ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ₹5,400 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
ಇಂದು ಇಡೀ ವಿಶ್ವವು ನಮ್ಮ 'ವಿಕಸಿತ ಭಾರತ'ದ ಸಂಕಲ್ಪದ ಕುರಿತು ಚರ್ಚಿಸುತ್ತಿದೆ. ಇದು ವಿಶೇಷವಾಗಿ ಮೂಲಸೌಕರ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ, ಅದರ ಮೇಲೆ ಅಭಿವೃದ್ಧಿ ಹೊಂದಿದ ಭಾರತದ ತಳಹದಿ ನಿರ್ಮಾಣವಾಗುತ್ತಿದೆ: ಪ್ರಧಾನಮಂತ್ರಿ
ನಾವು "ಒಂದು ದೇಶ, ಒಂದು ಗ್ಯಾಸ್ ಗ್ರಿಡ್" ದೃಷ್ಟಿಕೋನದ ಮೇಲೆ ಕೆಲಸ ಮಾಡಿದ್ದೇವೆ ಮತ್ತು "ಪ್ರಧಾನ ಮಂತ್ರಿ ಊರ್ಜಾ ಗಂಗಾ" ಯೋಜನೆಯನ್ನು ರೂಪಿಸಿದ್ದೇವೆ: ಪ್ರಧಾನಮಂತ್ರಿ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ. ಅಭಿವೃದ್ಧಿಯ ಮೂಲಕ ಸಬಲೀಕರಣ, ಉದ್ಯೋಗದ ಮೂಲಕ ಸ್ವಾವಲಂಬನೆ ಮತ್ತು ಸ್ಪಂದನೆಯ ಮೂಲಕ ಉತ್ತಮ ಆಡಳಿತ ನಮ್ಮ ಮುಂದಿನ ದಾರಿಯಾಗಲಿದೆ: ಪ್ರಧಾನಮಂತ್ರಿ
Posted On:
18 JUL 2025 5:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ 5,400 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರ ಸಮರ್ಪಣೆ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, 'ಉಕ್ಕಿನ ನಗರಿ' ಎಂದೇ ಪ್ರಸಿದ್ಧವಾಗಿರುವ ದುರ್ಗಾಪುರವು ಭಾರತದ ಕಾರ್ಮಿಕ ಶಕ್ತಿಯ ಪ್ರಮುಖ ಕೇಂದ್ರವಾಗಿದೆ ಎಂದು ತಿಳಿಸಿದರು. ಈ ನಗರವು ಭಾರತದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು. ಇಂದು ಉದ್ಘಾಟಿಸಲಾದ ಯೋಜನೆಗಳು ಈ ಪ್ರದೇಶದ ಸಂಪರ್ಕವನ್ನು ಹೆಚ್ಚಿಸಲಿವೆ, ಅನಿಲ ಆಧಾರಿತ ಸಾರಿಗೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿವೆ. ಅಲ್ಲದೆ, ದುರ್ಗಾಪುರದ 'ಉಕ್ಕಿನ ನಗರಿ' ಎಂಬ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಹೇಳಿದರು. ಈ ಯೋಜನೆಗಳು “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇವು ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತವೆ. ಇದರ ಜೊತೆಗೆ, ಈ ಯೋಜನೆಗಳು ಈ ಪ್ರದೇಶದ ಯುವಕರಿಗೆ ಸಾಕಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಮಹತ್ವದ ಅಭಿವೃದ್ಧಿ ಯೋಜನೆಗಳಿಗಾಗಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಧಾನಮಂತ್ರಿಯವರು ಇಂದು ಜಾಗತಿಕ ಚರ್ಚೆಯು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದ ಸುತ್ತ ಸುತ್ತುತ್ತಿದೆ ಎಂದು ಹೇಳಿದರು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನಾ ಬದಲಾವಣೆಗಳಿಂದಾಗಿ ಇದು ಸಾಧ್ಯವಾಗಿದೆ, ಈ ಬದಲಾವಣೆಗಳು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ ಹಾಕುತ್ತಿವೆ ಎಂದು ಅವರು ಹೇಳಿದರು. ಈ ಬದಲಾವಣೆಗಳ ಪ್ರಮುಖ ಅಂಶವೆಂದರೆ ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್ ಸೇರಿದಂತೆ ಮೂಲಸೌಕರ್ಯ ಎಂದು ಒತ್ತಿ ಹೇಳಿದ ಪಧಾನ ಮಂತ್ರಿ ಶ್ರೀ ಮೋದಿ ಅವರು, ಕೆಲವು ಪ್ರಮುಖ ಸಾಧನೆಗಳನ್ನು ಎತ್ತಿ ತೋರಿಸಿದರು: ಬಡವರಿಗಾಗಿ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳು, ಕೋಟಿಗಟ್ಟಲೆ ಶೌಚಾಲಯಗಳು, 12 ಕೋಟಿಗೂ ಹೆಚ್ಚು ನಲ್ಲಿ ನೀರಿನ ಸಂಪರ್ಕಗಳು, ಸಾವಿರಾರು ಕಿಲೋಮೀಟರ್ ಹೊಸ ರಸ್ತೆಗಳು ಮತ್ತು ಹೆದ್ದಾರಿಗಳು, ಹೊಸ ರೈಲು ಮಾರ್ಗಗಳು, ಸಣ್ಣ ಪಟ್ಟಣಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಪ್ರತಿ ಗ್ರಾಮ ಮತ್ತು ಮನೆಗೆ ವ್ಯಾಪಕ ಅಂತರ್ಜಾಲ ಸಂಪರ್ಕ ತಲುಪಿವೆ. ಈ ಆಧುನಿಕ ಮೂಲಸೌಕರ್ಯವು ಪಶ್ಚಿಮ ಬಂಗಾಳ ಸೇರಿದಂತೆ ಪ್ರತಿಯೊಂದು ರಾಜ್ಯಕ್ಕೂ ಪ್ರಯೋಜನವನ್ನು ನೀಡುತ್ತಿದೆ ಎಂದು ಅವರು ದೃಢಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ರೈಲು ಸಂಪರ್ಕದಲ್ಲಿ ಅಭೂತಪೂರ್ವ ಪ್ರಗತಿಯನ್ನು ಪ್ರಧಾನಮಂತ್ರಿಯವರು ಗಮನಿಸಿದರು, ಹೆಚ್ಚಿನ ಸಂಖ್ಯೆಯ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಪ್ರಮುಖ ರಾಜ್ಯಗಳಲ್ಲಿ ಬಂಗಾಳವೂ ಒಂದು ಎಂದು ಹೇಳಿದರು. ಕೋಲ್ಕತ್ತಾ ಮೆಟ್ರೋದ ಕ್ಷಿಪ್ರ ವಿಸ್ತರಣೆ ಮತ್ತು ಹೊಸ ರೈಲು ಮಾರ್ಗಗಳು, ಟ್ರ್ಯಾಕ್ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದೀಕರಣದ ಕುರಿತು ನಡೆಯುತ್ತಿರುವ ಕಾರ್ಯಗಳನ್ನು ಅವರು ಎತ್ತಿ ತೋರಿಸಿದರು. ಹಲವಾರು ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯ ರೈಲು ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಇಂದು ಇನ್ನೂ ಎರಡು ರೈಲು ಮೇಲ್ಸೇತುವೆಗಳನ್ನು ಉದ್ಘಾಟಿಸಲಾಗಿದೆ ಎಂದು ಅವರು ಘೋಷಿಸಿದರು, ಈ ಎಲ್ಲಾ ಪ್ರಯತ್ನಗಳು ಬಂಗಾಳದ ಜನರ ಜೀವನವನ್ನು ಗಣನೀಯವಾಗಿ ಸುಗಮಗೊಳಿಸುತ್ತವೆ ಎಂದು ಹೇಳಿದರು.
ಪ್ರಾದೇಶಿಕ ವಿಮಾನ ನಿಲ್ದಾಣವನ್ನು UDAN (ಉಡಾನ್) ಯೋಜನೆಯೊಂದಿಗೆ ಸಂಯೋಜಿಸಲಾಗಿದೆ ಎಂದು ಒತ್ತಿಹೇಳಿದ ಪ್ರಧಾನ ಮಂತ್ರಿ ಶ್ರೀ ಮೋದಿ, ಕೇವಲ ಒಂದು ವರ್ಷದಲ್ಲಿ ಈ ಸೌಲಭ್ಯದ ಮೂಲಕ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಇಂತಹ ಮೂಲಸೌಕರ್ಯಗಳು ಅನುಕೂಲವನ್ನು ಹೆಚ್ಚಿಸುವುದಲ್ಲದೆ, ಸಾವಿರಾರು ಯುವಕರಿಗೆ ಉದ್ಯೋಗವನ್ನೂ ಸೃಷ್ಟಿಸುತ್ತವೆ ಎಂದು ಅವರು ಒತ್ತಿಹೇಳಿದರು. ಈ ಯೋಜನೆಗಳಲ್ಲಿ ಬಳಸುವ ಕಚ್ಚಾ ವಸ್ತುಗಳ ಉತ್ಪಾದನೆಯೂ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಕಳೆದ 10-11 ವರ್ಷಗಳಲ್ಲಿ, ಗ್ಯಾಸ್ ಸಂಪರ್ಕದಲ್ಲಿ ಭಾರತ ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಈ ದಶಕದಲ್ಲಿ ದೇಶಾದ್ಯಂತ ಪ್ರತಿ ಮನೆಗೂ ಎಲ್ ಪಿ ಜಿ ತಲುಪಿದೆ ಮತ್ತು ಇದು ಜಾಗತಿಕ ಮಾನ್ಯತೆ ಗಳಿಸಿದೆ ಎಂದು ಅವರು ತಿಳಿಸಿದರು. 'ಒಂದು ದೇಶ, ಒಂದು ಗ್ಯಾಸ್ ಗ್ರಿಡ್' ದೃಷ್ಟಿಕೋನ ಮತ್ತು ಪ್ರಧಾನ ಮಂತ್ರಿ ಊರ್ಜಾ ಗಂಗಾ ಯೋಜನೆಗೆ ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು. ಈ ಯೋಜನೆಯಡಿ, ಪಶ್ಚಿಮ ಬಂಗಾಳ ಸೇರಿದಂತೆ ಆರು ಪೂರ್ವ ರಾಜ್ಯಗಳಲ್ಲಿ ಗ್ಯಾಸ್ ಪೈಪ್ ಲೈನ್ ಗಳನ್ನು ಹಾಕಲಾಗುತ್ತಿದೆ. ಕೈಗಾರಿಕೆಗಳು ಮತ್ತು ಮನೆಗಳಿಗೆ ಕೈಗೆಟುಕುವ ದರದಲ್ಲಿ ಪೈಪ್ ಗ್ಯಾಸ್ ತಲುಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಗ್ಯಾಸ್ ಲಭ್ಯತೆಯು ಸಿ ಎನ್ ಜಿ (CNG) ಚಾಲಿತ ವಾಹನಗಳ ಬಳಕೆಗೆ ಮತ್ತು ಕೈಗಾರಿಕೆಗಳು ಗ್ಯಾಸ್ ಆಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ದುರ್ಗಾಪುರದ ಕೈಗಾರಿಕಾ ಪ್ರದೇಶವು ಈಗ ರಾಷ್ಟ್ರೀಯ ಗ್ಯಾಸ್ ಗ್ರಿಡ್ ನ ಭಾಗವಾಗಿರುವುದು ತಮಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದರು. ಈ ಯೋಜನೆಯು ಪ್ರದೇಶದ ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ಪಶ್ಚಿಮ ಬಂಗಾಳದ ಸುಮಾರು 30 ಲಕ್ಷ ಮನೆಗಳಿಗೆ ಕೈಗೆಟುಕುವ ದರದಲ್ಲಿ ಪೈಪ್ ಗ್ಯಾಸ್ ತಲುಪಿಸುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದರು. ಇದು ಲಕ್ಷಾಂತರ ಕುಟುಂಬಗಳ, ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ದೃಢಪಡಿಸಿದರು.
ದುರ್ಗಾಪುರ ಮತ್ತು ರಘುನಾಥಪುರದ ಪ್ರಮುಖ ಉಕ್ಕು ಮತ್ತು ವಿದ್ಯುತ್ ಸ್ಥಾವರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ನವೀಕರಿಸಲಾಗಿದೆ ಎಂದು ಪ್ರಧಾನ ಮಂತ್ರಿಯವರು ಘೋಷಿಸಿದರು. ಈ ಸೌಲಭ್ಯಗಳಿಗೆ ಸುಮಾರು ₹1,500 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಘಟಕಗಳು ಈಗ ಹೆಚ್ಚು ಪರಿಣಾಮಕಾರಿಯಾಗಿವೆ ಮತ್ತು ಜಾಗತಿಕವಾಗಿ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಗಳ ಯಶಸ್ವಿ ಪೂರ್ಣಗೊಂಡಿದ್ದಕ್ಕಾಗಿ ಬಂಗಾಳದ ಜನತೆಗೆ ಅವರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತದ ಕಾರ್ಖಾನೆಗಳಿರಲಿ ಅಥವಾ ಕೃಷಿ ಕ್ಷೇತ್ರವಿರಲಿ, ಪ್ರತಿಯೊಂದು ಪ್ರಯತ್ನವೂ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಒಂದೇ ಸಂಕಲ್ಪದಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಪ್ರಧಾನಿಯವರು ತಿಳಿಸಿದರು. ಅಭಿವೃದ್ಧಿಯ ಮೂಲಕ ಸಬಲೀಕರಣ, ಉದ್ಯೋಗದ ಮೂಲಕ ಸ್ವಾವಲಂಬನೆ ಮತ್ತು ಸ್ಪಂದನಾಶೀಲ ಆಡಳಿತದ ಮೂಲಕ ಸುಶಾಸನ ಎಂಬ ಸರ್ಕಾರದ ಭವಿಷ್ಯದ ಹಾದಿಯನ್ನು ಅವರು ವಿವರಿಸಿದರು. ಈ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ, ಪಶ್ಚಿಮ ಬಂಗಾಳವನ್ನು ಭಾರತದ ಅಭಿವೃದ್ಧಿ ಪಯಣದ ಪ್ರಬಲ ಶಕ್ತಿಯನ್ನಾಗಿ ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ದೃಢಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ. ಸಿ.ವಿ. ಆನಂದ ಬೋಸ್, ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ಶಂತನು ಠಾಕೂರ್, ಡಾ. ಸುಕಾಂತ ಮಜುಂದಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ತೈಲ ಮತ್ತು ಅನಿಲ, ವಿದ್ಯುತ್, ರಸ್ತೆ ಮತ್ತು ರೈಲ್ವೆ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು, ಅವುಗಳನ್ನು ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಪಶ್ಚಿಮ ಬಂಗಾಳದ ಬಂಕುರಾ ಮತ್ತು ಪುರುಲಿಯಾ ಜಿಲ್ಲೆಗಳಲ್ಲಿ ಸುಮಾರು ₹1,950 ಕೋಟಿ ರೂಪಾಯಿ ವೆಚ್ಚದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಯೋಜನೆಗೆ ಪ್ರಧಾನ ಮಂತ್ರಿಯವರು ಶಂಕುಸ್ಥಾಪನೆ ಮಾಡಿದರು. ಇದು ಈ ಪ್ರದೇಶದ ತೈಲ ಮತ್ತು ಅನಿಲ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಈ ಯೋಜನೆಯು ಮನೆಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ ಮತ್ತು ಕೈಗಾರಿಕಾ ಗ್ರಾಹಕರಿಗೆ ಪಿ ಎನ್ ಜಿ(PNG) ಸಂಪರ್ಕಗಳನ್ನು ಒದಗಿಸುತ್ತದೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಿ ಎನ್ ಜಿ(CNG) ಯನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಊರ್ಜಾ ಗಂಗಾ (PMUG) ಯೋಜನೆ ಅಡಿಯಲ್ಲಿ ಜಗದೀಶ್ಪುರ-ಹಲ್ದಿಯಾ ಮತ್ತು ಬೊಕಾರೊ-ಧಮ್ರಾ ಪೈಪ್ ಲೈನ್ ನ ಒಂದು ಭಾಗವಾಗಿ ನಿರ್ಮಿಸಲಾದ ದುರ್ಗಾಪುರದಿಂದ ಕೋಲ್ಕತ್ತಾ ವಿಭಾಗದ (132 ಕಿ.ಮೀ) ನೈಸರ್ಗಿಕ ಅನಿಲ ಪೈಪ್ ಲೈನ್ ಅನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಿದರು. ₹1,190 ಕೋಟಿಗೂ ಹೆಚ್ಚು ವೆಚ್ಚದ ಈ ಪೈಪ್ ಲೈನ್ ಪಶ್ಚಿಮ ಬಂಗಾಳದ ಪೂರ್ಬಾ ಬರ್ಧಮಾನ್, ಹೂಗ್ಲಿ ಮತ್ತು ನದಿಯಾ ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಇದರ ನಿರ್ಮಾಣ ಹಂತದಲ್ಲಿ ಇದು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದು, ಈಗ ಈ ಪ್ರದೇಶದಲ್ಲಿ ಲಕ್ಷಾಂತರ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಸುಗಮಗೊಳಿಸುತ್ತದೆ.
ಹವಾಮಾನ ಮತ್ತು ಆರೋಗ್ಯ ಸುರಕ್ಷತೆಗಾಗಿ ತಮ್ಮ ಬದ್ಧತೆಯಂತೆ, ಪ್ರಧಾನಮಂತ್ರಿಯವರು ಸುಮಾರು ₹1,457 ಕೋಟಿ ವೆಚ್ಚದ ದುರ್ಗಾಪುರ ಸ್ಟೀಲ್ ಥರ್ಮಲ್ ಪವರ್ ಸ್ಟೇಷನ್ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ ನ ರಘುನಾಥಪುರ ಥರ್ಮಲ್ ಪವರ್ ಸ್ಟೇಷನ್ ನ ಫ್ಲೂ ಗ್ಯಾಸ್ ಡಿ-ಸಲ್ಫರೈಸೇಶನ್ (FGD) ಎಂಬ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯನ್ನು ದೇಶಕ್ಕೆ ಸಮರ್ಪಿಸಿದರು. ಇದು ಪರಿಸರ ಸ್ನೇಹಿ ಇಂಧನ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಈ ಪ್ರದೇಶದ ರೈಲು ಮೂಲಸೌಕರ್ಯಕ್ಕೆ ಉತ್ತೇಜನ ನೀಡಿದ ಪ್ರಧಾನಮಂತ್ರಿಯವರು, ಪುರುಲಿಯಾ ಜಿಲ್ಲೆಯಲ್ಲಿ ಸುಮಾರು ₹390 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪುರುಲಿಯಾ - ಕೋಟ್ ಶಿಲಾ ರೈಲು ಮಾರ್ಗದ (36 ಕಿ.ಮೀ.) ಜೋಡಿ ಮಾರ್ಗವನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಜಮ್ಶೆಡ್ ಪುರ, ಬೊಕಾರೊ ಮತ್ತು ಧನ್ ಬಾದ್ ನ ಕೈಗಾರಿಕೆಗಳ ನಡುವೆ ರಾಂಚಿ ಮತ್ತು ಕೋಲ್ಕತ್ತಾದೊಂದಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸರಕು ಸಾಗಣೆ ರೈಲುಗಳ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಿ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಮತ್ತು ಕೈಗಾರಿಕೆ ಹಾಗೂ ವ್ಯಾಪಾರ ವಲಯಕ್ಕೆ ಲಾಭದಾಯಕವಾಗಲಿದೆ.
ಪ್ರಧಾನಮಂತ್ರಿಯವರು ಸೇತು ಭಾರತಂ ಕಾರ್ಯಕ್ರಮದ ಅಡಿಯಲ್ಲಿ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಟಾಪ್ಸಿ ಮತ್ತು ಪಾಂಡಬೇಶ್ವರದಲ್ಲಿ ₹380 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎರಡು ರಸ್ತೆ ಮೇಲ್ಸೇತುವೆಗಳನ್ನು ಉದ್ಘಾಟಿಸಿದರು. ಈ ಸೇತುವೆಗಳು ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ರೈಲ್ವೆ ಲೆವೆಲ್ ಕ್ರಾಸಿಂಗ್ ಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ಸಹ ಸಹಾಯ ಮಾಡಲಿವೆ.
*****
(Release ID: 2146027)
Read this release in:
Odia
,
English
,
Urdu
,
Marathi
,
Hindi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam