ಪ್ರಧಾನ ಮಂತ್ರಿಯವರ ಕಛೇರಿ
ಥಾಯ್ಲೆಂಡ್ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
03 APR 2025 6:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ಬ್ಯಾಂಕಾಕ್‌ನಲ್ಲಿ ಥಾಯ್ಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಪೇಟೊಂಗ್‌ಟಾರ್ನ್ ಶಿನವಾತ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸರ್ಕಾರಿ ಭವನಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಶಿನವಾತ್ರ ಅವರು ಬರಮಾಡಿಕೊಂಡರು ಮತ್ತು ಔಪಚಾರಿಕವಾಗಿ ಸ್ವಾಗತಿಸಿದರು. ಇದು ಅವರ ಎರಡನೇ ಸಭೆಯಾಗಿತ್ತು. ಇದಕ್ಕೂ ಮೊದಲು, 2024ರ ಅಕ್ಟೋಬರ್‌ನಲ್ಲಿ ವಿಯೆಂಟಿಯಾನ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.
ಭಾರತ ಮತ್ತು ಥಾಯ್ಲೆಂಡ್ ನಡುವಿನ ದ್ವಿಪಕ್ಷೀಯ ಸಹಕಾರದ ಕುರಿತಂತೆ ಉಭಯ ನಾಯಕರೂ ಚರ್ಚೆ ನಡೆಸಿದರು. ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ವಿನಿಮಯ, ರಕ್ಷಣೆ ಮತ್ತು ಭದ್ರತೆ, ದ್ವಿಪಕ್ಷೀಯ ಪಾಲುದಾರಿಕೆ, ಕಾರ್ಯತಂತ್ರ, ವ್ಯಾಪಾರ ಮತ್ತು ಹೂಡಿಕೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಉಭಯರು ಚರ್ಚಿಸಿದರು. ಅಲ್ಲದೇ ಸಂಪರ್ಕ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸ್ಟಾರ್ಟ್-ಅಪ್, ನಾವೀನ್ಯತೆ, ಡಿಜಿಟಲ್, ಶಿಕ್ಷಣ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಹಯೋಗಗಳನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮಾನವ ಕಳ್ಳಸಾಗಣೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಸೈಬರ್ ಹಗರಣಗಳು ಸೇರಿದಂತೆ ಅಂತರರಾಷ್ಟ್ರೀಯ ಸಂಘಟಿತ ಅಪರಾಧಗಳನ್ನು ಎದುರಿಸಲು ಸಹಕಾರವನ್ನು ಗಾಢಗೊಳಿಸುವ ಕುರಿತೂ ಚರ್ಚಿಸಿದರು. ಜಾಗತಿಕ ವಿಷಯಗಳ ಕುರಿತು ಇಬ್ಬರೂ ಪ್ರಧಾನ ಮಂತ್ರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು BIMSTEC, ASEAN ಮತ್ತು ಮೆಕಾಂಗ್ ಗಂಗಾ ಸಹಕಾರ ಸೇರಿದಂತೆ ಉಪ-ಪ್ರಾದೇಶಿಕ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟ ಸಹಕಾರವನ್ನು ರೂಪಿಸುವ ಮಾರ್ಗಗಳನ್ನು ಚರ್ಚಿಸಿದರು.
ಭಾರತ-ಥಾಯ್ಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಸ್ಥಾಪನೆಯ ಕುರಿತು ಜಂಟಿ ಘೋಷಣೆಯ ವಿನಿಮಯಕ್ಕೆ ಇಬ್ಬರು ನಾಯಕರು ಸಾಕ್ಷಿಯಾದರು. ಕೈಮಗ್ಗ ಮತ್ತು ಕರಕುಶಲ ವಸ್ತುಗಳು; ಡಿಜಿಟಲ್ ತಂತ್ರಜ್ಞಾನಗಳು; ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು); ಮತ್ತು ಕಡಲ ಪರಂಪರೆ ಕ್ಷೇತ್ರಗಳಲ್ಲಿ ಒಪ್ಪಂದಗಳ ವಿನಿಮಯಕ್ಕೂ ಅವರು ಸಾಕ್ಷಿಯಾದರು. ಭಾರತ-ಥಾಯ್ಲೆಂಡ್ ಕಾನ್ಸುಲರ್ ಸಂವಾದದ ಸ್ಥಾಪನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಎರಡೂ ದೇಶಗಳ ನಡುವಿನ ಜನರಿಂದ ಜನರಿಗೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. (ಫಲಿತಾಂಶಗಳ ಪಟ್ಟಿಯನ್ನು ಇಲ್ಲಿ ನೋಡಬಹುದು.)
ಸದ್ಭಾವನೆಯ ಸಂಕೇತವಾಗಿ, ಥಾಯ್ ಸರ್ಕಾರವು ಪ್ರಧಾನ ಮಂತ್ರಿಯವರ ಭೇಟಿಯನ್ನು ಗುರುತಿಸಲು 18 ನೇ ಶತಮಾನದ ರಾಮಾಯಣ ಭಿತ್ತಿಚಿತ್ರ ವರ್ಣಚಿತ್ರಗಳನ್ನು ಚಿತ್ರಿಸುವ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಎರಡೂ ದೇಶಗಳ ನಡುವಿನ ನಿಕಟ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪರ್ಕಗಳ ಬಗ್ಗೆ ತಿಳಿಸುತ್ತಾ, ಪ್ರಧಾನ ಮಂತ್ರಿ ಶಿನವಾತ್ರ ಅವರು ಪ್ರಧಾನ ಮಂತ್ರಿಗಳಿಗೆ ಪಾಲಿ ಭಾಷೆಯಲ್ಲಿ ಬೌದ್ಧ ಪವಿತ್ರ ಗ್ರಂಥಗಳಾದ TI-PITAKA ದ ವಿಶೇಷ ಆವೃತ್ತಿಯನ್ನು ಪ್ರದಾನ ಮಾಡಿದರು. ಭಾರತ ಮತ್ತು ಥಾಯ್ಲೆಂಡ್ ನಡುವಿನ ನಿಕಟ ನಾಗರಿಕ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಪ್ರಧಾನಿಯವರು ಗುಜರಾತ್‌ನಿಂದ ಉತ್ಖನನ ಮಾಡಲಾದ ಭಗವಾನ್ ಬುದ್ಧನ ಅವಶೇಷಗಳನ್ನು ಜನರು ತಮ್ಮ ಗೌರವ ಸಲ್ಲಿಸಲು ಥಾಯ್ಲೆಂಡ್‌ಗೆ ಕಳುಹಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಕಳೆದ ವರ್ಷ, ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ಮತ್ತು ಅವರ ಇಬ್ಬರು ಶಿಷ್ಯರು ಭಾರತದಿಂದ ಥಾಯ್ಲೆಂಡ್‌ಗೆ ಪ್ರಯಾಣಿಸಿದ್ದರು ಮತ್ತು 4 ಮಿಲಿಯನ್‌ಗಿಂತಲೂ ಹೆಚ್ಚು ಜನರು ಗೌರವ ಸಲ್ಲಿಸಿದ್ದರು.
ಭಾರತ ಮತ್ತು ಥಾಯ್ಲೆಂಡ್ ನೆರೆಹೊರೆಯವರಾಗಿದ್ದು, ರಾಮಾಯಣ ಮತ್ತು ಬೌದ್ಧಧರ್ಮ ಸೇರಿದಂತೆ ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ಸಂಬಂಧಗಳಿಂದ ಬೆಂಬಲಿತವಾದ ಹಂಚಿಕೆಯ ನಾಗರಿಕತೆಯ ಬಂಧಗಳನ್ನು ಹೊಂದಿವೆ. ಥಾಯ್ಲೆಂಡ್‌ನೊಂದಿಗಿನ ಭಾರತದ ಸಂಬಂಧಗಳು ನಮ್ಮ 'ಆಕ್ಟ್ ಈಸ್ಟ್' ನೀತಿ, ಆಸಿಯಾನ್‌ನೊಂದಿಗಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ, ವಿಷನ್ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್‌ನ ನಮ್ಮ ದೃಷ್ಟಿಕೋನದ ಅವಿಭಾಜ್ಯ ಸ್ತಂಭವಾಗಿದೆ. ಎರಡೂ ದೇಶಗಳ ನಡುವಿನ ನಿರಂತರ ಸಂವಹನಗಳು ಪ್ರಾಚೀನ ಸಂಬಂಧಗಳು ಮತ್ತು ಹಂಚಿಕೆಯ ಆಸಕ್ತಿಗಳ ಆಧಾರದ ಮೇಲೆ ಬಲವಾದ ಮತ್ತು ಬಹುಮುಖಿ ಸಂಬಂಧಕ್ಕೆ ಕಾರಣವಾಗಿವೆ.
*****
(Release ID: 2118694)
Visitor Counter : 23
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam