ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ ಆದಿ ತಿರುವಥಿರೈ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
27 JUL 2025 5:15PM by PIB Bengaluru
ವಣಕ್ಕಂ ಚೋಳ ಮಂಡಲಂ,
ಅತ್ಯಂತ ಗೌರವಾನ್ವಿತ ಆಧೀನಂ ಮಠಾಧೀಶಗನ್ (ಮುಖ್ಯಸ್ಥರೆ), ಚಿನ್ಮಯ ಮಿಷನ್ ಸ್ವಾಮಿಗಳೆ, ತಮಿಳುನಾಡು ರಾಜ್ಯಪಾಲರಾದ ಆರ್ ಎನ್ ರವಿ ಜಿ, ನನ್ನ ಸಂಪುಟ ಸಹೋದ್ಯೋಗಿ ಡಾ. ಎಲ್ ಮುರುಗನ್ ಜಿ, ಸ್ಥಳೀಯ ಸಂಸದರಾದ ತಿರುಮ-ವಲವನ್ ಜಿ, ವೇದಿಕೆಯಲ್ಲಿರುವ ತಮಿಳುನಾಡು ಸಚಿವರೆ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಇಳಯರಾಜ ಜಿ, ಇಲ್ಲಿ ನೆರೆದಿರುವ ಎಲ್ಲಾ ಭಕ್ತರೆ, ವಿದ್ಯಾರ್ಥಿಗಳೆ, ಸಹೋದರ ಸಹೋದರಿಯರೆ! ನಮಃ ಶಿವಾಯ
ನಯನಾರ್ ನಾಗೇಂದ್ರನ್ ಅವರ ಹೆಸರು ಕೇಳಿದಾಗಲೆಲ್ಲಾ ಸುತ್ತಮುತ್ತಲ ಉತ್ಸಾಹದ ವಾತಾವರಣ ಇದ್ದಕ್ಕಿದ್ದಂತೆ ಬದಲಾಗುವುದನ್ನು ನಾನು ಗಮನಿಸಿದೆ.
ಸ್ನೇಹಿತರೆ,
ಒಂದು ರೀತಿಯಲ್ಲಿ, ಇದು ರಾಜರಾಜನ ಪೂಜ್ಯ ಸ್ಥಳ. ಇಳಯರಾಜನು ಈ ನಂಬಿಕೆಯ ಭೂಮಿಯಲ್ಲಿ ನಮ್ಮೆಲ್ಲರನ್ನೂ ಶಿವನ ಭಕ್ತಿಯಲ್ಲಿ ಮುಳುಗಿಸಿದ ರೀತಿ, ಅದು ಶ್ರಾವಣ ಮಾಸವಾಗಿರಲಿ, ರಾಜರಾಜನ ನಂಬಿಕೆಯ ಭೂಮಿಯಾಗಿರಲಿ ಮತ್ತು ಇಳಯರಾಜನ ತಪಸ್ಸೇ ಆಗಿರಲಿ, ಎಂತಹ ಅದ್ಭುತ ವಾತಾವರಣ, ನಿಜಕ್ಕೂ ಅದ್ಭುತವಾದ ವಾತಾವರಣ. ನಾನು ಕಾಶಿಯ ಸಂಸದನಾಗಿದ್ದೇನೆ ಮತ್ತು ಓಂ ನಮಃ ಶಿವಾಯ ಎಂದು ಕೇಳಿದಾಗ, ನಾನು ಪುಳಕಿತನಾಗಿದ್ದೇನೆ.
ಸ್ನೇಹಿತರೆ,
ಶಿವ ದರ್ಶನದ ಅದ್ಭುತ ಶಕ್ತಿ, ಶ್ರೀ ಇಳಯರಾಜನ ಸಂಗೀತ, ಓಡುವರ್ ಪಠಣ, ಈ ಆಧ್ಯಾತ್ಮಿಕ ಅನುಭವವು ನಿಜವಾಗಿಯೂ ಆತ್ಮವನ್ನು ಆವರಿಸುತ್ತದೆ.
ಸ್ನೇಹಿತರೆ,
ಪವಿತ್ರ ಶ್ರಾವಣ ಮಾಸ ಮತ್ತು ಬೃಹದೇಶ್ವರ ಶಿವ ದೇವಾಲಯದ ನಿರ್ಮಾಣ ಪ್ರಾರಂಭವಾದ ಸಾವಿರ ವರ್ಷಗಳ ಐತಿಹಾಸಿಕ ಸಂದರ್ಭ, ಅಂತಹ ಅದ್ಭುತ ಸಮಯದಲ್ಲಿ ನಾನು ಭಗವಾನ್ ಬೃಹದೇಶ್ವರ ಶಿವನ ಪಾದಗಳಲ್ಲಿ ಹಾಜರಿದ್ದು ಅವನನ್ನು ಪೂಜಿಸುವ ಅದೃಷ್ಟವನ್ನು ಪಡೆದುಕೊಂಡಿದ್ದೇನೆ. 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಮತ್ತು ಈ ಐತಿಹಾಸಿಕ ದೇವಾಲಯದಲ್ಲಿ ಭಾರತದ ನಿರಂತರ ಪ್ರಗತಿಗಾಗಿ ನಾನು ಪ್ರಾರ್ಥಿಸಿದ್ದೇನೆ. ಎಲ್ಲರಿಗೂ ಶಿವನ ಆಶೀರ್ವಾದ ಸಿಗಲಿ ಎಂದು ನಾನು ಬಯಸುತ್ತೇನೆ, ನಮಃ: ಪಾರ್ವತಿ ಪತಯೇ ಹರ ಹರ ಮಹಾದೇವ್!
ಸ್ನೇಹಿತರೆ,
ನಾನು ಇಲ್ಲಿಗೆ ಬರುವುದು ತಡವಾಯಿತು, ಆದರೆ ನಾನು ಮೊದಲೇ ಬಂದು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಏರ್ಪಡಿಸಿರುವ ಅದ್ಭುತ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ, ಅದು ಮಾಹಿತಿಯುಕ್ತ ಮತ್ತು ಸ್ಫೂರ್ತಿದಾಯಕವಾಗಿದೆ. ನಮ್ಮ ಪೂರ್ವಜರು ಸಾವಿರ ವರ್ಷಗಳ ಹಿಂದೆ ಮಾನವ ಕಲ್ಯಾಣಕ್ಕಾಗಿ ಹೇಗೆ ನಿರ್ದೇಶನ ನೀಡಿದರು ಎಂಬುದರ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಇದು ತುಂಬಾ ವಿಶಾಲವಾಗಿತ್ತು, ತುಂಬಾ ವಿಸ್ತಾರವಾಗಿತ್ತು, ತುಂಬಾ ಭವ್ಯವಾಗಿತ್ತು, ಕಳೆದ 1 ವಾರದಿಂದ ಸಾವಿರಾರು ಜನರು ಈ ಪ್ರದರ್ಶನವನ್ನು ನೋಡಲು ಬರುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿದುಬಂತು. ಇದು ನೋಡಲು ಯೋಗ್ಯವಾಗಿದೆ ಮತ್ತು ನಾನು ಎಲ್ಲರಿಗೂ ಖಂಡಿತವಾಗಿಯೂ ಇದನ್ನು ನೋಡಲು ಹೇಳುತ್ತೇನೆ.
ಸ್ನೇಹಿತರೆ,
ಇಂದು ಚಿನ್ಮಯ ಮಿಷನ್‌ನ ಪ್ರಯತ್ನಗಳ ಮೂಲಕ ಇಲ್ಲಿ ತಮಿಳು ಗೀತಾ ಆಲ್ಬಮ್ ಅನ್ನು ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಈ ಪ್ರಯತ್ನವು ಪರಂಪರೆಯನ್ನು ಸಂರಕ್ಷಿಸುವ ನಮ್ಮ ಸಂಕಲ್ಪವನ್ನು ಸಹ ಬಲಪಡಿಸುತ್ತದೆ. ಈ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಚೋಳ ರಾಜರು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಆಗ್ನೇಯ ಏಷ್ಯಾಕ್ಕೆ ತಮ್ಮ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಿದರು. ನಾನು ನಿನ್ನೆಯಷ್ಟೇ ಮಾಲ್ಡೀವ್ಸ್‌ನಿಂದ ಹಿಂತಿರುಗಿದ್ದು, ಇಂದು ತಮಿಳುನಾಡಿನಲ್ಲಿ ನಡೆಯುವ ಈ ಕಾರ್ಯಕ್ರಮದ ಭಾಗವಾಗಿದ್ದೇನೆ ಎಂಬುದು ಕಾಕತಾಳೀಯ.
ಶಿವಭಕ್ತರು ಶಿವನಲ್ಲಿ ಲೀನಗೊಳ್ಳುವ ಮೂಲಕ ಶಿವನಂತೆ ಅಮರರಾಗುತ್ತಾರೆ ಎಂದು ನಮ್ಮ ಧರ್ಮಗ್ರಂಥಗಳು ಹೇಳುತ್ತವೆ. ಅದಕ್ಕಾಗಿಯೇ ಶಿವನ ಮೇಲಿನ ಅನನ್ಯ ಭಕ್ತಿಯೊಂದಿಗೆ ಸಂಬಂಧ ಹೊಂದಿರುವ ಭಾರತದ ಚೋಳ ಪರಂಪರೆ ಇಂದು ಅಮರವಾಗಿದೆ. ರಾಜ ರಾಜ ಚೋಳ, ರಾಜೇಂದ್ರ ಚೋಳ, ಈ ಹೆಸರುಗಳು ಭಾರತದ ಗುರುತು ಮತ್ತು ಹೆಮ್ಮೆಗೆ ಸಮಾನಾರ್ಥಕವಾಗಿವೆ. ಚೋಳ ಸಾಮ್ರಾಜ್ಯದ ಇತಿಹಾಸ ಮತ್ತು ಪರಂಪರೆ ಭಾರತದ ನಿಜವಾದ ಸಾಮರ್ಥ್ಯದ ಘೋಷಣೆಯಾಗಿದೆ. ಇದು ಭಾರತದ ಆ ಕನಸಿನ ಸ್ಫೂರ್ತಿ, ಇದರೊಂದಿಗೆ ನಾವು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಸಾಗುತ್ತಿದ್ದೇವೆ. ಈ ಸ್ಫೂರ್ತಿಯೊಂದಿಗೆ, ನಾನು ರಾಜೇಂದ್ರ ಚೋಳರಿಗೆ ನನ್ನ ಗೌರವ ಸಲ್ಲಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ, ನೀವೆಲ್ಲರೂ ಆದಿ ತಿರುಪತಿರೈ ಹಬ್ಬವನ್ನು ಆಚರಿಸಿದ್ದೀರಿ. ಇಂದು ಇದು ಈ ವೈಭವದ ಕಾರ್ಯಕ್ರಮದಲ್ಲಿ ಅಂತ್ಯಗೊಳ್ಳುತ್ತಿದೆ. ಇದಕ್ಕೆ ಕೊಡುಗೆ ನೀಡಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಚೋಳ ಸಾಮ್ರಾಜ್ಯವು ಭಾರತದ ಸುವರ್ಣ ಯುಗಗಳಲ್ಲಿ ಒಂದಾಗಿತ್ತು ಎಂದು ಇತಿಹಾಸಕಾರರು ನಂಬುತ್ತಾರೆ. ಈ ಯುಗವನ್ನು ಅದರ ಕಾರ್ಯತಂತ್ರ ಶಕ್ತಿಯಿಂದ ಗುರುತಿಸಲಾಗಿದೆ. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಸಂಪ್ರದಾಯವನ್ನು ಚೋಳ ಸಾಮ್ರಾಜ್ಯವು ಸಹ ಮುಂದಕ್ಕೆ ಕೊಂಡೊಯ್ದಿತು. ಇತಿಹಾಸಕಾರರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಬ್ರಿಟನ್‌ನ ಮ್ಯಾಗ್ನಾ ಕಾರ್ಟಾದ ಬಗ್ಗೆ ಮಾತನಾಡುತ್ತಾರೆ, ಆದರೆ ಹಲವು ಶತಮಾನಗಳ ಹಿಂದೆ, ಕುಡವೊಲೈ ಅಮೈಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚೋಳ ಸಾಮ್ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಇಂದು ಪ್ರಪಂಚದಾದ್ಯಂತ ನೀರಿನ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಮ್ಮ ಪೂರ್ವಜರು ಅವುಗಳ ಮಹತ್ವವನ್ನು ಬಹಳ ಹಿಂದೆಯೇ ಅರ್ಥ ಮಾಡಿಕೊಂಡರು. ಇತರ ಸ್ಥಳಗಳನ್ನು ವಶಪಡಿಸಿಕೊಂಡ ನಂತರ ಚಿನ್ನ, ಬೆಳ್ಳಿ ಅಥವಾ ಜಾನುವಾರುಗಳನ್ನು ಮರಳಿ ತರುತ್ತಿದ್ದ ಅನೇಕ ರಾಜರ ಬಗ್ಗೆ ನಾವು ಕೇಳಿದ್ದೇವೆ. ಆದರೆ ನೋಡಿ, ರಾಜೇಂದ್ರ ಚೋಳ ಗಂಗಾ ನೀರನ್ನು ತರುವುದರಲ್ಲಿ ಹೆಸರುವಾಸಿಯಾಗಿದ್ದಾನೆ, ಅವನು ಗಂಗಾ ನೀರನ್ನು ತಂದ. ರಾಜೇಂದ್ರ ಚೋಳ ಉತ್ತರ ಭಾರತದಿಂದ ಗಂಗಾ ನೀರನ್ನು ದಕ್ಷಿಣಕ್ಕೆ ಹರಿಸಿದ. ಇಲ್ಲಿ ಚೋಳ ಗಂಗಾ ಯೇರಿ, ಚೋಳ ಗಂಗಾ ಸರೋವರದಲ್ಲಿ ನೀರನ್ನು ಹರಿಸಲಾಯಿತು, ಇದನ್ನು ಇಂದು ಪೊನ್ನೇರಿ ಸರೋವರ ಎಂದು ಕರೆಯಲಾಗುತ್ತದೆ.
ಸ್ನೇಹಿತರೆ,
ರಾಜೇಂದ್ರ ಚೋಳನು ಗಂಗೈ-ಕೊಂಡಚೋಳಪುರಂ ಕೋವಿಲ್ ದೇವಾಲಯ ನಿರ್ಮಿಸಿದ. ಈ ದೇವಾಲಯವು ಇನ್ನೂ ವಿಶ್ವದ ವಾಸ್ತುಶಿಲ್ಪದ ಅದ್ಭುತವಾಗಿ ಉಳಿದಿದೆ. ಕಾವೇರಿ ಮಾತೆಯ ಈ ಭೂಮಿಯಲ್ಲಿ ಗಂಗಾ ಮಾತೆಯ ಉತ್ಸವ ಆಚರಿಸುತ್ತಿರುವುದು ಚೋಳ ಸಾಮ್ರಾಜ್ಯದ ಕೊಡುಗೆಯಾಗಿದೆ. ಆ ಐತಿಹಾಸಿಕ ಘಟನೆಯ ನೆನಪಿಗಾಗಿ, ಇಂದು ಮತ್ತೊಮ್ಮೆ ಕಾಶಿಯಿಂದ ಗಂಗಾ ನೀರನ್ನು ಇಲ್ಲಿಗೆ ತರಲಾಗಿದೆ ಎಂಬುದು ನನಗೆ ತುಂಬಾ ಸಂತೋಷವಾಗಿದೆ. ಈಗಷ್ಟೇ ನಾನು ಇಲ್ಲಿ ಪೂಜೆ ಸಲ್ಲಿಸಲು ಹೋದಾಗ, ಸಂಪ್ರದಾಯದಂತೆ ಆಚರಣೆಗಳನ್ನು ಪೂರ್ಣಗೊಳಿಸಲಾಯಿತು, ಗಂಗಾ ನೀರಿನಿಂದ ಅಭಿಷೇಕ ಮಾಡಲಾಯಿತು. ನಾನು ಕಾಶಿಯ ಜನಪ್ರತಿನಿಧಿ, ನನಗೆ ಗಂಗಾ ಮಾತೆಯ ಜೊತೆ ಆತ್ಮೀಯ ಸಂಬಂಧವಿದೆ. ಚೋಳ ರಾಜರ ಈ ಕೃತಿಗಳು, ಅವರೊಂದಿಗೆ ಸಂಬಂಧಿಸಿದ ಈ ಘಟನೆಗಳು 'ಏಕ್ ಭಾರತ್, ಶ್ರೇಷ್ಠ ಭಾರತ್' ಮಹಾಯಜ್ಞಕ್ಕೆ ಹೊಸ ಶಕ್ತಿ, ಹೊಸ ಚೈತನ್ಯ ಮತ್ತು ಹೊಸ ಆವೇಗ ನೀಡುತ್ತವೆ.
ಸಹೋದರ ಸಹೋದರಿಯರೆ,
ಚೋಳ ರಾಜರು ಭಾರತವನ್ನು ಸಾಂಸ್ಕೃತಿಕ ಏಕತೆಯ ಎಳೆಯಲ್ಲಿ ಬಂಧಿಸಿದ್ದರು. ಇಂದು ನಮ್ಮ ಸರ್ಕಾರವು ಚೋಳ ಯುಗದ ಅದೇ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಕಾಶಿ ತಮಿಳು ಸಂಗಮ ಮತ್ತು ಸೌರಾಷ್ಟ್ರ ತಮಿಳು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ನಾವು ಶತಮಾನಗಳಷ್ಟು ಹಳೆಯದಾದ ಏಕತೆಯ ಎಳೆಗಳನ್ನು ಬಲಪಡಿಸುತ್ತಿದ್ದೇವೆ. ಗಂಗೈ-ಕೊಂಡಚೋಳಪುರಂನಂತಹ ತಮಿಳುನಾಡಿನ ಪ್ರಾಚೀನ ದೇವಾಲಯಗಳನ್ನು ಸಹ ಭಾರತೀಯ ಪುರಾತತ್ವ ಸಮೀಕ್ಷೆ(ಎಎಸ್ಐ) ಮೂಲಕ ಸಂರಕ್ಷಿಸಲಾಗುತ್ತಿದೆ. ದೇಶದ ಹೊಸ ಸಂಸತ್ತು ಉದ್ಘಾಟನೆಯಾದಾಗ, ನಮ್ಮ ಶಿವಾಧಿನದ ಸಂತರು ಆ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ನಾಯಕತ್ವ ವಹಿಸಿದ್ದರು. ಅವರೆಲ್ಲರೂ ಇಲ್ಲಿ ಉಪಸ್ಥಿತರಿದ್ದಾರೆ. ತಮಿಳು ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಪವಿತ್ರ ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಸ್ಥಾಪಿಸಲಾಗಿದೆ. ಇಂದಿಗೂ ನಾನು ಆ ಕ್ಷಣವನ್ನು ನೆನಪಿಸಿಕೊಂಡಾಗ, ನನಗೆ ಹೆಮ್ಮೆ ಮೂಡುತ್ತದೆ.
ಸ್ನೇಹಿತರೆ,
ನಾನು ಚಿದಂಬರಂನಲ್ಲಿರುವ ನಟರಾಜ ದೇವಾಲಯದ ಕೆಲವು ದೀಕ್ಷಿತರನ್ನು ಭೇಟಿಯಾದೆ. ಅವರು ನನಗೆ ಈ ದೈವಿಕ ದೇವಾಲಯದ ಪವಿತ್ರ ಪ್ರಸಾದ ಅರ್ಪಿಸಿದರು, ಅಲ್ಲಿ ಶಿವನನ್ನು ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ನಟರಾಜನ ಈ ರೂಪವು ನಮ್ಮ ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಬೇರುಗಳ ಸಂಕೇತವಾಗಿದೆ. ಇದೇ ರೀತಿಯ ನಟರಾಜನ ಆನಂದ ತಾಂಡವ ವಿಗ್ರಹವು ದೆಹಲಿಯಲ್ಲಿರುವ ಭಾರತ ಮಂಟಪದ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಈ ಭಾರತ ಮಂಟಪದಲ್ಲಿ, ಜಿ-20 ಶೃಂಗಸಭೆಗೆ ಜಾಗತಿಕ ನಾಯಕರು ಸೇರಿದ್ದರು.
ಸ್ನೇಹಿತರೆ,
ನಮ್ಮ ಶೈವ ಸಂಪ್ರದಾಯವು ಭಾರತದ ಸಾಂಸ್ಕೃತಿಕ ರಚನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಚೋಳ ಚಕ್ರವರ್ತಿಗಳು ಈ ನಿರ್ಮಾಣದ ಪ್ರಮುಖ ವಾಸ್ತುಶಿಲ್ಪಿಗಳು. ಅದಕ್ಕಾಗಿಯೇ ಇಂದಿಗೂ ತಮಿಳುನಾಡು ಶೈವ ಸಂಪ್ರದಾಯದ ಜೀವಂತ ಕೇಂದ್ರಗಳಲ್ಲಿ ಬಹಳ ಮುಖ್ಯವಾಗಿದೆ. ಮಹಾನ್ ನಾಯನ್ಮಾರ್ ಸಂತರ ಪರಂಪರೆ, ಅವರ ಭಕ್ತಿ ಸಾಹಿತ್ಯ, ತಮಿಳು ಸಾಹಿತ್ಯ, ನಮ್ಮ ಪೂಜ್ಯ ಆಧೀನರ ಪಾತ್ರ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ಜನ್ಮ ನೀಡಿದೆ.
ಸ್ನೇಹಿತರೆ,
ಇಂದು ಜಗತ್ತು ಅಸ್ಥಿರತೆ, ಹಿಂಸೆ ಮತ್ತು ಪರಿಸರದಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವಾಗ, ಶೈವ ತತ್ವಗಳು ನಮಗೆ ಪರಿಹಾರಗಳಿಗೆ ದಾರಿ ತೋರಿಸುತ್ತವೆ. ನೋಡಿ, ತಿರುಮೂಲರ್ ಬರೆದಿದ್ದಾರೆ - “अन्बे शिवम्”, ಅಂದರೆ, ಪ್ರೀತಿಯೇ ಶಿವ. ಪ್ರೀತಿಯೇ ಶಿವ! ಇಂದು ಜಗತ್ತು ಈ ಕಲ್ಪನೆಯನ್ನು ಅಳವಡಿಸಿಕೊಂಡರೆ, ಹೆಚ್ಚಿನ ಬಿಕ್ಕಟ್ಟುಗಳನ್ನು ಸ್ವಯಂಚಾಲಿತವಾಗಿ ಪರಿಹರಿಸಬಹುದು. ಇಂದು ಭಾರತವು ಈ ಕಲ್ಪನೆಯನ್ನು ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯದ ರೂಪದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿದೆ.
ಸ್ನೇಹಿತರೆ,
ಇಂದು ಭಾರತವು ಅಭಿವೃದ್ಧಿ ಮತ್ತು ಪರಂಪರೆಯ ಮಂತ್ರದ ಮೇಲೆ ಮುಂದುವರಿಯುತ್ತಿದೆ. ಇಂದಿನ ಭಾರತವು ತನ್ನ ಇತಿಹಾಸದ ಬಗ್ಗೆ ಹೆಮ್ಮೆಪಡುತ್ತದೆ. ಕಳೆದ ದಶಕದಲ್ಲಿ, ದೇಶದ ಪರಂಪರೆಯ ಸಂರಕ್ಷಣೆಯ ಬಗ್ಗೆ ನಾವು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡಿದ್ದೇವೆ. ಕದ್ದು ವಿದೇಶಗಳಲ್ಲಿ ಮಾರಾಟವಾಗಿದ್ದ ದೇಶದ ಪ್ರಾಚೀನ ಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಮರಳಿ ತರಲಾಗಿದೆ. 2014ರಿಂದ 600ಕ್ಕೂ ಹೆಚ್ಚಿನ ಪ್ರಾಚೀನ ಕಲಾಕೃತಿಗಳು ಮತ್ತು ಶಿಲ್ಪಗಳು ಪ್ರಪಂಚದ ವಿವಿಧ ದೇಶಗಳಿಂದ ಭಾರತಕ್ಕೆ ಮರಳಿವೆ. ಇವುಗಳಲ್ಲಿ 36 ವಿಶೇಷವಾಗಿ ನಮ್ಮ ತಮಿಳುನಾಡಿನಿಂದ ಬಂದವು. ಇಂದು ನಟರಾಜ, ಲಿಂಗೋದ್ಭವ, ದಕ್ಷಿಣಾಮೂರ್ತಿ, ಅರ್ಧನಾರೀಶ್ವರ, ನಂದಿಕೇಶ್ವರ, ಉಮಾ ಪರಮೇಶ್ವರಿ, ಪಾರ್ವತಿ, ಸಂಬಂಧರ್ ನಂತಹ ಅನೇಕ ಪ್ರಮುಖ ಪರಂಪರೆಗಳು ಮತ್ತೊಮ್ಮೆ ಈ ನೆಲದ ಸೌಂದರ್ಯವನ್ನು ಹೆಚ್ಚಿಸುತ್ತಿವೆ.
ಸ್ನೇಹಿತರೆ,
ನಮ್ಮ ಪರಂಪರೆ ಮತ್ತು ಶೈವ ತತ್ವಶಾಸ್ತ್ರದ ಪ್ರಭಾವವು ಇನ್ನು ಮುಂದೆ ಭಾರತ ಅಥವಾ ಈ ಭೂಮಿಗೆ ಸೀಮಿತವಾಗಿಲ್ಲ. ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ದೇಶವಾದಾಗ, ನಾವು ಚಂದ್ರನ ಆ ಬಿಂದುವನ್ನು ಶಿವಶಕ್ತಿ ಎಂದು ಹೆಸರಿಸಿದೆವು. ಚಂದ್ರನ ಆ ಪ್ರಮುಖ ಭಾಗವನ್ನು ಈಗ ಶಿವ-ಶಕ್ತಿ ಎಂಬ ಹೆಸರಿನಿಂದ ಗುರುತಿಸಲಾಗಿದೆ.
ಸ್ನೇಹಿತರೆ,
ಚೋಳರ ಕಾಲದಲ್ಲಿ ಭಾರತ ತಲುಪಿದ ಆರ್ಥಿಕ ಮತ್ತು ಕಾರ್ಯತಂತ್ರ ಪ್ರಗತಿಯ ಉತ್ತುಂಗಗಳು ಇಂದಿಗೂ ನಮಗೆ ಸ್ಫೂರ್ತಿಯಾಗಿದೆ. ರಾಜರಾಜ ಚೋಳನು ಪ್ರಬಲ ನೌಕಾಪಡೆ ಸೃಷ್ಟಿಸಿದ. ರಾಜೇಂದ್ರ ಚೋಳನು ಅದನ್ನು ಮತ್ತಷ್ಟು ಬಲಪಡಿಸಿದ. ಅವನ ಆಳ್ವಿಕೆಯಲ್ಲಿ ಅನೇಕ ಆಡಳಿತ ಸುಧಾರಣೆಗಳನ್ನು ಸಹ ಕೈಗೊಳ್ಳಲಾಯಿತು. ಅವನು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿದ. ಬಲವಾದ ಆದಾಯ ವ್ಯವಸ್ಥೆ ಜಾರಿಗೆ ತರಲಾಯಿತು. ವ್ಯಾಪಾರ ಅಭಿವೃದ್ಧಿ, ಸಮುದ್ರ ಮಾರ್ಗಗಳ ಬಳಕೆ, ಕಲೆ ಮತ್ತು ಸಂಸ್ಕೃತಿಯ ಪ್ರಚಾರ ಮತ್ತು ಪ್ರಸರಣ, ಭಾರತವು ಎಲ್ಲಾ ದಿಕ್ಕುಗಳಲ್ಲಿಯೂ ವೇಗವಾಗಿ ಪ್ರಗತಿ ಹೊಂದುತ್ತಿತ್ತು.
ಸ್ನೇಹಿತರೆ,
ನವ ಭಾರತದ ಸೃಷ್ಟಿಗೆ ಚೋಳ ಸಾಮ್ರಾಜ್ಯವು ಪ್ರಾಚೀನ ಮಾರ್ಗಸೂಚಿಯಂತಿದೆ. ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬಯಸಿದರೆ, ನಾವು ಏಕತೆಗೆ ಒತ್ತು ನೀಡಬೇಕು ಎಂದು ಅದು ನಮಗೆ ಹೇಳುತ್ತದೆ. ನಾವು ನಮ್ಮ ನೌಕಾಪಡೆ, ನಮ್ಮ ರಕ್ಷಣಾ ಪಡೆಗಳನ್ನು ಬಲಪಡಿಸಬೇಕು. ನಾವು ಹೊಸ ಅವಕಾಶಗಳನ್ನು ಅನ್ವೇಷಿಸಬೇಕು. ಇದೆಲ್ಲದರ ಜತೆಗೆ, ನಾವು ನಮ್ಮ ಮೌಲ್ಯಗಳನ್ನು ಸಹ ಸಂರಕ್ಷಿಸಬೇಕಾಗುತ್ತದೆ. ಇಂದು ದೇಶವು ಈ ಸ್ಫೂರ್ತಿಯೊಂದಿಗೆ ಮುಂದುವರಿಯುತ್ತಿದೆ ಎಂಬುದರಲ್ಲಿ ನನಗೆ ತೃಪ್ತಿ ಇದೆ.
ಸ್ನೇಹಿತರೆ,
ಇಂದಿನ ಭಾರತವು ತನ್ನ ಭದ್ರತೆಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತದೆ. ಇತ್ತೀಚೆಗೆ, ಆಪರೇಷನ್ ಸಿಂದೂರ್ ಸಮಯದಲ್ಲಿ, ಯಾರಾದರೂ ಭಾರತದ ಭದ್ರತೆ ಮತ್ತು ಸಾರ್ವಭೌಮತ್ವದ ಮೇಲೆ ದಾಳಿ ಮಾಡಿದರೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಭಾರತದ ಶತ್ರುಗಳಿಗೆ, ಭಯೋತ್ಪಾದಕರಿಗೆ ಯಾವುದೇ ಸ್ಥಳ ಸುರಕ್ಷಿತವಲ್ಲ ಎಂದು ಆಪರೇಷನ್ ಸಿಂದೂರ್ ತೋರಿಸಿದೆ. ಇಂದು ನಾನು ಹೆಲಿಪ್ಯಾಡ್‌ನಿಂದ ಇಲ್ಲಿಗೆ 3-4 ಕಿಲೋಮೀಟರ್ ದೂರ ಕ್ರಮಿಸಿ ಬರುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ದೊಡ್ಡ ರೋಡ್ ಶೋ ನಡೆದಿರುವುದನ್ನು ನಾನು ನೋಡಿದೆ, ಎಲ್ಲರೂ ಆಪರೇಷನ್ ಸಿಂದೂರ್ ಅನ್ನು ಶ್ಲಾಘಿಸುತ್ತಿದ್ದರು. ಆಪರೇಷನ್ ಸಿಂದೂರ್ ಇಡೀ ದೇಶದಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿದೆ, ಹೊಸ ಆತ್ಮವಿಶ್ವಾಸ ಹುಟ್ಟುಹಾಕಿದೆ, ಜಗತ್ತು ಭಾರತದ ಶಕ್ತಿಯನ್ನು ಸ್ವೀಕರಿಸಬೇಕಾಗಿದೆ.
ಸ್ನೇಹಿತರೆ,
ರಾಜೇಂದ್ರ ಚೋಳ ಗಂಗೈ-ಕೊಂಡಚೋಳಪುರಂ ಅನ್ನು ನಿರ್ಮಿಸಿದಾಗ, ಅವನು ಅದರ ಶಿಖರವನ್ನು ತಂಜಾವೂರಿನ ಬೃಹದೇಶ್ವರ ದೇವಾಲಯಕ್ಕಿಂತ ಚಿಕ್ಕದಾಗಿ ಇರಿಸಿಕೊಂಡಿದ್ದಾನೆಂದು ನಮಗೆಲ್ಲರಿಗೂ ತಿಳಿದಿದೆ. ಅವನು ತನ್ನ ತಂದೆ ನಿರ್ಮಿಸಿದ ದೇವಾಲಯವನ್ನು ಅತ್ಯುನ್ನತವಾಗಿಡಲು ಬಯಸಿದ್ದ. ತನ್ನ ಶ್ರೇಷ್ಠತೆಯ ನಡುವೆಯೂ, ರಾಜೇಂದ್ರ ಚೋಳ ನಮ್ರತೆ ತೋರಿಸಿದ. ಇಂದಿನ ನವ ಭಾರತವು ಈ ಮನೋಭಾವದ ಮೇಲೆ ಮುಂದುವರಿಯುತ್ತಿದೆ. ನಾವು ನಿರಂತರವಾಗಿ ಬಲಶಾಲಿಯಾಗುತ್ತಿದ್ದೇವೆ, ಆದರೆ ನಮ್ಮ ಆತ್ಮವು ವಿಶ್ವ ಸಹೋದರತ್ವ, ವಿಶ್ವ ಕಲ್ಯಾಣವಾಗಿದೆ.
ಸ್ನೇಹಿತರೆ,
ನನ್ನ ಪರಂಪರೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಇಂದು ನಾನು ಇಲ್ಲಿ ಮತ್ತೊಂದು ಸಂಕಲ್ಪ ಮಾಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ, ನಾವು ತಮಿಳುನಾಡಿನಲ್ಲಿ ರಾಜರಾಜ ಚೋಳ ಮತ್ತು ಅವರ ಮಗ, ಮಹಾನ್ ಆಡಳಿತಗಾರ ರಾಜೇಂದ್ರ ಚೋಳ 1ರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸುತ್ತೇವೆ. ಈ ಪ್ರತಿಮೆಗಳು ನಮ್ಮ ಐತಿಹಾಸಿಕ ಪ್ರಜ್ಞೆಯ ಆಧುನಿಕ ಆಧಾರಸ್ತಂಭಗಳಾಗುತ್ತವೆ.
ಸ್ನೇಹಿತರೆ,
ಇಂದು ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಜಿ ಅವರ ಪುಣ್ಯತಿಥಿ ಕೂಡ ಆಗಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ಮುನ್ನಡೆಸಲು, ನಮಗೆ ಡಾ. ಕಲಾಂ, ಚೋಳ ರಾಜರಂತಹ ಲಕ್ಷಾಂತರ ಯುವಕರು ಬೇಕು. ಶಕ್ತಿ ಮತ್ತು ಭಕ್ತಿಯಿಂದ ತುಂಬಿದ ಅಂತಹ ಯುವಕರು 140 ಕೋಟಿ ದೇಶವಾಸಿಗಳ ಕನಸುಗಳನ್ನು ನನಸಾಗಿಸುತ್ತಾರೆ. ಒಟ್ಟಾಗಿ, ನಾವು ಏಕ ಭಾರತ ಶ್ರೇಷ್ಠ ಭಾರತ ಎಂಬ ಸಂಕಲ್ಪವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಈ ಭಾವನೆಯೊಂದಿಗೆ, ಈ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ತುಂಬು ಧನ್ಯವಾದಗಳು.
ನನ್ನೊಂದಿಗೆ ಹೇಳಿ,
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ವಣಕ್ಕಂ
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2149219)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam