ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಪೋರ್ಟಲ್ ಆರಂಭವಾಗಿದೆ
ಪ್ರಧಾನಮಂತ್ರಿ ಅವರು ತಮ್ಮ 12ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಗೆ ನೋಂದಣಿಯನ್ನು ಈ ಪೋರ್ಟಲ್ ಸುಗಮಗೊಳಿಸುತ್ತದೆ
ಸುಮಾರು ₹ 1 ಲಕ್ಷ ಕೋಟಿ ವೆಚ್ಚದ ಈ ಯೋಜನೆಯು 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ
ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯು ವಿವಿಧ ವಲಯಗಳಾದ್ಯಂತ ಉದ್ಯೋಗ ಸೃಷ್ಟಿ, ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುತ್ತದೆ
Posted On:
18 AUG 2025 4:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 12ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದ, ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯ ನೋಂದಣಿಯನ್ನು ಸುಗಮಗೊಳಿಸುವ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಪೋರ್ಟಲ್ ಈಗ ಆರಂಭವಾಗಿದೆ.
ಕೇಂದ್ರ ಸಚಿವ ಸಂಪುಟವು ಜುಲೈ 1, 2025 ರಂದು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಎಂಬ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸಿತು. ₹99,446 ಕೋಟಿ ವೆಚ್ಚದಲ್ಲಿ, ಈ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯ ಉದ್ದೇಶವು ಎಲ್ಲಾ ವಲಯಗಳಾದ್ಯಂತ ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವುದು, ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು, ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸುವುದಾಗಿದೆ. ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 1 ರಿಂದ 2027ರ ಜುಲೈ 31ರ ನಡುವೆ ಸೃಷ್ಟಿಯಾಗುವ ಉದ್ಯೋಗಗಳಿಗೆ ಅನ್ವಯವಾಗುತ್ತವೆ.
ಈ ಯೋಜನೆಯಡಿಯಲ್ಲಿ, ಹೊಸದಾಗಿ ಉದ್ಯೋಗ ಪಡೆಯುವ ಯುವಜನರಿಗೆ ಎರಡು ಕಂತುಗಳಲ್ಲಿ 15,000 ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯೋಗದಾತರಿಗೆ ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ 3,000 ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು.
ಯೋಜನೆಯ ಭಾಗ ಎ ಅಡಿಯಲ್ಲಿ ಮೊದಲ ಬಾರಿಯ ಉದ್ಯೋಗಿಗಳಿಗೆ ಎಲ್ಲಾ ಪಾವತಿಗಳನ್ನು ಆಧಾರ್ ಬ್ರಿಡ್ಜ್ ಪಾವತಿ ವ್ಯವಸ್ಥೆ (ಎ.ಬಿ.ಪಿ.ಎಸ್) ಬಳಸಿಕೊಂಡು ನೇರ ಲಾಭ ವರ್ಗಾವಣೆ (ಡಿ.ಬಿ.ಟಿ) ವಿಧಾನದ ಮೂಲಕ ಮಾಡಲಾಗುತ್ತದೆ. ಭಾಗ ಬಿ ಅಡಿಯಲ್ಲಿ ಉದ್ಯೋಗದಾತರಿಗೆ ಪಾವತಿಗಳನ್ನು ನೇರವಾಗಿ ಅವರ ಪ್ಯಾನ್-ಜೋಡಿತ ಖಾತೆಗಳಿಗೆ ಮಾಡಲಾಗುತ್ತದೆ.
ಉದ್ಯೋಗದಾತರು ಈಗ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನಾ ಪೋರ್ಟಲ್ ಗೆ (https://pmvbry.epfindia.gov.in ಅಥವಾ https://pmvbry.labour.gov.in) ಭೇಟಿ ನೀಡಿ ಒಂದು ಬಾರಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಉಮಂಗ್ (UMANG) ಅಪ್ಲಿಕೇಶನ್ ನಲ್ಲಿ ಲಭ್ಯವಿರುವ ಮುಖಚಹರೆ ದೃಢೀಕರಣ ತಂತ್ರಜ್ಞಾನ (ಎಫ್.ಎ.ಟಿ) ಮೂಲಕ ಸಾರ್ವತ್ರಿಕ ಖಾತೆ ಸಂಖ್ಯೆ (ಯು.ಎ.ಎನ್) ಅನ್ನು ರಚಿಸಬೇಕು.
ಯೋಜನೆಯ ಪ್ರಯೋಜನಗಳು:
ಉದ್ಯೋಗಿ:
- ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಉದ್ಯೋಗದ ಔಪಚಾರಿಕೀಕರಣ
- ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಉದ್ಯೋಗದ ಸಮಯದಲ್ಲೇ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಲು ತರಬೇತಿ
- ನಿರಂತರ ಉದ್ಯೋಗದ ಮೂಲಕ ಸುಧಾರಿತ ಉದ್ಯೋಗಾವಕಾಶ
- ಆರ್ಥಿಕ ಸಾಕ್ಷರತಾ ಕೌಶಲ್ಯಗಳು
ಉದ್ಯೋಗದಾತರು:
- ಹೆಚ್ಚುವರಿ ಉದ್ಯೋಗ ಸೃಷ್ಟಿಯ ವೆಚ್ಚವನ್ನು ಸರಿದೂಗಿಸುವುದು
- ಕಾರ್ಮಿಕಪಡೆಯ ಸ್ಥಿರತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು
- ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಪ್ರೋತ್ಸಾಹಿಸುವುದು
ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1952ರ ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆಯಡಿಯಲ್ಲಿ ಶಾಸನಬದ್ಧ ಸಂಸ್ಥೆಯಾದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ) ಮೂಲಕ ಜಾರಿಗೊಳಿಸುತ್ತದೆ.
*****
(Release ID: 2157572)