ಕೃಷಿ ಸಚಿವಾಲಯ
ರೈತರ ಸುರಕ್ಷತೆ ಮತ್ತು ಬೆಳೆ ವಿಮಾ ಕ್ಲೇಮ್ ಪಾವತಿಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ, ನಾಳೆ ರಾಜಸ್ಥಾನದಲ್ಲಿ ಬೃಹತ್ ಕಾರ್ಯಕ್ರಮ
ಜುನ್ಜುನುನಿಂದ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಇತರ ರಾಜ್ಯಗಳ ರೈತರಿಗೆ ಬೆಳೆ ವಿಮಾ ಕ್ಲೇಮ್ ಮೊತ್ತವನ್ನು ವಿತರಿಸಲಿದ್ದಾರೆ
ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ, 30 ಲಕ್ಷ ರೈತರು ಒಟ್ಟು ₹3,200 ಕೋಟಿ ಮೊತ್ತದ ಡಿಜಿಟಲ್ ಪಾವತಿಗಳನ್ನು ಪಡೆಯಲಿದ್ದಾರೆ
ಮಧ್ಯಪ್ರದೇಶದ ರೈತರು ₹1,156 ಕೋಟಿ, ರಾಜಸ್ಥಾನದ ರೈತರು ₹1,121 ಕೋಟಿ, ಛತ್ತೀಸ್ಗಢದ ರೈತರು ₹150 ಕೋಟಿ ಮತ್ತು ಇತರ ರಾಜ್ಯಗಳ ರೈತರು ₹773 ಕೋಟಿ ಕ್ಲೇಮ್ ಮೊತ್ತವನ್ನು (ಪರಿಹಾರ ಮೊತ್ತ) ಪಡೆಯಲಿದ್ದಾರೆ
Posted On:
10 AUG 2025 3:35PM by PIB Bengaluru
ಕೇಂದ್ರ ಸರ್ಕಾರವು ರೈತ ಸ್ನೇಹಿ ನೀತಿಗಳು ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಈ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರಾಜಸ್ಥಾನದ ಜುನ್ಜುನುವಿನಲ್ಲಿ 2025ರ ಆಗಸ್ಟ್ 11ರಂದು ಐತಿಹಾಸಿಕ ಬೆಳೆ ವಿಮಾ ಕ್ಲೇಮ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವಹಿಸಲಿದ್ದಾರೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ಲಾಲ್ ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಭಾಗೀರಥ ಚೌಧರಿ, ರಾಜಸ್ಥಾನ ಕೃಷಿ ಸಚಿವರಾದ ಡಾ. ಕಿರೋಡಿ ಲಾಲ್ ಮೀನಾ, ಸ್ಥಳೀಯ ಜನ ಪ್ರತಿನಿಧಿಗಳು, ರೈತ ಮುಖಂಡರು ಮತ್ತು ಸಚಿವಾಲಯ ಹಾಗು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಆಗಸ್ಟ್ 11 ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜುನ್ಜುನು ಏರ್ ಸ್ಟ್ರಿಪ್ ನಲ್ಲಿ ನಡೆಯಲಿದ್ದು, ಜುನ್ಜುನು, ಸಿಕಾರ್, ಜೈಪುರ, ಕೋಟ್ಪುಟ್ಲಿ-ಬೆಹ್ರೋರ್ ಮತ್ತು ಇತರ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಹಾಗು ದೇಶಾದ್ಯಂತ ವಿವಿಧ ರಾಜ್ಯಗಳಿಂದ ಲಕ್ಷಾಂತರ ರೈತರು ವರ್ಚುವಲ್ ಮೂಲಕ ಜೊತೆಗೂಡಲಿದ್ದಾರೆ.
ಗ್ರಾಮೀಣ ಭಾರತದ ಕೋಟ್ಯಂತರ ರೈತರ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರ ಮಹತ್ವದ ಉಪಕ್ರಮದ ಭಾಗವಾಗಿ, ದೇಶದಲ್ಲಿ ಮೊದಲ ಬಾರಿಗೆ, 3,200 ಕೋಟಿ ರೂ.ಗಳಿಗೂ ಹೆಚ್ಚಿನ ಬೆಳೆ ವಿಮಾ ಕ್ಲೇಮ್ ಪಾವತಿಗಳನ್ನು ಆಗಸ್ಟ್ 11 ರಂದು 30 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಡಿಜಿಟಲ್ ರೂಪದಲ್ಲಿ ವರ್ಗಾಯಿಸಲಾಗುವುದು. ಇದರಲ್ಲಿ, 1,100 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ರಾಜಸ್ಥಾನದ 7 ಲಕ್ಷಕ್ಕೂ ಹೆಚ್ಚು ರೈತರಿಗೆ ವಿತರಿಸಲಾಗುವುದು.
ಶ್ರೀ ಶಿವರಾಜ್ ಸಿಂಗ್ ಅವರ ಪ್ರಕಾರ, ರಾಜ್ಯವಾರು ಕ್ಲೇಮ್ ವಿತರಣೆಯಡಿಯಲ್ಲಿ, ಮಧ್ಯಪ್ರದೇಶದ ರೈತರು 1,156 ಕೋಟಿ ರೂ.ಗಳನ್ನು, ರಾಜಸ್ಥಾನದ ರೈತರು 1,121 ಕೋಟಿ ರೂ.ಗಳನ್ನು, ಛತ್ತೀಸ್ಗಢದ ರೈತರು 150 ಕೋಟಿ ರೂ.ಗಳನ್ನು ಮತ್ತು ಇತರ ರಾಜ್ಯಗಳ ರೈತರು 773 ಕೋಟಿ ರೂ.ಗಳನ್ನು ನೇರವಾಗಿ ಪಡೆಯಲಿದ್ದಾರೆ.
ತಂತ್ರಜ್ಞಾನ ಮತ್ತು ಪಾರದರ್ಶಕತೆ ಈ ಯೋಜನೆಯ ಪ್ರಮುಖ ಅಂಶಗಳಾಗಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರೈತರು ಸಕಾಲಿಕ ಬೆಳೆ ವಿಮಾ ಕ್ಲೈಮ್ ಪಾವತಿಗಳನ್ನು ಪಡೆಯುತ್ತಾರೆ, ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ, ಹೂಡಿಕೆ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಕೃಷಿಯಲ್ಲಿ ಅನಿಶ್ಚಿತತೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ರೈತರ ಹಿತಾಸಕ್ತಿಗಾಗಿ ಭಾರತ ಸರ್ಕಾರವು ಹೊಸ ಸರಳೀಕೃತ ಕ್ಲೈಮ್ ಇತ್ಯರ್ಥ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಕೃಷಿ ಸಚಿವರು ಮಾಹಿತಿ ನೀಡಿದರು, ಇದರಡಿ ರಾಜ್ಯದ ಪಾಲಿನ ಕಂತುಗಳ (ಪ್ರೀಮಿಯಂ) ಪಾವತಿಗಾಗಿ ಕಾಯದೆ ಕೇಂದ್ರ ಸಬ್ಸಿಡಿಯ ಆಧಾರದ ಮೇಲೆ ಮಾತ್ರ ಕ್ಲೈಮ್ ಗಳನ್ನು ಪ್ರಮಾಣಾನುಗುಣವಾಗಿ ಪಾವತಿಸಬಹುದು. 2025 ರ ಖಾರಿಫ್ ಋತುವಿನಿಂದ, ರಾಜ್ಯ ಸರ್ಕಾರವು ತನ್ನ ಸಬ್ಸಿಡಿ ಕೊಡುಗೆಯನ್ನು ವಿಳಂಬ ಮಾಡಿದರೆ, ಅದಕ್ಕೆ 12% ದಂಡ ವಿಧಿಸಲಾಗುತ್ತದೆ ಮತ್ತು ಅದೇ ರೀತಿ, ವಿಮಾ ಕಂಪನಿಗಳು ಪಾವತಿಗಳನ್ನು ವಿಳಂಬ ಮಾಡಿದರೆ, ರೈತರು 12% ದಂಡದ ಹಣವನ್ನು ಪಡೆಯುತ್ತಾರೆ.
2016ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ಈ ಯೋಜನೆಯು 78 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ಪಡೆದಿದೆ ಮತ್ತು 1.83 ಲಕ್ಷ ಕೋಟಿ ರೂ. ಮೌಲ್ಯದ ಕ್ಲೈಮ್ ಗಳನ್ನು ವಿತರಿಸಿದೆ, ಇಲ್ಲಿ ರೈತರು ಕೇವಲ 35,864 ಕೋಟಿ ರೂ.ಗಳನ್ನು ಪ್ರೀಮಿಯಂ ಆಗಿ ಪಾವತಿಸಿದ್ದಾರೆ ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು. ಇದರರ್ಥ ಪ್ರೀಮಿಯಂನ ಸರಾಸರಿ 5 ಪಟ್ಟು ಹೆಚ್ಚು ಕ್ಲೇಮ್ ಪಾವತಿಯಾಗಿದೆ, ಇದು ಸರ್ಕಾರದ ರೈತ ಸ್ನೇಹಿ ನೀತಿಯನ್ನು ಸೂಚಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಎಸ್-ಟೆಕ್, ವಿಂಡ್ಸ್ (YES-TECH, WINDS) ಪೋರ್ಟಲ್, ಎ.ಐ.ಡಿ.ಇ. (AIDE) ಮೊಬೈಲ್ ಅಪ್ಲಿಕೇಶನ್, ಕೃಷಿ ರಕ್ಷಕ ಪೋರ್ಟಲ್ ಮತ್ತು ಸಹಾಯವಾಣಿ ಸಂಖ್ಯೆ 14447 ನಂತಹ ಹಲವಾರು ತಾಂತ್ರಿಕ ಆವಿಷ್ಕಾರಗಳನ್ನು ಜಾರಿಗೆ ತರಲಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಇವು ಕ್ಲೇಮ್ ಇತ್ಯರ್ಥದ ವೇಗ ಮತ್ತು ಪಾರದರ್ಶಕತೆಯನ್ನು ಸುಧಾರಿಸಿದ್ದು ಮಾತ್ರವಲ್ಲದೆ ಹವಾಮಾನ ದತ್ತಾಂಶ ನಿಖರತೆಯನ್ನು ಹೆಚ್ಚಿಸಿವೆ ಮತ್ತು ರೈತರಿಗೆ ಗ್ರಾಮ ಮಟ್ಟದಲ್ಲಿ ನೋಂದಣಿ ಸೌಲಭ್ಯಗಳನ್ನು ಒದಗಿಸಿವೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ರೈತರ ಕಠಿಣ ಪರಿಶ್ರಮಕ್ಕೆ ಶಕ್ತಿ ನೀಡುತ್ತದೆ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
*****
(Release ID: 2154891)