ರಕ್ಷಣಾ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಕೆಂಪು ಕೋಟೆಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ
ಅನಾವರಣಗೊಳ್ಳಲಿದೆ ಸಮೃದ್ಧ, ಸುರಕ್ಷಿತ ಮತ್ತು ದಿಟ್ಟ ನಯಾ ಭಾರತದ ಒಂದು ನೋಟವನ್ನು ಒದಗಿಸುವ ಭವ್ಯ ದೃಶ್ಯ
Posted On:
13 AUG 2025 7:13PM by PIB Bengaluru
2025ರ ಆಗಸ್ಟ್ 15 ರಂದು ರಾಷ್ಟ್ರವು 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ಆಚರಣೆಯ ನೇತೃತ್ವ ವಹಿಸಲಿದ್ದಾರೆ. ಪ್ರಧಾನಮಂತ್ರಿಗಳು ರಾಷ್ಟ್ರಧ್ವಜಾರೋಹಣ ಮಾಡಿ, ಐತಿಹಾಸಿಕ ಸ್ಮಾರಕದ ಕೊತ್ತಲಗಳಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2047ರ ವೇಳೆಗೆ ಸರ್ಕಾರದ ವಿಕ್ಷಿತ್ ಭಾರತ್ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ರಾಷ್ಟ್ರವು ದಾಪುಗಾಲುಗಳನ್ನು ಇಡುತ್ತಿರುವುದರಿಂದ, ಈ ವರ್ಷದ ಆಚರಣೆಗಳ ವಿಷಯವು ನಯಾ ಭಾರತ್ ಆಗಿರಲಿದೆ. ಈ ಆಚರಣೆಗಳು ಸಮೃದ್ಧ, ಸುರಕ್ಷಿತ ಮತ್ತು ದಿಟ್ಟ ನಯಾ ಭಾರತದ ನಿರಂತರ ಉದಯವನ್ನು ಸ್ಮರಿಸಲು ಮತ್ತು ಪ್ರಗತಿಯ ಹಾದಿಯಲ್ಲಿ ಮತ್ತಷ್ಟು ಮುನ್ನಡೆಯಲು ನವೀಕೃತ ಶಕ್ತಿಯನ್ನು ಒದಗಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.
ಸಮಾರಂಭ
ಪ್ರಧಾನಮಂತ್ರಿ ಅವರು ಕೆಂಪು ಕೋಟೆಗೆ ಆಗಮಿಸಿದಾಗ, ಅವರನ್ನು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಖಾತೆ ಸಹಾಯಕ ಸಚಿವರಾದ ಶ್ರೀ ಸಂಜಯ್ ಸೇಠ್ ಮತ್ತು ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು ಬರಮಾಡಿಕೊಳ್ಳಲಿದ್ದಾರೆ. ರಕ್ಷಣಾ ಕಾರ್ಯದರ್ಶಿಯವರು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ (ಜಿ.ಒ.ಸಿ.) ಲೆಫ್ಟಿನೆಂಟ್ ಜನರಲ್ ಭವ್ನಿಶ್ ಕುಮಾರ್ ಅವರನ್ನು ಪ್ರಧಾನಮಂತ್ರಿಗೆ ಪರಿಚಯಿಸಲಿದ್ದಾರೆ. ನಂತರ ದೆಹಲಿ ಪ್ರದೇಶದ ಜಿ.ಒ.ಸಿ.ಅವರು ಶ್ರೀ ನರೇಂದ್ರ ಮೋದಿಯವರನ್ನು ಸೆಲ್ಯೂಟಿಂಗ್ ಬೇಸ್‌ಗೆ ಕರೆದೊಯ್ಯಲಿದ್ದಾರೆ, ಅಲ್ಲಿ ಸಂಯುಕ್ತ ಅಂತರ್-ಸೇವೆಗಳು ಮತ್ತು ದೆಹಲಿ ಪೊಲೀಸ್ ಗಾರ್ಡ್‌ಗಳ ಸಂಯೋಜಿತ ತಂಡವು ಪ್ರಧಾನಮಂತ್ರಿಗೆ ಗೌರವ ವಂದನೆ ಸಲ್ಲಿಸಲಿದೆ. ನಂತರ, ಪ್ರಧಾನಮಂತ್ರಿ ಅವರು ಗೌರವ ರಕ್ಷೆಯನ್ನು ಸ್ವೀಕರಿಸುವರು ಹಾಗು ವೀಕ್ಷಿಸುವರು.
ಪ್ರಧಾನಮಂತ್ರಿಯವರ ಗೌರವ ರಕ್ಷೆ ಪಡೆಯಲ್ಲಿ 96 ಸಿಬ್ಬಂದಿ (ಒಬ್ಬ ಅಧಿಕಾರಿ ಮತ್ತು ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರಿಂದ ತಲಾ 24 ಸಿಬ್ಬಂದಿ) ಇರುತ್ತಾರೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಮನ್ವಯ ಸೇವೆಯನ್ನು ಭಾರತೀಯ ವಾಯುಪಡೆ ವಹಿಸಿಕೊಂಡಿದೆ. ಗೌರವ ರಕ್ಷೆ ಪಡೆಯ ನೇತೃತ್ವವನ್ನು ವಿಂಗ್ ಕಮಾಂಡರ್ ಎ.ಎಸ್. ಸೆಖೋನ್ ವಹಿಸಲಿದ್ದಾರೆ. ಪ್ರಧಾನಮಂತ್ರಿಗಳ ರಕ್ಷಣಾ ಪಡೆಯಲ್ಲಿರುವ ಸೇನಾ ತುಕಡಿಯನ್ನು ಮೇಜರ್ ಅರ್ಜುನ್ ಸಿಂಗ್, ನೌಕಾ ಪಡೆಯನ್ನು ಲೆಫ್ಟಿನೆಂಟ್ ಕಮಾಂಡರ್ ಕೋಮಲ್ದೀಪ್ ಸಿಂಗ್ ಮತ್ತು ವಾಯುಪಡೆಯ ತುಕಡಿಯನ್ನು ಸ್ಕ್ವಾಡ್ರನ್ ಲೀಡರ್ ರಾಜನ್ ಅರೋರಾ ಮುನ್ನಡೆಸಲಿದ್ದಾರೆ. ದೆಹಲಿ ಪೊಲೀಸ್ ತುಕಡಿಯನ್ನು ಹೆಚ್ಚುವರಿ ಡಿ.ಸಿ.ಪಿ ಶ್ರೀ ರೋಹಿತ್ ರಾಜ್‌ಬೀರ್ ಸಿಂಗ್ ಮುನ್ನಡೆಸುವರು.
ಗೌರವ ರಕ್ಷೆ ಪಡೆದ ನಂತರ, ಪ್ರಧಾನಮಂತ್ರಿ ಅವರು ಕೆಂಪು ಕೋಟೆಯ ಕೊತ್ತಲಗಳಿಗೆ ತೆರಳಲಿದ್ದು, ಅಲ್ಲಿ ಅವರನ್ನು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಸಹಾಯಕ ಸಚಿವರಾದ ಶ್ರೀ ಸಂಜಯ್ ಸೇಠ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಸ್ವಾಗತಿಸಲಿದ್ದಾರೆ. ದೆಹಲಿ ಪ್ರದೇಶದ ಜಿ.ಒ.ಸಿ.ಅವರು ಪ್ರಧಾನಮಂತ್ರಿಯವರನ್ನು ರಾಷ್ಟ್ರಧ್ವಜಾರೋಹಣಕ್ಕಾಗಿ ಕೆಂಪುಕೋಟೆಯ ಕೊತ್ತಲಗಳಲ್ಲಿ ನಿರ್ಮಿಸಿರುವ ವೇದಿಕೆಗೆ ಕರೆದೊಯ್ಯುವರು.
ಫ್ಲೈಯಿಂಗ್ ಆಫೀಸರ್ ರಶಿಕಾ ಶರ್ಮಾ ಅವರು ಪ್ರಧಾನಮಂತ್ರಿಗಳಿಗೆ ರಾಷ್ಟ್ರಧ್ವಜವನ್ನು ಹಾರಿಸುವಲ್ಲಿ ಸಹಾಯ ಮಾಡಲಿದ್ದಾರೆ. 1721 ರ ಫೀಲ್ಡ್ ಬ್ಯಾಟರಿಯ (ಆಚರಣಾ) ಧೀರ ಗನ್ನರ್‌ಗಳು 21-ಗನ್ ಸೆಲ್ಯೂಟ್‌ನೊಂದಿಗೆ ಜತೆಗೂಡಲಿದ್ದಾರೆ. ದೇಶೀಯ 105 ಎಂ.ಎಂ. ಲೈಟ್ ಫೀಲ್ಡ್ ಗನ್‌ಗಳನ್ನು ಬಳಸುವ ಸಾಂಪ್ರದಾಯಿಕ ತಂಡದ ನೇತೃತ್ವವನ್ನು ಮೇಜರ್ ಪವನ್ ಸಿಂಗ್ ಶೇಖಾವತ್ ವಹಿಸಲಿದ್ದಾರೆ ಮತ್ತು ಗನ್ ಪೊಸಿಷನ್ ಆಫೀಸರ್ ಆಗಿ ನೈಬ್ ಸುಬೇದಾರ್ (ಗನ್‌ಶಾಲೆಯಲ್ಲಿ ಸಹಾಯಕ ಬೋಧಕ) ಅನುತೋಷ್ ಸರ್ಕಾರ್ ಕಾರ್ಯನಿರ್ವಹಿಸುವರು.
ಪ್ರಧಾನಮಂತ್ರಿಗಳು ರಾಷ್ಟ್ರಧ್ವಜಾರೋಹಣ ಮಾಡುವ ಸಮಯದಲ್ಲಿ ಒಬ್ಬ ಅಧಿಕಾರಿ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಮತ್ತು ದೆಹಲಿ ಪೊಲೀಸ್ ಪಡೆಯ ತಲಾ 32 ಇತರ ಶ್ರೇಣಿಯ ಸಿಬ್ಬಂದಿಗಳನ್ನು ಒಳಗೊಂಡ ಒಟ್ಟು 128 ಸಿಬ್ಬಂದಿಗಳ ರಾಷ್ಟ್ರೀಯ ಧ್ವಜ ಪಡೆ ರಾಷ್ಟ್ರೀಯ ಗೌರವ ವಂದನೆ ಸಲ್ಲಿಸಲಿದೆ. ವಿಂಗ್ ಕಮಾಂಡರ್ ತರುಣ್ ದಾಗರ್ ಈ ಅಂತರ-ಸೇವಾ ಪಡೆ ಮತ್ತು ಪೊಲೀಸ್ ಪಡೆಗಳ ನೇತೃತ್ವ ವಹಿಸಲಿದ್ದಾರೆ.
ರಾಷ್ಟ್ರೀಯ ಧ್ವಜ ಪಡೆಯಲ್ಲಿರುವ ಸೇನಾ ತುಕಡಿಯನ್ನು ಮೇಜರ್ ಪ್ರಕಾಶ್ ಸಿಂಗ್, ನೌಕಾ ತುಕಡಿಯನ್ನು ಲೆಫ್ಟಿನೆಂಟ್ ಕಮಾಂಡರ್ ಮೊಹಮ್ಮದ್ ಪರ್ವೇಜ್ ಮತ್ತು ವಾಯುಪಡೆ ತುಕಡಿಯನ್ನು ಸ್ಕ್ವಾಡ್ರನ್ ಲೀಡರ್ ವಿ.ವಿ. ಶರ್ವಣ್ ಮುನ್ನಡೆಸುವರು. ದೆಹಲಿ ಪೊಲೀಸ್ ತುಕಡಿಯನ್ನು ಹೆಚ್ಚುವರಿ ಡಿ.ಸಿ.ಪಿ ಶ್ರೀ ಅಭಿಮನ್ಯು ಪೋಸ್ವಾಲ್ ಮುನ್ನಡೆಸುವರು.
ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ತ್ರಿವರ್ಣ ಧ್ವಜಕ್ಕೆ 'ರಾಷ್ಟ್ರೀಯ ಗೌರವ ವಂದನೆ' ನೀಡಲಾಗುವುದು. ಒಬ್ಬ ಜೆ.ಸಿ.ಒ ಮತ್ತು 25 ಇತರ ಶ್ರೇಣಿಯ ಅಧಿಕಾರಿ ಸಿಬಂದಿಗಳನ್ನು ಒಳಗೊಂಡ ವಾಯುಪಡೆಯ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸುತ್ತದೆ, ರಾಷ್ಟ್ರಧ್ವಜವನ್ನು ಹಾರಿಸುವಾಗ ಮತ್ತು 'ರಾಷ್ಟ್ರೀಯ ಗೌರವ ವಂದನೆ' ಸಲ್ಲಿಸುವಾಗ. ಬ್ಯಾಂಡ್ ಅನ್ನು ಜೂನಿಯರ್ ವಾರಂಟ್ ಅಧಿಕಾರಿ ಎಂ. ಡೇಕಾ ನಿರ್ವಹಿಸುವರು. ಮೊದಲ ಬಾರಿಗೆ, 11 ಅಗ್ನಿವೀರ್ ವಾಯು ಸಂಗೀತಗಾರರು ರಾಷ್ಟ್ರಗೀತೆ ನುಡಿಸುವ ಬ್ಯಾಂಡ್‌ನ ಭಾಗವಾಗಲಿದ್ದಾರೆ.
ಪ್ರಧಾನಮಂತ್ರಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ, ಭಾರತೀಯ ವಾಯುಪಡೆಯ ಎರಡು ಎಂ.ಐ.-17 ಹೆಲಿಕಾಪ್ಟರ್‌ಗಳು ಸ್ಥಳದಲ್ಲಿ ಹೂವಿನ ಪಕಳೆಗಳ ಪುಷ್ಪವೃಷ್ಟಿಯನ್ನು ಮಾಡಲಿವೆ. - ಒಂದು ರಾಷ್ಟ್ರಧ್ವಜವನ್ನು ಸುತ್ತುವರೆದರೆ, ಇನ್ನೊಂದು 'ಆಪರೇಷನ್ ಸಿಂಧೂರ್' ಚಿತ್ರಿಸುವ ಧ್ವಜವನ್ನು ಹೊಂದಿರುತ್ತದೆ. ಈ ಹೆಲಿಕಾಪ್ಟರ್‌ಗಳ ಕ್ಯಾಪ್ಟನ್ ಆಗಿ ವಿಂಗ್ ಕಮಾಂಡರ್ ವಿನಯ್ ಪೂನಿಯಾ ಮತ್ತು ವಿಂಗ್ ಕಮಾಂಡರ್ ಆದಿತ್ಯ ಜೈಸ್ವಾಲ್ ಕಾರ್ಯನಿರ್ವಹಿಸುವರು.
ಆಪರೇಷನ್ ಸಿಂದೂರ್
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಪರೇಷನ್ ಸಿಂದೂರ್ನ ಯಶಸ್ಸನ್ನು ಸಂಭ್ರಮಿಸಲಾಗುವುದು. ಜ್ಞಾನಪಥ್‌ನಲ್ಲಿರುವ ವ್ಯೂ ಕಟ್ಟರ್‌ನಲ್ಲಿ ಆಪರೇಷನ್ ಸಿಂದೂರ್ ಲಾಂಛನ (ಲೋಗೋ ) ಇರುತ್ತದೆ. ಕಾರ್ಯಾಚರಣೆಯನ್ನು ಆಧರಿಸಿದ ಹೂವಿನ ಅಲಂಕಾರವೂ ಇರುತ್ತದೆ.
ಆಮಂತ್ರಣ ಪತ್ರಗಳು ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಲಾಂಛನ(ಲೋಗೋ)ವನ್ನು ಹೊಂದಿವೆ. ಆಮಂತ್ರಣ ಪತ್ರಗಳು 'ನಯಾ ಭಾರತ'ದ ಉದಯವನ್ನು ಚಿತ್ರಿಸುವ ಚೆನಾಬ್ ಸೇತುವೆಯ ವಾಟರ್ ಮಾರ್ಕ್ ಸಹ ಹೊಂದಿವೆ.
ಜ್ಞಾನಪಥ್ನಲ್ಲಿ 'ನಯಾ ಭಾರತ' ರಚನೆ
ಪುಷ್ಪವೃಷ್ಟಿಯ ನಂತರ, ಪ್ರಧಾನಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಭಾಷಣದ ಕೊನೆಯಲ್ಲಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಮತ್ತು 'ನನ್ನ ಭಾರತ'(ಮೈ ಭಾರತ್) ಸ್ವಯಂಸೇವಕರ ಕೆಡೆಟ್‌ಗಳು ರಾಷ್ಟ್ರಗೀತೆ ಹಾಡಲಿದ್ದಾರೆ. ಒಟ್ಟು 2,500 ಬಾಲಕ ಮತ್ತು ಬಾಲಕಿಯರನ್ನು ಒಳಗೊಂಡಂತೆ ಕೆಡೆಟ್‌ಗಳು (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಮತ್ತು 'ನನ್ನ ಭಾರತ' ಸ್ವಯಂಸೇವಕರು ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಕೆಡೆಟ್‌ಗಳು ಮತ್ತು 'ನನ್ನ ಭಾರತ' ಸ್ವಯಂಸೇವಕರು ಕೋಟೆಯ ಕೊತ್ತಲಗಳಿಗೆ ಎದುರಿನ ಜ್ಞಾನಪಥ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಅವರು 'ನಯಾ ಭಾರತ' ಲೋಗೋವನ್ನು ರೂಪಿಸಲಿದ್ದಾರೆ.
ವಿಶೇಷ ಅತಿಥಿಗಳು
ಈ ವರ್ಷ ಕೆಂಪು ಕೋಟೆಯಲ್ಲಿ ನಡೆಯುವ ಆಚರಣೆಗಳನ್ನು ವೀಕ್ಷಿಸಲು ವಿವಿಧ ವಯೋಮಾನದ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅವರೆಂದರೆ:
-
2025 ರ ವಿಶೇಷ ಒಲಿಂಪಿಕ್ಸ್‌ನ ಭಾರತೀಯ ತಂಡ
-
ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ವಿಜೇತರು
-
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಚಿನ್ನದ ಪದಕ ವಿಜೇತರು
-
ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನುತುಪ್ಪ ಮಿಷನ್ ಅಡಿಯಲ್ಲಿ ತರಬೇತಿ ಪಡೆದ ಮತ್ತು ಆರ್ಥಿಕವಾಗಿ ಸಹಾಯ ಪಡೆದ ಉತ್ತಮ ಸಾಧಕ ರೈತರು
-
ಔಷಧೀಯ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ರೈತರು
-
ಇ-ನೆಗೋಷಿಯಬಲ್ ವೇರ್‌ಹೌಸ್ ರಶೀದಿಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿಯಲ್ಲಿ ಸಾಲ ಪಡೆದ ಅತ್ಯುತ್ತಮ ಸಾಧನೆ ತೋರಿದ ರೈತ ವ್ಯಾಪಾರಿಗಳು/ಸಹಕಾರಿಗಳು
-
ಅತ್ಯುತ್ತಮ ಸಾಧನೆ ತೋರಿದ ಬಯಲು ಮಲವಿಸರ್ಜನೆ ಮುಕ್ತ ಪ್ಲಸ್ ಗ್ರಾಮಗಳ ಸರಪಂಚರು
-
ಮಳೆ ಹಿಡಿದಿಡುವ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ತೋರಿದ ಸರಪಂಚರು.
-
ಪಿ.ಎಂ. ಯುವ (ಯುವ ಲೇಖಕ ಮಾರ್ಗದರ್ಶನ ಯೋಜನೆ) ಅಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಯುವ ಲೇಖಕರು
-
ಪಿ.ಎಂ.-ವಿಕಾಸ್ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೌಶಲ್ಯಪೂರ್ಣ ಮತ್ತು ತರಬೇತಿ ಪಡೆದ ಯುವಜನರು
-
ಟ್ರೈಫೆಡ್ ( TRIFED) ನಿಂದ ಪಿ.ಎಂ. ವನ್ ಧನ್ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಉದ್ಯಮಿಗಳು
-
ರಾಷ್ಟ್ರೀಯ ಎಸ್.ಸಿ./ಎಸ್.ಟಿ. ಹಬ್ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಎಸ್‌ಸಿ/ಎಸ್‌ಟಿ ಸಮುದಾಯದ ಉದ್ಯಮಿಗಳು
-
ಪಿ.ಎಂ.-ದಕ್ಷ, ಶ್ರೇಯಸ್ ಮತ್ತು ಶ್ರೇಷ್ಠ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು
-
ವಿಶ್ವಾಸ್ ಯೋಜನೆಯಡಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಸ್ವಸಹಾಯ ಗುಂಪುಗಳು
-
ಎನ್.ಎಸ್.ಟಿ.ಎಫ್.ಡಿ.ಸಿ. (NSTFDC) ಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಉದ್ಯಮಿಗಳು
-
ಅತ್ಯುತ್ತಮ ಸಾಧನೆ ತೋರಿದ ಪಿ.ಎ.ಸಿ.ಎಸ್.
-
ಪಿ.ಎಂ. ಇಂಟರ್ನ್‌ಶಿಪ್ ಯೋಜನೆಯಡಿ ಅತ್ಯುತ್ತಮ ಸಾಧನೆ ತೋರಿದ ಇಂಟರ್ನ್‌ಗಳು
-
ಅತ್ಯುತ್ತಮ ಸಾಧನೆ ತೋರಿದ ಮೈ ಭಾರತ್ ಸ್ವಯಂಸೇವಕರು
-
ಪಿ.ಎಂ. ಆವಾಸ್ ಯೋಜನಾ ಗ್ರಾಮೀಣದ ಫಲಾನುಭವಿಗಳು
-
ಆನ್‌ಲೈನ್/ಆಫ್‌ಲೈನ್ ರಸಪ್ರಶ್ನೆಗಳು/ಸ್ಪರ್ಧೆಗಳಲ್ಲಿ ವಿಜೇತರಾದ ದೆಹಲಿ ಮೂಲದ ಶಾಲಾ ಮಕ್ಕಳು
-
ಸ್ವಚ್ಛತಾ ಅಭಿಯಾನದಲ್ಲಿ ಉತ್ತಮ ಸಾಧನೆ ತೋರಿದ 50 ಸ್ವಚ್ಛತಾ ಕಾರ್ಯಕರ್ತರು
-
ಲಖ್ಪತಿ ದೀದಿಯ ಫಲಾನುಭವಿಗಳು
-
ಅಂಗನವಾಡಿ ಕಾರ್ಯಕರ್ತರು/ಸಹಾಯಕರು, ಮೇಲ್ವಿಚಾರಕರು, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಮಿಷನ್ ಶಕ್ತಿ.
-
ಪುನರ್ವಸತಿ ಪಡೆದ ಜೀತದಾಳುಗಳು, ರಕ್ಷಿಸಲ್ಪಟ್ಟ ಮತ್ತು ಪುನರ್ವಸತಿ ಪಡೆದ ಮಹಿಳೆಯರು ಮತ್ತು ಮಕ್ಕಳು
-
ಅಂತಾರಾಷ್ಟ್ರೀಯ ಯೋಗ ದಿನದಂದು ತೊಡಗಿಸಿಕೊಂಡ ಸ್ವಯಂಸೇವಕರು/ಬೋಧಕರು
-
ಸ್ಯಾಚುರೇಶನ್ ಮಟ್ಟದಲ್ಲಿ ಕೇಂದ್ರ/ರಾಜ್ಯ ವಲಯದ ಯಾವುದೇ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ತಲುಪಿಸಿದ ಸರಪಂಚರು/ಗ್ರಾಮ ಮುಖಂಡರು
-
ರೋಮಾಂಚಕ ಗ್ರಾಮಗಳಿಂದ ಅತಿಥಿಗಳು
-
ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ನಿನ ಅಡಿಯಲ್ಲಿಯ ಸ್ವಸಹಾಯ ಗುಂಪುಗಳು
-
ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆಗಳನ್ನು ಅನ್ವೇಷಿಸಿದ ನಾವೀನ್ಯಕಾರರು/ಉದ್ಯಮಿಗಳು
-
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ಥಳೀಯ ಸಮುದಾಯಗಳ ಬುಡಕಟ್ಟು ಮಕ್ಕಳು
ಸಾಂಪ್ರದಾಯಿಕ ಉಡುಗೆ ತೊಟ್ಟ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 1,500 ಕ್ಕೂ ಹೆಚ್ಚು ಜನರನ್ನು ಭವ್ಯ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಸಾರ್ವಜನಿಕ ಸೌಲಭ್ಯಗಳು
-
ಕ್ಲೋಕ್ ರೂಮ್ ಒದಗಿಸುವಿಕೆ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕ್ಲೋಕ್ ರೂಮ್‌ಗಳ(ವಸ್ತುಗಳನ್ನಿಡುವ ಸ್ಥಳ) ಲಭ್ಯತೆಯನ್ನು ಸಂದರ್ಶಕರು ಶ್ಲಾಘಿಸಿದ್ದರು. ಬಳಕೆದಾರರ ಅನುಕೂಲಕ್ಕಾಗಿ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ 12 ಸ್ಥಳಗಳಲ್ಲಿ 25 ಕ್ಲೋಕ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ.
-
ಸಹಾಯಹಸ್ತದಲ್ಲಿ ಸ್ವಯಂಸೇವಕರು: 190 ಸ್ವಯಂಸೇವಕರು ('ಮೈ ಭಾರತ್' ನಿಂದ 120 ಮತ್ತು ಎನ್.ಸಿ.ಸಿಯಿಂದ 70) ಪೊಲೀಸ್ ಸಿಬ್ಬಂದಿಯೊಂದಿಗೆ ಸಂದರ್ಶಕರಿಗೆ ಆವರಣಗಳನ್ನು ತಲುಪಲು ಸಹಾಯ ಮಾಡುತ್ತಾರೆ. ಕೆಂಪು ಕೋಟೆಗೆ ಹೋಗುವ ದಾರಿಯಲ್ಲಿ ಸ್ವಯಂಸೇವಕರನ್ನು ಸಂದರ್ಶಕರು ಗುರುತಿಸಬಹುದು.
-
ವೀಲ್ಚೇರ್ ಒದಗಿಸುವಿಕೆ: ವೀಲ್‌ಚೇರ್‌ಗಳ ಸಹಾಯದ ಅಗತ್ಯವಿರುವ ಎಲ್ಲಾ ಸಂದರ್ಶಕರಿಗೆ ಮೆಟ್ರೋ ನಿಲ್ದಾಣಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಎನ್.ಸಿ.ಸಿ ಕೆಡೆಟ್‌ಗಳು ಲಭ್ಯ ಇರುತ್ತಾರೆ.
-
ಹೆಚ್ಚುವರಿ ಕಾರ್ ಪಾರ್ಕಿಂಗ್ ಸೌಲಭ್ಯಗಳು: ಪಾರ್ಕಿಂಗ್ ಸಂಖ್ಯೆ 4ಎ ನಲ್ಲಿ 250 ಹೆಚ್ಚುವರಿ ಕಾರುಗಳಿಗೆ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
-
ಮೆಟ್ರೋ ಸೇವೆಗಳು: ಜನರು ಸುಲಭವಾಗಿ ಸ್ಥಳವನ್ನು ತಲುಪಲು ನೆರವಾಗುವಂತೆ ಆಗಸ್ಟ್ 15 ರಂದು ಬೆಳಿಗ್ಗೆ 4 ಗಂಟೆಯಿಂದ ಮೆಟ್ರೋ ಕಾರ್ಯನಿರ್ವಹಿಸಲಿದೆ.
ಸ್ಪರ್ಧೆಗಳು
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ, ರಕ್ಷಣಾ ಸಚಿವಾಲಯವು My Gov ಸಹಯೋಗದೊಂದಿಗೆ ರಸಪ್ರಶ್ನೆಗಳು ಮತ್ತು ಸ್ಪರ್ಧೆಗಳನ್ನು ನಡೆಸಿತು. ಸ್ಪರ್ಧೆಗಳ ವಿವರಗಳು ಈ ಕೆಳಗಿನಂತಿವೆ:
-
ಜ್ಞಾನಪಥ್‌ನಲ್ಲಿ ರಚನೆಯ ವಿನ್ಯಾಸಕ್ಕಾಗಿ ಸ್ಪರ್ಧೆ
-
‘ಆಪರೇಷನ್ ಸಿಂಧೂರ್ - ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯನ್ನು ಮರು ವ್ಯಾಖ್ಯಾನಿಸುವುದು’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ
-
ರೀಲ್ ಸ್ಪರ್ಧೆ: ಭಾರತೀಯ ಸ್ವಾತಂತ್ರ್ಯದ ಸ್ಮಾರಕಗಳು/ಸ್ಥಳಗಳಿಗೆ ನಡಿಗೆ
-
‘ನವ ಭಾರತ ಸಬಲೀಕೃತ ಭಾರತ’ ವಿಷಯದ ಕುರಿತು ಚಿತ್ರಕಲೆ ಸ್ಪರ್ಧೆ
-
ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳ ಸರಣಿ:
ಎ. ನವ ಭಾರತವನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ
ಬಿ. ಭಾರತ್ ರಣಭೂಮಿ: ಭಾರತದ ಗಡಿ
ಸಿ. ರಾಷ್ಟ್ರೀಯ ಭದ್ರತೆಯಲ್ಲಿ ಆತ್ಮನಿರ್ಭರ್ ನಾವೀನ್ಯತೆಯ ಉದಯ
ಸ್ಪರ್ಧೆಗಳಲ್ಲಿ ಗೆದ್ದ ಸುಮಾರು 1,000 ಮಂದಿ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ.
ಮಿಲಿಟರಿ ಬ್ಯಾಂಡ್ ಪ್ರದರ್ಶನಗಳು
ನಾಗರಿಕರಲ್ಲಿ ದೇಶಭಕ್ತಿಯ ಉತ್ಸಾಹವನ್ನು ಉತ್ತೇಜಿಸಲು ಮತ್ತು ಆಪರೇಷನ್ ಸಿಂಧೂರ್ನ ವಿಜಯವನ್ನು ಸಂಭ್ರಮಿಸಲು, ಸ್ವಾತಂತ್ರ್ಯ ದಿನಾಚರಣೆಯ ಸಂಜೆ ಇದೇ ಮೊದಲ ಬಾರಿಗೆ ದೇಶಾದ್ಯಂತ ಹಲವಾರು ಬ್ಯಾಂಡ್ ಪ್ರದರ್ಶನಗಳನ್ನು ನಡೆಸಲಾಗುವುದು. ದೇಶಾದ್ಯಂತ 140 ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಸೇನೆ, ನೌಕಾಪಡೆ, ವಾಯುಪಡೆ, ಭಾರತೀಯ ಕರಾವಳಿ ಕಾವಲು ಪಡೆ, ಎನ್.ಸಿ.ಸಿ, ಸಿ.ಆರ್.ಪಿ.ಎಫ್, ಐ.ಟಿ.ಬಿ.ಪಿ, ಸಿ.ಐ.ಎಸ್.ಎಫ್, ಎಸ್.ಎಸ್.ಬಿ, ಬಿ.ಎಸ್.ಎಫ್, ಐ.ಡಿ.ಎಸ್, ಆರ್.ಪಿ.ಎಫ್ ಮತ್ತು ಅಸ್ಸಾಂ ರೈಫಲ್ಸ್ ಬ್ಯಾಂಡ್‌ಗಳು ಪ್ರದರ್ಶನಗಳನ್ನು ನೀಡಲಿವೆ.
ಬ್ಯಾಂಡ್ ಪ್ರದರ್ಶನಗಳ ಸ್ಥಳಗಳು
****
(Release ID: 2156254)