ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಬಿಪಿ ನೆಟ್‌ವರ್ಕ್ ಇಂಡಿಯಾ @ 2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಯಶಸ್ವಿಯಾಗಿ ಅಂತಿಮಗೊಳಿಸಿವೆ: ಪ್ರಧಾನಮಂತ್ರಿ

ಭಾರತವು ವ್ಯಾಪಾರ ಮತ್ತು ವಾಣಿಜ್ಯದ ಒಂದು ಚೈತನ್ಯಶೀಲ ಕೇಂದ್ರವಾಗುತ್ತಿದೆ: ಪ್ರಧಾನಮಂತ್ರಿ

ದೇಶ ಮೊದಲು - ಕಳೆದ ದಶಕದಲ್ಲಿ ಭಾರತವು ಈ ನೀತಿಯನ್ನು ನಿರಂತರವಾಗಿ ಅನುಸರಿಸಿದೆ: ಪ್ರಧಾನಮಂತ್ರಿ

ಯಾರೊಬ್ಬರು ಇಂದು ಭಾರತವನ್ನು ನೋಡಿದಾಗ, ಪ್ರಜಾಪ್ರಭುತ್ವವು ಎಲ್ಲವನ್ನೂ ಒದಗಿಸಬಲ್ಲದು ಎಂಬುದು ಅವರಿಗೆ ಖಚಿತವಾಗಬಹುದು: ಪ್ರಧಾನಮಂತ್ರಿ

ಭಾರತವು ಜಿಡಿಪಿ ಕೇಂದ್ರಿತ ಕಾರ್ಯವಿಧಾನದಿಂದ ಜನರ ಒಟ್ಟು ಸಬಲೀಕರಣ(ಜಿಇಪಿ) ಕೇಂದ್ರಿತ ಪ್ರಗತಿಯತ್ತ ಸಾಗುತ್ತಿದೆ: ಪ್ರಧಾನಮಂತ್ರಿ

ಸಂಪ್ರದಾಯ ಮತ್ತು ತಂತ್ರಜ್ಞಾನ ಒಟ್ಟಿಗೆ ಹೇಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಭಾರತವು ಜಗತ್ತಿಗೆ ತೋರಿಸುತ್ತಿದೆ: ಪ್ರಧಾನಮಂತ್ರಿ

ಸ್ವಾವಲಂಬನೆ ಯಾವಾಗಲೂ ನಮ್ಮ ಆರ್ಥಿಕ ಡಿಎನ್‌ಎಯ ಒಂದು ಭಾಗವಾಗಿದೆ: ಪ್ರಧಾನಮಂತ್ರಿ

Posted On: 06 MAY 2025 10:10PM by PIB Bengaluru

ನವದೆಹಲಿಯ ಭಾರತ ಮಂಟಪದಲ್ಲಿಂದು ನಡೆದ ಎಬಿಪಿ ನೆಟ್‌ವರ್ಕ್ ಇಂಡಿಯಾ@2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಮಾಡಿದರು. ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಇಂದು ಬೆಳಗ್ಗೆಯಿಂದಲೂ ಗದ್ದಲದಿಂದ ಕೂಡಿದೆ. ಸಂಘಟನಾ ತಂಡದೊಂದಿಗಿನ ತಮ್ಮ ಸಂವಾದವನ್ನು ಪ್ರಸ್ತಾಪಿಸಿದ ಅವರು, ಶೃಂಗಸಭೆಯ ಶ್ರೀಮಂತ ವೈವಿಧ್ಯತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಚೈತನ್ಯಕ್ಕೆ ಕೊಡುಗೆ ನೀಡಿದ ಹಲವಾರು ಗಣ್ಯ ವ್ಯಕ್ತಿಗಳ ಭಾಗವಹಿಸಿದ್ದಾರೆ. ಇಲ್ಲಿ ನೆರೆದಿರುವ ಎಲ್ಲಾ ಪ್ರತಿನಿಧಿಗಳು ಸಕಾರಾತ್ಮಕ ಅನುಭವ ಹೊಂದಿದ್ದಾರೆ. ಶೃಂಗಸಭೆಯಲ್ಲಿ ಯುವಕರು ಮತ್ತು ಮಹಿಳೆಯರ ಗಮನಾರ್ಹ ಉಪಸ್ಥಿತಿ ಇದೆ, ಡ್ರೋನ್ ದೀದಿಗಳು ಮತ್ತು ಲಖ್ಪತಿ ದೀದಿಗಳು ಹಂಚಿಕೊಂಡ ಸ್ಪೂರ್ತಿದಾಯಕ ಅನುಭವಗಳನ್ನು ಶ್ಲಾಘಿಸಿದರು. ಅವರ ಕಥೆಗಳು ಪ್ರೇರಣೆಯ ಮೂಲವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.

ಪ್ರತಿಯೊಂದು ವಲಯದಲ್ಲೂ ತನ್ನನ್ನು ತಾನು ಪ್ರತಿಪಾದಿಸಿಕೊಳ್ಳುತ್ತಿರುವ ಪರಿವರ್ತನೆಗೊಳ್ಳುತ್ತಿರುವ ಭಾರತದ ಪ್ರತಿಬಿಂಬವೇ ಈ ಶೃಂಗಸಭೆಯಾಗಿದೆ ಎಂದು ಬಣ್ಣಿಸಿದ ಶ್ರೀ ಮೋದಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವುದು ದೇಶದ ದೊಡ್ಡ ಆಕಾಂಕ್ಷೆಯಾಗಿದೆ. ಭಾರತದ ಶಕ್ತಿ ಸಾಮರ್ಥ್ಯ, ಸಂಪನ್ಮೂಲಗಳು ಮತ್ತು ದೃಢಸಂಕಲ್ಪಕ್ಕೆ ಸಂಬಂಧಿಸಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸಿದ ಅವರು, ಜನರು ತಮ್ಮ ಗುರಿಗಳನ್ನು ತಲುಪುವವರೆಗೆ ಎದ್ದೇಶಬೇಕು, ಜಾಗೃತರಾಗಬೇಕು ಮತ್ತು ತಮ್ಮ ಪ್ರಯತ್ನದಲ್ಲಿ ನಿರಂತರವಾಗಿರಬೇಕು. ಈ ಅಚಲ ಚೈತನ್ಯವು ಇಂದು ಪ್ರತಿಯೊಬ್ಬ ನಾಗರಿಕನಲ್ಲೂ ಗೋಚರಿಸುತ್ತಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟಲು ಇಂತಹ ಶೃಂಗಸಭೆಗಳ ಪಾತ್ರ ಮಹತ್ವದ್ದಾಗಿದೆ. ಅತ್ಯುತ್ತಮ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಶ್ಲಾಘಿಸಿದ ಅವರು, ಶ್ರೀ ಅತಿದೇಬ್ ಸರ್ಕಾರ್, ಶ್ರೀ ರಜನೀಶ್ ಮತ್ತು ಇಡೀ ಎಬಿಪಿ ನೆಟ್‌ವರ್ಕ್ ತಂಡದ ಪ್ರಯತ್ನಗಳಿಗಾಗಿ ಅಭಿನಂದನೆ ಸಲ್ಲಿಸಿದರು.

ಭಾರತಕ್ಕೆ ಇಂದು ಒಂದು ಐತಿಹಾಸಿಕ ಕ್ಷಣವಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಯೊಂದಿಗೆ ದೂರವಾಣಿ ಮಾತುಕತೆ ನಡೆಸಿದೆ, ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಎರಡು ಪ್ರಮುಖ ಮುಕ್ತ ಮಾರುಕಟ್ಟೆ ಆರ್ಥಿಕತೆಗಳ ನಡುವಿನ ಈ ಒಪ್ಪಂದವು ವ್ಯಾಪಾರ ಮತ್ತು ಆರ್ಥಿಕ ಸಹಕಾರದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಇದು ಎರಡೂ ರಾಷ್ಟ್ರಗಳ ಅಭಿವೃದ್ಧಿಗೆ ಪ್ರಯೋಜನ ನೀಡುತ್ತದೆ. ಇದು ಭಾರತದ ಯುವಜನರಿಗೆ ಉತ್ತಮ ಸುದ್ದಿಯಾಗಿದೆ, ಏಕೆಂದರೆ ಇದು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತೀಯ ವ್ಯವಹಾರಗಳು ಮತ್ತು ಎಂಎಸ್ಎಂಇಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ಭಾರತ ಇತ್ತೀಚೆಗೆ ಯುಎಇ, ಆಸ್ಟ್ರೇಲಿಯಾ ಮತ್ತು ಮಾರಿಷಸ್‌ನೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಭಾರತವು ಸುಧಾರಣೆಗಳನ್ನು ಜಾರಿಗೆ ತರುವುದಲ್ಲದೆ, ವ್ಯಾಪಾರ ಮತ್ತು ವಾಣಿಜ್ಯಕ್ಕೆ ಒಂದು ರೋಮಾಂಚಕ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಇಡೀ ವಿಶ್ವದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.

ದಿಟ್ಟ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಗುರಿ ಸಾಧನೆಗೆ ರಾಷ್ಟ್ರದ ಹಿತಾಸಕ್ತಿಗಳನ್ನು ಮೊದಲು ಇಡುವುದು ಮತ್ತು ಅದರ ಸಾಮರ್ಥ್ಯದಲ್ಲಿ ವಿಶ್ವಾಸವಿಡಬೇಕು. ಆದರೆ ದುರದೃಷ್ಟವಶಾತ್, ದಶಕಗಳಿಂದ ಭಾರತವು ಪ್ರಗತಿಗೆ ಅಡ್ಡಿಯಾಗುವ ಸಂಘರ್ಷದ ವಿಧಾನದಲ್ಲಿ ಸಿಲುಕಿಕೊಂಡಿತ್ತು. ಜಾಗತಿಕ ಅಭಿಪ್ರಾಯಗಳು, ಚುನಾವಣಾ ಲೆಕ್ಕಾಚಾರಗಳು ಮತ್ತು ರಾಜಕೀಯ ಉಳಿವಿನ ಬಗೆಗಿನ ಕಳವಳಗಳಿಂದಾಗಿ ಹಿಂದೆ ಪ್ರಮುಖ ನಿರ್ಧಾರಗಳು ಹೇಗೆ ವಿಳಂಬವಾಗಿದ್ದವು ಎಂಬುದನ್ನು ಅವರು ಪ್ರಸ್ತಾಪಿಸಿದರು. ಅಗತ್ಯ ಸುಧಾರಣೆಗಳಿಗಿಂತ ಸ್ವಹಿತಾಸಕ್ತಿ ಹೆಚ್ಚಾಗಿ ಮೇಲುಗೈ ಸಾಧಿಸುತ್ತದೆ, ಇದು ದೇಶಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ. ಯಾವುದೇ ರಾಷ್ಟ್ರವು ತನ್ನ ನಿರ್ಧಾರಗಳನ್ನು ಅಲ್ಪಾವಧಿಯ ರಾಜಕೀಯ ಪರಿಗಣನೆಗಳಿಂದ ನಿರ್ದೇಶಿಸಿದರೆ ಮುನ್ನಡೆಯಲು ಸಾಧ್ಯವಿಲ್ಲ. ನಿರ್ಧಾರ ತೆಗೆದುಕೊಳ್ಳುವ ಏಕೈಕ ಮಾನದಂಡ "ರಾಷ್ಟ್ರ ಮೊದಲು" ಎಂದಾಗ ಮಾತ್ರ ನಿಜವಾದ ಪ್ರಗತಿ ಸಂಭವಿಸುತ್ತದೆ. ಕಳೆದ ದಶಕದಲ್ಲಿ ಭಾರತ ಈ ತತ್ವಕ್ಕೆ ಬದ್ಧವಾಗಿದೆ, ದೇಶವು ಈಗ ಈ ಕಾರ್ಯವಿಧಾನದ ಫಲಿತಾಂಶಗಳನ್ನು ವೀಕ್ಷಿಸುತ್ತಿದೆ ಎಂದರು.

"ಕಳೆದ 10-11 ವರ್ಷಗಳಲ್ಲಿ, ನಮ್ಮ ಸರ್ಕಾರವು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮತ್ತು ದಶಕಗಳಿಂದ ಬಗೆಹರಿಯದೆ ಉಳಿದಿದ್ದ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸಮಸ್ಯೆಗಳನ್ನು ಪರಿಹರಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ". ಬ್ಯಾಂಕಿಂಗ್ ವಲಯವನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಪ್ರಧಾನಿ, ಬ್ಯಾಂಕಿಂಗ್ ಆರ್ಥಿಕತೆಯ ಬೆನ್ನೆಲುಬಾಗಿದೆ. 2014ಕ್ಕಿಂತ ಮೊದಲು, ಭಾರತದ ಬ್ಯಾಂಕುಗಳು ಕುಸಿತದ ಅಂಚಿನಲ್ಲಿದ್ದವು ಮತ್ತು ಪ್ರತಿ ಹಣಕಾಸು ಶೃಂಗಸಭೆಯು ಅನಿವಾರ್ಯವಾಗಿ ಬ್ಯಾಂಕಿಂಗ್ ನಷ್ಟಗಳನ್ನು ಚರ್ಚಿಸುತ್ತಿತ್ತು. ಆದಾಗ್ಯೂ, ಇಂದು ಭಾರತದ ಬ್ಯಾಂಕಿಂಗ್ ವಲಯವು ವಿಶ್ವದಲ್ಲೇ ಬಲಿಷ್ಠವಾಗಿದೆ, ಬ್ಯಾಂಕುಗಳು ದಾಖಲೆಯ ಲಾಭವನ್ನು ವರದಿ ಮಾಡುತ್ತಿವೆ, ಠೇವಣಿದಾರರು ಈ ಸುಧಾರಣೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈ ಸಾಧನೆಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ನಿರಂತರ ಪ್ರಯತ್ನಗಳು ಕಾರಣ. ಪ್ರಮುಖ ಸುಧಾರಣೆಗಳು, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸಣ್ಣ ಬ್ಯಾಂಕ್‌ಗಳ ವಿಲೀನಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರ್ ಇಂಡಿಯಾದ ಹಿಂದಿನ ಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಿ, ವಿಮಾನಯಾನ ಸಂಸ್ಥೆ ಮುಳುಗುತ್ತಿತ್ತು, ದೇಶಕ್ಕೆ ಸಾವಿರಾರು ಕೋಟಿ ವೆಚ್ಚವಾಗುತ್ತಿತ್ತು, ಆದರೂ ಹಿಂದಿನ ಸರ್ಕಾರಗಳು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿದವು. ಹೆಚ್ಚಿನ ನಷ್ಟ ತಡೆಯಲು ತಮ್ಮ ಸರ್ಕಾರ ಅಗತ್ಯ ನಿರ್ಧಾರಗಳನ್ನು ತೆಗೆದುಕೊಂಡಿದೆ. "ನಮ್ಮ ಸರ್ಕಾರಕ್ಕೆ, ರಾಷ್ಟ್ರದ ಹಿತಾಸಕ್ತಿ ಅತ್ಯುನ್ನತವಾಗಿದೆ" ಎಂದು ಅವರು ಪುನರುಚ್ಚರಿಸಿದರು.

ಆಡಳಿತದಲ್ಲಿ ಗಮನಾರ್ಹ ಬದಲಾವಣೆಯನ್ನು ತರಲಾಗಿದೆ, ಬಡವರಿಗೆ ಮೀಸಲಾದ ಸರ್ಕಾರಿ ನಿಧಿಯಲ್ಲಿ ಕೇವಲ 15% ಮಾತ್ರ ಅವರನ್ನು ತಲುಪಿದೆ ಎಂಬುದನ್ನು ಮಾಜಿ ಪ್ರಧಾನಿಯೊಬ್ಬರು ಒಪ್ಪಿಕೊಂಡಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ, ವರ್ಷಗಳಲ್ಲಿ ಸರ್ಕಾರಗಳು ಬದಲಾಗುತ್ತಿದ್ದರೂ, ಫಲಾನುಭವಿಗಳಿಗೆ ನೇರ ಆರ್ಥಿಕ ನೆರವು ನೀಡಲು ಯಾವುದೇ ಸಂಕೀರ್ಣ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಬಡವರಿಗೆ ಮೀಸಲಾದ ಪ್ರತಿ ರೂಪಾಯಿ ಸೋರಿಕೆಯಿಲ್ಲದೆ ಅವರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ನೇರ ನಗದು ವರ್ಗಾವಣೆ(ಡಿಬಿಟಿ) ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಸುಧಾರಣೆಯು ಸರ್ಕಾರಿ ಯೋಜನೆಗಳಲ್ಲಿನ ಅಸಮರ್ಥತೆಯನ್ನು ನಿವಾರಿಸಿದೆ, ಉದ್ದೇಶಿತ ಫಲಾನುಭವಿಗಳಿಗೆ ನೇರ ಆರ್ಥಿಕ ಪ್ರಯೋಜನಗಳನ್ನು ಸಾಧ್ಯವಾಗಿಸಿದೆ. ಸರ್ಕಾರಿ ದಾಖಲೆಗಳಲ್ಲಿ ಹಿಂದೆ ಅಸ್ತಿತ್ವದಲ್ಲಿಲ್ಲದ, ಇನ್ನೂ ಪ್ರಯೋಜನಗಳನ್ನು ಪಡೆಯುತ್ತಿರುವ 10 ಕೋಟಿ ಮೋಸದ ಫಲಾನುಭವಿಗಳಿದ್ದರು, ಈ ಹೆಸರುಗಳನ್ನು ಹಿಂದಿನ ಆಡಳಿತಗಳು ರೂಪಿಸಿದ ವ್ಯವಸ್ಥೆಯಲ್ಲಿ ಸೇರಿಸಲಾಗಿತ್ತು. ತಮ್ಮ ಸರ್ಕಾರವು ಈ 10 ಕೋಟಿ ಸುಳ್ಳು ನಮೂದುಗಳನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕಿದೆ, ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ. ಈ ಸುಧಾರಣೆಯು 3.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣ ವಂಚಕ ಕೈಗಳಿಗೆ ಹೋಗುವುದನ್ನು ತಡೆಯುತ್ತಿದೆ ಎಂದು ಅವರು ಹೇಳಿದರು.

ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಯೋಜನೆ ಜಾರಿಗೆ ತರಲು ದಶಕಗಳಿಂದ ವಿಳಂಬ ಮಾಡಲಾಗಿದೆ. ಹಿಂದಿನ ಸರ್ಕಾರಗಳು ಆರ್ಥಿಕ ಹೊರೆ ಉಲ್ಲೇಖಿಸಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದವು, ಆದರೆ ನಮ್ಮ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ತಮ್ಮ ಜೀವನ ಮುಡಿಪಾಗಿಟ್ಟವರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿತು. ಒಆರ್‌ಒಪಿ ಲಕ್ಷಾಂತರ ಸೇನಾ ಕುಟುಂಬಗಳಿಗೆ ಪ್ರಯೋಜನ ನೀಡಿದೆ. ಈ ಯೋಜನೆಯಡಿ, ಮಾಜಿ ಸೈನಿಕರಿಗೆ ಅವರ ಸರಿಯಾದ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ವಿತರಿಸಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮೀಸಲಾತಿಯ ವಿಷಯ ಉಲ್ಲೇಖಿಸಿದ ಪ್ರಧಾನಿ, ವರ್ಷಗಳ ಚರ್ಚೆಯ ಹೊರತಾಗಿಯೂ, ಯಾವುದೇ ಸಂಕೀರ್ಣ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಈ ನೀತಿಯನ್ನು ಜಾರಿಗೆ ತರಲು ತಮ್ಮ ಸರ್ಕಾರ ನಿರ್ಣಾಯಕ ಕ್ರಮ ಕೈಗೊಂಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಗೆ ಸಂಬಂಧಿಸಿದಂತೆ, ಅದರ ಪ್ರಗತಿಗೆ ಅಡ್ಡಿಯಾಗಿದ್ದ ಹಿಂದಿನ ರಾಜಕೀಯ ಅಡೆತಡೆಗಳನ್ನು ನೆನಪಿಸಿಕೊಂಡ ಪ್ರಧಾನಿ, ಸ್ವಾರ್ಥ ಹಿತಾಸಕ್ತಿಗಳು ಈ ನಿರ್ಣಾಯಕ ಸುಧಾರಣೆಯನ್ನು ವಿಳಂಬಗೊಳಿಸಿದವು. ಆದರೆ ಅವರ ಸರ್ಕಾರವು ರಾಜಕೀಯ ಪ್ರಾತಿನಿಧ್ಯದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಶಾಸನವನ್ನು ಜಾರಿಗೆ ತರುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯ ತತ್ವವನ್ನು ಎತ್ತಿಹಿಡಿಯಿತು. ಹಿಂದಿನ ಹಲವು ನಿರ್ಣಾಯಕ ವಿಷಯಗಳನ್ನು ಮತ ಬ್ಯಾಂಕ್‌ಗಳ ಮೇಲಿನ ರಾಜಕೀಯ ಕಾಳಜಿಯಿಂದಾಗಿ ಉದ್ದೇಶಪೂರ್ವಕವಾಗಿ ತಪ್ಪಿಸಲಾಗಿತ್ತು. ತ್ರಿವಳಿ ತಲಾಖ್‌ನ ಉದಾಹರಣೆ ನೀಡಿದ ಅವರು, ಇದು ಅಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ವಿನಾಶಕಾರಿ ಪರಿಣಾಮಗಳನ್ನು ಬೀರಿತು, ಆದರೆ ಹಿಂದಿನ ಸರ್ಕಾರಗಳು ಅವರ ದುಃಸ್ಥಿತಿಯ ಬಗ್ಗೆ ಅಸಡ್ಡೆ ಹೊಂದಿದ್ದವು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ತರುವ ಮೂಲಕ ತಮ್ಮ ಸರ್ಕಾರ ಮಹಿಳಾ ಹಕ್ಕುಗಳು ಮತ್ತು ಮುಸ್ಲಿಂ ಕುಟುಂಬಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ, ನ್ಯಾಯ ಮತ್ತು ಸಬಲೀಕರಣವನ್ನು ಖಚಿತಪಡಿಸಿದೆ. ರಾಜಕೀಯ ಪರಿಗಣನೆಗಳಿಂದಾಗಿ ಅಗತ್ಯ ತಿದ್ದುಪಡಿಗಳು ದಶಕಗಳಿಂದ ವಿಳಂಬವಾಗಿದ್ದವು. ಆದರೆ ತಮ್ಮ ಸರ್ಕಾರವು ಈಗ ಮುಸ್ಲಿಂ ತಾಯಂದಿರು, ಸಹೋದರಿಯರು ಮತ್ತು ಸಮುದಾಯದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನಿಜವಾಗಿಯೂ ಪ್ರಯೋಜನಕಾರಿಯಾದ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ ಎಂದು ಮೋದಿ ತಿಳಿಸಿದರು.

 

ತಮ್ಮ ಸರ್ಕಾರ ಕೈಗೊಂಡ ಮಹತ್ವದ ಉಪಕ್ರಮ - ನದಿಗಳ ಜೋಡಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ದಶಕಗಳಿಂದ ನೀರಿನ ವಿವಾದಗಳು ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸಿದ್ದವು, ಆದರೆ ನಮ್ಮ ಆಡಳಿತವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನದಿಗಳನ್ನು ಸಂಪರ್ಕಿಸಲು ಪ್ರಮುಖ ಅಭಿಯಾನ ಪ್ರಾರಂಭಿಸಿದೆ. ಕೆನ್-ಬೆಟ್ವಾ ಸಂಪರ್ಕ ಯೋಜನೆ ಮತ್ತು ಪಾರ್ವತಿ-ಕಾಳಿಸಿಂಧ್-ಚಂಬಲ್ ಸಂಪರ್ಕದಂತಹ ಪ್ರಮುಖ ಯೋಜನೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಈ ಉಪಕ್ರಮಗಳು ನೀರಿನ ಪ್ರವೇಶ ಖಚಿತಪಡಿಸಿಕೊಳ್ಳುವ ಮೂಲಕ ಲಕ್ಷಾಂತರ ರೈತರಿಗೆ ಪ್ರಯೋಜನ ನೀಡುತ್ತವೆ. ಜಲ ಸಂಪನ್ಮೂಲಗಳ ಕುರಿತು ನಡೆಯುತ್ತಿರುವ ಮಾಧ್ಯಮ ಚರ್ಚೆಯನ್ನು ಪ್ರಸ್ತಾಪಿಸಿದ ಅವರು,  ಭಾರತದ ನ್ಯಾಯಯುತ ನೀರಿನ ಪಾಲು ಅದರ ಎಲ್ಲೆ ಮೀರಿ ಹರಿಯುತ್ತಿತ್ತು. ಆದರೀಗ "ಭಾರತದ ನೀರು ರಾಷ್ಟ್ರದೊಳಗೆ ಉಳಿಯುತ್ತಿದೆ, ದೇಶದ ಅಭಿವೃದ್ಧಿಗಾಗಿ ಅದರ ಸರಿಯಾದ ಉದ್ದೇಶವನ್ನು ಪೂರೈಸುತ್ತಿದೆ" ಎಂದರು.

ಹೊಸ ಸಂಸತ್ತು ಕಟ್ಟಡ ನಿರ್ಮಾಣವನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದ್ದರೂ, ಹೆಚ್ಚಾಗಿ ಕಡೆಗಣಿಸಲ್ಪಟ್ಟ ನಿರ್ಧಾರವೆಂದರೆ,  ಅದು ದೆಹಲಿಯಲ್ಲಿ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಸ್ಥಾಪನೆ. ಈ ಉಪಕ್ರಮವನ್ನು ಮೂಲತಃ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಪರಿಚಯಿಸಲಾಯಿತು, ಆದರೆ ನಿರ್ಮಾಣವು ಒಂದು ದಶಕದಿಂದ ಸ್ಥಗಿತಗೊಂಡಿತು. ಆದರೆ ತಮ್ಮ ಸರ್ಕಾರವು ಸ್ಮಾರಕವನ್ನು ಪೂರ್ಣಗೊಳಿಸಿದ್ದಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿ, ಅವರ ಪರಂಪರೆಗೆ ಜಾಗತಿಕ ಮನ್ನಣೆ ನೀಡಿದೆ ಎಂದರು.

2014ರಲ್ಲಿ ತಮ್ಮ ಸರ್ಕಾರ ರಚನೆಯಾದ ಸಂದರ್ಭ ನೆನಪಿಸಿಕೊಂಡ ಪ್ರಧಾನಿ, ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆ ತೀವ್ರವಾಗಿ ಅಲುಗಾಡಿದಾಗ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಸಹಬಾಳ್ವೆ ನಡೆಸಬಹುದೇ ಎಂದು ಕೆಲವರು ಪ್ರಶ್ನಿಸಲು ಪ್ರಾರಂಭಿಸಿದ್ದರು. "ಇಂದಿನ ಭಾರತವು ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿ ನಿಂತಿದೆ, ಪ್ರಜಾಪ್ರಭುತ್ವವು ಎಲ್ಲವನ್ನೂ ತಲುಪಿಸಬಲ್ಲದು ಎಂಬುದನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ". ಕಳೆದ ದಶಕದಲ್ಲಿ, 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಪ್ರಜಾಪ್ರಭುತ್ವ ಆಡಳಿತದ ಪರಿಣಾಮಕಾರಿತ್ವದ ಬಗ್ಗೆ ಜಗತ್ತಿಗೆ ಬಲವಾದ ಸಂದೇಶ ರವಾನಿಸಿದ್ದಾರೆ. ಮುದ್ರಾ ಯೋಜನೆಯಡಿ ಸಾಲ ಪಡೆದ ಲಕ್ಷಾಂತರ ಸಣ್ಣ ಉದ್ಯಮಿಗಳು ಪ್ರಜಾಪ್ರಭುತ್ವದ ಸಕಾರಾತ್ಮಕ ಪರಿಣಾಮವನ್ನು ನೇರವಾಗಿ ಅನುಭವಿಸಿದ್ದಾರೆ. ಹೆಚ್ಚುವರಿಯಾಗಿ, ಒಮ್ಮೆ ಹಿಂದುಳಿದವರು ಎಂದು ಹೆಸರಿಸಲಾದ ಹಲವಾರು ಜಿಲ್ಲೆಗಳು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ರೂಪಾಂತರಗೊಂಡಿವೆ, ಪ್ರಮುಖ ಅಭಿವೃದ್ಧಿ ನಿಯತಾಂಕಗಳಲ್ಲಿ ಶ್ರೇಷ್ಠವಾಗಿವೆ - ಪ್ರಜಾಪ್ರಭುತ್ವವು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಮತ್ತಷ್ಟು ಬಲಪಡಿಸುತ್ತದೆ. ಕೆಲವು ಅತ್ಯಂತ ನಿರ್ಲಕ್ಷಿತ ಗುಂಪುಗಳು ಸೇರಿದಂತೆ ಭಾರತದ ಬುಡಕಟ್ಟು ಸಮುದಾಯಗಳು ಐತಿಹಾಸಿಕವಾಗಿ ಅಭಿವೃದ್ಧಿಯಿಂದ ಹೊರಗುಳಿದಿವೆ. ಪ್ರಧಾನ ಮಂತ್ರಿ ಜನ್ಮನ್ ಯೋಜನೆಯ ಅನುಷ್ಠಾನದೊಂದಿಗೆ, ಈ ಸಮುದಾಯಗಳು ಈಗ ಸರ್ಕಾರಿ ಸೇವೆಗಳನ್ನು ಪಡೆಯುತ್ತಿವೆ, ಪ್ರಜಾಪ್ರಭುತ್ವದ ಉನ್ನತಿಯ ಸಾಮರ್ಥ್ಯದಲ್ಲಿ ಅವರ ನಂಬಿಕೆಯನ್ನು ಬಲಪಡಿಸುತ್ತಿವೆ. ನಿಜವಾದ ಪ್ರಜಾಪ್ರಭುತ್ವವು ಅಭಿವೃದ್ಧಿ ಮತ್ತು ರಾಷ್ಟ್ರೀಯ ಸಂಪನ್ಮೂಲಗಳು ತಾರತಮ್ಯವಿಲ್ಲದೆ ಕಟ್ಟಕಡೆಯ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುತ್ತದೆ, ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಈ ಮೂಲಭೂತ ಉದ್ದೇಶಕ್ಕೆ ಬದ್ಧವಾಗಿದೆ ಎಂದು ಅವರು ದೃಢಪಡಿಸಿದರು.

ಭಾರತವು ತ್ವರಿತ ಅಭಿವೃದ್ಧಿಯಿಂದ ವ್ಯಾಖ್ಯಾನಿಸಲ್ಪಟ್ಟ ಭವಿಷ್ಯ ನಿರ್ಮಿಸುತ್ತಿದೆ, ಪ್ರಗತಿಪರ ಚಿಂತನೆ, ಬಲವಾದ ಸಂಕಲ್ಪ ಮತ್ತು ಆಳವಾದ ಸಹಾನುಭೂತಿಯಿಂದ ಸಮೃದ್ಧವಾಗಿದೆ. ಮಾನವ ಕೇಂದ್ರಿತ ಜಾಗತೀಕರಣದತ್ತ ಬದಲಾವಣೆ ಹೊಂದುತ್ತಿದೆ, ಅಲ್ಲಿ ಬೆಳವಣಿಗೆ ಕೇವಲ ಮಾರುಕಟ್ಟೆಗಳಿಂದ ನಡೆಸಲ್ಪಡುವುದಿಲ್ಲ, ಬದಲಿಗೆ ಜನರ ಘನತೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ನಡೆಯುತ್ತದೆ. "ನಮ್ಮ ಸರ್ಕಾರವು ಜಿಇಪಿ-ಕೇಂದ್ರಿತ ಪ್ರಗತಿ - ಜನರ ಒಟ್ಟು ಸಬಲೀಕರಣ - ಸಮಾಜದ ಸಾಮೂಹಿಕ ಉನ್ನತಿಯ ಮೇಲೆ ಗಮನ ಕೇಂದ್ರೀಕರಿಸುವ ಜಿಡಿಪಿ-ಕೇಂದ್ರಿತ ಕಾರ್ಯವಿಧಾನವನ್ನು ಮೀರಿ ಸಾಗುತ್ತಿದೆ". ಈ ದೃಷ್ಟಿಕೋನವನ್ನು ನಿರೂಪಿಸುವ ಪ್ರಮುಖ ಕ್ರಮಗಳನ್ನು ವಿವರಿಸಿದ ಅವರು, ಬಡ ಕುಟುಂಬವು ಕಾಯಂ ಮನೆ ಪಡೆದಾಗ, ಅವರ ಸಬಲೀಕರಣ ಮತ್ತು ಸ್ವಾಭಿಮಾನ ಬೆಳೆಯುತ್ತದೆ. ಶೌಚಾಲಯದಂತಹ ನೈರ್ಮಲ್ಯ ಸೌಲಭ್ಯಗಳನ್ನು ನಿರ್ಮಿಸಿದಾಗ, ವ್ಯಕ್ತಿಗಳು ಬಯಲು ಮಲ ವಿಸರ್ಜನೆಯ ಅವಮಾನದಿಂದ ಮುಕ್ತರಾಗುತ್ತಾರೆ. ಆಯುಷ್ಮಾನ್ ಭಾರತ್‌ನ ಫಲಾನುಭವಿಗಳು 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ರಕ್ಷಣೆ ಪಡೆದಾಗ, ಅವರ ಅತಿದೊಡ್ಡ ಆರ್ಥಿಕ ಚಿಂತೆಗಳು ನಿವಾರಣೆಯಾಗುತ್ತವೆ. ಅಂತಹ ಹಲವಾರು ಉಪಕ್ರಮಗಳು ಸಮಗ್ರ ಮತ್ತು ಸೂಕ್ಷ್ಮ ಅಭಿವೃದ್ಧಿಯ ಹಾದಿಯನ್ನು ಬಲಪಡಿಸುತ್ತಿವೆ, ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಣಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿವೆ ಎಂದು ಅವರು ಪ್ರತಿಪಾದಿಸಿದರು.

'ನಾಗರಿಕ್ ದೇವೋ ಭವ' ಎಂಬ ಸರ್ಕಾರದ ಮೂಲ ತತ್ವವನ್ನು ಪುನರುಚ್ಚರಿಸಿದ ಪ್ರಧಾನಿ,  ಜನರಿಗೆ ಸೇವೆ ಸಲ್ಲಿಸುವ ಬದ್ಧತೆ ನಮ್ಮದಾಗಿದೆ. ತಮ್ಮ ಆಡಳಿತವು ನಾಗರಿಕರನ್ನು ಹಳೆಯ "ಮಾಯಿ-ಬಾಪ್" ಸಂಸ್ಕೃತಿಗೆ ಅಂಟಿಕೊಳ್ಳುವ ಬದಲು ಆಡಳಿತದ ಕೇಂದ್ರಬಿಂದುವಾಗಿ ನೋಡುತ್ತಿದೆ. ಸರ್ಕಾರವು ನಾಗರಿಕರಿಗೆ ಮುಂಚಿತವಾಗಿ ಪ್ರವೇಶ ಖಚಿತಪಡಿಸುವ ಸೇವಾ-ಆಧಾರಿತ ಕಾರ್ಯ ವಿಧಾನದತ್ತ ಬದಲಾವಣೆ ತಂದಿದ್ದೇವೆ. ಹಿಂದೆ ಜನರು ತಮ್ಮ ದಾಖಲೆಗಳನ್ನು ದೃಢೀಕರಿಸಲು ಪದೇಪದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು, ಆದರೆ ಈಗ, ಸ್ವಯಂ-ದೃಢೀಕರಣ ಪ್ರಕ್ರಿಯೆಯು ಹೆಚ್ಚು ಅನುಕೂಲಕರವಾಗಿಸಿದೆ. ಕಾರ್ಯಕ್ರಮದಲ್ಲಿ ಹಲವಾರು ಯುವ ವ್ಯಕ್ತಿಗಳ ಉಪಸ್ಥಿತಿ  ಗಮನಿಸಿದ ಪ್ರಧಾನಿ, ಡಿಜಿಟಲ್ ಪ್ರಗತಿಗಳು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಹೇಗೆ ಸುವ್ಯವಸ್ಥಿತಗೊಳಿಸಿವೆ, ಸಾರ್ವಜನಿಕ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ನಾಗರಿಕ ಸ್ನೇಹಿಯಾಗಿ ಮಾಡಿದೆ ಎಂಬುದನ್ನುಪ್ರಸ್ತಾಪಿಸಿದರು.

ಸರ್ಕಾರಿ ಪ್ರಕ್ರಿಯೆಗಳಲ್ಲಿ ರೂಪಾಂತರ ತರಲಾಗಿದೆ. ಅವುಗಳನ್ನು ಹೆಚ್ಚು ಸುಲಭ ಮತ್ತು ನಾಗರಿಕ ಸ್ನೇಹಿಯಾಗಿ ಮಾಡಲಾಗಿದೆ. ತಮ್ಮ ಅಸ್ತಿತ್ವದ ಪುರಾವೆಗಳನ್ನು ಒದಗಿಸಲು ಪ್ರತಿ ವರ್ಷ ಕಚೇರಿಗಳು ಅಥವಾ ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗಿದ್ದ ಹಿರಿಯ ನಾಗರಿಕರು ಎದುರಿಸುತ್ತಿದ್ದ ಸವಾಲುಗಳನ್ನು ನೆನಪಿಸಿಕೊಂಡ ಪ್ರಧಾನಿ, ತಮ್ಮ ಸರ್ಕಾರವು ಡಿಜಿಟಲ್ ವ್ಯವಸ್ಥೆ ಪರಿಚಯಿಸಿದ್ದು, ಹಿರಿಯ ನಾಗರಿಕರು ತಮ್ಮ ಜೀವನ ಪ್ರಮಾಣಪತ್ರಗಳನ್ನು ದೂರದಿಂದಲೇ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿದ್ಯುತ್ ಸಂಪರ್ಕ ಪಡೆಯುವುದು, ನೀರಿನ ನಲ್ಲಿಗಳನ್ನು ಅಳವಡಿಸುವುದು, ಬಿಲ್‌ಗಳನ್ನು ಪಾವತಿಸುವುದು, ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸುವುದು ಮತ್ತು ವಿತರಣೆಗಳನ್ನು ಸ್ವೀಕರಿಸುವುದು ಮುಂತಾದ ದಿನನಿತ್ಯದ ಕೆಲಸಗಳಿಗೆ ಪದೇಪದೆ ಭೇಟಿ ನೀಡುವುದು ಮತ್ತು ಕೆಲಸದಿಂದ ರಜೆ ತೆಗೆದುಕೊಳ್ಳುವ ಹಿಂದಿನ ಪರಿಸ್ಥಿತಿಗಳಿಗೆ ಪರಿಹಾರ ಒದಗಿಸಲಾಗಿದೆ. ಇಂದು, ಈ ಸೇವೆಗಳನ್ನು ಹಲವು ಆನ್‌ಲೈನ್ ವೇದಿಕೆಗಳ ಮೂಲಕ ಸುವ್ಯವಸ್ಥಿತಗೊಳಿಸಲಾಗಿದ್ದು, ನಾಗರಿಕರಿಗೆ ಅನನುಕೂಲತೆಗಳನ್ನು ಕಡಿಮೆ ಮಾಡಲಾಗಿದೆ. ಪಾಸ್‌ಪೋರ್ಟ್‌ಗಳು, ತೆರಿಗೆ ಮರುಪಾವತಿಗಳು ಅಥವಾ ಇತರ ಸೇವೆಗಳಿಗಾಗಿ ಪ್ರತಿಯೊಂದು ಸರ್ಕಾರಿ-ನಾಗರಿಕ ಸಂವಹನವನ್ನು ಸರಳ, ವೇಗ ಮತ್ತು ಪರಿಣಾಮಕಾರಿಯಾಗಿ ಮಾಡುವ ತಮ್ಮ ಸರ್ಕಾರದ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು. ಈ ವಿಧಾನವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ ಬಲಪಡಿಸುವ 'ನಾಗರಿಕ ದೇವೋ ಭವ' ತತ್ವಕ್ಕೆ ಹೊಂದಿಕೆಯಾಗುತ್ತದೆ ಎಂದರು.

"ವಿಕಾಸ್ ಭಿ, ವಿರಾಸತ್ ಭಿ"ಗೆ ದೇಶ ಹೊಂದಿರುವ ಬದ್ಧತೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಸಂಪ್ರದಾಯ ಮತ್ತು ಪ್ರಗತಿ ಎರಡನ್ನೂ ಏಕಕಾಲದಲ್ಲಿ ಮುನ್ನಡೆಸುವ ಭಾರತದ ವಿಶಿಷ್ಟ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. ಸಂಪ್ರದಾಯ ಮತ್ತು ತಂತ್ರಜ್ಞಾನವು ಒಟ್ಟಿಗೆ ಹೇಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಭಾರತ ಪ್ರದರ್ಶಿಸುತ್ತಿದೆ. ಡಿಜಿಟಲ್ ವಹಿವಾಟುಗಳಲ್ಲಿ ದೇಶವು ಜಾಗತಿಕ ನಾಯಕ ಸ್ಥಾನ ಪಡೆದಿದೆ, ಯೋಗ ಮತ್ತು ಆಯುರ್ವೇದವನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದೆ. ಕಳೆದ ದಶಕದಲ್ಲಿ ದಾಖಲೆಯ ಎಫ್‌ಡಿಐ ಒಳಹರಿವಿನೊಂದಿಗೆ ಭಾರತ ಹೂಡಿಕೆಗೆ ಹೆಚ್ಚು ಆಕರ್ಷಕ ತಾಣವಾಗಿದೆ. ಕದ್ದ ಕಲಾಕೃತಿಗಳು ಮತ್ತು ಪರಂಪರೆಯ ವಸ್ತುಗಳನ್ನು ಅಭೂತಪೂರ್ವ ಸಂಖ್ಯೆಯಲ್ಲಿ ವಾಪಸ್ ತರಲಾಗಿದೆ, ಇದು ಭಾರತದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತಿದೆ. ಭಾರತವು ಈಗ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ಮತ್ತು ಸಿರಿಧಾನ್ಯ ದತಂಹ ಉತ್ಕೃಷ್ಟ ಆಹಾರಗಳ ಪ್ರಮುಖ ಉತ್ಪಾದಕ ದೇಶವಾಗಿದೆ. ಹೆಚ್ಚುವರಿಯಾಗಿ, ಸೌರಶಕ್ತಿಯಲ್ಲಿ ದೇಶದ ಸಾಧನೆ ಮಾಡಿದೆ, 100 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ದಾಟಿದ್ದು, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತದ ನಾಯಕತ್ವ ಬಲಗೊಂಡಿದೆ.

ಪ್ರಗತಿಗೆ ಒಬ್ಬರ ಸಾಂಸ್ಕೃತಿಕ ಬೇರುಗಳನ್ನು ತ್ಯಜಿಸುವ ಅಗತ್ಯವಿಲ್ಲ. ಭಾರತವು ತನ್ನ ಪರಂಪರೆಯೊಂದಿಗೆ ಆಳವಾದಷ್ಟು ಸಂಪರ್ಕ ಹೊಂದಿದೆ, ಆಧುನಿಕ ಪ್ರಗತಿಗಳೊಂದಿಗೆ ಅದರ ಏಕೀಕರಣವು ಬಲವಾಗಿರುತ್ತದೆ. ಭಾರತವು ತನ್ನ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುತ್ತಿದೆ ಮತ್ತು ಭವಿಷ್ಯಕ್ಕೆ ಅದು ಶಕ್ತಿಯ ಮೂಲವಾಗಿ ಉಳಿಯುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರತಿಯೊಂದು ಹೆಜ್ಜೆಯೂ ಅಪಾರ ಮಹತ್ವ ಹೊಂದಿದೆ. ಆಗಾಗ್ಗೆ, ಜನರು ಸರ್ಕಾರಿ ನಿರ್ಧಾರಗಳ ಗುಣಕ ಪರಿಣಾಮಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾಗುತ್ತಾರೆ, ಆದರೆ ಮಾಧ್ಯಮ ಮತ್ತು ವಿಷಯ ಸೃಷ್ಟಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಒಂದು ದಶಕದ ಹಿಂದೆ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದಾಗ, ಅನೇಕರು ಸಂದೇಹ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡರು. ಇಂದು ಡಿಜಿಟಲ್ ಇಂಡಿಯಾ ದೈನಂದಿನ ಜೀವನದಲ್ಲಿ ಸರಾಗವಾಗಿ ಸಂಯೋಜಿಸಲ್ಪಟ್ಟಿದೆ. ಕೈಗೆಟಕುವ ಡೇಟಾ ಮತ್ತು ದೇಶೀಯವಾಗಿ ತಯಾರಿಸಿದ ಸ್ಮಾರ್ಟ್‌ಫೋನ್‌ಗಳು ಡಿಜಿಟಲ್ ಜಾಗದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿವೆ. ಡಿಜಿಟಲ್ ಇಂಡಿಯಾ ಜೀವನದ ಸುಲಭತೆ ಹೆಚ್ಚಿಸಿದೆ, ಆದರೆ ವಿಷಯ ಮತ್ತು ಸೃಜನಶೀಲತೆಯ ಮೇಲೆ ಅದರ ಪ್ರಭಾವ ಹೆಚ್ಚಾಗಿದೆ. ಡಿಜಿಟಲ್ ವೇದಿಕೆಗಳು ವ್ಯಕ್ತಿಗಳನ್ನು ಹೇಗೆ ಸಬಲೀಕರಣಗೊಳಿಸಿವೆ ಎಂಬುದರ ಉದಾಹರಣೆಗಳನ್ನು ಸಹ ಪ್ರಧಾನಿ ಹಂಚಿಕೊಂಡರು. ಲಕ್ಷಾಂತರ ಚಂದಾದಾರರೊಂದಿಗೆ ಯಶಸ್ಸು ಸಾಧಿಸಿದ ಗ್ರಾಮೀಣ ಮಹಿಳೆ, ಜಾಗತಿಕ ಪ್ರೇಕ್ಷಕರಿಗೆ ಸಾಂಪ್ರದಾಯಿಕ ಕಲೆ ಪ್ರದರ್ಶಿಸಿದ ಬುಡಕಟ್ಟು ಯುವಕ ಮತ್ತು ನವೀನ ರೀತಿಯ ತಂತ್ರಜ್ಞಾನ ವಿವರಿಸುವ ವಿದ್ಯಾರ್ಥಿಯ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಇತ್ತೀಚೆಗೆ ಮುಂಬೈನಲ್ಲಿ ಮಾಧ್ಯಮ, ಮನರಂಜನೆ ಮತ್ತು ಸೃಜನಶೀಲ ಕೈಗಾರಿಕೆಗಳ ಜಾಗತಿಕ ನಾಯಕರು ಸಭೆ ಸೇರಿದ ವೇವ್ಸ್ ಶೃಂಗಸಭೆ ಉಲ್ಲೇಖಿಸಿದ ಶ್ರೀ ಮೋದಿ, ಕಳೆದ 3 ವರ್ಷಗಳಲ್ಲಿ ಯೂಟ್ಯೂಬ್ ಒಂದೇ ಭಾರತೀಯ ವಿಷಯ ರಚನೆಕಾರರಿಗೆ 21,000 ಕೋಟಿ ರೂ. ಪಾವತಿಸಿದೆ, ಇದು ಸ್ಮಾರ್ಟ್‌ಫೋನ್‌ಗಳು ಸಂವಹನ ಸಾಧನಗಳನ್ನು ಮೀರಿ ಸೃಜನಶೀಲತೆ ಮತ್ತು ಆದಾಯ ಗಳಿಕೆಗೆ ಪ್ರಬಲ ಸಾಧನಗಳಾಗಿ ವಿಕಸನಗೊಂಡಿವೆ ಎಂಬುದನ್ನು ಮತ್ತಷ್ಟು ಸಾಬೀತುಪಡಿಸಿದೆ ಎಂದರು.

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವು ಆತ್ಮನಿರ್ಭರ ಭಾರತ ಉಪಕ್ರಮಕ್ಕೆ ನಿಕಟ ಸಂಬಂಧ ಹೊಂದಿದೆ. "ಸ್ವಾವಲಂಬನೆ ಯಾವಾಗಲೂ ಭಾರತದ ಆರ್ಥಿಕ ಡಿಎನ್‌ಎಯ ಮೂಲಭೂತ ಭಾಗವಾಗಿದೆ". ಆದರೆ, ವರ್ಷಗಳಿಂದ ದೇಶವನ್ನು ಉತ್ಪಾದಕ ಎಂದು ಪರಿಗಣಿಸದೆ ಮಾರುಕಟ್ಟೆಯಾಗಿ ಮಾತ್ರ ನೋಡಲಾಗುತ್ತಿತ್ತು, ಈ ನಿರೂಪಣೆ ಇದೀಗ ಬದಲಾಗುತ್ತಿದೆ. 100ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ಪೂರೈಸಲಾಗುತ್ತಿರುವುದರಿಂದ ಭಾರತವು ಪ್ರಮುಖ ರಕ್ಷಣಾ ತಯಾರಕ ಮತ್ತು ರಫ್ತುದಾರನಾಗಿ ಹೊರಹೊಮ್ಮುತ್ತಿದೆ. ರಕ್ಷಣಾ ರಫ್ತುಗಳಲ್ಲಿ ನಿರಂತರ ಏರಿಕೆ ಆಗುತ್ತಿದೆ, ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ಸೂರತ್ ಮತ್ತು ಐಎನ್‌ಎಸ್ ನೀಲಗಿರಿ ಸೇರಿದಂತೆ ಭಾರತದ ಸ್ಥಳೀಯ ನೌಕಾಪಡೆಯ ಬಲವನ್ನು ಸಂಪೂರ್ಣವಾಗಿ ದೇಶೀಯ ಸಾಮರ್ಥ್ಯದ ಮೂಲಕ ನಿರ್ಮಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಕ್ಷೇತ್ರಗಳಲ್ಲೂ ಭಾರತವು ಶ್ರೇಷ್ಠತೆ ಸಾಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶವು ಎಲೆಕ್ಟ್ರಾನಿಕ್ ಉತ್ಪನ್ನಗಳ ಗಮನಾರ್ಹ ರಫ್ತುದಾರನಾಗಿದೆ, ಸ್ಥಳೀಯ ಆವಿಷ್ಕಾರಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಿವೆ. ಇತ್ತೀಚಿನ ರಫ್ತು ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಭಾರತದ ಒಟ್ಟು ರಫ್ತು ಕಳೆದ ವರ್ಷ ದಾಖಲೆಯ 825 ಶತಕೋಟಿ ಡಾಲರ್ ತಲುಪಿದೆ, ಇದು ಒಂದು ದಶಕದಲ್ಲಿ ಬಹುತೇಕ 2 ಪಟ್ಟು ಹೆಚ್ಚಾಗಿದೆ. ಈ ಆವೇಗವನ್ನು ಮತ್ತಷ್ಟು ಹೆಚ್ಚಿಸಲು, ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿರುವ ಮಿಷನ್ ಮ್ಯಾನುಫ್ಯಾಕ್ಚರಿಂಗ್ ಅನ್ನು ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ. "ಭಾರತದ ಬೆಳೆಯುತ್ತಿರುವ ಉತ್ಪಾದನಾ ಪರಾಕ್ರಮವು ಜಾಗತಿಕ ವೇದಿಕೆಯಲ್ಲಿ ಸೃಷ್ಟಿಕರ್ತರು, ನಾವೀನ್ಯಕಾರರನ್ನು ರೂಪಿಸುತ್ತಿದೆ" ಎಂದರು.

ಈ ದಶಕವು ಮುಂಬರುವ ಶತಮಾನಗಳಲ್ಲಿ ಭಾರತದ ಪಥವನ್ನು ವ್ಯಾಖ್ಯಾನಿಸುತ್ತದೆ, ರಾಷ್ಟ್ರದ ಅಭಿವೃದ್ಧಿ ಅಥವಾ ಪ್ರಗತಿಯ ಹಣೆಬರಹ ರೂಪಿಸುವಲ್ಲಿ ಇದು ಒಂದು ಪ್ರಮುಖ ಅವಧಿ ಎಂದು ಬಣ್ಣಿಸಿದರು. ದೇಶಾದ್ಯಂತ ಪ್ರತಿಯೊಬ್ಬ ನಾಗರಿಕ, ಸಂಸ್ಥೆ ಮತ್ತು ವಲಯದಲ್ಲಿ ಪರಿವರ್ತನೆಯ ಮನೋಭಾವ ಸ್ಪಷ್ಟವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶೃಂಗಸಭೆಯಲ್ಲಿನ ಚರ್ಚೆಗಳು ಪ್ರಗತಿಯ ಈ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ಗಮನಿಸಿದ ಶ್ರೀ ಮೋದಿ, ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಎಬಿಪಿ ನೆಟ್‌ವರ್ಕ್‌ಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

 

*****


(Release ID: 2127436)