WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025 ರಲ್ಲಿ ಖ್ಯಾತ ನಟ-ನಿರ್ಮಾಪಕ ಅಮೀರ್ ಖಾನ್, ನಟನಾ ಕಲೆಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು


"ನಾನು 3 ರಿಂದ 4 ತಿಂಗಳು ಮಾತ್ರ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತೇನೆ" - ಅಮೀರ್ ಖಾನ್

“ನೀವು ಹೆಚ್ಚು ಪ್ರಾಮಾಣಿಕರಾಗಿದ್ದಷ್ಟೂ, ನಿಮ್ಮ ಕೆಲಸ ಉತ್ತಮವಾಗಿರುತ್ತದೆ” - ಅಮೀರ್ ಖಾನ್

 Posted On: 03 MAY 2025 6:08PM |   Location: PIB Bengaluru

ಖ್ಯಾತ ನಟ-ನಿರ್ಮಾಪಕ ಅಮೀರ್ ಖಾನ್ ಇಂದು ವೇವ್ಸ್ 2025 ರಲ್ಲಿ ಕ್ರಿಯೇಟೋಸ್ಫಿಯರ್ ವೇದಿಕೆಯಲ್ಲಿ ನಡೆದ 'ನಟನೆಯ ಕಲೆ' ಕುರಿತು ತಮ್ಮ ಸರಳ ಮತ್ತು ಉಪಯುಕ್ತ ಸಲಹೆಯೊಂದಿಗೆ ಅನೇಕರ ಹೃದಯಗಳನ್ನು ಗೆದ್ದರು. ತಮ್ಮ ಸಿನಿಪಯಣದ ಹಲವು ವರ್ಷಗಳ ಅನುಭವದಿಂದ ಪಡೆದ ಪ್ರಾಯೋಗಿಕ ಸಲಹೆಯನ್ನು ನೀಡಿದರು. "ನಾನು ತರಬೇತಿ ಪಡೆದ ನಟನಲ್ಲ. ನಾನು ರಾಷ್ಟ್ರೀಯ ನಾಟಕ ಶಾಲೆಗೆ ಹೋಗಲು ಬಯಸಿದ್ದೆ, ಆದರೆ ನನಗೆ ಸಾಧ್ಯವಾಗಲಿಲ್ಲ. ಸಿನಿಪಯಣದ ದಾರಿಯುದ್ದಕ್ಕೂ ನಾನು ವಿಷಯಗಳನ್ನು ಕಲಿತಿದ್ದೇನೆ, ಅದು ನನಗೆ ಉಪಯುಕ್ತವಾಗಿದೆ." ಎಂದು ಅವರು ಹೇಳಿದರು.

ಚಲನಚಿತ್ರ ನಿರ್ಮಾಣದ ಭವಿಷ್ಯದ ಬಗ್ಗೆ ಮಾತನಾಡಿದ ಅಮೀರ್ ಖಾನ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ನಟರಿಲ್ಲದೆ ದೃಶ್ಯವನ್ನು ಚಿತ್ರೀಕರಿಸುವುದು ಈಗ ಸಾಧ್ಯವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಸಹಾಯದಿಂದ, ಒಬ್ಬ ನಟನನ್ನು ನಂತರ ದೃಶ್ಯಕ್ಕೆ ಸೇರಿಸಬಹುದು ಎಂದು ಅವರು ಹೇಳಿದರು.

ಒಬ್ಬ ನಟನ ಮೊದಲ ಮತ್ತು ಪ್ರಮುಖ ಕೆಲಸವೆಂದರೆ ಪಾತ್ರದ ಮನಸ್ಸಿನಲ್ಲಿ ಇಳಿಯುವುದು ಎಂದು ಭಾರತೀಯ ಚಿತ್ರರಂಗಕ್ಕೆ ಹಲವು ಸ್ಮರಣೀಯ ಪಾತ್ರಗಳನ್ನು ಉಡುಗೊರೆಯಾಗಿ ನೀಡಿರುವ ಬಹುಮುಖ ನಟ ಹೇಳಿದರು. ಅವರು ಪಾತ್ರಕ್ಕೆ ಹೇಗೆ ಒಗ್ಗಿಕೊಳ್ಳುತ್ತಾರೆ? ಎಂಬ ಪ್ರಶ್ನೆಗೆ, "ನಾನು ಸ್ಕ್ರಿಪ್ಟ್‌ ಗಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ನಾನು ಸ್ಕ್ರಿಪ್ಟ್ ಅನ್ನು ಮತ್ತೆ ಮತ್ತೆ ಓದುತ್ತೇನೆ. ಸ್ಕ್ರಿಪ್ಟ್ ಉತ್ತಮವಾಗಿದ್ದರೆ, ಪಾತ್ರ, ಅದರ ಭೌತಿಕತೆ, ವರ್ತನೆ ಇತ್ಯಾದಿಗಳು ಅದರಿಂದ ಬರುತ್ತವೆ ಎಂದು ನೀವು ಅರ್ಥಮಾಡಿಕೊಳ್ಳುವಿರಿ" ಎಂದು ಅವರು ಹೇಳಿದರು. ಜೊತೆಗೆ, ನಿರ್ದೇಶಕರೊಂದಿಗೆ ಪಾತ್ರ ಮತ್ತು ಕಥೆಯ ಬಗ್ಗೆ ಚರ್ಚಿಸುವುದರಿಂದ ಕಲ್ಪನೆಗಳು ಸಿಗುತ್ತವೆ ಎಂದು ಅವರು ಹೇಳಿದರು.

ತಮ್ಮ ಕಠಿಣ ಪರಿಶ್ರಮದ ಸ್ವಭಾವದ ಮೇಲೆ ಬೆಳಕು ಚೆಲ್ಲಿದ  ಅಮೀರ್‌ ಖಾನ್, "ನನಗೆ ನೆನಪಿನ ಶಕ್ತಿ ಕಡಿಮೆ. ಹಾಗಾಗಿ ನಾನು ಸಂಭಾಷಣೆಗಳನ್ನು ಕೈಯಿಂದ ಬರೆಯುತ್ತೇನೆ. ಮೊದಲು ನಾನು ಕಷ್ಟಕರವಾದ ದೃಶ್ಯಗಳನ್ನು ತೆಗೆದುಕೊಳ್ಳುತ್ತೇನೆ. ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳಬೇಕು. ಮೊದಲ ದಿನ ನಾನು ಅವುಗಳ ಮೇಲೆ ಕೆಲಸ ಮಾಡುತ್ತೇನೆ, ಮೂರರಿಂದ ನಾಲ್ಕು ತಿಂಗಳು ನಾನು ಪ್ರತಿದಿನ ಅದೇ ಕೆಲಸವನ್ನು ಮಾಡುತ್ತೇನೆ ಮತ್ತು ನಂತರ ನಾನು ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ. ಸಂಭಾಷಣೆಗಳು ಹೃದಯದಿಂದ ಬರಬೇಕು. ಅವು ನಿಮ್ಮದೇ ಎಂದು ಭಾವಿಸಬೇಕು. ಅದನ್ನು ಬರೆದಾಗ ಅದು ಸ್ಕ್ರಿಪ್ಟ್ ಬರಹಗಾರರದ್ದಾಗಿತ್ತು. ನಂತರ ಅದು ನಿಮ್ಮದಾಗುತ್ತದೆ. ನೀವು ಅದೇ ಸಾಲನ್ನು ಪುನರಾವರ್ತಿಸಿದಾಗ, ನೀವು ಅದನ್ನು ಹಲವು ರೀತಿಯಲ್ಲಿ ಮಾಡಬಹುದು ಎಂದು ನೀವು ಅರಿತುಕೊಳ್ಳುತ್ತೀರಿ” ಎಂದು ಹೇಳಿದರು.

ಕಲಾವಿದರಿಗೆ ಅತ್ಯಂತ ಕಷ್ಟಕರವಾದ ಕೆಲಸ ಯಾವುದು? ಇದಕ್ಕೆ ಅಮೀರ್ ಖಾನ್, ಒಬ್ಬ ನಟ ಪ್ರತಿದಿನವೂ ಅದೇ ಉತ್ಸಾಹದಿಂದ ಭಾವನಾತ್ಮಕ ಪ್ರದರ್ಶನಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

ಉದಯೋನ್ಮುಖ ನಟರಿಗೆ ಅಮೀರ್ ಖಾನ್ ಅವರಿಂದ ಬಂದ ಮತ್ತೊಂದು ಪ್ರಮುಖ ಸಲಹೆಯೆಂದರೆ - "ನೀವು ನಿಮ್ಮ ಕೆಲಸವನ್ನು ಹೆಚ್ಚು ಪ್ರಾಮಾಣಿಕವಾಗಿ ಮಾಡಿದಷ್ಟೂ ಅದು ಉತ್ತಮವಾಗಿರುತ್ತದೆ".

ಹಾಗಾದರೆ, ಅಮೀರ್ ಖಾನ್ ತಮ್ಮ ದೃಶ್ಯಗಳನ್ನು ಹೇಗೆ ಅಭ್ಯಾಸ ಮಾಡುತ್ತಾರೆ?

"ನಾನು ಶಾಟ್‌ ಗಳನ್ನು ನೀಡುವ ಮೊದಲು ದೃಶ್ಯಗಳನ್ನು ದೃಶ್ಯೀಕರಿಸುತ್ತೇನೆ. ದೃಶ್ಯಗಳನ್ನು ಅಭ್ಯಾಸ ಮಾಡುವಾಗ ನಾನು ಎಂದಿಗೂ ಕನ್ನಡಿಯಲ್ಲಿ ನೋಡುವುದಿಲ್ಲ." ಇದು ಅವರಿಂದ ಬಂದ ಉತ್ತರ.

ಅಮೀರ್ ಖಾನ್ ಅವರ ಇದುವರೆಗಿನ ಎಲ್ಲಾ ಚಿತ್ರಗಳಲ್ಲಿ ಅವರ ನೆಚ್ಚಿನ ಚಿತ್ರ ಯಾವುದು? ಆ ಚಿತ್ರ 'ತಾರೆ ಜಮೀನ್ ಪರ್' ಆಗಿರಬಹುದೆಂದು ಹಲವರು ಊಹಿಸಿರಬೇಕು. ಹೌದು, ಏಕೆಂದರೆ ಈ ಚಲನಚಿತ್ರವು ಅನೇಕ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರಲು, ಕಠಿಣ ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸಲು ಮತ್ತು ತಮ್ಮ ಚಿಕ್ಕ ಮಕ್ಕಳೊಂದಿಗೆ ಸಹಾನುಭೂತಿಯಿಂದ ಇರಲು ಕಲಿಸಿದೆ!

ನಟನಾ ಕ್ಷೇತ್ರದಲ್ಲಿ ಹೊಸಬರಿಗೆ ಈ ಹಿರಿಯ ನಟ ನೀಡುವ ಇತರ ಸಲಹೆಗಳೇನು?

"ಭಾವನೆಗಳು ಸ್ಕ್ರಿಪ್ಟ್ ನಿಂದಲೇ ಹೊರಬರುತ್ತವೆ. ನೀವು ಸ್ಕ್ರಿಪ್ಟ್ ಅನ್ನು ನಂಬಬೇಕು. ಕೆಲವೊಮ್ಮೆ ಸಿನಿಮಾಗಳಲ್ಲಿ ನಂಬಲು ಅಸಾಧ್ಯವಾದ ದೃಶ್ಯಗಳು ಇರುತ್ತವೆ. ಆದರೆ ನಟ ಅದನ್ನು ನಂಬುವಂತೆ ಮಾಡಬಹುದು. ನಟನು ಪ್ರೇಕ್ಷಕರಿಗೆ ಏನು ತೋರಿಸಲಾಗುತ್ತಿದೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಬೇಕು.” ಎಂದು ಅಮೀರ್ ಖಾನ್ ಹೇಳಿದರು.

ಒಳ್ಳೆಯ ಸ್ಕ್ರಿಪ್ಟ್ ಎಂದರೇನು? "ಒಳ್ಳೆಯ ಸ್ಕ್ರಿಪ್ಟ್ ಒಳ್ಳೆಯ ಪರಿಕಲ್ಪನೆಯನ್ನು ಆಧರಿಸಿರಬೇಕು. ಕಥೆಯ ಮೊದಲ ಹತ್ತು ಪ್ರತಿಶತದಲ್ಲಿ ಕಥಾವಸ್ತುವಿನ ಗುರಿಯನ್ನು ನಿರ್ಧರಿಸಬೇಕು. ಇಲ್ಲದಿದ್ದರೆ, ಪ್ರೇಕ್ಷಕರು ಬೇಸರಗೊಳ್ಳುತ್ತಾರೆ" ಎಂದು ಅಮೀರ್ ಖಾನ್ ಉತ್ತರಿಸಿದರು.

ಆದಾಗ್ಯೂ, ಚಿತ್ರದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯವಾದ ಸಲಹೆಯೆಂದರೆ - "ಆ ದೃಶ್ಯದಲ್ಲಿ ನಿರೀಕ್ಷಿಸಿದ್ದನ್ನು ಮಾಡಿ ಮತ್ತು ನಿಮ್ಮ ಸ್ವಂತ ಕೆಲಸದ ಬಗ್ಗೆ ಮಾತ್ರ ಯೋಚಿಸಬೇಡಿ."

ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು ಅವರಿಂದ ಅಮೀರ್ ಖಾನ್ ಅವರಿಗೆ ಸನ್ಮಾನ

 

For official updates on realtime, please follow us: 

On X : 

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram: 

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****


Release ID: (Release ID: 2126758)   |   Visitor Counter: 6