ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ, 2025 ಗಳನ್ನು ಮಂಡಿಸಿದರು


ದೇಶದಲ್ಲಿನ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರದ ಬದ್ಧತೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ

ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು ಮುಂತಾದ ಪ್ರಮುಖ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಜೈಲಿನಲ್ಲಿದ್ದಾಗ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ

ಸಾರ್ವಜನಿಕ ಜೀವನದಲ್ಲಿ ಕ್ಷೀಣಿಸುತ್ತಿರುವ ನೈತಿಕತೆಯನ್ನು ಹೆಚ್ಚಿಸುವುದು ಮತ್ತು ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ತರುವುದು ಈ ಮಸೂದೆಯ ಉದ್ದೇಶವಾಗಿದೆ

ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಅಚ್ಚರಿಯ ಸನ್ನಿವೇಶ ಉದ್ಭವಿಸಿದೆ. ಮುಖ್ಯಮಂತ್ರಿಗಳು ಅಥವಾ ಸಚಿವರು ರಾಜೀನಾಮೆ ನೀಡದೆ ಜೈಲಿನಿಂದ ಸರ್ಕಾರವನ್ನು ಅನೈತಿಕವಾಗಿ ನಡೆಸುತ್ತಿದ್ದಾರೆ

ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಜೈಲಿನಿಂದ ಸರ್ಕಾರವನ್ನು ನಡೆಸುವುದು ಸೂಕ್ತವೇ ಎಂಬುದನ್ನು ದೇಶದ ಜನರು ನಿರ್ಧರಿಸಬೇಕು

ಒಂದೆಡೆ, ಮೋದಿ ಅವರು ಕಾನೂನಿನ ವ್ಯಾಪ್ತಿಗೆ ತಮ್ಮನ್ನು ತರುವ ಸಲುವಾಗಿ ಸಾಂವಿಧಾನಿಕ ತಿದ್ದುಪಡಿ ತಂದಿದ್ದಾರೆ, ಮತ್ತೊಂದೆಡೆ, ಇಡೀ ವಿರೋಧ ಪಕ್ಷಗಳು ಕಾನೂನಿನ ವ್ಯಾಪ್ತಿಯಿಂದ ಹೊರಗೆ ಜೈಲಿನಿಂದ ಸರ್ಕಾರಗಳನ್ನು ನಡೆಸುವುದಕ್ಕಾಗಿ ಇದನ್ನು ವಿರೋಧಿಸಿವೆ

ಪ್ರಧಾನಮಂತ್ರಿಯನ್ನು ಕಾನೂನಿಗಿಂತ ಮೇಲಿರುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡುವುದು ಪ್ರಮುಖ ವಿರೋಧ ಪಕ್ಷದ ನೀತಿಯಾಗಿದೆ, ಆದರೆ ನಮ್ಮ ಪಕ್ಷವು ಪ್ರಧಾನಮಂತ್ರಿ, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಕಾನೂನಿನ ವ್ಯಾಪ್ತಿಗೆ ತರುತ್ತಿದೆ

ಭ್ರಷ್ಟ ವ್ಯಕ್ತಿಗಳನ್ನು ರಕ್ಷಿಸಲು ಈ ಮಸೂದೆಯನ್ನು ವಿರೋಧಿಸಿದ ವಿರೋಧ ಪಕ್ಷದ ಮೈತ್ರಿಕೂಟದ ಅಸಭ್ಯ ವರ್ತನೆಯು ವಿರೋಧ ಪಕ್ಷದ ಬದ್ಧತೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ

Posted On: 20 AUG 2025 7:40PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ, 2025 ಗಳನ್ನು ಮಂಡಿಸಿದರು.

ದೇಶದಲ್ಲಿ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರದ ಬದ್ಧತೆ ಮತ್ತು ಸಾರ್ವಜನಿಕ ಆಕ್ರೋಶವನ್ನು ಪರಿಗಣಿಸಿ, ಲೋಕಸಭಾಧ್ಯಕ್ಷರ ಒಪ್ಪಿಗೆಯೊಂದಿಗೆ ಇಂದು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಿರುವುದಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಸಾಮಾಜಿಕ ಮಾಧ್ಯಮ 'X' ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳಂತಹ ಪ್ರಮುಖ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಜೈಲಿನಲ್ಲಿದ್ದಾಗ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ ಎಂದು ಈ ಮಸೂದೆ ಖಚಿತಪಡಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಕುಸಿಯುತ್ತಿರುವ ನೈತಿಕತೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ತರುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮೂರು ಮಸೂದೆಗಳಿಂದ ಜಾರಿಗೆ ಬರುವ ಕಾನೂನುಗಳು ಈ ಕೆಳಗಿನವುಗಳನ್ನು ಖಚಿತಪಡಿಸುತ್ತವೆ ಎಂದು ಶ್ರೀ ಅಮಿತ್ ಶಾ ಹೇಳಿದರು:

1. ಬಂಧನದಲ್ಲಿರುವಾಗ ಮತ್ತು ಜೈಲಿನಲ್ಲಿರುವಾಗ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಚಿವರಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ.
2. ಸಂವಿಧಾನ ರಚನೆಯಾದಾಗ, ಅದರ ಶಿಲ್ಪಿಗಳು ಭವಿಷ್ಯದಲ್ಲಿ ಬಂಧನಕ್ಕೊಳಗಾಗುವ ಮುನ್ನ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಲು ನಿರಾಕರಿಸುವ ರಾಜಕೀಯ ವ್ಯಕ್ತಿಗಳು ಇರುತ್ತಾರೆ ಎಂದು ಊಹಿಸಲೂ ಸಾಧ್ಯವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಒಂದು ಅಚ್ಚರಿಯ ಪರಿಸ್ಥಿತಿ ಉದ್ಭವಿಸಿದೆ, ಅಲ್ಲಿ ಮುಖ್ಯಮಂತ್ರಿಗಳು ಅಥವಾ ಸಚಿವರು ರಾಜೀನಾಮೆ ನೀಡದೆ ಜೈಲಿನಿಂದ ಸರ್ಕಾರವನ್ನು ಅನೈತಿಕವಾಗಿ ನಡೆಸುತ್ತಿದ್ದಾರೆ.
3. ಈ ಮಸೂದೆಯು ಆರೋಪಿ ರಾಜಕಾರಣಿ ಬಂಧನವಾದ 30 ದಿನಗಳ ಒಳಗೆ ನ್ಯಾಯಾಲಯದಿಂದ ಜಾಮೀನು ಪಡೆಯಲು ಅವಕಾಶ ನೀಡುವ ನಿಬಂಧನೆಯನ್ನು ಒಳಗೊಂಡಿದೆ. ಅವರು 30 ದಿನಗಳ ಒಳಗೆ ಜಾಮೀನು ಪಡೆಯಲು ವಿಫಲವಾದರೆ, 31 ನೇ ದಿನದಂದು, ಕೇಂದ್ರದ ಪ್ರಧಾನಿ ಅಥವಾ ರಾಜ್ಯಗಳ ಮುಖ್ಯಮಂತ್ರಿಗಳು ಅವರನ್ನು ತಮ್ಮ ಸ್ಥಾನಗಳಿಂದ ತೆಗೆದುಹಾಕುತ್ತಾರೆ; ಇಲ್ಲದಿದ್ದರೆ, ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸ್ವಯಂಚಾಲಿತವಾಗಿ ಕಾನೂನುಬದ್ಧವಾಗಿ ಅನರ್ಹರಾಗುತ್ತಾರೆ. ಕಾನೂನು ಪ್ರಕ್ರಿಯೆಯ ನಂತರ ಅಂತಹ ನಾಯಕನಿಗೆ ಜಾಮೀನು ದೊರೆತರೆ, ಅವರು ತಮ್ಮ ಹುದ್ದೆಯನ್ನು ಮತ್ತೆ ಪಡೆಯಬಹುದು.

ಸಚಿವರು, ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಜೈಲಿನಿಂದ ಸರ್ಕಾರ ನಡೆಸುವುದು ಸೂಕ್ತವೇ ಎಂಬುದನ್ನು ದೇಶದ ಜನರು ಈಗ ನಿರ್ಧರಿಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಒಂದೆಡೆ, ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಕಾನೂನಿನ ವ್ಯಾಪ್ತಿಗೆ ತಮ್ಮನ್ನು ತಂದುಕೊಳ್ಳಲು ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದ್ದಾರೆ, ಮತ್ತೊಂದೆಡೆ, ಪ್ರಮುಖ ವಿರೋಧ ಪಕ್ಷದ ನೇತೃತ್ವದ ಇಡೀ ವಿರೋಧ ಪಕ್ಷಗಳು ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯಲು, ಜೈಲಿನಿಂದ ಸರ್ಕಾರಗಳನ್ನು ನಡೆಸಲು ಮತ್ತು ಅಧಿಕಾರಕ್ಕೆ ಅಂಟಿಕೊಂಡಿರಲು ಬಯಸುತ್ತಿರುವುದರಿಂದ ಅದನ್ನು ವಿರೋಧಿಸುತ್ತಿವೆ ಎಂದು ಅವರು ಹೇಳಿದರು.

ಈ ಗೌರವಾನ್ವಿತ ಸದನದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅಂದಿನ ಪ್ರಧಾನ ಮಂತ್ರಿಯವರು 39ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪ್ರಧಾನ ಮಂತ್ರಿಯವರಿಗೆ ವಿಶೇಷ ಸವಲತ್ತುಗಳನ್ನು ನೀಡಿ, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳುತ್ತಿದ್ದ  ಸಮಯವನ್ನು ದೇಶ ಇನ್ನೂ ನೆನಪಿಸಿಕೊಳ್ಳುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಒಂದೆಡೆ, ಇದು ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಪ್ರಧಾನ ಮಂತ್ರಿಯನ್ನು ಕಾನೂನಿಗಿಂತ ಮೇಲಿರುವಂತೆ ಮಾಡಲು ಪ್ರಯತ್ನಿಸುವ ಪ್ರಮುಖ ವಿರೋಧ ಪಕ್ಷದ ಕೆಲಸದ ಸಂಸ್ಕೃತಿ ಮತ್ತು ನೀತಿಯನ್ನು ಪ್ರತಿಬಿಂಬಿಸುತ್ತದೆ. ಮತ್ತೊಂದೆಡೆ, ನಮ್ಮದೇ ಸರ್ಕಾರದ ಪ್ರಧಾನಿ, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಕಾನೂನಿನ ವ್ಯಾಪ್ತಿಗೆ ತರುವುದು ನಮ್ಮ ಪಕ್ಷದ ನೀತಿಯಾಗಿದೆ ಎಂದು ಅವರು ಹೇಳಿದರು.

ಇಂದು ಸದನದಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕರೊಬ್ಬರು ತಮ್ಮ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿದ್ದಾರೆ, ಪ್ರಮುಖ ವಿರೋಧ ಪಕ್ಷವು ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದಾಗ ನಾನು ರಾಜೀನಾಮೆ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಬಂಧನಕ್ಕೂ ಮುನ್ನ ತಾವು ರಾಜೀನಾಮೆ ನೀಡಿದ್ದಾಗಿ ಮತ್ತು ಜಾಮೀನಿನ ಮೇಲೆ ಬಿಡುಗಡೆಯಾದ ನಂತರವೂ ನ್ಯಾಯಾಲಯದಿಂದ ಸಂಪೂರ್ಣವಾಗಿ ಖುಲಾಸೆಗೊಳ್ಳುವವರೆಗೂ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡಿರಲಿಲ್ಲ ಎಂದು ಶ್ರೀ ಶಾ ಹೇಳಿದರು. ನ್ಯಾಯಾಲಯವು ಅವರ ವಿರುದ್ಧದ ಸುಳ್ಳು ಪ್ರಕರಣವನ್ನು ವಜಾಗೊಳಿಸಿದ್ದು, ಇದು ರಾಜಕೀಯ ದ್ವೇಷದಿಂದ ಪ್ರೇರಿತವಾಗಿದೆ ಎಂದು ಅವರು ಹೇಳಿದರು.

ನಮ್ಮ ಪಕ್ಷ ಮತ್ತು ಎನ್ ಡಿ ಎ ಯಾವಾಗಲೂ ನೈತಿಕ ಮೌಲ್ಯಗಳ ಪರವಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಮಸೂದೆಯನ್ನು ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮುಂದೆ ಇಡಲಾಗುವುದು, ಅಲ್ಲಿ ಇದನ್ನು ಆಳವಾಗಿ ಚರ್ಚಿಸಲಾಗುವುದು ಎಂಬುದು ಆರಂಭದಿಂದಲೂ ಸ್ಪಷ್ಟವಾಗಿತ್ತು ಎಂದು ಶ್ರೀ ಶಾ ಹೇಳಿದರು. ಇದರ ಹೊರತಾಗಿಯೂ, ಎಲ್ಲಾ ನಾಚಿಕೆ ಮತ್ತು ಸಭ್ಯತೆಯನ್ನು ತ್ಯಜಿಸಿ, ವಿರೋಧ ಪಕ್ಷಗಳ ಮೈತ್ರಿಕೂಟವು ಭ್ರಷ್ಟ ವ್ಯಕ್ತಿಗಳನ್ನು ಉಳಿಸಲು ಅಸಭ್ಯ ವರ್ತನೆಯಿಂದ ಈ ಮಸೂದೆಯನ್ನು ವಿರೋಧಿಸಿತು, ಇದರಿಂದಾಗಿ ಅವರು ಸಾರ್ವಜನಿಕರ ಮುಂದೆ ಸಂಪೂರ್ಣವಾಗಿ ಬಹಿರಂಗವಾಗಿದ್ದಾರೆ ಎಂದು ಅವರು ಹೇಳಿದರು.

 

 

*****

 


(Release ID: 2158722)