ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ವಿಶೇಷ ನೋಂದಣಿ ಅಭಿಯಾನ 2025ರ ಆಗಸ್ಟ್ 15ರವರೆಗೆ ವಿಸ್ತರಣೆ


ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಆರಂಭವಾದಾಗಿನಿಂದ 4.05 ಕೋಟಿ ಮಹಿಳೆಯರಿಗೆ ಇದರಡಿಯಲ್ಲಿ ಪ್ರಯೋಜನ

Posted On: 04 AUG 2025 3:13PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ (PMMVY) ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಮನೆ-ಮನೆ ಜಾಗೃತಿ ಮತ್ತು ದಾಖಲಾತಿ ಅಭಿಯಾನವು, ಎಲ್ಲಾ ಅರ್ಹ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರನ್ನು ತಲುಪುವ ಮೂಲಕ ಯೋಜನೆಯಡಿಯಲ್ಲಿ ಅವರ ಸಕಾಲಿಕ ನೋಂದಣಿಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (PW&LM) ಪೌಷ್ಟಿಕ ಆಹಾರ ಕ್ರಮವನ್ನು ಅನುಸರಿಸಲು ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ನಡವಳಿಕೆಯನ್ನು ಹೊಂದುವಂತೆ ಮಾಡಲು ಪಿಎಮ್ಎಮ್‌ವಿ ವೈ(PMMVY) ಆರ್ಥಿಕ ಸಹಾಯವನ್ನು ಒದಗಿಸುವ ಜೊತೆಗೆ ಹೆಣ್ಣು ಮಗುವಿನ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುತ್ತದೆ.

ಮೊದಲ ಮಗುವಿನ ಹೆರಿಗೆಗೂ ಮುನ್ನ ಮತ್ತು ನಂತರ ತಾಯಂದಿರು ವಿಶ್ರಾಂತಿ ಪಡೆಯುವಂತಾಗಲು ವೇತನ ನಷ್ಟಕ್ಕೆ ಭಾಗಶಃ ಪರಿಹಾರವಾಗಿ ಪಿಎಮ್ಎಮ್ ವಿವೈಯಡಿ ನಗದು ಪ್ರೋತ್ಸಾಹ ನೀಡಲಾಗುತ್ತದೆ. ಯೋಜನೆ ಪ್ರಾರಂಭವಾದಾಗಿನಿಂದ 2025ರ ಜುಲೈ 31ರವರೆಗೆ, 4.05 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ / ಅಂಚೆ ಕಚೇರಿ ಖಾತೆಗಳಿಗೆ ನೇರ ನಗದು ವರ್ಗಾವಣೆಯ ಮೂಲಕ ₹19,028/- ಕೋಟಿ ಮೊತ್ತದಷ್ಟು ಮಾತೃತ್ವ ಭತ್ಯೆಯನ್ನು (ಕನಿಷ್ಠ ಒಂದು ಕಂತು) ಪಾವತಿಸಲಾಗಿದೆ.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯು ಮಿಷನ್ ಶಕ್ತಿಯ ಉಪ-ಯೋಜನೆ 'ಸಾಮರ್ಥ್ಯ' ಅಡಿಯಲ್ಲಿನ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ನೇರವಾಗಿ ಆರ್ಥಿಕ ನೆರವನ್ನು ನೀಡುತ್ತಿದೆ. ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿಗನುಗುಣವಾಗಿ PMMVY ಅಡಿಯಲ್ಲಿ ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ₹5,000 ನಗದು ಪ್ರೋತ್ಸಾಹಕವನ್ನು ಮತ್ತು ಎರಡನೇ ಹೆಣ್ಣು ಮಗುವಿನ ಹೆರಿಗೆಯ ನಂತರ ಒಂದೇ ಕಂತಿನಲ್ಲಿ ₹6,000 ಪ್ರೋತ್ಸಾಹಕವನ್ನು ನೀಡಲಾಗುತ್ತದೆ. ಈ ಯೋಜನೆಯು ದೇಶಾದ್ಯಂತ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಆರೋಗ್ಯಕ್ಕೆ ಗಮನ ನೀಡುವ ನಡವಳಿಕೆಯನ್ನು ಸುಧಾರಿಸುವ ಹಾಗೂ ತಾಯಿ ಮತ್ತು ಮಕ್ಕಳ ಉತ್ತಮ ಆರೋಗ್ಯ ಖಾತರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಮಾರ್ಚ್ 2023ರಲ್ಲಿ ಪ್ರಾರಂಭಿಸಲಾದ ಹೊಸ ಪ್ರಧಾನಮಂತ್ರಿ ಮಾತೃ ವಂದನಾ ಯೋಜನಾ ತಂತ್ರಾಂಶದ (PMMVYSoft) ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ತಮ್ಮ ಕ್ಷೇತ್ರ ಕಾರ್ಯಕರ್ತರ ಮೂಲಕ ಈ ಯೋಜನೆಯನ್ನು ಅನುಷ್ಠಾನ ಮಾಡುವರು. PMMVYSoft ಅಡಿಯಲ್ಲಿ UIDAI ಮೂಲಕ ಆಧಾರ್ ದೃಢೀಕರಣವನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ ಹಾಗೂ ಫಲಾನುಭವಿಗಳ ಆಧಾರ್-ಸಂಪರ್ಕಿತ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಮೊತ್ತವು ಅವರವರ ಖಾತೆಗಳಿಗೆ ಜಮೆಯಾಗುವುದನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ಯೋಜನೆಯ ವ್ಯಾಪ್ತಿ ವಿಸ್ತರಣೆ ಮತ್ತು ಸುಗಮ ವಿಲೇವಾರಿ ಖಚಿತಪಡಿಸಿಕೊಳ್ಳಲು PMMVY ಪೋರ್ಟಲ್‌ನಲ್ಲಿ ಇಂಟಿಗ್ರೇಟೆಡ್ ಗ್ರೀವೆನ್ಸ್ ಮಾಡ್ಯೂಲ್ (ಸಂಯೋಜಿತ ಕುಂದುಕೊರತೆ ಮಾಡ್ಯೂಲ್), ಬಹುಭಾಷಾ ಮತ್ತು ಟೋಲ್-ಫ್ರೀ (ಶುಲ್ಕರಹಿತ) PMMVY ಸಹಾಯವಾಣಿ (14408), ಮುಖ ಗುರುತಿಸುವಿಕೆ ವ್ಯವಸ್ಥೆ (FRS) ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ, ಸಂಭಾವ್ಯ PMMVY ಫಲಾನುಭವಿಗಳ ಬಾಕಿ ಪಟ್ಟಿ ಮೊದಲಾದ ಅನೇಕ ಸುಧಾರಣೆಗಳನ್ನು ಪರಿಚಯಿಸಲಾಗಿದೆ.

 

*****
 


(Release ID: 2152212)