ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
ಇಂದು, ಪ್ರತಿಯೊಬ್ಬ ಭಯೋತ್ಪಾದಕನಿಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯ ಸಿಂಧೂರವನ್ನು ಒರೆಸುವುದರ ಪರಿಣಾಮಗಳು ಗೊತ್ತಾಗಿವೆ: ಪ್ರಧಾನಮಂತ್ರಿ
ಆಪರೇಷನ್ ಸಿಂಧೂರ ನ್ಯಾಯಕ್ಕಾಗಿ ಅಚಲ ಪ್ರತಿಜ್ಞೆಯಾಗಿದೆ: ಪ್ರಧಾನಮಂತ್ರಿ
ಭಯೋತ್ಪಾದಕರು ನಮ್ಮ ಸಹೋದರಿಯರ ಹಣೆಯ ಸಿಂಧೂರವನ್ನು ಒರೆಸಲು ಧೈರ್ಯ ಮಾಡಿದರು; ಅದಕ್ಕಾಗಿಯೇ ಭಾರತ ಭಯೋತ್ಪಾದನೆಯ ಪ್ರಧಾನ ಕಚೇರಿಯನ್ನು ಧ್ವಂಸಮಾಡಿತು: ಪ್ರಧಾನಮಂತ್ರಿ
ಪಾಕಿಸ್ತಾನವು ನಮ್ಮ ಗಡಿಗಳ ಮೇಲೆ ದಾಳಿ ಮಾಡಲು ಸಿದ್ಧವಾಗಿತ್ತು, ಆದರೆ ಭಾರತವು ಅವರ ಹೃದಯಭಾಗಕ್ಕೇ ಹೊಡೆದಿದೆ: ಪ್ರಧಾನಮಂತ್ರಿ
ಆಪರೇಷನ್ ಸಿಂಧೂರವು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಮರು ವ್ಯಾಖ್ಯಾನಿಸಿದೆ, ಹೊಸ ಮಾನದಂಡವನ್ನು, ಹೊಸ ರೂಢಿಯನ್ನು ಸ್ಥಾಪಿಸಿದೆ: ಪ್ರಧಾನಮಂತ್ರಿ
ಇದು ಯುದ್ಧದ ಯುಗವಲ್ಲ, ಆದರೆ ಇದು ಭಯೋತ್ಪಾದನೆಯ ಯುಗವೂ ಅಲ್ಲ: ಪ್ರಧಾನಮಂತ್ರಿ
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯು ಉತ್ತಮ ಜಗತ್ತಿನ ಭರವಸೆಯಾಗಿದೆ: ಪ್ರಧಾನಮಂತ್ರಿ
Posted On:
12 MAY 2025 8:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭಾರತದ ಶಕ್ತಿ ಮತ್ತು ಸಂಯಮ ಎರಡನ್ನೂ ದೇಶ ಕಂಡಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಪ್ರತಿಯೊಬ್ಬ ಭಾರತೀಯ ನಾಗರಿಕನ ಪರವಾಗಿ ಅವರು ದೇಶದ ಅಜೇಯ ಸಶಸ್ತ್ರ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ತಮ್ಮ ನಮನ ಸಲ್ಲಿಸಿದರು. ಆಪರೇಷನ್ ಸಿಂಧೂರದ ಉದ್ದೇಶಗಳನ್ನು ಸಾಧಿಸುವಲ್ಲಿ ಭಾರತದ ವೀರಯೋಧರು ಪ್ರದರ್ಶಿಸಿದ ಅಚಲ ಧೈರ್ಯವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು, ಅವರ ಶೌರ್ಯ, ದೃಢತೆ ಮತ್ತು ಅದಮ್ಯ ಚೈತನ್ಯವನ್ನು ಶ್ಲಾಘಿಸಿದರು. ಪ್ರಧಾನಿಯವರು ಈ ಅಪ್ರತಿಮ ಶೌರ್ಯವನ್ನು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಅರ್ಪಿಸಿದರು.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಶ್ರೀ ಮೋದಿ, ಇದು ದೇಶ ಮತ್ತು ಜಗತ್ತನ್ನೇ ಬೆಚ್ಚಿಬೀಳಿಸಿದೆ ಎಂದು ಹೇಳಿದರು. ಈ ಕೃತ್ಯವನ್ನು ಭಯೋತ್ಪಾದನೆಯ ಭಯಾನಕ ಪ್ರದರ್ಶನ ಎಂದು ಕರೆದರು. ರಜಾದಿನಗಳನ್ನು ಕಳೆಯುತ್ತಿದ್ದ ಮುಗ್ಧ ನಾಗರಿಕರನ್ನು ಅವರ ಕುಟುಂಬಗಳು ಮತ್ತು ಮಕ್ಕಳ ಮುಂದೆಯೇ ಅವರ ಧರ್ಮವನ್ನು ಕೇಳಿದ ನಂತರ ಕ್ರೂರವಾಗಿ ಕೊಲ್ಲಲಾಯಿತು. ಇದು ಕೇವಲ ಕ್ರೌರ್ಯದ ಕೃತ್ಯವಲ್ಲ, ದೇಶದ ಸಾಮರಸ್ಯವನ್ನು ಮುರಿಯುವ ಹೇಯ ಪ್ರಯತ್ನವಾಗಿದೆ ಎಂದು ಅವರು ಒತ್ತಿ ಹೇಳಿದರು. ದಾಳಿಯ ಬಗ್ಗೆ ತಮ್ಮ ತೀವ್ರವಾದ ದುಃಖವನ್ನು ವ್ಯಕ್ತಪಡಿಸಿದ ಅವರು, ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವಲ್ಲಿ ಇಡೀ ರಾಷ್ಟ್ರ - ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮುದಾಯ, ಸಮಾಜದ ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ರಾಜಕೀಯ ಪಕ್ಷ - ಹೇಗೆ ಒಗ್ಗಟ್ಟಾಗಿದೆ ಎಂಬುದನ್ನು ಎತ್ತಿ ತೋರಿಸಿದರು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸರ್ಕಾರ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎಂದು ಅವರು ಹೇಳಿದರು. ಎಲ್ಲಾ ಭಯೋತ್ಪಾದಕ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು, ದೇಶದ ಮಹಿಳೆಯರ ಘನತೆಗೆ ಹಾನಿ ಮಾಡುವ ಪ್ರಯತ್ನದ ಪರಿಣಾಮಗಳನ್ನು ಅವರು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.
"ಆಪರೇಷನ್ ಸಿಂಧೂರ ಕೇವಲ ಒಂದು ಹೆಸರಲ್ಲ, ಬದಲಾಗಿ ಲಕ್ಷಾಂತರ ಭಾರತೀಯರ ಭಾವನೆಗಳ ಪ್ರತಿಬಿಂಬವಾಗಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು. ಇದನ್ನು ನ್ಯಾಯಕ್ಕಾಗಿ ಅಚಲವಾದ ಪ್ರತಿಜ್ಞೆ ಎಂದು ಬಣ್ಣಿಸಿದ ಅವರು, ಇದು ಮೇ 6-7 ರಂದು ಇದು ಈಡೇರುವುದನ್ನು ಜಗತ್ತು ನೋಡಿತು ಎಂದು ಹೇಳಿದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿ ನಿರ್ಣಾಯಕ ಹೊಡೆತವನ್ನು ನೀಡಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತ ಇಂತಹ ದಿಟ್ಟ ಹೆಜ್ಜೆ ಇಡುತ್ತದೆ ಎಂದು ಭಯೋತ್ಪಾದಕರು ಎಂದಿಗೂ ಊಹಿಸಿರಲಿಲ್ಲ, ಆದರೆ ರಾಷ್ಟ್ರ ಮೊದಲು ಎಂಬ ಮಾರ್ಗದರ್ಶಿ ತತ್ವದೊಂದಿಗೆ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಾಗ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಅವರ ಮೂಲಸೌಕರ್ಯಗಳನ್ನು ನಾಶಪಡಿಸಿದ್ದಲ್ಲದೆ, ಅವರ ನೈತಿಕತೆಯನ್ನು ಸಹ ಛಿದ್ರಗೊಳಿಸಿವೆ ಎಂದು ಅವರು ಹೇಳಿದರು. ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಸ್ಥಳಗಳು ದೀರ್ಘಕಾಲದಿಂದ ಜಾಗತಿಕ ಭಯೋತ್ಪಾದನೆಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು, ಅವು ಅಮೆರಿಕದಲ್ಲಿ ನಡೆದ 9/11 ದಾಳಿಗಳು, ಲಂಡನ್ ಟ್ಯೂಬ್ ಬಾಂಬ್ ದಾಳಿಗಳು ಮತ್ತು ಭಾರತದಲ್ಲಿ ದಶಕಗಳಿಂದ ನಡೆದ ಭಯೋತ್ಪಾದಕ ಘಟನೆಗಳು ಸೇರಿದಂತೆ ವಿಶ್ವದಾದ್ಯಂತದ ಪ್ರಮುಖ ದಾಳಿಗಳಿಗೆ ಸಂಬಂಧಿಸಿವೆ ಎಂದು ಪ್ರಧಾನಿ ಹೇಳಿದರು. ಭಯೋತ್ಪಾದಕರು ಭಾರತೀಯ ಮಹಿಳೆಯರ ಘನತೆಯನ್ನು ನಾಶಮಾಡಲು ಧೈರ್ಯ ಮಾಡಿದ್ದರಿಂದ, ಭಾರತವು ಭಯೋತ್ಪಾದನೆಯ ಪ್ರಧಾನ ಕಚೇರಿಯನ್ನು ಧ್ವಂಸಮಾಡಿದೆ ಎಂದು ಅವರು ಘೋಷಿಸಿದರು. ಈ ಕಾರ್ಯಾಚರಣೆಯ ಪರಿಣಾಮವಾಗಿ 100 ಕ್ಕೂ ಹೆಚ್ಚು ಅಪಾಯಕಾರಿ ಭಯೋತ್ಪಾದಕರನ್ನು ನಿರ್ನಾಮ ಮಾಡಲಾಗಿದೆ, ಇದರಲ್ಲಿ ದಶಕಗಳಿಂದ ಭಾರತದ ವಿರುದ್ಧ ಬಹಿರಂಗವಾಗಿ ಪಿತೂರಿ ನಡೆಸಿದ ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ ಎಂದು ಅವರು ಹೇಳಿದರು. ಭಾರತದ ವಿರುದ್ಧ ಬೆದರಿಕೆಗಳನ್ನು ರೂಪಿಸುತ್ತಿದ್ದವರನ್ನು ತ್ವರಿತವಾಗಿ ನಾಶಮಾಡಲಾಗಿದೆ ಎಂದು ಅವರು ಹೇಳಿದರು.
ಭಾರತದ ನಿಖರ ಮತ್ತು ಬಲವಂತದ ದಾಳಿಗಳು ಪಾಕಿಸ್ತಾನವನ್ನು ತೀವ್ರ ಹತಾಶೆಗೆ ದೂಡಿವೆ ಎಂದು ಶ್ರೀ ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಕೈಜೋಡಿಸುವ ಬದಲು, ಪಾಕಿಸ್ತಾನವು ಭಾರತೀಯ ಶಾಲೆಗಳು, ಕಾಲೇಜುಗಳು, ಗುರುದ್ವಾರಗಳು, ದೇವಾಲಯಗಳು ಮತ್ತು ನಾಗರಿಕ ಮನೆಗಳ ಮೇಲೆ ದಾಳಿ ಮಾಡುವುದರ ಜೊತೆಗೆ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಹೊಣೆಗೇಡಿತನದ ಕೃತ್ಯಕ್ಕೆ ಕೈ ಹಾಕಿತು ಎಂದು ಅವರು ಹೇಳಿದರು. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಮುಂದೆ ಡ್ರೋನ್ ಗಳು ಮತ್ತು ಕ್ಷಿಪಣಿಗಳು ತರಗೆಲೆಗಳಂತೆ ಉದುರಿಬಿದ್ದವು, ಅವುಗಳನ್ನು ಆಕಾಶದಲ್ಲಿಯೇ ನಾಶಮಾಡಲಾಯಿತು, ಈ ದಾಳಿಯು ಪಾಕಿಸ್ತಾನದ ದುರ್ಬಲತೆಗಳನ್ನು ಬಹಿರಂಗಪಡಿಸಿತು ಎಂದು ಅವರು ಹೇಳಿದರು. ಪಾಕಿಸ್ತಾನ ಭಾರತದ ಗಡಿಗಳ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವಾಗ, ಭಾರತವು ಪಾಕಿಸ್ತಾನದ ಹೃದಯಭಾಗಕ್ಕೆ ನಿರ್ಣಾಯಕ ಹೊಡೆತವನ್ನು ನೀಡಿತು ಎಂದು ಅವರು ಹೇಳಿದರು. ಭಾರತೀಯ ಡ್ರೋನ್ ಗಳು ಮತ್ತು ಕ್ಷಿಪಣಿಗಳು ನಿಖರವಾದ ದಾಳಿಗಳನ್ನು ನಡೆಸಿದವು, ಪಾಕಿಸ್ತಾನದ ವಾಯುನೆಲೆಗೆ ತೀವ್ರ ಹಾನಿಯನ್ನುಂಟು ಮಾಡಿದವು. ಭಾರತದ ಪ್ರತಿಕ್ರಿಯೆಯ ಮೊದಲ ಮೂರು ದಿನಗಳಲ್ಲಿ, ಪಾಕಿಸ್ತಾನವು ತನ್ನ ನಿರೀಕ್ಷೆಗಳನ್ನು ಮೀರಿದ ನಷ್ಟಗಳನ್ನು ಅನುಭವಿಸಿತು. ಭಾರತದ ಆಕ್ರಮಣಕಾರಿ ಪ್ರತೀಕಾರದ ಕ್ರಮಗಳ ನಂತರ, ಪಾಕಿಸ್ತಾನವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿತು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಪರಿಹಾರಕ್ಕಾಗಿ ಜಾಗತಿಕ ಸಮುದಾಯಕ್ಕೆ ಮನವಿ ಮಾಡಿತು. ಭಾರೀ ನಷ್ಟಗಳನ್ನು ಅನುಭವಿಸಿದ ನಂತರ, ಪಾಕಿಸ್ತಾನ ಸೇನೆಯು ಮೇ 10 ರ ಮಧ್ಯಾಹ್ನ ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿತು ಎಂದು ಅವರು ಬಹಿರಂಗಪಡಿಸಿದರು. ಆ ಹೊತ್ತಿಗೆ, ಭಾರತವು ದೊಡ್ಡ ಪ್ರಮಾಣದ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಿತ್ತು, ಪ್ರಮುಖ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತ್ತು ಮತ್ತು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿತ್ತು ಎಂದು ಅವರು ಹೇಳಿದರು. ಭಾರತದ ವಿರುದ್ಧದ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳು ಮತ್ತು ಮಿಲಿಟರಿ ಆಕ್ರಮಣವನ್ನು ನಿಲ್ಲಿಸುವುದಾಗಿ ಪಾಕಿಸ್ತಾನ ತನ್ನ ಮನವಿಯಲ್ಲಿ ಭರವಸೆ ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ, ಭಾರತವು ಪರಿಸ್ಥಿತಿಯನ್ನು ಪರಿಶೀಲಿಸಿ, ಪಾಕಿಸ್ತಾನದ ಭಯೋತ್ಪಾದಕ ಮತ್ತು ಮಿಲಿಟರಿ ಸ್ಥಾಪನೆಗಳ ವಿರುದ್ಧದ ತನ್ನ ಪ್ರತಿ-ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿತು. ಇದು ಅಂತಿಮವಲ್ಲ ಎಂದು ಅವರು ಪುನರುಚ್ಚರಿಸಿದರು - ಭಾರತವು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಪ್ರತಿಯೊಂದು ನಡೆಯನ್ನೂ ಮೌಲ್ಯಮಾಪನ ಮಾಡುತ್ತದೆ, ಅದರ ಭವಿಷ್ಯದ ಕ್ರಮಗಳು ಅದರ ಬದ್ಧತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತದ ಸಶಸ್ತ್ರ ಪಡೆಗಳಾದ ಭೂಸೇನೆ, ವಾಯುಪಡೆ, ನೌಕಾಪಡೆ, ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಮತ್ತು ಅರೆಸೇನಾ ಪಡೆಗಳು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಮಯದಲ್ಲೂ ಕಟ್ಟೆಚ್ಚರದಲ್ಲಿರುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂಧೂರ ಈಗ ಭಾರತದ ಸ್ಥಾಪಿತ ನೀತಿಯಾಗಿದೆ, ಇದು ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ನಿರ್ಣಾಯಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಘೋಷಿಸಿದರು, ಈ ಕಾರ್ಯಾಚರಣೆಯು ಭಯೋತ್ಪಾದನಾ ನಿಗ್ರಹ ಕ್ರಮಗಳಲ್ಲಿ ಹೊಸ ಮಾನದಂಡವನ್ನು, ಹೊಸ ರೂಢಿಯನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಭಾರತದ ಭದ್ರತಾ ಸಿದ್ಧಾಂತದ ಮೂರು ಪ್ರಮುಖ ಸ್ತಂಭಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು; ಮೊದಲನೆಯದು ನಿರ್ಣಾಯಕ ಪ್ರತೀಕಾರ, ಭಾರತದ ಮೇಲಿನ ಯಾವುದೇ ಭಯೋತ್ಪಾದಕ ದಾಳಿಗೆ ಬಲವಾದ ಮತ್ತು ದೃಢವಾದ ಪ್ರತಿಕ್ರಿಯೆ ನೀಡಲಾಗುವುದು. ಭಾರತ ತನ್ನದೇ ಆದ ಷರತ್ತುಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತದೆ, ಭಯೋತ್ಪಾದಕ ನೆಲೆಗಳ ಬೇರುಗಳ ಮೇಲೆ ದಾಳಿ ಮಾಡುತ್ತದೆ. ಎರಡನೆಯದು ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ; ಎರಡನೆಯದು ಪರಮಾಣು ಬೆದರಿಕೆಗಳಿಗೆ ಸಹಿಷ್ಣುತೆ ಇಲ್ಲ; ಭಾರತವು ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ. ಈ ನೆಪದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಭಯೋತ್ಪಾದಕ ಸುರಕ್ಷಿತ ತಾಣವು ನಿಖರವಾದ ಮತ್ತು ನಿರ್ಣಾಯಕ ದಾಳಿಗಳನ್ನು ಎದುರಿಸಬೇಕಾಗುತ್ತದೆ. ಮೂರನೆಯದು ಭಯೋತ್ಪಾದನೆ ಪ್ರಾಯೋಜಕರು ಮತ್ತು ಭಯೋತ್ಪಾದಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಭಾರತವು ಇನ್ನು ಮುಂದೆ ಭಯೋತ್ಪಾದಕ ನಾಯಕರು ಮತ್ತು ಅವರಿಗೆ ಆಶ್ರಯ ನೀಡುವ ಸರ್ಕಾರಗಳನ್ನು ಪ್ರತ್ಯೇಕ ಘಟಕಗಳಾಗಿ ನೋಡುವುದಿಲ್ಲ. ಆಪರೇಷನ್ ಸಿಂಧೂರ ಸಮಯದಲ್ಲಿ, ಹತ್ಯೆಗೀಡಾದ ಭಯೋತ್ಪಾದಕರ ಅಂತ್ಯಕ್ರಿಯೆಗಳಲ್ಲಿ ಹಿರಿಯ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ಬಹಿರಂಗವಾಗಿ ಭಾಗವಹಿಸಿದ ಪಾಕಿಸ್ತಾನದ ಆತಂಕಕಾರಿ ವಾಸ್ತವವನ್ನು ಜಗತ್ತು ಮತ್ತೊಮ್ಮೆ ಕಂಡಿದೆ. ಇದು ಪಾಕಿಸ್ತಾನದ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯಲ್ಲಿ ಆಳವಾದ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು. ಯಾವುದೇ ಬೆದರಿಕೆಯಿಂದ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
ಯುದ್ಧಭೂಮಿಯಲ್ಲಿ ಭಾರತ ನಿರಂತರವಾಗಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು ಆಪರೇಷನ್ ಸಿಂಧೂರ ದೇಶದ ಮಿಲಿಟರಿ ಪರಾಕ್ರಮಕ್ಕೆ ಹೊಸ ಆಯಾಮವನ್ನು ನೀಡಿದೆ ಎಂದು ಪ್ರತಿಪಾದಿಸಿದ ಶ್ರೀ ಮೋದಿ, ಮರುಭೂಮಿ ಮತ್ತು ಪರ್ವತ ಯುದ್ಧಗಳಲ್ಲಿ ಭಾರತದ ಗಮನಾರ್ಹ ಸಾಮರ್ಥ್ಯ ಮತ್ತು ಹೊಸ ಯುಗದ ಯುದ್ಧದಲ್ಲಿ ಸ್ಥಾಪಿತ ಶ್ರೇಷ್ಠತೆಯನ್ನು ಎತ್ತಿ ತೋರಿಸಿದರು. ಕಾರ್ಯಾಚರಣೆಯ ಸಮಯದಲ್ಲಿ, ಮೇಡ್ ಇನ್ ಇಂಡಿಯಾ ರಕ್ಷಣಾ ಸಾಧನಗಳ ಪರಿಣಾಮಕಾರಿತ್ವವು ನಿರ್ಣಾಯಕವಾಗಿ ಸಾಬೀತಾಗಿದೆ ಎಂದು ಅವರು ಒತ್ತಿ ಹೇಳಿದರು. 21 ನೇ ಶತಮಾನದ ಯುದ್ಧದಲ್ಲಿ ಪ್ರಬಲ ಶಕ್ತಿಯಾಗಿ ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆಗಳ ಆಗಮನವನ್ನು ಜಗತ್ತು ಈಗ ನೋಡುತ್ತಿದೆ ಎಂದು ಅವರು ಹೇಳಿದರು.
ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಏಕತೆ ಭಾರತದ ದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಯುಗ ಯುದ್ಧದ ಯುಗವಲ್ಲ, ಆದರೆ ಭಯೋತ್ಪಾದನೆಯ ಯುಗವೂ ಅಲ್ಲ ಎಂದು ಪುನರುಚ್ಚರಿಸಿದರು. "ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯು ಉತ್ತಮ ಮತ್ತು ಸುರಕ್ಷಿತ ಜಗತ್ತಿನ ಭರವಸೆಯಾಗಿದೆ" ಎಂದು ಅವರು ಘೋಷಿಸಿದರು.
ಪಾಕಿಸ್ತಾನದ ಸೇನೆ ಮತ್ತು ಸರ್ಕಾರ ನಿರಂತರವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದು ಒತ್ತಿ ಹೇಳಿದ ಮೋದಿ ಅವರು, ಅಂತಹ ಕ್ರಮಗಳು ಅಂತಿಮವಾಗಿ ಸ್ವತಃ ಪಾಕಿಸ್ತಾನದ ಪತನಕ್ಕೆ ಕಾರಣವಾಗುತ್ತವೆ ಎಂದು ಎಚ್ಚರಿಸಿದರು. ಪಾಕಿಸ್ತಾನ ಉಳಿಯಬೇಕಾದರೆ, ಅದು ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ಕೆಡವಲೇಬೇಕು - ಶಾಂತಿಗೆ ಬೇರೆ ದಾರಿಯಿಲ್ಲ ಎಂದು ಅವರು ಘೋಷಿಸಿದರು. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರಲು ಸಾಧ್ಯವಿಲ್ಲ, ಭಯೋತ್ಪಾದನೆ ಮತ್ತು ವ್ಯಾಪಾರವು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಮತ್ತು ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅವರು ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದರು. ಜಾಗತಿಕ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗಿನ ಯಾವುದೇ ಚರ್ಚೆಯು ಭಯೋತ್ಪಾದನೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಮತ್ತು ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆಯು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ ಎಂಬ ಭಾರತದ ದೀರ್ಘಕಾಲದ ನೀತಿಯನ್ನು ಪುನರುಚ್ಚರಿಸಿದರು.
ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಭಗವಾನ್ ಬುದ್ಧನ ಬೋಧನೆಗಳನ್ನು ವಿವರಿಸಿದರು ಮತ್ತು ಶಾಂತಿಯ ಹಾದಿಯು ಬಲದಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ಒತ್ತಿ ಹೇಳಿದರು. ಪ್ರತಿಯೊಬ್ಬ ಭಾರತೀಯನು ಘನತೆಯಿಂದ ಬದುಕಲು ಮತ್ತು ವಿಕಸಿತ ಭಾರತದ ಕನಸನ್ನು ನನಸಾಗಿಸಲು ಮನುಕುಲವು ಶಾಂತಿ ಮತ್ತು ಸಮೃದ್ಧಿಯತ್ತ ಸಾಗಬೇಕು ಎಂದು ಅವರು ಒತ್ತಿ ಹೇಳಿದರು. ಭಾರತವು ಶಾಂತಿಯನ್ನು ಎತ್ತಿಹಿಡಿಯಬೇಕಾದರೆ, ಅದು ಬಲಿಷ್ಠವಾಗಿರಬೇಕು ಮತ್ತು ಅಗತ್ಯವಿದ್ದಾಗ ಆ ಬಲವನ್ನು ಬಳಸಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇತ್ತೀಚಿನ ಘಟನೆಗಳು ತನ್ನ ತತ್ವಗಳನ್ನು ರಕ್ಷಿಸುವಲ್ಲಿ ಭಾರತದ ದೃಢಸಂಕಲ್ಪವನ್ನು ಪ್ರದರ್ಶಿಸಿವೆ ಎಂದು ಅವರು ಹೇಳಿದರು. ತಮ್ಮ ಭಾಷಣದ ಕೊನೆಯಲ್ಲಿ, ಅವರು ಮತ್ತೊಮ್ಮೆ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯಕ್ಕೆ ನಮನ ಸಲ್ಲಿಸಿದರು ಮತ್ತು ಭಾರತದ ಜನರ ಧೈರ್ಯ ಮತ್ತು ಏಕತೆಗೆ ತಮ್ಮ ಅಪಾರ ಗೌರವವನ್ನು ವ್ಯಕ್ತಪಡಿಸಿದರು.
*****
(Release ID: 2128308)
Visitor Counter : 2
Read this release in:
Odia
,
Malayalam
,
Khasi
,
English
,
Urdu
,
Marathi
,
Hindi
,
Assamese
,
Punjabi
,
Gujarati
,
Tamil
,
Telugu