ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಹಿಂದಿ ದಿನದ ಸಂದೇಶ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿಯ ಪುನರುಜ್ಜೀವನದ ಸುವರ್ಣ ಯುಗ ಪ್ರಗತಿಯಲ್ಲಿದೆ

ಹಿಂದಿ ದಿನದಂದು ಹಿಂದಿ ಮತ್ತು ಇತರ ಭಾರತೀಯ ಭಾಷೆಗಳು ತಂತ್ರಜ್ಞಾನ, ವಿಜ್ಞಾನ, ನ್ಯಾಯ, ಶಿಕ್ಷಣ ಮತ್ತು ಆಡಳಿತದಲ್ಲಿ ಬಳಕೆಯಾಗಬೇಕೆಂದು ಕೇಂದ್ರ ಗೃಹ ಸಚಿವರ ಕರೆ

ಒಟ್ಟಿಗೆ ನಡೆಯಿರಿ, ಒಟ್ಟಿಗೆ ಆಲೋಚಿಸಿ, ಒಟ್ಟಿಗೆ ಮಾತನಾಡಿ-ಇದು ನಮ್ಮ ಭಾಷಾ ಸಾಂಸ್ಕೃತಿಕ ಪ್ರಜ್ಞೆಯ ಮೂಲ ಮಂತ್ರ

ನರೇಂದ್ರ ಮೋದಿ ಸರ್ಕಾರವು ಡಿಜಿಟಲ್ ಇಂಡಿಯಾ, ಇ-ಆಡಳಿತ, ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ನ ಈ ಯುಗದಲ್ಲಿ ಭಾರತೀಯ ಭಾಷೆಗಳನ್ನು ಭವಿಷ್ಯಕ್ಕೆ ಸಮರ್ಥವಾಗಿ ಸಜ್ಜುಗೊಳಿಸುತ್ತಿದೆ

Posted On: 14 SEP 2025 9:50AM by PIB Bengaluru

ನನ್ನ ಅತ್ಮೀಯ ಸಹ ನಾಗರಿಕರೆ,

ನಿಮ್ಮೆಲ್ಲರಿಗೂ ಹಿಂದಿ ದಿನದ ಹಾರ್ದಿಕ ಶುಭಾಶಯಗಳು.  

ನಮ್ಮ ಭಾರತವು ಮೂಲತಃ ಭಾಷಾ-ಆಧಾರಿತ ರಾಷ್ಟ್ರ. ನಮ್ಮ ಭಾಷೆಗಳು ಸಂಸ್ಕೃತಿ, ಇತಿಹಾಸ, ಸಂಪ್ರದಾಯಗಳು, ಜ್ಞಾನ, ವಿಜ್ಞಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಪ್ರಬಲ ಮಾಧ್ಯಮವಾಗಿದೆ. ಹಿಮಾಲಯದ ಎತ್ತರದಿಂದ ದಕ್ಷಿಣದ ವಿಶಾಲ ಕಡಲ ತೀರಗಳವರೆಗೆ, ಮರುಭೂಮಿಯಿಂದ ಹಿಡಿದು ಕಡಿದಾದ ಕಾಡುಗಳು ಮತ್ತು ಹಳ್ಳಿ ಚೌಪಲಾಗಳವರೆಗೆ, ಭಾಷೆಗಳು ಪ್ರತಿಯೊಂದು ಸನ್ನಿವೇಶದಲ್ಲೂ ಮನುಷ್ಯನು ಸಂಘಟಿತವಾಗಿರಲು ಮತ್ತು ಸಂವಹನ ಮತ್ತು ಅಭಿವ್ಯಕ್ತಿಯ ಮೂಲಕ ಒಗ್ಗಟ್ಟಿನಿಂದ ಮುಂದುವರಿಯಲು ಮಾರ್ಗವನ್ನು ತೋರಿಸುತ್ತಿವೆ.

“ಒಟ್ಟಿಗೆ ನಡೆಯಿರಿ, ಒಟ್ಟಿಗೆ ಆಲೋಚಿಸಿ ಮತ್ತು ಒಟ್ಟಿಗೆ ಮಾತನಾಡಿ’’ ಎಂಬುದು ನಮ್ಮ ಭಾಷಾ-ಸಾಂಸ್ಕೃತಿಕ ಪ್ರಜ್ಞೆಯ ಮೂಲ ಮಂತ್ರವಾಗಿದೆ.

ಭಾರತದ ಭಾಷೆಗಳ ಅತಿ ದೊಡ್ಡ ಶಕ್ತಿ ಎಂದರೆ ಅವು ಎಲ್ಲಾ ವರ್ಗ ಮತ್ತು ಸಮುದಾಯಕ್ಕೂ ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳಲು ಅವಕಾಶವನ್ನು ಒದಗಿಸಿವೆ. ಈಶಾನ್ಯದಲ್ಲಿ ಬಿಹು ಅವರ ಹಾಡುಗಳು, ತಮಿಳುನಾಡಿನಲ್ಲಿ ಓವಿಯಾಲು ಅವರ ಧ್ವನಿ, ಪಂಜಾಬ್‌ನಲ್ಲಿ ಲೋಹ್ರಿಯ ಹಾಡುಗಳು, ಬಿಹಾರದಲ್ಲಿ ವಿದ್ಯಾಪತಿಯ ಪದ್ಯಗಳು, ಬಂಗಾಳದಲ್ಲಿ ಬೌಲ್ ಸಂತರ ಸ್ತೋತ್ರಗಳು, ಕಜ್ರಿ ಹಾಡುಗಳು ಮತ್ತು ಭಿಕಾರಿ ಠಾಕೂರ್ ಅವರ 'ಬಿದೇಸಿಯಾ' - ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಕ್ರೀಯಾಶೀಲ ಮತ್ತು ಕಲ್ಯಾಣ-ಆಧಾರಿತವಾಗಿಟ್ಟುಕೊಂಡಿವೆ.

ಭಾಷೆಗಳು ಪರಸ್ಪರ ಒಡನಾಡಿಗಳಾಗುವ ಮೂಲಕ ಮತ್ತು ಏಕತೆಯ ಎಳೆಯಲ್ಲಿ ಬಂಧಿಸಲ್ಪಟ್ಟಿದ್ದು, ಒಗ್ಗೂಡಿ ಮುಂದುವರಿಯುತ್ತಿವೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಸಂತ ತಿರುವಳ್ಳುವರ್ ಅವರ ಹಾಡುಗಳನ್ನು ಉತ್ತರದಲ್ಲಿ ಓದುವಷ್ಟೇ ಆಸಕ್ತಿಯಿಂದ, ದಕ್ಷಿಣದಲ್ಲಿ ಭಕ್ತಿಯಿಂದ ಹಾಡಲಾಗುವುದು. ಕೃಷ್ಣದೇವರಾಯ ದಕ್ಷಿಣದಲ್ಲಿ ಜನಪ್ರಿಯರಾಗಿದ್ದಂತೆಯೇ ಉತ್ತರದಲ್ಲಿಯೂ ಜನಪ್ರಿಯರಾಗಿದ್ದವರು. ಸುಬ್ರಮಣ್ಯ ಭಾರತಿ ಅವರ ದೇಶಭಕ್ತಿ ಗೀತೆಗಳ ಸಂಯೋಜನೆಗಳು ಪ್ರತಿಯೊಂದು ಪ್ರದೇಶದ ಯುವಕರಲ್ಲಿ ರಾಷ್ಟ್ರೀಯ ಹೆಮ್ಮೆಯನ್ನು ಮೊಳಗಿಸುತ್ತವೆ. ಗೋಸ್ವಾಮಿ ತುಳಸಿದಾಸರನ್ನು ಪ್ರತಿಯೊಬ್ಬ ಭಾರತೀಯರು ಪೂಜಿಸುತ್ತಾರೆ ಮತ್ತು ಸಂತ ಕಬೀರರ ದ್ವಿಪದಿಗಳು ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಅನುವಾದಗಳಲ್ಲಿ ಕಂಡುಬರುತ್ತವೆ. ಸೂರದಾಸರ ಕಾವ್ಯವು ಇಂದಿಗೂ ದಕ್ಷಿಣ ಭಾರತದ ದೇವಾಲಯಗಳು ಮತ್ತು ಸಂಗೀತ ಸಂಪ್ರದಾಯಗಳಲ್ಲಿ ಪ್ರಚಲಿತವಾಗಿದೆ. ಶ್ರೀಮಂತ ಶಂಕರದೇವ ಮತ್ತು ಮಹಾಪುರುಷ ಮಾಧವದೇವ ಅವರು ಪ್ರತಿಯೊಬ್ಬ ವೈಷ್ಣವರಿಗೂ ಚಿರಪರಿಚಿತರು ಮತ್ತು ಭೂಪೇನ್ ಹಜಾರಿಕಾ ಅವರ ಹಾಡುಗಳನ್ನು ಹರಿಯಾಣದ ಯುವಕರೂ ಸಹ ಗುನುಗುತ್ತಾರೆ.

ಗುಲಾಮಗಿರಿಯ ಸಂಕಷ್ದ ಸಮಯದಲ್ಲಿಯೂ ಸಹ, ಭಾರತೀಯ ಭಾಷೆಗಳು ಪ್ರತಿರೋಧದ ಧ್ವನಿಯಾಗಿದ್ದವು. ಸ್ವಾತಂತ್ರ್ಯ ಚಳವಳಿಯನ್ನು ರಾಷ್ಟ್ರವ್ಯಾಪಿ ಪ್ರಯತ್ನವನ್ನಾಗಿ ಮಾಡುವಲ್ಲಿ ನಮ್ಮ ಭಾಷೆಗಳು ಅತ್ಯಂತ ಮಹತ್ವದ ಪಾತ್ರ ವಹಿಸಿದವು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಪ್ರದೇಶಗಳು ಮತ್ತು ಹಳ್ಳಿಗಳ ಭಾಷೆಗಳನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆಸೆದರು. ಹಿಂದಿ ಜೊತೆಗೆ ಎಲ್ಲಾ ಭಾರತೀಯ ಭಾಷೆಗಳ ಕವಿಗಳು, ಸಾಹಿತಿಗಳು ಮತ್ತು ನಾಟಕಕಾರರು ಜಾನಪದ ಭಾಷೆಗಳು, ಜಾನಪದ ಕಥೆಗಳು, ಜಾನಪದ ಗೀತೆಗಳು ಮತ್ತು ಜಾನಪದ ನಾಟಕಗಳ ಮೂಲಕ ಎಲ್ಲಾ ವಯೋಮಾನ, ವರ್ಗ ಮತ್ತು ಸಮುದಾಯಗಳಲ್ಲಿ ಸ್ವಾತಂತ್ರ್ಯದ ಸಂಕಲ್ಪವನ್ನು ಬಲವಾಗಿ ಬಿತ್ತಿದರು. 'ವಂದೇ ಮಾತರಂ' ಮತ್ತು 'ಜೈ ಹಿಂದ್' ನಂತಹ ಘೋಷಣೆಗಳು ನಮ್ಮ ಭಾಷಾ ಪ್ರಜ್ಞೆಯಿಂದ ಹೊರಹೊಮ್ಮಿದವು ಮತ್ತು ಅವು ಸ್ವತಂತ್ರ ಭಾರತದ ಹೆಮ್ಮೆಯ ಸಂಕೇತಗಳಾದವು.

ದೇಶವು ಸ್ವಾತಂತ್ರ್ಯಗಳಿಸಿದಾಗ, ನಮ್ಮ ಸಂವಿಧಾನ ರಚನಾಕಾರರು ಭಾಷೆಗಳ ಸಾಮರ್ಥ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ವ್ಯಾಪಕವಾಗಿ ಚರ್ಚಿಸಿದರು ಮತ್ತು 1949ರ ಸೆಪ್ಟೆಂಬರ್ 14 ರಂದು ದೇವನಾಗರಿ ಲಿಪಿಯಲ್ಲಿ ಬರೆಯಲಾದ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡರು. ಹಿಂದಿಯನ್ನು ಭಾರತದ ಸಂಯೋಜಿತ ಸಂಸ್ಕೃತಿಯ ಪರಿಣಾಮಕಾರಿ ಮಾಧ್ಯಮವನ್ನಾಗಿ ಮಾಡಲು ಅದನ್ನು ಉತ್ತೇಜಿಸುವ ಮತ್ತು ಮತ್ತಷ್ಟು ಪಸರಿಸುವ ಜವಾಬ್ದಾರಿಯನ್ನು ಸಂವಿಧಾನದ 351ನೇ ವಿಧಿ ನೀಡುತ್ತದೆ.

ಕಳೆದೊಂದು ದಶಕದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿಗೆ ಪುನರುಜ್ಜೀವನದ ಸುವರ್ಣ ಯುಗವೊಂದು ಆರಂಭವಾಗಿದೆ. ಅದು ವಿಶ್ವಸಂಸ್ಥೆಯ ವೇದಿಕೆಯಾಗಿರಲಿ, ಜಿ-20 ಶೃಂಗಸಭೆಯಾಗಿರಲಿ ಅಥವಾ ಎಸ್‌.ಸಿ.ಒ ಉದ್ದೇಶಿಸಿ ಮಾತನಾಡಲಿ, ನರೇಂದ್ರ ಮೋದಿ ಜೀ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸುವ ಮೂಲಕ ಭಾರತೀಯ ಭಾಷೆಗಳ ಹೆಮ್ಮೆಯನ್ನು ಗಮನಾರ್ಹವಾಗಿ ವೃದ್ಧಿಸಿದ್ದಾರೆ.

ಸ್ವಾತಂತ್ಸೋತ್ಸವದ ‘ಅಮೃತ ಕಾಲದಲ್ಲಿ’, ನರೇಂದ್ರ ಮೋದಿ ಜಿ ಅವರು ದೇಶವನ್ನು ಗುಲಾಮಗಿರಿಯ ಸಂಕೇತಗಳಿಂದ ಮುಕ್ತಗೊಳಿಸಲು 'ಪಂಚ ಪ್ರಾಣ' (ಐದು ಸಂಕಲ್ಪಗಳನ್ನು) ಕೈಗೊಂಡಿದ್ದಾರೆ, ಅದರಲ್ಲಿ ಭಾಷೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ನಾವು ಭಾರತೀಯ ಭಾಷೆಗಳನ್ನು ಸಂವಹನ ಮತ್ತು ಸಂವಾದದ ಮಾಧ್ಯಮವಾಗಿ ಅಳವಡಿಸಿಕೊಳ್ಳಬೇಕು.

ಅಧಿಕೃತ ಭಾಷೆ ಹಿಂದಿ 76 ವೈಭವಯುತ ವರ್ಷಗಳನ್ನು ಪೂರೈಸಿದೆ. ಅಧಿಕೃತ ಭಾಷಾ ಇಲಾಖೆಯು ಸ್ಥಾಪನೆಯಾದ 50 ಸುವರ್ಣ ವರ್ಷಗಳನ್ನು ಪೂರೈಸಿದ ನಂತರ, ಹಿಂದಿಯನ್ನು ಜನಸಾಮಾನ್ಯರ ಮತ್ತು ಸಾರ್ವಜನಿಕ ಪ್ರಜ್ಞೆಯ ಭಾಷೆಯನ್ನಾಗಿ ಮಾಡುವಲ್ಲಿ ಗಮನಾರ್ಹ ಕೆಲಸ ಮಾಡಿದೆ.

2014 ರಿಂದ ಎಲ್ಲಾ ಸರಕಾರಿ ಕೆಲಸ ಕಾರ್ಯದಲ್ಲಿ ಹಿಂದಿ ಭಾಷೆಯನ್ನು ನಿರಂತರವಾಗಿ ಬಳಕೆ ಮಾಡಲು ಉತ್ತೇಜಿಸಲಾಗುತ್ತಿದೆ. 2024ರ  ಹಿಂದಿ ದಿನದಂದು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳ ನಡುವೆ ಸುಗಮ ಅನುವಾದವನ್ನು ಖಾತ್ರಿಪಡಿಸಿಕೊಳ್ಳುವ ಗುರಿಯೊಂದಿಗೆ ಭಾರತೀಯ ಭಾಷಾ ಅನುಭಾಗ್ ಅನ್ನು ಸ್ಥಾಪಿಸಲಾಯಿತು. ಹಿಂದಿ ಮತ್ತು ಇತರ ಭಾರತೀಯ ಭಾಷೆಗಳು ಕೇವಲ ಸಂವಹನ ಮಾಧ್ಯಮವಾಗದೆ ತಂತ್ರಜ್ಞಾನ, ವಿಜ್ಞಾನ, ನ್ಯಾಯ, ಶಿಕ್ಷಣ ಮತ್ತು ಆಡಳಿತದ ಮೂಲಾಧಾರವಾಗುವುದನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಡಿಜಿಟಲ್ ಇಂಡಿಯಾ, ಇ-ಆಡಳಿತ, ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ನ ಈ ಯುಗದಲ್ಲಿ ನಾವು ಭಾರತೀಯ ಭಾಷೆಗಳನ್ನು ಭವಿಷ್ಯದ ಸಾಮರ್ಥ್ಯಕ್ಕೆ ಸಜ್ಜುಗೊಳಿಸುತ್ತಿದ್ದೇವೆ ಮತ್ತು ಪ್ರಸ್ತುತ ಮತ್ತು ಜಾಗತಿಕ ತಾಂತ್ರಿಕ ಸ್ಪರ್ಧೆಯಲ್ಲಿ ಭಾರತವನ್ನು ನಾಯಕನನ್ನಾಗಿ ಮಾಡುವಲ್ಲಿ ಪ್ರೇರಕ ಶಕ್ತಿಯಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ.

ಸ್ನೇಹಿತರೇ, ಭಾಷೆ ಮುಂಗಾರಿನ ಹನಿಯಂತೆ, ಅದು ಮನಸ್ಸಿನ ದುಃಖ ಮತ್ತು ಖಿನ್ನತೆಯನ್ನು ತೊಳೆದು ಹೊಸ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಮಕ್ಕಳ ಕಲ್ಪನೆಯಿಂದ ರಚಿಸಲಾದ ವಿಶಿಷ್ಟ ಕಥೆಗಳಿಂದ ಹಿಡಿದು ಅಜ್ಜಿಯರ ಲಾಲಿ ಹಾಡುಗಳು ಮತ್ತು ಕಥೆಗಳವರೆಗೆ, ಭಾರತೀಯ ಭಾಷೆಗಳು ಸದಾ ಸಮಾಜಕ್ಕೆ ಬದುಕುಳಿಯುವ ಮತ್ತು ಆತ್ಮವಿಶ್ವಾಸದ ಮಂತ್ರವನ್ನು ನೀಡುತ್ತಾ ಬಂದಿವೆ.

ಮಿಥಿಲಾದ ಕವಿ ವಿದ್ಯಾಪತಿ ಜಿ ಸೂಕ್ತವಾಗಿಯೇ ಹೇಳಿದ್ದಾರೆ:

“ದೇಸಿಲ್ ಬಯಾನ ಸಬ್ ಜನ್ ಮಿಠಾ”

ಅಂದರೆ, ಒಬ್ಬರ ಸ್ವಂತ ಭಾಷೆ ಅತ್ಯಂತ ಸಿಹಿಯಾಗಿರುತ್ತದೆ.

ಹಿಂದಿ ದಿನದ ಈ ಸಂದರ್ಭದಲ್ಲಿ ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ಗೌರವಿಸೋಣ ಮತ್ತು ಸ್ವಾವಲಂಬಿ, ಸ್ವತಂತ್ರ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದತ್ತ ಮುನ್ನಡೆಯೋಣ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ಹಿಂದಿ ದಿನದ ಹೃತ್ಪೂರ್ವಕ ಶುಭಾಶಯಗಳು.

ವಂದೇ ಮಾತರಂ.

****


(Release ID: 2166548) Visitor Counter : 2