ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರ ರಾಜ್ಯ ಜೀವಿಕಾ ನಿಧಿ ಶಾಖಾ ಸಹಕಾರಿ ಸಂಘ ನಿಯಮಿತಕ್ಕೆ ಸೆಪ್ಟೆಂಬರ್ 2 ರಂದು ಪ್ರಧಾನಮಂತ್ರಿ ಚಾಲನೆ
ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಕೈಗೆಟುಕುವ ದರದಲ್ಲಿ ಜೀವಿಕಾ ನಿಧಿ ಲಭ್ಯ
ನೇರ ಮತ್ತು ಪಾರದರ್ಶಕ ನಿಧಿ ವರ್ಗಾವಣೆ ಖಾತರಿಪಡಿಸಲು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಜೀವಿಕಾ ನಿಧಿಯ ಕಾರ್ಯನಿರ್ವಹಣೆ
Posted On:
01 SEP 2025 3:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ರಾಜ್ಯ ಜೀವಿಕಾ ನಿಧಿ ಶಾಖಾ ಸಹಕಾರಿ ಸಂಘ ನಿಯಮಿತವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಸಂಸ್ಥೆಯ ಬ್ಯಾಂಕ್ ಖಾತೆಗೆ 105 ಕೋಟಿ ರೂ.ಗಳನ್ನು ವರ್ಗಾಯಿಸಲಿದ್ದಾರೆ.
ಜೀವಿಕಾದೊಂದಿಗೆ ಸಂಪರ್ಕಿತವಾಗಿರುವ ಸಮುದಾಯದ ಸದಸ್ಯರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಹಣವನ್ನು ಸುಲಭವಾಗಿ ಪಡೆಯಲು ಅವಕಾಶ ನೀಡುವುದು ಜೀವಿಕಾ ನಿಧಿ ಸ್ಥಾಪನೆಯ ಉದ್ದೇಶವಾಗಿದೆ. ಜೀವಿಕಾದ ಎಲ್ಲಾ ನೋಂದಾಯಿತ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಈ ಸಂಘದ ಸದಸ್ಯತ್ವ ಪಡೆಯಲಿದ್ದು, ಈ ಸಂಸ್ಥೆಯ ಕಾರ್ಯಾಚರಣೆಗಾಗಿ, ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರವು ನಿಧಿಯ ಕೊಡುಗೆ ನೀಡಲಿವೆ.
ಜೀವಿಕಾದ ಸ್ವ-ಸಹಾಯ ಗುಂಪುಗಳೊಂದಿಗೆ ಹಲವು ವರ್ಷಗಳಿಂದ ನಂಟು ಹೊಂದಿರುವ ಮಹಿಳೆಯರಲ್ಲಿ ಉದ್ಯಮಶೀಲತೆ ಪ್ರವರ್ಧಮಾನಕ್ಕೆ ಬಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕಿರು ಉದ್ಯಮಗಳು ಮತ್ತು ಉತ್ಪಾದಕ ಕಂಪನಿಗಳು ಸ್ಥಾಪನೆಯಾಗಿವೆ. ಆದಾಗ್ಯೂ, ಮಹಿಳಾ ಉದ್ಯಮಿಗಳು ಶೇಕಡ 18 ರಿಂದ 24ರ ಹೆಚ್ಚಿನ ಬಡ್ಡಿದರಗಳನ್ನು ವಿಧಿಸುವ ಕಿರುಬಂಡವಾಳ ಸಂಸ್ಥೆ (ಎಂ.ಎಫ್.ಐ) ಗಳನ್ನು ಅವಲಂಬಿಸಬೇಕಾಗಿದೆ. ಎಂ.ಎಫ್.ಐ ಗಳ ಅವಲಂಬನೆಯನ್ನು ತಗ್ಗಿಸಲು ಮತ್ತು ಕಡಿಮೆ ಬಡ್ಡಿದರಗಳಲ್ಲಿ ದೊಡ್ಡ ಮೊತ್ತದ ಸಾಲದ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಜೀವಿಕಾ ನಿಧಿಯು ಪರ್ಯಾಯ ಹಣಕಾಸು ವ್ಯವಸ್ಥೆಯಾಗಿದೆ.
ಈ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಜೀವಿಕಾ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ, ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿ ಹಣ ವರ್ಗಾವಣೆಯಾಗುವುದನ್ನು ಖಚಿತಪಡಿಸುತ್ತದೆ. ಈ ವ್ಯವಸ್ಥೆಯನ್ನು ಸುಗಮಗೊಳಿಸಲು, 12,000 ಸಮುದಾಯ ಕಾರ್ಯಕರ್ತರಿಗೆ ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗಿದೆ.
ಈ ಉಪಕ್ರಮವು ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬಲಪಡಿಸಲಿದೆ ಮತ್ತು ಸಮುದಾಯ ನೇತೃತ್ವದ ಉದ್ಯಮಗಳ ಬೆಳವಣಿಗೆಯನ್ನು ವೇಗಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಹಾರ ರಾಜ್ಯಾದ್ಯಂತ ಸುಮಾರು 20 ಲಕ್ಷ ಮಹಿಳೆಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
*****
(Release ID: 2162697)
Visitor Counter : 7
Read this release in:
Bengali-TR
,
Odia
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam