ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸೆಮಿಕಾನ್ ಇಂಡಿಯಾ - 2025 ಉದ್ಘಾಟಿಸಿದರು


ವಿಶ್ವವು ಭಾರತದ ಮೇಲೆ ನಂಬಿಕೆಯಿಟ್ಟಿದೆ, ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ ಮತ್ತು ಭಾರತದೊಂದಿಗೆ ಸೆಮಿಕಂಡಕ್ಟರ್ ಭವಿಷ್ಯವನ್ನು ನಿರ್ಮಿಸಲು ಜಗತ್ತು ಸಿದ್ಧವಾಗಿದೆ: ಪ್ರಧಾನಮಂತ್ರಿ

ಚಿಪ್‌ ಗಳು ಡಿಜಿಟಲ್ ವಜ್ರಗಳು: ಪ್ರಧಾನಮಂತ್ರಿ

ಕಾಗದ ಸಾಮಗ್ರಿಗಳು ಕಡಿಮೆಯಾದಷ್ಟೂ ಬೇಗ ವೇಫರ್ ಕೆಲಸ ಪ್ರಾರಂಭವಾಗುತ್ತದೆ: ಪ್ರಧಾನಮಂತ್ರಿ

ಭಾರತದ ಅತಿಸಣ್ಣ ಚಿಪ್ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಬದಲಾವಣೆಯನ್ನು ಮುನ್ನಡೆಸುತ್ತದೆ: ಪ್ರಧಾನಮಂತ್ರಿ

ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ, ಭಾರತದಲ್ಲಿ ತಯಾರಿಸಲಾಗಿದೆ, ಜಗತ್ತು ನಂಬಿಕೆಯಿಟ್ಟಿದೆ ಎಂದು ಪ್ರಪಂಚ ಹೇಳುವ ದಿನ ದೂರವಿಲ್ಲ: ಪ್ರಧಾನಮಂತ್ರಿ

Posted On: 02 SEP 2025 11:58AM by PIB Bengaluru

ಭಾರತದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ 'ಸೆಮಿಕಾನ್ ಇಂಡಿಯಾ-2025' ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತ ಮತ್ತು ವಿದೇಶಗಳ ಸೆಮಿಕಂಡಕ್ಟರ್ ಉದ್ಯಮದ ಸಿ.ಇ.ಒಗಳು ಮತ್ತು ಸಹವರ್ತಿಗಳ ಉಪಸ್ಥಿತಿಗೆ ಧನ್ಯವಾದ ತಿಳಿಸಿದರು. ವಿವಿಧ ದೇಶಗಳ ಗಣ್ಯ ಅತಿಥಿಗಳು, ನವೋದ್ಯಮಗಳ ಉದ್ಯಮಿಗಳು ಮತ್ತು ದೇಶಾದ್ಯಂತದ ವಿವಿಧ ರಾಜ್ಯಗಳ ಯುವ ವಿದ್ಯಾರ್ಥಿಗಳನ್ನು ಅವರು ಸ್ವಾಗತಿಸಿದರು.

ಜಪಾನ್ ಮತ್ತು ಚೀನಾ ಭೇಟಿಯಿಂದ ನಿನ್ನೆ ರಾತ್ರಿಯಷ್ಟೇ ಹಿಂದಿರುಗಿದ್ದೇನೆ ಮತ್ತು ಇಂದು ಆಕಾಂಕ್ಷೆಗಳು ಮತ್ತು ಆತ್ಮವಿಶ್ವಾಸದಿಂದ ತುಂಬಿರುವ ಯಶೋಭೂಮಿಯಲ್ಲಿ ಪ್ರೇಕ್ಷಕರ ನಡುವೆ ಇದ್ದೇನೆ ಎಂದು ಶ್ರೀ ಮೋದಿ ಹೇಳಿದರು. ತಂತ್ರಜ್ಞಾನದ ಬಗೆಗಿನ ತಮ್ಮ ಉತ್ಸಾಹವು ಯಾವಾಗಲೂ ಸಹಜವಾದುದು ಮತ್ತು ಗೊತ್ತಿರುವಂಥದ್ದು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಇತ್ತೀಚೆಗೆ ಜಪಾನ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊ ಎಲೆಕ್ಟ್ರಾನ್ ಕಾರ್ಖಾನೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತು ಎಂದು ಹೇಳಿದರು. ಆ ಕಂಪನಿಯ ಸಿ.ಇ.ಒ ಇಂದು ಪ್ರೇಕ್ಷಕರ ನಡುವೆ ಇದ್ದಾರೆ ಎಂದು ಅವರು ಹೇಳಿದರು. ತಂತ್ರಜ್ಞಾನದ ಬಗೆಗಿನ ತಮ್ಮ ಒಲವು ತಮ್ಮನ್ನು ಮತ್ತೆ ಮತ್ತೆ ಅಂತಹ ಜನರ ನಡುವೆ ತರುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂದು ಪ್ರೇಕ್ಷಕರ ನಡುವೆ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.

ಜಗತ್ತಿನಾದ್ಯಂತದ ಸೆಮಿಕಂಡಕ್ಟರ್ ವಲಯದ ತಜ್ಞರ ಉಪಸ್ಥಿತಿಯನ್ನು ಮತ್ತು 40 ರಿಂದ 50 ಕ್ಕೂ ಹೆಚ್ಚು ದೇಶಗಳ ಪ್ರಾತಿನಿಧ್ಯವನ್ನು ಗಮನಿಸಿದ ಶ್ರೀ ಮೋದಿ, ಭಾರತದ ನಾವೀನ್ಯತೆ ಮತ್ತು ಯುವ ಶಕ್ತಿಯೂ ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಒತ್ತಿ ಹೇಳಿದರು. ಈ ವಿಶಿಷ್ಟ ಸಂಯೋಜನೆಯು "ವಿಶ್ವವು ಭಾರತದ ಮೇಲೆ ನಂಬಿಕೆಯಿಟ್ಟಿದೆ, ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ ಮತ್ತು ಜಗತ್ತು ಭಾರತದೊಂದಿಗೆ ಸೆಮಿಕಂಡಕ್ಟರ್ ಭವಿಷ್ಯವನ್ನು ನಿರ್ಮಿಸಲು ಸಿದ್ಧವಾಗಿದೆ" ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು. ಸೆಮಿಕಾನ್ ಇಂಡಿಯಾದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯ ಅತಿಥಿಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ಅವರು ಪ್ರಮುಖ ಪಾಲುದಾರರು ಎಂದು ಹೇಳಿದರು.

ಇತ್ತೀಚೆಗೆ ಬಿಡುಗಡೆಯಾದ ಈ ವರ್ಷದ ಮೊದಲ ತ್ರೈಮಾಸಿಕದ ಜಿ.ಡಿ.ಪಿ ಅಂಕಿಅಂಶಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, "ಮತ್ತೊಮ್ಮೆ, ಭಾರತವು ಪ್ರತಿಯೊಂದು ನಿರೀಕ್ಷೆ, ಪ್ರತಿಯೊಂದು ಅಂದಾಜು ಮತ್ತು ಪ್ರತಿಯೊಂದು ಮುನ್ಸೂಚನೆಯನ್ನು ಮೀರಿದೆ" ಎಂದು ಹೇಳಿದರು. ಪ್ರಪಂಚದಾದ್ಯಂತದ ಆರ್ಥಿಕತೆಗಳು ಆರ್ಥಿಕ ಸ್ವಾರ್ಥದಿಂದ ನಡೆಸಲ್ಪಡುವ ಕಳವಳ ಮತ್ತು ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತವು ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ಸಾಧಿಸಿದೆ ಎಂದು ಅವರು ಹೇಳಿದರು. ಉತ್ಪಾದನೆ, ಸೇವೆಗಳು, ಕೃಷಿ ಮತ್ತು ನಿರ್ಮಾಣ - ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಈ ಬೆಳವಣಿಗೆ ಗೋಚರಿಸುತ್ತಿದೆ ಮತ್ತು ಎಲ್ಲೆಡೆ ಉತ್ಸಾಹ ಎದ್ದು ಕಾಣುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತದ ತ್ವರಿತ ಬೆಳವಣಿಗೆಯು ಎಲ್ಲಾ ಕೈಗಾರಿಕೆಗಳಲ್ಲಿ ಮತ್ತು ಪ್ರತಿಯೊಬ್ಬ ನಾಗರಿಕರಲ್ಲಿ ಹೊಸ ಶಕ್ತಿಯನ್ನು ತುಂಬುತ್ತಿದೆ ಎಂದು ಅವರು ಹೇಳಿದರು. ಅಭಿವೃದ್ಧಿಯ ಈ ವೇಗವು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದರು.

ಸೆಮಿಕಂಡಕ್ಟರ್ ಜಗತ್ತಿನಲ್ಲಿ 'ತೈಲ ಕಪ್ಪು ಚಿನ್ನವಾಗಿತ್ತು, ಆದರೆ ಚಿಪ್ ಗಳು ಡಿಜಿಟಲ್ ವಜ್ರಗಳಾಗಿವೆ' ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ತೈಲವು ಕಳೆದ ಶತಮಾನವನ್ನು ರೂಪಿಸಿತು ಮತ್ತು ಪ್ರಪಂಚದ ಭವಿಷ್ಯವನ್ನು ತೈಲ ಬಾವಿಗಳು ನಿರ್ಧರಿಸಿದವು ಎಂದು ಹೇಳಿದರು. ಜಾಗತಿಕ ಆರ್ಥಿಕತೆಯಲ್ಲಿನ ಏರಿಳಿತಗಳು ಈ ಬಾವಿಗಳಿಂದ ಎಷ್ಟು ಪೆಟ್ರೋಲಿಯಂ ಅನ್ನು ಹೊರತೆಗೆಯಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿತ್ತು. ಆದಾಗ್ಯೂ, 21ನೇ ಶತಮಾನದ ಶಕ್ತಿಯು ಈಗ ಸಣ್ಣ ಚಿಪ್‌ ಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಅವರು ಒತ್ತಿ ಹೇಳಿದರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಈ ಚಿಪ್‌ ಗಳು ಜಾಗತಿಕ ಪ್ರಗತಿಯನ್ನು ಗಮನಾರ್ಹವಾಗಿ ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಈಗಾಗಲೇ 600 ಬಿಲಿಯನ್ ಡಾಲರ್‌ ತಲುಪಿದೆ ಮತ್ತು ಮುಂಬರುವ ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್‌ ದಾಟುವ ನಿರೀಕ್ಷೆಯಿದೆ ಎಂದು ಶ್ರೀ ಮೋದಿ ಹೇಳಿದರು. ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಮುಂದುವರಿಯುತ್ತಿರುವ ವೇಗವನ್ನು ಗಮನಿಸಿದರೆ, ಈ 1 ಟ್ರಿಲಿಯನ್ ಡಾಲರ್‌ ಮಾರುಕಟ್ಟೆಯಲ್ಲಿ ಭಾರತವು ಗಮನಾರ್ಹ ಪಾಲನ್ನು ಹೊಂದಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಪ್ರಗತಿಯ ವೇಗವನ್ನು ಒತ್ತಿ ಹೇಳಿದ ಶ್ರೀ ಮೋದಿ, ಸೆಮಿಕಾನ್ ಇಂಡಿಯಾ ಕಾರ್ಯಕ್ರಮವನ್ನು 2021ರಲ್ಲಿ ಪ್ರಾರಂಭಿಸಲಾಯಿತು ಎಂದು ನೆನಪಿಸಿಕೊಂಡರು. 2023ರ ವೇಳೆಗೆ ಭಾರತದ ಮೊದಲ ಸೆಮಿಕಂಡಕ್ಟರ್ ಘಟಕಕ್ಕೆ ಅನುಮೋದನೆ ನೀಡಲಾಯಿತು, 2024ರಲ್ಲಿ ಇನ್ನೂ ಹಲವಾರು ಘಟಕಗಳಿಗೆ ಅನುಮೋದನೆ ನೀಡಲಾಯಿತು ಮತ್ತು 2025 ರಲ್ಲಿ ಐದು ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ, ಹತ್ತು ಸೆಮಿಕಂಡಕ್ಟರ್ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ, ಇವು ಹದಿನೆಂಟು ಶತಕೋಟಿ ಡಾಲರ್‌ ಗಳಿಗೂ ಹೆಚ್ಚು ಅಂದರೆ ₹1.5 ಲಕ್ಷ ಕೋಟಿಗಳಿಗೂ ಹೆಚ್ಚು ಹೂಡಿಕೆಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ಇದು ಭಾರತದ ಮೇಲೆ ಹೆಚ್ಚುತ್ತಿರುವ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ  ಒತ್ತಿ ಹೇಳಿದರು.

ಸೆಮಿಕಂಡಕ್ಟರ್ ವಲಯದಲ್ಲಿ ವೇಗದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, "ಕಡತದಿಂದ ಕಾರ್ಖಾನೆಗೆ ಕಡಿಮೆ ಸಮಯ ಮತ್ತು ಕಾಗದಪತ್ರಗಳ ಕೆಲಸ ಕಡಿಮೆಯಾದಷ್ಟೂ, ವೇಫರ್ ಕೆಲಸ ಬೇಗ ಆರಂಭವಾಗುತ್ತದೆ" ಎಂದು ಹೇಳಿದರು. ಸರ್ಕಾರವು ಈ ದೃಷ್ಟಿಕೋನದೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಮತ್ತು ರಾಜ್ಯಗಳೆರಡರಿಂದಲೂ ಎಲ್ಲಾ ಅನುಮೋದನೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ, ಹೂಡಿಕೆದಾರರು ದೀರ್ಘ ಕಾಗದಪತ್ರಗಳಿಂದ ಮುಕ್ತರಾಗಿದ್ದಾರೆ ಎಂದು ಅವರು ಹೇಳಿದರು. ಭೂಮಿ, ವಿದ್ಯುತ್ ಸರಬರಾಜು, ಬಂದರು ಮತ್ತು ವಿಮಾನ ನಿಲ್ದಾಣ ಸಂಪರ್ಕದಂತಹ ಸೌಲಭ್ಯಗಳನ್ನು ಮತ್ತು ಕೌಶಲ್ಯಪೂರ್ಣ ಕಾರ್ಮಿಕರ ಗುಂಪಿಗೆ ಪ್ರವೇಶವನ್ನು ಒದಗಿಸುವ ಮೂಲಕ ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಮಾದರಿಯಡಿಯಲ್ಲಿ ದೇಶಾದ್ಯಂತ ಸೆಮಿಕಂಡಕ್ಟರ್ ಪಾರ್ಕ್‌ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತಹ ಮೂಲಸೌಕರ್ಯವು ಪ್ರೋತ್ಸಾಹಕಗಳೊಂದಿಗೆ ಸೇರಿಕೊಂಡಾಗ, ಕೈಗಾರಿಕಾ ಬೆಳವಣಿಗೆ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು. ಪಿ.ಎಲ್.ಐ ಪ್ರೋತ್ಸಾಹಕಗಳ ಮೂಲಕ ಅಥವಾ ವಿನ್ಯಾಸ ಸಂಬಂಧಿತ ಅನುದಾನಗಳ ಮೂಲಕ, ಭಾರತವು ಆರಂಭದಿಂದ ಅಂತ್ಯದವರೆಗೆ ಸಾಮರ್ಥ್ಯಗಳನ್ನು ಒದಗಿಸುತ್ತಿದೆ. ಅದಕ್ಕಾಗಿಯೇ ಹೂಡಿಕೆಗಳು ನಿರಂತರವಾಗಿ ಬರುತ್ತಿವೆ ಎಂದು ಅವರು ಒತ್ತಿ ಹೇಳಿದರು. ಭಾರತವು ಬ್ಯಾಕೆಂಡ್ ಕಾರ್ಯಾಚರಣೆಗಳನ್ನು ಮೀರಿ ಸಾಗುತ್ತಿದೆ ಮತ್ತು ಪೂರ್ಣ-ಸ್ಟ್ಯಾಕ್ ಸೆಮಿಕಂಡಕ್ಟರ್ ರಾಷ್ಟ್ರವಾಗಲು ಸಜ್ಜಾಗಿದೆ ಎಂದು ಹೇಳಿದ ಶ್ರೀ ಮೋದಿ, ಭಾರತದ ಅತಿಸಣ್ಣ ಚಿಪ್ ವಿಶ್ವದ ಅತಿದೊಡ್ಡ ಬದಲಾವಣೆಯನ್ನು ಮುನ್ನಡೆಸುವ ದಿನ ದೂರವಿಲ್ಲ ಎಂದು ಪುನರುಚ್ಚರಿಸಿದರು. "ನಮ್ಮ ಪ್ರಯಾಣ ತಡವಾಗಿ ಪ್ರಾರಂಭವಾಯಿತು... ಆದರೆ ಈಗ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು. ಸಿಜಿ ಪವರ್‌ ನ ಪೈಲಟ್ ಘಟಕ ಆಗಸ್ಟ್ 28 ರಂದು ಕೇವಲ 4-5 ದಿನಗಳ ಹಿಂದೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಕೆನೆಸ್‌ ಪೈಲಟ್ ಘಟಕ ಕೂಡ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ಮೈಕ್ರಾನ್ ಮತ್ತು ಟಾಟಾದಿಂದ ಪರೀಕ್ಷಾರ್ಥ ಚಿಪ್‌ ಗಳು ಈಗಾಗಲೇ ಉತ್ಪಾದನೆಯಲ್ಲಿವೆ. ಈ ವರ್ಷ ವಾಣಿಜ್ಯ ಚಿಪ್ ಉತ್ಪಾದನೆ ಪ್ರಾರಂಭವಾಗಲಿದೆ. ಇದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಸಾಧಿಸುತ್ತಿರುವ ತ್ವರಿತ ಪ್ರಗತಿಯನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.

ಭಾರತದ ಸೆಮಿಕಂಡಕ್ಟರ್ ಯಶೋಗಾಥೆಯು ಒಂದೇ ವಲಯ ಅಥವಾ ಒಂದೇ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಭಾರತವು ದೇಶಾದ್ಯಂತ ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಹೈಟೆಕ್ ಉಪಕರಣಗಳನ್ನು ಒಳಗೊಂಡಂತೆ ಸಮಗ್ರ ಪೂರಕ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಸೆಮಿಕಂಡಕ್ಟರ್ ಮಿಷನ್ ಕೇವಲ ಫ್ಯಾಬ್ ಅನ್ನು ಸ್ಥಾಪಿಸುವುದು ಅಥವಾ ಚಿಪ್ ತಯಾರಿಸುವುದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಭಾರತವು ದೇಶವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಬಲವಾದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಸೆಮಿಕಂಡಕ್ಟರ್ ಮಿಷನ್‌ ನ ಮತ್ತೊಂದು ಪ್ರಮುಖ ಲಕ್ಷಣವನ್ನು ವಿವರಿಸಿದ ಶ್ರೀ ಮೋದಿ, ಈ ವಲಯದಲ್ಲಿ ದೇಶವು ವಿಶ್ವದ ಅತ್ಯಂತ ಮುಂದುವರಿದ ತಂತ್ರಜ್ಞಾನಗಳಿಗೆ ಸಮಾನವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು. ದೇಶೀಯವಾಗಿ ತಯಾರಿಸಿದ ಚಿಪ್‌ ಗಳ ಮೂಲಕ ಉದಯೋನ್ಮುಖ ತಂತ್ರಜ್ಞಾನಗಳನ್ನು ಸಬಲೀಕರಣಗೊಳಿಸುವತ್ತ ಭಾರತದ ಗಮನ ಹರಿಸಿದೆ ಎಂದು ಅವರು ಹೇಳಿದರು. ನೋಯ್ಡಾ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಿನ್ಯಾಸ ಕೇಂದ್ರಗಳು ವಿಶ್ವದ ಕೆಲವು ಅತ್ಯಾಧುನಿಕ ಚಿಪ್‌ ಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ - ಶತಕೋಟಿ ಟ್ರಾನ್ಸಿಸ್ಟರ್‌ ಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಚಿಪ್‌ ಗಳು 21 ನೇ ಶತಮಾನದ ತಂತ್ರಜ್ಞಾನಗಳಿಗೆ ಶಕ್ತಿ ತುಂಬುತ್ತವೆ ಎಂದು ಅವರು ಒತ್ತಿ ಹೇಳಿದರು. ಜಾಗತಿಕ ಸೆಮಿಕಂಡಕ್ಟರ್ ವಲಯ ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಈ ಸವಾಲುಗಳನ್ನು ಎದುರಿಸಲು ಭಾರತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ನಗರಗಳು ಎತ್ತರದ ಕಟ್ಟಡಗಳು ಮತ್ತು ಭೌತಿಕ ಮೂಲಸೌಕರ್ಯಗಳನ್ನು ಹೊಂದಿರಬಹುದು, ಆದರೆ ಅವುಗಳ ಅಡಿಪಾಯ ಉಕ್ಕಿನ ಮೇಲೆ ನಿಂತಿದೆ ಎಂದು ಅವರು ಹೇಳಿದರು. ಅದೇ ರೀತಿ, ಭಾರತದ ಡಿಜಿಟಲ್ ಮೂಲಸೌಕರ್ಯದ ಅಡಿಪಾಯವು ನಿರ್ಣಾಯಕ ಖನಿಜಗಳ ಮೇಲೆ ನಿಂತಿದೆ. ಭಾರತವು ಪ್ರಸ್ತುತ ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್‌ ನಲ್ಲಿ ಕೆಲಸ ಮಾಡುತ್ತಿದೆ ಮತ್ತು ದೇಶೀಯವಾಗಿ ಅಪರೂಪದ ಖನಿಜಗಳ ಬೇಡಿಕೆಯನ್ನು ಪೂರೈಸಲು ಬದ್ಧವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಿರ್ಣಾಯಕ ಖನಿಜ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.

ಸೆಮಿಕಂಡಕ್ಟರ್ ವಲಯದ ಬೆಳವಣಿಗೆಯಲ್ಲಿ ನವೋದ್ಯಮಗಳು ಮತ್ತು ಎಂ.ಎಸ್‌.ಎಂ.ಇ ಗಳಿಗೆ ಸರ್ಕಾರವು ನೀಡುವ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸ ಪ್ರತಿಭೆಗಳಲ್ಲಿ ಭಾರತವು ಶೇಕಡಾ 20 ರಷ್ಟು ಕೊಡುಗೆ ನೀಡುತ್ತದೆ ಮತ್ತು ದೇಶದ ಯುವಕರು ಸೆಮಿಕಂಡಕ್ಟರ್ ಉದ್ಯಮಕ್ಕೆ ಅತಿದೊಡ್ಡ ಮಾನವ ಬಂಡವಾಳವನ್ನು ಪ್ರತಿನಿಧಿಸುತ್ತಾರೆ ಎಂದು ಒತ್ತಿ ಹೇಳಿದರು. ಯುವ ಉದ್ಯಮಿಗಳು, ನಾವೀನ್ಯಕಾರರು ಮತ್ತು ನವೋದ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಅವರು ಮುಂದೆ ಬರುವಂತೆ ಒತ್ತಾಯಿಸಿದರು ಮತ್ತು ಸರ್ಕಾರವು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಭರವಸೆ ನೀಡಿದರು. ವಿನ್ಯಾಸ ಆಧಾರಿತ ಪ್ರೋತ್ಸಾಹಕ ಯೋಜನೆ ಮತ್ತು ಚಿಪ್ಸ್-ಟು-ಸ್ಟಾರ್ಟ್‌ಅಪ್‌ ಕಾರ್ಯಕ್ರಮವನ್ನು ನಿರ್ದಿಷ್ಟವಾಗಿ ಅವರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಅದರ ಉದ್ದೇಶಗಳನ್ನು ಉತ್ತಮವಾಗಿ ಪೂರೈಸಲು ವಿನ್ಯಾಸ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಪುನರ್ರಚಿಸಲಾಗುತ್ತಿದೆ ಎಂದು ಅವರು ಘೋಷಿಸಿದರು. ಈ ವಲಯದಲ್ಲಿ ಭಾರತೀಯ ಬೌದ್ಧಿಕ ಆಸ್ತಿ (ಐ.ಪಿ.) ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚೆಗೆ ಪ್ರಾರಂಭಿಸಲಾದ ರಾಷ್ಟ್ರೀಯ ಸಂಶೋಧನಾ ನಿಧಿಯು ಕಾರ್ಯತಂತ್ರದ ಮೈತ್ರಿಗಳ ಮೂಲಕ ಈ ಪ್ರಯತ್ನವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಅನೇಕ ರಾಜ್ಯಗಳು ಸೆಮಿಕಂಡಕ್ಟರ್ ಮಿಷನ್‌ ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ ಮತ್ತು ಅನೇಕ ರಾಜ್ಯಗಳು ಈ ವಲಯಕ್ಕೆ ವಿಶೇಷ ನೀತಿಗಳನ್ನು ರೂಪಿಸಿವೆ. ಈ ರಾಜ್ಯಗಳು ಮೀಸಲಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿವೆ ಎಂದು ಅವರು ಹೇಳಿದರು. ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಲು ಮತ್ತು ತಮ್ಮ ಪ್ರದೇಶಗಳಲ್ಲಿ ಹೂಡಿಕೆ ವಾತಾವರಣವನ್ನು ಸುಧಾರಿಸಲು ಪರಸ್ಪರ ಆರೋಗ್ಯಕರ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಅವರು ಎಲ್ಲಾ ರಾಜ್ಯಗಳಿಗೆ ಕರೆ ನೀಡಿದರು.

"ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ" ಎಂಬ ಮಂತ್ರವನ್ನು ಅನುಸರಿಸಿ ಭಾರತ ಈ ಮೈಲಿಗಲ್ಲನ್ನು ತಲುಪಿದೆ. ಮುಂದಿನ ಪೀಳಿಗೆಯ ಸುಧಾರಣೆಗಳ ಹೊಸ ಹಂತವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು" ಎಂದು ಪ್ರಧಾನಮಂತ್ರಿ ಹೇಳಿದರು, ಭಾರತ ಸೆಮಿಕಂಡಕ್ಟರ್ ಮಿಷನ್‌ ನ ಮುಂದಿನ ಹಂತವು ನಡೆಯುತ್ತಿದೆ ಎಂದು ಹೇಳಿದರು. ಹಾಜರಿದ್ದ ಎಲ್ಲಾ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಮುಕ್ತ ಮನಸ್ಸಿನಿಂದ ಅವರನ್ನು ಸ್ವಾಗತಿಸಲು ಸಿದ್ಧವಾಗಿದೆ ಎಂದರು. "ವಿನ್ಯಾಸ ಸಿದ್ಧವಾಗಿದೆ. ಮುಖವಾಡವನ್ನು ಹೊಂದಿಸಲಾಗಿದೆ. ಈಗ ನಿಖರವಾದ ಅನುಷ್ಠಾನ ಮತ್ತು ಪ್ರಮಾಣದಲ್ಲಿ ವಿತರಣೆಯ ಸಮಯವಾಗಿದೆ" ಎಂದು ಹೇಳಿದರು. ಭಾರತದ ನೀತಿಗಳು ಅಲ್ಪಾವಧಿಯ ಸಂಕೇತಗಳಲ್ಲ, ಆದರೆ ದೀರ್ಘಾವಧಿಯ ಬದ್ಧತೆಗಳಾಗಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ಪ್ರತಿಯೊಬ್ಬ ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು. "ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ, ಭಾರತದಲ್ಲಿ ತಯಾರಿಸಲಾಗಿದೆ, ಜಗತ್ತು ನಂಬಿಕೆಯಿಟ್ಟಿದೆ ಎಂದು ಜಗತ್ತು ಹೇಳುವ ದಿನ ದೂರವಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಪ್ರತಿಯೊಂದು ಪ್ರಯತ್ನವೂ ಯಶಸ್ವಿಯಾಗಲಿ, ಪ್ರತಿ ಬೈಟ್ ನಾವೀನ್ಯತೆಯಿಂದ ತುಂಬಿರಲಿ ಮತ್ತು ಪ್ರಯಾಣವು ದೋಷರಹಿತ ಮತ್ತು ಉನ್ನತ ಕಾರ್ಯಕ್ಷಮತೆಯಿಂದ ಕೂಡಿರಲಿ ಎಂದು ಹಾರೈಸಿದ ಪ್ರಧಾನಮಂತ್ರಿ ಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಜಿತಿನ್ ಪ್ರಸಾದ, ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸೆಪ್ಟೆಂಬರ್ 2 ರಿಂದ 4 ರವರೆಗೆ ನಡೆಯುವ ಮೂರು ದಿನಗಳ ಸಮ್ಮೇಳನವಾದ ಸೆಮಿಕಾನ್ ಇಂಡಿಯಾ - 2025, ಭಾರತದಲ್ಲಿ ದೃಢವಾದ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ಮುನ್ನಡೆಸುವತ್ತ ಗಮನಹರಿಸುತ್ತದೆ. ಇದು ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಪ್ರಗತಿ, ಸೆಮಿಕಂಡಕ್ಟರ್ ಫ್ಯಾಬ್ ಮತ್ತು ಸುಧಾರಿತ ಪ್ಯಾಕೇಜಿಂಗ್ ಯೋಜನೆಗಳು, ಮೂಲಸೌಕರ್ಯ ಸಿದ್ಧತೆ, ಸ್ಮಾರ್ಟ್ ಉತ್ಪಾದನೆ, ಆರ್ & ಡಿ ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ನಾವೀನ್ಯತೆಗಳು, ಹೂಡಿಕೆ ಅವಕಾಶಗಳು, ರಾಜ್ಯ ಮಟ್ಟದ ನೀತಿ ಅನುಷ್ಠಾನ ಇತ್ಯಾದಿಗಳ ಕುರಿತು ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಈ ಕಾರ್ಯಕ್ರಮವು ವಿನ್ಯಾಸ ಆಧಾರಿತ ಪ್ರೋತ್ಸಾಹಕ (ಡಿ.ಎಲ್‌.ಐ) ಯೋಜನೆಯ ಅಡಿಯಲ್ಲಿ ಉಪಕ್ರಮಗಳು, ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆ, ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ಭಾರತದ ಸೆಮಿಕಂಡಕ್ಟರ್ ವಲಯದ ಭವಿಷ್ಯದ ಮಾರ್ಗಸೂಚಿಯನ್ನು ಸಹ ಒತ್ತಿ ಹೇಳುತ್ತದೆ.

ಇದರಲ್ಲಿ 48ಕ್ಕೂ ಹೆಚ್ಚು ದೇಶಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು, 50ಕ್ಕೂ ಹೆಚ್ಚು ಜಾಗತಿಕ ನಾಯಕರು, 150ಕ್ಕೂ ಹೆಚ್ಚು ಭಾಷಣಕಾರರು ಮತ್ತು 350ಕ್ಕೂ ಹೆಚ್ಚು ಪ್ರದರ್ಶಕರು ಸೇರಿದಂತೆ 20,750ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಇದು 6 ದೇಶಗಳ ದುಂಡುಮೇಜಿನ ಚರ್ಚೆಗಳು, ರಾಷ್ಟ್ರಗಳ ಪೆವಿಲಿಯನ್‌ ಗಳು ಮತ್ತು ಕಾರ್ಯಪಡೆ ಅಭಿವೃದ್ಧಿ ಮತ್ತು ನವೋದ್ಯಮಗಳಿಗಾಗಿ ಮೀಸಲಾದ ಪೆವಿಲಿಯನ್‌ ಗಳನ್ನು ಸಹ ಒಳಗೊಂಡಿರುತ್ತದೆ.

 

 

*****


(Release ID: 2163064) Visitor Counter : 8