ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೀನುಗಾರಿಕೆ ವಲಯದ ಪ್ರಗತಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿಯವರ ಉನ್ನತ ಮಟ್ಟದ ಸಭೆ


ವಿಶೇಷ ಆರ್ಥಿಕ ವಲಯ ಮತ್ತು ಆಳ ಸಮುದ್ರಗಳಲ್ಲಿನ ಮೀನುಗಾರಿಕೆ ಚರ್ಚೆಯ ಕೇಂದ್ರಬಿಂದು 

ಮೀನುಗಾರಿಕೆ ಮತ್ತು ಮೀನುಗಾರರ ಸುರಕ್ಷತೆಯನ್ನು ಹೆಚ್ಚಿಸಲು ಉಪಗ್ರಹ ತಂತ್ರಜ್ಞಾನದ ಬಳಕೆಗೆ ಪ್ರಧಾನಮಂತ್ರಿ ಕರೆ

ಸ್ಮಾರ್ಟ್ ಬಂದರುಗಳು, ಡ್ರೋನ್ ಸಾಗಣೆ ಮತ್ತು ಮೌಲ್ಯವರ್ಧಿತ ಪೂರೈಕೆ ಸರಪಳಿಗಳೊಂದಿಗೆ ಮೀನುಗಾರಿಕೆ ಆಧುನೀಕರಣಕ್ಕೆ ಪ್ರಧಾನಮಂತ್ರಿಗಳ ಒತ್ತು

ಕೃಷಿ ವಲಯದಲ್ಲಿ ಕೃಷಿ ತಂತ್ರಜ್ಞಾನ ಇರುವಂತೆಯೇ, ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವಿಧಾನಗಳನ್ನು ಉತ್ತಮಪಡಿಸಲು ಮೀನುಗಾರಿಕೆ ವಲಯದಲ್ಲಿ ಮೀನು ತಂತ್ರಜ್ಞಾನದ ವ್ಯಾಪಕ ಅಳವಡಿಕೆಗೆ ಪ್ರಧಾನಮಂತ್ರಿಗಳ ಸಲಹೆ

ಅಮೃತ ಸರೋವರಗಳಲ್ಲಿ ಮೀನುಗಾರಿಕೆ ಮತ್ತು ಜೀವನೋಪಾಯಕ್ಕಾಗಿ ಅಲಂಕಾರಿಕ ಮೀನುಗಾರಿಕೆ ಉತ್ತೇಜನದ ಕುರಿತು ಪ್ರಧಾನಮಂತ್ರಿಗಳ ಚರ್ಚೆ

ಇಂಧನಕ್ಕಾಗಿಯೂ, ಪೌಷ್ಟಿಕಾಂಶಕ್ಕಾಗಿಯೂ, ಔಷಧಗಳ ತಯಾರಿಕೆಗೂ ಮತ್ತು ಇತರ ಕ್ಷೇತ್ರಗಳಿಗೂ ಕಡಲಕಳೆಗಳ ಬಹುಮುಖ ಬಳಕೆಯ ಸಾಧ್ಯತೆಗಳ ಪರಿಶೀಲನೆಗೆ ಪ್ರಧಾನಮಂತ್ರಿಗಳ ಸಲಹೆ

ಒಳನಾಡಿನ ಪ್ರದೇಶಗಳಲ್ಲಿ ಮೀನು ಪೂರೈಕೆಯನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸಲು ಪ್ರಧಾನಮಂತ್ರಿಗಳ ಕರೆ

Posted On: 15 MAY 2025 8:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮೀನುಗಾರಿಕೆ ವಲಯದ ಪ್ರಗತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಸಭೆಯಲ್ಲಿ ವಿಶೇಷವಾಗಿ ವಿಶೇಷ ಆರ್ಥಿಕ ವಲಯ (EEZ) ಮತ್ತು ಆಳ ಸಮುದ್ರದಲ್ಲಿನ ಮೀನುಗಾರಿಕೆಯ ಮೇಲೆ ಗಮನಹರಿಸಲಾಯಿತು.  

ಮೀನು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಮೀನುಗಾರರಿಗೆ ಸುರಕ್ಷತಾ ಸೂಚನೆಗಳನ್ನು ನೀಡಲು ಉಪಗ್ರಹ ತಂತ್ರಜ್ಞಾನದ ವಿಸ್ತೃತ ಬಳಕೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಸ್ಮಾರ್ಟ್ ಬಂದರುಗಳು ಮತ್ತು ಮಾರುಕಟ್ಟೆಗಳು, ಮೀನುಗಾರಿಕೆ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆಗಾಗಿ ಡ್ರೋನ್ಗಳ ಬಳಕೆಯ ಮೂಲಕ ಈ ವಲಯವನ್ನು ಆಧುನೀಕರಿಸಲು ಪ್ರಧಾನಮಂತ್ರಿಗಳು ಒತ್ತು ನೀಡಿದರು. ಪೂರೈಕೆ ಸರಪಳಿಗೆ ಮೌಲ್ಯವನ್ನು ಸೇರಿಸಲು ಆರೋಗ್ಯಕರ ಕಾರ್ಯನಿರ್ವಹಣಾ ವ್ಯವಸ್ಥೆಯ ಕಡೆಗೆ ಸಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಇದಲ್ಲದೆ, ಪ್ರಧಾನಮಂತ್ರಿಯವರು ನಾಗರಿಕ ವಿಮಾನಯಾನ ಇಲಾಖೆಯೊಂದಿಗೆ ಸಮಾಲೋಚಿಸಿ, ಉತ್ಪಾದನಾ ಕೇಂದ್ರಗಳಿಂದ ಹತ್ತಿರದ ದೊಡ್ಡ ನಗರ/ಪಟ್ಟಣಗಳ ಮಾರುಕಟ್ಟೆಗಳಿಗೆ ತಾಜಾ ಮೀನುಗಳನ್ನು ಸಾಗಿಸಲು ತಾಂತ್ರಿಕ ನಿಯಮಾವಳಿಗಳ ಪ್ರಕಾರ ಡ್ರೋನ್ಗಳ ಬಳಕೆಯ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸೂಚಿಸಿದರು.

ಉತ್ಪನ್ನದ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ನಲ್ಲಿ ಸುಧಾರಣೆಗಳ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಖಾಸಗಿ ವಲಯದಿಂದ ಹೂಡಿಕೆಗಳನ್ನು ಸುಲಭಗೊಳಿಸುವ ಕುರಿತು ಸಹ ಚರ್ಚಿಸಲಾಯಿತು.

ತಂತ್ರಜ್ಞಾನದ ಬಳಕೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕೃಷಿ ವಲಯದಲ್ಲಿ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವಂತೆಯೇ, ಮೀನುಗಾರಿಕೆ ವಲಯದಲ್ಲಿ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಪದ್ಧತಿಗಳನ್ನು ಸುಧಾರಿಸಲು 'ಮೀನು ತಂತ್ರಜ್ಞಾನ'ವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಮೃತ ಸರೋವರಗಳಲ್ಲಿ ಮೀನುಗಾರಿಕೆ ಕೈಗೊಳ್ಳುವುದರಿಂದ ಆ ಜಲಮೂಲಗಳ ಸುಸ್ಥಿರತೆ ಹೆಚ್ಚಾಗುವುದರ ಜೊತೆಗೆ ಮೀನುಗಾರರ ಬದುಕಿಗೂ ಅನುಕೂಲವಾಗುತ್ತದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಅಲಂಕಾರಿಕ ಮೀನುಗಾರಿಕೆಯನ್ನೂ ಆದಾಯ ಗಳಿಸುವ ಒಂದು ಮಾರ್ಗವಾಗಿ ಬೆಳೆಸಬೇಕೆಂದು ಅವರು ಪ್ರತಿಪಾದಿಸಿದರು.

ಮೀನಿಗೆ ಹೆಚ್ಚು ಬೇಡಿಕೆಯಿದ್ದರೂ ಪೂರೈಕೆ ಕಡಿಮೆ ಇರುವ ಒಳನಾಡಿನ ಪ್ರದೇಶಗಳ ಅಗತ್ಯಗಳನ್ನು ಪೂರೈಸಲು ಒಂದು ಯೋಜನೆಯನ್ನು ರೂಪಿಸಬೇಕು ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು.

ಇಂಧನಕ್ಕಾಗಿಯೂ, ಪೌಷ್ಟಿಕಾಂಶಕ್ಕಾಗಿಯೂ, ಔಷಧಗಳ ತಯಾರಿಕೆಗೂ ಮತ್ತು ಇತರ ಕ್ಷೇತ್ರಗಳಿಗೂ ಕಡಲಕಳೆಗಳನ್ನು ಬಳಸುವ ಸಾಧ್ಯತೆಗಳನ್ನು ಹುಡುಕಬೇಕು ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಒಗ್ಗೂಡಿ ಕೆಲಸ ಮಾಡಿ, ತಂತ್ರಜ್ಞಾನವನ್ನು ಬಳಸಿಕೊಂಡು ಕಡಲಕಳೆಗಳ ಕ್ಷೇತ್ರದಲ್ಲಿ ಬೇಕಾದ ಉತ್ಪಾದನೆ ಮತ್ತು ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು, ಮತ್ತು ಅದರ ಸಂಪೂರ್ಣ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಆಧುನಿಕ ಮೀನುಗಾರಿಕೆ ವಿಧಾನಗಳ ಕುರಿತು ಮೀನುಗಾರರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವಂತೆಯೂ ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಈ ವಲಯದ ಬೆಳವಣಿಗೆಗೆ ಅಡ್ಡಿಯುಂಟುಮಾಡುವ ಅಂಶಗಳ ಒಂದು ಋಣಾತ್ಮಕ ಪಟ್ಟಿಯನ್ನು ನಿರ್ವಹಿಸುವುದು ಅಗತ್ಯ. ಇದರಿಂದ ಆ ಅಡೆತಡೆಗಳನ್ನು ನಿವಾರಿಸಲು ಮತ್ತು ಮೀನುಗಾರರ ವ್ಯವಹಾರವನ್ನು ಸುಲಭಗೊಳಿಸಲು ಹಾಗೂ ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಕ್ರಿಯಾ ಯೋಜನೆಗಳನ್ನು ರೂಪಿಸಬಹುದು ಎಂದು ಅವರು ಹೇಳಿದರು.

ಸಭೆಯ ಸಂದರ್ಭದಲ್ಲಿ, ಪ್ರಮುಖ ಯೋಜನೆಗಳಲ್ಲಿನ ಪ್ರಗತಿ, ಹಿಂದಿನ ಪರಿಶೀಲನೆಯ ಸಮಯದಲ್ಲಿ ನೀಡಲಾದ ಸಲಹೆಗಳ ಅನುಷ್ಠಾನ, ಮತ್ತು ಭಾರತದ ವಿಶೇಷ ಆರ್ಥಿಕ ವಲಯ (EEZ) ಹಾಗೂ ಅಂತರರಾಷ್ಟ್ರೀಯ ಜಲಪ್ರದೇಶಗಳಿಂದ ಸುಸ್ಥಿರ ಮೀನುಗಾರಿಕೆಗಾಗಿ ಉದ್ದೇಶಿಸಲಾಗಿರುವ ಅನುಕೂಲಕರ ನಿಯಮಗಳ ಕುರಿತು ಒಂದು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.

2015 ರಿಂದ, ಭಾರತ ಸರ್ಕಾರವು ವಿವಿಧ ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಾದ ನೀಲಿ ಕ್ರಾಂತಿ ಯೋಜನೆ, ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (FIDF), ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY), ಪ್ರಧಾನ ಮಂತ್ರಿ ಮತ್ಸ್ಯ ಸಮೃದ್ಧಿ ಸಹ ಯೋಜನೆ (PM-MKSSY) ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೂಲಕ ₹ 38,572 ಕೋಟಿಗಳ ಹೂಡಿಕೆಯನ್ನು ಹೆಚ್ಚಿಸಿದೆ. ಭಾರತವು 2024-25 ರಲ್ಲಿ 195 ಲಕ್ಷ ಟನ್ ವಾರ್ಷಿಕ ಮೀನು ಉತ್ಪಾದನೆಯನ್ನು ದಾಖಲಿಸಿದೆ ಮತ್ತು ಈ ವಲಯವು 9% ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಹೊಂದಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಕೇಂದ್ರ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ - 2 ಶ್ರೀ ಶಕ್ತಿಕಾಂತ ದಾಸ್, ಪ್ರಧಾನಮಂತ್ರಿಯವರ ಸಲಹೆಗಾರ ಶ್ರೀ ಅಮಿತ್ ಖರೆ, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

*****


(Release ID: 2129032)