ಸಂಪುಟ
azadi ka amrit mahotsav

ಕಾರ್ಯತಂತ್ರದ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

Posted On: 01 JUL 2025 3:08PM by PIB Bengaluru

ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ಮಹತ್ವದ ಕ್ರಮವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ₹1 ಲಕ್ಷ ಕೋಟಿಗಳ ಬೃಹತ್ ನಿಧಿಯೊಂದಿಗೆ 'ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI)' ಯೋಜನೆಗೆ ತನ್ನ ಅನುಮೋದನೆ ನೀಡಿದೆ.

ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಮತ್ತು ಸಂಶೋಧನೆಗಳಿಗೆ ವಾಣಿಜ್ಯ ಸ್ವರೂಪ ನೀಡುವಲ್ಲಿ ಖಾಸಗಿ ವಲಯದ ಮಹತ್ವದ ಪಾತ್ರವನ್ನು ಮನಗಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಅಡಿಯಲ್ಲಿ, ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಹೂಡಿಕೆಗಳಿಗೆ ಉತ್ತೇಜನ ನೀಡಲು, ದೀರ್ಘಾವಧಿಯ ಮರುಪಾವತಿ ಸೌಲಭ್ಯದೊಂದಿಗೆ, ಕಡಿಮೆ ಅಥವಾ ಶೂನ್ಯ ಬಡ್ಡಿ ದರದಲ್ಲಿ ಹಣಕಾಸು ಮತ್ತು ಮರು-ಹಣಕಾಸು ನೆರವು ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಖಾಸಗಿ ವಲಯದ ಬಂಡವಾಳ ಹೂಡಿಕೆಯ ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ, ಉದಯೋನ್ಮುಖ ಮತ್ತು ಆಯಕಟ್ಟಿನ ವಲಯಗಳಲ್ಲಿ ನಾವೀನ್ಯತೆಯನ್ನು ಬೆಳೆಸಲು, ಹೊಸ ತಂತ್ರಜ್ಞಾನದ ಅಳವಡಿಕೆಗೆ ಪ್ರೋತ್ಸಾಹಿಸಲು ಹಾಗೂ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ಅಗತ್ಯವಾದ ಬೆಳವಣಿಗೆ ಮತ್ತು ರಿಸ್ಕ್ (ಅಪಾಯ) ಬಂಡವಾಳವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳು ಹೀಗಿವೆ:

a) ನಮ್ಮ ಆರ್ಥಿಕ ಭದ್ರತೆ, ಕಾರ್ಯತಂತ್ರದ ಅಗತ್ಯಗಳು ಮತ್ತು ಸ್ವಾವಲಂಬನೆಗೆ ಅಗತ್ಯವಿರುವ, ಹೊಸದಾಗಿ ಬೆಳೆಯುತ್ತಿರುವ (sunrise) ವಲಯಗಳಲ್ಲಿ ಹಾಗೂ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಚಟುವಟಿಕೆಗಳನ್ನು ಹೆಚ್ಚಿಸಲು ಉತ್ತೇಜನ ನೀಡುವುದು.

b) ತಾಂತ್ರಿಕ ಸಿದ್ಧತೆಯ ಉನ್ನತ ಮಟ್ಟದಲ್ಲಿ (Technology Readiness Levels - TRL) ಇರುವ, ದೊಡ್ಡ ಬದಲಾವಣೆ ತರಬಲ್ಲ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವುದು.

c) ದೇಶಕ್ಕೆ ಅತಿ ಮುಖ್ಯವಾದ ಅಥವಾ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ತಂತ್ರಜ್ಞಾನಗಳನ್ನು ಪಡೆಯಲು ಬೆಂಬಲ ನೀಡುವುದು.

d) ಡೀಪ್-ಟೆಕ್ ಫಂಡ್ ಆಫ್ ಫಂಡ್ಸ್ (Deep-Tech Fund of Funds) ಸ್ಥಾಪನೆಗೆ ಅನುಕೂಲ ಮಾಡಿಕೊಡುವುದು.

ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ANRF) ಆಡಳಿತ ಮಂಡಳಿಯು RDI ಯೋಜನೆಗೆ ಸಮಗ್ರ ಕಾರ್ಯತಂತ್ರದ ನಿರ್ದೇಶನ ನೀಡಲಿದೆ. ANRFನ ಕಾರ್ಯಕಾರಿ ಮಂಡಳಿಯು ಯೋಜನೆಯ ಮಾರ್ಗಸೂಚಿಗಳನ್ನು ಅನುಮೋದಿಸಲಿದೆ. ಜೊತೆಗೆ, ಎರಡನೇ ಹಂತದ ಫಂಡ್ ವ್ಯವಸ್ಥಾಪಕರನ್ನು ಮತ್ತು ಉದಯೋನ್ಮುಖ ವಲಯಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ವ್ಯಾಪ್ತಿ ಹಾಗೂ ಪ್ರಕಾರಗಳನ್ನು ಶಿಫಾರಸು ಮಾಡಲಿದೆ. ಕ್ಯಾಬಿನೆಟ್ ಕಾರ್ಯದರ್ಶಿಗಳ ನೇತೃತ್ವದ ಕಾರ್ಯದರ್ಶಿಗಳ ಸಬಲೀಕರಣ ಸಮಿತಿ, ಯೋಜನೆಯಲ್ಲಿನ ಬದಲಾವಣೆಗಳು, ವಲಯಗಳು ಮತ್ತು ಯೋಜನೆಗಳ ಪ್ರಕಾರಗಳನ್ನು ಅನುಮೋದಿಸುವ ಜವಾಬ್ದಾರಿ ಹೊಂದಿರುತ್ತದೆ. ಇದರ ಜೊತೆಗೆ, ಎರಡನೇ ಹಂತದ ಪಂಢ್ ವ್ಯವಸ್ಥಾಪಕರನ್ನು ಅನುಮೋದಿಸುವುದು ಹಾಗೂ ಯೋಜನೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ಕೂಡ ಈ ಸಮಿತಿಯ ಕಾರ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ RDI ಯೋಜನೆಯ ಅನುಷ್ಠಾನಕ್ಕೆ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸಲಿದೆ.

        RDI ಯೋಜನೆಯು ಎರಡು-ಹಂತದ ನಿಧಿ ಪೂರೈಕೆ ವ್ಯವಸ್ಥೆಯನ್ನು ಹೊಂದಿರುತ್ತದೆ. ಮೊದಲ ಹಂತದಲ್ಲಿ, ANRF ಅಡಿಯಲ್ಲಿ 'ವಿಶೇಷ ಉದ್ದೇಶದ ನಿಧಿ' (SPF) ಸ್ಥಾಪಿಸಲಾಗುವುದು, ಇದು ನಿಧಿಯ ಸಂರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ಈ SPF ನಿಂದ ವಿವಿಧ ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ, ಮುಖ್ಯವಾಗಿ ದೀರ್ಘಾವಧಿಯ ರಿಯಾಯಿತಿ ಸಾಲಗಳ ರೂಪದಲ್ಲಿ ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಎರಡನೇ ಹಂತದ ನಿಧಿ ವ್ಯವಸ್ಥಾಪಕರು ಸಂಶೋಧನೆ ಮತ್ತು ಅಭಿವೃದ್ಧಿ (R&D) ಯೋಜನೆಗಳಿಗೆ ಸಾಮಾನ್ಯವಾಗಿ ಕಡಿಮೆ ಅಥವಾ ಶೂನ್ಯ ಬಡ್ಡಿ ದರದಲ್ಲಿ ದೀರ್ಘಾವಧಿಯ ಸಾಲ ನೀಡುತ್ತಾರೆ. ವಿಶೇಷವಾಗಿ ಸ್ಟಾರ್ಟ್ಅಪ್ಗಳ ವಿಷಯದಲ್ಲಿ ಈಕ್ವಿಟಿ ರೂಪದಲ್ಲಿಯೂ ಹಣಕಾಸು ಒದಗಿಸಬಹುದು. 'ಡೀಪ್-ಟೆಕ್ ಫಂಡ್ ಆಫ್ ಫಂಡ್ಸ್' (FoF) ಅಥವಾ RDIಗಾಗಿ ಇರುವ ಇತರೆ ಯಾವುದೇ ಫಂಡ್ಗಳಿಗೆ ಕೊಡುಗೆ ನೀಡುವುದನ್ನು ಸಹ ಪರಿಗಣಿಸಬಹುದು.

        ಖಾಸಗಿ ವಲಯಕ್ಕೆ ದೀರ್ಘಾವಧಿಯ, ಕೈಗೆಟುಕುವ ದರದಲ್ಲಿ ಹಣಕಾಸು ಒದಗಿಸುವ ಈ RDI ಯೋಜನೆಯು, ದೇಶದಲ್ಲಿ ಆತ್ಮನಿರ್ಭರತೆ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದು 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿಯತ್ತ ಸಾಗುತ್ತಿರುವ ನಮ್ಮ ದೇಶಕ್ಕೆ ನಾವೀನ್ಯತೆಗಳನ್ನು ಬೆಳೆಸಲು ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ.

 

*****


(Release ID: 2141192) Visitor Counter : 3