ಪ್ರಧಾನ ಮಂತ್ರಿಯವರ ಕಛೇರಿ
ಚೀನಾದ ಟಿಯಾಂಜಿನ್ ನಲ್ಲಿ ನಡೆದ 25ನೇ ʻಎಸ್‌ಸಿಒʼ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು
Posted On:
01 SEP 2025 11:53AM by PIB Bengaluru
2025ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಶೃಂಗಸಭೆಯು ʻಎಸ್‌ಸಿಒʼ ಅಭಿವೃದ್ಧಿ ಕಾರ್ಯತಂತ್ರ, ಜಾಗತಿಕ ಆಡಳಿತದ ಸುಧಾರಣೆ, ಭಯೋತ್ಪಾದನೆ ನಿಗ್ರಹ, ಶಾಂತಿ ಮತ್ತು ಭದ್ರತೆ, ಆರ್ಥಿಕ ಮತ್ತು ಹಣಕಾಸು ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ನಿರ್ಮಾಣಾತ್ಮಕ ಚರ್ಚೆಗಳಿಗೆ ಸಾಕ್ಷಿಯಾಯಿತು.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಯವರು, ʻಎಸ್‌ಸಿಒʼ ನೀತಿ ಚೌಕಟ್ಟಿನ ಅಡಿಯಲ್ಲಿ ಸಹಕಾರವನ್ನು ಬಲಪಡಿಸುವ ಭಾರತದ ಕಾರ್ಯವಿಧಾನವನ್ನು ಎತ್ತಿ ತೋರಿದರು. ಈ ನಿಟ್ಟಿನಲ್ಲಿ, ಭದ್ರತೆ, ಸಂಪರ್ಕ ಮತ್ತು ಅವಕಾಶ ಎಂಬ ಮೂರು ಸ್ತಂಭಗಳ ಅಡಿಯಲ್ಲಿ ಭಾರತ ಹೆಚ್ಚಿನ ಕ್ರಮವನ್ನು ಬಯಸುತ್ತದೆ ಎಂದು ಅವರು ಹೇಳಿದರು. ಶಾಂತಿ, ಭದ್ರತೆ ಮತ್ತು ಸ್ಥಿರತೆಯು ಪ್ರಗತಿ ಮತ್ತು ಸಮೃದ್ಧಿಗೆ ಪ್ರಮುಖವಾಗಿವೆ ಎಂದು ಒತ್ತಿ ಹೇಳಿದ ಅವರು, ಭಯೋತ್ಪಾದನೆಯ ಎಲ್ಲಾ ಅಭಿವ್ಯಕ್ತಿಗಳಲ್ಲಿ ಅದರ ವಿರುದ್ಧ ಹೋರಾಡಲು ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು. ಭಯೋತ್ಪಾದನೆಗೆ ಹಣಕಾಸು ಒದಗಿಸುವಿಕೆ ಮತ್ತು ಮೂಲಭೂತವಾದದ ವಿರುದ್ಧ ಸಂಘಟಿತ ಕ್ರಮದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸದಸ್ಯ ರಾಷ್ಟ್ರಗಳು ತೋರಿದ ಬಲವಾದ ಒಗ್ಗಟ್ಟಿಗೆ ಧನ್ಯವಾದ ಅರ್ಪಿಸಿದ ಅವರು, ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ದ್ವಿಮುಖ ನೀತಿಗಳು ಇರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸುವ ಮತ್ತು ಬೆಂಬಲಿಸುವ ದೇಶಗಳನ್ನು ಹೊಣೆಗಾರರನ್ನಾಗಿ ಮಾಡುವಂತೆ ಗುಂಪನ್ನು ಒತ್ತಾಯಿಸಿದರು.
ಅಭಿವೃದ್ಧಿ ಮತ್ತು ವಿಶ್ವಾಸ ವೃದ್ಧಿಯಲ್ಲಿ ಸಂಪರ್ಕದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ , ಚಾಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನಂತಹ ಯೋಜನೆಗಳಿಗೆ ಭಾರತವು ಬಲವಾಗಿ ಬೆಂಬಲ ನೀಡಿದೆ ಎಂದು ಹೇಳಿದರು. ನವೋದ್ಯಮಗಳು, ನಾವೀನ್ಯತೆ, ಯುವ ಸಬಲೀಕರಣ ಕ್ಷೇತ್ರಗಳಲ್ಲಿನ ಅವಕಾಶಗಳ ಬಗ್ಗೆ ಮತ್ತು ʻಎಸ್‌ಸಿಒʼ ಅಡಿಯಲ್ಲಿ ಅನುಸರಿಸಬೇಕಾದ ಪರಸ್ಪರ ಹಂಚಿಕೆಯ ಪರಂಪರೆಯ ಬಗ್ಗೆಯೂ ಅವರು ಮಾತನಾಡಿದರು. ಜನರ ನಡುವಿನ ಬಾಂಧವ್ಯ ವೃದ್ದಿ ಮತ್ತು ಸಾಂಸ್ಕೃತಿಕ ತಿಳಿವಳಿಕೆಯನ್ನು ಬೆಳೆಸಲು ಒಕ್ಕೂಟದೊಳಗೆ ʻನಾಗರಿಕ ಸಂವಾದ ವೇದಿಕೆʼಯನ್ನು ಪ್ರಾರಂಭಿಸಲು ಪ್ರಧಾನಮಂತ್ರಿ ಪ್ರಸ್ತಾಪಿಸಿದರು.
ಒಕ್ಕೂಟದ ಸುಧಾರಣಾ-ಆಧಾರಿತ ಕಾರ್ಯಸೂಚಿಗೆ ಪ್ರಧಾನಮಂತ್ರಿ ಬೆಂಬಲ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ ಮತ್ತು ಸೈಬರ್ ಭದ್ರತೆಯನ್ನು ಎದುರಿಸಲು ಕೇಂದ್ರಗಳನ್ನು ಸ್ಥಾಪಿಸುವುದನ್ನು ಅವರು ಸ್ವಾಗತಿಸಿದರು. ವಿಶ್ವಸಂಸ್ಥೆ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸುವಲ್ಲಿ ಒಕ್ಕೂಟವು ಇದೇ ರೀತಿಯ ವಿಧಾನವನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದರು. ಪ್ರಧಾನಮಂತ್ರಿ ಯವರ ಪೂರ್ಣ ಭಾಷಣವನ್ನು ಇಲ್ಲಿ ಕಾಣಬಹುದು [Link].
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಯವರು ಧನ್ಯವಾದ ಅರ್ಪಿಸಿದರು ಮತ್ತು ಶೃಂಗಸಭೆಯ ಯಶಸ್ವಿ ಸಂಘಟನೆಗಾಗಿ ಅವರನ್ನು ಅಭಿನಂದಿಸಿದರು. ʻಎಸ್‌ಸಿಒʼ ಮುಂದಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕಾಗಿ ಅವರು ಕಿರ್ಗಿಸ್ತಾನ್ ಅನ್ನು ಅಭಿನಂದಿಸಿದರು. ಶೃಂಗಸಭೆಯ ಕೊನೆಯಲ್ಲಿ, ʻಎಸ್ ಸಿ ಒʼ ಸದಸ್ಯ ರಾಷ್ಟ್ರಗಳು ʻಟಿಯಾಂಜಿನ್ ಘೋಷಣೆʼಯನ್ನು ಅಂಗೀಕರಿಸಿದವು.
*****
(Release ID: 2162725)
Visitor Counter : 2
Read this release in:
Malayalam
,
English
,
Urdu
,
Marathi
,
Hindi
,
Bengali-TR
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu