ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಮತ್ತು ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಸಂಕಲ್ಪದೊಂದಿಗೆ ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಸಸಿ ನೆಟ್ಟ ಪ್ರಧಾನಮಂತ್ರಿ


Posted On: 05 JUN 2025 12:49PM by PIB Bengaluru

ವಿಶ್ವ ಪರಿಸರ ದಿನದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಸಲುವಾಗಿ ಸಸಿ ನೆಟ್ಟಿದ್ದಾರೆ.

ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಮಹತ್ವವನ್ನು ಶ್ರೀ ಮೋದಿ ಅವರು ಎತ್ತಿ ತೋರಿಸಿದ್ದಾರೆ.

ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಗಳಲ್ಲಿ ಒಂದಾದ ಅರಾವಳಿ ವಲಯವು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ವ್ಯಾಪಿಸಿದೆ ಎಂಬುದರತ್ತ  ಪ್ರಧಾನಿ ಗಮನ ಸೆಳೆದರು.

ಪ್ರದೇಶವು ಹಲವಾರು ಪರಿಸರ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ ಜೊತೆಗೆ, ವಿಶೇಷವಾಗಿ ಸ್ಥಳಾವಕಾಶದ ಮಿತಿಗಳಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಾವು ಹೊಸ ತಂತ್ರಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಶ್ರೀ ಮೋದಿ ಹೇಳಿದರು. ಮೇರಿ ಲೈಫ್ ಪೋರ್ಟಲ್‌ನಲ್ಲಿ ತೋಟಗಾರಿಕೆ/ಪ್ಲಾಂಟೇಶನ್ ಚಟುವಟಿಕೆಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದೂ ಶ್ರೀ ಮೋದಿ ಹೇಳಿದರು.

ದೇಶದ ಯುವಜನರು ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಭೂಗ್ರಹದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಕೊಡುಗೆ ನೀಡಬೇಕೆಂದು ಪ್ರಧಾನಿ ಆಗ್ರಹಿಸಿದರು.

ಈ ಬಗ್ಗೆ X ಥ್ರೆಡ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ;

"ಇಂದು, #ವಿಶ್ವ ಪರಿಸರ ದಿನದಂದು(#WorldEnvironmentDay), ನಾವು ವಿಶೇಷ ಗಿಡ ನೆಡುವ ಅಭಿಯಾನದೊಂದಿಗೆ #EkPedMaaKeNaam ಉಪಕ್ರಮವನ್ನು ಬಲಪಡಿಸಿದ್ದೇವೆ. ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ನಾನು ಸಸಿ ನೆಟ್ಟಿದ್ದೇನೆ. ಇದು ಅರಾವಳಿ ಶ್ರೇಣಿಯನ್ನು - ಅರಾವಳಿ ಹಸಿರು ಗೋಡೆ ಯೋಜನೆಯಲ್ಲಿ ಮರು ಅರಣ್ಯೀಕರಣಗೊಳಿಸುವ ನಮ್ಮ ಪ್ರಯತ್ನದ ಒಂದು ಭಾಗವಾಗಿದೆ."

"ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ಒಳಗೊಂಡ ಅರಾವಳಿ ಶ್ರೇಣಿಯು ನಮ್ಮ ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಯಾಗಿದೆ ಎಂದು ವ್ಯಾಪಕವಾಗಿ ತಿಳಿಯಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಶ್ರೇಣಿಗೆ ಸಂಬಂಧಿಸಿದ ಹಲವಾರು ಪರಿಸರ ಸವಾಲುಗಳು ಮುನ್ನೆಲೆಗೆ ಬಂದಿವೆ, ಇವುಗಳನ್ನು ತಗ್ಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಶ್ರೇಣಿಯೊಂದಿಗೆ ಸಂಪರ್ಕ ಹೊಂದಿದ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದರತ್ತ  ನಾವು  ಗಮನ ಹರಿಸಿದ್ದೇವೆ. ನಾವು ಆಯಾ ಸ್ಥಳೀಯ ಆಡಳಿತಗಳೊಂದಿಗೆ ಕೆಲಸ ಮಾಡಲಿದ್ದೇವೆ ಮತ್ತು ನೀರಿನ ವ್ಯವಸ್ಥೆಗಳನ್ನು ಸುಧಾರಿಸುವುದು, ಧೂಳಿನ ಬಿರುಗಾಳಿಗಳನ್ನು ನಿಗ್ರಹಿಸುವುದು, ಥಾರ್ ಮರುಭೂಮಿಯು ಪೂರ್ವಕ್ಕೆ ವಿಸ್ತರಣೆಗೊಳ್ಳುವುದನ್ನು ನಿಲ್ಲಿಸುವುದು ಸೇರಿದಂತೆ  ಇನ್ನೂ ಹೆಚ್ಚಿನ ವಿಷಯಗಳಿಗೆ ಒತ್ತು ನೀಡಲಿದ್ದೇವೆ."

"ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ ಜೊತೆಗೆ, ವಿಶೇಷವಾಗಿ ಸ್ಥಳಾವಕಾಶದ ಮಿತಿಯಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಾವು ಹೊಸ ತಂತ್ರಗಳನ್ನು ಪ್ರೋತ್ಸಾಹಿಸುತ್ತೇವೆ. ಮೇರಿ ಲೈಫ್ ಪೋರ್ಟಲ್‌ನಲ್ಲಿ ತೋಟಗಾರಿಕೆ/ಪ್ಲಾಂಟೇಶನ್ ಚಟುವಟಿಕೆಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ. ನಮ್ಮ ದೇಶದ ಯುವಜನರು ಈ ಆಂದೋಲನದಲ್ಲಿ ಭಾಗವಹಿಸಲು ಮತ್ತು ನಮ್ಮ ಗ್ರಹದ ಹಸಿರು ಹೊದಿಕೆಯನ್ನು ಹೆಚ್ಚಿಸಲು ನಾನು ಕರೆ ನೀಡುತ್ತೇನೆ."

 

 

*****


(Release ID: 2134145)