ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಜಿ.ಎಸ್.ಟಿ ಸುಧಾರಣೆಗಳು ವ್ಯವಹಾರಕ್ಕೆ ಪರಿವರ್ತನೆ ತರುತ್ತವೆ: ಭಾರತ್ ನ್ಯೂಟ್ರಾವರ್ಸ್ ಎಕ್ಸ್ಪೋ 2025ರಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್


ಹೊಸ ದರಗಳ ಪ್ರಯೋಜನವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಬೇಕು: ಶ್ರೀ ಗೋಯಲ್

ಕಠಿಣ ಪರಿಶ್ರಮಿ ಭಾರತೀಯರ ಬೆವರಿನಿಂದ ತಯಾರಿಸಿದ ಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಲು ನಾವು ಬದ್ಧರಾಗಿರಬೇಕು: ಶ್ರೀ ಗೋಯಲ್

ವಿಶ್ವದಲ್ಲಿ ಪ್ರಕ್ಷುಬ್ಧತೆಯ ಸಮಯದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ: ಶ್ರೀ ಗೋಯಲ್

ಆರೋಗ್ಯಕರ ಆಹಾರ ಉತ್ಪನ್ನಗಳಿಂದ ಬೆಂಬಲಿತವಾದ ದೃಢ (ಫಿಟ್) ಮತ್ತು ಆರೋಗ್ಯಕರ ಭಾರತವು ದೇಶದ ಬೆಳವಣಿಗೆಗೆ ಪ್ರಮುಖವಾಗಿದೆ: ಶ್ರೀ ಗೋಯಲ್

ಎಲ್ಲಾ ಭಾರತೀಯರಿಗೆ ರೋಗ ತಡೆಗಟ್ಟುವ ಉತ್ತಮ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಅವರು ಬಯಸುತ್ತಾರೆ: ಶ್ರೀ ಗೋಯಲ್

Posted On: 04 SEP 2025 2:31PM by PIB Bengaluru

ನಿನ್ನೆ ಘೋಷಿಸಲಾದ ಜಿ.ಎಸ್.ಟಿ ಯಲ್ಲಿನ ಪರಿವರ್ತನಾಶೀಲ ಬದಲಾವಣೆಗಳ ಅತಿದೊಡ್ಡ ಫಲಾನುಭವಿಗಳಲ್ಲಿ ನ್ಯೂಟ್ರಾಸ್ಯುಟಿಕಲ್ಸ್ (ಆಹಾರ ಮೂಲಗಳ ) ಉದ್ಯಮವೂ ಒಂದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಇಂದು ಭಾರತ್ ನ್ಯೂಟ್ರಾವರ್ಸ್ ಎಕ್ಸ್ಪೋ 2025ನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಜಿ.ಎಸ್.ಟಿ ದರಗಳಲ್ಲಿನ ಕಡಿತವು ಬಳಕೆಯ ಬೇಡಿಕೆಗೆ ಅಗಾಧ ಮತ್ತು ಅಭೂತಪೂರ್ವ ಉತ್ತೇಜನವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು. ಉದ್ಯಮವು ಈಗ ಹೆಚ್ಚಿನ ಪ್ರಮಾಣದ ಮಾರಾಟವನ್ನು ಬಯಸಬಹುದು, ಇದು ಎಲ್ಲರಿಗೂ ಲಾಭದಾಯಕ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ವ್ಯವಹಾರಗಳು  ದೊಡ್ಡ ಅವಕಾಶಗಳಿಂದ ಲಾಭ ಪಡೆಯುತ್ತವೆ ಮತ್ತು ಸಂಪೂರ್ಣ ಜಿ.ಎಸ್.ಟಿ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು.

ದೇಶಕ್ಕೆ ನೀಡಿದ ಹಬ್ಬದ ಉಡುಗೊರೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಚಿವರು ಧನ್ಯವಾದ ಅರ್ಪಿಸಿದರು. ಜಿ.ಎಸ್.ಟಿ ರಂಗದಲ್ಲಿ ಪ್ರಮುಖ ಮತ್ತು ಒಳ್ಳೆಯ ಸುದ್ದಿ ಬರಲಿದೆ ಎಂದು ಪ್ರಧಾನಿ ಅವರು ಆಗಸ್ಟ್ 15 ರಂದು ಘೋಷಿಸಿದ್ದರು ಎಂಬುದರತ್ತ  ಅವರು ಗಮನ ಸೆಳೆದರು. ನಿನ್ನೆ ಘೋಷಿಸಲಾದ ಪರಿವರ್ತನೆಯ ಸುಧಾರಣೆಗಳಿಂದ ಇಷ್ಟೊಂದು ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಸರಕುಗಳು ಮತ್ತು ಸೇವೆಗಳು ಪ್ರಯೋಜನ ಪಡೆಯುತ್ತವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.

ಜಿ.ಎಸ್.ಟಿ ಕಡಿತದ ಮೂಲಕ ಉಳಿಸಲಾದ ಪ್ರತಿ ರೂಪಾಯಿಯನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಶ್ರೀ ಗೋಯಲ್ ಉದ್ಯಮವನ್ನು ಒತ್ತಾಯಿಸಿದರು. ಹೊಸ ರಚನೆಯ ಅಡಿಯಲ್ಲಿ, ಹಲವಾರು ವರ್ಗಗಳ ಮೇಲಿನ ಜಿ.ಎಸ್.ಟಿಯನ್ನು ಶೇಕಡಾ 5 ರಷ್ಟು ಕಡಿಮೆ ಮಾಡಲಾಗಿದೆ, ಇದರಿಂದಾಗಿ ವಲಯದಾದ್ಯಂತ ಗಣನೀಯ ಉಳಿತಾಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಕಡಿಮೆ ಬೆಲೆಗಳು ಸ್ವಾಭಾವಿಕವಾಗಿ ಹೆಚ್ಚಿನ ಬಳಕೆಯನ್ನು ಉತ್ತೇಜಿಸುತ್ತವೆ ಮತ್ತು ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸುವುದರಿಂದ ಇದು ಬಲವಾದ ಬೇಡಿಕೆ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರತ್ತ  ಅವರು ಗಮನ ಸೆಳೆದರು.

ಪ್ರಧಾನ ಮಂತ್ರಿಗಳಿಗೆ ಬಲವಾದ ಅವಳಿ ಬದ್ಧತೆಯನ್ನು ತೋರಿಸುವಂತೆ ಸಚಿವರು ಉದ್ಯಮವನ್ನು ಒತ್ತಾಯಿಸಿದರು - ಮೊದಲನೆಯದಾಗಿ, ಜಿ.ಎಸ್.ಟಿ ಕಡಿತದಿಂದ ಉಂಟಾಗುವ ಪ್ರತಿ ರೂಪಾಯಿ ಉಳಿತಾಯವನ್ನು ಗ್ರಾಹಕರಿಗೆ ವರ್ಗಾಯಿಸುವುದು ಮತ್ತು ಎರಡನೆಯದಾಗಿ, ಭಾರತೀಯ ಉತ್ಪನ್ನಗಳನ್ನು ಸಕ್ರಿಯವಾಗಿ ಉತ್ತೇಜಿಸುವುದು, ಶ್ರಮಶೀಲ ಭಾರತೀಯರ ಬೆವರು ಮತ್ತು ಶ್ರಮದಿಂದ ತಯಾರಿಸಿದ ಉತ್ಪನ್ನಗಳನ್ನು, ಭಾರತದ ಮಣ್ಣಿನಲ್ಲಿ ಪೋಷಿಸಿದ ಉತ್ಪನ್ನಗಳನ್ನು ಬೆಂಬಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಂತಹ ಉತ್ಪನ್ನಗಳು ರಾಷ್ಟ್ರದ ಪ್ರತಿಯೊಂದು ಮೂಲೆಯನ್ನು ತಲುಪಿದಾಗ, ಅವು ಆರ್ಥಿಕ ಮೌಲ್ಯವನ್ನು ಮಾತ್ರವಲ್ಲದೆ ರಾಷ್ಟ್ರೀಯ ಹೆಮ್ಮೆ ಮತ್ತು ಸ್ವಾವಲಂಬನೆಯನ್ನು ಸಹ ಒಳಗೊಂಡಿರುತ್ತವೆ ಎಂದು ಅವರು ಒತ್ತಿ ಹೇಳಿದರು.

ಮಾಲೀಕತ್ವವು ಭಾರತೀಯ ಉದ್ಯಮಿ ಅಥವಾ ವಿದೇಶಿ ಹೂಡಿಕೆದಾರರಲ್ಲಿದೆಯೇ ಎಂಬುದು ಮುಖ್ಯವಲ್ಲ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು - ಉತ್ಪನ್ನಗಳು ಭಾರತದಲ್ಲಿ ತಯಾರಾಗುತ್ತಿವೆ, ಭಾರತೀಯ ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ, ಸ್ಥಳೀಯ ಸಮುದಾಯಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿವೆ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂಬುದು ಮುಖ್ಯ. ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಉತ್ಪನ್ನವು 1.4 ಶತಕೋಟಿ ಜನರ ಆಕಾಂಕ್ಷೆಗಳನ್ನು ಹೊಂದಿದೆ ಮತ್ತು ವಿಕಸಿತ ಭಾರತ 2047ರತ್ತ ದೇಶದ ಪ್ರಯಾಣವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ಒಂದು ಕಂಪನಿಯು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದರೆ, ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದರೆ, ಅವಕಾಶಗಳನ್ನು ಸೃಷ್ಟಿಸುತ್ತಿದ್ದರೆ ಮತ್ತು ದೇಶದ ಬೆಳವಣಿಗೆಯ ಕಥೆಗೆ ಕೊಡುಗೆ ನೀಡುತ್ತಿದ್ದರೆ, ಅದು ಭಾರತೀಯವೇ  ಅಥವಾ ವಿದೇಶಿಯೇ ಎಂಬುದು ಮುಖ್ಯವಲ್ಲ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಭಾರತದ ದೃಢವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಉಲ್ಲೇಖಿಸುತ್ತಾ, ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 7.8ರಷ್ಟು ಬೆಳೆದಿದೆ ಎಂದು ಅವರು ಎತ್ತಿ ತೋರಿಸಿದರು. ಜಾಗತಿಕ ಪ್ರಕ್ಷುಬ್ಧತೆ ಮತ್ತು ಅನಿಶ್ಚಿತತೆಯ ಹೊರತಾಗಿಯೂ, ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಮುಂದುವರೆದಿದೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ, ಮುಂದಿನ ಎರಡು ದಶಕಗಳವರೆಗೆ ಮುನ್ನಡೆ ಸಾಧಿಸಲಿದೆ ಎಂದು ಅವರು ನುಡಿದರು.

2047ರ ವೇಳೆಗೆ ಭಾರತದ ಜಿಡಿಪಿಯನ್ನು 4 ಟ್ರಿಲಿಯನ್ ಡಾಲರ್ ನಿಂದ 30 ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯುವ ಸರ್ಕಾರದ ದೃಷ್ಟಿಕೋನವನ್ನು ಅವರು ಪುನರುಚ್ಚರಿಸಿದರು, ಭಾರತವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದು ಒತ್ತಿ ಹೇಳಿದರು. ವಿಕಸಿತ  ಭಾರತ 2047 ಎಂಬುದು  1.4 ಬಿಲಿಯನ್ ಭಾರತೀಯರ ಸಾಮೂಹಿಕ ಬದ್ಧತೆಯಾಗಿದೆ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಅಮೃತ ಕಾಲದ ಈ ಪ್ರಯಾಣಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದೂ ಹೇಳಿದರು.  ವ್ಯಾಪಾರಕ್ಕೆ ಅನುಕೂಲಕರ ವ್ಯವಸ್ಥೆ,  ಕಡಿಮೆ ತೆರಿಗೆ ಮತ್ತು ಜೀವನ ಸುಲಭತೆಗಾಗಿ ಸರ್ಕಾರದ ಉಪಕ್ರಮಗಳ ಜೊತೆಗೆ, ದೇಶವು ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ  ಮೂಲಕ ಉತ್ತಮ ಭವಿಷ್ಯವನ್ನು ಭದ್ರಪಡಿಸುವ ಹಾದಿಯಲ್ಲಿದೆ ಎಂದು ಅವರು ಒತ್ತಿ ಹೇಳಿದರು.

ಪೌಷ್ಟಿಕಾಂಶ ವಲಯದಿಂದ ದೊಡ್ಡ ಪ್ರಮಾಣದಲ್ಲಿ ಮತ್ತು ಆರೋಗ್ಯಕರ ಆಹಾರ ಉತ್ಪನ್ನಗಳಿಂದ ಬೆಂಬಲಿತವಾದ ಸದೃಢ ಮತ್ತು ಆರೋಗ್ಯಕರ ಭಾರತವು ಭಾರತದ ಬೆಳವಣಿಗೆಗೆ ಪ್ರಮುಖವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು. ಈ ವಲಯವು ರೈತರಿಗೆ ಸಹಾಯ ಮಾಡುತ್ತಿದೆ, ಮಾತ್ರವಲ್ಲದೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುತ್ತಿದೆ, ಜೊತೆಗೆ ಪ್ರತಿಯೊಬ್ಬ ಭಾರತೀಯರ ಆರೋಗ್ಯ ರಕ್ಷಣೆಗೂ ಕೊಡುಗೆ ನೀಡುತ್ತಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. ಆರೋಗ್ಯಕ್ಕೆ ಅರಿಶಿನದ ಅಪಾರ ಕೊಡುಗೆ, ಶುಂಠಿಯ ಪ್ರಬಲ ಪ್ರಯೋಜನಗಳು ಮತ್ತು ಯುವ ಭಾರತೀಯರಿಗೆ ಗುಣಮಟ್ಟದ ಪ್ರೋಟೀನ್ ಮತ್ತು ಪೋಷಣೆಯನ್ನು ಒದಗಿಸುವಲ್ಲಿ ಪ್ರೋಬಯಾಟಿಕ್ ಗಳ ಪಾತ್ರವನ್ನು ಅವರು ಎತ್ತಿ ತೋರಿಸಿದರು.

ಪ್ರತಿಯೊಬ್ಬ ನಾಗರಿಕನು ಉತ್ತಮ ಗುಣಮಟ್ಟದ ಜೀವನ ಮತ್ತು ಆರೋಗ್ಯಕರ ಜೀವನವನ್ನು ಆನಂದಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬದ್ಧರಾಗಿದ್ದಾರೆ ಎಂದು ಸಚಿವರು ಹೇಳಿದರು. ಇದು ಅತ್ಯುನ್ನತ ಮಟ್ಟದ ರೋಗ ತಡೆಗಟ್ಟುವಿಕೆ ಮತ್ತು ಗುಣಪಡಿಸುವ ಆರೋಗ್ಯ ರಕ್ಷಣೆಯಿಂದ ಬೆಂಬಲಿತವಾಗಿದೆ. ಈ ದೃಷ್ಟಿಕೋನವು ಪ್ರತಿಯೊಬ್ಬ ಭಾರತೀಯನಿಗೂ  ಗೌರವಾನ್ವಿತ, ಸುರಕ್ಷಿತ ಮತ್ತು ಸಮೃದ್ಧ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಅತ್ಯುತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವುದರೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

ಭಾರತ್ ನ್ಯೂಟ್ರಾವರ್ಸ್ 2025 ಉದ್ಯಮಕ್ಕೆ ಉತ್ತಮ ಭವಿಷ್ಯದ ಆರಂಭವನ್ನು ಮತ್ತು ಅದು ಭಾರತದ ಅಭಿವೃದ್ಧಿ ಪ್ರಯಾಣಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ವಿಶ್ವಾಸದ ನುಡಿಗಳನ್ನು ಹೇಳುವ ಮೂಲಕ ಶ್ರೀ ಗೋಯಲ್ ವಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

****


(Release ID: 2163878) Visitor Counter : 2