ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ಆಯೋಜಿತವಾಗಿದ್ದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
07 AUG 2025 11:09AM by PIB Bengaluru
ನನ್ನ ಸಂಪುಟ ಸಹೋದ್ಯೋಗಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸೌಮ್ಯ ಸ್ವಾಮಿನಾಥನ್, ನೀತಿ ಆಯೋಗದ ಸದಸ್ಯ ಡಾ. ರಮೇಶ್ ಚಂದ್, ಸ್ವಾಮಿನಾಥನ್ ಕುಟುಂಬದ ಅನೇಕ ಸದಸ್ಯರು ಇಲ್ಲಿ ಉಪಸ್ಥಿತರಿರುವುದನ್ನು ನಾನು ನೋಡಿದ್ದೇನೆ - ನಾನು ಅವರಿಗೂ ನನ್ನ ಗೌರವಯುತ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಲ್ಲಿ ನೆರೆದಿರುವ ಎಲ್ಲಾ ವಿಜ್ಞಾನಿಗಳೆ, ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!
ನಿರ್ದಿಷ್ಟ ಯುಗ ಅಥವಾ ನಿರ್ದಿಷ್ಟ ಭೌಗೋಳಿಕತೆಗೆ ಸೀಮಿತವಾಗಿರದ ಕೆಲವು ವ್ಯಕ್ತಿಗಳಿದ್ದಾರೆ. ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅಂತಹ ಒಬ್ಬ ಶ್ರೇಷ್ಠ ವಿಜ್ಞಾನಿ, ಭಾರತ ಮಾತೆಯ ಹೆಮ್ಮೆಯ ಪುತ್ರ. ಅವರು ವಿಜ್ಞಾನವನ್ನು ಸಾರ್ವಜನಿಕ ಸೇವೆಯ ಮಾಧ್ಯಮವಾಗಿ ಪರಿವರ್ತಿಸಿದರು. ಅವರು ರಾಷ್ಟ್ರದ ಆಹಾರ ಭದ್ರತೆ ಖಚಿತಪಡಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಅವರು ಮುಂಬರುವ ಶತಮಾನಗಳ ತನಕ ಭಾರತದ ನೀತಿಗಳು ಮತ್ತು ಆದ್ಯತೆಗಳನ್ನು ರೂಪಿಸುವ ಪ್ರಜ್ಞೆಯನ್ನು ಜಾಗೃತಗೊಳಿಸಿದರು.
ಸ್ವಾಮಿನಾಥನ್ ಶತಮಾನೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ಆಗಸ್ಟ್ 7, ರಾಷ್ಟ್ರೀಯ ಕೈಮಗ್ಗ ದಿನವೂ ಆಗಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಕೈಮಗ್ಗ ವಲಯವು ಹೊಸ ಮನ್ನಣೆ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ. ಈ ರಾಷ್ಟ್ರೀಯ ಕೈಮಗ್ಗ ದಿನದಂದು ನಿಮ್ಮೆಲ್ಲರಿಗೂ ಮತ್ತು ಕೈಮಗ್ಗ ವಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಡಾ. ಸ್ವಾಮಿನಾಥನ್ ಅವರೊಂದಿಗಿನ ನನ್ನ ಒಡನಾಟವು ಹಲವು ವರ್ಷಗಳ ಹಿಂದಿನದು. ಗುಜರಾತ್‌ನಲ್ಲಿನ ಹಿಂದಿನ ಪರಿಸ್ಥಿತಿಗಳ ಬಗ್ಗೆ ಹಲವರಿಗೆ ತಿಳಿದಿದೆ. ಬರ ಮತ್ತು ಚಂಡಮಾರುತಗಳಿಂದಾಗಿ ಅಲ್ಲಿನ ಕೃಷಿ ಆಗಾಗ್ಗೆ ತೀವ್ರ ಸವಾಲುಗಳನ್ನು ಎದುರಿಸುತ್ತಿತ್ತು. ಕಚ್‌ನ ಮರುಭೂಮಿ ಸ್ಥಿರವಾಗಿ ವಿಸ್ತರಿಸುತ್ತಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ನಾವು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯ ಕೆಲಸ ಪ್ರಾರಂಭಿಸಿದೆವು. ಪ್ರೊಫೆಸರ್ ಸ್ವಾಮಿನಾಥನ್ ಈ ಉಪಕ್ರಮದಲ್ಲಿ ಅಪಾರ ಆಸಕ್ತಿ ತೋರಿಸಿದ್ದರು ಎಂದು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಅವರು ಉದಾರವಾಗಿ ತಮ್ಮ ಸಲಹೆಗಳನ್ನು ನೀಡಿದರು, ನಮಗೆ ಮಾರ್ಗದರ್ಶನ ನೀಡಿದರು. ಅವರ ಕೊಡುಗೆಗಳು ಈ ಪ್ರಯತ್ನದ ಯಶಸ್ಸಿಗೆ ಬಹಳ ಸಹಾಯ ಮಾಡಿದವು. ಸುಮಾರು 20 ವರ್ಷಗಳ ಹಿಂದೆ ನಾನು ತಮಿಳುನಾಡಿನಲ್ಲಿರುವ ಅವರ ಸಂಶೋಧನಾ ಪ್ರತಿಷ್ಠಾನದ ಕೇಂದ್ರಕ್ಕೆ ಭೇಟಿ ನೀಡಿದ್ದೆ. 2017ರಲ್ಲಿ ಅವರ 'ದಿ ಕ್ವೆಸ್ಟ್ ಫಾರ್ ಎ ವರ್ಲ್ಡ್ ವಿಥೌಟ್ ಹಂಗರ್' ಪುಸ್ತಕ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿತು. 2018ರಲ್ಲಿ, ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಉದ್ಘಾಟನೆಯಾದಾಗ, ನಾವು ಮತ್ತೊಮ್ಮೆ ಅವರ ಮಾರ್ಗದರ್ಶನದಿಂದ ಪ್ರಯೋಜನ ಪಡೆದೆವು. ಅವರೊಂದಿಗಿನ ಪ್ರತಿ ಭೇಟಿಯೂ ನನಗೆ ಕಲಿಕೆಯ ಅನುಭವವಾಗಿತ್ತು. ಅವರು ಒಮ್ಮೆ "ವಿಜ್ಞಾನವು ಕೇವಲ ಆವಿಷ್ಕಾರವಲ್ಲ, ಆದರೆ ಅದು ವಿತರಣೆಯ ಬಗ್ಗೆಯಾಗಿದೆ" ಎಂದು ಹೇಳಿದ್ದರು, ಅವರು ಇದನ್ನು ತಮ್ಮ ಕಾರ್ಯಗಳ ಮೂಲಕ ಪ್ರದರ್ಶಿಸಿದರು. ಅವರು ಸಂಶೋಧನೆಗೆ ಮಾತ್ರ ಸೀಮಿತವಾಗಿರಲಿಲ್ಲ, ಅವರು ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದರು. ಇಂದಿಗೂ ಸಹ, ಅವರ ವಿಧಾನ ಮತ್ತು ಆಲೋಚನೆಗಳು ಭಾರತದ ಕೃಷಿ ಕ್ಷೇತ್ರದಾದ್ಯಂತ ಗೋಚರಿಸುತ್ತವೆ. ಅವರು ನಿಜವಾದ ಅರ್ಥದಲ್ಲಿ, ಭಾರತ ಮಾತೆಯ ಪುತ್ರ ರತ್ನವಾಗಿದ್ದರು. ನಮ್ಮ ಸರ್ಕಾರವು ಡಾ. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡುವ ಅವಕಾಶ ಪಡೆದಿದ್ದು ನನ್ನ ಗೌರವವೆಂದು ನಾನು ಭಾವಿಸುತ್ತೇನೆ.
ಸ್ನೇಹಿತರೆ,
ಡಾ. ಸ್ವಾಮಿನಾಥನ್ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಧ್ಯೇಯ ಪ್ರಾರಂಭಿಸಿದರು. ಆದಾಗ್ಯೂ, ಅವರ ಗುರುತು ಹಸಿರು ಕ್ರಾಂತಿಯನ್ನು ಮೀರಿ ವಿಸ್ತರಿಸಿತು. ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆ ಮತ್ತು ಏಕಸಂಸ್ಕೃತಿ ಕೃಷಿಯ ಅಪಾಯಗಳ ಬಗ್ಗೆ ಅವರು ನಿರಂತರವಾಗಿ ರೈತರಲ್ಲಿ ಜಾಗೃತಿ ಮೂಡಿಸಿದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಧಾನ್ಯ ಉತ್ಪಾದನೆ ಹೆಚ್ಚಿಸಲು ಅವರು ಕೆಲಸ ಮಾಡುತ್ತಲೇ, ಪರಿಸರ ಮತ್ತು ಭೂಮಿ ತಾಯಿಯ ಬಗ್ಗೆಯೂ ಸಮಾನವಾಗಿ ಕಾಳಜಿ ವಹಿಸಿದ್ದರು. ಎರಡರ ನಡುವೆ ಸಮತೋಲನವನ್ನು ಸಾಧಿಸಲು ಮತ್ತು ಈ ಸವಾಲುಗಳನ್ನು ಪರಿಹರಿಸಲು, ಅವರು ಹಸಿರು ಕ್ರಾಂತಿಯ ಪರಿಕಲ್ಪನೆಯನ್ನು ಪರಿಚಯಿಸಿದರು. ಗ್ರಾಮೀಣ ಸಮುದಾಯಗಳು ಮತ್ತು ರೈತರನ್ನು ಸಬಲೀಕರಣಗೊಳಿಸುವ 'ಜೈವಿಕ-ಗ್ರಾಮಗಳು' ಎಂಬ ಕಲ್ಪನೆಯನ್ನು ಅವರು ಪ್ರಸ್ತಾಪಿಸಿದರು. 'ಸಮುದಾಯ ಬೀಜ ಬ್ಯಾಂಕುಗಳು' ಮತ್ತು 'ಅವಕಾಶ ಬೆಳೆಗಳು' ಅಂತಹ ಪರಿಕಲ್ಪನೆಗಳನ್ನು ಅವರು ಉತ್ತೇಜಿಸಿದರು.
ಡಾ. ಸ್ವಾಮಿನಾಥನ್ ಅವರು ಹವಾಮಾನ ಬದಲಾವಣೆ ಮತ್ತು ಪೋಷಣೆಯಂತಹ ಸವಾಲುಗಳಿಗೆ ಪರಿಹಾರವು ನಾವು ಮರೆತಿರುವ ಬೆಳೆಗಳಲ್ಲಿಯೇ ಇದೆ ಎಂದು ನಂಬಿದ್ದರು. ಅವರ ಗಮನ ಬರ ಸಹಿಷ್ಣುತೆ ಮತ್ತು ಉಪ್ಪು ಸಹಿಷ್ಣುತೆಯ ಮೇಲೆ ಇತ್ತು. ಯಾರೂ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಸಮಯದಲ್ಲಿ ಅವರು ಸಿರಿಧಾನ್ಯ – ಶ್ರೀಅನ್ನ ಉತ್ಪಾದನೆ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ವರ್ಷಗಳ ಹಿಂದೆ, ಡಾ. ಸ್ವಾಮಿನಾಥನ್ ಮ್ಯಾಂಗ್ರೋವ್‌ಗಳ ಆನುವಂಶಿಕ ಗುಣಲಕ್ಷಣಗಳನ್ನು ಭತ್ತಕ್ಕೆ ವರ್ಗಾಯಿಸಬೇಕೆಂದು ಶಿಫಾರಸು ಮಾಡಿದ್ದರು, ಇದರಿಂದ ಬೆಳೆಗಳು ಹೆಚ್ಚು ಹವಾಮಾನ-ನಿರೋಧಕವಾಗುತ್ತವೆ. ಇಂದು ನಾವು ಹವಾಮಾನ ಹೊಂದಾಣಿಕೆಯ ಬಗ್ಗೆ ಮಾತನಾಡುವಾಗ, ಅವರು ತಮ್ಮ ಚಿಂತನೆ ಅಥವಾ ವಿಚಾರಧಾರೆಯಲ್ಲಿ ಎಷ್ಟು ಮುಂದಿದ್ದರು ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ.
ಸ್ನೇಹಿತರೆ,
ಇಂದು ಜೀವವೈವಿಧ್ಯವು ಜಾಗತಿಕ ಕಾಳಜಿಯಾಗಿದೆ, ವಿಶ್ವಾದ್ಯಂತದ ಸರ್ಕಾರಗಳು ಅದನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಡಾ. ಸ್ವಾಮಿನಾಥನ್ ಒಂದು ಹೆಜ್ಜೆ ಮುಂದೆ ಹೋಗಿ 'ಜೈವಿಕ ಸಂತೋಷ'ದ ಕಲ್ಪನೆಯನ್ನು ನಮಗೆ ನೀಡಿದರು. ಇಂದು ಆ ಪರಿಕಲ್ಪನೆ ಆಚರಿಸಲು ನಾವು ಇಲ್ಲಿದ್ದೇವೆ. ಜೀವವೈವಿಧ್ಯದ ಶಕ್ತಿಯು ಸ್ಥಳೀಯ ಸಮುದಾಯಗಳ ಜೀವನದಲ್ಲಿ ಗಮನಾರ್ಹ ಪರಿವರ್ತನೆ ತರಬಹುದು ಎಂದು ಡಾ. ಸ್ವಾಮಿನಾಥನ್ ಹೇಳುತ್ತಿದ್ದರು. ಸ್ಥಳೀಯ ಸಂಪನ್ಮೂಲಗಳ ಬಳಕೆಯ ಮೂಲಕ, ಜೀವನೋಪಾಯದ ಹೊಸ ವಿಧಾನಗಳನ್ನು ಸೃಷ್ಟಿಸಬಹುದು. ಅವರ ಸ್ವಭಾವಕ್ಕೆ ಅನುಗುಣವಾಗಿ, ಅವರು ತಮ್ಮ ಆಲೋಚನೆಗಳನ್ನು ನೆಲದ ಮೇಲೆ ಕಾರ್ಯಗತಗೊಳಿಸುವಲ್ಲಿ ಪರಿಣತರಾಗಿದ್ದರು. ತಮ್ಮ ಸಂಶೋಧನಾ ಪ್ರತಿಷ್ಠಾನದ ಮೂಲಕ, ಅವರು ಹೊಸ ಆವಿಷ್ಕಾರಗಳ ಪ್ರಯೋಜನಗಳನ್ನು ರೈತರಿಗೆ ತರಲು ನಿರಂತರವಾಗಿ ಶ್ರಮಿಸಿದರು. ನಮ್ಮ ಸಣ್ಣ ರೈತರು, ನಮ್ಮ ಮೀನುಗಾರರು, ನಮ್ಮ ಬುಡಕಟ್ಟು ಸಮುದಾಯಗಳು - ಎಲ್ಲರೂ ಅವರ ಪ್ರಯತ್ನಗಳಿಂದ ಅಪಾರ ಪ್ರಯೋಜನ ಪಡೆದಿದ್ದಾರೆ.
ಸ್ನೇಹಿತರೆ,
ಇಂದು ನಾನು ವಿಶೇಷವಾಗಿ ಸಂತೋಷಪಡುತ್ತೇನೆ, ಏಕೆಂದರೆ ಪ್ರೊಫೆಸರ್ ಸ್ವಾಮಿನಾಥನ್ ಅವರ ಪರಂಪರೆಯನ್ನು ಗೌರವಿಸಲು ನಾವು 'ಎಂ.ಎಸ್. ಸ್ವಾಮಿನಾಥನ್ ಆಹಾರ ಮತ್ತು ಶಾಂತಿ ಪ್ರಶಸ್ತಿ' ಸ್ಥಾಪಿಸಿದ್ದೇವೆ. ಆಹಾರ ಭದ್ರತೆ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಕ್ತಿಗಳಿಗೆ ಈ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಆಹಾರ ಮತ್ತು ಶಾಂತಿ-ಎರಡರ ನಡುವಿನ ಸಂಬಂಧವು ತಾತ್ವಿಕ ಮಾತ್ರವಲ್ಲ, ಆಳವಾದ ಪ್ರಾಯೋಗಿಕವೂ ಆಗಿದೆ. ನಮ್ಮ ಉಪನಿಷತ್ತುಗಳಲ್ಲಿ ಹೀಗೆ ಹೇಳಲಾಗಿದೆ: ಅನ್ನಮ್ ನ ನಿನ್ದ್ಯಾತ್, ತದ್ ವ್ರತಮ್. ಪ್ರಾಣೋ ವಾ ಅನ್ನಮ್. ಶರೀರಮ್ ಅನ್ನದಮ್. ಪ್ರಾಣೇ ಶರೀರಂ ಪ್ರತಿಷ್ಠಿತಮ್ । ಅಂದರೆ, ಒಬ್ಬರು ಆಹಾರವನ್ನು ಅಗೌರವಗೊಳಿಸಬಾರದು. ಆಹಾರವು ಜೀವನವನ್ನು ಬೆಂಬಲಿಸುತ್ತದೆ.
ಆದ್ದರಿಂದ ಸ್ನೇಹಿತರೆ,
ಆಹಾರದ ಬಿಕ್ಕಟ್ಟು ಉಂಟಾದರೆ, ಜೀವನ ಬಿಕ್ಕಟ್ಟು ಉಂಟಾಗುತ್ತದೆ. ಲಕ್ಷಾಂತರ ಜನರ ಜೀವಗಳು ಅಪಾಯದಲ್ಲಿದ್ದಾಗ, ಜಾಗತಿಕ ಅಶಾಂತಿ ಸ್ವಾಭಾವಿಕವಾಗಿಯೇ ಬರುತ್ತದೆ. ಅದಕ್ಕಾಗಿಯೇ ಎಂ.ಎಸ್. ಸ್ವಾಮಿನಾಥನ್ 'ಆಹಾರ ಮತ್ತು ಶಾಂತಿ ಪ್ರಶಸ್ತಿ' ಅತ್ಯಂತ ಮಹತ್ವದ್ದಾಗಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದ ನೈಜೀರಿಯಾದ ಪ್ರತಿಭಾನ್ವಿತ ವಿಜ್ಞಾನಿ ಪ್ರೊಫೆಸರ್ ಅಡೆಮೊಲಾ ಅಡಿನೆಲೆ(ಅಡಿನೇಲ್) ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದು ಭಾರತೀಯ ಕೃಷಿ ಉನ್ನತ ಎತ್ತರವನ್ನು ತಲುಪಿದೆ, ಡಾ. ಸ್ವಾಮಿನಾಥನ್ ಎಲ್ಲೇ ಇದ್ದರೂ ಅವರು ಹೆಮ್ಮೆಪಡುತ್ತಾರೆ ಎಂಬುದು ನನಗೆ ಖಚಿತವಾಗಿದೆ. ಇಂದು ಭಾರತವು ಹಾಲು, ದ್ವಿದಳ ಧಾನ್ಯಗಳು ಮತ್ತು ಸೆಣಬಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಕ್ಕಿ, ಗೋಧಿ, ಹತ್ತಿ, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಭಾರತವು ವಿಶ್ವದ 2ನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ವರ್ಷ ಭಾರತವು ತನ್ನ ಅತ್ಯಧಿಕ ಆಹಾರ ಧಾನ್ಯ ಉತ್ಪಾದನೆ ಮಾಡಿದೆ. ಎಣ್ಣೆಬೀಜಗಳಲ್ಲಿಯೂ ನಾವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದೇವೆ. ಸೋಯಾಬೀನ್, ಸಾಸಿವೆ ಮತ್ತು ನೆಲಗಡಲೆ ಉತ್ಪಾದನೆಯು ದಾಖಲೆಯ ಮಟ್ಟಕ್ಕೆ ಏರಿದೆ.
ಸ್ನೇಹಿತರೆ,
ನಮಗೆ ನಮ್ಮ ರೈತರ ಕಲ್ಯಾಣವೇ ಹೆಚ್ಚಿನ ಆದ್ಯತೆಯಾಗಿದೆ. ಭಾರತವು ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ವೈಯಕ್ತಿಕವಾಗಿ ಭಾರೆ ಬೆಲೆ ತೆರಬೇಕಾಗಬಹುದು ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ, ಆದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ನನ್ನ ದೇಶದ ರೈತರಿಗಾಗಿ, ನನ್ನ ದೇಶದ ಮೀನುಗಾರರಿಗಾಗಿ, ನನ್ನ ದೇಶದ ಜಾನುವಾರು ಸಾಕಣೆದಾರರಿಗಾಗಿ, ಭಾರತವು ಇಂದು ಸಿದ್ಧವಾಗಿದೆ. ರೈತರ ಆದಾಯ ಹೆಚ್ಚಿಸಲು, ಅವರ ಕೃಷಿ ವೆಚ್ಚ ಕಡಿಮೆ ಮಾಡಲು ಮತ್ತು ಹೊಸ ಆದಾಯ ಮೂಲಗಳನ್ನು ಸೃಷ್ಟಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ.
ಸ್ನೇಹಿತರೆ,
ನಮ್ಮ ಸರ್ಕಾರವು ರೈತರ ಬಲವನ್ನು ರಾಷ್ಟ್ರದ ಪ್ರಗತಿಯ ಭದ್ರ ಬುನಾದಿ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಇತ್ತೀಚಿನ ವರ್ಷಗಳಲ್ಲಿ ರೂಪಿಸಲಾದ ನೀತಿಗಳು ರೈತರಿಗೆ ಸಹಾಯ ಮಾಡುವ ಜತೆಗೆ, ಅವರಲ್ಲಿ ವಿಶ್ವಾಸ ಬೆಳೆಸಲು ಪ್ರಯತ್ನಿಸಿವೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಒದಗಿಸಲಾದ ನೇರ ಆರ್ಥಿಕ ಬೆಂಬಲವು ಸಣ್ಣ ರೈತರಿಗೆ ಆತ್ಮವಿಶ್ವಾಸ ನೀಡಿದೆ. ಪಿಎಂ ಫಸಲ್ ಬಿಮಾ ಯೋಜನೆ ಅವರಿಗೆ ಅಪಾಯದಿಂದ ರಕ್ಷಣೆ ನೀಡಿದೆ. ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮೂಲಕ ಪರಿಹರಿಸಲಾಗಿದೆ. 10,000 ಎಫ್‌ಪಿಒಗಳ ರಚನೆಯು ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಿದೆ. ಸಹಕಾರಿ ಸಂಘಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ಗ್ರಾಮೀಣ ಆರ್ಥಿಕತೆಗೆ ಹೊಸ ಆವೇಗ ನೀಡಿದೆ. ಇ-ನ್ಯಾಮ್ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಸುಲಭವಾಗಿದೆ. ಪಿಎಂ ಕಿಸಾನ್ ಸಂಪದ ಯೋಜನೆಯು ಹೊಸ ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಂಗ್ರಹಣಾ ಮೂಲಸೌಕರ್ಯಗಳ ಸ್ಥಾಪನೆಯನ್ನು ವೇಗಗೊಳಿಸಿದೆ. ಇತ್ತೀಚೆಗೆ, ಪಿಎಂ-ಧನ್ ಧಾನ್ಯ ಯೋಜನೆಯನ್ನು ಸಹ ಅನುಮೋದಿಸಲಾಗಿದೆ. ಈ ಯೋಜನೆಯಡಿ, ಕೃಷಿಯಲ್ಲಿ ಹಿಂದುಳಿದಿರುವ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳ ರೈತರಿಗೆ ಮೂಲಸೌಕರ್ಯ ಮತ್ತು ಆರ್ಥಿಕ ನೆರವು ನೀಡುವ ಮೂಲಕ, ಕೃಷಿಯಲ್ಲಿ ಹೊಸ ಆತ್ಮವಿಶ್ವಾಸ ತುಂಬಲಾಗುತ್ತಿದೆ.
ಸ್ನೇಹಿತರೆ,
21ನೇ ಶತಮಾನದ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದೆ. ಈ ಗುರಿಯನ್ನು ಪ್ರತಿಯೊಂದು ವರ್ಗ, ಪ್ರತಿಯೊಂದು ವೃತ್ತಿಯ ಕೊಡುಗೆಯ ಮೂಲಕ ಮಾತ್ರ ಸಾಧಿಸಲಾಗುತ್ತದೆ. ಡಾ. ಸ್ವಾಮಿನಾಥನ್ ಅವರಿಂದ ಸ್ಫೂರ್ತಿ ಪಡೆದು, ನಮ್ಮ ವಿಜ್ಞಾನಿಗಳಿಗೆ ಈಗ ಇತಿಹಾಸ ಸೃಷ್ಟಿಸಲು ಮತ್ತೊಂದು ಅವಕಾಶವಿದೆ. ಹಿಂದಿನ ಪೀಳಿಗೆಯ ವಿಜ್ಞಾನಿಗಳು ಆಹಾರ ಭದ್ರತೆಯನ್ನು ಖಚಿತಪಡಿಸಿದರು, ಈಗ ಪೌಷ್ಠಿಕಾಂಶ ಭದ್ರತೆಯತ್ತ ಗಮನ ಹರಿಸುವ ಅವಶ್ಯಕತೆಯಿದೆ. ಜನರ ಆರೋಗ್ಯ ಸುಧಾರಿಸಲು ನಾವು ಜೈವಿಕ-ಬಲವರ್ಧಿತ ಮತ್ತು ಪೌಷ್ಟಿಕಾಂಶ-ಭರಿತ ಬೆಳೆಗಳನ್ನು ಬೆಳೆಯಲು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಬೇಕು. ರಾಸಾಯನಿಕಗಳ ಬಳಕೆ ಕಡಿಮೆ ಮಾಡುವಲ್ಲಿ ಮತ್ತು ನೈಸರ್ಗಿಕ ಕೃಷಿ ಉತ್ತೇಜಿಸುವಲ್ಲಿ ನಾವು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು.
ಸ್ನೇಹಿತರೆ,
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ನಾವು ಸಾಧ್ಯವಾದಷ್ಟು ಹವಾಮಾನ-ನಿರೋಧಕ ಬೆಳೆಗಳ ವಿಧಗಳನ್ನು ಅಭಿವೃದ್ಧಿಪಡಿಸಬೇಕು. ಬರ-ಸಹಿಷ್ಣು, ಶಾಖ-ನಿರೋಧಕ ಮತ್ತು ಪ್ರವಾಹ-ಹೊಂದಾಣಿಕೆಯ ಬೆಳೆಗಳ ಮೇಲೆ ಗಮನ ಹರಿಸಬೇಕು. ಯಾವ ಬೆಳೆಗಳು ಯಾವ ಮಣ್ಣಿನ ಪ್ರಕಾರಗಳಿಗೆ ಸೂಕ್ತವಾಗಿವೆ ಎಂಬುದನ್ನು ಗುರುತಿಸುವ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದರ ಜತೆಗೆ, ನಾವು ಕೈಗೆಟುಕುವ ಮಣ್ಣಿನ ಪರೀಕ್ಷಾ ಸಾಧನಗಳು ಮತ್ತು ಪೋಷಕಾಂಶ ನಿರ್ವಹಣೆಯ ಪರಿಣಾಮಕಾರಿ ವಿಧಾನಗಳನ್ನು ಸಹ ಅಭಿವೃದ್ಧಿಪಡಿಸಬೇಕು.
ಸ್ನೇಹಿತರೆ,
ಸೌರಶಕ್ತಿ ಚಾಲಿತ ಸೂಕ್ಷ್ಮ ನೀರಾವರಿ ಕ್ಷೇತ್ರದಲ್ಲಿ ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ನಾವು ಹನಿ ನೀರಾವರಿ ವ್ಯವಸ್ಥೆಗಳು ಮತ್ತು ನಿಖರ ನೀರಾವರಿಯನ್ನು ಹೆಚ್ಚು ವ್ಯಾಪಕ ಮತ್ತು ಪರಿಣಾಮಕಾರಿಯಾಗಿ ಮಾಡಬೇಕು. ಉಪಗ್ರಹ ದತ್ತಾಂಶ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನವನ್ನು ಸಂಯೋಜಿಸಬಹುದೇ? ಬೆಳೆ ಇಳುವರಿಯ ಮುನ್ಸೂಚನೆ ನೀಡುವ, ಕೀಟಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಬಿತ್ತನೆಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬಹುದೇ? ಅಂತಹ ನೈಜ-ಸಮಯದ ನಿರ್ಧಾರ ಬೆಂಬಲ ವ್ಯವಸ್ಥೆಯನ್ನು ಪ್ರತಿ ಜಿಲ್ಲೆಯಲ್ಲಿ ಲಭ್ಯವಾಗುವಂತೆ ಮಾಡಬಹುದೇ? ನೀವೆಲ್ಲರೂ ಕೃಷಿ-ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು. ಇಂದು ಹೆಚ್ಚಿನ ಸಂಖ್ಯೆಯ ಸಂಶೋಧನಾ ಮನಸ್ಥಿತಿಯ ಯುವಕರು ಕೃಷಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ. ನೀವು, ನಿಮ್ಮ ಅನುಭವದೊಂದಿಗೆ, ಅವರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದರೆ, ಅವರು ಅಭಿವೃದ್ಧಿಪಡಿಸುವ ಉತ್ಪನ್ನಗಳು ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಬಳಕೆದಾರ ಸ್ನೇಹಿಯಾಗಿರುತ್ತವೆ.
ಸ್ನೇಹಿತರೆ,
ನಮ್ಮ ರೈತರು ಮತ್ತು ಕೃಷಿ ಸಮುದಾಯಗಳು ಸಾಂಪ್ರದಾಯಿಕ ಜ್ಞಾನ ಭಂಡಾರವನ್ನು ಹೊಂದಿವೆ. ಸಾಂಪ್ರದಾಯಿಕ ಭಾರತೀಯ ಕೃಷಿ ಪದ್ಧತಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವ ಮೂಲಕ, ಸಮಗ್ರ ಜ್ಞಾನ ನೆಲೆಯನ್ನು ರೂಪಿಸಬಹುದು. ಬೆಳೆ ವೈವಿಧ್ಯೀಕರಣವು ಇಂದು ರಾಷ್ಟ್ರೀಯ ಆದ್ಯತೆಯಾಗಿದೆ. ನಾವು ನಮ್ಮ ರೈತರಿಗೆ ಅದರ ಮಹತ್ವವನ್ನು ವಿವರಿಸಬೇಕು. ಪ್ರಯೋಜನಗಳು ಯಾವುವು ಮತ್ತು ಅದನ್ನು ಅಳವಡಿಸಿಕೊಳ್ಳದಿರುವ ಪರಿಣಾಮಗಳು ಏನಾಗಿರಬಹುದು ಎಂಬುದನ್ನು ನಾವು ತಿಳಿಸಬೇಕು. ಈ ಕಾರ್ಯದಲ್ಲಿ, ನೀವು ನಿಜವಾದ ಪರಿಣಾಮ ಬೀರಲು ಉತ್ತಮ ಸ್ಥಾನದಲ್ಲಿದ್ದೀರಿ.
ಸ್ನೇಹಿತರೆ,
ಕಳೆದ ವರ್ಷ ಆಗಸ್ಟ್ 11ರಂದು ನಾನು ಪುಸಾ ಕ್ಯಾಂಪಸ್‌ಗೆ ಭೇಟಿ ನೀಡಿದಾಗ, ಕೃಷಿ ತಂತ್ರಜ್ಞಾನವನ್ನು 'ಪ್ರಯೋಗಾಲಯದಿಂದ ಭೂಮಿಗೆ' ಕೊಂಡೊಯ್ಯುವ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ನಾನು ಒತ್ತಾಯಿಸಿದ್ದೆ. ಮೇ-ಜೂನ್‌ನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಪ್ರಾರಂಭಿಸಲಾಗಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಮೊದಲ ಬಾರಿಗೆ, ದೇಶದ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 2,200 ಸಂಖ್ಯೆಯ ವಿಜ್ಞಾನಿಗಳ ತಂಡಗಳು ಭಾಗವಹಿಸಿದ್ದವು. 60,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಯಿತು. ಮುಖ್ಯವಾಗಿ, ಸುಮಾರು 1.25 ಕೋಟಿ ಜಾಗೃತ ಮತ್ತು ಮಾಹಿತಿಯುಕ್ತ ರೈತರೊಂದಿಗೆ ನೇರ ಸಂಪರ್ಕ ಸ್ಥಾಪಿಸಲಾಯಿತು. ಹೆಚ್ಚು ಹೆಚ್ಚು ರೈತರನ್ನು ತಲುಪಲು ನಮ್ಮ ವಿಜ್ಞಾನಿಗಳು ಮಾಡಿದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಸ್ನೇಹಿತರೆ,
ಕೃಷಿ ಎಂದರೆ ಕೇವಲ ಬೆಳೆಗಳ ಬಗ್ಗೆ ಅಲ್ಲ, ಕೃಷಿಯೇ ಜೀವನ ಎಂದು ಡಾ. ಎಂ. ಎಸ್. ಸ್ವಾಮಿನಾಥನ್ ನಮಗೆ ಕಲಿಸಿದರು. ಈ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಘನತೆ, ಪ್ರತಿಯೊಂದು ಕೃಷಿ ಸಮುದಾಯದ ಯೋಗಕ್ಷೇಮ ಮತ್ತು ಪ್ರಕೃತಿಯ ರಕ್ಷಣೆ - ಇವು ನಮ್ಮ ಸರ್ಕಾರದ ಕೃಷಿ ನೀತಿಯ ಬಲವನ್ನು ರೂಪಿಸುತ್ತವೆ. ನಾವು ವಿಜ್ಞಾನ ಮತ್ತು ಸಮಾಜವನ್ನು ಒಟ್ಟಿಗೆ ಹೆಣೆಯಬೇಕು, ಸಣ್ಣ ರೈತರ ಹಿತಾಸಕ್ತಿಗಳನ್ನು ನಮ್ಮ ಪ್ರಯತ್ನಗಳ ಹೃದಯದಲ್ಲಿ ಇಡಬೇಕು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು. ಈ ಗುರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಡಾ. ಸ್ವಾಮಿನಾಥನ್ ಅವರ ಸ್ಫೂರ್ತಿಯಿಂದ ನಮಗೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ ಮುಂದುವರಿಯೋಣ.
ಮತ್ತೊಮ್ಮೆ, ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು.
*****
(Release ID: 2153997)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu