WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025 ರಲ್ಲಿ ಭಾರತದ ನೇರ ಕಾರ್ಯಕ್ರಮಗಳ (ಲೈವ್ ಈವೆಂಟ್ಸ್) ಆರ್ಥಿಕತೆಯ ಕುರಿತು ಕೇಂದ್ರ ರಾಜ್ಯ ಸಚಿವರಾದ​​​​​​​ ಡಾ. ಎಲ್ ಮುರುಗನ್ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು

 Posted On: 03 MAY 2025 5:46PM |   Location: PIB Bengaluru

"ಭಾರತದ ನೇರ ಕಾರ್ಯಕ್ರಮಗಳ‌ (ಲೈವ್ ಈವೆಂಟ್ಸ್) ಆರ್ಥಿಕತೆ: ಅಗತ್ಯ ಕಾರ್ಯತಂತ್ರದ ಬೆಳವಣಿಗೆ" ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್ ಅವರು ಶ್ವೇತಪತ್ರವನ್ನು ಬಿಡುಗಡೆ ಮಾಡಿದರು. ಇದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ನಿಯೋಜಿಸಿದ ಮತ್ತು ವೇವ್ಸ್ 2025 ರ ಜ್ಞಾನ ಪಾಲುದಾರರಲ್ಲಿ ಒಂದಾದ ಈವೆಂಟ್‌ ಎಫ್‌ ಎ ಕ್ಯೂ ಎಸ್ ಮೀಡಿಯಾ ಸಿದ್ಧಪಡಿಸಿದ ಈ ರೀತಿಯ ಮೊದಲ ಶ್ವೇತಪತ್ರವಾಗಿದೆ.

ಈ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು, ಹಿರಿಯ ಆರ್ಥಿಕ ಸಲಹೆಗಾರ ಆರ್. ಕೆ. ಜೆನಾ; ಜಂಟಿ ಕಾರ್ಯದರ್ಶಿ ಮೀನು ಬಾತ್ರಾ; ಮತ್ತು ಜಂಟಿ ಕಾರ್ಯದರ್ಶಿ (ಪ್ರಸಾರ) ಪೃಥುಲ್ ಕುಮಾರ್ ಉಪಸ್ಥಿತರಿದ್ದರು. ಇವಿಎ ಲೈವ್ ಮತ್ತು ಈವೆಂಟ್‌ ಎಫ್‌ ಎ ಕ್ಯೂ ಎಸ್ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಚೌಧರಿ ಕೂಡ ಉಪಸ್ಥಿತರಿದ್ದರು.

ಈ ಶ್ವೇತಪತ್ರವು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಲೈವ್ ಮನರಂಜನಾ ಉದ್ಯಮದ ಸಮಗ್ರ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ, ಉದಯೋನ್ಮುಖ ಪ್ರವೃತ್ತಿಗಳು, ಬೆಳವಣಿಗೆಯ ಹಾದಿಗಳು ಮತ್ತು ವಲಯದ ನಿರಂತರ ವಿಕಾಸಕ್ಕಾಗಿ ನೀತಿ ಶಿಫಾರಸುಗಳನ್ನು ಎತ್ತಿ ತೋರಿಸುತ್ತದೆ.

ಭಾರತದ ನೇರ ಕಾರ್ಯಕ್ರಮಗಳ ಪರಿಸರ ವ್ಯವಸ್ಥೆಯು ದೇಶದ ಸಾಂಸ್ಕೃತಿಕ ಮತ್ತು ಸೃಜನಶೀಲ ಆರ್ಥಿಕತೆಯ ರಚನಾತ್ಮಕ ಮತ್ತು ಪ್ರಭಾವಶಾಲಿ ಆಧಾರಸ್ತಂಭವಾಗಿ ರೂಪಾಂತರಗೊಳ್ಳುತ್ತಿದೆ. 2024 ರಿಂದ 2025 ರವರೆಗಿನ ಅವಧಿಯು ನಿರ್ಣಾಯಕವಾಗಿದ್ದು, ಅಹಮದಾಬಾದ್ ಮತ್ತು ಮುಂಬೈನಲ್ಲಿ 'ಕೋಲ್ಡ್‌ ಪ್ಲೇ' ಯಂತಹ ಅಂತರರಾಷ್ಟ್ರೀಯ ಪ್ರದರ್ಶನಗಳು ನಡೆದವು. ಇದು ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತದ ಸಿದ್ಧತೆಯನ್ನು ತೋರಿಸುತ್ತದೆ.

ಈ ವಲಯದಲ್ಲಿನ ಪ್ರಮುಖ ಪ್ರವೃತ್ತಿಗಳಲ್ಲಿ ಈವೆಂಟ್ ಪ್ರವಾಸೋದ್ಯಮದ ಏರಿಕೆಯೂ ಸೇರಿದೆ, ಸುಮಾರು ಅರ್ಧ ಮಿಲಿಯನ್ ಪ್ರೇಕ್ಷಕರು ನಿರ್ದಿಷ್ಟವಾಗಿ ನೇರ ಸಂಗೀತ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಯಾಣಿಸುತ್ತಾರೆ. ಇವು ಬಲವಾದ ಸಂಗೀತ-ಪ್ರವಾಸೋದ್ಯಮ ಆರ್ಥಿಕತೆಯ ಹೊರಹೊಮ್ಮುವಿಕೆಯ ಸಂಕೇತಗಳಾಗಿವೆ. ವಿಐಪಿ ಅನುಭವಗಳು, ಕ್ಯುರೇಟೆಡ್ ಪ್ರವೇಶ ಮತ್ತು ಐಷಾರಾಮಿ ಆತಿಥ್ಯದಂತಹ ಪ್ರೀಮಿಯಂ ಟಿಕೆಟ್ ವಿಭಾಗಗಳು ವರ್ಷದಿಂದ ವರ್ಷಕ್ಕೆ ಶೇ.100 ಕ್ಕಿಂತ ಹೆಚ್ಚು ಬೆಳೆದಿವೆ, ಇದು ಅನುಭವ-ಕೇಂದ್ರಿತ ಪ್ರೇಕ್ಷಕರು ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಬಹು-ನಗರ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಉತ್ಸವಗಳ ಹೆಚ್ಚುತ್ತಿರುವ ಜನಪ್ರಿಯತೆಯು 2ನೇ ಹಂತದ ನಗರಗಳಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕಾರಣವಾಗಿದೆ.

ಈ ಆವೇಗವು ಉದ್ಯೋಗಗಳು ಮತ್ತು ಪ್ರತಿಭೆ ಅಭಿವೃದ್ಧಿಯಲ್ಲಿ ಈ ವಲಯದ ಹೆಚ್ಚುತ್ತಿರುವ ಪ್ರಭಾವದಲ್ಲಿಯೂ ಪ್ರತಿಫಲಿಸುತ್ತದೆ. ನೇರ ಮನರಂಜನೆಯು ಇನ್ನು ಮುಂದೆ ಭಾರತದ ಸೃಜನಶೀಲ ಆರ್ಥಿಕತೆಯ ಉಪ ಅಂಶವಲ್ಲ, ಬದಲಾಗಿ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಮುನ್ನಡೆಸುವ ಕಾರ್ಯತಂತ್ರದ ಶಕ್ತಿಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಸಾಮಾನ್ಯವಾಗಿ ತಲಾ 2,000 ರಿಂದ 5,000 ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಇದು ಜೀವನೋಪಾಯವನ್ನು ಬೆಂಬಲಿಸುವಲ್ಲಿ ಮತ್ತು ಕ್ರಿಯಾತ್ಮಕ ಕಾರ್ಮಿಕಪಡೆಯನ್ನು ಉತ್ತೇಜಿಸುವಲ್ಲಿ ವಲಯದ ಹೆಚ್ಚುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದ 2024-25 ರ ಮಾಧ್ಯಮ ಮತ್ತು ಮನರಂಜನಾ ವಲಯದ ಅಂಕಿಅಂಶಗಳ ಕೈಪಿಡಿ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಪ್ರಕಟಿಸಿದ 'ಕಂಟೆಂಟ್‌ ನಿಂದ ವಾಣಿಜ್ಯಕ್ಕೆ: ಭಾರತದ ಸೃಷ್ಟಿಕರ್ತ ಆರ್ಥಿಕತೆಯ ಮ್ಯಾಪಿಂಗ್', ಅರ್ನ್ಸ್ಟ್ & ಯಂಗ್ ಅವರ ‘ಎ ಸ್ಟುಡಿಯೋ ಕಾಲ್ಡ್ ಇಂಡಿಯಾ’ಮತ್ತು ಖೈತಾನ್ & ಕಂಪನಿಯ ‘ಲೀಗಲ್ ಕರೆಂಟ್ಸ್: ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯದ 2025 ರ ನಿಯಂತ್ರಕ ಕೈಪಿಡಿ’ಸೇರಿದಂತೆ ಪ್ರಮುಖ ವರದಿಗಳನ್ನು ಬಿಡುಗಡೆ ಮಾಡಲಾಯಿತು.

ಕೇಂದ್ರೀಕೃತ ಹೂಡಿಕೆಗಳು, ನೀತಿ ಬೆಂಬಲ ಮತ್ತು ಮೂಲಸೌಕರ್ಯ ನವೀಕರಣಗಳೊಂದಿಗೆ, ಭಾರತವು 2030 ರ ವೇಳೆಗೆ ಜಾಗತಿಕವಾಗಿ ಅಗ್ರ ಐದು ನೇರ ಮನರಂಜನಾ ತಾಣಗಳಲ್ಲಿ ಒಂದಾಗುವ ಹಾದಿಯಲ್ಲಿದೆ, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಮತ್ತು ಹೆಚ್ಚಿದ ಜಾಗತಿಕ ಸಾಂಸ್ಕೃತಿಕ ಉಪಸ್ಥಿತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

 

For official updates on realtime, please follow us: 

On X : 

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram: 

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****


Release ID: (Release ID: 2126757)   |   Visitor Counter: 7