ಗೃಹ ವ್ಯವಹಾರಗಳ ಸಚಿವಾಲಯ
ಪಾಕಿಸ್ತಾನ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಮುಖ್ಯಮಂತ್ರಿಗಳ ಜತೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಭದ್ರತಾ ಪರಾಮರ್ಶೆ ಸಭೆ
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು “ಆಪರೇಷನ್ ಸಿಂಧೂರ್” ಯಶಸ್ಸಿಗೆ ಪ್ರಧಾನಮಂತ್ರಿ ಮೋದಿ ಮತ್ತು 3 ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು
ತನ್ನ ಗಡಿಗಳು, ಸೈನ್ಯ ಮತ್ತು ನಾಗರಿಕರಿಗೆ ಸವಾಲು ಹಾಕಲು ಧೈರ್ಯ ಮಾಡಿದವರಿಗೆ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಮೂಲಕ ಭಾರತವು ತಕ್ಕ ಉತ್ತರ ನೀಡಿದೆ
“ಆಪರೇಷನ್ ಸಿಂಧೂರ್” ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗಿದೆ; ಜತೆಗೆ, ಇಡೀ ಜಗತ್ತಿಗೆ ಪ್ರಬಲ ಸಂದೇಶ ರವಾನಿಸಲಾಗಿದೆ
ಭಯೋತ್ಪಾದನೆಯ ವಿರುದ್ಧ ಮೋದಿ ಸರ್ಕಾರದ ಶೂನ್ಯ ಸಹಿಷ್ಣುತಾ ನೀತಿಯನ್ನು ಇಡೀ ಜಗತ್ತಿಗೆ “ಆಪರೇಷನ್ ಸಿಂಧೂರ್” ಪ್ರದರ್ಶಿಸಿದೆ
ಈ ಸಮಯದಲ್ಲಿ ಇಡೀ ರಾಷ್ಟ್ರವು ಪ್ರದರ್ಶಿಸಿದ ಏಕತೆಯು ದೇಶದ ಜನತೆಯ ಮನೋಸ್ಥೈರ್ಯ ಹೆಚ್ಚಿಸಿದೆ
ಆಸ್ಪತ್ರೆಗಳು, ಅಗ್ನಿಶಾಮಕ ಸೇವೆಗಳು ಮತ್ತಿತರ ಅಗತ್ಯ ಸೇವೆಗಳ ಸುಗಮ ಕಾರ್ಯಾಚರಣೆ ಖಚಿತಪಡಿಸಿಕೊಳ್ಳಿ; ಅಗತ್ಯ ವಸ್ತುಗಳ ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಿ
ಯಾವುದೇ ಪರಿಸ್ಥಿತಿ ನಿಭಾಯಿಸಲು ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣಾ ಪಡೆ, ಗೃಹರಕ್ಷಕ ದಳ, ಎನ್‌ಸಿಸಿ ಇತ್ಯಾದಿಗಳನ್ನು ಸನ್ನದ್ಧವಾಗಿಡುವಂತೆ ರಾಜ್ಯಗಳಿಗೆ ಗೃಹ ಸಚಿವರ ನಿರ್ದೇಶನ
ಸಾಮಾಜಿಕ ಜಾಲತಾಣ ಮತ್ತು ಇತರೆ ಮಾಧ್ಯಮಗಳಲ್ಲಿ ಬರುವ ಅನಪೇಕ್ಷಿತ ಅಂಶಗಳಿಂದ ಕೂಡಿದ ರಾಷ್ಟ್ರವಿರೋಧಿ ಪ್ರಚಾರಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು; ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಂಸ್ಥೆಗಳ ಸಮನ್ವಯದೊಂದಿಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು
ಸುಗಮ ಸಂವಹನ(ಸಂಪರ್ಕ) ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು, ಜತೆಗೆ ದುರ್ಬಲ ಸ್ಥಳಗಳ ಸುರಕ್ಷತೆ ಕಾಪಾಡಬೇಕು
Posted On:
07 MAY 2025 7:12PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿಂದು ಪಾಕಿಸ್ತಾನ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಮುಖ್ಯಮಂತ್ರಿಗಳ ಜತೆ ಭದ್ರತಾ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್‌ಗಳು, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಮತ್ತು ಸಿಕ್ಕಿಂ ಸರ್ಕಾರದ ಪ್ರತಿನಿಧಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೊ (ಐಬಿ) ನಿರ್ದೇಶಕರು, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮಹಾನಿರ್ದೇಶಕರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಹಾನಿರ್ದೇಶಕರು ಹಾಗೂ ಗೃಹ ಸಚಿವಾಲಯದ(ಎಂಎಚ್‌ಎ) ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, 2025 ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ನಂತರ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಯೋತ್ಪಾದಕ ದಾಳಿಕೋರರು ಮತ್ತು ಬೆಂಬಲಿಗರಿಗೆ ದೇಶವು ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದರು. “ಆಪರೇಷನ್ ಸಿಂಧೂರ್” ಬಗ್ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಢ ಸಂಕಲ್ಪ ಮತ್ತು ನಿರ್ಧಾರಕ್ಕೆ ಗೃಹ ಸಚಿವರು ಕೃತಜ್ಞತೆ ಸಲ್ಲಿಸಿದರು. ಭಾರತದ ಗಡಿಗಳು, ಮಿಲಿಟರಿ ಮತ್ತು ನಾಗರಿಕರಿಗೆ ಸವಾಲು ಹಾಕಲು ಧೈರ್ಯ ಮಾಡಿದವರಿಗೆ “ಆಪರೇಷನ್ ಸಿಂಧೂರ್” ಮೂಲಕ ಭಾರತದಿಂದ ತಕ್ಕ ಉತ್ತರ ನೀಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಆಪರೇಷನ್ ಸಿಂಧೂರ್‌ನ ಯಶಸ್ಸಿಗೆ ಪ್ರಧಾನ ಮಂತ್ರಿ ಶ್ರೀ ಮೋದಿ ಮತ್ತು 3 ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನಿರ್ಲಕ್ಷಿಸದೆ, “ಆಪರೇಷನ್ ಸಿಂಧೂರ್” ಮೂಲಕ ತಕ್ಕ ಪ್ರತಿಕ್ರಿಯೆ ನೀಡಲಾಗಿದೆ, ಇದು ಜಗತ್ತಿಗೆ ಪ್ರಬಲ ಸಂದೇಶ ರವಾನಿಸಿದೆ. ನಿರ್ದಿಷ್ಟ ಮಾಹಿತಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಶಿಬಿರಗಳ ವಿರುದ್ಧ ಪ್ರಾರಂಭಿಸಿದ ಆಪರೇಷನ್ ಸಿಂಧೂರ್, ಭಯೋತ್ಪಾದನೆಯ ವಿರುದ್ಧ ಮೋದಿ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯನ್ನು ಇಡೀ ಜಗತ್ತಿಗೆ ಸಾರಿದೆ. ಈ ಸಮಯದಲ್ಲಿ ದೇಶವು ತೋರಿಸಿರುವ ಏಕತೆಯು ದೇಶದ ಜನತೆಯ ನೈತಿಕತೆಯನ್ನು ಹೆಚ್ಚಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
2025 ಮೇ 6-7ರ ಮಧ್ಯರಾತ್ರಿಯಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ 9 ನಿರ್ದಿಷ್ಟ ತಾಣ(ಸ್ಥಳ)ಗಳ ಮೇಲೆ ದಾಳಿ ಮಾಡಿ, ಅಲ್ಲಿನ ಮೂಲಸೌಕರ್ಯಗಳನ್ನು ನಾಶಪಡಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ತರಬೇತಿ ಶಿಬಿರಗಳು, ಶಸ್ತ್ರಾಸ್ತ್ರ ನೆಲೆಗಳು ಮತ್ತು ಲಷ್ಕರ್-ಎ-ತೋಯಿಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರೆ ಭಯೋತ್ಪಾದಕ ಗುಂಪುಗಳ ಅಡಗುತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಗೃಹ ಸಚಿವರು ಹೇಳಿದರು.
ಅಣಕು ಪ್ರದರ್ಶನ ನಡೆಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ರಾಜ್ಯಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಸ್ಪತ್ರೆಗಳು, ಅಗ್ನಿಶಾಮಕ ದಳ ಮತ್ತಿತರ ಅಗತ್ಯ ಸೇವೆಗಳ ಸುಗಮ ಕಾರ್ಯಾಚರಣೆಗೆ ವ್ಯವಸ್ಥೆ ಕಲ್ಪಿಸಬೇಕು, ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಬೇಕು ಎಂದು ಅವರು ಸೂಚಿಸಿದರು. ಯಾವುದೇ ಪರಿಸ್ಥಿತಿ ಎದುರಿಸಲು ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣೆ, ಗೃಹರಕ್ಷಕ ದಳ, ಎನ್‌ಸಿಸಿ ಇತ್ಯಾದಿಗಳನ್ನು ಸನ್ನದ್ಧವಾಗಿರಿಸಬೇಕು. ನಾಗರಿಕರು ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಪ್ರಯತ್ನಿಸಬೇಕು ಎಂದು ಅವರು ರಾಜ್ಯಗಳಿಗೆ ನಿರ್ದೇಶನ ನೀಡಿದರು.
ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಅನಗತ್ಯ(ಅಪರಿತ) ವ್ಯಕ್ತಿಗಳಿಂದ ಬರುವ ದೇಶ ವಿರೋಧಿ ಹೇಳಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಂಸ್ಥೆಗಳ ಸಮನ್ವಯದೊಂದಿಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಸುಗಮ ಸಂವಹನ ಮತ್ತು ಸಂಪರ್ಕವನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು, ದುರ್ಬಲ ಸ್ಥಳಗಳಿಗೆ ಮತ್ತಷ್ಟು ಭದ್ರತೆ ಮತ್ತು ಸುರಕ್ಷತೆ ಬಲಪಡಿಸಬೇಕು. ಸಾರ್ವಜನಿಕರಲ್ಲಿ ಅನಗತ್ಯ ಭಯ ಹರಡುವುದನ್ನು ನಿಲ್ಲಿಸಲು ಮತ್ತು ವದಂತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ಸ್ಥಳೀಯ ಆಡಳಿತ, ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಕೇಂದ್ರ ಗೃಹ ಸಚಿವರು ಸೂಚನೆ ನೀಡಿದರು.
*****
(Release ID: 2127614)
Visitor Counter : 11
Read this release in:
Odia
,
Khasi
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam