ಪ್ರಧಾನ ಮಂತ್ರಿಯವರ ಕಛೇರಿ
ಸಿಂಗಾಪುರದ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
Posted On:
04 SEP 2025 1:43PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ವಾಂಗ್,
ಎರಡೂ ದೇಶಗಳ ಪ್ರತಿನಿಧಿಗಳೇ
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಪ್ರಧಾನಮಂತ್ರಿ ವಾಂಗ್ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ಈ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದರಿಂದ ಈ ಭೇಟಿ ವಿಶೇಷವಾಗಿ ಸ್ಮರಣೀಯವಾಗಿದೆ.
ಸ್ನೇಹಿತರೇ,
ಕಳೆದ ವರ್ಷ ನಾನು ಸಿಂಗಾಪುರಕ್ಕೆ ಭೇಟಿ ನೀಡಿದಾಗ, ನಾವು ನಮ್ಮ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿದ್ದೇವೆ. ಈ ವರ್ಷದ ಅವಧಿಯಲ್ಲಿ, ನಮ್ಮ ಸಂವಾದ ಮತ್ತು ಸಹಕಾರವು ಹೆಚ್ಚಿನ ವೇಗ ಮತ್ತು ಆಳ ಎರಡನ್ನೂ ಪಡೆದುಕೊಂಡಿದೆ.
ಇಂದು, ಆಗ್ನೇಯ ಏಷ್ಯಾ ವಲಯದಲ್ಲಿ, ಸಿಂಗಾಪುರ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ನಿಂತಿದೆ. ಸಿಂಗಾಪುರ ಭಾರತದಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದೆ. ನಮ್ಮ ರಕ್ಷಣಾ ಸಂಬಂಧಗಳು ಬಲವಾಗಿ ಬೆಳೆಯುತ್ತಲೇ ಇವೆ ಮತ್ತು ನಮ್ಮ ಜನರಿಂದ ಜನರಿಗೆ ಸಂಬಂಧಗಳು ಆಳವಾಗಿವೆ ಮತ್ತು ರೋಮಾಂಚಕವಾಗಿವೆ.
ಇಂದು, ನಮ್ಮ ಪಾಲುದಾರಿಕೆಯ ಭವಿಷ್ಯಕ್ಕಾಗಿ ನಾವು ವಿವರವಾದ ಮಾರ್ಗಸೂಚಿಯನ್ನು ರೂಪಿಸಿದ್ದೇವೆ. ನಮ್ಮ ಸಹಕಾರವು ಸಾಂಪ್ರದಾಯಿಕ ಕ್ಷೇತ್ರಗಳಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ಬದಲಾಗುತ್ತಿರುವ ಕಾಲದ ಅಗತ್ಯಗಳಿಗೆ ಅನುಗುಣವಾಗಿ, ಮುಂದುವರಿದ ಉತ್ಪಾದನೆ, ಹಸಿರು ಸಾಗಣೆ (ಅಂದರೆ ಕಡಿಮೆ ಮಾಲಿನ್ಯ ಹೊರಸೂಸುವಿಕೆಯ ಇಂಧನ ಬಳಸಿ ಹಡಗುಗಳ ಮೂಲಕ ಸಾಗಾಟ-ಗ್ರೀನ್ ಶಿಪ್ಪಿಂಗ್) , ಕೌಶಲ್ಯ, ನಾಗರಿಕ ಪರಮಾಣು ಶಕ್ತಿ ಮತ್ತು ನಗರ ನೀರು ನಿರ್ವಹಣೆ ಕೂಡ ನಮ್ಮ ಸಹಯೋಗದ ಕೇಂದ್ರಬಿಂದುಗಳಾಗಿ ಹೊರಹೊಮ್ಮುತ್ತಿವೆ.
ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವೇಗಗೊಳಿಸಲು, ನಮ್ಮ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ ಮತ್ತು ಆಸಿಯಾನ್‌ನೊಂದಿಗಿನ ನಮ್ಮ ಮುಕ್ತ ವ್ಯಾಪಾರ ಒಪ್ಪಂದದ ಕಾಲಮಿತಿಯ ಪರಿಶೀಲನೆಯನ್ನು ಕೈಗೊಳ್ಳುವುದು ಎಂದು ನಾವು ನಿರ್ಧರಿಸಿದ್ದೇವೆ.
ಭಾರತ ಮತ್ತು ಸಿಂಗಾಪುರ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ನಮ್ಮ ರಾಜ್ಯಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಜನವರಿಯಲ್ಲಿ, ಅಧ್ಯಕ್ಷ ಥರ್ಮನ್ ಅವರ ಭಾರತ ಭೇಟಿಯ ಸಮಯದಲ್ಲಿ, ಅವರು ಒಡಿಶಾಕ್ಕೂ ಪ್ರಯಾಣಿಸಿದರು. ಕಳೆದ ವರ್ಷದಲ್ಲಿ, ಒಡಿಶಾ, ತೆಲಂಗಾಣ, ಅಸ್ಸಾಂ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಸಿಂಗಾಪುರಕ್ಕೆ ಭೇಟಿ ನೀಡಿದ್ದಾರೆ. ಗುಜರಾತ್‌ನ ಗಿಫ್ಟ್ ಸಿಟಿ ಈಗ ನಮ್ಮ ಷೇರು ಮಾರುಕಟ್ಟೆಗಳನ್ನು ಸಂಪರ್ಕಿಸುವ ಮತ್ತೊಂದು ಕೊಂಡಿಯಾಗಿ ಹೊರಹೊಮ್ಮಿದೆ.
ಸ್ನೇಹಿತರೇ,
ಕಳೆದ ವರ್ಷ ಮುಕ್ತಾಯಗೊಂಡ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪಾಲುದಾರಿಕೆ ಒಪ್ಪಂದವು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ನೀಡಿದೆ. 'ಸೆಮಿಕಾನ್ ಇಂಡಿಯಾ' ಸಮ್ಮೇಳನದಲ್ಲಿ ಸಿಂಗಾಪುರದ ಕಂಪನಿಗಳ ಉತ್ಸಾಹಭರಿತ ಭಾಗವಹಿಸುವಿಕೆಯು ಅದರದ್ದೇ ಮಹತ್ವವನ್ನು ಹೊಂದಿದೆ.್
ಚೆನ್ನೈಯಲ್ಲಿ, ಸಿಂಗಾಪುರವು ಕೌಶಲ್ಯಕ್ಕಾಗಿ ರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಸಹಕರಿಸುತ್ತದೆ. ಈ ಕೇಂದ್ರವು ಸುಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಕೌಶಲ್ಯಪೂರ್ಣ ಕಾರ್ಮಿಕಪಡೆಯನ್ನು ರಚಿಸುವತ್ತ ಗಮನಹರಿಸುತ್ತದೆ.
ಸ್ನೇಹಿತರೇ,
ತಂತ್ರಜ್ಞಾನ ಮತ್ತು ನಾವೀನ್ಯತೆ ನಮ್ಮ ಪಾಲುದಾರಿಕೆಯ ಬಲವಾದ ಸ್ತಂಭಗಳಾಗಿವೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಮತ್ತು ಇತರ ಡಿಜಿಟಲ್ ತಂತ್ರಜ್ಞಾನಗಳಲ್ಲಿ ನಮ್ಮ ಸಹಯೋಗವನ್ನು ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ. ಇಂದು ಸಹಿ ಹಾಕಿದ ಬಾಹ್ಯಾಕಾಶ ವಲಯದಲ್ಲಿನ ಒಪ್ಪಂದವು ಬಾಹ್ಯಾಕಾಶ ವಿಜ್ಞಾನದಲ್ಲಿನ ನಮ್ಮ ಸಹಕಾರದಲ್ಲಿ ಹೊಸ ಅಧ್ಯಾಯವನ್ನು ದಾಖಲಿಸುತ್ತದೆ. ನಮ್ಮ ಯುವಜನರ ಪ್ರತಿಭೆಯನ್ನು ಸಂಪರ್ಕಿಸಲು ಮತ್ತು ಬಳಸಿಕೊಳ್ಳಲು ಈ ವರ್ಷದ ಕೊನೆಯಲ್ಲಿ ಭಾರತ-ಸಿಂಗಾಪುರ ಹ್ಯಾಕಥಾನ್‌ನ ಮುಂದಿನ ಸುತ್ತನ್ನು ನಡೆಸಲು ನಾವು ನಿರ್ಧರಿಸಿದ್ದೇವೆ.
'ಯು.ಪಿ.ಐ. ಮತ್ತು 'ಪೇ ನೌ' ನಮ್ಮ ಯಶಸ್ವಿ ಡಿಜಿಟಲ್ ಸಂಪರ್ಕದ ಹೊಳೆಯುವ ಉದಾಹರಣೆಗಳಾಗಿವೆ. 13 ಹೊಸ ಭಾರತೀಯ ಬ್ಯಾಂಕುಗಳು ಈಗ ಈ ಉಪಕ್ರಮಕ್ಕೆ ಸೇರಿಕೊಂಡಿರುವುದು ನಿಜಕ್ಕೂ ತೃಪ್ತಿಯ ವಿಷಯ.
ಇಂದಿನ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್‌ಗಳ ಒಪ್ಪಂದವು ಸಮುದ್ರ ವಲಯದಲ್ಲಿ ಹಸಿರು ಇಂಧನ ಪೂರೈಕೆ ಸರಪಳಿ ಮತ್ತು ಡಿಜಿಟಲ್ ಪೋರ್ಟ್ ಕ್ಲಿಯರೆನ್ಸ್‌ಗೆ ಗಮನಾರ್ಹ ವೇಗವನ್ನು ನೀಡುತ್ತದೆ. ಭಾರತವು ತನ್ನ ಬಂದರು ಮೂಲಸೌಕರ್ಯವನ್ನು ಬಲಪಡಿಸಲು ಹೆಚ್ಚಿನ ವೇಗದಲ್ಲಿ ಕೆಲಸ ಮಾಡುತ್ತಿದೆ ಮತ್ತು ಈ ಕ್ಷೇತ್ರದಲ್ಲಿ ಸಿಂಗಾಪುರದ ಪರಿಣತಿಯು ಅಪಾರ ಮೌಲ್ಯಯುತವಾಗಿದೆ. ಇಂದು ಮುಂಜಾನೆ, ಸಿಂಗಾಪುರದ ಎಸ್.ಪಿ.ಎ. ಇಂಟರ್‌ನ್ಯಾಷನಲ್ ಅಭಿವೃದ್ಧಿಪಡಿಸಿದ ಭಾರತ್ ಮುಂಬೈ ಕಂಟೇನರ್ ಟರ್ಮಿನಲ್ ಹಂತ-2 ನ್ನು ನಾವು ಉದ್ಘಾಟಿಸಿದ್ದೇವೆ. ಈ ಮೈಲಿಗಲ್ಲು ನಮ್ಮ ಕಂಟೇನರ್ ನಿರ್ವಹಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸ್ನೇಹಿತರೇ,
ಸಿಂಗಾಪುರ ನಮ್ಮ ಆಕ್ಟ್ ಈಸ್ಟ್ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ. ಒಟ್ಟಾಗಿ, ನಾವು ಆಸಿಯಾನ್ ಜೊತೆ ಸಹಕಾರವನ್ನು ಮುಂದುವರಿಸುತ್ತೇವೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ನಮ್ಮ ಜಂಟಿ ದೃಷ್ಟಿಕೋನವನ್ನು ಮುಂದುವರಿಸುತ್ತೇವೆ.
ಭಯೋತ್ಪಾದನೆಯ ಬಗ್ಗೆ ನಮಗೆ ಸಾಮಾನ್ಯ ಕಾಳಜಿಗಳಿವೆ. ಈ ಬೆದರಿಕೆಯ ವಿರುದ್ಧದ ಹೋರಾಟದಲ್ಲಿ ಒಂದಾಗುವುದು ಮಾನವೀಯತೆಯನ್ನು ಗೌರವಿಸುವ ಎಲ್ಲಾ ರಾಷ್ಟ್ರಗಳ ಕರ್ತವ್ಯ ಎಂದು ನಾವು ದೃಢವಾಗಿ ನಂಬುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತದ ಜನರಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅವರ ದೃಢ ಬೆಂಬಲಕ್ಕಾಗಿ ಪ್ರಧಾನಮಂತ್ರಿ ವಾಂಗ್ ಮತ್ತು ಸಿಂಗಾಪುರ ಸರ್ಕಾರಕ್ಕೆ ನಾನು ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಘನತೆವೆತ್ತರೇ,
ನಮ್ಮ ಸಂಬಂಧಗಳು ರಾಜತಾಂತ್ರಿಕತೆಯನ್ನು ಮೀರಿ ಸಾಗುತ್ತವೆ.
ಇದು ಉದ್ದೇಶದೊಂದಿಗೆ ಮಾಡಿಕೊಂಡ ಪಾಲುದಾರಿಕೆ,
ಹಂಚಿಕೆಯ ಮೌಲ್ಯಗಳಲ್ಲಿ ಬೇರೂರಿದೆ,
ಪರಸ್ಪರ ಹಿತಾಸಕ್ತಿಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ,
ಮತ್ತು, ಶಾಂತಿ, ಪ್ರಗತಿ ಹಾಗು ಸಮೃದ್ಧಿಗಾಗಿ ಸಾಮಾನ್ಯ ದೃಷ್ಟಿಕೋನದಿಂದ ನಡೆಸಲ್ಪಡುತ್ತದೆ.
ಈ ಪಾಲುದಾರಿಕೆಗೆ ನಿಮ್ಮ ವೈಯಕ್ತಿಕ ಬದ್ಧತೆಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿಯವರ ಹೇಳಿಕೆಯ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.
****
(Release ID: 2163972)
Visitor Counter : 2
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam