ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತಿನ ಅಹಮದಾಬಾದ್ ನಲ್ಲಿ 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಿದರು
ಸುದರ್ಶನ ಚಕ್ರಧಾರಿ ಮೋಹನ ಮತ್ತು ಚರಕಧಾರಿ ಮೋಹನ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಭಾರತ ಇಂದು ಬಲಿಷ್ಠವಾಗುತ್ತಿದೆ: ಪ್ರಧಾನಮಂತ್ರಿ
ಇಂದು, ಭಯೋತ್ಪಾದಕರು ಮತ್ತು ಅವರ ಸೂತ್ರಧಾರಿಗಳು ಎಲ್ಲಿ ಅಡಗಿದ್ದರೂ ಅವರನ್ನು ಬಿಡಲಾಗುವುದಿಲ್ಲ: ಪ್ರಧಾನಮಂತ್ರಿ
ಸಣ್ಣ ಉದ್ಯಮಿಗಳು, ರೈತರು ಅಥವಾ ಹೈನುಗಾರರಿಗೆ ಯಾವುದೇ ಹಾನಿಯಾಗಲು ನಮ್ಮ ಸರ್ಕಾರ ಬಿಡುವುದಿಲ್ಲ: ಪ್ರಧಾನಮಂತ್ರಿ
ಇಂದು, ಗುಜರಾತ್ ನೆಲದಲ್ಲಿ ಪ್ರತಿಯೊಂದು ರೀತಿಯ ಉದ್ಯಮವೂ ವಿಸ್ತರಿಸುತ್ತಿದೆ: ಪ್ರಧಾನಮಂತ್ರಿ
ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗ ಎರಡನ್ನೂ ಸಬಲೀಕರಣಗೊಳಿಸಲು ನಮ್ಮ ನಿರಂತರ ಪ್ರಯತ್ನಗಳು ನಡೆಯುತ್ತವೆ: ಪ್ರಧಾನಮಂತ್ರಿ
ಈ ದೀಪಾವಳಿಯಲ್ಲಿ, ಅದು ವ್ಯಾಪಾರ ಸಮುದಾಯವಾಗಿರಲಿ ಅಥವಾ ಇತರ ಕುಟುಂಬಗಳಾಗಿರಲಿ, ಪ್ರತಿಯೊಬ್ಬರೂ ಸಂತೋಷದ ದುಪ್ಪಟ್ಟು ಬೋನಸ್ ಅನ್ನು ಪಡೆಯುತ್ತಾರೆ: ಪ್ರಧಾನಮಂತ್ರಿ
ಹಬ್ಬದ ಋತುವಿನಲ್ಲಿ ಮನೆಗೆ ತರುವ ಎಲ್ಲಾ ಖರೀದಿಗಳು, ಉಡುಗೊರೆಗಳು ಮತ್ತು ವಸ್ತುಗಳು ಮೇಡ್ ಇನ್ ಇಂಡಿಯಾ ಆಗಿರಲಿ: ಪ್ರಧಾನಮಂತ್ರಿ
प्रविष्टि तिथि:
25 AUG 2025 9:04PM by PIB Bengaluru
ಗುಜರಾತಿನ ಅಹಮದಾಬಾದ್ ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ, ಲೋಕಾರ್ಪಣೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಡೀ ರಾಷ್ಟ್ರವು ಪ್ರಸ್ತುತ ಗಣೇಶೋತ್ಸವದ ಉತ್ಸಾಹದಲ್ಲಿ ಮುಳುಗಿದೆ ಎಂದು ಹೇಳಿದರು. ಗಣಪತಿ ಬಪ್ಪಾ ಆಶೀರ್ವಾದದೊಂದಿಗೆ, ಇಂದು ಗುಜರಾತಿನ ಪ್ರಗತಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶುಭಾರಂಭ ಮಾಡಲಾಗಿದೆ. ಜನರ ಪಾದಾರವಿಂದಗಳಿಗೆ ಹಲವಾರು ಯೋಜನೆಗಳನ್ನು ಅರ್ಪಿಸುವ ಸೌಭಾಗ್ಯ ತಮಗೆ ದೊರೆತಿದೆ ಎಂದು ಅವರು ಹೇಳಿದರು ಮತ್ತು ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಮುಂಗಾರಿನಲ್ಲಿ ಗುಜರಾತಿನ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರತದ ಕೆಲವು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಹೇಳಿದ ಶ್ರೀ ಮೋದಿ, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಪ್ರಕೃತಿಯ ಈ ವಿಕೋಪ ಇಡೀ ದೇಶಕ್ಕೆ ಒಂದು ಸವಾಲಾಗಿದೆ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯದೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಗುಜರಾತ್ ಇಬ್ಬರು ಮೋಹನರ ನಾಡು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಮೊದಲನೆಯವರು ಸುದರ್ಶನ ಚಕ್ರಧಾರಿ - ದ್ವಾರಕಾಧೀಶ ಶ್ರೀ ಕೃಷ್ಣ. ಎರಡನೆಯವರು ಚರಕಧಾರಿ - ಸಬರಮತಿಯ ಸಂತ ಪೂಜ್ಯ ಬಾಪು ಎಂದು ಹೇಳಿದರು. "ಸುದರ್ಶನ ಚಕ್ರಧಾರಿ ಮೋಹನ ಮತ್ತು ಚರಕಧಾರಿ ಮೋಹನ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಭಾರತ ಇಂದು ಬಲಿಷ್ಠವಾಗುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಸುದರ್ಶನ-ಚಕ್ರಧಾರಿ ಮೋಹನ ರಾಷ್ಟ್ರ ಮತ್ತು ಸಮಾಜವನ್ನು ಹೇಗೆ ರಕ್ಷಿಸಬೇಕೆಂದು ನಮಗೆ ಕಲಿಸಿದರು. ಸುದರ್ಶನ ಚಕ್ರವು ನ್ಯಾಯ ಮತ್ತು ಭದ್ರತೆಯ ಗುರಾಣಿಯಾಗಿದೆ – ಅದು ಪಾತಾಳದಲ್ಲಿರುವ ಶತ್ರುಗಳನ್ನೂ ಶಿಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. ಈ ಮನೋಭಾವವು ಇಂದಿನ ಭಾರತದ ನಿರ್ಧಾರಗಳಲ್ಲಿ ಪ್ರತಿಫಲಿಸುತ್ತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇಂದು, ಭಾರತವು ಭಯೋತ್ಪಾದಕರು ಅಥವಾ ಅವರ ಸೂತ್ರಧಾರರು ಎಲ್ಲಿ ಅಡಗಿಕೊಂಡರೂ ಅವರನ್ನು ಬಿಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಪಹಲ್ಗಾಮ್ ದಾಳಿಗೆ ಭಾರತ ಹೇಗೆ ಸೇಡು ತೀರಿಸಿಕೊಂಡಿತು ಎಂಬುದನ್ನು ಜಗತ್ತು ನೋಡಿದೆ. ಎಂದು ಶ್ರೀ ಮೋದಿ ಹೇಳಿದರು. ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸುದರ್ಶನ-ಚಕ್ರಧಾರಿ ಮೋಹನನಿಂದ ಪ್ರೇರಿತವಾದ ರಾಷ್ಟ್ರದ ದೃಢಸಂಕಲ್ಪದ ಸಂಕೇತವಾಗಿ ಆಪರೇಷನ್ ಸಿಂಧೂರವನ್ನು ಅವರು ಉಲ್ಲೇಖಿಸಿದರು.
ಸ್ವದೇಶಿ ಮೂಲಕ ಭಾರತದ ಸಮೃದ್ಧಿಯ ಹಾದಿಯನ್ನು ತೋರಿಸಿದ ಚರಕಧಾರಿ ಮೋಹನ - ಪೂಜ್ಯ ಬಾಪು ಅವರ ಪರಂಪರೆಯನ್ನು ಸ್ಮರಿಸಿದ ಪ್ರಧಾನಮಂತ್ರಿ, ಬಾಪು ಅವರ ಹೆಸರಿನಲ್ಲಿ ದಶಕಗಳ ಕಾಲ ಅಧಿಕಾರ ಅನುಭವಿಸಿದ ಪಕ್ಷದ ಕೆಲಸಗಳು ಮತ್ತು ನಿಷ್ಕ್ರಿಯತೆಗೆ ಸಬರಮತಿ ಆಶ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು. ಸ್ವದೇಶಿ ಮಂತ್ರಕ್ಕಾಗಿ ಆ ಪಕ್ಷ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು. 60-65 ವರ್ಷಗಳ ಕಾಲ ದೇಶವನ್ನು ಆಳಿದ ಮತ್ತು ಭಾರತವನ್ನು ವಿದೇಶಗಳ ಮೇಲೆ ಅವಲಂಬಿತವಾಗಿಸಿದ ಪಕ್ಷವನ್ನು ಟೀಕಿಸಿದ ಶ್ರೀ ಮೋದಿ, ಆಮದುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸಲು ಇದನ್ನು ಮಾಡಲಾಯಿತು ಎಂದು ಆರೋಪಿಸಿದರು. ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ಸ್ವಾವಲಂಬನೆಯನ್ನು ಆಧಾರವನ್ನಾಗಿ ಮಾಡಿಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ತನ್ನ ರೈತರು, ಮೀನುಗಾರರು, ಹೈನುಗಾರರು ಮತ್ತು ಉದ್ಯಮಿಗಳ ಬಲದಿಂದ ಈ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಗುಜರಾತಿನಲ್ಲಿ ಹೆಚ್ಚಿನ ಸಂಖ್ಯೆಯ ಹೈನುಗಾರರು ಇದ್ದಾರೆ ಎಂದು ಒತ್ತಿ ಹೇಳಿದರು. ಭಾರತದ ಡೈರಿ ವಲಯವು ಶಕ್ತಿಯ ಮೂಲವಾಗಿದ್ದು, ಈ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಆರ್ಥಿಕ ಸ್ವಾರ್ಥದಿಂದ ನಡೆಸಲ್ಪಡುವ ರಾಜಕೀಯವನ್ನು ಜಗತ್ತು ನೋಡುತ್ತಿದೆ ಎಂದು ಪ್ರಧಾನಮಂತ್ರಿ ಎಚ್ಚರಿಸಿದರು., ಸಣ್ಣ ಉದ್ಯಮಿಗಳು, ಅಂಗಡಿಯವರು, ರೈತರು ಮತ್ತು ಹೈನುಗಾರರ ಕಲ್ಯಾಣವು ತಮಗೆ ಅತ್ಯಂತ ಮುಖ್ಯ ಎಂದು ಅಹಮದಾಬಾದ್ ನೆಲದಿಂದ ಮಾತನಾಡಿದ ಶ್ರೀ ಮೋದಿ ಹೇಳಿದರು. ತಮ್ಮ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಅಥವಾ ಹೈನುಗಾರರ ಹಿತಾಸಕ್ತಿಗಳಿಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
"ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಗುಜರಾತ್ ಅಗಾಧ ಆವೇಗವನ್ನು ನೀಡುತ್ತಿದೆ. ಈ ಪ್ರಗತಿಯು ಎರಡು ದಶಕಗಳ ಸಮರ್ಪಿತ ಪ್ರಯತ್ನದ ಫಲವಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಪ್ರದೇಶದಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದ ಕರ್ಫ್ಯೂ ದಿನಗಳನ್ನು ಇಂದಿನ ಯುವಜನರು ಕಂಡಿಲ್ಲ ಎಂದು ಅವರು ಹೇಳಿದರು. ವ್ಯಾಪಾರ ಮತ್ತು ವ್ಯವಹಾರ ನಡೆಸುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ನೆನಪಿಸಿಕೊಂಡ ಪ್ರಧಾನಮಂತ್ರಿ, ಇಲ್ಲಿನ ವಾತಾವರಣ ಅಶಾಂತಿಯದ್ದಾಗಿತ್ತು ಎಂದು ಹೇಳಿದರು. ಆದಾಗ್ಯೂ, ಇಂದು ಅಹಮದಾಬಾದ್ ದೇಶದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ., ಈ ಪರಿವರ್ತನೆಯ ಶ್ರೇಯ ಜನರಿಗೆ ಸಲ್ಲಬೇಕು ಎಂದು ಅವರು ಹೇಳಿದರು.
ಗುಜರಾತಿನಲ್ಲಿ ಸ್ಥಾಪಿತವಾದ ಶಾಂತಿ ಮತ್ತು ಭದ್ರತೆಯ ವಾತಾವರಣವು ರಾಜ್ಯಾದ್ಯಂತ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂದು, ಗುಜರಾತಿನಲ್ಲಿ ಎಲ್ಲಾ ರೀತಿಯ ಉದ್ಯಮಗಳು ವಿಸ್ತರಿಸುತ್ತಿವೆ. ಗುಜರಾತ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿರುವುದಕ್ಕೆ ಇಡೀ ರಾಜ್ಯವು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ರೈಲು ಕಾರ್ಖಾನೆಯಲ್ಲಿ ಶಕ್ತಿಶಾಲಿ ವಿದ್ಯುತ್ ಲೋಕೋಮೋಟಿವ್ ಎಂಜಿನ್ ಗಳನ್ನು ತಯಾರಿಸಲಾಗುತ್ತಿರುವ ದಾಹೋದ್ ಗೆ ತಮ್ಮ ಇತ್ತೀಚಿನ ಭೇಟಿಯನ್ನು ನೆನಪಿಸಿಕೊಂಡ ಶ್ರೀ ಮೋದಿ, ಗುಜರಾತಿನಲ್ಲಿ ತಯಾರಾದ ಮೆಟ್ರೋ ಬೋಗಿಗಳನ್ನು ಈಗ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು. ಗುಜರಾತ್ ಮೋಟಾರ್ ಸೈಕಲ್ ಮತ್ತು ಕಾರುಗಳ ದೊಡ್ಡ ಪ್ರಮಾಣದ ಉತ್ಪಾದನೆಗೆ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಗುಜರಾತ್ ಈಗಾಗಲೇ ವಿವಿಧ ವಿಮಾನ ಬಿಡಿಭಾಗಗಳನ್ನು ಉತ್ಪಾದಿಸುತ್ತಿದೆ ಮತ್ತು ರಫ್ತು ಮಾಡುತ್ತಿದೆ. ವಡೋದರಾ ಈಗ ಸಾರಿಗೆ ವಿಮಾನಗಳನ್ನು ತಯಾರಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಗುಜರಾತ್ ವಿದ್ಯುಚ್ಚಾಲಿತ ವಾಹನ ಉತ್ಪಾದನೆಯಲ್ಲಿ ಪ್ರಮುಖ ಕೇಂದ್ರವಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿದ್ಯುಚ್ಚಾಲಿತ ವಾಹನ ಉತ್ಪಾದನೆಯಲ್ಲಿ ಮಹತ್ವದ ಉಪಕ್ರಮವನ್ನು ಪ್ರಾರಂಭಿಸಲಾಗುತ್ತಿರುವ ಹನ್ಸಲ್ಪುರಕ್ಕೆ ನಾಳೆ ಭೇಟಿ ನೀಡುವುದಾಗಿ ಹೇಳಿದರು. ಅರೆವಾಹಕಗಳಿಲ್ಲದೆ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಅರೆವಾಹಕ ವಲಯದಲ್ಲಿ ಗುಜರಾತ್ ಪ್ರಮುಖ ಕೇಂದ್ರವಾಗಲು ಸಜ್ಜಾಗಿದೆ ಎಂದು ಹೇಳಿದರು. ಜವಳಿ, ರತ್ನಗಳು ಮತ್ತು ಆಭರಣಗಳಲ್ಲಿ ಗುಜರಾತ್ ತನ್ನ ಗುರುತನ್ನು ಸ್ಥಾಪಿಸಿದೆ. ಔಷಧಗಳು ಮತ್ತು ಲಸಿಕೆಗಳು ಸೇರಿದಂತೆ ಔಷಧ ಉತ್ಪಾದನೆಯ ಕ್ಷೇತ್ರದಲ್ಲಿ ದೇಶದ ರಫ್ತಿನ ಸುಮಾರು ಮೂರನೇ ಒಂದು ಭಾಗ ಗುಜರಾತಿನಿಂದ ಬರುತ್ತಿದೆ ಎಂದು ಅವರು ಹೇಳಿದರು.
"ಭಾರತವು ಸೌರ, ಪವನ ಮತ್ತು ಪರಮಾಣು ಇಂಧನ ಕ್ಷೇತ್ರಗಳಲ್ಲಿ ವೇಗವಾಗಿ ಮುಂದುವರಿಯುತ್ತಿದೆ ಮತ್ತು ಈ ಪ್ರಗತಿಯಲ್ಲಿ ಗುಜರಾತಿನ ಕೊಡುಗೆ ಅತ್ಯಧಿಕವಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಗುಜರಾತ್ ಹಸಿರು ಇಂಧನ ಮತ್ತು ಪೆಟ್ರೋಕೆಮಿಕಲ್ ಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ದೇಶದ ಪೆಟ್ರೋಕೆಮಿಕಲ್ ಅವಶ್ಯಕತೆಗಳನ್ನು ಪೂರೈಸುವಲ್ಲಿ ಗುಜರಾತ್ ಮಹತ್ವದ ಪಾತ್ರ ವಹಿಸುತ್ತಿದೆ. ಪ್ಲಾಸ್ಟಿಕ್ ಉದ್ಯಮ, ಸಿಂಥೆಟಿಕ್ ಫೈಬರ್, ರಸಗೊಬ್ಬರಗಳು, ಔಷಧಗಳು, ಬಣ್ಣ ಉದ್ಯಮ ಮತ್ತು ಸೌಂದರ್ಯವರ್ಧಕಗಳು - ಇವೆಲ್ಲವೂ ಪೆಟ್ರೋಕೆಮಿಕಲ್ ವಲಯವನ್ನು ಹೆಚ್ಚು ಅವಲಂಬಿಸಿವೆ ಎಂದು ಅವರು ಹೇಳಿದರು. ಗುಜರಾತಿನಲ್ಲಿ ಸಾಂಪ್ರದಾಯಿಕ ಕೈಗಾರಿಕೆಗಳು ವಿಸ್ತರಿಸುತ್ತಿವೆ ಮತ್ತು ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ.. ಈ ಎಲ್ಲಾ ಪ್ರಯತ್ನಗಳು ಆತ್ಮನಿರ್ಭರ ಭಾರತ ಉಪಕ್ರಮವನ್ನು ಬಲಪಡಿಸುತ್ತಿವೆ ಎಂದು ಅವರು ಹೇಳಿದರು. ಈ ಬೆಳವಣಿಗೆಯು ಗುಜರಾತಿನ ಯುವಜನರಿಗೆ ನಿರಂತರವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಕೈಗಾರಿಕೆ, ಕೃಷಿ ಅಥವಾ ಪ್ರವಾಸೋದ್ಯಮ – ಹೀಗೆ ಎಲ್ಲಾ ವಲಯಗಳಿಗೂ ಅತ್ಯುತ್ತಮ ಸಂಪರ್ಕ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 20-25 ವರ್ಷಗಳಲ್ಲಿ ಗುಜರಾತಿನ ಸಂಪರ್ಕವು ಸಂಪೂರ್ಣ ಪರಿವರ್ತನೆಗೆ ಒಳಗಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು ಹಲವಾರು ರಸ್ತೆ ಮತ್ತು ರೈಲು ಸಂಬಂಧಿತ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ವರ್ತುಲ ರಸ್ತೆ ಎಂದು ಕರೆಯಲ್ಪಡುವ ವೃತ್ತಾಕಾರದ ರಸ್ತೆಯನ್ನು ಈಗ ಅಗಲಗೊಳಿಸಲಾಗುತ್ತಿದೆ. ಅದನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು. ಈ ವಿಸ್ತರಣೆಯು ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ವೀರಮ್ಗಮ್-ಖುದ್ರಾದ್-ರಾಮಪುರ ರಸ್ತೆಯ ಅಗಲೀಕರಣವು ಈ ಪ್ರದೇಶದ ರೈತರು ಮತ್ತು ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಹೊಸದಾಗಿ ನಿರ್ಮಿಸಲಾದ ಕೆಳಸೇತುವೆಗಳು ಮತ್ತು ರೈಲ್ವೆ ಮೇಲ್ಸೇತುವೆಗಳು ನಗರದ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತವೆ ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಹಳೆಯ ಕೆಂಪು ಬಣ್ಣದ ಬಸ್ ಗಳು ಮಾತ್ರ ಸಂಚರಿಸುತ್ತಿದ್ದ ಕಾಲವಿತ್ತು ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, ಇಂದು ಬಿ ಆರ್ ಟಿ ಎಸ್ ಜನಮಾರ್ಗ್ ಮತ್ತು ಎಸಿ-ಎಲೆಕ್ಟ್ರಿಕ್ ಬಸ್ ಗಳು ಆಧುನಿಕ ಸೌಲಭ್ಯಗಳನ್ನು ಪರಿಚಯಿಸಿವೆ ಎಂದು ಹೇಳಿದರು. ಮೆಟ್ರೋ ರೈಲು ಜಾಲವೂ ವೇಗವಾಗಿ ವಿಸ್ತರಿಸುತ್ತಿದೆ. ಇದು ಅಹಮದಾಬಾದಿನ ಜನರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಗುಜರಾತಿನ ಪ್ರತಿಯೊಂದು ನಗರವು ಪ್ರಮುಖ ಕೈಗಾರಿಕಾ ಕಾರಿಡಾರ್ ನಿಂದ ಸುತ್ತುವರೆದಿದೆ. ಆದಾಗ್ಯೂ, ಹತ್ತು ವರ್ಷಗಳ ಹಿಂದಿನವರೆಗೂ ಬಂದರುಗಳು ಮತ್ತು ಅಂತಹ ಕೈಗಾರಿಕಾ ಸಮೂಹಗಳ ನಡುವೆ ಸರಿಯಾದ ರೈಲು ಸಂಪರ್ಕದ ಕೊರತೆ ಇತ್ತು ಎಂದು ಅವರು ಹೇಳಿದರು. 2014 ರಲ್ಲಿ ತಾವು ಪ್ರಧಾನಮಂತ್ರಿಯಾದ ನಂತರ, ಗುಜರಾತಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಾರಂಭಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ಕಳೆದ ಹನ್ನೊಂದು ವರ್ಷಗಳಲ್ಲಿ, ರಾಜ್ಯಾದ್ಯಂತ ಸುಮಾರು 3,000 ಕಿಲೋಮೀಟರ್ ಹೊಸ ರೈಲು ಹಳಿಗಳನ್ನು ಹಾಕಲಾಗಿದೆ. ಗುಜರಾತಿನ ರೈಲ್ವೆ ಜಾಲವು ಈಗ ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದರು. ಇಂದು ಗುಜರಾತಿಗಾಗಿ ಘೋಷಿಸಲಾದ ರೈಲ್ವೆ ಯೋಜನೆಗಳು ರೈತರು, ಕೈಗಾರಿಕೆಗಳು ಮತ್ತು ಯಾತ್ರಾರ್ಥಿಗಳಿಗೆ ಸಮಾನ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ಹೇಳಿದರು.
ನಗರ ಪ್ರದೇಶದ ಬಡವರಿಗೆ ಘನತೆಯ ಜೀವನವನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಶ್ರೀ ಮೋದಿ, ಈ ಬದ್ಧತೆಯ ನೇರ ಪುರಾವೆಯಾಗಿ ರಾಮಪಿರ್ ನೊ ಟೆಕ್ರಾವನ್ನು ಉಲ್ಲೇಖಿಸಿದರು. ಪೂಜ್ಯ ಬಾಪು ಯಾವಾಗಲೂ ಬಡವರ ಘನತೆಯನ್ನು ಒತ್ತಿ ಹೇಳುತ್ತಿದ್ದರು ಎಂದು ಅವರು ಸ್ಮರಿಸಿಕೊಂಡರು ಮತ್ತು ಸಬರಮತಿ ಆಶ್ರಮದ ಬಳಿ ಹೊಸದಾಗಿ ನಿರ್ಮಿಸಲಾದ ಮನೆಗಳು ಈ ದೃಷ್ಟಿಕೋನದ ಜೀವಂತ ಉದಾಹರಣೆಯಾಗಿ ನಿಲ್ಲುತ್ತವೆ ಎಂದು ಅವರು ಹೇಳಿದರು. ಬಡವರಿಗೆ 1,500 ಶಾಶ್ವತ ಮನೆಗಳ ಹಂಚಿಕೆಯು ಅಸಂಖ್ಯಾತ ಹೊಸ ಕನಸುಗಳಿಗೆ ಅಡಿಪಾಯವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನವರಾತ್ರಿ ಮತ್ತು ದೀಪಾವಳಿಯಲ್ಲಿ, ಈ ಮನೆಗಳಲ್ಲಿ ವಾಸಿಸುವವರ ಮುಖಗಳಲ್ಲಿ ಸಂತೋಷವು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮದ ಜೊತೆಗೆ, ಪೂಜ್ಯ ಬಾಪು ಅವರಿಗೆ ನಿಜವಾದ ಗೌರವವಾಗಿ ಬಾಪು ಅವರ ಆಶ್ರಮದ ನವೀಕರಣವೂ ನಡೆಯುತ್ತಿದೆ ಎಂದು ಅವರು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭವ್ಯ ಪ್ರತಿಮೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರಿಂದ ಸಬರಮತಿ ಆಶ್ರಮದ ನವೀಕರಣವನ್ನು ಮುಂದುವರಿಸಲು ತಮಗೆ ಸಾಧ್ಯವಾಯಿತು ಎಂದು ಅವರು ಹೇಳಿದರು. ಏಕತಾ ಪ್ರತಿಮೆ ರಾಷ್ಟ್ರ ಮತ್ತು ಜಗತ್ತಿಗೆ ಸ್ಫೂರ್ತಿಯ ಮೂಲವಾಗಿ ಮಾರ್ಪಟ್ಟಿರುವಂತೆಯೇ, ಸಬರಮತಿ ಆಶ್ರಮದ ನವೀಕರಣ ಪೂರ್ಣಗೊಂಡ ನಂತರ, ಅದು ಶಾಂತಿಯ ಶ್ರೇಷ್ಠ ಜಾಗತಿಕ ಸಂಕೇತವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ನವೀಕರಣ ಪೂರ್ಣಗೊಂಡ ನಂತರ ಸಬರಮತಿ ಆಶ್ರಮವು ವಿಶ್ವದ ಪ್ರಮುಖ ಶಾಂತಿಯ ಸ್ಫೂರ್ತಿಯಾಗಿ ಹೊರಹೊಮ್ಮಲಿದೆ ಎಂದು ಶ್ರೀ ಮೋದಿ ಹೇಳಿದರು.
"ದುಡಿಯುವ ಕುಟುಂಬಗಳಿಗೆ ಉತ್ತಮ ಜೀವನವನ್ನು ಖಚಿತಪಡಿಸುವುದು ತಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಹಲವು ವರ್ಷಗಳ ಹಿಂದೆ ಗುಜರಾತಿನಲ್ಲಿ ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ಗೇಟೆಡ್ ಸೊಸೈಟಿಗಳನ್ನು ನಿರ್ಮಿಸಲು ಉಪಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಎಂದು ಅವರು ನೆನಪಿಸಿಕೊಂಡರು. ಕಳೆದ ಕೆಲವು ವರ್ಷಗಳಲ್ಲಿ, ಕೊಳೆಗೇರಿಗಳನ್ನು ಘನತೆಯ ವಾಸಸ್ಥಳಗಳೊಂದಿಗೆ ಬದಲಾಯಿಸಿರುವ ಇಂತಹ ಹಲವಾರು ವಸತಿ ಯೋಜನೆಗಳು ಪೂರ್ಣಗೊಂಡಿವೆ ಮತ್ತು ಈ ಅಭಿಯಾನವು ಮುಂದುವರಿಯುತ್ತದೆ ಎಂದು ಅವರು ಒತ್ತಿ ಹೇಳಿದರು.
ನಿರ್ಲಕ್ಷ್ಯಕ್ಕೊಳಗಾದವರನ್ನು ತಾವು ಪೂಜಿಸುವುದಾಗಿ ಒತ್ತಿ ಹೇಳಿದ ಶ್ರೀ ಮೋದಿ, ನಗರ ಬಡವರ ಜೀವನವನ್ನು ಸುಧಾರಿಸುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದರು. ಬೀದಿಬದಿ ವ್ಯಾಪಾರಿಗಳು ಮತ್ತು ಪಾದಚಾರಿ ಮಾರ್ಗಗಳ ಕಾರ್ಮಿಕರನ್ನು ಈ ಹಿಂದೆ ನಿರ್ಲಕ್ಷಿಸಲಾಗಿತ್ತು ಎಂದು ಅವರು ಹೇಳಿದರು. ಅವರನ್ನು ಬೆಂಬಲಿಸಲು, ಸರ್ಕಾರವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, ದೇಶಾದ್ಯಂತ ಸುಮಾರು ಎಪ್ಪತ್ತು ಲಕ್ಷ ಬೀದಿಬದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಯವರು ಬ್ಯಾಂಕುಗಳಿಂದ ಆರ್ಥಿಕ ನೆರವು ಪಡೆಯಲು ಸಾಧ್ಯವಾಗಿದೆ. ಗುಜರಾತಿನಲ್ಲಿ ಲಕ್ಷಾಂತರ ಫಲಾನುಭವಿಗಳು ಈ ಉಪಕ್ರಮದ ಮೂಲಕ ಬೆಂಬಲವನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಇದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಮತ್ತು ಇದು ವಿಶ್ವದ ಆರ್ಥಿಕ ಸಂಸ್ಥೆಗಳಲ್ಲಿ ಚರ್ಚೆಯ ವಿಷಯವಾಗಿದೆ. ಈ ವ್ಯಕ್ತಿಗಳು ದೇಶದಲ್ಲಿ ಹೊಸ ಮಧ್ಯಮ ವರ್ಗದ ಹೊರಹೊಮ್ಮುವಿಕೆಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. "ನಮ್ಮ ಸರ್ಕಾರವು ನವ ಮಧ್ಯಮ ವರ್ಗ ಮತ್ತು ಸಾಂಪ್ರದಾಯಿಕ ಮಧ್ಯಮ ವರ್ಗ ಎರಡನ್ನೂ ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ₹12 ಲಕ್ಷದವರೆಗಿನ ವಾರ್ಷಿಕ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ ಎಂದ ಅವರು, ಸರ್ಕಾರವು ಈಗ ಜಿ ಎಸ್ ಟಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಘೋಷಿಸಿದರು. ಈ ಸುಧಾರಣೆಗಳು ಸಣ್ಣ ಉದ್ಯಮಿಗಳನ್ನು ಬೆಂಬಲಿಸುತ್ತವೆ ಮತ್ತು ಅನೇಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ದೀಪಾವಳಿಯಲ್ಲಿ, ದೇಶಾದ್ಯಂತ ವ್ಯಾಪಾರ ಸಮುದಾಯಗಳು ಮತ್ತು ಕುಟುಂಬಗಳು ಸಂತೋಷದ ದುಪ್ಪಟ್ಟು ಬೋನಸ್ ಪಡೆಯುತ್ತವೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ವಿದ್ಯುತ್ ಬಿಲ್ ಗಳನ್ನು ಶೂನ್ಯಕ್ಕೆ ತರಲಾಗುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಗುಜರಾತಿನಲ್ಲಿ ಸುಮಾರು ಆರು ಲಕ್ಷ ಕುಟುಂಬಗಳು ಈಗಾಗಲೇ ಈ ಯೋಜನೆಗೆ ಸೇರಿದ್ದಾರೆ ಎಂದು ಹೇಳಿದರು. ಗುಜರಾತಿನಲ್ಲಿ ಈ ಕುಟುಂಬಗಳಿಗೆ ಸರ್ಕಾರವು ₹3,000 ಕೋಟಿಗೂ ಹೆಚ್ಚು ಹಣವನ್ನು ಒದಗಿಸಿದೆ. ಇದು ಫಲಾನುಭವಿಗಳಿಗೆ ವಿದ್ಯುತ್ ಬಿಲ್ ಗಳಲ್ಲಿ ಗಮನಾರ್ಹ ಮಾಸಿಕ ಉಳಿತಾಯಕ್ಕೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಅಹಮದಾಬಾದ್ ನಗರವು ಈಗ ಕನಸುಗಳು ಮತ್ತು ಸಂಕಲ್ಪಗಳ ನಗರವಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಒಂದು ಕಾಲದಲ್ಲಿ ಜನರು ಅಹಮದಾಬಾದ್ ಅನ್ನು "ಗರ್ದಾಬಾದ್" ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು ಎಂದು ನೆನಪಿಸಿಕೊಂಡ ಶ್ರೀ ಮೋದಿ, ಧೂಳು ಮತ್ತು ಕೊಳಕು ನಗರದ ದುರದೃಷ್ಟಕರವಾಗಿ ಪರಿಣಮಿಸಿದ್ದವು ಎಂದರು. ಇಂದು ಅಹಮದಾಬಾದ್ ತನ್ನ ಸ್ವಚ್ಛತೆಗೆ ರಾಷ್ಟ್ರೀಯ ಮನ್ನಣೆಯನ್ನು ಗಳಿಸುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಈ ಸಾಧನೆಗೆ ಅಹಮದಾಬಾದಿನ ಪ್ರತಿಯೊಬ್ಬ ನಿವಾಸಿಗಳ ಸಾಮೂಹಿಕ ಪ್ರಯತ್ನಗಳು ಕಾರಣ ಎಂದು ಅವರು ಹೇಳಿದರು.
ಸಬರಮತಿ ನದಿ ಬತ್ತಿದ ಚರಂಡಿಯಂತೆ ಕಾಣುತ್ತಿದ್ದ ದಿನಗಳನ್ನು ಇಂದಿನ ಯುವಕರು ನೋಡಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪರಿಸ್ಥಿತಿಯನ್ನು ಬದಲಾಯಿಸಲು ಅಹಮದಾಬಾದ್ ಜನರು ದೃಢಸಂಕಲ್ಪ ಮಾಡಿದರು ಎಂದು ಅವರು ಒತ್ತಿ ಹೇಳಿದರು. ಸಬರಮತಿ ನದಿ ದಂಡೆ ಈಗ ನಗರದ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಕಂಕರಿಯಾ ಕೆರೆಯ ನೀರು ಒಂದು ಕಾಲದಲ್ಲಿ ಹಸಿರು ಮತ್ತು ಕಳೆಗಳಿಂದಾಗಿ ದುರ್ವಾಸನೆ ಬೀರುತ್ತಿತ್ತು, ಇದರಿಂದ ಅಲ್ಲಿ ತಿರುಗಾಡಲು ಸಹ ಕಷ್ಟವಾಗುತ್ತಿತ್ತು ಮತ್ತು ಆ ಪ್ರದೇಶವು ಸಮಾಜಘಾತುಕ ಶಕ್ತಿಗಳ ನೆಚ್ಚಿನ ತಾಣವಾಗಿತ್ತು. ಇಂದು ಸರೋವರವು ಅತ್ಯುತ್ತಮ ಮನರಂಜನಾ ತಾಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಸರೋವರದಲ್ಲಿ ದೋಣಿ ವಿಹಾರ ಮತ್ತು ಕಿಡ್ಸ್ ಸಿಟಿ ಮಕ್ಕಳಿಗೆ ಮನರಂಜನೆ ಮತ್ತು ಕಲಿಕೆಯ ಸ್ಥಳಗಳಾಗಿವೆ ಎಂದು ಅವರು ಹೇಳಿದರು. ಈ ಎಲ್ಲಾ ಬೆಳವಣಿಗೆಗಳು ಬದಲಾಗುತ್ತಿರುವ ಅಹಮದಾಬಾದ್ ಅನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕಂಕರಿಯಾ ಕಾರ್ನೀವಲ್ ಈಗ ನಗರದ ಹೊಸ ಗುರುತಾಗಿದೆ ಎಂದು ಅವರು ಹೇಳಿದರು.
ಅಹಮದಾಬಾದ್ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಅಹಮದಾಬಾದ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ನಗರವೆಂದು ಗುರುತಿಸಲಾಗಿದೆ ಎಂದು ಹೇಳಿದರು. ಐತಿಹಾಸಿಕ ದ್ವಾರಗಳಾಗಲಿ, ಸಬರಮತಿ ಆಶ್ರಮವಾಗಲಿ ಅಥವಾ ನಗರದ ಶ್ರೀಮಂತ ಪರಂಪರೆಯಾಗಲಿ - ಅಹಮದಾಬಾದ್ ಈಗ ಜಾಗತಿಕ ನಕ್ಷೆಯಲ್ಲಿ ಮಿಂಚುತ್ತಿದೆ ಎಂದು ಅವರು ಹೇಳಿದರು. ನಗರದಲ್ಲಿ ಆಧುನಿಕ ಮತ್ತು ನವೀನ ಪ್ರವಾಸೋದ್ಯಮ ರೂಪಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಅಹಮದಾಬಾದ್ ಸಂಗೀತ ಕಚೇರಿ (ಕಾನ್ಸರ್ಟ್) ಆರ್ಥಿಕತೆಗೆ ಮಹತ್ವದ ಕೇಂದ್ರವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ನಗರದಲ್ಲಿ ನಡೆದ ಕೋಲ್ಡ್ ಪ್ಲೇ ಸಂಗೀತ ಕಚೇರಿಯನ್ನು ಅವರು ನೆನಪಿಸಿಕೊಂಡರು, ಇದು ಜಾಗತಿಕ ಗಮನ ಸೆಳೆಯಿತು. ಒಂದು ಲಕ್ಷ ಆಸನ ಸಾಮರ್ಥ್ಯವಿರುವ ಅಹಮದಾಬಾದ್ ನ ಕ್ರೀಡಾಂಗಣವು ಪ್ರಮುಖ ಆಕರ್ಷಣೆಯಾಗಿದೆ. ಇದು ಅಹಮದಾಬಾದ್ ದೊಡ್ಡ ಪ್ರಮಾಣದ ಸಂಗೀತ ಕಚೇರಿಗಳು ಮತ್ತು ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ದೇಶವು ಈಗ ನವರಾತ್ರಿ, ವಿಜಯದಶಮಿ, ಧನತೇರಸ್ ಮತ್ತು ದೀಪಾವಳಿ ಸೇರಿದಂತೆ ಹಬ್ಬಗಳ ಸಮಯವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಹಬ್ಬದ ಋತುವಿನ ಬಗ್ಗೆ ತಮ್ಮ ಹಿಂದಿನ ಉಲ್ಲೇಖವನ್ನು ಪುನರುಚ್ಚರಿಸಿದರು. ಈ ಹಬ್ಬಗಳು ಸಾಂಸ್ಕೃತಿಕ ಆಚರಣೆಗಳಷ್ಟೇ ಅಲ್ಲ, ಸ್ವಾವಲಂಬನೆಯ ಹಬ್ಬಗಳಾಗಿಯೂ ಕಾಣಬೇಕು ಎಂದು ಒತ್ತಿ ಹೇಳಿದರು. ಹಬ್ಬದ ಋತುವಿನಲ್ಲಿ ಮನೆಗೆ ತರುವ ಎಲ್ಲಾ ಖರೀದಿಗಳು, ಉಡುಗೊರೆಗಳು ಮತ್ತು ಅಲಂಕಾರಿಕ ವಸ್ತುಗಳು ಮೇಡ್ ಇನ್ ಇಂಡಿಯಾ ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಮತ್ತೊಮ್ಮೆ ನಾಗರಿಕರನ್ನು ಒತ್ತಾಯಿಸಿದರು. ನಿಜವಾದ ಉಡುಗೊರೆ ಎಂದರೆ ಭಾರತದಲ್ಲಿ ತಯಾರಿಸಲ್ಪಟ್ಟದ್ದು - ಭಾರತೀಯ ನಾಗರಿಕರ ಕೈಯಿಂದ ತಯಾರಿಸಲ್ಪಟ್ಟದ್ದು ಎಂದು ಅವರು ಎಲ್ಲರಿಗೂ ನೆನಪಿಸಿದರು. ಅಂಗಡಿಯವರು ಹೆಮ್ಮೆಯಿಂದ ಭಾರತ ನಿರ್ಮಿತ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ಅವರು ಮನವಿ ಮಾಡಿದರು. ಇಂತಹ ಸಣ್ಣ ಆದರೆ ಅರ್ಥಪೂರ್ಣ ಪ್ರಯತ್ನಗಳ ಮೂಲಕ, ಈ ಹಬ್ಬಗಳು ಭಾರತದ ಸಮೃದ್ಧಿಯ ಭವ್ಯ ಆಚರಣೆಗಳಾಗುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಅಭಿವೃದ್ಧಿ ಉಪಕ್ರಮಗಳಿಗಾಗಿ ಎಲ್ಲಾ ನಾಗರಿಕರನ್ನು ಅಭಿನಂದಿಸಿದ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಶ್ರೀ ಸಿ ಆರ್ ಪಾಟೀಲ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಪರ್ಕದ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು 1,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಇದರಲ್ಲಿ 530 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 65 ಕಿ.ಮೀ. ಮಹೇಸಾನ-ಪಾಲನಪುರ ರೈಲು ಮಾರ್ಗದ ಜೋಡಿಹಳಿ, 37 ಕಿ.ಮೀ. ಕಲೋಲ್-ಕಾಡಿ-ಕಟೋಸನ್ ರಸ್ತೆ ರೈಲು ಮಾರ್ಗದ ಗೇಜ್ ಪರಿವರ್ತನೆ ಮತ್ತು 860 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 40 ಕಿ.ಮೀ. ಬೆಚ್ರಾಜಿ-ರಾಣುಜ್ ರೈಲು ಮಾರ್ಗ ಸೇರಿವೆ. ಬ್ರಾಡ್ಗೇಜ್ ಸಾಮರ್ಥ್ಯದ ಸೇರ್ಪಡೆಯೊಂದಿಗೆ, ಈ ಯೋಜನೆಗಳು ಈ ಪ್ರದೇಶದಲ್ಲಿ ಸುಗಮ, ಸುರಕ್ಷಿತ ಮತ್ತು ತಡೆರಹಿತ ಸಂಪರ್ಕವನ್ನು ಖಚಿತಪಡಿಸುತ್ತವೆ. ಇದು ಪ್ರಾದೇಶಿಕ ಆರ್ಥಿಕ ಏಕೀಕರಣವನ್ನು ಉತ್ತೇಜಿಸುವುದರ ಜೊತೆಗೆ ದೈನಂದಿನ ಪ್ರಯಾಣಿಕರು, ಪ್ರವಾಸಿಗರು ಮತ್ತು ವ್ಯವಹಾರಸ್ಥರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಇದಲ್ಲದೆ, ಕಟೋಸನ್ ರಸ್ತೆ ಮತ್ತು ಸಬರಮತಿ ನಡುವಿನ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆಯು ಧಾರ್ಮಿಕ ಸ್ಥಳಗಳಿಗೆ ಸುಧಾರಿತ ಪ್ರವೇಶವನ್ನು ಒದಗಿಸುತ್ತದೆ ಮತ್ತು ತಳಮಟ್ಟದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಬೆಚ್ರಾಜಿಯಿಂದ ಸರಕು ರೈಲು ಸೇವೆಯು ರಾಜ್ಯದ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ಜಾಲವನ್ನು ಬಲಪಡಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸಂಪರ್ಕ ಸುಧಾರಣೆ, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುವ ತಮ್ಮ ದೂರದೃಷ್ಟಿಯ ಮುಂದುವರಿಕೆಯಾಗಿ, ಪ್ರಧಾನಮಂತ್ರಿಯವರು ವಿರಾಮಗಮ್-ಖುದಾದ್-ರಾಮಪುರ ರಸ್ತೆಯ ಅಗಲೀಕರಣವನ್ನು ಉದ್ಘಾಟಿಸಿದರು. ಅಹಮದಾಬಾದ್-ಮೆಹ್ಸಾನಾ-ಪಾಲನಪುರ ರಸ್ತೆಯಲ್ಲಿ ಷಟ್ಪಥ ವಾಹನ ಅಂಡರ್‌ಪಾಸ್ ಗಳ ನಿರ್ಮಾಣ; ಅಹಮದಾಬಾದ್-ವಿರಮಗಮ್ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಸೇರಿದಂತೆ ಇತರ ಯೋಜನೆಗಳಿಗೆ ಅವರು ಅಡಿಪಾಯ ಹಾಕಿದರು. ಒಟ್ಟಾರೆಯಾಗಿ, ಈ ಉಪಕ್ರಮಗಳು ಈ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುತ್ತವೆ, ಸಾರಿಗೆ ದಕ್ಷತೆ ಮತ್ತು ಆರ್ಥಿಕ ಅವಕಾಶಗಳನ್ನು ಸುಧಾರಿಸುತ್ತವೆ.
ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿಯವರು ಉತ್ತರ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ (ಯುಜಿವಿಸಿಎಲ್) ಅಡಿಯಲ್ಲಿ ಅಹಮದಾಬಾದ್, ಮೆಹ್ಸಾನಾ ಮತ್ತು ಗಾಂಧಿನಗರದಲ್ಲಿ ವಿದ್ಯುತ್ ವಿತರಣಾ ಯೋಜನೆಗಳನ್ನು ಉದ್ಘಾಟಿಸಿದರು. ಇವು ನಷ್ಟವನ್ನು ಕಡಿಮೆ ಮಾಡುವುದು, ಜಾಲವನ್ನು ಆಧುನೀಕರಿಸುವುದು ಮತ್ತು ಪರಿಷ್ಕೃತ ವಿತರಣಾ ವಲಯ ಯೋಜನೆಯಡಿಯಲ್ಲಿ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. 1000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ ಯೋಜನೆಗಳು ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿದ್ಯುತ್ ಸ್ಥಗಿತ ಮತ್ತು ಕಡಿತವಾಗುವುದನ್ನು ಕಡಿಮೆ ಮಾಡುತ್ತವೆ, ಸಾರ್ವಜನಿಕ ಸುರಕ್ಷತೆ, ಟ್ರಾನ್ಸ್‌ಫಾರ್ಮರ್ ಗಳ ರಕ್ಷಣೆ ಮತ್ತು ವಿದ್ಯುತ್ ಸರಬರಾಜು ಜಾಲದ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತವೆ.
ಪಿಎಂಎವೈ (ಯು) ಯೋಜನೆಯ ಕೊಳಗೇರಿ ಪುನರ್ವಸತಿ ಘಟಕದ ಅಡಿಯಲ್ಲಿ ರಾಮಪಿರ್ ನೋ ಟೆಕ್ರೊದ ಸೆಕ್ಟರ್ -3 ರಲ್ಲಿ ಕೊಳೆಗೇರಿಗಳ ಅಭಿವೃದ್ಧಿಯನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಸಂಚಾರ ಸುಗಮಗೊಳಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ಅಹಮದಾಬಾದ್ ಸುತ್ತಮುತ್ತಲಿನ ಸರ್ದಾರ್ ಪಟೇಲ್ ವರ್ತುಲ ರಸ್ತೆಯಲ್ಲಿ ಜಾರಿಗೆ ತರಲಾಗುತ್ತಿರುವ ಪ್ರಮುಖ ರಸ್ತೆ ವಿಸ್ತರಣೆ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಿದರು. ನೀರು ಮತ್ತು ಒಳಚರಂಡಿ ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸಲು ಪ್ರಮುಖ ನಗರ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.
ಆಡಳಿತಾತ್ಮಕ ದಕ್ಷತೆ ಮತ್ತು ಸಾರ್ವಜನಿಕ ಸೇವಾ ವಿತರಣೆಯನ್ನು ಬಲಪಡಿಸುವ ಉದ್ದೇಶದಿಂದ, ಪ್ರಧಾನಮಂತ್ರಿಯವರು ಗುಜರಾತಿನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಿದರು. ನಾಗರಿಕ ಕೇಂದ್ರಿತ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಅಹಮದಾಬಾದ್ ಪಶ್ಚಿಮದಲ್ಲಿ ಹೊಸ ಮುದ್ರಾಂಕ ಮತ್ತು ನೋಂದಣಿ ಕಟ್ಟಡದ ನಿರ್ಮಾಣವೂ ಇದರಲ್ಲಿ ಸೇರಿದೆ. ಅಲ್ಲದೆ, ಗುಜರಾತಿನಾದ್ಯಂತ ಸುರಕ್ಷಿತ ದತ್ತಾಂಶ ನಿರ್ವಹಣೆ ಮತ್ತು ಡಿಜಿಟಲ್ ಆಡಳಿತ ಸಾಮರ್ಥ್ಯಗಳನ್ನು ಹೆಚ್ಚಿಸಲು ಗಾಂಧಿನಗರದಲ್ಲಿ ರಾಜ್ಯಮಟ್ಟದ ದತ್ತಾಂಶ ಸಂಗ್ರಹ ಕೇಂದ್ರವನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ.
*****
(रिलीज़ आईडी: 2160783)
आगंतुक पटल : 19
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu