ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಹಾಂಗ್ ಕಾಂಗ್ ಫಿಲ್ಮ್ ಮಾರ್ಟ್‌ನಲ್ಲಿ ಐತಿಹಾಸಿಕ ಚೊಚ್ಚಲ ಪ್ರವೇಶ ಮಾಡಿದ ಭಾರತ್ ಪೆವಿಲಿಯನ್
ಹಾಂಗ್ ಕಾಂಗ್ ಫಿಲ್ಮ್ ಮಾರ್ಟ್‌ನಲ್ಲಿ ಚೊಚ್ಚಲ ಭಾರತ್ ಪೆವಿಲಿಯನ್ ಉದ್ಘಾಟಿಸಿದ ಹಾಂಗ್ ಕಾಂಗ್ ನಲ್ಲಿರುವ ಭಾರತದ ದೂತವಾಸ ಅಧಿಕಾರಿ
ಭಾರತ್ ಪೆವಿಲಿಯನ್ ಭಾರತೀಯ ಸಿನಿಮಾಗೆ ಜಾಗತಿಕ ಪಾಲುದಾರಿಕೆಯ ಹೊಸ ಯುಗ ಪ್ರತಿನಿಧಿಸುತ್ತಿದೆ: ಭಾರತದ ದೂತವಾಸ ಅಧಿಕಾರಿ ಗೌರವಾನ್ವಿತ ಶ್ರೀಮತಿ ಸತ್ವಂತ್ ಖನಾಲಿಯಾ ಅಭಿಮತ
Posted On:
19 MAR 2025 6:10PM by PIB Bengaluru
ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾಕ್ಕೆ ಒಂದು ಮಹತ್ವದ ಕ್ಷಣವಾಗಿ, ಪ್ರತಿಷ್ಠಿತ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರ ಮತ್ತು ಟಿವಿ ಮಾರುಕಟ್ಟೆ – ಫಿಲ್ಮ್ ಮಾರ್ಟ್ ನಲ್ಲಿ ಚೊಚ್ಚಲ ಭಾರತ್ ಪೆವಿಲಿಯನ್ ಪದಾರ್ಪಣೆ ಮಾಡಿತು. ಹಾಂಗ್ ಕಾಂಗ್ ಮತ್ತು ಮಕೌನ ಭಾರತದ ದೂತವಾಸ ಅಧಿಕಾರಿ ಗೌರವಾನ್ವಿತ ಶ್ರೀಮತಿ ಸತ್ವಂತ್ ಖನಾಲಿಯಾ ಅವರು ಭಾರತ್ ಪೆವಿಲಿಯನ್(ಭಾರತ ಮಂಟಪ) ಉದ್ಘಾಟಿಸಿದರು, ಇದು ಅಂತಾರಾಷ್ಟ್ರೀಯ ಚಲನಚಿತ್ರ ಮತ್ತು ಮಾಧ್ಯಮ ಉದ್ಯಮದಲ್ಲಿ ಭಾರತದ ಉಪಸ್ಥಿತಿ ಬಲಪಡಿಸುವಲ್ಲಿ ಮಹತ್ವದ ದಿಟ್ಟ ಹೆಜ್ಜೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸೇವೆಗಳ ರಫ್ತು ಉತ್ತೇಜನಾ ಮಂಡಳಿ(ಎಸ್ಇಪಿಸಿ) ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನ ಸಂಸ್ಥೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್ಎಫ್ ಡಿಸಿ) ಆಯೋಜಿಸಿರುವ ಭಾರತ ಮಂಟಪಕ್ಕೆ ಹಾಂಗ್ ಕಾಂಗ್ ಮತ್ತು ಮಕೌನ ಭಾರತದ ದೂತವಾಸ ಕಚೇರಿ ಬೆಂಬಲ ಒದಗಿಸಿದೆ. ಈ ಉಪಕ್ರಮವು ಭಾರತೀಯ ಸಿನಿಮಾದ ಹೆಚ್ಚುತ್ತಿರುವ ಪ್ರಭಾವ ಮತ್ತು ಅದರ ವಿಸ್ತರಿಸುತ್ತಿರುವ ಜಾಗತಿಕ ಹೆಜ್ಜೆಗುರುತನ್ನು ಎತ್ತಿ ತೋರಿಸುತ್ತದೆ, ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸಿನಿಮಾ ಕಥೆ ಹೇಳುವ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
VR1G.jpeg)
ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಶ್ರೀಮತಿ ಸತ್ವಂತ್ ಖನಾಲಿಯಾ ಅವರು, ಭಾರತದ ಕ್ರಿಯಾಶೀಲ ಸಿನಿಮಾ ರಂಗದ ಬಗ್ಗೆ ತಮ್ಮ ಹೆಮ್ಮೆ ವ್ಯಕ್ತಪಡಿಸಿದರು. "ಫಿಲ್ಮ್ ಮಾರ್ಟ್‌ನಲ್ಲಿ ಮೊದಲ ಬಾರಿಗೆ ಇಂಡಿಯಾ ಪೆವಿಲಿಯನ್ ಆರಂಭಿಸುತ್ತಿರುವುದು ಗೌರವದ ಸಂಗತಿ. ಭಾರತದ ಚಿತ್ರೋದ್ಯಮವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ, ಅದರ ಕಥೆಗಳು ವೈವಿಧ್ಯಮಯ ಸಂಸ್ಕೃತಿಗಳೊಂದಿಗೆ ಪ್ರೇಕ್ಷಕರಿಗೆ ಪ್ರತಿಧ್ವನಿಸುತ್ತವೆ. ಈ ಮಂಟಪವು ಜಾಗತಿಕ ಪಾಲುದಾರಿಕೆಗಳು ಮತ್ತು ಭಾರತೀಯ ಸಿನಿಮಾಗೆ ವಿಫುಲ ಅವಕಾಶಗಳ ಹೊಸ ಯುಗವನ್ನು ಪ್ರತಿನಿಧಿಸುತ್ತಿದೆ" ಎಂದರು.
ವೇವ್ಸ್ ಉತ್ತೇಜನ: ಭಾರತದ ಶ್ರೇಷ್ಠ ಜಾಗತಿಕ ಎಂ&ಇ ಶೃಂಗಸಭೆ
ಭಾರತ್ ಪೆವಿಲಿಯನ್‌ನ ಪ್ರಮುಖ ಗಮನವು ಮುಂಬೈನಲ್ಲಿ 2025 ಮೇ 1ರಿಂದ 4ರ ವರೆಗೆ ನಡೆಯಲಿರುವ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ(WAVES-ವೇವ್ಸ್)ಯ ಪ್ರಚಾರ ಮಾಡುವುದಾಗಿದೆ. WAVES ಜಾಗತಿಕ ಮಾಧ್ಯಮ ಮತ್ತು ಮನರಂಜನಾ(ಎಂ&ಇ) ಉದ್ಯಮದ ಗಮನವನ್ನು ಭಾರತದತ್ತ ತರುವ, ವ್ಯಾಪಾರ, ನಾವೀನ್ಯತೆ ಮತ್ತು ಗಡಿಯಾಚೆಗಿನ ಸಹಭಾಗಿತ್ವಗಳನ್ನು ಬೆಳೆಸುವ ಗುರಿ ಹೊಂದಿರುವ ಪ್ರಮುಖ ವೇದಿಕೆಯಾಗಲು ಸಜ್ಜಾಗಿದೆ. ಉದ್ಯಮ ನಾಯಕರು, ನಾವೀನ್ಯಕಾರರು ಮತ್ತು ಪಾಲುದಾರರ ವೈವಿಧ್ಯಮಯ ಶ್ರೇಣಿಯೊಂದಿಗೆ WAVES, ಭಾರತವನ್ನು ವಿಶ್ವದ ವಿಷಯ ಕೇಂದ್ರವಾಗಿ ಇರಿಸುವ ಗುರಿ ಹೊಂದಿದೆ.
ಸಹಭಾಗಿತ್ವಗಳನ್ನು ಹೆಚ್ಚಿಸುವುದು ಮತ್ತು ಅವಕಾಶಗಳನ್ನು ವಿಸ್ತರಿಸುವುದು
ಫಿಲ್ಮ್ ಮಾರ್ಟ್‌ನಲ್ಲಿರುವ ಭಾರತ್ ಪೆವಿಲಿಯನ್ ಮೊದಲ ದಿನದಂದು ಚಟುವಟಿಕೆಗಳಿಂದ ತುಂಬಿತ್ತು, ಅಂತಾರಾಷ್ಟ್ರೀಯ ಉದ್ಯಮ ಪ್ರತಿನಿಧಿಗಳೊಂದಿಗೆ ಸಂವಾದಗಳು, ಸಭೆಗಳು ಮತ್ತು ನೆಟ್‌ವರ್ಕಿಂಗ್ ಕಲಾಪಗಳನ್ನು ಆಯೋಜಿಸಿತ್ತು. ಈ ಪೆವಿಲಿಯನ್ ಸಹ-ನಿರ್ಮಾಣಗಳು, ವಿಷಯ ವಿತರಣೆ ಮತ್ತು ಸಹಭಾಗಿತ್ವಗಳ ಕುರಿತು ಚರ್ಚೆಗಳನ್ನು ನಡೆಸಿತು, ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ವಿಷಯ ರಚನೆಕಾರರು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ತಮ್ಮ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಇದು ಅವಕಾಶ ಕಲ್ಪಿಸಿತು.
ಎನ್ ಎಫ್ ಡಿ ಸಿ ಬಗ್ಗೆ
ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ದೇಶದಲ್ಲಿ ಉತ್ತಮ ಸಿನಿಮಾಗಳನ್ನು ಪ್ರೋತ್ಸಾಹಿಸಲು ಸ್ಥಾಪಿಸಲಾದ ಕೇಂದ್ರ ಸಂಸ್ಥೆಯಾಗಿದೆ. ಫಿಲ್ಮ್ ಮಾರ್ಟ್, ಕೇನ್ಸ್ ಚಲನಚಿತ್ರೋತ್ಸವ ಮತ್ತು ಬರ್ಲಿನೇಲ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎನ್ಎಫ್ ಡಿಸಿ, ಭಾರತೀಯ ವಿಷಯ ರಚನೆಕಾರರಿಗೆ ಸಹ-ನಿರ್ಮಾಣಗಳು, ಮಾರುಕಟ್ಟೆ ಪ್ರವೇಶ ಮತ್ತು ವಿತರಣಾ ಅವಕಾಶಗಳನ್ನು ಸುಗಮಗೊಳಿಸುತ್ತದೆ.
FBX3.jpeg)
ವೇವ್ಸ್ ಕುರಿತು
ಮಾಧ್ಯಮ ಮತ್ತು ಮನರಂಜನೆ(ಎಂ&ಇ) ವಲಯಕ್ಕೆ ಮಹತ್ವದ ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ(WAVES)ಯನ್ನು ಭಾರತ ಸರ್ಕಾರವು 2025 ಮೇ 1ರಿಂದ 4ರ ವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ರಂಗಕ್ಕೆ ಸಂಪರ್ಕ ಸಾಧಿಸಲು, ಸಹಭಾಗಿತ್ವ ಹೊಂದಲು, ನಾವೀನ್ಯತೆ ಒದಗಿಸಲು ಮತ್ತು ಕೊಡುಗೆ ನೀಡಲು ಅಂತಿಮ ಜಾಗತಿಕ ವೇದಿಕೆ ಕಲ್ಪಿಸುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ಸಜ್ಜಾಗಿದೆ, ವಿಷಯ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಯ ಕೇಂದ್ರವಾಗಿ ತನ್ನ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೊ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ(ಎಆರ್), ವರ್ಚುವಲ್ ರಿಯಾಲಿಟಿ(ವಿಆರ್) ಮತ್ತು ವಿಸ್ತೃತ ರಿಯಾಲಿಟಿ(ಎಕ್ಸ್ಆರ್) ಸೇರಿದಂತೆ ಕೈಗಾರಿಕೆಗಳು ಮತ್ತು ವಲಯಗಳು ವೇವ್ಸ್ ಗಮನದಲ್ಲಿವೆ.
ಪ್ರಶ್ನೆಗಳಿವೆಯೇ? ಉತ್ತರಗಳನ್ನು ಇಲ್ಲಿ ಹುಡುಕಿ
ಬನ್ನಿ, ನಮ್ಮೊಂದಿಗೆ ಬೆರೆಯಿರಿ ಅಥವಾ ಜತೆಗೂಡಿ! ಈಗಲೇ ವೇವ್ಸ್ ನಲ್ಲಿ ನೋಂದಾಯಿಸಿ (ಶೀಘ್ರದಲ್ಲೇ ಬರಲಿದೆ!).
*****
(Release ID: 2113113)
Visitor Counter : 24