ಪ್ರಧಾನ ಮಂತ್ರಿಯವರ ಕಛೇರಿ
ಮಣಿಪುರದ ಇಂಫಾಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ
Posted On:
13 SEP 2025 6:26PM by PIB Bengaluru
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಮಣಿಪುರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಅಜಯ್ ಭಲ್ಲಾ ಜೀ, ರಾಜ್ಯ ಆಡಳಿತದ ಇತರ ಅಧಿಕಾರಿಗಳು ಮತ್ತು ಮಣಿಪುರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ! ನಮಸ್ಕಾರ!
ಇಂದು, ಮಣಿಪುರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳ ಶಂಕುಸ್ಥಾಪನೆ ಮಾಡಲಾಗಿದೆ. ಈ ಯೋಜನೆಗಳು ನಿಮ್ಮ ಜೀವನ ಸುಲಭತೆಯನ್ನು ಹೆಚ್ಚಿಸುತ್ತವೆ, ಇಲ್ಲಿ ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಮಣಿಪುರದ ಯುವಜನರಿಗೆ - ಈ ಭೂಮಿಯ ಪುತ್ರರು ಮತ್ತು ಪುತ್ರಿಯರಿಗೆ - ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಸ್ನೇಹಿತರೇ,
ಇಂದು ಆರಂಭವಾದ ಕಾಮಗಾರಿಗಳಲ್ಲಿ, ಎರಡು ಯೋಜನೆಗಳು ವಿಶೇಷವಾಗಿ ಗಮನಾರ್ಹವಾಗಿವೆ. ₹3,600 ಕೋಟಿಗೂ ಹೆಚ್ಚು ವೆಚ್ಚದ 'ಮಣಿಪುರ ನಗರ ರಸ್ತೆ ಯೋಜನೆ' ಮತ್ತು ₹500 ಕೋಟಿಗೂ ಹೆಚ್ಚು ವೆಚ್ಚದ ಮಣಿಪುರ ಇನ್ಫೋಟೆಕ್ ಅಭಿವೃದ್ಧಿ ಯೋಜನೆ. ಈ ಯೋಜನೆಗಳು ಇಂಫಾಲ್‌ನಲ್ಲಿ ರಸ್ತೆ ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಮಣಿಪುರದ ಉಜ್ವಲ ಭವಿಷ್ಯಕ್ಕೆ ಹೊಸ ಶಕ್ತಿಯನ್ನು ತುಂಬುತ್ತವೆ. ಈ ಎಲ್ಲಾ ಅಭಿವೃದ್ಧಿ ಉಪಕ್ರಮಗಳಿಗಾಗಿ ಮಣಿಪುರದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಸ್ವಾತಂತ್ರ್ಯದ ನಂತರ, ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗಗಳ ಪ್ರಮುಖ ನಗರಗಳು ಅಭಿವೃದ್ಧಿಯನ್ನು ಕಂಡವು, ಅಲ್ಲಿ ಕನಸುಗಳನ್ನು ಪೋಷಿಸಿದವು ಮತ್ತು ಯುವಜನರು ಹೊಸ ಅವಕಾಶಗಳನ್ನು ಕಂಡುಕೊಂಡರು. ಈಗ, ಈ 21 ನೇ ಶತಮಾನವು ಪೂರ್ವಕ್ಕೆ, ಈಶಾನ್ಯಕ್ಕೆ ಸೇರಿದೆ. ಅದಕ್ಕಾಗಿಯೇ ಭಾರತ ಸರ್ಕಾರವು ಮಣಿಪುರದ ಅಭಿವೃದ್ಧಿಗೆ ನಿರಂತರವಾಗಿ ಆದ್ಯತೆ ನೀಡಿದೆ. ಪರಿಣಾಮವಾಗಿ, ಮಣಿಪುರದ ಬೆಳವಣಿಗೆ ದರವು ಸ್ಥಿರವಾಗಿ ಏರುತ್ತಿದೆ. 2014 ಕ್ಕಿಂತ ಮೊದಲು, ಮಣಿಪುರದ ಬೆಳವಣಿಗೆ ದರವು 1% ಕ್ಕಿಂತ ಕಡಿಮೆಯಿತ್ತು, 1% ಕೂಡ ಅಲ್ಲ ಅದು. ಇಂದು, ಮಣಿಪುರವು ಮೊದಲಿಗಿಂತ ಹಲವು ಪಟ್ಟು ವೇಗವಾಗಿ ಮುಂದುವರಿಯುತ್ತಿದೆ. ಮಣಿಪುರದಲ್ಲಿ ಮೂಲಸೌಕರ್ಯ ನಿರ್ಮಾಣದ ಹೊಸ ಯುಗ ಪ್ರಾರಂಭವಾಗಿದೆ. ಮಣಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆ ನಿರ್ಮಾಣದ ವೇಗ ಹಲವು ಪಟ್ಟು ಹೆಚ್ಚಿದೆ ಎಂಬ ಸಂಗತಿ ನನಗೆ ಸಂತೋಷ ತಂದಿದೆ. ರಾಜ್ಯಾದ್ಯಂತ ಹಳ್ಳಿಗಳನ್ನು ರಸ್ತೆಗಳ ಮೂಲಕ ಸಂಪರ್ಕಿಸುವ ತ್ವರಿತ ಕೆಲಸವೂ ನಡೆಯುತ್ತಿದೆ.
ಸ್ನೇಹಿತರೇ,
ಇಂಫಾಲ ನಗರವು ಅನೇಕ ಸಾಧ್ಯತೆಗಳಿಂದ ತುಂಬಿದೆ. ಇಂಫಾಲವನ್ನು ನಮ್ಮ ಯುವಜನರ ಕನಸುಗಳನ್ನು ನನಸಾಗಿಸುವ ಮತ್ತು ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ವಿಕ್ಷಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ನಗರಗಳಲ್ಲಿ ಒಂದೆಂದು ನಾನು ಪರಿಗಣಿಸುತ್ತೇನೆ. ಈ ಚಿಂತನೆ/ದೃಷ್ಟಿಕೋನದೊಂದಿಗೆ, ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಹಲವಾರು ಯೋಜನೆಗಳು ಇಲ್ಲಿ ಪೂರ್ಣಗೊಂಡಿವೆ. ನೂರಾರು ಕೋಟಿ ಮೌಲ್ಯದ ಹಲವಾರು ಇತರ ಯೋಜನೆಗಳ ಕೆಲಸಗಳು ವೇಗವಾಗಿ ಪ್ರಗತಿಯಲ್ಲಿವೆ.
ಸ್ನೇಹಿತರೇ,
ಇಂಫಾಲ್‌ನಲ್ಲಿರಲಿ ಅಥವಾ ಮಣಿಪುರದ ಇತರ ಪ್ರದೇಶಗಳಲ್ಲಿರಲಿ, ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು) ಮತ್ತು ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ. ಐ.ಟಿ. ವಿಶೇಷ ಆರ್ಥಿಕ ವಲಯವು ಈ ಸಾಧ್ಯತೆಗಳನ್ನು ಬಲಪಡಿಸುತ್ತದೆ. ಈ ವಲಯದ ಮೊದಲ ಕಟ್ಟಡವು ಈಗಾಗಲೇ ಪೂರ್ಣಗೊಂಡಿದೆ. ಮಣಿಪುರದಲ್ಲಿ ಹೊಸ ನಾಗರಿಕ ಸಚಿವಾಲಯ ಕಟ್ಟಡಕ್ಕಾಗಿ ದೀರ್ಘಕಾಲದ ಬೇಡಿಕೆ ಇತ್ತು. ಈಗ ಈ ಕಟ್ಟಡವೂ ಸಿದ್ಧವಾಗಿದೆ ಮತ್ತು ಇದು ನಾಗರಿಕ ದೇವೋ ಭವ - "ನಾಗರಿಕ ದೇವರಿಗೆ ಸಮಾನ" ಎಂಬ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೇ,
ಮಣಿಪುರದ ನಮ್ಮ ಅನೇಕ ಜನರು ಆಗಾಗ್ಗೆ ಕೋಲ್ಕತ್ತಾ ಮತ್ತು ದೆಹಲಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಕೈಗೆಟುಕುವ ದರದಲ್ಲಿ ವಸತಿ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ಎರಡೂ ನಗರಗಳಲ್ಲಿ ಮಣಿಪುರ ಭವನಗಳನ್ನು ನಿರ್ಮಿಸಲಾಗಿದೆ. ಈ ಭವನಗಳು ವಿಶೇಷವಾಗಿ ಮಣಿಪುರದ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತವೆ. ಮತ್ತು ಮಕ್ಕಳು ಅಲ್ಲಿ ಸುರಕ್ಷಿತವಾಗಿದ್ದಾಗ, ಇಲ್ಲಿನ ಪೋಷಕರು ಚಿಂತೆ ಕೂಡಾ ಕಡಿಮೆಯಾಗುತ್ತದೆ.
ಸ್ನೇಹಿತರೇ,
ನಮ್ಮ ಸರ್ಕಾರವು ಪೂರ್ಣ ಸಂವೇದನೆಯೊಂದಿಗೆ ನಿಮ್ಮ ಜೀವನದಲ್ಲಿನ ಕಷ್ಟಗಳನ್ನು ಕಡಿಮೆ ಮಾಡಲು ಶ್ರಮಿಸುತ್ತಿದೆ. ಮಣಿಪುರದ ಹಲವಾರು ಪ್ರದೇಶಗಳು ಪ್ರವಾಹದಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ನನಗೆ ತಿಳಿದಿದೆ. ಈ ಸವಾಲನ್ನು ಎದುರಿಸಲು ಸರ್ಕಾರವು ಹಲವಾರು ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ.
ಸ್ನೇಹಿತರೇ,
ಮಣಿಪುರವು ತಾಯಂದಿರು ಮತ್ತು ಸಹೋದರಿಯರು ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರದ ರಾಜ್ಯವಾಗಿದೆ. ಇಮಾ ಕೈಥೆಲ್ ಸಂಪ್ರದಾಯವು ಇದಕ್ಕೆ ಒಂದು ದೊಡ್ಡ ಸಾಕ್ಷಿಯಾಗಿದೆ. ಮಹಿಳಾ ಶಕ್ತಿಯನ್ನು ಭಾರತದ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತದ ಕೇಂದ್ರಬಿಂದು ಎಂದು ನಾನು ಪರಿಗಣಿಸುತ್ತೇನೆ. ಮಣಿಪುರದಲ್ಲಿ ನಾವು ಈ ಸ್ಫೂರ್ತಿಯನ್ನು ನೋಡುತ್ತೇವೆ. ಇಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ನಾವು ಮಹಿಳೆಯರಿಗಾಗಿ ವಿಶೇಷ ಮಾರುಕಟ್ಟೆಗಳಾದ ಇಮಾ ಮಾರುಕಟ್ಟೆಗಳ (ತಾಯಂದಿರು ನಡೆಸುವ ಮಾರುಕಟ್ಟೆಗಳು) ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ಇಂದು ನಾಲ್ಕು ಇಮಾ ಮಾರುಕಟ್ಟೆಗಳನ್ನು ಉದ್ಘಾಟಿಸಲಾಗಿದೆ ಎಂದು ನನಗೆ ಸಂತೋಷವಾಗಿದೆ. ಈ ಮಾರುಕಟ್ಟೆಗಳು ಮಣಿಪುರದ ಸಹೋದರಿಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ.
ಸ್ನೇಹಿತರೇ,
ಪ್ರತಿಯೊಬ್ಬ ನಾಗರಿಕನ ಜೀವನವನ್ನು ಸುಲಭಗೊಳಿಸುವುದು ನಮ್ಮ ಧ್ಯೇಯವಾಗಿದೆ. ಇಲ್ಲಿಗೆ ಸರಕುಗಳನ್ನು ತರುವುದು ಅತ್ಯಂತ ಕಷ್ಟಕರವಾಗಿದ್ದ ಆ ದಿನಗಳನ್ನು ಮಣಿಪುರ ಕಂಡಿದೆ. ದಿನನಿತ್ಯದ ವಸ್ತುಗಳು ಸಾಮಾನ್ಯ ಕುಟುಂಬಗಳ ವ್ಯಾಪ್ತಿಯನ್ನು ಮೀರಿದ್ದವು. ಕಳೆದ ವರ್ಷಗಳಲ್ಲಿ, ನಮ್ಮ ಸರ್ಕಾರ ಮಣಿಪುರವನ್ನು ಆ ಹಳೆಯ ತೊಂದರೆಗಳಿಂದ ಮುಕ್ತಗೊಳಿಸಿದೆ. ನಾನು ನಿಮಗೆ ಇನ್ನೊಂದು ಒಳ್ಳೆಯ ಸುದ್ದಿಯನ್ನು ತಂದಿದ್ದೇನೆ. ನಮ್ಮ ಸರ್ಕಾರವು ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಮತ್ತು ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸಲು ಬಯಸುತ್ತದೆ. ಅದಕ್ಕಾಗಿಯೇ ಈಗ ಜಿ.ಎಸ್.ಟಿಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದು ಮಣಿಪುರದ ಜನರಿಗೆ ಎರಡು ಪಟ್ಟು ಪ್ರಯೋಜನಗಳನ್ನು ತರುತ್ತದೆ. ದಿನನಿತ್ಯದ ಅಗತ್ಯ ವಸ್ತುಗಳಾದ ಸೋಪು, ಶಾಂಪೂ, ತಲೆ ಕೂದಲಿಗೆ ಬಳಸುವ ಎಣ್ಣೆ, ಬಟ್ಟೆ, ಶೂಗಳು - ಎಲ್ಲವೂ ಅಗ್ಗವಾಗುತ್ತವೆ. ಸಿಮೆಂಟ್ ಮತ್ತು ಮನೆಗಳನ್ನು ನಿರ್ಮಿಸಲು ಬಳಸುವ ವಸ್ತುಗಳ ಬೆಲೆಗಳು ಸಹ ಕಡಿಮೆಯಾಗುತ್ತವೆ. ಸರ್ಕಾರವು ಹೋಟೆಲ್‌ಗಳು ಮತ್ತು ಆಹಾರದ ಮೇಲಿನ ಜಿ.ಎಸ್.ಟಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇದು ಅತಿಥಿ ಗೃಹ ಮಾಲೀಕರು, ಟ್ಯಾಕ್ಸಿ ನಿರ್ವಾಹಕರು, ಧಾಬಾ ಮಾಲೀಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಇಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ಮಣಿಪುರವು ಸಾವಿರಾರು ವರ್ಷಗಳ ಹಿಂದಿನ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದರ ಸಂಸ್ಕೃತಿಯ ಬೇರುಗಳು ಬಲವಾದವು ಮತ್ತು ಆಳವಾದವು. ಮಣಿಪುರವು ಮಾತೆ ಭಾರತಿಯ ಕಿರೀಟವನ್ನು ಅಲಂಕರಿಸುವ ರತ್ನವಾಗಿದೆ. ಆದ್ದರಿಂದ, ನಾವು ಮಣಿಪುರದ ಅಭಿವೃದ್ಧಿಯ ಪ್ರತಿರೂಪವನ್ನು (ಇಮೇಜನ್ನು) ನಿರಂತರವಾಗಿ ಬಲಪಡಿಸಬೇಕು. ಮಣಿಪುರದಲ್ಲಿ ಯಾವುದೇ ರೀತಿಯ ಹಿಂಸಾಚಾರವು ಅತ್ಯಂತ ದುರದೃಷ್ಟಕರ. ಅಂತಹ ಹಿಂಸಾಚಾರವು ನಮ್ಮ ಪೂರ್ವಜರಿಗೆ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೂ ಮಾಡುವ ಗಂಭೀರ ಅನ್ಯಾಯವಾಗಿದೆ. ಆದ್ದರಿಂದ, ನಾವು ಸಾಮೂಹಿಕವಾಗಿ ಮಣಿಪುರವನ್ನು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಬೇಕು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಷ್ಟ್ರದ ರಕ್ಷಣೆಯಲ್ಲಿ ಮಣಿಪುರದ ಕೊಡುಗೆಯಿಂದ ನಾವು ಸ್ಫೂರ್ತಿ ಪಡೆಯಬೇಕು. ಮಣಿಪುರದ ಈ ಮಣ್ಣಿನಲ್ಲಿಯೇ ಭಾರತೀಯ ರಾಷ್ಟ್ರೀಯ ಸೇನೆಯು ಮೊದಲು ಭಾರತದ ಧ್ವಜವನ್ನು ಹಾರಿಸಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಮಣಿಪುರವನ್ನು ಭಾರತದ ಸ್ವಾತಂತ್ರ್ಯದ ದ್ವಾರ ಎಂದು ಬಣ್ಣಿಸಿದ್ದರು. ಈ ಭೂಮಿಯೇ ಧೈರ್ಯಶಾಲಿ ಆತ್ಮಗಳ ಅಸಂಖ್ಯಾತ ತ್ಯಾಗಗಳಿಗೆ ಸಾಕ್ಷಿಯಾಗಿದೆ. ಮಣಿಪುರದ ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಯಿಂದ ಸ್ಫೂರ್ತಿ ಪಡೆದು, ನಮ್ಮ ಸರ್ಕಾರ ಮುಂದುವರೆದಿದೆ. ನಮ್ಮ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ಮೌಂಟ್ ಹ್ಯಾರಿಯೆಟ್ ಅನ್ನು ಮೌಂಟ್ ಮಣಿಪುರ ಎಂದು ಮರುನಾಮಕರಣ ಮಾಡಲಾಗಿದೆ. ಇದು ಮಣಿಪುರದ ಸ್ವಾತಂತ್ರ್ಯ ಹೋರಾಟಗಾರರಿಗೆ 140 ಕೋಟಿ ಭಾರತೀಯರಿಂದ ಸಂದ ಗೌರವವಾಗಿದೆ.
ಸ್ನೇಹಿತರೇ,
ಇಂದಿಗೂ, ಮಣಿಪುರದ ಅನೇಕ ಪುತ್ರರು ಮತ್ತು ಪುತ್ರಿಯರು ದೇಶದ ವಿವಿಧ ಭಾಗಗಳಲ್ಲಿ ಮಾತೆ ಭಾರತಿಯನ್ನು ರಕ್ಷಿಸುತ್ತಿದ್ದಾರೆ. ಆಪರೇಷನ್ ಸಿಂಧೂರ್‌ನಲ್ಲಿ, ಜಗತ್ತು ಭಾರತದ ಸೈನ್ಯದ ಶೌರ್ಯವನ್ನು ಕಂಡಿದೆ. ನಮ್ಮ ಸೈನಿಕರು ಎಷ್ಟು ಶಕ್ತಿಯುತವಾಗಿ ಹೋರಾಡಿದರು ಎಂದರೆ ಪಾಕಿಸ್ತಾನಿ ಸೈನ್ಯವು ಸಂಪೂರ್ಣ ಅಸ್ತವ್ಯಸ್ತವಾಯಿತು. ಭಾರತದ ಈ ಯಶಸ್ಸಿನಲ್ಲಿ, ಮಣಿಪುರದ ಅನೇಕ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರ ವೀರತ್ವವೂ, ಧೈರ್ಯವೂ ಸೇರಿತ್ತು. ಇಂದು, ಅಂತಹ ಒಬ್ಬ ಧೀರ ಹುತಾತ್ಮ - ದೀಪಕ್ ಚಿಂಗಖಮ್ ಅವರ ಶೌರ್ಯಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಅವರ ಅತ್ಯುನ್ನತ ತ್ಯಾಗವನ್ನು ರಾಷ್ಟ್ರವು ಸದಾ ನೆನಪಿಸಿಕೊಳ್ಳುತ್ತದೆ.
ಸ್ನೇಹಿತರೇ,
2014 ರಲ್ಲಿ, ನಾನು ಇಲ್ಲಿಗೆ ಬಂದಾಗ, ನಾನು ಒಂದು ವಿಷಯವನ್ನು ಹೇಳಿದ್ದೆ ಎಂದು ನನಗೆ ನೆನಪಿದೆ. ಮಣಿಪುರಿ ಸಂಸ್ಕೃತಿಯಿಲ್ಲದೆ, ಭಾರತೀಯ ಸಂಸ್ಕೃತಿ ಅಪೂರ್ಣ ಮತ್ತು ಮಣಿಪುರದ ಆಟಗಾರರಿಲ್ಲದೆ, ಭಾರತೀಯ ಕ್ರೀಡೆಗಳು ಸಹ ಅಪೂರ್ಣ ಎಂದು ನಾನು ಹೇಳಿದ್ದೆ. ಮಣಿಪುರದ ಯುವಜನರು ತ್ರಿವರ್ಣದ ಹೆಮ್ಮೆಗಾಗಿ ತಮ್ಮ ಸರ್ವಸ್ವವನ್ನು ಅರ್ಪಿಸುವವರು. ಹಿಂಸೆಯ ನೆರಳಿನಲ್ಲಿ ಈ ಗುರುತನ್ನು ಅಳಿಸಿ ಹಾಕಲು, ಮಸುಕು ಮಾಡಲು ನಾವು ಬಿಡಬಾರದು.
ಸ್ನೇಹಿತರೇ,
ಇಂದು, ಭಾರತವು ಕ್ರೀಡೆಯಲ್ಲಿ ಜಾಗತಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿರುವಾಗ, ಮಣಿಪುರದ ಯುವಜನರ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಅದಕ್ಕಾಗಿಯೇ ಭಾರತ ಸರ್ಕಾರವು ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಮಣಿಪುರವನ್ನು ಆಯ್ಕೆ ಮಾಡಿದೆ. ಖೇಲೋ ಇಂಡಿಯಾ ಯೋಜನೆ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗಳ ಮೂಲಕ, ಮಣಿಪುರದ ಅನೇಕ ಕ್ರೀಡಾಪಟುಗಳನ್ನು ಇಂದು ಪ್ರೋತ್ಸಾಹಿಸಲಾಗುತ್ತಿದೆ. ಮಣಿಪುರದ ಯುವಜನರಿಗಾಗಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಸಹ ಇಲ್ಲಿ ನಿರ್ಮಿಸಲಾಗುತ್ತಿದೆ. ಪೋಲೊವನ್ನು ಉತ್ತೇಜಿಸಲು, ವಿಶ್ವದ ಅತಿ ಎತ್ತರದ ಪೋಲೊ ಪ್ರತಿಮೆಯೊಂದಿಗೆ ಮಾರ್ಜಿಂಗ್ ಪೋಲೊ ಸಂಕೀರ್ಣವನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ನೆಲದ ಒಲಿಂಪಿಯನ್ನರನ್ನು ಗೌರವಿಸಲು ಒಲಿಂಪಿಯನ್ ಪಾರ್ಕ್ ಕೂಡಾ ನಿರ್ಮಿಸಲಾಗಿದೆ. ಕೆಲವೇ ದಿನಗಳ ಹಿಂದೆ, ಸರ್ಕಾರವು ರಾಷ್ಟ್ರೀಯ ಕ್ರೀಡಾ ನೀತಿ - ಖೇಲೋ ಭಾರತ್ ನೀತಿಯನ್ನು ಘೋಷಿಸಿತು. ಮುಂಬರುವ ವರ್ಷಗಳಲ್ಲಿ, ಮಣಿಪುರದ ಯುವಜನರು ಇದರಿಂದ ಅಪಾರ ಲಾಭ ಪಡೆಯುತ್ತಾರೆ.
ಸ್ನೇಹಿತರೇ,
ಮಣಿಪುರಕ್ಕೆ ಶಾಂತಿ ಮತ್ತು ಸ್ಥಿರತೆಯನ್ನು ತರಲು, ಅದರ ಜನರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಬಿರಗಳಲ್ಲಿ ವಾಸಿಸುವಂತಹ ಬಲವಂತದ ಸ್ಥಿತಿಯಲ್ಲಿರುವವರಿಗೆ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಸ್ಥಳಾಂತರಗೊಂಡವರಿಗೆ, 7,000 ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಮಣಿಪುರಕ್ಕೆ ಸುಮಾರು ₹3,000 ಕೋಟಿಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ, ಸ್ಥಳಾಂತರಗೊಂಡವರಿಗೆ ಸಹಾಯ ಮಾಡಲು ₹500 ಕೋಟಿಗೂ ಹೆಚ್ಚಿನ ಹಣವನ್ನು ಒದಗಿಸಲಾಗಿದೆ. ಹಿಂಸಾಚಾರದಿಂದ ಪ್ರಭಾವಿತರಾದವರು ಆದಷ್ಟು ಬೇಗ ಸಾಮಾನ್ಯ ಜೀವನಕ್ಕೆ ಮರಳುವಂತೆ ನೋಡಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಮಣಿಪುರ ಪೊಲೀಸರಿಗಾಗಿ ಹೊಸದಾಗಿ ನಿರ್ಮಿಸಲಾದ ಪ್ರಧಾನ ಕಚೇರಿಯು ಈ ನಿಟ್ಟಿನಲ್ಲಿ ನಿಮಗೆ ಅಪಾರ ಸಹಾಯ ಮಾಡುತ್ತದೆ.
ಸ್ನೇಹಿತರೇ,
ಇಂದು ಮಣಿಪುರದ ಈ ಪವಿತ್ರ ನೆಲದಿಂದ, ನಾನು ನೇಪಾಳದ ನನ್ನ ಸಹೋದರ ಸಹೋದರಿಯರೊಂದಿಗೆ ಮಾತನಾಡಲು ಬಯಸುತ್ತೇನೆ. ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ನೇಪಾಳವು ಭಾರತದ ಸ್ನೇಹಿತ ಮತ್ತು ಆಪ್ತ ಒಡನಾಡಿ. ನಾವು ಹಂಚಿಕೊಂಡ ಇತಿಹಾಸ ಮತ್ತು ನಂಬಿಕೆಯಿಂದ ಬದ್ಧರಾಗಿದ್ದೇವೆ ಮತ್ತು ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಇಂದು, 140 ಕೋಟಿ ಭಾರತೀಯರ ಪರವಾಗಿ, ನೇಪಾಳದ ಮಧ್ಯಂತರ ಪ್ರಧಾನಮಂನತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಸುಶೀಲಾ ಜೀ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರು ನೇಪಾಳದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ನೇಪಾಳದ ಮೊದಲ ಮಹಿಳಾ ಪ್ರಧಾನಮಂನತ್ರಿಯಾಗಿ ಅವರು ಅಧಿಕಾರ ವಹಿಸಿಕೊಂಡಿರುವುದು ಮಹಿಳಾ ಸಬಲೀಕರಣದ ಉತ್ತಮ ಉದಾಹರಣೆಯಾಗಿದೆ. ಇಂದು, ಅಸ್ಥಿರತೆಯ ನಡುವೆಯೂ ಸಹ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಲ್ಲಕ್ಕಿಂತ ಮೇಲಾಗಿರಿಸಿರುವ ನೇಪಾಳದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಶ್ಲಾಘಿಸಲು ಬಯಸುತ್ತೇನೆ.
ಸ್ನೇಹಿತರೇ,
ನೇಪಾಳದಲ್ಲಿನ ಇತ್ತೀಚಿನ ಬೆಳವಣಿಗೆಗಳಲ್ಲಿ ಹೆಚ್ಚು ಗಮನ ಸೆಳೆಯದ ಮತ್ತೊಂದು ಗಮನಾರ್ಹ ಅಂಶವಿದೆ. ಕಳೆದ ಎರಡು ಅಥವಾ ಮೂರು ದಿನಗಳಿಂದ, ನೇಪಾಳದ ಯುವಜನರು ಮತ್ತು ಮಹಿಳೆಯರು ಶುದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತಿದ್ದಾರೆ, ನೇಪಾಳದ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ ಮತ್ತು ಪೈಂಟಿಂಗ್ ಮಾಡುತ್ತಿದ್ದಾರೆ. ನಾನು ಕೂಡ ಅವರ ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ಅವರ ಸಕಾರಾತ್ಮಕ ಮನಸ್ಥಿತಿ ಮತ್ತು ಸಕಾರಾತ್ಮಕ ಕಾರ್ಯಗಳು ಸ್ಪೂರ್ತಿದಾಯಕ ಮಾತ್ರವಲ್ಲದೆ ನೇಪಾಳದ ಹೊಸ ಉದಯದ ಸ್ಪಷ್ಟ ಸೂಚನೆಯೂ ಆಗಿವೆ. ನೇಪಾಳದ ಉಜ್ವಲ ಭವಿಷ್ಯಕ್ಕಾಗಿ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ,
ಈ 21 ನೇ ಶತಮಾನದಲ್ಲಿ, ನಮ್ಮ ದೇಶವು ಒಂದೇ ಗುರಿಯೊಂದಿಗೆ ಮುಂದುವರಿಯುತ್ತಿದೆ - ವಿಕ್ಷಿತ ಭಾರತ ಎಂಬ ಗುರಿ. ಮತ್ತು ಈ ಗುರಿಯನ್ನು ಸಾಧಿಸಲು, ಮಣಿಪುರದ ಅಭಿವೃದ್ಧಿಯೂ ಅಷ್ಟೇ ಅವಶ್ಯಕ. ನಮ್ಮ ಮಣಿಪುರವು ಅಪರಿಮಿತ ಸಾಮರ್ಥ್ಯದಿಂದ ತುಂಬಿದೆ. ಅಭಿವೃದ್ಧಿಯ ಹಾದಿಯಿಂದ ಒಂದೇ ಒಂದು ಹೆಜ್ಜೆಯೂ ವಿಮುಖವಾಗದಿರುವುದು ನಮ್ಮ ಕರ್ತವ್ಯ. ಮಣಿಪುರಕ್ಕೆ ಸಾಮರ್ಥ್ಯದ ಕೊರತೆಯಿಲ್ಲ; ಅಗತ್ಯವಿರುವುದು ನಾವು ನಿರಂತರವಾಗಿ ಸಂವಾದದ ಹಾದಿಯನ್ನು ಬಲಪಡಿಸುವುದು, ಬೆಟ್ಟಗಳು ಮತ್ತು ಕಣಿವೆಯ ನಡುವೆ ಸಾಮರಸ್ಯದ ಬಲವಾದ ಸೇತುವೆಯನ್ನು ನಿರ್ಮಿಸುವುದು. ಮಣಿಪುರವು ರಾಷ್ಟ್ರದ ಬೆಳವಣಿಗೆಯ ದೃಢವಾದ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈಗ, ನನ್ನೊಂದಿಗೆ ಹೇಳಿ:
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಭರತ್ ಮಾತಾ ಕಿ ಜೈ.
ತುಂಬಾ ಧನ್ಯವಾದಗಳು.
****
(Release ID: 2166456)
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Malayalam