ಪ್ರಧಾನ ಮಂತ್ರಿಯವರ ಕಛೇರಿ
ಆತ್ಮನಿರ್ಭರ ಭಾರತ: ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ
Posted On:
15 AUG 2025 10:20AM by PIB Bengaluru
79ನೇ ಸ್ವಾತಂತ್ರ್ಯ ದಿನದಂದು, ರಕ್ಷಣೆ, ತಂತ್ರಜ್ಞಾನ, ಇಂಧನ, ಬಾಹ್ಯಾಕಾಶ ಮತ್ತು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಆತ್ಮನಿರ್ಭರ ಭಾರತವನ್ನು ವಿಕ್ಷಿತ್ ಭಾರತಕ್ಕೆ ಪ್ರಮುಖ ಅಡಿಪಾಯಗಳಲ್ಲಿ ಒಂದೆಂದು ಒತ್ತಿ ಹೇಳಿದರು. ಆಪರೇಷನ್ ಸಿಂದೂರ್ ಬಗ್ಗೆ ಪ್ರಸ್ತಾಪಿಸಿದ ಅವರು ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ಥಳೀಯ/ದೇಶೀಯ ಸಾಮರ್ಥ್ಯಗಳು ಬೆದರಿಕೆಗಳನ್ನು ನಿರ್ಣಾಯಕವಾಗಿ ನಿಭಾಯಿಸಲು, ಸ್ವಾವಲಂಬನೆಯನ್ನು ರಾಷ್ಟ್ರೀಯ ಶಕ್ತಿ, ಘನತೆಯ ಆಧಾರಸ್ತಂಭವನ್ನಾಗಿ ಮಾಡಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರಯಾಣ ಬೆಳೆಸಲು ಪ್ರಮುಖವಾಗಿವೆ ಎಂದು ಹೇಳಿದರು.
ಆತ್ಮನಿರ್ಭರ ಭಾರತ: ಪ್ರಧಾನಮಂತ್ರಿ ಮೋದಿಯವರ ಪ್ರಮುಖ ಮುಖ್ಯಾಂಶಗಳು
1. ರಕ್ಷಣಾ ಸ್ವಾವಲಂಬನೆ ಮತ್ತು ಆಪರೇಷನ್ ಸಿಂದೂರ್: ಆಪರೇಷನ್ ಸಿಂದೂರ್ ಭಾರತದ ರಕ್ಷಣಾ ಸ್ವಾವಲಂಬನೆಯ ಪ್ರದರ್ಶನ ಎಂದು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು. ಮೇಡ್-ಇನ್-ಇಂಡಿಯಾ (ಭಾರತೀಯ ತಯಾರಿಕೆಯ) ಶಸ್ತ್ರಾಸ್ತ್ರಗಳು ಸೇರಿದಂತೆ ಸ್ಥಳೀಯ ಸಾಮರ್ಥ್ಯಗಳು ಭಾರತವನ್ನು ನಿರ್ಣಾಯಕವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿವೆ. ರಾಷ್ಟ್ರೀಯ ಭದ್ರತೆಯನ್ನು ವಿದೇಶಿ ಅವಲಂಬನೆಯ ಮೂಲಕ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
2. ಜೆಟ್ ಎಂಜಿನ್ನಲ್ಲಿ ಸ್ವಾವಲಂಬನೆ: ಭವಿಷ್ಯದ ರಕ್ಷಣಾ ತಂತ್ರಜ್ಞಾನವು ಸಂಪೂರ್ಣವಾಗಿ ಸ್ವದೇಶಿ ಮತ್ತು ಸ್ವಾವಲಂಬಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಭಾರತದೊಳಗೆ ಜೆಟ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಭಾರತದ ನಾವೀನ್ಯಕಾರರು ಮತ್ತು ಯುವಜನರನ್ನು ಒತ್ತಾಯಿಸಿದರು.
3. ಸೆಮಿಕಂಡಕ್ಟರ್ಗಳು ಮತ್ತು ಹೈ-ಟೆಕ್ ನಾಯಕತ್ವ: ಭಾರತವು 2025ರ ಅಂತ್ಯದ ವೇಳೆಗೆ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳನ್ನು ಬಿಡುಗಡೆ ಮಾಡಲಿದೆ, ಇದು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಷ್ಟ್ರದ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಜಾಗತಿಕ ಸ್ಪರ್ಧಾತ್ಮಕತೆಗಾಗಿ ಅವರು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಡೀಪ್-ಟೆಕ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ನಾವೀನ್ಯತೆಯ ಅಗತ್ಯವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು.
4. ಬಾಹ್ಯಾಕಾಶ ವಲಯದ ಸ್ವಾತಂತ್ರ್ಯ:
-
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಗಮನಾರ್ಹ ಸಾಧನೆಗಳನ್ನು ಸಂಭ್ರಮದಿಂದ ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಿಸಿದರು, ಇದು ದೇಶೀಯ ಬಾಹ್ಯಾಕಾಶ ಸಾಮರ್ಥ್ಯಗಳ ಹೊಸ ಯುಗವನ್ನು ಸೂಚಿಸಿತು.
-
300ಕ್ಕೂ ಹೆಚ್ಚು ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) ಉಪಗ್ರಹಗಳು, ಅನ್ವೇಷಣೆ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸಕ್ರಿಯವಾಗಿ ನಾವೀನ್ಯತೆ ಸಾಧಿಸುತ್ತಿವೆ ಎಂಬುದನ್ನು ಅವರು ಎತ್ತಿ ತೋರಿಸಿದರು, ಇದು ಭಾರತವು ಬಾಹ್ಯಾಕಾಶ ವಿಜ್ಞಾನ ಮತ್ತು ಪರಿಶೋಧನೆಯಲ್ಲಿ ಭಾಗವಹಿಸುವುದಲ್ಲದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ.
5. ಶುದ್ಧ ಮತ್ತು ನವೀಕರಿಸಬಹುದಾದ ಇಂಧನ
-
ಪ್ರಧಾನಮಂತ್ರಿ ಮೋದಿ ಇಂಧನ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿದರು. ಯುವಜನರ ಉಜ್ವಲ ಭವಿಷ್ಯಕ್ಕಾಗಿ ಮತ್ತು ರೈತರ ಕಲ್ಯಾಣಕ್ಕಾಗಿ ಇದು ಅವಶ್ಯವಿದೆ ಎಂದರು. ಹಾಗು ಅದನ್ನು ಮಾಡಲಾಗುತ್ತದೆ ಎಂದೂ ಹೇಳಿದರು.
-
ಜಗತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಚರ್ಚಿಸುತ್ತಿರುವಾಗ, ಭಾರತವು 2030ರ ವೇಳೆಗೆ 50% ಶುದ್ಧ ಇಂಧನ/ಶಕ್ತಿಯನ್ನು ಸಾಧಿಸಲು ನಿರ್ಧರಿಸಿದೆ, ಅದರ ಕುರಿತಂತೆ ಜನರ ಬದ್ಧತೆಗೆ ಧನ್ಯವಾದಗಳು, ಆ ಗುರಿಯನ್ನು 2025ರ ವೇಳೆಗೆ ತಲುಪಲಾಗಿದೆ ಎಂದು ಅವರು ಘೋಷಿಸಿದರು.
-
ಸೌರ, ಪರಮಾಣು, ಜಲ ಮತ್ತು ಜಲಜನಕ ಶಕ್ತಿಗಳು ಆಧುನಿಕಗೊಳ್ಳುತ್ತಾ ಮುನ್ನಡೆಯುತ್ತಿವೆ, ಇದು ಇಂಧನ ಸ್ವಾತಂತ್ರ್ಯದತ್ತ ನಿರ್ಣಾಯಕ ಹೆಜ್ಜೆಯಾಗಿದೆ.
-
ಖಾಸಗಿ ವಲಯದ ಪಾಲುದಾರಿಕೆಯ ಮೂಲಕ ಪರಮಾಣು ಶಕ್ತಿಯನ್ನು ವಿಸ್ತರಿಸುವತ್ತ ಭಾರತದ ಗಮನವನ್ನು ಪ್ರಧಾನಮಂತ್ರಿ ಮೋದಿ ಎತ್ತಿ ತೋರಿಸಿದರು. ಪ್ರಸ್ತುತ 10 ಹೊಸ ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು ಮತ್ತು ಭಾರತದ ಸ್ವಾತಂತ್ರ್ಯದ 100ನೇ ವರ್ಷದ ವೇಳೆಗೆ, ರಾಷ್ಟ್ರವು ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದು ಇಂಧನ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದೂ ಒತ್ತಿ ಹೇಳಿದರು.
6. ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್: ಇಂಧನ, ಕೈಗಾರಿಕೆ ಮತ್ತು ರಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಪಡೆಯಲು, ಭಾರತವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಆರಂಭಿಸಿದ್ದು ಅದು 1,200 ತಾಣಗಳನ್ನು ಅನ್ವೇಷಿಸುತ್ತಿದೆ. ಈ ಖನಿಜಗಳ ಮೇಲೆ ನಿಯಂತ್ರಣ ಹೊಂದುವುದು ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುತ್ತದೆ, ಭಾರತದ ಕೈಗಾರಿಕಾ ಮತ್ತು ರಕ್ಷಣಾ ವಲಯಗಳು ಸ್ವಾವಲಂಬಿಯಾಗುವುದನ್ನು ಖಚಿತಪಡಿಸುತ್ತದೆ ಎಂಬುದನ್ನೂ ಪ್ರಧಾನಮಂತ್ರಿ ಮೋದಿ ಎತ್ತಿ ತೋರಿಸಿದರು.
7. ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್: ಭಾರತವು ತನ್ನ ಆಳ ಜಲ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ, ಆ ಮೂಲಕ ಇಂಧನ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಮತ್ತು ವಿದೇಶಿ ಇಂಧನ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
8. ಕೃಷಿ ಸ್ವಾವಲಂಬನೆ ಮತ್ತು ರಸಗೊಬ್ಬರಗಳು: ರೈತರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರೀಯ ಆಹಾರ ಭದ್ರತೆಯನ್ನು ರಕ್ಷಿಸಲು ದೇಶೀಯವಾಗಿ ರಸಗೊಬ್ಬರಗಳನ್ನು ಉತ್ಪಾದಿಸುವ ತುರ್ತು ಅಗತ್ಯವನ್ನು ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು. ಆಮದು ಅವಲಂಬನೆಯನ್ನು ಕಡಿಮೆ ಮಾಡುವುದರಿಂದ ದೇಶದ ಕೃಷಿ ವಲಯವು ಸ್ವತಂತ್ರವಾಗಿ ಅಭಿವೃದ್ಧಿ ಹೊಂದುತ್ತದೆ, ರೈತರ ಕಲ್ಯಾಣವನ್ನು ರಕ್ಷಿಸುತ್ತದೆ ಮತ್ತು ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸುತ್ತದೆ.
9. ಡಿಜಿಟಲ್ ಸಾರ್ವಭೌಮತ್ವ ಮತ್ತು ದೇಶೀಯ ವೇದಿಕೆಗಳು: ಭಾರತದ ಸ್ವಂತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು, ಸಂವಹನ, ಡೇಟಾ ಮತ್ತು ತಾಂತ್ರಿಕ ಪರಿಸರ ವ್ಯವಸ್ಥೆಗಳು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು, ಭಾರತದ ಡಿಜಿಟಲ್ ಸ್ವಾಯತ್ತತೆಯನ್ನು ಬಲಪಡಿಸಲು ಪ್ರಧಾನಮಂತ್ರಿ ಮೋದಿ ಯುವಜನರಿಗೆ ಕರೆ ನೀಡಿದರು.
10. ಔಷಧ ಮತ್ತು ನಾವೀನ್ಯತೆಯಲ್ಲಿ ಸ್ವಾವಲಂಬನೆ: ಪ್ರಧಾನಮಂತ್ರಿ ಮೋದಿ ಅವರು ಭಾರತವು "ವಿಶ್ವದ ಔಷಧಾಲಯ" ವಾಗಿರುವ ಭಾರತದ ಶಕ್ತಿಯನ್ನು ಎತ್ತಿ ತೋರಿಸಿದರು ಮತ್ತು ಸಂಶೋಧನೆ ಹಾಗು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. "ಮಾನವೀಯತೆಯ ಕಲ್ಯಾಣಕ್ಕಾಗಿ ಅತ್ಯುತ್ತಮ ಮತ್ತು ಅತ್ಯಂತ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವವರಲ್ಲಿ ನಾವೂ ಒಬ್ಬರಾಗಬೇಕಲ್ಲವೇ?" ಎಂದು ಅವರು ಕೇಳಿದರು.
-
ದೇಶೀಯ ಔಷಧೀಯ ನಾವೀನ್ಯತೆಯಲ್ಲಿ ಭಾರತದ ಬೆಳೆಯುತ್ತಿರುವ ಬಲವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು, ಹೊಸ ಔಷಧಿಗಳು, ಲಸಿಕೆಗಳು ಮತ್ತು ಜೀವ ಉಳಿಸುವ ಚಿಕಿತ್ಸೆಗಳನ್ನು ಸಂಪೂರ್ಣವಾಗಿ ಭಾರತದೊಳಗೆ ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
-
ಭಾರತದ ಕೋವಿಡ್ -19 ಪ್ರತಿಕ್ರಿಯೆಯಿಂದ ಸ್ಫೂರ್ತಿ ಪಡೆದ ಅವರು, ಕೋವಿನ್ ನಂತಹ ಸ್ಥಳೀಯ ಲಸಿಕೆಗಳು ಮತ್ತು ವೇದಿಕೆಗಳು ಜಾಗತಿಕವಾಗಿ ಲಕ್ಷಾಂತರ ಜೀವಗಳನ್ನು ಉಳಿಸಿದವು, ಈ ನಾವೀನ್ಯತೆಯ ಮನೋಭಾವವನ್ನು ವಿಸ್ತರಿಸಲು ರಾಷ್ಟ್ರವನ್ನು ಒತ್ತಾಯಿಸಿದರು.
-
ಹೊಸ ಔಷಧಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳಿಗೆ ಪೇಟೆಂಟ್‌ಗಳನ್ನು ಪಡೆದುಕೊಳ್ಳಲು ಅವರು ಸಂಶೋಧಕರು ಮತ್ತು ಉದ್ಯಮಿಗಳಿಗೆ ಕರೆ ನೀಡಿದರು, ಭಾರತವು ತನ್ನದೇ ಆದ ಆರೋಗ್ಯ ಅಗತ್ಯಗಳನ್ನು ಪೂರೈಸುವುದಲ್ಲದೆ ಜಾಗತಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ ಮತ್ತು ವೈದ್ಯಕೀಯ ಸ್ವಾವಲಂಬನೆ ಹಾಗು ನಾವೀನ್ಯತೆಯ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದವರು ಖಚಿತ ಧ್ವನಿಯಲ್ಲಿ ನುಡಿದರು.
11. ಸ್ವದೇಶಿಯನ್ನು ಸಮರ್ಥಿಸಿಕೊಳ್ಳುವುದು: ಸ್ವದೇಶಿಯು ಹೆಮ್ಮೆ ಮತ್ತು ಬಲದಿಂದ ಹುಟ್ಟಿಕೊಳ್ಳಬೇಕು, ಬಲವಂತದಿಂದಲ್ಲ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ, "ಸ್ಥಳೀಯರಿಗೆ ಆದ್ಯತೆ" (ವೋಕಲ್ ಫಾರ್ ಲೋಕಲ್) ಉಪಕ್ರಮದ ಅಡಿಯಲ್ಲಿ ಭಾರತ ನಿರ್ಮಿತ ಸರಕುಗಳನ್ನು ಉತ್ತೇಜಿಸಲು/ಸಮರ್ಥಿಸಿಕೊಳ್ಳಲು ನಾಗರಿಕರು ಮತ್ತು ಅಂಗಡಿಯವರನ್ನು ಒತ್ತಾಯಿಸಿದರು. ಸ್ವಾವಲಂಬನೆಯನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಬೆಂಬಲಿಸಲು ಮತ್ತು ಭಾರತದ ಆರ್ಥಿಕ ಹಾಗು ಕೈಗಾರಿಕಾ ನೆಲೆಯನ್ನು ಬಲಪಡಿಸಲು ಅಂಗಡಿಗಳ ಹೊರಗೆ "ಸ್ವದೇಶಿ" ಫಲಕಗಳಂತಹ ಗೋಚರ ಪ್ರಚಾರ ಕೈಗೊಳ್ಳುವಂತೆ ಅವರು ಕರೆ ನೀಡಿದರು.
12. ಮಿಷನ್ ಸುದರ್ಶನ ಚಕ್ರ: ಸಂಪ್ರದಾಯವನ್ನು ಗೌರವಿಸುವುದು ಮತ್ತು ರಕ್ಷಣೆಯನ್ನು ಬಲಪಡಿಸುವುದು: ಶತ್ರುಗಳ ರಕ್ಷಣಾ ಒಳನುಸುಳುವಿಕೆಯನ್ನು ತಟಸ್ಥಗೊಳಿಸುವ ಮತ್ತು ಭಾರತದ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ "ಮಿಷನ್ ಸುದರ್ಶನ ಚಕ್ರ"ವನ್ನು ಪ್ರಧಾನಮಂತ್ರಿ ಮೋದಿ ಘೋಷಿಸಿದರು.
-
ಅವರು ಈ ಕಾರ್ಯಾಚರಣೆಯನ್ನು ಪೌರಾಣಿಕ ಶ್ರೀ ಕೃಷ್ಣನ ಸುದರ್ಶನ ಚಕ್ರಕ್ಕೆ ಜೋಡಿಸಿದರು, ಆಧುನಿಕ ರಕ್ಷಣಾ ನಾವೀನ್ಯತೆಗಳಿಗೆ ಮಾರ್ಗದರ್ಶನ ನೀಡಲು ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಮತ್ತು ಪೌರಾಣಿಕ ಪರಂಪರೆಯಿಂದ ಹೇಗೆ ಸ್ಫೂರ್ತಿ ಪಡೆಯುತ್ತದೆ ಎಂಬುದನ್ನು ಎತ್ತಿ ತೋರಿಸಿದರು. ಈ ಕಾರ್ಯಾಚರಣೆಯು ಯಾವುದೇ ಬೆದರಿಕೆಗೆ ತ್ವರಿತ, ನಿಖರ ಮತ್ತು ಶಕ್ತಿಯುತ ಪ್ರತಿಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಸ್ವಾಯತ್ತತೆಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
****
(Release ID: 2156754)
Read this release in:
Odia
,
Malayalam
,
English
,
Urdu
,
Hindi
,
Nepali
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu