WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025ರಲ್ಲಿ ಮಾಧ್ಯಮ ಮತ್ತು ಮನರಂಜನಾ ವಲಯದ ಪ್ರಮುಖ ಜ್ಞಾನ ವರದಿಗಳನ್ನು ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್ ಬಿಡುಗಡೆ ಮಾಡಿದರು; ಇದು ಜಾಗತಿಕ ಸೃಜನಶೀಲ ಸೂಪರ್ ಪವರ್ ಆಗಿ ಭಾರತದ ಏರಿಕೆಯನ್ನು ತೋರಿಸುತ್ತದೆ

 Posted On: 04 MAY 2025 1:50PM |   Location: PIB Bengaluru

ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ನಿನ್ನೆ ಐದು ಪ್ರಮುಖ ವರದಿಗಳನ್ನು ಬಿಡುಗಡೆ ಮಾಡಿದರು, ಇದು ಭಾರತದ ಕ್ರಿಯಾತ್ಮಕ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಮಾಧ್ಯಮ ಮತ್ತು ಮನರಂಜನಾ ಪರಿಸರ ವ್ಯವಸ್ಥೆಯ ಸಮಗ್ರ ಅವಲೋಕನವನ್ನು ನೀಡುತ್ತದೆ.

ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳು ತಯಾರಿಸಿದ ಈ ವರದಿಗಳು, ಸೃಜನಶೀಲ ಆರ್ಥಿಕತೆ, ಕಂಟೆಂಟ್ ನಿರ್ಮಾಣ, ಕಾನೂನು ಚೌಕಟ್ಟುಗಳು, ಲೈವ್ ಈವೆಂಟ್ ಗಳ ಉದ್ಯಮ ಮತ್ತು ಡೇಟಾ-ಬೆಂಬಲಿತ ನೀತಿ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತವೆ.

ಮಾಧ್ಯಮ ಮತ್ತು ಮನರಂಜನೆಯ ಅಂಕಿಅಂಶಗಳ ಕೈಪಿಡಿ 2024-25

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಿದ್ಧಪಡಿಸಿದ ಅಂಕಿಅಂಶಗಳ ಕೈಪಿಡಿಯು ದತ್ತಾಂಶ ಆಧಾರಿತ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗೆ ಅಗತ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇದು ವಲಯ ಪ್ರವೃತ್ತಿಗಳು, ಪ್ರೇಕ್ಷಕರ ನಡವಳಿಕೆ, ಆದಾಯ ಬೆಳವಣಿಗೆಯ ಮಾದರಿಗಳು ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಥವನ್ನು ಪ್ರತಿಬಿಂಬಿಸುತ್ತದೆ. ಈ ಕೈಪಿಡಿಯನ್ನು ಭವಿಷ್ಯದ ನೀತಿ ನಿರೂಪಣೆ ಮತ್ತು ಉದ್ಯಮ ಕಾರ್ಯತಂತ್ರಗಳನ್ನು ತಿಳಿಸಲು ಮತ್ತು ಮಾರ್ಗದರ್ಶನ ಮಾಡಲು ವಿನ್ಯಾಸಗೊಳಿಸಲಾಗಿದೆ, ಅವುಗಳು ಪ್ರಾಯೋಗಿಕ ಪುರಾವೆಗಳು ಮತ್ತು ಪ್ರಾಯೋಗಿಕ ವಾಸ್ತವಗಳಲ್ಲಿ ನೆಲೆಗೊಂಡಿವೆ ಎಂದು ಖಚಿತಪಡಿಸುತ್ತದೆ. ಕೈಪಿಡಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

•   ಪಿ ಆರ್ ಜಿ ಐ ನಲ್ಲಿ ನೋಂದಾಯಿಸಲಾದ ಪ್ರಕಟಣೆಗಳು: 1957 ರಲ್ಲಿದ್ದ 5,932 ರಿಂದ 2024–25 ರಲ್ಲಿ 154,523 ಕ್ಕೆ ಏರಿಕೆ, ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (ಸಿಎಜಿಆರ್) ಶೇಕಡಾ 4.99.
•   ಪ್ರಕಟಣಾ ವಿಭಾಗದಿಂದ ಹೊರತಂದ ಪುಸ್ತಕಗಳು: ಮಕ್ಕಳ ಸಾಹಿತ್ಯ, ಇತಿಹಾಸ, ಸ್ವಾತಂತ್ರ್ಯ ಹೋರಾಟ, ವಿಜ್ಞಾನ, ಪರಿಸರ ಮತ್ತು ಜೀವನಚರಿತ್ರೆಯಂತಹ ವಿಷಯಗಳ ಕುರಿತು 2024–25 ರಲ್ಲಿ 130 ಪುಸ್ತಕಗಳ ಪ್ರಕಟಣೆ.
•    ದೂರದರ್ಶನ ಉಚಿತ ಡಿಶ್: 2004 ರಲ್ಲಿದ್ದ 33 ಚಾನೆಲ್ ಗಳಿಂದ 2025 ರಲ್ಲಿ 381 ಕ್ಕೆ ವಿಸ್ತರಿಸಲಾಗಿದೆ.
•    ಡಿಟಿಎಚ್ ಸೇವೆ: ಮಾರ್ಚ್ 2025 ರ ವೇಳೆಗೆ ಶೇ.100 ಭೌಗೋಳಿಕ ವ್ಯಾಪ್ತಿಯನ್ನು ಸಾಧಿಸಲಾಗಿದೆ.
•    ಆಕಾಶವಾಣಿ (ಎಐಆರ್):
•    ಈಗ ಭಾರತದ ಜನಸಂಖ್ಯೆಯ ಶೇ.98 ರಷ್ಟನ್ನು ತಲುಪಿದೆ (ಮಾರ್ಚ್ 2025 ರ ಹೊತ್ತಿಗೆ).
•    2000 ದಲ್ಲಿ 198 ಇದ್ದ ಆಕಾಶವಾಣಿ ಕೇಂದ್ರಗಳ ಸಂಖ್ಯೆ 2025 ರಲ್ಲಿ 591 ಕ್ಕೆ ಏರಿಕೆ.
•    ಖಾಸಗಿ ಉಪಗ್ರಹ ಟಿವಿ ಚಾನೆಲ್ ಗಳು: 2004-05 ರಲ್ಲಿದ್ದ 130 ರಿಂದ 2024-25 ರಲ್ಲಿ 908 ಕ್ಕೆ ಏರಿಕೆ.
•   ಖಾಸಗಿ ಎಫ್ ಎಂ ಕೇಂದ್ರಗಳು: 2001 ರಲ್ಲಿದ್ದ 4 ರಿಂದ 2024 ರ ವೇಳೆಗೆ 388 ಕ್ಕೆ ಏರಿಕೆ; ವರದಿಯು ಮಾರ್ಚ್ 31, 2025 ರ ಹೊತ್ತಿಗೆ ರಾಜ್ಯವಾರು ಸಂಖ್ಯೆಯನ್ನು ಒದಗಿಸಿದೆ.
•  ಸಮುದಾಯ ರೇಡಿಯೋ ಕೇಂದ್ರಗಳು (ಸಿ ಆರ್ ಎಸ್): 2005 ರಲ್ಲಿದ್ದ 15 ರಿಂದ 2025 ರಲ್ಲಿ 531 ಕ್ಕೆ ಹೆಚ್ಚಳವಾಗಿದೆ, ರಾಜ್ಯ/ಜಿಲ್ಲೆ/ಸ್ಥಳವಾರು ವಿವರಗಳನ್ನು ಸೇರಿಸಲಾಗಿದೆ.
•   ಚಲನಚಿತ್ರ ಪ್ರಮಾಣೀಕರಣ: 1983 ರಲ್ಲಿ 741 ರಷ್ಟಿದ್ದ ಭಾರತೀಯ ಚಲನಚಿತ್ರಗಳ ಸಂಖ್ಯೆ 2024-25 ರಲ್ಲಿ 3,455 ಕ್ಕೆ ಏರಿಕೆಯಾಗಿವೆ, 2024-25 ರ ವೇಳೆಗೆ ಒಟ್ಟು 69,113 ಚಲನಚಿತ್ರಗಳು ಪ್ರಮಾಣೀಕರಿಸಲ್ಪಟ್ಟವು.
•   ಚಲನಚಿತ್ರ ಕ್ಷೇತ್ರದ ಬೆಳವಣಿಗೆಗಳು: ಪ್ರಶಸ್ತಿಗಳು, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಮತ್ತು ಎನ್ ಎಫ್ ಡಿ ಸಿ ನಿರ್ಮಿಸಿದ ಸಾಕ್ಷ್ಯಚಿತ್ರಗಳ ಡೇಟಾವನ್ನು ಒಳಗೊಂಡಿದೆ.
•  ಡಿಜಿಟಲ್ ಮಾಧ್ಯಮ ಮತ್ತು ಸೃಜನಶೀಲ ಆರ್ಥಿಕತೆ: ವೇವ್ಸ್ ಒಟಿಟಿ ಅಡಿಯಲ್ಲಿ ಸಾಧನೆಗಳು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (ಐಐಸಿಟಿ) ಸ್ಥಾಪನೆ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಅಡಿಯಲ್ಲಿ ಒಳಗೊಂಡಿದೆ.
•   ಹೆಗ್ಗುರುತು ಕಾಲಗಣನೆ: ಪಿ ಆರ್ ಜಿ ಐ, ಆಕಾಶವಾಣಿ, ದೂರದರ್ಶನ,ಇನ್ಸಾಟ್-ಆಧಾರಿತ ಟಿವಿ ಸೇವೆಗಳು ಮತ್ತು ಖಾಸಗಿ ಎಫ್ ಎಂ ರೇಡಿಯೊ ಸ್ಥಾಪನೆ ಸೇರಿದಂತೆ ವಾರ್ತಾ ಮತ್ತು ಪ್ರಸಾರ ವಲಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಒಳಗೊಂಡಿದೆ.
•   ಕೌಶಲ್ಯ ಉಪಕ್ರಮಗಳು: ಸಚಿವಾಲಯದ ಅಡಿಯಲ್ಲಿ ತರಬೇತಿ ಮತ್ತು ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳ ಕುರಿತು ಮಾಹಿತಿ.
• ವ್ಯವಹಾರವನ್ನು ಸುಲಭಗೊಳಿಸುವುದು: ಮಾಧ್ಯಮ ಮತ್ತು ಕಂಟೆಂಟ್ ರಚನೆಕಾರರಿಗೆ ಸರಳೀಕೃತ ಮತ್ತು ಪಾರದರ್ಶಕ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಕ್ರಮಗಳನ್ನು ಅಳವಡಿಸಲಾಗಿದೆ.

‘ಕಂಟೆಂಟ್ ನಿಂದ ವಾಣಿಜ್ಯಕ್ಕೆ: ಭಾರತದ ಸೃಜನಶೀಲ ಆರ್ಥಿಕತೆಯನ್ನು ನಕ್ಷೆ ಮಾಡುವುದು’ - ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ವರದಿ

ಡಿಜಿಟಲ್ ಯುಗದಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯ ಅಭೂತಪೂರ್ವ ಪ್ರಮಾಣ ಮತ್ತು ಪ್ರಭಾವವನ್ನು ವರದಿಯು ಎತ್ತಿ ತೋರಿಸುತ್ತದೆ. 2 ರಿಂದ 2.5 ಮಿಲಿಯನ್ ಸಕ್ರಿಯ ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತರೊಂದಿಗೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಟೆಂಟ್ ಸೃಷ್ಟಿಕರ್ತ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಕಂಟೆಂಟ್ ಸೃಷ್ಟಿಕರ್ತರು ಈಗಾಗಲೇ ವಾರ್ಷಿಕ ಗ್ರಾಹಕ ವೆಚ್ಚದ ಮೇಲೆ 350 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಪ್ರಭಾವ ಬೀರುತ್ತಾರೆ - ಇದು 2030ರ ವೇಳೆಗೆ ಮೂರು ಪಟ್ಟು ಹೆಚ್ಚಳ ಮತ್ತು 1 ಟ್ರಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ.

ವರದಿಯು ಪಾಲುದಾರರನ್ನು ಸಂಖ್ಯೆಗಳಿಂದಾಚೆಗೆ ನೋಡುವಂತೆ ಮತ್ತು ಕಥೆಗಾರರು, ಸಂಸ್ಕೃತಿ-ರೂಪಿಸುವವರು ಮತ್ತು ಆರ್ಥಿಕ ಚಾಲಕರಾಗಿ ಕಂಟೆಂಟ್ ಸೃಷ್ಟಿಕರ್ತರ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತದೆ. 

ಅರ್ನ್ಸ್ಟ್ & ಯಂಗ್ ಅವರ 'ಎ ಸ್ಟುಡಿಯೋ ಕಾಲ್ಡ್ ಇಂಡಿಯಾ' - ಭಾರತವನ್ನು ಜಾಗತಿಕ ಕಂಟೆಂಟ್ ಕೇಂದ್ರವಾಗಿ ನೋಡುತ್ತದೆ

ಈ ವರದಿಯು ಭಾರತವನ್ನು ಕೇವಲ ಕಂಟೆಂಟ್ ಬಳಕೆಯ ರಾಷ್ಟ್ರವಾಗಿ ಮಾತ್ರವಲ್ಲದೆ ಜಗತ್ತಿಗೆ ಒಂದು ಸ್ಟುಡಿಯೋ ಆಗಿಯೂ ಪ್ರಸ್ತುತಪಡಿಸುತ್ತದೆ. ಇದು ಭಾರತದ ಸಾಮರ್ಥ್ಯಗಳನ್ನು - ಭಾಷಾ ವೈವಿಧ್ಯತೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ತಾಂತ್ರಿಕವಾಗಿ ಪ್ರವೀಣವಾದ ಪ್ರತಿಭೆಗಳು- ಒತ್ತಿಹೇಳುತ್ತದೆ, ಇದು ದೇಶವನ್ನು ಗಡಿಗಳನ್ನು ಮೀರಿದ ನಿರೂಪಣೆಗಳನ್ನು ರಚಿಸುವ ಸ್ಥಾನದಲ್ಲಿರಿಸುತ್ತದೆ.

ಭಾರತವು ಅನಿಮೇಷನ್ ಮತ್ತು ವಿ ಎಫ್ ಎಕ್ಸ್ ಸೇವೆಗಳಲ್ಲಿ ಶೇ.40 ರಿಂದ ಶೇ.60 ರಷ್ಟು ವೆಚ್ಚ ಉಳಿತಾಯದ ಪ್ರಯೋಜನವನ್ನು ನೀಡುತ್ತದೆ, ಇದನ್ನು ದೊಡ್ಡ, ಕೌಶಲ್ಯಪೂರ್ಣ ಕಾರ್ಯಪಡೆಯು ಬೆಂಬಲಿಸುತ್ತದೆ. ಭಾರತೀಯ ಕಥೆ ಹೇಳುವಿಕೆಯ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಆಕರ್ಷಣೆಯನ್ನು ವರದಿಯು ಗಮನಿಸುತ್ತದೆ, ಭಾರತೀಯ ಒಟಿಟಿ ಕಂಟೆಂಟ್ ಮೇಲಿನ ಶೇಕಡಾ 25 ರವರೆಗಿನ ವೀಕ್ಷಣೆಗಳು ಈಗ ವಿದೇಶಿ ಪ್ರೇಕ್ಷಕರಿಂದ ಬರುತ್ತಿವೆ. ಈ ವಿದ್ಯಮಾನವು ಕೇವಲ ವಾಣಿಜ್ಯಿಕವಲ್ಲ - ಇದು ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಪ್ರತಿನಿಧಿಸುತ್ತದೆ, ಇದರಲ್ಲಿ ಭಾರತದ ಕಥೆಗಳು ಖಂಡಗಳಾದ್ಯಂತ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಬೆಸೆಯುತ್ತಿವೆ.

ಖೈತಾನ್ & ಕಂಪನಿಯ ‘ಲೀಗಲ್ ಕರೆಂಟ್ಸ್: ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯದ 2025ರ ನಿಯಂತ್ರಕ ಕೈಪಿಡಿ'

ಸೃಜನಶೀಲತೆಯು ನಿಯಂತ್ರಕ ಸ್ಪಷ್ಟತೆಯಿಂದ ಪೂರಕವಾಗಿರಬೇಕು ಎಂದು ಗುರುತಿಸಿ, ಖೈತಾನ್ & ಕಂಪನಿ ಮಾಧ್ಯಮ ಮತ್ತು ಮನರಂಜನಾ ವಲಯಕ್ಕಾಗಿ ವಿವರವಾದ ಕಾನೂನು ಮತ್ತು ನಿಯಂತ್ರಕ ಕೈಪಿಡಿಯನ್ನು ಸಿದ್ಧಪಡಿಸಿದೆ. ನಿರ್ಮಾಪಕರು, ಸ್ಟುಡಿಯೋಗಳು, ಪ್ರಭಾವಿಗಳು ಮತ್ತು ವೇದಿಕೆಗಳಿಗೆ ಪ್ರಾಯೋಗಿಕ ಮಾರ್ಗದರ್ಶಿಯಾಗಿ ವಿನ್ಯಾಸಗೊಳಿಸಲಾದ ಈ ಕೈಪಿಡಿಯು ಹಲವಾರು ಪ್ರಮುಖ ಕಾನೂನು ವಿಷಯಗಳನ್ನು ಒಳಗೊಂಡಿದೆ. ಅವುಗಳೆಂದರೆ:

•    ದೇಶೀಯ ಮತ್ತು ವಿದೇಶಿ ಸಂಸ್ಥೆಗಳಿಗೆ ಅನುಸರಣಾ ಮಾನದಂಡಗಳು
•    ಅಂತಾರಾಷ್ಟ್ರೀಯ ನಿರ್ಮಾಣಗಳಿಗೆ ಪ್ರೋತ್ಸಾಹಕ ಯೋಜನೆಗಳು
•    ಪ್ರಭಾವಿಗಳ ಮಾರ್ಕೆಟಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಸುತ್ತ ಕಾನೂನು ಚೌಕಟ್ಟುಗಳು
•    ಜಿ ಎಸ್ ಟಿ ಸೇರಿದಂತೆ ಗೇಮಿಂಗ್ ವಲಯದಲ್ಲಿನ ವ್ಯಾಖ್ಯಾನಗಳು ಮತ್ತು ತೆರಿಗೆಯ ಪರಿಣಾಮಗಳು
•    ಸೆಲೆಬ್ರಿಟಿ ಹಕ್ಕುಗಳ ರಕ್ಷಣೆ
•    ಎಐ-ರಚಿತ ಕಂಟೆಂಟ್ ನ ನೈತಿಕ ಪರಿಗಣನೆಗಳು ಮತ್ತು ನಿಯಂತ್ರಣ ವ್ಯವಸ್ಥೆ

ಈ ಕೈಪಿಡಿಯು ಸೃಜನಶೀಲ ಆರ್ಥಿಕತೆಯಲ್ಲಿ ಆತ್ಮವಿಶ್ವಾಸ, ಅನುಸರಣೆ ಮತ್ತು ಜವಾಬ್ದಾರಿಯುತ ತೊಡಗಿಸಿಕೊಳ್ಳುವಿಕೆಗಾಗಿ ಪಾಲುದಾರರನ್ನು ಸಾಧನಗಳೊಂದಿಗೆ ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಿದೆ.

ಭಾರತದ ನೇರ ಕಾರ್ಯಕ್ರಮ (ಲೈವ್ ಈವೆಂಟ್) ಉದ್ಯಮ ಕುರಿತ ಶ್ವೇತಪತ್ರ

ಭಾರತದ ಲೈವ್ ಈವೆಂಟ್ ಉದ್ಯಮವನ್ನು ಕುರಿತ ಶ್ವೇತಪತ್ರವು ವಲಯದ ಬಲವಾದ ಬೆಳವಣಿಗೆ ಮತ್ತು ಬದಲಾಗುತ್ತಿರುವ ಗ್ರಾಹಕ ಚಲನಶೀಲತೆಯನ್ನು ಒತ್ತಿಹೇಳುತ್ತದೆ. ವರ್ಷದಿಂದ ವರ್ಷಕ್ಕೆ ಶೇ.15 ರಷ್ಟು ಬೆಳವಣಿಗೆಯ ದರದೊಂದಿಗೆ, ಉದ್ಯಮವು 2024 ರೊಂದರಲ್ಲಿಯೇ 13 ಶತಕೋಟಿ ರೂಪಾಯಿ ಆದಾಯವನ್ನು ಸೇರಿಸಿದೆ.

ವರದಿಯ ಪ್ರಕಾರ, ಸುಮಾರು ಅರ್ಧ ಮಿಲಿಯನ್ ಅಭಿಮಾನಿಗಳು ಈಗ ವಿವಿಧ ನಗರಗಳ ನಡುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾರೆ, ಇದು ಭಾರತದಲ್ಲಿ ಈವೆಂಟ್ ಆಧಾರಿತ ಪ್ರವಾಸೋದ್ಯಮದ ಹೊರಹೊಮ್ಮುವಿಕೆಯನ್ನು ಬಲಪಡಿಸುತ್ತದೆ. ಪ್ರೀಮಿಯಂ ಮತ್ತು ಕ್ಯುರೇಟೆಡ್ ಅನುಭವಗಳಿಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಶಿಲ್ಲಾಂಗ್, ವಡೋದರಾ ಮತ್ತು ಜಮ್ಶೆಡ್ಪುರದಂತಹ 2 ನೇ ಹಂತದ ನಗರಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ.

ಈ ಆವೇಗವನ್ನು ಬೆಂಬಲಿಸಲು ಮತ್ತು ಹೆಚ್ಚಿಸಲು, ಶ್ವೇತಪತ್ರವು ಇವುಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ:

•    ಮೇಲ್ದರ್ಜೆಗೇರಿಸಿದ ಈವೆಂಟ್ ಮೂಲಸೌಕರ್ಯ
•    ಸುವ್ಯವಸ್ಥಿತ ಮತ್ತು ಸರಳೀಕೃತ ಪರವಾನಗಿ ಪ್ರಕ್ರಿಯೆಗಳು
•    ಬಲವಾದ ಮತ್ತು ಹೆಚ್ಚು ಪಾರದರ್ಶಕ ಸಂಗೀತ ಹಕ್ಕುಗಳ ಚೌಕಟ್ಟುಗಳು
•    ಎಂ ಎಸ್ ಎಂ ಇ ಮತ್ತು ಸೃಜನಶೀಲ ಆರ್ಥಿಕ ನೀತಿಗಳ ಅಡಿಯಲ್ಲಿ ಲೈವ್ ಈವೆಂಟ್ ವಲಯಕ್ಕೆ ಔಪಚಾರಿಕ ಮಾನ್ಯತೆ.

ಈ ವರದಿಯು ಭಾರತವನ್ನು ಜಾಗತಿಕ ಸಾಂಸ್ಕೃತಿಕ ರಂಗದಲ್ಲಿ ಕೇವಲ ವೀಕ್ಷಕನಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಗಮನ ಸೆಳೆಯುವ ಪ್ರಮುಖ ವೇದಿಕೆಯಾಗಿಯೂ ಮರುಕಲ್ಪಿಸಿಕೊಳ್ಳುವ ಕಾರ್ಯತಂತ್ರದ ಅಗತ್ಯವಿದೆ ಎಂದು ಹೇಳುತ್ತದೆ.

ಬಿಡುಗಡೆ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಎಂಐಬಿಯ ಹಿರಿಯ ಆರ್ಥಿಕ ಸಲಹೆಗಾರ ಶ್ರೀ ಆರ್.ಕೆ. ಜೆನಾ, ಎಂಐಬಿ ಜಂಟಿ ಕಾರ್ಯದರ್ಶಿ ಶ್ರೀಮತಿ ಮೀನು ಬಾತ್ರಾ ಮತ್ತು ಎಂಐಬಿ ಜಂಟಿ ಕಾರ್ಯದರ್ಶಿ ಮತ್ತು ಎನ್ ಎಫ್ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಭಾಗವಹಿಸಿದ್ದರು. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಪಾಲುದಾರ ಶ್ರೀ ವಿಪಿನ್ ಗುಪ್ತಾ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನ ಪಾಲುದಾರರಾದ ಶ್ರೀಮತಿ ಪಾಯಲ್ ಮೆಹ್ತಾ, ಅರ್ನ್ಸ್ಟ್ & ಯಂಗ್ ನ ಪಾಲುದಾರ ಶ್ರೀ ಆಶಿಶ್ ಫೆರ್ವಾನಿ, ಅರ್ನ್ಸ್ಟ್ & ಯಂಗ್ ನ ಪಾಲುದಾರ ಶ್ರೀ ಅಮಿಯಾ ಸ್ವರೂಪ್, ಅರ್ನ್ಸ್ಟ್ & ಯಂಗ್ ನ ಪಾಲುದಾರರಾದ ಶ್ರೀಮತಿ ತನು ಬ್ಯಾನರ್ಜಿ, ಖೈತಾನ್ & ಕಂಪನಿಯ ತಂತ್ರಜ್ಞಾನ ಮತ್ತು ಮಾಧ್ಯಮ ಪಾಲುದಾರ ಶ್ರೀ ಇಶಾನ್ ಜೋಹ್ರಿ, ಈವೆಂಟ್ಸ್ಎಫ್ಎಕ್ಯೂ ಲೈವ್ ನ ನಿರ್ದೇಶಕ ಶ್ರೀ ವಿನೋದ್ ಜನಾರ್ದನನ್; ಈವೆಂಟ್ಸ್ ಎಫ್ಎಕ್ಯೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ದೀಪಕ್ ಚೌಧರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

For official updates on realtime, please follow us: 

On X : 

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram: 

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****


Release ID: (Release ID: 2126790)   |   Visitor Counter: 18