ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರಿಟನ್ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

Posted On: 24 JUL 2025 5:09PM by PIB Bengaluru

ಪ್ರಧಾನಮಂತ್ರಿ ಸ್ಟಾರ್ಮರ್ ಅವರೇ,

ಸ್ನೇಹಿತರೇ,

ನಮಸ್ಕಾರ!

ಮೊದಲನೆಯದಾಗಿ, ಪ್ರಧಾನಿ ಸ್ಟಾರ್ಮರ್ ಅವರ ಆತ್ಮೀಯ ಸ್ವಾಗತ ಮತ್ತು ಸೌಹಾರ್ದಯುತ ಆತಿಥ್ಯಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. ಹಲವು ವರ್ಷಗಳ ಸಮರ್ಪಿತ ಪ್ರಯತ್ನಗಳ ನಂತರ, ಇಂದು ನಮ್ಮ ಎರಡೂ ದೇಶಗಳ ನಡುವೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ನನಗೆ ಸಂತೋಷವಾಗಿದೆ. 

ಈ ಒಪ್ಪಂದವು ಕೇವಲ ಆರ್ಥಿಕ ಪಾಲುದಾರಿಕೆಗಿಂತ ಹೆಚ್ಚಿನದಾಗಿದೆ; ಇದು ಹಂಚಿಕೆಯ ಸಮೃದ್ಧಿಯ ನೀಲನಕ್ಷೆಯಾಗಿದೆ. ಒಂದೆಡೆ, ಇದು ಭಾರತೀಯ ಜವಳಿ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಸಮುದ್ರಾಹಾರ ಮತ್ತು ಎಂಜಿನಿಯರಿಂಗ್ ಸರಕುಗಳಿಗೆ ಯುಕೆ ಮಾರುಕಟ್ಟೆಗೆ ಉತ್ತಮ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ. ಇದು ಭಾರತದ ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರ ಉದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಒಪ್ಪಂದವು ಭಾರತದ ಯುವಜನರು, ರೈತರು, ಮೀನುಗಾರರು ಮತ್ತು ಎಂ.ಎಸ್.ಎಂ.ಇ ವಲಯಕ್ಕೆ ವಿಶೇಷ ಪ್ರಯೋಜನವನ್ನು ನೀಡುತ್ತದೆ.

ಮತ್ತೊಂದೆಡೆ, ಬ್ರಿಟನ್ ನಿರ್ಮಿತ ಉತ್ಪನ್ನಗಳಾದ ವೈದ್ಯಕೀಯ ಸಾಧನಗಳು ಮತ್ತು ಏರೋಸ್ಪೇಸ್ ಬಿಡಿಭಾಗಗಳು ಭಾರತೀಯ ಗ್ರಾಹಕರು ಮತ್ತು ಕೈಗಾರಿಕೆಗಳಿಗೆ ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತಾಗುತ್ತವೆ.

ವ್ಯಾಪಾರ ಒಪ್ಪಂದದ ಜೊತೆಗೆ, ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ ಬಗ್ಗೆಯೂ ಒಮ್ಮತಕ್ಕೆ ಬರಲಾಗಿದೆ. ಇದು ಎರಡೂ ದೇಶಗಳ ಸೇವಾ ವಲಯಗಳಿಗೆ, ವಿಶೇಷವಾಗಿ ತಂತ್ರಜ್ಞಾನ ಮತ್ತು ಹಣಕಾಸು ವಲಯಗಳಿಗೆ ಹೊಸ ಉತ್ತೇಜನ ನೀಡುತ್ತದೆ. ಇದು ಸುಲಭ ವ್ಯವಹಾರವನ್ನು ಸುಧಾರಿಸುತ್ತದೆ, ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಪಾರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಯುಕೆ ಆರ್ಥಿಕತೆಯು ಕೌಶಲ್ಯಪೂರ್ಣ ಭಾರತೀಯ ಪ್ರತಿಭೆಗಳ ಪ್ರವೇಶದಿಂದ ಪ್ರಯೋಜನ ಪಡೆಯುತ್ತದೆ.

ಈ ಒಪ್ಪಂದಗಳು ದ್ವಿಪಕ್ಷೀಯ ಹೂಡಿಕೆಗಳನ್ನು ಹೆಚ್ಚಿಸುತ್ತವೆ ಮತ್ತು ಎರಡೂ ದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಇದಲ್ಲದೆ, ಎರಡು ಚೈತನ್ಯಶೀಲ ಪ್ರಜಾಪ್ರಭುತ್ವಗಳು ಮತ್ತು ಪ್ರಮುಖ ಜಾಗತಿಕ ಆರ್ಥಿಕತೆಗಳ ನಡುವಿನ ಈ ಒಪ್ಪಂದಗಳು ಜಾಗತಿಕ ಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯನ್ನು ಬಲಪಡಿಸಲು ಕೊಡುಗೆ ನೀಡುತ್ತವೆ.

ಸ್ನೇಹಿತರೇ,

ಮುಂದಿನ ದಶಕದಲ್ಲಿ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಆವೇಗ ಮತ್ತು ಶಕ್ತಿಯನ್ನು ತುಂಬಲು, ವಿಷನ್ 2035 ಅನ್ನು ಪ್ರಾರಂಭಿಸಲಾಗುತ್ತಿದೆ. ಇದು ತಂತ್ರಜ್ಞಾನ, ರಕ್ಷಣೆ, ಹವಾಮಾನ, ಶಿಕ್ಷಣ ಮತ್ತು ಜನರು-ಜನರ ನಡುವಿನ ಸಂಪರ್ಕಗಳ ಕ್ಷೇತ್ರಗಳಲ್ಲಿ ಬಲವಾದ, ವಿಶ್ವಾಸಾರ್ಹ ಮತ್ತು ಮಹತ್ವಾಕಾಂಕ್ಷೆಯ ಪಾಲುದಾರಿಕೆಗೆ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ.

ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲು ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ನಮ್ಮ ತಂತ್ರಜ್ಞಾನ ಭದ್ರತಾ ಉಪಕ್ರಮಗಳನ್ನು ಮತ್ತಷ್ಟು ಬಲಪಡಿಸಲು ನಾವು ಕೆಲಸ ಮಾಡುತ್ತೇವೆ.

ಕೃತಕ ಬುದ್ಧಿಮತ್ತೆಯಿಂದ ನಿರ್ಣಾಯಕ ಖನಿಜಗಳವರೆಗೆ, ಅರೆವಾಹಕಗಳಿಂದ ಸೈಬರ್ ಭದ್ರತೆಯವರೆಗೆ, ನಾವು ಒಟ್ಟಾಗಿ ಭವಿಷ್ಯವನ್ನು ನಿರ್ಮಿಸಬೇಕು ಎಂಬುದು ನಮ್ಮ ಬದ್ಧತೆಯಾಗಿದೆ.

ಸ್ನೇಹಿತರೇ,

ಶಿಕ್ಷಣ ಕ್ಷೇತ್ರದಲ್ಲೂ ಸಹ, ಎರಡೂ ದೇಶಗಳು ಒಟ್ಟಾಗಿ ಹೊಸ ಅಧ್ಯಾಯವನ್ನು ಬರೆಯುತ್ತಿವೆ. ಆರು ಯುಕೆ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಗಳನ್ನು ತೆರೆಯುತ್ತಿವೆ. ಕಳೆದ ವಾರವಷ್ಟೇ, ಸೌತಾಂಪ್ಟನ್ ವಿಶ್ವವಿದ್ಯಾಲಯವು ಭಾರತದ ಗುರುಗ್ರಾಮದಲ್ಲಿ ತನ್ನ ಕ್ಯಾಂಪಸ್ ಅನ್ನು ಉದ್ಘಾಟಿಸಿತು.

ಸ್ನೇಹಿತರೇ,

ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಕ್ಕಾಗಿ ನಾವು ಪ್ರಧಾನಿ ಸ್ಟಾರ್ಮರ್ ಮತ್ತು ಅವರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನಿಲುವುಗಳಿಗೆ ಅವಕಾಶವಿಲ್ಲ ಎಂಬ ಅಭಿಪ್ರಾಯದಲ್ಲಿ ನಮ್ಮ ಸಹಮತವಿದೆ. ಉಗ್ರವಾದಿ ಸಿದ್ಧಾಂತಗಳನ್ನು ಹೊಂದಿರುವ ಶಕ್ತಿಗಳು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಬಿಡಬಾರದು ಎಂಬುದಕ್ಕೂ ನಮ್ಮ ಸಹಮತವಿದೆ. 

ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು.

ಆರ್ಥಿಕ ಅಪರಾಧಿಗಳ ಹಸ್ತಾಂತರದ ಸಂದರ್ಭದಲ್ಲಿಯೂ ಸಹ, ನಮ್ಮ ಸಂಸ್ಥೆಗಳು ನಿಕಟ ಸಮನ್ವಯ ಮತ್ತು ಸಹಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ.

ಸ್ನೇಹಿತರೇ,

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ, ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ನಾವು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಶಾಂತಿ ಮತ್ತು ಸ್ಥಿರತೆಯ ತ್ವರಿತ ಪುನಃಸ್ಥಾಪನೆಯನ್ನು ನಾವು ಬೆಂಬಲಿಸುತ್ತೇವೆ. ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಅತ್ಯಗತ್ಯವಾಗಿದೆ. ಇಂದಿನ ಯುಗವು ವಿಸ್ತರಣಾವಾದವನ್ನಲ್ಲ, ಅಭಿವೃದ್ಧಿಯನ್ನು ಬಯಸುತ್ತದೆ.

ಸ್ನೇಹಿತರೇ,

ಕಳೆದ ತಿಂಗಳು ಅಹಮದಾಬಾದ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಅನೇಕರು ಯುಕೆಯ ನಮ್ಮ ಸಹೋದರ ಸಹೋದರಿಯರಾಗಿದ್ದರು. ಅವರ ಕುಟುಂಬಗಳಿಗೆ ನಾವು ನಮ್ಮ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ.

ಬ್ರಿಟನ್ ನಲ್ಲಿ ವಾಸಿಸುವ ಭಾರತೀಯ ಮೂಲದ ಜನರು ನಮ್ಮ ಸಂಬಂಧಗಳಲ್ಲಿ ಜೀವಂತ ಸೇತುವೆಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭಾರತದಿಂದ ಕೇವಲ ಕರಿಬೇವನ್ನು ಮಾತ್ರವಲ್ಲ, ಸೃಜನಶೀಲತೆ, ಬದ್ಧತೆ ಮತ್ತು ವ್ಯಕ್ತಿತ್ವವನ್ನೂ ತಂದಿದ್ದಾರೆ. ಅವರ ಕೊಡುಗೆ ಬ್ರಿಟನ್ ನ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಮಾತ್ರ ಸೀಮಿತವಾಗಿಲ್ಲ - ಇದು ದೇಶದ ಸಂಸ್ಕೃತಿ, ಕ್ರೀಡೆ ಮತ್ತು ಸಾರ್ವಜನಿಕ ಸೇವೆಯಲ್ಲೂ ಸಮಾನವಾಗಿ ಗೋಚರಿಸುತ್ತದೆ.

ಸ್ನೇಹಿತರೇ,

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟಿಗೆ ಆಡುತ್ತಿರುವಾಗ, ವಿಶೇಷವಾಗಿ ಟೆಸ್ಟ್ ಸರಣಿಯ ಸಮಯದಲ್ಲಿ ಕ್ರಿಕೆಟ್ ಬಗ್ಗೆ ಹೇಳದೇ ಇರಲು ನನಗೆ ಸಾಧ್ಯವಿಲ್ಲ. ನಮ್ಮೆರಡೂ ದೇಶಗಳಿಗೆ ಕ್ರಿಕೆಟ್ ಕೇವಲ ಆಟವಲ್ಲ, ಬದಲಾಗಿ ಅದೊಂದು ಉತ್ಸಾಹ ಮತ್ತು ನಮ್ಮ ಪಾಲುದಾರಿಕೆಗೆ ಇದೊಂದು ಉತ್ತಮ ರೂಪಕವಾಗಿದೆ. ಕೆಲವೊಮ್ಮೆ ಸ್ವಿಂಗ್ ಮತ್ತು ಮಿಸ್ ಆಗಬಹುದು. ಆದರೆ ನಾವು ಯಾವಾಗಲೂ ಸ್ಟ್ರೈಟ್ ಬ್ಯಾಟ್ ನಲ್ಲಿ ಆಡುತ್ತೇವೆ. ಹೆಚ್ಚಿನ ಸ್ಕೋರಿಂಗ್ ಹೊಂದಿರುವ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ.

ಇಂದು ಅಂತಿಮಗೊಳಿಸಲಾದ ಒಪ್ಪಂದಗಳು ನಮ್ಮ ವಿಷನ್ 2035 ಗೆ ಅನುಗುಣವಾಗಿ ಈ ಮನೋಭಾವವನ್ನು ಮುಂದುವರಿಸುವ ಮೈಲಿಗಲ್ಲುಗಳಾಗಿವೆ.

ಪ್ರಧಾನಮಂತ್ರಿಯವರೇ,

ನಿಮ್ಮ ಆತ್ಮೀಯ ಆತಿಥ್ಯಕ್ಕೆ ಮತ್ತೊಮ್ಮೆ ಧನ್ಯವಾದಗಳು. ತಾವು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ಭಾರತದಲ್ಲಿ ನಿಮಗೆ  ಆತಿಥ್ಯ ವಹಿಸಲು ನಾನು ಎದುರು ನೋಡುತ್ತಿದ್ದೇನೆ.
ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಪತ್ರಿಕಾ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****
 


(Release ID: 2148104)