ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸೃಜನಶೀಲ ಸ್ವಾತಂತ್ರ್ಯದ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದೆ, ʻಮಾಹಿತಿ ತಂತ್ರಜ್ಞಾನ ನಿಯಮಗಳು-2021ʼರ ಮೂಲಕ ʻಒ.ಟಿ.ಟಿʼ ಮೇಲ್ವಿಚಾರಣೆಯನ್ನು ಜಾರಿಗೊಳಿಸಲಾಗಿದೆ; ʻಒ.ಟಿ.ಟಿʼ ಕಂಟೆಂಟ್‌ ನಿಯಂತ್ರಿಸಲು ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನ ಜಾರಿಯಲ್ಲಿದೆ


ಸಮಗ್ರ ಮಾರ್ಗಸೂಚಿಗಳು ಮುದ್ರಣ, ಡಿಜಿಟಲ್ ಮತ್ತು ದೃಶ್ಯ-ಶ್ರಾವ್ಯ (ಎ.ವಿ.) ಮಾಧ್ಯಮಗಳಲ್ಲಿ ಸರ್ಕಾರಿ ಸಂದೇಶವನ್ನು ಪ್ರೇರೇಪಿಸುತ್ತವೆ

ʻಎ.ವಿ.ಜಿ.ಸಿ-ಎಕ್ಸ್.ಆರ್‌ʼಗಾಗಿ ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಜಾಗತಿಕ ಟೆಕ್ ದೈತ್ಯರೊಂದಿಗೆ ಸರ್ಕಾರ ಪಾಲುದಾರಿಕೆ ಹೊಂದಿದೆ; ʻಎ.ವಿ.ಜಿ.ಸಿ-ಎಕ್ಸ್.ಆರ್‌ʼನಲ್ಲಿ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ತರಬೇತಿ ನೀಡಲು 392.85 ಕೋಟಿ ರೂ.ಗಳ ಹೂಡಿಕೆಯೊಂದಿಗೆ ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ʼ(ಐ.ಐ.ಸಿ.ಟಿ) ಪ್ರಾರಂಭಿಸಲಾಗಿದೆ

Posted On: 06 AUG 2025 2:56PM by PIB Bengaluru

ಸೃಜನಶೀಲ ಸ್ವಾತಂತ್ರ್ಯ ಮತ್ತು .ಟಿ.ಟಿ ನಿಯಂತ್ರಣ:

ಸೃಜನಶೀಲ ಸ್ವಾತಂತ್ರ್ಯ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನದ 19ನೇ ವಿಧಿಯಡಿ ರಕ್ಷಿಸಲಾಗಿದೆ.

ʻಒ.ಟಿ.ಟಿ’ ವೇದಿಕೆಗಳಲ್ಲಿ ಹಾನಿಕಾರಕ ಕಂಟೆಂಟ್‌ನ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಲು ಸರ್ಕಾರವು ʻಮಾಹಿತಿ ತಂತ್ರಜ್ಞಾನ ಕಾಯ್ದೆ-2000ʼರ ಅಡಿಯಲ್ಲಿ ʻಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ, ನೈತಿಕ ಸಂಹಿತೆ) ನಿಯಮಗಳು-2021ʼ ಅನ್ನು 25.02.2021 ರಂದು ಅಧಿಸೂಚನೆ ಮೂಲಕ ಜಾರಿಗೊಳಿಸಿದೆ.

● ಈ ನಿಯಮಗಳ ಭಾಗ-III ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ (ಒ.ಟಿ.ಟಿ ವೇದಿಕೆಗಳು) ಪ್ರಸಾರಕರಿಗೆ ನೀತಿ ಸಂಹಿತೆಯನ್ನು ಒದಗಿಸುತ್ತದೆ.

● ಸದ್ಯಕ್ಕೆ ಜಾರಿಯಲ್ಲಿರುವ ಕಾನೂನಿನಿಂದ ನಿಷೇಧಿಸಲಾದ ಯಾವುದೇ ಕಂಟೆಂಟ್‌ ಪ್ರಸಾರ ಮಾಡದಿರುವ ಬಾಧ್ಯತೆಯನ್ನು ಒ.ಟಿ.ಟಿ ವೇದಿಕೆಗಳು ಹೊಂದಿವೆ.

ನಿಯಮಗಳು ಕೆಳಗಿನಂತೆ ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತವೆ:

ಹಂತ I: ಕಂಟೆಂಟ್‌ ಪ್ರಸಾರಕರಿಂದ ಸ್ವಯಂ ನಿಯಂತ್ರಣ

ಹಂತ II: ಪ್ರಸಾರಕರು ರಚಿಸಿದ ಸ್ವಯಂ-ನಿಯಂತ್ರಕ ಸಮಿತಿಗಳಿಂದ ಸ್ವಯಂ ನಿಯಂತ್ರಣ

ಹಂತ III - ಕೇಂದ್ರ ಸರ್ಕಾರದ ಮೇಲ್ವಿಚಾರಣಾ ಕಾರ್ಯವಿಧಾನ

ಸಚಿವಾಲಯವು ಸ್ವೀಕರಿಸಿದ ದೂರುಗಳನ್ನು ʻಮಾಹಿತಿ ತಂತ್ರಜ್ಞಾನ ನಿಯಮಗಳು-2021ʼರ ಪ್ರಕಾರ ಪರಿಹಾರಕ್ಕಾಗಿ ಸಂಬಂಧಪಟ್ಟ ಒ.ಟಿ.ಟಿ ವೇದಿಕೆಗಳಿಗೆ ಕಳುಹಿಸಲಾಗುತ್ತದೆ.

ಸಂಬಂಧಿತ ಸಚಿವಾಲಯಗಳೊಂದಿಗೆ ಸೂಕ್ತ ಸಮಾಲೋಚನೆಯ ನಂತರ, ಅಶ್ಲೀಲ ಕಂಟೆಂಟ್‌ ಪ್ರದರ್ಶಿಸಿದ್ದಕ್ಕಾಗಿ ಸರ್ಕಾರವು 43 ಒ.ಟಿ.ಟಿ ವೇದಿಕೆಗಳನ್ನು ಈಗಾಗಲೇ ನಿರ್ಬಂಧಿಸಿದೆ.

ಸರ್ಕಾರಿ ಜಾಹೀರಾತುಗಳು:

ಪತ್ರಿಕೆಗಳು, ಟಿವಿ / ರೇಡಿಯೋ, ಹೊರಾಂಗಣ, ಡಿಜಿಟಲ್ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಭಾರತ ಸರ್ಕಾರದ ಜಾಹೀರಾತುಗಳನ್ನು ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ (ಸಿ.ಬಿ.ಸಿ) ನೀಡುತ್ತದೆ.

ಉದ್ದೇಶಿತ ಸಂದೇಶದ ವ್ಯಾಪಕ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು, ಮುದ್ರಣ, ದೃಶ್ಯ-ಶ್ರಾವ್ಯ, ಡಿಜಿಟಲ್, ಹೊರಾಂಗಣ ಪ್ರಚಾರ ಮುಂತಾದ ವಿವಿಧ ಮಾಧ್ಯಮಗಳಿಗೆ ಸಂಬಂಧಿಸಿದಂತೆ ವಿವರವಾದ ನೀತಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳು http://cbcindia.gov.in ಸಿ.ಬಿ.ಸಿ ವೆಬ್‌ತಾಣದಲ್ಲಿ ಲಭ್ಯವಿವೆ.

ಎ.ವಿ.ಜಿ.ಸಿ-ಎಕ್ಸ್.ಆರ್ ವಲಯದ ಉತ್ತೇಜನ:

ʻಎ.ವಿ.ಜಿ.ಸಿ-ಎಕ್ಸ್.ಆರ್ʼ - ಇದು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ ವಲಯವನ್ನು ಒಳಗೊಂಡಿದೆ.

ಭಾರತ ಸರ್ಕಾರವು ʻಎ.ವಿ.ಜಿ.ಸಿ-ಎಕ್ಸ್.ಆರ್ʼ ವಲಯವನ್ನು ಭಾರತದ ಸೃಜನಶೀಲ ಪರಿಸರ ವ್ಯವಸ್ಥೆಯ ಪ್ರಮುಖ ಅಂಶಗಳಲ್ಲಿ ಒಂದಾಗಿ ಗುರುತಿಸಿದೆ. ಏಪ್ರಿಲ್ 2022ರಲ್ಲಿ ರಚಿಸಲಾದ ʻರಾಷ್ಟ್ರೀಯ ಎ.ವಿ.ಜಿ.ಸಿ-ಎಕ್ಸ್.ಆರ್ ಕಾರ್ಯಪಡೆಯು ವಲಯದ ಉತ್ತೇಜನಕ್ಕಾಗಿ ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸಿದೆ.

ʻಎ.ವಿ.ಜಿ.ಸಿʼ ವಲಯಕ್ಕಾಗಿ ಸರ್ಕಾರದ ಪ್ರಮುಖ ಉಪಕ್ರಮಗಳು ಕೆಳಗಿನಂತಿವೆ:

ವಿಶ್ವ ದೃಶ್ಯ-ಶ್ರಾವ್ಯ ಮತ್ತು ಮನರಂಜನಾ ಶೃಂಗಸಭೆ 2025

● ಭಾರತವನ್ನು ಮಾಧ್ಯಮ ಮತ್ತು ಮನರಂಜನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು 2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ಕಾರ್ಯಕ್ರಮ ನಡೆಯಿತು.

● ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್: ಅನಿಮೇಷನ್, ಗೇಮಿಂಗ್, ಎ.ಆರ್ / ವಿ.ಆರ್ ಮತ್ತು ಸಂಗೀತದಂತಹ 34 ಸೃಜನಶೀಲ ವಿಭಾಗಗಳಲ್ಲಿ ರಾಷ್ಟ್ರವ್ಯಾಪಿಯಾಗಿ ಮುಂದಿನ ಪೀಳಿಗೆಯ ಪ್ರತಿಭಾನ್ವೇಷಣೆ. ಇದು ಪ್ರಪಂಚದಾದ್ಯಂತದ ಕಂಟೆಂಟ್‌ ಸೃಷ್ಟಿಕರ್ತರಿಂದ 1 ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಆಕರ್ಷಿಸಿತು.

● ವೇವ್ಸ್ ಬಜಾರ್, ʻವೇವ್ ಎಕ್ಸ್ʼ ಆಕ್ಸಿಲರೇಟರ್ ನಂತಹ ವಿಶೇಷ ಉಪಕ್ರಮಗಳು ಕಂಟೆಂಟ್‌ ಸೃಷ್ಟಿಕರ್ತರನ್ನು ಹೂಡಿಕೆದಾರರಿಗೆ ಸಂಪರ್ಕಿಸುತ್ತವೆ ಮತ್ತು ಮಾರುಕಟ್ಟೆಗಳಿಗೆ ವ್ಯಾಪಕ ಪ್ರವೇಶ ಮತ್ತು ಮಾರ್ಗದರ್ಶನವನ್ನು ಸಾಧ್ಯವಾಗಿಸುತ್ತವೆ.

● ಕಥೆ ಹೇಳುವುದು, ಕೃತಕ ಬುದ್ಧಿಮತ್ತೆ(ಎ.ಐ), ʻಎಕ್ಸ್.ಆರ್ʼ ಮತ್ತು ಡಿಜಿಟಲ್ ಕಂಟೆಂಟ್‌ ಸೃಷ್ಟಿಯಲ್ಲಿ ʻಮಾಸ್ಟರ್ ಕ್ಲಾಸ್ʼಗಳು ಮತ್ತು ಮಾರ್ಗದರ್ಶನಗಳನ್ನು ಕಾರ್ಯಕ್ರಮವು ಒದಗಿಸಿತು.

ʻಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ʼ(..ಸಿ.ಟಿ) ಸ್ಥಾಪನೆ

ಸೃಜನಶೀಲ ತಂತ್ರಜ್ಞಾನಗಳ ಪ್ರಧಾನ ಸಂಸ್ಥೆಯಾಗಿ ʻಐ.ಐ.ಸಿ.ಟಿʼಯನ್ನು ಸ್ಥಾಪಿಸಲಾಗಿದೆ. ಉದ್ಯಮ ಆಧಾರಿತ ಪಠ್ಯಕ್ರಮ ಮತ್ತು ಜಾಗತಿಕ ಉತ್ತಮ ಕಾರ್ಯವಿಧಾನಗಳ ಮೇಲೆ ಇದು ಗಮನ ಕೇಂದ್ರೀಕರಿಸಿದೆ.

● ʻಐ.ಐ.ಸಿ.ಟಿʼಯ ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ 392.85 ಕೋಟಿ ರೂ. ಒದಗಿಸಲಾಗಿದೆ.

● ಐ.ಐ.ಟಿ ಮತ್ತು ಐ.ಐ.ಎಂಗಳ ಮಾದರಿಯಲ್ಲಿ ಸೃಜನಶೀಲ ತಂತ್ರಜ್ಞಾನಗಳಿಗಾಗಿ ʻಐ.ಐ.ಸಿ.ಟಿʼಯನ್ನು ರೂಪಿಸಲಾಗಿದೆ.

● ಶೈಕ್ಷಣಿಕ ಸಹಯೋಗಕ್ಕಾಗಿ ಗೂಗಲ್, ಮೆಟಾ, ಎನ್‌ವಿಡಿಯಾ, ಮೈಕ್ರೋಸಾಫ್ಟ್, ಆಪಲ್, ಅಡೋಬ್, ಡಬ್ಲ್ಯೂ.ಪಿ.ಪಿ ಸೇರಿದಂತೆ ಪ್ರಮುಖ ಜಾಗತಿಕ ಕಂಪನಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ.

● ʻಎ.ವಿ.ಜಿ.ಸಿ-ಎಕ್ಸ್.ಆರ್ʼ ವಲಯದಲ್ಲಿ ವೃತ್ತಿಪರರು ಮತ್ತು ತರಬೇತುದಾರರಿಗೆ ಸುಧಾರಿತ ತರಬೇತಿಯನ್ನು ʻಐ.ಐ.ಸಿ.ಟಿʼ ಒದಗಿಸುತ್ತದೆ.

● ಗೇಮಿಂಗ್‌ನಲ್ಲಿ ನಾಲ್ಕು ವಿಶೇಷ ಕೋರ್ಸ್‌ಗಳು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ನಾಲ್ಕು ಕೋರ್ಸ್‌ಗಳು ಮತ್ತು ಅನಿಮೇಷನ್, ಕಾಮಿಕ್ಸ್ ಮತ್ತು ʻಎಕ್ಸ್.ಆರ್ʼನಲ್ಲಿ ಒಂಬತ್ತು ಕೋರ್ಸ್‌ಗಳು ಸಂಸ್ಥೆಯ ಆರಂಭಿಕ ಶೈಕ್ಷಣಿಕ ಕೊಡುಗೆಗಳಲ್ಲಿ ಸೇರಿವೆ.

● ಹೆಚ್ಚಿನ ವಿವರಗಳು https://theiict.in ವೆಬ್ ತಾಣದಲ್ಲಿ ಲಭ್ಯವಿವೆ .

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಗೆ ಮಾಹಿತಿಯನ್ನು ಸಲ್ಲಿಸಿದರು.

 

*****

 


(Release ID: 2153129)