ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮತ್ತು ಮಾದಕ ವಸ್ತು ಮುಕ್ತಗೊಳಿಸಲು ಶಿಕ್ಷಣ ಸಚಿವಾಲಯಿಂದ ರಾಷ್ಟ್ರವ್ಯಾಪಿ ಜಾರಿ ಅಭಿಯಾನ ಪ್ರಾರಂಭ
Posted On:
23 MAY 2025 2:45PM by PIB Bengaluru
ತಂಬಾಕು ಮತ್ತು ಮಾದಕ ವಸ್ತುಗಳ ಹಾನಿಕಾರಕ ಪರಿಣಾಮಗಳಿಂದ ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿ, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಒಎಸ್ಇಎಲ್) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿಗಳು) ಬಲವಾದ ಕರೆ ನೀಡಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳನ್ನು ತಂಬಾಕು, ಮದ್ಯ ಮತ್ತು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.
ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಅವರು ರಾಷ್ಟ್ರವ್ಯಾಪಿ ಅಭಿಯಾನವನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. 2025 ರ ಮೇ 15 ರಂದು ಈ ನಿಟ್ಟಿನಲ್ಲಿ ಮಾದಕ ಸಮನ್ವಯ ಕೇಂದ್ರ [ಎನ್.ಸಿ.ಒ.ಆರ್.ಡಿ]ದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ 8 ನೇ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಈ ತೀರ್ಮಾನ ಹೊರ ಬಿದ್ದಿದೆ. ಈ ಸಭೆಯಲ್ಲಿ ಹಾನಿಕಾರಕ ವಸ್ತುಗಳಿಂದ ಯುವ ಮನಸ್ಸುಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿದೆ ಮತ್ತು ಶಿಕ್ಷಣ ಮತ್ತು ಕಾನೂನು ಜಾರಿ ಇಲಾಖೆಗಳ ನಡುವೆ ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದೆ.
ಏಕೆ ಇದು ಮಹತ್ವ
ಭಾರತವು ವಿಶ್ವದ ಅತಿ ಹೆಚ್ಚು ಯುವ ಜನರನ್ನು ಹೊಂದಿದ್ದು, ನಾಗರಿಕರಲ್ಲಿ ಹೆಚ್ಚಿನವರು 29 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಯುವ ಸಮೂಹ ದೇಶದ ಭವಿಷ್ಯಕ್ಕೆ ಪ್ರಬಲ ಶಕ್ತಿಯಾಗಿ ಪ್ರತಿನಿಧಿಸುತ್ತದೆ ಮತ್ತು ಅವರನ್ನು ರಕ್ಷಿಸಬೇಕಾಗಿದೆ. ಈ ವಲಯ ಪ್ರಮುಖ ಜನ ಶಕ್ತಿಯನ್ನು ಪ್ರತಿನಿಧಿಸುತ್ತದೆ – ವಿಕಸಿತ ಭಾರತ ನಿರ್ಮಿಸಲು ಇವರು ನಿರ್ಣಾಯಕರಾಗಿದ್ದಾರೆ.
ಯುವಜನರಲ್ಲಿ ತಂಬಾಕು ಸೇವನೆ ವೇಗವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಶಾಲೆ, ಕಾಲೇಜು ಆವರಣದಲ್ಲಿ ಇತರ ರೀತಿಯ ಮಾದಕ ದ್ರವ್ಯ ಸೇವನೆಯನ್ನು ಪ್ರಯೋಗಿಸುತ್ತಿದೆ. ಜಾಗತಿಕ ಯುವ ತಂಬಾಕು ಸಮೀಕ್ಷೆ (ಜಿವೈಟಿಎಸ್-2), 2019, 13–15 ವರ್ಷ ವಯಸ್ಸಿನ ಭಾರತೀಯ ವಿದ್ಯಾರ್ಥಿಗಳಲ್ಲಿ 8.5% ರಷ್ಟು ಜನರು ಯಾವುದಾದರೂ ರೂಪದಲ್ಲಿ ತಂಬಾಕನ್ನು ಬಳಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಭಾರತದಲ್ಲಿ ಪ್ರತಿದಿನ 5,500 ಕ್ಕೂ ಹೆಚ್ಚು ಮಕ್ಕಳು ತಂಬಾಕನ್ನು ಬಳಸಲು ಪ್ರಾರಂಭಿಸುತ್ತಿದ್ದಾರೆ.
ತಂಬಾಕು ಸೇವನೆಯು ಹೆಚ್ಚು ಅಪಾಯಕಾರಿ ಪದಾರ್ಥಗಳಿಗೆ ಪ್ರವೇಶದ್ವಾರವಾಗಿದೆ. ಹೆಚ್ಚಿನ ಪ್ರಮಾಣದ ವಯಸ್ಕ ಬಳಕೆದಾರರು ಹದಿಹರೆಯದಲ್ಲಿಯೇ ತಂಬಾಕು ಸೇವನೆಯನ್ನು ಪ್ರಾರಂಭಿಸುತ್ತಾರೆ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳ ಹೊರತಾಗಿಯೂ, ಅನೇಕರು ಶಾಲೆಗಳ ಬಳಿಯ ಅಂಗಡಿಗಳಿಂದ ಈ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತಿದೆ.
ಸರ್ಕಾರದ ಪ್ರತಿಕ್ರಿಯೆ
ಹೆಚ್ಚುತ್ತಿರುವ ಈ ಭೀತಿಯನ್ನು ಎದುರಿಸಲು, ಶಿಕ್ಷಣ ಸಚಿವಾಲಯವು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ (ಟಿಒಎಫ್ಇಐ) ಮಾರ್ಗಸೂಚಿಗಳನ್ನು ಸಕ್ರಿಯವಾಗಿ ಜಾರಿಗೆ ತರುತ್ತಿದೆ. ಶಾಲೆಗಳು ಮತ್ತು ಕಾಲೇಜುಗಳನ್ನು ತಂಬಾಕು ಬಳಕೆ ಮತ್ತು ಮಾರಾಟದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಇದು ರಚನಾತ್ಮಕ ಮಾರ್ಗಸೂಚಿಯನ್ನು ಒದಗಿಸುತ್ತದೆ. (ಡಿಒಎಸ್ಇಎಲ್) ಮೇ 31, 2024 ರಂದು (ಟಿಒಎಫ್ಇಐ) ಅನುಷ್ಠಾನ ಕೈಪಿಡಿಯನ್ನು ಪ್ರಾರಂಭಿಸಲಾಗಿತ್ತು. ಇದು ಶಾಲೆಗಳು (ಟಿಒಎಫ್ಇಐ) ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಆರೋಗ್ಯಕರ, ತಂಬಾಕು ಮುಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ತಂಬಾಕಿನ ಅಪಾಯಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಮತ್ತು ಜಾರಿಗೊಳಿಸಲು ಎಲ್ಲಾ ಪಾಲುದಾರರಿಗೆ ಈ ಕೈಪಿಡಿ ಅಧಿಕಾರ ನೀಡುತ್ತದೆ.
ಟಿಒಎಫ್ಇಐ ಮಾರ್ಗಸೂಚಿಗಳು ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಕ್ಯಾಂಪಸ್ಗಳನ್ನು ತಂಬಾಕು ಮುಕ್ತವಾಗಿಡಲು ಕೈಗೊಳ್ಳಬೇಕಾದ ಒಂಬತ್ತು ಚಟುವಟಿಕೆಗಳನ್ನು ಪಟ್ಟಿ ಮಾಡಿದೆ.
- ಆವರಣದ ಒಳಗೆ 'ತಂಬಾಕು ಮುಕ್ತ ಪ್ರದೇಶ' ಎಂಬ ಫಲಕದ ಪ್ರದರ್ಶನ
- ಪ್ರವೇಶ ದ್ವಾರ/ಗಡಿಯಲ್ಲಿ 'ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ' ಎಂಬ ಫಲಕದ ಪ್ರದರ್ಶನ
- ಆವರಣದಲ್ಲಿ ತಂಬಾಕು ಬಳಕೆಯ ಯಾವುದೇ ಪುರಾವೆಗಳಿಲ್ಲ
- ತಂಬಾಕಿನ ಹಾನಿಗಳ ಕುರಿತು ಜಾಗೃತಿ ಸಾಮಗ್ರಿಗಳ ಪ್ರದರ್ಶನ
- ಪ್ರತಿ ಆರು ತಿಂಗಳಿಗೊಮ್ಮೆ ಕನಿಷ್ಠ ಒಂದು ತಂಬಾಕು ನಿಯಂತ್ರಣ ಚಟುವಟಿಕೆ
- ತಂಬಾಕು ಮೇಲ್ವಿಚಾರಕರ ನಾಮನಿರ್ದೇಶನ
- ಶಾಲಾ ನೀತಿ ಸಂಹಿತೆಯಲ್ಲಿ ತಂಬಾಕು ಮುಕ್ತ ನೀತಿಯನ್ನು ಸೇರಿಸುವುದು
- ತಂಬಾಕು ಮುಕ್ತ ವಲಯವನ್ನು ಗೊತ್ತುಪಡಿಸಲು ಶಿಕ್ಷಣ ಸಂಸ್ಥೆಗಳ ಸುತ್ತ 100 ಗಜಗಳ ಸುತ್ತ ಹಳದಿ ರೇಖೆಯನ್ನು ಗುರುತಿಸುವುದು
- ಆ 100-ಗಜ ವಲಯದೊಳಗೆ ಯಾವುದೇ ಅಂಗಡಿಗಳು ಅಥವಾ ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳುವುದು
ಇವುಗಳಲ್ಲಿ, ಎರಡು ಪ್ರಮುಖ ಕ್ರಮಗಳಿಗೆ ಸ್ಥಳೀಯ ಅಧಿಕಾರಿಗಳಿಂದ ತಕ್ಷಣದ ಬೆಂಬಲ ಬೇಕಾಗುತ್ತದೆ:
- ಚಟುವಟಿಕೆ 8 – ತಂಬಾಕು ಮುಕ್ತ ವಲಯವನ್ನು ಗೊತ್ತುಪಡಿಸಲು ಶಿಕ್ಷಣ ಸಂಸ್ಥೆಗಳ ಸುತ್ತ 100 ಗಜಗಳ ಸುತ್ತ ಹಳದಿ ರೇಖೆಯನ್ನು ಗುರುತಿಸುವುದು.
- ಚಟುವಟಿಕೆ 9 – ಆ 100-ಗಜ ವಲಯದೊಳಗೆ ಯಾವುದೇ ಅಂಗಡಿಗಳು ಅಥವಾ ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳುವುದು.
ಈ ಕ್ರಮಗಳನ್ನು ಉತ್ಸಾಹದಿಂದ ಜಾರಿಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಶಿಕ್ಷಣ ಅಧಿಕಾರಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಕ್ರಮ ಕೈಗೊಳ್ಳುವಂತೆ ಸಚಿವಾಲಯ ಕರೆ ನೀಡಿದೆ. ನವೆಂಬರ್ 2024 ರಲ್ಲಿ ಹೊರಡಿಸಲಾದ ಗೃಹ ಸಚಿವಾಲಯದ ಸಲಹೆಯು ಈಗಾಗಲೇ ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ವಿನಂತಿಸಿತ್ತು.
ತಿಂಗಳು ಪೂರ್ತಿ ಜಾರಿ ಅಭಿಯಾನ
ವಿಶ್ವ ತಂಬಾಕು ರಹಿತ ದಿನ ಮೇ 31, 2025 ರಿಂದ ಪ್ರಾರಂಭ ಮತ್ತು ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಜೂನ್ 26, 2025 ರವರೆಗೆ ಅಭಿಯಾನ ನಡೆಯಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಟ್ಪಾ), 2003 ರ ಸೆಕ್ಷನ್ 6(ಬಿ) ಅನ್ನು ಜಾರಿಗೊಳಿಸಲು ಒಂದು ತಿಂಗಳ ಅವಧಿಯ ಜಾರಿ ಅಭಿಯಾನವನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ.
ಇದು ನಿಷೇಧಿಸಲ್ಪಡುತ್ತದೆ:
- ಶಿಕ್ಷಣ ಸಂಸ್ಥೆಗಳ 100 ಗಜಗಳ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ
- ಅಪ್ರಾಪ್ತ ವಯಸ್ಕರಿಗೆ ಅಥವಾ ಅವರಿಂದ ತಂಬಾಕು ಮಾರಾಟ
ಶಾಲಾ ಮತ್ತು ಕಾಲೇಜು ಸಿಬ್ಬಂದಿಗಳು ಉಲ್ಲಂಘನೆಗಳನ್ನು ನೇರವಾಗಿ ಮತ್ತು ಭಯವಿಲ್ಲದೇ ಸ್ಥಳೀಯ ಪೊಲೀಸರಿಗೆ ವರದಿ ಮಾಡಲು ಅನುವು ಮಾಡಿಕೊಡುವ ಸ್ಪಷ್ಟ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್.ಒ.ಪಿ)ವನ್ನು ಅಭಿವೃದ್ಧಿಪಡಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತದೆ.
ಸಮುದಾಯ ಒಳಗೊಳ್ಳುವುದು ಮತ್ತು ಅರಿವು ಪ್ರಮುಖವಾದದ್ದು
ಈ ಧ್ಯೇಯವನ್ನು ಬೆಂಬಲಿಸುವಲ್ಲಿ ಶಾಲಾ ನಿರ್ವಹಣಾ ಸಮಿತಿಗಳು (ಎಸ್.ಎಂ.ಎಸ್), ಶಿಕ್ಷಕರು ಮತ್ತು ಪೋಷಕರ ಪಾತ್ರವನ್ನು ಸಚಿವಾಲಯ ಒತ್ತಿಹೇಳಿದೆ. ಜಾಗೃತಿ ಮೂಡಿಸುವ ಮತ್ತು ಉಲ್ಲಂಘನೆಗಳನ್ನು ವರದಿ ಮಾಡುವ ಮೂಲಕ, ಸಮುದಾಯಗಳು ವಿದ್ಯಾರ್ಥಿಗಳು ಕಲಿಯಲು ಮತ್ತು ಬೆಳೆಯಲು ಸುರಕ್ಷಿತ ಸ್ಥಳಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ತಂಬಾಕಿನ ಹಾನಿಕಾರಕ ಪರಿಣಾಮಗಳ ಕುರಿತು ಮೋಜಿನ ರೀತಿಯಲ್ಲಿ ಶಿಕ್ಷಣ ನೀಡಲು, ಸಚಿವಾಲಯವು ಏಕಕಾಲದಲ್ಲಿ ಮೈಗೌ ವೇದಿಕೆಯಲ್ಲಿ (https://quiz.mygov.in) 'ವಿಶ್ವ ತಂಬಾಕು ರಹಿತ ದಿನದ ಜಾಗೃತಿ ರಸಪ್ರಶ್ನೆ-2025' ಅನ್ನು ಪ್ರಾರಂಭಿಸಿದೆ. ಈ ರಸಪ್ರಶ್ನೆಯು ಮೇ 22, 2025 ರಿಂದ ಜುಲೈ 21, 2025 ರವರೆಗೆ ನೇರಪ್ರಸಾರವಾಗಲಿದೆ. ತಂಬಾಕಿನ ಅಪಾಯಗಳ ಕುರಿತು ಯುವ ಸಮೂಹಕ್ಕೆ ಜ್ಞಾನವನ್ನು ನೀಡುವ ಮೂಲಕ ತಂಬಾಕು ಬಳಕೆಯ ವಿರುದ್ಧ ಬಲವಾದ ಸಾಮಾಜಿಕ ರೂಢಿಗಳನ್ನು ರೂಪಿಸುವತ್ತ ಇದು ಒಂದು ಹೆಜ್ಜೆಯಾಗಿದೆ.
ಸಂಪರ್ಕ: https://quiz.mygov.in/quiz/world-no-tobacco-day-awareness-quiz/
ಈ ಮಹತ್ವದ ಅಭಿಯಾನವನ್ನು ಬೆಂಬಲಿಸುವಂತೆ ಎಲ್ಲಾ ನಾಗರಿಕರನ್ನು ಕೋರಲಾಗಿದೆ. ನಿರಂತರ ಪ್ರಯತ್ನಗಳು ಮತ್ತು ಸಾರ್ವಜನಿಕ ಬೆಂಬಲದೊಂದಿಗೆ, ಭಾರತವು ತನ್ನ ಶಾಲೆಗಳು ಮತ್ತು ಕಾಲೇಜುಗಳನ್ನು ಸುರಕ್ಷಿತ, ಆರೋಗ್ಯಕರ ಮತ್ತು ಹಾನಿಕಾರಕ ವಸ್ತುಗಳ ಪ್ರಭಾವದಿಂದ ಮುಕ್ತಗೊಳಿಸಬಹುದು ಎಂದು ಸಚಿವಾಲಯ ನಂಬುತ್ತದೆ.
ಶೈಕ್ಷಣಿಕ ಆವರಣಗಳನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿಸಲು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಲಾಗಿದೆ.
*****
(Release ID: 2131551)