಪಾಲುದಾರಿಕೆಯನ್ನು ನಿರಂತರವಾಗಿ ಬಲಪಡಿಸುತ್ತಿದ್ದಾರೆ ಎಂಬುದರಿಂದ ನನಗೆ ಸಂತೋಷವಾಗಿದೆ. ಅದಕ್ಕಾಗಿಯೇ, ಹಿಮಂತ ಜಿ ಮತ್ತು ಅವರ ತಂಡವು ಪ್ರತಿ ಚುನಾವಣೆಯಲ್ಲೂ ಮತ್ತೆ ಮತ್ತೆ ಅಗಾಧ ಬೆಂಬಲ ಪಡೆಯುತ್ತಿದೆ. ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲೂ ಸಹ, ಅಸ್ಸಾಂ ನಮಗೆ ಐತಿಹಾಸಿಕ ಗೆಲುವು ಖಚಿತಪಡಿಸಿದೆ. ನೀವು ನಮ್ಮನ್ನು ಆಶೀರ್ವದಿಸಿದ್ದೀರಿ.
ಸ್ನೇಹಿತರೆ,
ಬಿಜೆಪಿ ಸರ್ಕಾರವು ಅಸ್ಸಾಂ ಅನ್ನು ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಯ ಎಂಜಿನ್ ಆಗಿ ಮಾಡುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಇಂದಿನ ಕಾರ್ಯಕ್ರಮವು ಈ ಬದ್ಧತೆಯ ಒಂದು ಭಾಗವಾಗಿದೆ. ಸ್ವಲ್ಪ ಸಮಯದ ಹಿಂದೆ, ಸುಮಾರು 6,500 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಯಿತು. ನಮ್ಮ ಡಬಲ್-ಎಂಜಿನ್ ಸರ್ಕಾರವು ಅಸ್ಸಾಂ ಅನ್ನು ಉನ್ನತ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ ಮತ್ತು ಉನ್ನತ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಗಳು ಆ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತವೆ. ದರ್ರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹೆದ್ದಾರಿಗಳು ಮತ್ತು ವರ್ತುಲ ರಸ್ತೆಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ಇಡೀ ರಾಷ್ಟ್ರವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವತ್ತ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ. ವಿಶೇಷವಾಗಿ ನಮ್ಮ ಯುವ ಸ್ನೇಹಿತರಿಗೆ, 'ವಿಕಸಿತ ಭಾರತ' ಒಂದು ಕನಸು ಮತ್ತು ಸಂಕಲ್ಪ ಎರಡೂ ಆಗಿದೆ. ಈ ಸಂಕಲ್ಪವನ್ನು ಈಡೇರಿಸುವಲ್ಲಿ ಈಶಾನ್ಯ ಭಾಗವು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ನಾನು ಇದನ್ನು ನಿಮ್ಮ ಬಗ್ಗೆ, ಈಶಾನ್ಯದ ಬಗ್ಗೆ ನನಗೆ ಪ್ರೀತಿ, ವಿಶ್ವಾಸ ಮತ್ತು ಗೌರವ ಇರುವುದರಿಂದ ಮಾತ್ರ ಹೇಳುತ್ತಿಲ್ಲ. ಇದರ ಹಿಂದೆ ಘನವಾದ ಕಾರಣಗಳಿವೆ ಎಂಬ ದೃಷ್ಟಿಯಿಂದ ನಾನು ಇದನ್ನು ಹೇಳುತ್ತಿದ್ದೇನೆ. ಸ್ವಾತಂತ್ರ್ಯದ ನಂತರ ದೊಡ್ಡ ನಗರಗಳು, ದೊಡ್ಡ ಆರ್ಥಿಕತೆಗಳು ಮತ್ತು ದೊಡ್ಡ ಕೈಗಾರಿಕೆಗಳು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಅಭಿವೃದ್ಧಿಗೊಂಡವು. ಈ ಸಮಯದಲ್ಲಿ, ಪೂರ್ವ ಭಾರತದ ವಿಶಾಲ ಪ್ರದೇಶವು ಅಪಾರ ಜನಸಂಖ್ಯೆ ಹೊಂದಿದ್ದು, ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿತ್ತು. ಈಗ ಬಿಜೆಪಿ ಸರ್ಕಾರ ಈ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ. ಈಗಾಗಲೇ, 21ನೇ ಶತಮಾನದ 25 ವರ್ಷಗಳು ಕಳೆದಿವೆ. ಕಾಂಗ್ರೆಸ್ ಯುಗದಿಂದ ನಾವು ಕೇಳುತ್ತಿದ್ದ ಶತಮಾನವೆಂದರೆ "21ನೇ ಶತಮಾನ ಬರುತ್ತಿದೆ, 21ನೇ ಶತಮಾನ ಬರುತ್ತಿದೆ". ಸರಿ, ಈ ಶತಮಾನದಲ್ಲಿ ಕಾಲು ಭಾಗ ಸಮಯ ಈಗಾಗಲೇ ಕಳೆದಿದೆ. ಈಗ, 21ನೇ ಶತಮಾನದ ಮುಂದಿನ ಹಂತವು ಪೂರ್ವಕ್ಕೆ, ಈಶಾನ್ಯಕ್ಕೆ ಸೇರಿದೆ. ಈಗ, ನಿಮ್ಮ ಸಮಯ ಬಂದಿದೆ. ಇದು ಅಸ್ಸಾಂನ ಸಮಯ, ಈಶಾನ್ಯದ ಸಮಯ. ನಿಮ್ಮ ಸಮಯ ಬಂದಿದೆ. ನನ್ನ ಯುವ ಸ್ನೇಹಿತರೆ, ಈಗ ಸಮಯ ನಿಮ್ಮ ಕೈಯಲ್ಲಿದೆ. ಓಹ್, ಇಗೋ ಇನ್ನೊಂದು ಮಗು ಏನನ್ನೋ ತರುತ್ತಿದೆ. ದಯವಿಟ್ಟು ಅದನ್ನು ತೆಗೆದುಕೊಳ್ಳಿ ಸಹೋದರ. ಈಗ ಜನರು ನನ್ನ ತಾಯಿಯ ಚಿತ್ರಗಳನ್ನು ತಂದಾಗ, ನನ್ನ ಹೃದಯ ಅವುಗಳನ್ನು ತಕ್ಷಣ ತೆಗೆದುಕೊಳ್ಳಲು ಬಯಸುತ್ತದೆ. ಅವರಿಗೆ ಕೊಡು ಮಗುವೆ. ಅವರು ನನ್ನೊಂದಿಗಿದ್ದಾರೆ. ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆಯಿರಿ, ನಾನು ಅದನ್ನು ಸಂಗ್ರಹಿಸಿ ನಿನಗೆ ಪತ್ರ ಬರೆಯುತ್ತೇನೆ. ದಯವಿಟ್ಟು ಅದನ್ನು ಅವರಿಂದ ಪಡೆದು ಎಸ್‌ಪಿಜಿ ಸಿಬ್ಬಂದಿಗೆ ರವಾನಿಸಿ.
ಸ್ನೇಹಿತರೆ,
ಯಾವುದೇ ಪ್ರದೇಶದ ತ್ವರಿತ ಅಭಿವೃದ್ಧಿಗೆ ವೇಗದ ಸಂಪರ್ಕ ಅತ್ಯಗತ್ಯ. ಅದಕ್ಕಾಗಿಯೇ ನಮ್ಮ ಸರ್ಕಾರವು ಈಶಾನ್ಯದಲ್ಲಿ ಸಂಪರ್ಕದ ಮೇಲೆ ಬಲವಾದ ಗಮನ ಹರಿಸಿದೆ. ಅದು ರಸ್ತೆಗಳು, ರೈಲ್ವೆಗಳು ಮತ್ತು ವಾಯುಮಾರ್ಗಗಳ ಮೂಲಕ ಭೌತಿಕ ಸಂಪರ್ಕವಾಗಿರಲಿ ಅಥವಾ 5ಜಿ ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಮೂಲಕ ಡಿಜಿಟಲ್ ಸಂಪರ್ಕವಾಗಿರಲಿ, ಅದು ನಿಮ್ಮ ಜೀವನಕ್ಕೆ ಅನುಕೂಲ ತಂದಿದೆ, ದೈನಂದಿನ ಜೀವನವನ್ನು ಸುಲಭಗೊಳಿಸಿದೆ ಮತ್ತು ವ್ಯವಹಾರ ಮಾಡುವುದನ್ನು ಸುಲಭಗೊಳಿಸಿದೆ. ಈ ಸಂಪರ್ಕವು ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಿದೆ, ಪ್ರವಾಸೋದ್ಯಮವನ್ನು ವಿಸ್ತರಿಸಿದೆ ಮತ್ತು ನಮ್ಮ ಯುವಕರಿಗೆ ಹೊಸ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಸ್ನೇಹಿತರೆ,
ಈ ಬೃಹತ್ ಸಂಪರ್ಕ ಅಭಿಯಾನದಿಂದ ಅಸ್ಸಾಂ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಸ್ವಾತಂತ್ರ್ಯದ ನಂತರ 6 ದಶಕಗಳ ಕಾಲ, ಕಾಂಗ್ರೆಸ್ ದೆಹಲಿಯಲ್ಲಿ ಆಳ್ವಿಕೆ ನಡೆಸಿತು, ದಶಕಗಳ ಕಾಲ ಕಾಂಗ್ರೆಸ್ ಅಸ್ಸಾಂನಲ್ಲಿಯೂ ಆಳ್ವಿಕೆ ನಡೆಸಿತು. ಆದರೆ ಕಾಂಗ್ರೆಸ್ 60-65 ವರ್ಷಗಳಲ್ಲಿ ಬ್ರಹ್ಮಪುತ್ರದ ಮೇಲೆ ಕೇವಲ 3 ಸೇತುವೆಗಳನ್ನು ನಿರ್ಮಿಸಿತು. 6 ದಶಕಗಳಲ್ಲಿ ಕೇವಲ 3 ಸೇತುವೆಗಳು! ನಂತರ ನೀವು ನಮಗೆ ನಿಮ್ಮ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿದ್ದೀರಿ, ಕೇವಲ 1 ದಶಕದಲ್ಲಿ, ನಮ್ಮ ಸರ್ಕಾರ 6 ಪ್ರಮುಖ ಸೇತುವೆಗಳನ್ನು ನಿರ್ಮಿಸಿದೆ. 6 ಪ್ರಮುಖ ಸೇತುವೆಗಳು! ಈಗ ಹೇಳಿ, ಇಷ್ಟು ಕೆಲಸ ಮುಗಿದಾಗ ನೀವು ಸಂತೋಷವಾಗುವುದಿಲ್ಲವೇ? ನೀವು ನಮಗೆ ನಿಮ್ಮ ಆಶೀರ್ವಾದವನ್ನು ನೀಡುವುದಿಲ್ಲವೇ? ನಿಮ್ಮ ಪ್ರೀತಿಯನ್ನು ನಮ್ಮ ಮೇಲೆ ಸುರಿಸುವುದಿಲ್ಲವೇ? ನೀವು ಸಂತೋಷವಾಗಿದ್ದೀರಿ, ಅಲ್ಲವೆ? ನಾನು ಇನ್ನೂ ಹೆಚ್ಚಿನ ಕೆಲಸ ಮಾಡಲು ಬಯಸುತ್ತೇನೆ. ನಿಮ್ಮ ಆಶೀರ್ವಾದಗಳನ್ನು ನೀಡುತ್ತಲೇ ಇರಿ. ಇಂದು, ಕುರುವಾ-ನರೇಂಗಿ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸೇತುವೆಯೊಂದಿಗೆ ಗುವಾಹಟಿ ಮತ್ತು ದರ್ರಾಂಗ್ ನಡುವಿನ ಅಂತರವು ಕೆಲವೇ ನಿಮಿಷಗಳಿಗೆ ಕುಗ್ಗುತ್ತದೆ. ಇದು ಸಾಮಾನ್ಯ ಜನರಿಗೆ ಸಮಯ ಮತ್ತು ಹಣವನ್ನು ಉಳಿಸುತ್ತದೆ, ಸಾರಿಗೆಯನ್ನು ಅಗ್ಗವಾಗಿಸುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಸಂಚಾರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವೆಲ್ಲದರ ಪರಿಣಾಮವಾಗಿ, ಸರಕುಗಳ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.
ಸ್ನೇಹಿತರೆ,
ಹೊಸ ವರ್ತುಲ ರಸ್ತೆಯು ನಿಮಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದನ್ನು ನಿರ್ಮಿಸಿದ ನಂತರ, ಮೇಲಿನ ಅಸ್ಸಾಂ ಕಡೆಗೆ ಹೋಗುವ ವಾಹನಗಳು ಇನ್ನು ಮುಂದೆ ನಗರವನ್ನು ಪ್ರವೇಶಿಸುವ ಅಗತ್ಯವಿಲ್ಲ. ಈ ವರ್ತುಲ ರಸ್ತೆಯು 5 ರಾಷ್ಟ್ರೀಯ ಹೆದ್ದಾರಿಗಳು, 2 ರಾಜ್ಯ ಹೆದ್ದಾರಿಗಳು, 1 ವಿಮಾನ ನಿಲ್ದಾಣ, 3 ರೈಲು ನಿಲ್ದಾಣಗಳು ಮತ್ತು 1 ಒಳನಾಡಿನ ನೀರಿನ ಟರ್ಮಿನಲ್ ಅನ್ನು ಸಂಪರ್ಕಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಸ್ಸಾಂನಲ್ಲಿ ಮೊದಲ ಬಾರಿಗೆ ಸಂಪೂರ್ಣ ತಡೆರಹಿತ ಬಹುಮಾದರಿ ಸಂಪರ್ಕ ಜಾಲ ಸ್ಥಾಪಿಸಲಾಗುವುದು. ಇದು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದ ಅಭಿವೃದ್ಧಿ ಮಾದರಿಯಾಗಿದೆ.
ಸ್ನೇಹಿತರೆ,
ನಾವು ರಾಷ್ಟ್ರವನ್ನು ಇವತ್ತಿಗೆ ಮಾತ್ರವಲ್ಲ, ಮುಂದಿನ 25-50 ವರ್ಷಗಳ ಅಗತ್ಯಗಳಿಗಾಗಿ ಸಿದ್ಧಪಡಿಸುತ್ತಿದ್ದೇವೆ, ಏಕೆಂದರೆ ಭಾರತವು 2047ರಲ್ಲಿ 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವಾಗ, ನಾವು ಅದನ್ನು 'ವಿಕಸಿತ ಭಾರತ'ವಾಗಿ ಅಭಿವೃದ್ಧಿಪಡಿಸಬೇಕು. ನಾವು ಇದನ್ನು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಮ್ಮ ಯುವಕರ ಉಜ್ವಲ ಭವಿಷ್ಯಕ್ಕಾಗಿ ಮಾಡಬೇಕು. ಈ ದಿಕ್ಕಿನಲ್ಲಿ, ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆ ತರಲಾಗುವುದು ಎಂದು ನಾನು ಕೆಂಪುಕೋಟೆಯಿಂದ ಘೋಷಿಸಿದ್ದೆ. ಇಂದು, ನಾನು ಈ ಒಳ್ಳೆಯ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ನಿಖರವಾಗಿ 9 ದಿನಗಳಲ್ಲಿ, ನವರಾತ್ರಿಯ ಮೊದಲ ದಿನದಂದು, ಜಿಎಸ್‌ಟಿ ದರಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದು ಅಸ್ಸಾಂ ಮತ್ತು ದೇಶಾದ್ಯಂತದ ಪ್ರತಿಯೊಂದು ಕುಟುಂಬಕ್ಕೂ ಪ್ರಯೋಜನ ನೀಡುತ್ತದೆ. ಅನೇಕ ದಿನನಿತ್ಯದ ವಸ್ತುಗಳು ಅಗ್ಗವಾಗುತ್ತವೆ. ನಾವು ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಿದ್ದೇವೆ, ಆದ್ದರಿಂದ ಮನೆ ನಿರ್ಮಿಸುವವರು ಕಡಿಮೆ ವೆಚ್ಚ ಪಡೆಯಲಿದ್ದಾರೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಅನೇಕ ದುಬಾರಿ ಔಷಧಿಗಳು ಅಗ್ಗವಾಗುತ್ತವೆ. ವಿಮೆ ಹೆಚ್ಚು ಕೈಗೆಟುಕುವಂತಾಗುತ್ತದೆ. ಮೋಟಾರ್‌ಸೈಕಲ್‌ಗಳು ಅಥವಾ ಹೊಸ ಕಾರುಗಳನ್ನು ಖರೀದಿಸಲು ಬಯಸುವ ಯುವಕರಿಗೆ ಅವು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ನೀವು ಆಟೋಮೊಬೈಲ್ ಕಂಪನಿಗಳ ಜಾಹೀರಾತುಗಳನ್ನು 60,000 ರೂಪಾಯಿ, 80,000 ರೂಪಾಯಿ, 1 ಲಕ್ಷ ರೂಪಾಯಿ ರಿಯಾಯಿತಿಯೊಂದಿಗೆ ನೋಡುತ್ತಿರಬೇಕು. ಅವರು ಬಹುತೇಕ ಪ್ರತಿದಿನ ಜಾಹೀರಾತು ನೀಡುತ್ತಿದ್ದಾರೆ. ಇದರರ್ಥ ತಾಯಂದಿರು ಮತ್ತು ಸಹೋದರಿಯರು, ಯುವಕರು, ರೈತರು ಅಥವಾ ವರ್ತಕರು ಆಗಿರಲಿ, ಎಲ್ಲರೂ ಪ್ರಯೋಜನ ಪಡೆಯುತ್ತಾರೆ. ಈ ನಿರ್ಧಾರವು ನಿಮ್ಮ ಹಬ್ಬಗಳಿಗೆ ಇನ್ನಷ್ಟು ಹೊಳಪು ನೀಡುತ್ತದೆ.
ಸ್ನೇಹಿತರೆ,
ಆದರೆ ಈ ಹಬ್ಬಗಳ ಸಮಯದಲ್ಲಿ, ನೀವು ನನ್ನ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಹೇಳಬಹುದೇ? ನಾನು ಹೇಳಬೇಕೇ? ನೀವು ಕೇಳುತ್ತೀರಾ? ನಿಮ್ಮ ಕೈಗಳನ್ನು ಎತ್ತಿ ಹೇಳಿ: ನಾನು ಹೇಳಬೇಕೇ? ನೀವು ಅದನ್ನು ಅನುಸರಿಸುತ್ತೀರಾ? ಮಗು ದಯವಿಟ್ಟು, ಕುಳಿತುಕೊ, ಧನ್ಯವಾದಗಳು. ಅವನಿಗೆ ತೊಂದರೆ ಕೊಡಬೇಡಿ. ಅವನು ದೈಹಿಕವಾಗಿ ಅಸ್ವಸ್ಥನೆಂದು ನಾನು ಭಾವಿಸುತ್ತೇನೆ. ದಯವಿಟ್ಟು ಅವನನ್ನು ತಳ್ಳಬೇಡಿ. ನಾವು ಅವನಿಂದ ಅದನ್ನು ತೆಗೆದುಕೊಳ್ಳುತ್ತೇವೆ. ಕ್ಯಾಮೆರಾಮನ್, ದಯವಿಟ್ಟು ಅವನ ಪತ್ರವನ್ನು ತೆಗೆದುಕೊಳ್ಳಿ. ಯುವಕ, ಚಿಂತಿಸಬೇಡ, ಕುಳಿತುಕೊ. ಅವನಿಗೆ ಅನನುಕೂಲ ಉಂಟು ಮಾಡಬೇಡಿ. ಸಹೋದರ, ನಾನು ನಿನಗೆ ನಮಸ್ಕರಿಸುತ್ತೇನೆ. ದಯವಿಟ್ಟು ಅವನಿಗೆ ತೊಂದರೆ ಕೊಡಬೇಡ. ಅದು ನನಗೆ ಸರಿ ಅನಿಸುತ್ತಿಲ್ಲ. ನೀವು ಇಷ್ಟೊಂದು ನೋವಿನಲ್ಲೂ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ನಿನಗೆ ಕೃತಜ್ಞನಾಗಿದ್ದೇನೆ.
ಸ್ನೇಹಿತರೆ,
ಈಗ ನಿಮ್ಮ ಕೈಗಳನ್ನು ಎತ್ತಿ ಹೇಳಿ: ನಾನು ಹೇಳುವುದನ್ನು ನೀವು ಅನುಸರಿಸುತ್ತೀರಾ? ಹೀಗಲ್ಲ, ಎಲ್ಲರೂ ಕೈಗಳನ್ನು ಮೇಲಕ್ಕೆತ್ತಬೇಕು! ನೀವು ಅನುಸರಿಸುತ್ತೀರಾ? ನನಗೆ ಭರವಸೆ ನೀಡಿ. ಅದನ್ನು ಮಾಡಿ ಮತ್ತು ದೇಶ ಮುಂದುವರಿಯುತ್ತದೆ, ನನ್ನ ಸ್ನೇಹಿತರೆ. ನಾನು ಇದನ್ನು ನನಗಾಗಿ ಕೇಳುತ್ತಿಲ್ಲ, ದೇಶಕ್ಕಾಗಿ. ನಾನು ಇದನ್ನು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೇಳುತ್ತಿದ್ದೇನೆ. ಆದ್ದರಿಂದ, ನಾನು ಇದನ್ನು ನಿಮಗೆ ಹೇಳುತ್ತೇನೆ. ಇಂದಿನಿಂದ, ನೀವು ಏನನ್ನಾದರೂ ಖರೀದಿಸಿದರೂ ಅದು ಸ್ವದೇಶಿ ಆಗಿರುತ್ತದೆ ಎಂದು ನನಗೆ ಭರವಸೆ ನೀಡಿ. ನೀವು ಸ್ವದೇಶಿ ಖರೀದಿಸುತ್ತೀರಾ? ನೀವು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸುತ್ತೀರಾ? ಸ್ವದೇಶಿಯ ನನ್ನ ವ್ಯಾಖ್ಯಾನವು ತುಂಬಾ ಸರಳವಾಗಿದೆ: ಕಂಪನಿಯು ಯಾವ ದೇಶದಿಂದ ಬಂದರೂ, ಅದು ಯಾವುದೇ ವಿದೇಶಿ ಹೆಸರನ್ನು ಹೊಂದಿದ್ದರೂ ಪರವಾಗಿಲ್ಲ. ಅದು ಭಾರತದಲ್ಲಿ ತಯಾರಿಸಲ್ಪಟ್ಟರೆ, ಅದು ಸ್ವದೇಶಿ. ಹಣವು ಪ್ರಪಂಚದ ಯಾವುದೇ ಭಾಗದಿಂದ ಬರಬಹುದು, ಆದರೆ ಬೆವರು ನನ್ನ ದೇಶದ ಯುವಕರಿಗೆ ಸೇರಿರಬೇಕು. ಪ್ರತಿಯೊಂದು ಮೇಡ್ ಇನ್ ಇಂಡಿಯಾ ಉತ್ಪನ್ನವು ಭಾರತದ ಮಣ್ಣಿನ ವಾಸನೆ ಹೊಂದಿರಬೇಕು. ನೀವು ಅಂತಹ ವಸ್ತುಗಳನ್ನು ಖರೀದಿಸುತ್ತೀರಾ? ನಿಮ್ಮ ಕೈಗಳನ್ನು ಎತ್ತಿ ನೀವು ಆ ಉತ್ಪನ್ನಗಳನ್ನು ಖರೀದಿಸುತ್ತೀರಿ ಎಂದು ಹೇಳಿ. ನೀವು ಯಾರಿಗಾದರೂ ಉಡುಗೊರೆ ನೀಡಬೇಕಾದರೆ, ಅದು ಸ್ವದೇಶಿ ಮಾತ್ರವೇ ಆಗಿರಬೇಕು. ಎಲ್ಲಾ ವರ್ತಕರಿಗೆ, ದಯವಿಟ್ಟು ನಿಮ್ಮ ಅಂಗಡಿಯಲ್ಲಿ ಒಂದು ಬೋರ್ಡ್ ಹಾಕಿ ಎಂದು ನಾನು ಮನವಿ ಮಾಡುತ್ತೆನೆ. ನೀವು ಅದನ್ನು ಮಾಡುತ್ತೀರಾ? ನಿಮ್ಮ ಹಳ್ಳಿಯ ಪ್ರತಿಯೊಂದು ಅಂಗಡಿಯಲ್ಲೂ ಒಂದು ಬೋರ್ಡ್ ಹಾಕಿ: "ಇದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳಿ."
ಸ್ವದೇಶಿಯ ಶಕ್ತಿಯನ್ನು ನಾನು ನಿಮಗೆ ಹೇಳುತ್ತೇನೆ. ಸುಮಾರು 50 ವರ್ಷಗಳ ಹಿಂದೆ, ನಾನು ಸ್ವಲ್ಪ ಸಮಯ ಕನ್ಯಾಕುಮಾರಿಯಲ್ಲಿ ವಾಸಿಸುತ್ತಿದ್ದೆ. ನಾನು ಯಾವಾಗಲೂ ನನ್ನೊಂದಿಗೆ 'ಗಮೋಚ'ವನ್ನು ಇಟ್ಟುಕೊಂಡಿರುತ್ತಿದ್ದೆ. ನನ್ನ ಬ್ಯಾಂಗ್ ನಲ್ಲಿ ಯಾವಾಗಲೂ 3 ಅಥವಾ 4 'ಗಮೋಚ' ಇರುತ್ತಿತ್ತು. ನಾನು ಕನ್ಯಾಕುಮಾರಿಯಲ್ಲಿ ನನ್ನ ಭುಜದ ಮೇಲೆ 'ಗಮೋಚ' ಇಟ್ಟುಕೊಂಡು ಓಡಾಡುತ್ತಿದ್ದೆ, ಕೆಲವರು ದೂರದಿಂದ ಓಡಿ ಬಂದು ನನ್ನನ್ನು ಸ್ವಾಗತಿಸಿದರು ಮತ್ತು ನನ್ನನ್ನು ಹಿಡಿದುಕೊಂಡರು. ಅವರು, "ನೀವು ಅಸ್ಸಾಂನವರೇ?" ಎಂದು ಕೇಳಿದರು, "ಇಲ್ಲ, ನಾನು ಗುಜರಾತ್‌ನವನು" ಎಂದು ಹೇಳಿದೆ. ಅವರು, "ಆದರೆ ನಾವು 'ಗಮೋಚ'ವನ್ನು ನೋಡಿದ್ದೇವೆ, ಅದಕ್ಕಾಗಿಯೇ ನಾವು ನಿಮ್ಮನ್ನು ಅಸ್ಸಾಂನವರು ಎಂದು ಭಾವಿಸಿದೆವು" ಎಂದು ಹೇಳಿದರು. ಅದು ಮಣ್ಣಿನ ಶಕ್ತಿ, ಸ್ವದೇಶಿಯ ಶಕ್ತಿ. ನನಗೆ ಅಲ್ಲಿ ಯಾವುದೇ ಗುರುತು ಇರಲಿಲ್ಲ, ಆದರೆ ಆ ದಿನ, ಅಸ್ಸಾಂನ ಜನರು ನನ್ನ ಮೇಲೆ ತಮ್ಮ ಪ್ರೀತಿಯನ್ನು ಸುರಿಸಿದರು, ಏಕೆಂದರೆ ನಾನು 'ಗಮೋಚ' ಧರಿಸಿದ್ದೆ. ಸ್ನೇಹಿತರೆ, ಇದು ನಮ್ಮ ಸಂಪ್ರದಾಯಗಳ ಶಕ್ತಿ. ಅದಕ್ಕಾಗಿಯೇ ನಾನು ಹೇಳುತ್ತೇನೆ, ನಾವು ಸ್ವದೇಶಿಯನ್ನು ಖರೀದಿಸುತ್ತೇವೆ ಎಂದು ನನಗೆ ಭರವಸೆ ನೀಡಿ. ನಾವು ಸ್ಥಳೀಯರಿಗೆ ಧ್ವನಿಯಾಗೋಣ. ಸ್ಥಳೀಯ ಉತ್ಪನ್ನಗಳನ್ನು ತಯಾರಿಸುವ ನಮ್ಮ ಸಾಮೂಹಿಕ ಪ್ರಯತ್ನಗಳು ನಮ್ಮ ರಾಷ್ಟ್ರವನ್ನು ಬಲಪಡಿಸುತ್ತವೆ.
ಸ್ನೇಹಿತರೆ,
ಕಳೆದ ವರ್ಷಗಳಲ್ಲಿ, ದೇಶಾದ್ಯಂತ ಅಪಾರ ಕೆಲಸ ಮಾಡಲಾದ ಮತ್ತೊಂದು ವಲಯವೆಂದರೆ ಆರೋಗ್ಯ ರಕ್ಷಣೆ. ಹಿಂದೆ, ಆಸ್ಪತ್ರೆಗಳು ಮುಖ್ಯವಾಗಿ ದೊಡ್ಡ ನಗರಗಳಲ್ಲಿದ್ದವು, ಅಲ್ಲಿ ಚಿಕಿತ್ಸೆಯು ತುಂಬಾ ದುಬಾರಿಯಾಗಿತ್ತು. ನಮ್ಮ ಸರ್ಕಾರವು ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳ ಜಾಲವನ್ನು ದೇಶದ ಮೂಲೆ ಮೂಲೆಗೆ ವಿಸ್ತರಿಸಿದೆ. ದಯವಿಟ್ಟು ಕುಳಿತುಕೊಳ್ಳಿ ಸಹೋದರ... ನನ್ನ ಭಾಷಣವನ್ನು ಮುಂದುವರಿಸುತ್ತೇನೆ. ದಯವಿಟ್ಟು ಕುಳಿತುಕೊಳ್ಳಿ... ದಯವಿಟ್ಟು ಅವರಿಗೆ ತೊಂದರೆ ಕೊಡಬೇಡಿ. ಕ್ಯಾಮೆರಾಮನ್, ಅವರಿಂದ ಪತ್ರ ತೆಗೆದುಕೊಳ್ಳಿ. ನೀವು ನನ್ನ ವಿಶೇಷಚೇತನ ಸಹೋದರರನ್ನು ಏಕೆ ತೊಂದರೆಗೊಳಿಸುತ್ತಿದ್ದೀರಿ? ಧನ್ಯವಾದಗಳು, ನನ್ನ ಸ್ನೇಹಿತ. ಇಲ್ಲಿ ಅಸ್ಸಾಂನಲ್ಲಿ, ಕ್ಯಾನ್ಸರ್ ಆಸ್ಪತ್ರೆಗಳಿಗೂ ವಿಶೇಷ ಗಮನ ನೀಡಲಾಗಿದೆ. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ. ಅಂದರೆ, ಕೇವಲ 11 ವರ್ಷಗಳಲ್ಲಿ, ಸ್ವಾತಂತ್ರ್ಯದ ನಂತರ 60-65 ವರ್ಷಗಳಲ್ಲಿ ನಿರ್ಮಿಸಲಾದಷ್ಟು ವೈದ್ಯಕೀಯ ಕಾಲೇಜುಗಳನ್ನು ನಾವು ನಿರ್ಮಿಸಿದ್ದೇವೆ. ಸ್ವಲ್ಪ ಯೋಚಿಸಿ, 60–70 ವರ್ಷಗಳಲ್ಲಿ ಏನು ಮಾಡಿದ್ದೇವೆ, ನಾವು ಕೇವಲ 10–11 ವರ್ಷಗಳಲ್ಲಿ ಮಾಡಿದ್ದೇವೆ, ನನ್ನ ಸ್ನೇಹಿತರೆ! ಅಸ್ಸಾಂನಲ್ಲಿಯೂ ಸಹ, 2014ಕ್ಕಿಂತ ಮೊದಲು ಕೇವಲ 6 ವೈದ್ಯಕೀಯ ಕಾಲೇಜುಗಳು ಇದ್ದವು. ಈಗ, ದರ್ರಾಂಗ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜಿನೊಂದಿಗೆ, ಈ ಸಂಖ್ಯೆ 24 ವೈದ್ಯಕೀಯ ಕಾಲೇಜುಗಳನ್ನು ತಲುಪುತ್ತದೆ. ವೈದ್ಯಕೀಯ ಕಾಲೇಜು ನಿರ್ಮಿಸಿದಾಗ, ಉತ್ತಮ ಆರೋಗ್ಯ ಸೌಲಭ್ಯಗಳು ಲಭ್ಯವಾಗುವುದಲ್ಲದೆ, ಹೆಚ್ಚು ಹೆಚ್ಚು ಯುವಕರು ವೈದ್ಯರಾಗಲು ಅವಕಾಶ ಪಡೆಯುತ್ತಾರೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಈ ಹಿಂದೆ, ನಮ್ಮ ಅನೇಕ ಯುವಕರು ವೈದ್ಯಕೀಯ ಸೀಟುಗಳ ಕೊರತೆಯಿಂದಾಗಿ ವೈದ್ಯರಾಗಲು ಸಾಧ್ಯವಾಗಲಿಲ್ಲ. ಕಳೆದ 11 ವರ್ಷಗಳಲ್ಲಿ, ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದು ಮಾತ್ರವಲ್ಲ, ನಾವು ಇನ್ನೊಂದು ಗುರಿ ಹೊಂದಿದ್ದೇವೆ. ಮುಂದಿನ 4-5 ವರ್ಷಗಳಲ್ಲಿ ನಾವು 1 ಲಕ್ಷ ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಲಿದ್ದೇವೆ. ಅಂದರೆ, 1 ಲಕ್ಷ ಹೊಸ ವೈದ್ಯರನ್ನು ಸೃಜಿಸಲಾಗುವುದು.
ಸ್ನೇಹಿತರೆ,
ನಾವು ಹೀಗೆಯೇ ಕೆಲಸ ಮಾಡುತ್ತೇವೆ. 3 ಕೋಟಿ "ಲಖ್ಪತಿ ದೀದಿಗಳನ್ನು" ಸೃಜಿಸಲು ನಾವು ಕೆಲಸ ಮಾಡುತ್ತಿರುವಂತೆಯೇ, 1 ಲಕ್ಷ ಹೊಸ ವೈದ್ಯರನ್ನು ಸೃಜಿಸಲು ನಾವು ಕೆಲಸ ಮಾಡುತ್ತಿದ್ದೇವೆ.
ಸ್ನೇಹಿತರೆ,
ಅಸ್ಸಾಂ ದೇಶಭಕ್ತರ ನಾಡು. ವಿದೇಶಿ ಆಕ್ರಮಣಕಾರರಿಂದ ದೇಶವನ್ನು ರಕ್ಷಿಸುವುದಾಗಲಿ ಅಥವಾ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡುವುದಾಗಲಿ, ಅಸ್ಸಾಂ ಬಹುದೊಡ್ಡ ಪಾತ್ರ ವಹಿಸಿದೆ. ಪಥರುಘಾಟ್ ರೈತರ ಸತ್ಯಾಗ್ರಹವನ್ನು ಯಾರು ಮರೆಯಲು ಸಾಧ್ಯ? ಆ ಐತಿಹಾಸಿಕ ತಾಣ ಇಲ್ಲಿಂದ ದೂರವಿಲ್ಲ. ಇಂದು, ನಾನು ಈ ಪವಿತ್ರ ತ್ಯಾಗಭೂಮಿಯಲ್ಲಿ ನಿಂತಿರುವಾಗ, ಕಾಂಗ್ರೆಸ್‌ನ ಮತ್ತೊಂದು ದುಷ್ಕೃತ್ಯವನ್ನು ಬಹಿರಂಗಪಡಿಸುವುದು ಅವಶ್ಯಕ. ತನ್ನ ರಾಜಕೀಯಕ್ಕಾಗಿ, ಕಾಂಗ್ರೆಸ್ ಯಾವಾಗಲೂ ಭಾರತ ವಿರೋಧಿ ಜನರು ಮತ್ತು ಸಿದ್ಧಾಂತಗಳೊಂದಿಗೆ ನಿಂತಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ನಾವು ಇದನ್ನು ಮತ್ತೆ ನೋಡಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಭಯೋತ್ಪಾದನೆಯಿಂದಾಗಿ ಇಡೀ ರಾಷ್ಟ್ರವೇ ರಕ್ತಸ್ರಾವವಾಗುತ್ತಿತ್ತು, ಆದರೆ ಕಾಂಗ್ರೆಸ್ ಮೌನವಾಗಿ ನಿಂತಿತು. ಇಂದು, ನಮ್ಮ ಸೇನೆಯು ಆಪರೇಷನ್ ಸಿಂದೂರ್ ನಡೆಸಿ, ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯ ಸೂತ್ರಧಾರಿಗಳನ್ನು ಕಿತ್ತುಹಾಕಿತು. ಆದರೆ ನಮ್ಮ ಸೇನೆಯೊಂದಿಗೆ ನಿಲ್ಲುವ ಬದಲು, ಕಾಂಗ್ರೆಸ್ ಪಾಕಿಸ್ತಾನದ ಸೈನ್ಯದ ಪರವಾಗಿ ನಿಂತಿದೆ. ನಮ್ಮ ಸೈನಿಕರನ್ನು ಬೆಂಬಲಿಸುವ ಬದಲು, ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಪೋಷಿಸುವವರ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಾರೆ. ಪಾಕಿಸ್ತಾನದ ಸುಳ್ಳುಗಳು ಕಾಂಗ್ರೆಸ್‌ನ ಕಾರ್ಯಸೂಚಿಯಾಗುತ್ತವೆ. ಅದಕ್ಕಾಗಿಯೇ, ನೀವು ಯಾವಾಗಲೂ ಕಾಂಗ್ರೆಸ್ ಬಗ್ಗೆ ಜಾಗರೂಕರಾಗಿರಬೇಕು.
ಸ್ನೇಹಿತರೆ,
ಕಾಂಗ್ರೆಸ್‌ಗೆ, ತನ್ನ ಮತ ಬ್ಯಾಂಕ್ ರಕ್ಷಿಸುವುದು ಅತ್ಯುನ್ನತ ಆದ್ಯತೆಯಾಗಿದೆ. ಕಾಂಗ್ರೆಸ್ ಎಂದಿಗೂ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇಂದು, ಕಾಂಗ್ರೆಸ್ ರಾಷ್ಟ್ರವಿರೋಧಿ ಅಂಶಗಳು ಮತ್ತು ಒಳನುಸುಳುವವರ ದೊಡ್ಡ ರಕ್ಷಕನಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅದು ಒಳನುಸುಳುವಿಕೆಯನ್ನು ಪ್ರೋತ್ಸಾಹಿಸಿತು, ಇಂದು ಕಾಂಗ್ರೆಸ್, ಒಳನುಸುಳುವವರು ಭಾರತದಲ್ಲಿ ಶಾಶ್ವತವಾಗಿ ನೆಲೆಸಿ ಭಾರತದ ಭವಿಷ್ಯವನ್ನು ನಿರ್ಧರಿಸಬೇಕೆಂದು ಬಯಸುತ್ತದೆ. ಒಮ್ಮೆ, ಮಂಗಲ್ಡೋಯ್ ಅಕ್ರಮ ಒಳನುಸುಳುವಿಕೆಯ ವಿರುದ್ಧ ಅಸ್ಸಾಂನ ಗುರುತನ್ನು ರಕ್ಷಿಸಲು ಬೃಹತ್ ಚಳವಳಿಯೇ ನಡೆಯಿತು. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಅದಕ್ಕಾಗಿ ನಿಮ್ಮನ್ನು ಶಿಕ್ಷಿಸಿತು. ಅವರು ನಿಮ್ಮ ಮೇಲೆ ಸೇಡು ತೀರಿಸಿಕೊಂಡರು. ಕಾಂಗ್ರೆಸ್ ಇಲ್ಲಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ನಮ್ಮ ಪೂಜಾ ಸ್ಥಳಗಳು, ನಮ್ಮ ರೈತರು ಮತ್ತು ಬುಡಕಟ್ಟು ಜನರ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು. ಬಿಜೆಪಿ-ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆ ಪರಿಸ್ಥಿತಿಗಳನ್ನು ಸರಿಪಡಿಸುತ್ತಿದೆ. ಇಲ್ಲಿನ ಅಕ್ರಮ ಉದ್ಯೋಗಗಳನ್ನು ತೆಗೆದುಹಾಕಲಾಗುತ್ತಿದೆ. ಹಿಮಂತ ಜಿ ಅವರ ನೇತೃತ್ವದಲ್ಲಿ ಅಸ್ಸಾಂನಲ್ಲಿ ಲಕ್ಷಾಂತರ ಬಿಘಾ ಭೂಮಿಯನ್ನು ಒಳನುಸುಳುವವರಿಂದ ಮುಕ್ತಗೊಳಿಸಲಾಗಿದೆ, ದರ್ರಾಂಗ್ ಜಿಲ್ಲೆಯಲ್ಲಿಯೂ ಸಹ ಹೆಚ್ಚಿನ ಭೂಮಿಯನ್ನು ಅತಿಕ್ರಮಣದಿಂದ ತೆರವುಗೊಳಿಸಲಾಗಿದೆ. ಗರುಖುತಿ ಪ್ರದೇಶದಲ್ಲಿಯೂ ಸಹ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅತಿಕ್ರಮಣ ನಡೆದಿತ್ತು. ಆ ಭೂಮಿಯನ್ನು ಈಗ ಮರಳಿ ಪಡೆಯಲಾಗಿದೆ. ರೈತರಿಗಾಗಿ ಗರುಖುತಿ ಕೃಷಿ ಯೋಜನೆ ನಡೆಯುತ್ತಿದೆ. ಅಲ್ಲಿನ ಯುವಕರು ಈಗ ಕೃಷಿ ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಸಿವೆ, ಜೋಳ, ಉದ್ದು, ಎಳ್ಳು, ಕುಂಬಳಕಾಯಿಯಿಂದ ಹಿಡಿದು ಎಲ್ಲವನ್ನೂ ಅಲ್ಲಿ ಬೆಳೆಯಲಾಗುತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಕಾಲದಲ್ಲಿ ನುಸುಳುಕೋರರ ನಿಯಂತ್ರಣದಲ್ಲಿದ್ದ ಭೂಮಿ ಇಂದು ಅಸ್ಸಾಂನಲ್ಲಿ ಕೃಷಿ ಅಭಿವೃದ್ಧಿಯ ಹೊಸ ಕೇಂದ್ರವಾಗಿದೆ.
ಸ್ನೇಹಿತರೆ,
ನುಸುಳುಕೋರರು ದೇಶದ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳಲು ಬಿಜೆಪಿ ಸರ್ಕಾರವು ಬಿಡುವುದಿಲ್ಲ. ಭಾರತದ ರೈತರು, ಭಾರತದ ಯುವಕರು ಮತ್ತು ನಮ್ಮ ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಯಾರಿಗೂ ಬಿಡುವುದಿಲ್ಲ. ಈ ನುಸುಳುಕೋರರು ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಎಸಗುವುದಕ್ಕೆ ಅವಕಾಶ ನೀಡುವುದಿಲ್ಲ. ಗಡಿ ಪ್ರದೇಶಗಳ ಜನಸಂಖ್ಯೆಯನ್ನು ಬದಲಾಯಿಸಲು ನುಸುಳುಕೋರರ ಮೂಲಕ ಪಿತೂರಿಗಳು ನಡೆಯುತ್ತಿವೆ, ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಆದ್ದರಿಂದ, ಈಗ ದೇಶದಲ್ಲಿ ಜನಸಂಖ್ಯೆ ದಾಖಲು ಕಾರ್ಯಾಚರಣೆ ಪ್ರಾರಂಭಿಸಲಾಗುತ್ತಿದೆ. ದೇಶವನ್ನು ಒಳನುಸುಳುವವರಿಂದ ರಕ್ಷಿಸುವುದು ಮತ್ತು ದೇಶವನ್ನು ಒಳನುಸುಳುವವರಿಂದ ಮುಕ್ತಗೊಳಿಸುವುದು ಬಿಜೆಪಿಯ ಗುರಿಯಾಗಿದೆ. ಆ ರಾಜಕಾರಣಿಗಳಿಗೆ ನಾನು ಹೇಳುತ್ತೇನೆ: ನೀವು ಸವಾಲಿನೊಂದಿಗೆ ಕ್ಷೇತ್ರಕ್ಕೆ ಬಂದರೆ, ನಾನು ಆ ಸವಾಲನ್ನು ನನ್ನ ಎದೆಯಿಂದ ಸ್ವೀಕರಿಸುತ್ತೇನೆ. ಮುಂದುವರಿಯಿರಿ ಮತ್ತು ಅದನ್ನು ಬರೆದಿಟ್ಟುಕೊಳ್ಳಿ. ಒಳನುಸುಳುವವರನ್ನು ರಕ್ಷಿಸಲು ನೀವು ಎಷ್ಟು ಶಕ್ತಿಯನ್ನು ಬಳಸುತ್ತೀರಿ ಮತ್ತು ಒಳನುಸುಳುವವರನ್ನು ತೆಗೆದುಹಾಕಲು ನಾವು ನಮ್ಮ ಜೀವನವನ್ನು ಎಷ್ಟು ಖರ್ಚು ಮಾಡುತ್ತೇವೆ ಎಂದು ನೋಡೋಣ. ಸ್ಪರ್ಧೆ ಇರಲಿ. ಒಳನುಸುಳುವವರನ್ನು ರಕ್ಷಿಸಲು ಬರುವವರು ಬೆಲೆ ತೆರಬೇಕಾಗುತ್ತದೆ. ನನ್ನ ಮಾತುಗಳನ್ನು ಗುರುತಿಸಿ: ಈ ರಾಷ್ಟ್ರವು ಅವರನ್ನು ಕ್ಷಮಿಸುವುದಿಲ್ಲ.
ಸ್ನೇಹಿತರೆ,
ಅಸ್ಸಾಂನ ಪರಂಪರೆ ಕಾಪಾಡಲು ಮತ್ತು ಅಸ್ಸಾಂನ ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಾವು ಅಸ್ಸಾಂ ಮತ್ತು ಈಶಾನ್ಯವನ್ನು 'ವಿಕಸಿತ ಭಾರತ'ದ ಬೆಳವಣಿಗೆಯ ಎಂಜಿನ್ ಆಗಿ ಮಾಡಬೇಕು. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಂದ ನಿಮ್ಮೆಲ್ಲರ ಯಶಸ್ಸನ್ನು ನಾನು ಬಯಸುತ್ತೇನೆ. ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ ಜೈ. ಎರಡೂ ಕೈಗಳನ್ನು ಎತ್ತಿ ಪೂರ್ಣ ಬಲದಿಂದ ಧ್ವನಿ ಹೊರಬರಲಿ: ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ತುಂಬು ಧನ್ಯವಾದಗಳು.
*****
(Release ID: 2166695)
Visitor Counter : 2