ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಡಾರ್ಕ್ ಪ್ಯಾಟರ್ನ್ (ಮೋಸಗೊಳಿಸುವ ಮಾದರಿ) ಗಳನ್ನು ಕುರಿತು ಕೇಂದ್ರವು ಉನ್ನತ ಮಟ್ಟದ ಪಾಲುದಾರರ ಸಭೆಯನ್ನು ಆಯೋಜಿಸಿತು


ಇಂದಿನ ಗ್ರಾಹಕರು ಜಾಗರೂಕರಾಗಿದ್ದಾರೆ, ತಿಳುವಳಿಕೆ ಹೊಂದಿದ್ದಾರೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು

ಗ್ರಾಹಕ ರಕ್ಷಣೆಗೆ ಅನುಗುಣವಾಗಿ ಡಾರ್ಕ್ ಪ್ಯಾಟರ್ನ್‌ ಗಳನ್ನು ವಿಶ್ಲೇಷಿಸಲು ಮತ್ತು ತೆಗೆದುಹಾಕಲು ಸ್ವಯಂ-ಲೆಕ್ಕಪರಿಶೋಧನೆಗಳನ್ನು ನಡೆಸುವಂತೆ ಕೇಂದ್ರ ಸಚಿವರು ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ನಿರ್ದೇಶನ ನೀಡಿದ್ದಾರೆ

Posted On: 28 MAY 2025 7:55PM by PIB Bengaluru

ಇಂದಿನ ಗ್ರಾಹಕರು ಜಾಗರೂಕರಾಗಿದ್ದಾರೆ, ತಿಳುವಳಿಕೆ ಹೊಂದಿದ್ದಾರೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ - ಅವರು ಮೋಸವನ್ನು ಸಹಿಸುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಡಿಜಿಟಲ್ ವಾಣಿಜ್ಯದಲ್ಲಿನ ಡಾರ್ಕ್ ಪ್ಯಾಟರ್ನ್‌(ಮೋಸಗೊಳಿಸುವ ಮಾದರಿ) ಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ನಿಭಾಯಿಸಲು ಇಂದು ನಡೆದ ಉನ್ನತ ಮಟ್ಟದ ಭಾಗೀದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಸಭೆಯನ್ನು ಆಯೋಜಿಸಿತ್ತು. ಇದರಲ್ಲಿ ಪ್ರಮುಖ ಇ-ಕಾಮರ್ಸ್ ಕಂಪನಿಗಳು, ಉದ್ಯಮ ಸಂಘಗಳು, ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ವಂಚನೆಯ ಆನ್‌ಲೈನ್ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವ ಕುರಿತು ಕೇಂದ್ರೀಕೃತ ಸಂವಾದ ನಡೆಯಿತು.

ಜವಾಬ್ದಾರಿಯುತ ಉದ್ಯಮ ನಡವಳಿಕೆಯ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, ಪ್ರಮುಖ ಇ-ಕಾಮರ್ಸ್ ಕಂಪನಿಗಳು ಮತ್ತು ಉದ್ಯಮ ಸಂಘಗಳು ಸೇರಿದಂತೆ ವಿವಿಧ ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆಯ ಫಲಿತಾಂಶವಾಗಿ ಡಾರ್ಕ್ ಪ್ಯಾಟರ್ನ್‌ ಗಳ ಕುರಿತಾದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಪರಸ್ಪರ ಒಮ್ಮತಕ್ಕೆ ಬಂದ ನಂತರ, ಎಲ್ಲಾ ಕಂಪನಿಗಳು ಈಗ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಅವುಗಳನ್ನು ತಮ್ಮ ಆಂತರಿಕ ಆಡಳಿತ ಮತ್ತು ಗ್ರಾಹಕ ರಕ್ಷಣಾ ಕಾರ್ಯವಿಧಾನಗಳಲ್ಲಿ ಸಂಯೋಜಿಸಬೇಕು ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ (ಎನ್‌ ಸಿ ಎಚ್) ಡಾರ್ಕ್ ಪ್ಯಾಟರ್ನ್‌‌ ಗಳಿಗೆ ಸಂಬಂಧಿಸಿದ ಗ್ರಾಹಕರ ದೂರುಗಳಲ್ಲಿ ಗಮನಾರ್ಹ ಹೆಚ್ಚಳದ ಇತ್ತೀಚಿನ ಬೆಳವಣಿಗೆಗಳನ್ನು ಶ್ರೀ ಜೋಶಿ ವಿವರಿಸಿದರು. ಇದನ್ನು ನಿಭಾಯಿಸಲು, ಅವರು ಎಲ್ಲಾ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು. ತಮ್ಮ ಪ್ಲಾಟ್‌ಫಾರ್ಮ್‌ ಗಳಲ್ಲಿ ಡಾರ್ಕ್ ಪ್ಯಾಟರ್ನ್‌ ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಿಯಮಿತ ಆಂತರಿಕ ಲೆಕ್ಕಪರಿಶೋಧನೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು. "ಕಂಪನಿಗಳು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮಧ್ಯಪ್ರವೇಶದವರೆಗೆ ಕಾಯಬಾರದು. ನೋಟಿಸ್ ನೀಡುವ ಮೊದಲು ಅವರು ಈ ಮೋಸದ ಅಭ್ಯಾಸಗಳನ್ನು ಗುರುತಿಸಬೇಕು ಮತ್ತು ತೆಗೆದುಹಾಕಬೇಕು. ಇದು ಕೇವಲ ನಿಯಂತ್ರಕ ಅನುಸರಣೆಯಲ್ಲ - ಇದು ನಿಮ್ಮ ಗ್ರಾಹಕರೊಂದಿಗೆ ವಿಶ್ವಾಸವನ್ನು ನಿರ್ಮಿಸುವುದಾಗಿದೆ" ಎಂದು ಅವರು ಹೇಳಿದರು.

ಡಾರ್ಕ್ ಪ್ಯಾಟರ್ನ್ಸ್ ಬಸ್ಟರ್ ಹ್ಯಾಕಥಾನ್ 2023 ರ ಮೂಲಕ ಹೊರಹೊಮ್ಮುವ ಸೃಜನಶೀಲ ವಿಚಾರಗಳು ಮತ್ತು ತಾಂತ್ರಿಕ ಪರಿಹಾರಗಳು, ಇಲಾಖೆಯು ಐಐಟಿ ಬಿ ಎಚ್‌ ಯು ಸಹಯೋಗದೊಂದಿಗೆ ಜಾಗೃತಿ ಅಪ್ಲಿಕೇಶನ್, ಜಾಗೋ ಗ್ರಾಹಕ್ ಜಾಗೋ ಅಪ್ಲಿಕೇಶನ್ ಮತ್ತು ಜಾಗೃತಿ ಡ್ಯಾಶ್‌ಬೋರ್ಡ್ ಎಂಬ ಮೂರು ಪ್ರಬಲ ಗ್ರಾಹಕ ರಕ್ಷಣಾ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.

"ಆನ್‌ಲೈನ್ ಗ್ರಾಹಕರನ್ನು ದಾರಿ ತಪ್ಪಿಸುವ ಮೋಸಗೊಳಿಸುವ ವಿನ್ಯಾಸ ಅಭ್ಯಾಸಗಳನ್ನು ನಿಭಾಯಿಸುವ ನಮ್ಮ ಸಂಕಲ್ಪಕ್ಕೆ ಈ ಪರಿಕರಗಳು ಸಾಕ್ಷಿಯಾಗಿವೆ" ಎಂದು ಸಚಿವರು ಹೇಳಿದರು. ಜಾಗೃತಿ ಅಪ್ಲಿಕೇಶನ್ ಗ್ರಾಹಕರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಗಳಲ್ಲಿನ ಡಾರ್ಕ್ ಪ್ಯಾಟರ್ನ್‌ ಗಳನ್ನು ನೇರವಾಗಿ ಸಿಸಿಪಿಎಗೆ ವರದಿ ಮಾಡಲು ಮತ್ತು ಅನುಮಾನಾಸ್ಪದ ವೆಬ್‌ಸೈಟ್‌ ಗಳನ್ನು ಫ್ಲ್ಯಾಗ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿವರಿಸಿದರು, ಜಾಗೋ ಗ್ರಾಹಕ್ ಜಾಗೋ ಅಪ್ಲಿಕೇಶನ್ ಬಳಕೆದಾರರನ್ನು ದುರುದ್ದೇಶಪೂರಿತ ಪ್ಲಾಟ್‌ಫಾರ್ಮ್‌ ಗಳಿಂದ ರಕ್ಷಿಸುತ್ತದೆ ಮತ್ತು ಗ್ರಾಹಕರು ಭೇಟಿ ನIಡುವ ಇ-ಕಾಮರ್ಸ್ ಲಿಂಕ್‌ ಗಳಿಗೆ ನೈಜ-ಸಮಯದ ಸುರಕ್ಷತಾ ಸ್ಕೋರ್‌ಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಜಾಗೃತಿ ಡ್ಯಾಶ್‌ಬೋರ್ಡ್ ದೃಢವಾದ ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಸಿಸಿಪಿಎ ಪರಿಶೀಲನೆಯ ಅಡಿಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಗಳಿಗೆ ಡಾರ್ಕ್ ಪ್ಯಾಟರ್ನ್‌ ಗಳ ಕುರಿತು ವಿವರವಾದ ವರದಿಗಳನ್ನು ರಚಿಸುತ್ತದೆ. ಈ ಪ್ರಯತ್ನಗಳು ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವರು ಒತ್ತಿ ಹೇಳಿದರು.

ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು ಈ ವಿಷಯದ ಬಗ್ಗೆ ಒಳನೋಟವುಳ್ಳ ಪರಿಚಯವನ್ನು ನೀಡಿದರು ಮತ್ತು ಈ ಜ್ವಲಂತ ಸಮಸ್ಯೆಯನ್ನು ಪರಿಹರಿಸಲು ಇಲಾಖೆಯ ಬಹುಮುಖಿ ಪ್ರಯತ್ನಗಳನ್ನು ವಿವರಿಸಿದರು. ಬಳಕೆದಾರರು ಅನಪೇಕ್ಷಿತ ಆಯ್ಕೆಗಳನ್ನು ಮಾಡುವಂತೆ ತಪ್ಪು ದಾರಿಗೆ ಎಳೆಯುವ ಅಥವಾ ಒತ್ತಾಯಿಸುವ ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ ಗಳಲ್ಲಿ ಬಳಸಲಾಗುವ ಡಾರ್ಕ್ ಪ್ಯಾಟರ್ನ್‌ ವಿನ್ಯಾಸ ಅಂಶಗಳ ಆತಂಕಕಾರಿ ಏರಿಕೆಯನ್ನು ಒತ್ತಿ ಹೇಳಿದರು. ಈ ಅಭ್ಯಾಸಗಳು ಗ್ರಾಹಕರ ಸ್ವಾಯತ್ತತೆಯನ್ನು ಹಾಳುಮಾಡುತ್ತವೆ, ಶಾಪಿಂಗ್ ನಡವಳಿಕೆಯ ಮೇಲೆ ನಿಯಂತ್ರ ಸಾಧಿಸುತ್ತವೆ ಮತ್ತು ಗ್ರಾಹಕರ ನಂಬಿಕೆ ಮತ್ತು ಯೋಗಕ್ಷೇಮದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ನ್ಯಾಯಯುತ ಡಿಜಿಟಲ್ ವ್ಯಾಪಾರವನ್ನು ಖಚಿತಪಡಿಸಿಕೊಳ್ಳಲು ಡಾರ್ಕ್ ಪ್ಯಾಟರ್ನ್‌ ಗಳನ್ನು ನಿಭಾಯಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

2024ರ ರಾಷ್ಟ್ರೀಯ ಗ್ರಾಹಕ ದಿನದಂದು, ಅನೇಕ ಕಂಪನಿಗಳು ಸುರಕ್ಷತಾ ಪ್ರತಿಜ್ಞೆಯನ್ನು ತೆಗೆದುಕೊಂಡಿವೆ, ಇದು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಕ್ರಿಯ ಕ್ರಮಗಳನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಅವರ ವೇದಿಕೆಗಳಲ್ಲಿ ಬಳಸಲಾಗುವ ಡಾರ್ಕ್‌ ಪ್ಯಾಟರ್ನ್‌ ಗಳು ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ಉಲ್ಲಂಘಿಸುತ್ತವೆ. ಇಲಾಖೆಯಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ ಸಿ ಎಚ್) ದೇಶಾದ್ಯಂತ ಗ್ರಾಹಕರಿಗೆ ವ್ಯಾಜ್ಯ ಪೂರ್ವ ಹಂತದಲ್ಲಿ ಅವರ ಕುಂದುಕೊರತೆ ಪರಿಹಾರಕ್ಕಾಗಿ ಒಂದೇ ಪ್ರವೇಶ ಕೇಂದ್ರವಾಗಿ ಹೊರಹೊಮ್ಮಿದೆ, ಇ-ಕಾಮರ್ಸ್ ವೇದಿಕೆಗಳು ಸಂಯೋಜಿತ ಭಾಗೀದಾರರಾಗಿವೆ ಎಂದು ಅವರು ಹೇಳಿದರು. ಇಂದು, ಅನೇಕ ಸಂಸ್ಥೆಗಳು ಮತ್ತು ಮಹತ್ವಾಕಾಂಕ್ಷಿ ಗ್ರಾಹಕರು ಗ್ರಾಹಕರ ಸುರಕ್ಷತೆ ಮತ್ತು ಗ್ರಾಹಕ ಜಾಗೃತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಡಾರ್ಕ್ ಪ್ಯಾಟರ್ನ್‌ ಗಳನ್ನು ಗುರುತಿಸಿರುವ ಗ್ರಾಹಕರಿಂದ ಇಲಾಖೆಗೆ ನೇರ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಅವರು ಹೇಳಿದರು. ಗ್ರಾಹಕರ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ನಾವು ಇಂದು ಒಟ್ಟುಗೂಡಿದ್ದೇವೆ ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಪ್ರಮುಖ ಇ-ಕಾಮರ್ಸ್ ಕಂಪನಿಗಳಾದ 1mg.com, AIRBNB, Amazon, Apple, Zepto, Booking.com, Ola Electric, Tata Digital, Adidas India, Samsung, Ikigai Law, Indigo Airlines, Ixigo, MakeMyTrip, Mastercard, Meta, Netmeds, Namma Yatri, PharmEasy, Reliance Retail, Rapido, Shiprocket, Snapdeal, Swiggy, Thomas Cook, Uber, Whatsapp, Yatra, Zomato & Blinkit, Flipkart, Google, Justdial, ONDC ಮತ್ತು Paytm ಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೆ, ಪ್ರಮುಖ ಉದ್ಯಮ ಸಂಘಗಳಾದ CAIT, CCI, FICCI, NASSCOM, PHDCCI ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘ ಹಾಗೂ ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಕೂಡ ಸಭೆಯಲ್ಲಿ ಭಾಗವಹಿಸಿದ್ದವು.

ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭರತ್ ಹರ್ಬನ್ಸ್‌ಲಾಲ್ ಖೇರಾ ಅವರು ತಮ್ಮ ಭಾಷಣದಲ್ಲಿ, ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಜೊತೆಗೆ ವ್ಯವಹಾರವನ್ನು ಸುಲಭಗೊಳಿಸಲು ಇಲಾಖೆ ಯಾವಾಗಲೂ ಬೆಂಬಲ ನೀಡಿದೆ ಎಂದು ಹೇಳಿದರು. ಇ-ಕಾಮರ್ಸ್‌ ನಲ್ಲಿ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ಅನ್ನು ಅಧಿಸೂಚಿಸಲಾಗಿದೆ. ಡಾರ್ಕ್ ಪ್ಯಾಟರ್ನ್‌ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳು, 2023 ಅನ್ನು ಪ್ರಕಟಿಸಿರುವ ಇಲಾಖೆಯ ಮಹತ್ವದ ಸಾಧನೆಯ ಕುರಿತು ಅವರು ವಿವರಿಸಿದರು, ಇವುಗಳನ್ನು ವ್ಯಾಪಕ ಪಾಲುದಾರರ ಸಮಾಲೋಚನೆಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ ಮತ್ತು ದುರುಪಯೋಗದ ಡಿಜಿಟಲ್ ವಿನ್ಯಾಸ ಅಭ್ಯಾಸಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಮತ್ತು ನಿಷೇಧಿಸುವ ಗುರಿಯನ್ನು ಹೊಂದಿದೆ. ಮಾರ್ಗಸೂಚಿಗಳಿಂದ 13 ಡಾರ್ಕ್ ಪ್ಯಾಟರ್ನ್‌ ಗಳನ್ನು ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ, ಜಂಟಿ ಕಾರ್ಯದರ್ಶಿ ಶ್ರೀ ಅನುಪಮ್ ಮಿಶ್ರಾ ಅವರು ಡಾರ್ಕ್ ಪ್ಯಾಟರ್ನ್ಸ್ ಎಂದೂ ಕರೆಯಲಾಗುವ ಮೋಸಗೊಳಿಸುವ ವಿನ್ಯಾಸ ಅಭ್ಯಾಸಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ವಿವರಿಸುವ ಸಮಗ್ರ ಪ್ರಸ್ತುತಿಯನ್ನು ನೀಡಿದರು. ಗ್ರಾಹಕರ ಆಯ್ಕೆಯನ್ನು ನಿಯಂತ್ರಿಸುವ ಪದ್ಧತಿಗಳು ಗ್ರಾಹಕರನ್ನು ದಾರಿತಪ್ಪಿಸಲು, ಒತ್ತಾಯಿಸಲು ಅಥವಾ ವಂಚಿಸಲು ಹೇಗೆ ಕಾರಣವಾಗುತ್ತವೆ ಎಂಬುದನ್ನು ಅವರು ಎತ್ತಿ ತೋರಿಸಿದರು - ಇದು ಸಾಮಾನ್ಯವಾಗಿ ಅನಪೇಕ್ಷಿತ ಖರೀದಿಗಳು, ಗೌಪ್ಯತೆಯ ಉಲ್ಲಂಘನೆ ಮತ್ತು ಹೆಚ್ಚಿದ ಡಿಜಿಟಲ್ ವ್ಯಸನಕ್ಕೆ ಕಾರಣವಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ 13 ನಿರ್ದಿಷ್ಟ ಡಾರ್ಕ್ ಪ್ಯಾಟರ್ನ್‌ ಗಳನ್ನು ವ್ಯಾಖ್ಯಾನಿಸುವ ಮತ್ತು ನಿಯಂತ್ರಿಸುವ "ಡಾರ್ಕ್ ಪ್ಯಾಟರ್ನ್‌ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳು, 2023" ನ ರೂಪುರೇಷೆ ಮತ್ತು ಅಧಿಸೂಚನೆ ಸೇರಿದಂತೆ ಇಲಾಖೆಯ ಸಕ್ರಿಯ ವಿಧಾನವನ್ನು ಪ್ರಸ್ತುತಿಯು ವಿವರಿಸಿತು. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ತೆಗೆದುಕೊಂಡ ಪಾಲುದಾರರ ಸಮಾಲೋಚನೆಗಳು, ಅಂತರರಾಷ್ಟ್ರೀಯ ದೃಷ್ಟಿಕೋನಗಳು ಮತ್ತು ಜಾರಿ ಕ್ರಮಗಳ ಕುರಿತು ಅವರು ಒಳನೋಟಗಳನ್ನು ಹಂಚಿಕೊಂಡರು, ಡಾರ್ಕ್ ಪ್ಯಾಟರ್ನ್‌ ಗಳನ್ನು ಎದುರಿಸಲು ಮೀಸಲಾದ ಮಾರ್ಗಸೂಚಿಗಳನ್ನು ಹೊರಡಿಸಿದ ಮೊದಲ ದೇಶ ಭಾರತವಾಗಿದೆ ಎಂದು ಅವರು ಹೇಳಿದರು.

ಉನ್ನತ ಮಟ್ಟದ ಸಭೆಯು, ಡಿಜಿಟಲ್ ಗ್ರಾಹಕರನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು ಮತ್ತು ಪಾರದರ್ಶಕ, ನೈತಿಕ ಮತ್ತು ಬಳಕೆದಾರ-ಕೇಂದ್ರಿತ ಆನ್‌ಲೈನ್ ಪರಿಸರವನ್ನು ಸೃಷ್ಟಿಸಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿತು. ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಲ್ಲಿ ವ್ಯವಹಾರಗಳನ್ನು ಬೆಂಬಲಿಸಲು ಇಲಾಖೆ ತನ್ನ ಸಿದ್ಧತೆಯನ್ನು ಪುನರುಚ್ಚರಿಸಿತು ಮತ್ತು ಭಾರತದ ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಯುತ ಮತ್ತು ಸಮಗ್ರವಾಗಿಡಲು ಉದ್ಯಮ, ಶೈಕ್ಷಣಿಕ ಮತ್ತು ನಾಗರಿಕ ಸಮಾಜದೊಂದಿಗೆ ನಿರಂತರ ಸಹಯೋಗವನ್ನು ಸ್ವಾಗತಿಸಿತು.

 

*****


(Release ID: 2132303)