ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025: ಬಾಲಿವುಡ್ ಸಿನಿಮಾದ ದಂತಕಥೆ ಮನೋಜ್ ಕುಮಾರ್ ಅವರಿಗೆ ಭಾವಪೂರ್ಣ ಗೌರವ ಸಲ್ಲಿಕೆ
“ಮನೋಜ್ ಕುಮಾರ್ ಅವರ ಸ್ಮರಣೆ: ಶ್ರೇಷ್ಠ ಚಲನಚಿತ್ರ ನಿರ್ಮಾತೃ, ನಿಜವಾದ ರಾಷ್ಟ್ರೀಯವಾದಿ ”ವೇವ್ಸ್ ಬ್ರೇಕ್ ಔಟ್ ಅಧಿವೇಶನವು ಭಾವನೆ, ಒಳನೋಟ ಮತ್ತು ಸಿನಿಮೀಯ ಪರಂಪರೆಯನ್ನು ಪ್ರದರ್ಶಿಸಿತು
Posted On:
01 MAY 2025 5:47PM
|
Location:
PIB Bengaluru
ವೇವ್ಸ್ 2025ರ ಸಿನಿಮೀಯ ವಾತಾವರಣವು ಭಾವನಾತ್ಮಕ ಕ್ಷಣದಿಂದ ತುಂಬಿ ತುಳುಕುತ್ತಿತ್ತು. “ಮನೋಜ್ ಕುಮಾರ್ ಅವರ ಸ್ಮರಣೆ: ಶ್ರೇಷ್ಠ ಚಲನಚಿತ್ರ ನಿರ್ಮಾತೃ, ನಿಜವಾದ ರಾಷ್ಟ್ರೀಯವಾದಿ”ಎಂಬ ಶೀರ್ಷಿಕೆಯ 'ವೇವ್ಸ್ ಬ್ರೇಕ್ ಔಟ್' ಅಧಿವೇಶನವು ಭಾರತೀಯ ಚಿತ್ರರಂಗದ ಬಹುದೊಡ್ಡ ಐಕಾನಿಕ್ ಮತ್ತು ದೇಶಭಕ್ತ ನಾಯಕರಲ್ಲಿ ಒಬ್ಬರಾದ ಮನೋಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿತು. ಖ್ಯಾತ ಚಲನಚಿತ್ರ ವಿಮರ್ಶಕ ಮತ್ತು ಪಾಡ್ಕ್ಯಾಸ್ಟರ್ ಮಯಾಂಕ್ ಶೇಖರ್ ನಡೆಸಿಕೊಟ್ಟ ಈ ಅಧಿವೇಶನವು ಚಲನಚಿತ್ರ ಮತ್ತು ಸಾಹಿತ್ಯ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನು ಒಟ್ಟುಗೂಡಿಸಿ, ದಿಗ್ಗಜ ನಟ, ಬರಹಗಾರ ಮತ್ತು ಚಲನಚಿತ್ರ ನಿರ್ಮಾತೃವಿನ ಪರಂಪರೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿತು.
ಮನೋಜ್ ಕುಮಾರ್ ಅವರ ಮೂಲ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ. ಅವರು 1937 ರಲ್ಲಿ ಜನಿಸಿದರು. ಮನೋಜ್ ಕುಮಾರ್ ಅವರ ಜೀವನವು ಅವರ ಚಲನಚಿತ್ರಗಳಂತೆಯೇ ನಾಟಕೀಯ ಮತ್ತು ಸ್ಪೂರ್ತಿದಾಯಕವಾಗಿತ್ತು. ದೇಶ ವಿಭಜನೆಯಿಂದ ಧ್ವಂಸಗೊಂಡ ಮನೋಜ್ ಕುಮಾರ್ ಅನೇಕ ಕನಸುಗಳೊಂದಿಗೆ ಮುಂಬೈಗೆ ಬಂದರು, ಆದರೆ ಅವರಿಗೆ ಚಿತ್ರರಂಗದಲ್ಲಿ ಯಾರೊಂದಿಗೂ ಸಂಪರ್ಕವಿರಲಿಲ್ಲ. ಆರಂಭದಲ್ಲಿ ಉರ್ದು ಭಾಷೆಯಲ್ಲಿ ಚಿತ್ರಕಥೆಗಳನ್ನು ಬರೆದ ಕಥೆಗಾರ ಮನೋಜ್ ಕುಮಾರ್ ವಿಭಿನ್ನ ರೀತಿಯ ಸಿನಿಮೀಯ ಅಭಿವ್ಯಕ್ತಿಯನ್ನು ಸೃಷ್ಟಿಸಿದರು - ಮುಖ್ಯವಾಹಿನಿಯ ಆಕರ್ಷಣೆಯನ್ನು ರಾಷ್ಟ್ರೀಯತೆ ಮತ್ತು ಸಾಮಾಜಿಕ ಪ್ರಜ್ಞೆಯೊಂದಿಗೆ ಸಂಯೋಜಿಸಿದರು.
ಮನೋಜ್ ಕುಮಾರ್ ಅವರ ಮಗ ಮತ್ತು ನಟ ಕುನಾಲ್ ಗೋಸ್ವಾಮಿ ಅವರು ಹೃದಯಸ್ಪರ್ಶಿ ನೆನಪುಗಳೊಂದಿಗೆ ಅಧಿವೇಶನವನ್ನು ಉದ್ಘಾಟಿಸಿದರು: "ನನ್ನ ತಂದೆ ದೇಶ ವಿಭಜನೆಯಲ್ಲಿ ಎಲ್ಲವನ್ನೂ ಕಳೆದುಕೊಂಡರು, ಆದರೆ ಅವರು ಎಂದಿಗೂ ತಮ್ಮ ಕನಸುಗಳನ್ನು ಬಿಟ್ಟುಕೊಡಲಿಲ್ಲ. ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವುದರಿಂದ ಉರ್ದು ಭಾಷೆಯಲ್ಲಿ ವಿಶಿಷ್ಟ ಕಥೆಗಳನ್ನು ಬರೆಯುವವರೆಗಿನ ಅವರ ಪ್ರಯಾಣವು ಅವರ ದೃಢತೆಗೆ ಸಾಕ್ಷಿಯಾಗಿದೆ. ಅವರು ಭಗತ್ ಸಿಂಗ್ ಅವರ ತಾಯಿಯನ್ನು 'ಶಹೀದ್' ಚಿತ್ರದ ಪ್ರಥಮ ಪ್ರದರ್ಶನಕ್ಕೆ ಕರೆತಂದರು - ಅವರ ದೇಶಭಕ್ತಿ ವೈಯಕ್ತಿಕ ಮಟ್ಟದಲ್ಲಿ ಎಷ್ಟು ಪ್ರಬಲವಾಗಿತ್ತು ಎಂದರೆ ಅವರು ರಾಷ್ಟ್ರೀಯತೆಯನ್ನು ಅದರ ಮೂಲದಲ್ಲಿಟ್ಟುಕೊಂಡು ಅನೇಕ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದರು. ಇದು ಬಹಳ ಅಪರೂಪದ ಸಾಧನೆಯಾಗಿದೆ."
ಪೇಜ್-3, ಚಾಂದನಿ ಬಾರ್ ಮತ್ತು ಫ್ಯಾಷನ್ ನಂತಹ ಮೆಚ್ಚುಗೆ ಪಡೆದ ಚಲನಚಿತ್ರಗಳ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಮಧುರ್ ಭಂಡಾರ್ಕರ್, ಮನೋಜ್ ಕುಮಾರ್ ಅವರ ಸಿನಿಮೀಯ ತಂತ್ರಗಳನ್ನು ನೆನಪಿಸಿಕೊಂಡರು ಮತ್ತು ಹಾಡುಗಳನ್ನು ಚಿತ್ರೀಕರಿಸುವ ಅವರ ಶೈಲಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು ಎಂದು ಹೇಳಿದರು. ಮನೋಜ್ ಕುಮಾರ್ ಅವರ ಚಲನಚಿತ್ರಗಳು ರಾಷ್ಟ್ರೀಯತೆ ಮತ್ತು ಸಾಮಾಜಿಕ ವಾಸ್ತವಿಕತೆಯಿಂದ ತುಂಬಿದ್ದವು, ಅದನ್ನು ಅವರು ತಮ್ಮ ಕೆಲಸಗಳ್ಲಲಿಯೂ ಪ್ರತಿಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಭಂಡಾರ್ಕರ್ ಹೇಳಿದರು. "ಚಾಂದನಿ ಬಾರ್ ಹಲವು ವಿಧಗಳಲ್ಲಿ ಮನೋಜ್ ಕುಮಾರ್ ಅವರ ನೀತಿಗೆ ನೀಡಿದ ಅಂತಃಪ್ರಜ್ಞೆಯ ಗೌರವವಾಗಿತ್ತು" ಎಂದು ಭಂಡಾರ್ಕರ್ ಹೇಳಿದರು.
ಹಿರಿಯ ಲೇಖಕ ಮತ್ತು ಗೀತರಚನೆಕಾರ ಡಾ. ರಾಜೀವ್ ಶ್ರೀವಾಸ್ತವ ಒಂದು ಅದ್ಭುತ ಕಥೆಯನ್ನು ವಿವರಿಸಿದರು: “ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೆಹಲಿಯಲ್ಲಿ ‘ಶಹೀದ್’ ಚಿತ್ರದ ಪ್ರದರ್ಶನದಲ್ಲಿದ್ದಾಗ, ಪ್ರಧಾನಿಯವರು ಮನೋಜ್ ಕುಮಾರ್ ಅವರ ‘ಜೈ ಜವಾನ್ ಜೈ ಕಿಸಾನ್’ಎಂಬ ಘೋಷಣೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸುವಂತೆ ಕೇಳಿಕೊಂಡರು. ಇದರಿಂದ ಪ್ರೇರಿತರಾದ ಮನೋಜ್ ಕುಮಾರ್, ಮುಂಬೈಗೆ ಹಿಂತಿರುಗುವಾಗ ರಾತ್ರಿ ರೈಲು ಪ್ರಯಾಣದ ಸಮಯದಲ್ಲಿ ಉಪಕಾರ್ ಚಿತ್ರದ ಕಥೆಯನ್ನು ಬರೆದರು. ಮನೋಜ್ ಕುಮಾರ್ ಅವರ ಜೀವನವು ಸಾಮಾನ್ಯ ಜನರೊಂದಿಗೆ ಮಾತನಾಡುವ ಸಿನಿಮೀಯ ಧ್ಯೇಯವಾಗಿತ್ತು. ಈ ರೀತಿಯಾಗಿ, ಅವರ ಭಾವನೆಯು ವೇವ್ಸ್ ಸಾರವನ್ನು ಪ್ರತಿಬಿಂಬಿಸುತ್ತದೆ.” ಎಂದು ಅವರು ಹೇಳಿದರು.
ಹಿರಿಯ ಅಂಕಣಕಾರ ಮತ್ತು ಜೀವನಚರಿತ್ರೆಕಾರ ಭಾರತಿ ಎಸ್. ಪ್ರಧಾನ್ ಒಂದು ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಂಡರು: "ಅವರ ದೊಡ್ಡ ಯಶಸ್ಸಿನ ನಂತರವೂ, ಅವರೊಂದಿಗೆ ಸಂಪರ್ಕಿಸುವುದು ತುಂಬಾ ಸುಲಭವಾಗಿತ್ತು. ಅಷ್ಟೇ ಅಲ್ಲ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ, ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಕನಸು ಕಾಣುತ್ತಿದ್ದರು. ಅವರು ಮುಂದಿನ, ಭವಿಷ್ಯದಲ್ಲಿ ಮಾಡುವ ಹೊಸ ಕೆಲಸದ ಬಗ್ಗೆ ಯಾವಾಗಲೂ ತುಂಬಾ ಉತ್ಸುಕರಾಗಿದ್ದರು."
ಜೀವಂತವಾಗಿರುವ ಪರಂಪರೆ...
ಪ್ರೀತಿಯಿಂದ ಭಾರತ್ ಕುಮಾರ್ ಎಂದು ಕರೆಯಲ್ಪಡುವ ಮನೋಜ್ ಕುಮಾರ್, ಪದ್ಮಶ್ರೀ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಒಗೆ ಭಾಜನರಾಗಿದ್ದಾರೆ. ಅವರ ಚಿತ್ರಗಳು - ಶಹೀದ್, ಪೂರಬ್ ಔರ್ ಪಶ್ಚಿಮ್, ರೋಟಿ ಕಪ್ಡಾ ಔರ್ ಮಕಾನ್, ಉಪಕಾರ್, ಕ್ರಾಂತಿ – ಸಿನಿಮಾ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲುಗಳು ಮಾತ್ರವಲ್ಲದೆ ಸಾಂಸ್ಕೃತಿಕ ಮೈಲಿಗಲ್ಲುಗಳೂ ಆಗಿವೆ. ದೇಶಭಕ್ತಿಯನ್ನು ಕಾವ್ಯಾತ್ಮಕಗೊಳಿಸಿದ ಮತ್ತು ಕಥೆ ಹೇಳುವಿಕೆಯನ್ನು ಉತ್ಕೃಷ್ಟಗೊಳಿಸಿದ ವ್ಯಕ್ತಿಗೆ ಪ್ರೇಕ್ಷಕರಿಂದ ಚಪ್ಪಾಳೆ ಮತ್ತು ಸಾಮೂಹಿಕ ಕೃತಜ್ಞತೆಯೊಂದಿಗೆ ಅಧಿವೇಶನವು ಮುಕ್ತಾಯವಾಯಿತು.
*****
Release ID:
(Release ID: 2125990)
| Visitor Counter:
10